ಅಂಕಣ

ಕನಸಿಗೆ ಜೀವ ಬಂದು ಈಗೊಂದು ವರ್ಷ….

ಅಬ್ಬಾ!! ಅಂತೂ ‘ನಮ್ಮ ಜಿಎಸ್ ಟಿ’ ಗೆ ಒಂದು ವರ್ಷ ತುಂಬಿತು. 2000ನೇ ಇಸ್ವಿಯಲ್ಲಿ ಅಟಲ್ ಜಿ ಕಂಡ ಕನಸನ್ನು ಈಡೇರಿಸಲು ಮೋದಿ ಬಂದರು. ಈಗ ಈ ಕನಸಿನ ಕೂಸಿಗೆ ಸಂಪೂರ್ಣ ಒಂದು ವರ್ಷ ತುಂಬಿದೆ. ಈ ಒಂದು ವರ್ಷದ ಹಾದಿ ಎಲ್ಲರಿಗೂ ಕಠಿಣವಾದದ್ದಂತೂ ಹೌದಾಗಿತ್ತು. ಸರಕಾರದ ಅವಿರತ ಶ್ರಮ,ಸನ್ನದು ಲೆಕ್ಕಿಗರ ಅಭಿನಂದನಾರ್ಹ ಕೆಲಸ  ಮತ್ತು ಸಾಮಾನ್ಯ ಜನರ ಅಪ್ರತಿಮ ಬೆಂಬಲದೊಂದಿಗೆ ಸರಕು ಸೇವಾ ತೆರಿಗೆಗೆ ಒಂದು ವರ್ಷ ತುಂಬಿದೆ.ಈ ಹಿಂದೆ ಭಾರತದಲ್ಲಿದ್ದ ತೆರಿಗೆ ಪದ್ದತಿ ತುಂಬಾ ಸಂಕೀರ್ಣವಾಗಿತ್ತು.ಜಿಎಸ್ ಟಿ ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಿತು. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಅನುಕೂಲವಾಯಿತು. ಅಲ್ಲದೆ ಭಾರತದ ಜಿಡಿಪಿ ( ಸಮಗ್ರ ದೇಶೀಯ ಉತ್ಪನ್ನ ) ಮತ್ತು ಆದಾಯ ಹೆಚ್ಚಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು ಭಾರತಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಲಾಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ  ಗ್ರಾಹಕರಿಗೆ ಈ ತೆರಿಗೆಯಿಂದ ಪ್ರತ್ಯಕ್ಷ ಮತ್ತು  ಪರೋಕ್ಷ ಲಾಭ ಹೆಚ್ಚಾಗುವುದಂತೂ ಸತ್ಯ . ಜಿಎಸ್ಟಿಯಿಂದ  ವಿದೇಶಗಳಿಗೆ ರಫ್ತಾಗುವ ಪ್ರಮಾಣ  ಹೆಚ್ಚಾಗುವುದರ ಜೊತೆಗೆ ಇದು  ವಿದೇಶಿ ಹೂಡಿಕೆದಾರರನ್ನು ಕೂಡ ಆಕರ್ಷಿಸುತ್ತಿರುವುದು ಇದರ ಯಶಸ್ಸಿಗೆ ಹಿಡಿದ ಕೈಗನ್ನಡಿ.ಇದರಿಂದ ಸಣ್ಣ ಉದ್ಯಮಿಗಳು ಅದರಲ್ಲೂ ವಾರ್ಷಿಕ ಇಪ್ಪತ್ತು ಲಕ್ಷಕ್ಕೂ ಕಮ್ಮಿ ವಹಿವಾಟು ಮಾಡುವವರಿಗೆ ಇದು ಅನುಕೂಲವಾಗಿದೆಯಲ್ಲ? ಇದನ್ನು ತಳ್ಳಿ ಹಾಕಲಂತೂ ಸಾಧ್ಯವಿಲ್ಲ ಅಲ್ಲವೇ?
ದೇಶದ ಅರ್ಥ ವ್ಯವಸ್ಥೆಯ ಸಮಗ್ರ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಿರುವ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು, ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ. ಇಡೀ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಈ ಹೊಸ ವ್ಯವಸ್ಥೆ ಪರಿವರ್ತಿಸಿದೆ. ಹಿಂದೆ ಜಾರಿಯಲ್ಲಿದ್ದ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಂಡಿದೆ, ಸರಕು ಮತ್ತು ಸೇವೆಗಳ ಬೆಲೆಗಳು ದೇಶದಾದ್ಯಂತ ಒಂದೇ ರೀತಿಯಲ್ಲಿ ಇವೆ. ಇದರಿಂದ ಭಾರತದ ಅಭಿವೃದ್ಧಿಯಂತೂ ಖಂಡಿತ ಸಾಧ್ಯ ಆದರೆ ಅದಕ್ಕೆ ಸ್ವಲ್ಪ ಸಮಯವಂತೂ ಬೇಕು. ಈ ಸಮಯ ನೀಡಲು ನಾವು ತಯಾರಿಲ್ಲವೇ?ಅರವತ್ತು ವರ್ಷಗಳ ಕಾಲ ಏನೂ ಮಾಡದವರಿಗೇ ಸಮಯ ನೀಡಿದ ಪರಮದಾನಿಗಳು ನಾವು. ಇನ್ನೊಂದೆರಡು ವರ್ಷ ಕಾಯಲಾರೆವ?
ಭಾರತದಂತಹ ದೊಡ್ಡ ದೇಶದಲ್ಲಿ ಮೋದಿ ಒಂದು ಆರ್ಥಿಕ ಬದಲಾವಣೆಯನ್ನು ಬಯಸಿ ಜಿಎಸ್ಟಿಯನ್ನು ಜಾರಿಗೂ ತಂದರು. ರೂಪಾಯಿ ಅಪನಗದೀಕರಣವಾಗಿರಬಹುದು ಅಥವಾ ಜಿ ಎಸ್ ಟಿ ಯೂ ಆಗಿರಬಹುದು; ಎರಡೂ ಕೂಡ ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ತೆಗೆದುಕೊಂಡ ಮಹತ್ತರ ಯೋಜನೆಗಳು. ಜಡ್ಡುಗಟ್ಟಿದ್ದ ವ್ಯವಸ್ಥೆಯಲ್ಲಿನ ಕಳ್ಳದಾರಿಯನ್ನು, ನುಸುಳುವಿಕೆಯನ್ನು ಚೆನ್ನಾಗಿ ಅರಿತಿದ್ದ ಕೆಲವು ಕಳ್ಳರಿಗೆ ಜಿ ಎಸ್ ಟಿ ಯನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಭಾರತದ ಅರ್ಥವ್ಯವಸ್ಥೆಗೆ ಜಿ ಎಸ್ ಟಿ ವರದಾನವಾಗುವ ಕಾಲ ಬರುತ್ತದೆ ಎಂದು ವಿಶ್ವ ಬ್ಯಾಂಕ್ ನ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳಿದ್ದನ್ನು ಸ್ವಲ್ಪ ಗಮನಿಸಿ ಮತ್ತು ನೆನಪಿಟ್ಟುಕೊಳ್ಳಿ. ಇನ್ನು ಜಿ ಎಸ್ ಟಿ ಸರಿಯಾಗಿ ಅಳವಡಿಸಿಲ್ಲ ಎಂಬ ಕಾಂಗ್ರೆಸ್ ಕ್ರಪಾಪೋಷಿತ ಅರ್ಥಶಾಸ್ತ್ರಜ್ಞರ ವಾದಕ್ಕೆ ಪ್ರತಿಕ್ರಿಯಿಸುವುದಾದರೆ ಜಿ ಎಸ್ ಟಿ ಸುಮಾರು 15 ವರ್ಷದ ಕನಸು. ಯಾವಾಗ ಹೊಸತನಕ್ಕೆ ತಳ್ಳಲ್ಪಡುತ್ತೇವೆಯೋ ಆಗ ತಾನೆ ಅದರ ಆಳ ಅಗಲ ಗೊತ್ತಾಗಲು ಸಾಧ್ಯ. ಹಾಗಾಗಿ ಸರಕಾರಕ್ಕೆ ಇದನ್ನು ಎದುರಿಸುವ ಛಲ ಇರಬೇಕು ಅಷ್ಟೇ. ಅದು ಮೋದಿ ಸರಕಾರಕ್ಕೆ ಇತ್ತು ಎನ್ನುವುದು ಈ ಒಂದು ವರ್ಷದಲ್ಲಿ ಸಾಬೀತಾಯಿತು.
ಆರ್ಥಿಕ ಸಮೀಕ್ಷೆಯೊಂದರ ಪ್ರಕಾರ ೨೦೧೭-೧೮ ನೇ ಆರ್ಥಿಕ ವರ್ಷದಲ್ಲಿ ಜಿಎಸ್ಟಿಯಿಂದ ಜಿಡಿಪಿ 6.5% ಗೆ ಕುಸಿಯುತ್ತದೆ ಎಂಬುದಾಗಿತ್ತು( 2016-17 ರಲ್ಲಿ ಭಾರತದ ಜಿಡಿಪಿ 7.1% ಅಷ್ಟಿತ್ತು ಎಂಬುದನ್ನು ಕೂಡ ಗಮನಸಿಬೇಕು). ಸ್ವಲ್ಪ ಪ್ರಮಾಣದಲ್ಲಿ ಜಿಡಿಪಿ ಕುಸಿತ ಕಂಡರೂ ಈಗ  2018-19 ರ ವರ್ಷದಲ್ಲಿ ಮತ್ತೆ ನಮ್ಮ ಜಿಡಪಿ 7-7.5% ರಷ್ಟು ಏರುವ ಎಲ್ಲ ಲಕ್ಷಣಗಳೂ ಈಗ ಗೋಚರಿಸುತ್ತಿದೆ. ಒಂದು ವ್ಯಾಟ್ ರೆಜಿಸ್ಟರೇಶನ್ ಮಾಡಲು ತಿಂಗಳಿಗೂ ಜಾಸ್ತಿ ಹೆಣಗಾಡುತ್ತಿದ್ದ ವ್ಯಾಪಾರಸ್ಥರು ಈಗ ಜಿಎಸ್ಟಿ ರೆಜಿಸ್ಟರೇಶನ್ ಪಡೆಯುವುದು ಚೂರೂ ಕಷ್ಟದ ಕೆಲಸವಲ್ಲ. ಅಲ್ಲಿಗೆ ಹೊಸ ಹೊಸ ವ್ಯಾಪಾರ ಮಾಡುವವರಿಗೆ ಈ ಟ್ಯಾಕ್ಸ್ ನ ತಲೆಬಿಸಿ ಕಮ್ಮಿಯಾಗಿ ಒಂದು ಕಂಫರ್ಟ್ ಫೀಲ್ ಬಂದಿದೆ ಅನ್ನಬಹುದಲ್ಲವ? ಇಂಡೈರೆಕ್ಟ್ ಟ್ಯಾಕ್ಸ್ ಕ್ರೋಡೀಕರಣ ಇತಿಹಾಸದಲ್ಲಿಯೇ ಅತಿ ಹೆಚ್ಚು ಅನ್ನುವಷ್ಟಾಗಿದ್ದು ಕೂಡ ಇದೇ ಜಿಎಸ್ಟಿಯಿಂದಲ್ಲವೇ?  ಹಾಗಾದರೆ ಏನೂ ತೊಂದರೆಯೇ ಇಲ್ಲದೇ ಈ ಒಂದು ವರ್ಷ ಕಳೆಯಿತ? ಖಂಡಿತ ಇಲ್ಲ. ಜಿಎಸ್ಟಿ ರಿಟರ್ನ್ ಸಲ್ಲಿಕೆಯ ವಿಧಾನದಲ್ಲಾದ ತೊಡಕುಗಳು ಸಣ್ಣ ಬೇಜಾರಿಗೆ ಕಾರಣವಾಗಿದ್ದಂತೂ ಹೌದು. ಇನ್ನೊಂದು ಪ್ರಮುಖ ನ್ಯೂನತೆ ಅಂದರೆ ಅದು ರಿಟರ್ನ್ ಸಲ್ಲಿಕೆಯದ್ದು. ಒಂದು ಸರಳ ರಿಟರ್ನ್ ಸಲ್ಲಿಕೆಯ  ವಿಧಾನವನ್ನು ಸರಕಾರ ರೂಪಿಸಿದ್ದರೆ ಸಾಕಿತ್ತು. ಆದರೆ ಈ ವಿಚಾರದಲ್ಲಿ ಸರಕಾರ ಸಂಪೂರ್ಣವಾಗಿ ಎಡವಿತು. ನಮ್ಮದೇ ದೇಶದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ‘ಇನ್ಫೋಸಿಸ್’ಗೆ ಈ ರಿಟರ್ನ್ ಸಲ್ಲಿಕೆಯ ತಂತ್ರಾಂಶವನ್ನು ರೂಪಿಸುವ ಜವಾಬ್ದಾರಿಯನ್ನು ಸರಕಾರ ನೀಡಿತು. ಭಾರತದ್ದೇ ಕಂಪನಿ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತದೆ ಮತ್ತು ಇಡೀ ವಿಶ್ವಕ್ಕೆ ಮಾದರಿಗುತ್ತದೆ ಎಂಬ ನಂಬಿಕೆ ಸರಕಾರದ್ದು ಕೂಡ ಆಗಿತ್ತು. ಒಂದು ಟ್ಯಾಕ್ಸ್ ವ್ಯವಸ್ಥೆಯ ಕಟ್ಟ ಕಡೆಯ ಹೆಜ್ಜೆಯೇ ರಿಟರ್ನ್ ಸಲ್ಲಿಕೆ. ಈ ರಿಟರ್ನ್ ಸಲ್ಲಿಕೆಯ ಉಸಿರು ‘ಸಾಫ್ಟ್‌ವೇರ್’. ಆದರೆ ಸೊ ಕಾಲ್ಡ್ ಸಾಫ್ಟ್‌ವೇರ್ ದೈತ್ಯ ಸರಕಾರದ ಯೋಜನೆಯನ್ನೇ ತಲೆಕೆಳಗಾಗಿಸಿತು. ಜಿ ಎಸ್ ಟಿ ಜಾರಿಯಾಗಿ ವರ್ಷ ಕಳೆದಿದೆ ಆದರಿನ್ನೂ ಸರಿಯಾದ ರಿಟರ್ನ್ ಸಲ್ಲಿಕೆಯ ಸಾಫ್ಟ್‌ವೇರ್ ಅಭಿವೃದ್ಧಿಯಾಗಲೇ ಇಲ್ಲ. ಇದನ್ನು ಯಾರ ವೈಫಲ್ಯ ಅನ್ನೋಣ? ನಮ್ಮ ದೇಶದ ಕಂಪನಿಯನ್ನು ನಂಬಿದ ಸರಕಾರದ್ದೋ ಅಥವಾ ನಂಬಿಕೆಯನ್ನು ಉಳಿಸಿಕೊಳ್ಳದ ಸಾಫ್ಟ್‌ವೇರ್ ಸಂಸ್ಥೆಯದ್ದೋ ? ವರ್ಷವಾದರೂ ನಮ್ಮ ಸರಕು ಸೇವಾ ತೆರಿಗೆಯ ಸಾಫ್ಟ್‌ವೇರ್ ಸರಿಯಾಗಿ ಅಭಿವೃದ್ಧಿಯಾಗಲಿಲ್ಲ ಅಂದರೆ ಇದು ಬಹುದೊಡ್ಡ ನ್ಯೂನತೆಯಲ್ಲವೇ? ಜಿ ಎಸ್ ಟಿ ವ್ಯವಸ್ಥೆಯಲ್ಲಿ ಪೆಟ್ರೋಲಿಯಂ ಪ್ರಾಡಕ್ಟ್ ಅನ್ನು ಸೇರಿಸದೆ ಇರುವುದು ಕೂಡ ಒಂದು ನ್ಯೂನತೆ ಎಂದು ಹೇಳಬಹುದು. ಆದರೆ ಇದರಲ್ಲಿ ರಾಜ್ಯ ಸರಕಾರದ ಹಸ್ತಕ್ಷೇಪ ಕೆಲಸ ಮಾಡುತ್ತಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ರಾಜ್ಯ ಸರಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿರುವುದು ‘ಇದೆ ಪೆಟ್ರೋಲ್ ಮೇಲಿನ ತೆರಿಗೆಯಿಂದ’ ಎನ್ನುವುದು ಎಲ್ಲರೂ ಅರಿತಿರುವ ಸತ್ಯ. ರಾಜ್ಯ ಸರಕಾರಗಳು ಪುಕ್ಸಟ್ಟೆ ಸೌಲಭ್ಯಗಳನ್ನು ಜಾತಿ ಆಧಾರದಲ್ಲಿ ಜನರಿಗೆ ನೀಡಲು ರಾಜ್ಯ ಸರಕಾರದ ಆದಾಯ ಕಮ್ಮಿ ಆಗುತ್ತದೆ ಎಂದು ಜಿ ಎಸ್ ಟಿ ಅಡಿ ಪೆಟ್ರೋಲ್ ಅನ್ನು ತರಲು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಜನರಿಗೆ ಬಿಟ್ಟಿ ಸವಲತ್ತನ್ನು ನೀಡುವುದರ ಬದಲು ಜನರ ಜೀವನ ಮಟ್ಟವನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಮಾಡಿದರೆ ‘ರಾಜಕೀಯ’ಕ್ಕೆ ಅರ್ಥ ಬರುತ್ತಿತ್ತೆನೋ. ಆದರೆ ಹಳ್ಳಿಯ ಮೂಲೆಯಲ್ಲಿರುವ ವ್ಯಕ್ತಿಯೊಬ್ಬ ಜಿಎಸ್ಟಿ ಅಡಿ ಪೆಟ್ರೋಲ್ ಅನ್ನು ತರದೇ ಇರಲು ಕಾರಣ ಮೋದಿ ಅಂದರೆ ಯಾರ ವ್ಯಾಪ್ತಿ ಜಾಸ್ತಿ ಇದೆ ಅರ್ಥ ಮಾಡಿಕೊಳ್ಳಿ. ಮೋದಿಯೇ ಎಲ್ಲ ಸಮಸ್ಯೆಗೆ ಪರಿಹಾರವಗಿರುವ ಈ ಕಾಲದಲ್ಲಿ ಪ್ರತೀ ಸಮಸ್ಯೆಗೂ ಕೂಡ ಮೋದಿಯೇ ಕಾರಣ ಅನ್ನುವವರನ್ನು ಎದುರಿಸುವುದು ಹೇಗೆ? ಹುಂಬರೆನ್ನೋಣವೇ ಅವರನ್ನು?
ಹೊಸ ತೆರಿಗೆ ವ್ಯವಸ್ಥೆಗೆ ಹಣಕಾಸಿನ ವರ್ಷದಲ್ಲಿ ವಹಿವಾಟು ರೂ. 20 ಲಕ್ಷ ದಾಟಿದ ಎಲ್ಲ ಉದ್ಯಮಗಳು ಒಳಪಡುವುದರಿಂದ ಅನೇಕ ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ಯಮಗಳು ಅನನುಭವಿ ಉದ್ಯೋಗಿಗಳಿಂದ ನಷ್ಟ ಅನುಭವಿಸಬೇಕಾಯಿತು. ಅಂದರೆ ಉದ್ಯೋಗಿಗಳಿಗೆ ಹೊಸ ತೆರಿಗೆ ವ್ಯವಸ್ಥೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಬೇಕಾಗಿತ್ತು. ಆ ಕೆಲಸ ಎಷ್ಟೋ ಕಂಪನಿಗಳಲ್ಲಿ ನಡೆಯಲಿಲ್ಲ. ಇದನ್ನು ಕೂಡ ಸರಕಾರವೇ ಮಾಡಬಹುದಿತ್ತು. ಆದರೆ ಇವೆಲ್ಲ ಒಮ್ಮಿಂದೊಮ್ಮೆಲೆ ನಡೆಯುವ ಕೆಲಸವಲ್ಲ. ಸರಕಾರ ಸ್ಥಳೀಯವಾಗಿ ಒಂದಿಷ್ಟು ಸರಕು ಸೇವಾ ತೆರಿಗೆಯ ಕಾರ್ಯಾಗಾರವನ್ನು ತಜ್ಞರಿಂದ ಏರ್ಪಡಿಸಿ ಅನನುಭವಿಗಳನ್ನು ‘ಎಜ್ಯೂಕೇಟ್’ ಮಾಡಿದ್ದಿದ್ದರೆ ಒಂದಿಷ್ಟು ಸಮಸ್ಯೆಗಳು ಪ್ರತ್ಯಕ್ಷವಾಗುತ್ತಲೇ ಇರಲಿಲ್ಲ.ಅನೇಕ ಸಣ್ಣ ಉದ್ಯಮಗಳು ಅನಿವಾರ್ಯವಾಗಿ ‘ಟ್ಯಾಕ್ಸ್ ಪ್ರೊಫೆಶನಲ್’ ಗಳನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ಒದಗಿ ಬಂತು. ಇದರಿಂದ ಆ ಸಣ್ಣ ಉದ್ಯಮಗಳ ‘ಒಪೆರಶನಲ್ ಕಾಸ್ಟ್’ ಕೂಡ ಹೆಚ್ಚಾಯಿತು.  ಉದ್ಯಮಿಗಳಲ್ಲಿ  ಒಂದಿಷ್ಟು ತಿಳುವಳಿಕೆಯನ್ನು  ತುಂಬುವ ಕೆಲಸವನ್ನು ಸರಕಾರ  ಅಧಿಕಾರಿಗಳ ಮೂಲಕ ಮಾಡಿದ್ದಿದ್ದರೆ ಈ ಸಮಸ್ಯೆಗಳು ಸೃಷ್ಟಿಯಾಗುತ್ತಿರಲಿಲ್ಲ. ಇದನ್ನು ಕೇವಲ ಕೇಂದ್ರ ಸರಕಾರದ ವೈಫಲ್ಯ ಅನ್ನುವುದು ನನ್ನ ವಾದವಲ್ಲ, ಬದಲಾಗಿ ಕೆಲವೊಂದನ್ನು ರಾಜ್ಯ ಸರಕಾರಗಳು ಕೂಡ ಮಾಡಬೇಕಿತ್ತು. ಆದರೆ ಅದು ನಡೆಯಲಿಲ್ಲ ಎನ್ನುವುದು ಬೇಸರದ ಸಂಗತಿ. ರಾಜ್ಯ ಸರಕಾರಗಳು ಒಂದಿಷ್ಟು ಹಣವನ್ನು ಜಿ ಎಸ್ ಟಿ ಕಾರ್ಯಾಗಾರಗಳಿಗೆ ಮೀಸಲಿಟ್ಟು ಆ ನಿಟ್ಟಿನಲ್ಲಿ ಯೋಚಿಸುವ ಕೆಲಸವನ್ನು ಮಾಡಬೇಕು. ಈಗ ರಾಜ್ಯ ಸರಕಾರಗಳ  ವಾದ ‘ ಜಿ ಎಸ್ ಟಿ ಈಗ ಸಂಪೂರ್ಣವಾಗಿ ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ ಹಾಗಾಗಿ ಅವರೇ ಮಾಡಲಿ’ ಎಂಬುದಾಗಿರುತ್ತದೆ ಆದರೆ ಒಂದನ್ನು ಗಮನಿಸಿ ಜಿ ಎಸ್ ಟಿ ಕೇಂದ್ರ ಸರಕಾರದ ಅಡಿ ಬಂದರೂ ಜಿ ಎಸ್ ಟಿ ಆದಾಯದ ಅತಿ ಹೆಚ್ಚು ಪಾಲನ್ನು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೇ ನೀಡುತ್ತದೆ ಅನ್ನುವುದು ಕೂಡ ಸತ್ಯವೇ ಅಲ್ಲವೇ ?ಹಾಗಾಗಿ ವ್ಯವಸ್ಥೆ ಬಲಪಡಿಸಲು ‘ರಾಜ್ಯ – ಕೇಂದ್ರ, ಪಕ್ಷ – ಅಧಿಕಾರ’ ಎಂಬ ಹುಂಬತನ ಬೇಡ ಅಲ್ಲವಾ?
ನಮ್ಮ ಸಮಸ್ಯೆಯೇನು ಗೊತ್ತಾ? ನಮಗೆ ವ್ಯವಸ್ಥೆ ಸರಿಯಾಗಬೇಕು ಎಂಬ ದೊಡ್ಡ ಕನಸಿರುತ್ತದೆ. ಆ ಕನಸು ನನಸಾಗಬೇಕಾದರೆ ಒಂದಿಷ್ಟು ಮಾರ್ಗಗಳಿರುತ್ತವೆ ಅದನ್ನು ಅನುಸರಿಸಲೇಬೇಕು. ಆದರೆ ಇದರ ಅರಿವು ನಮಗಿರುವುದಿಲ್ಲ. ಆದರೆ ನಮಗೆ ಚೂರು ತೊಂದರೆಯಾಗದೆ ಅರಸೊತ್ತಿಗೆ ದೊರಕಬೇಕೆಂಬ ನಮ್ಮ ಆಶಾ ಸಾಮ್ರಾಜ್ಯದ ಕನಸಿನಲ್ಲಿ ಈ ದಾರಿಗಳೇ ಇರುವುದಿಲ್ಲ ( ಅಥವ ಆ ಕಲ್ಪನೆಯೇ ಇರುವುದಿಲ್ಲ) ಆದರೆ ಆ ಅರಸೊತ್ತಿಗೆ ಮಾತ್ರ ಇರುತ್ತದೆ. ತೆರಿಗೆ ಮೇಲೆ ತೆರಿಗೆ ಕಟ್ಟುವ ವ್ಯವಸ್ಥೆಯ ಕೊನೆಯಾಗಿದ್ದು ಜಿ ಎಸ್ ಟಿ ಬಂದ ಮೇಲೆ. ವ್ಯಾಟ್, ಎಕ್ಸೈಸ್, ಸರ್ವಿಸ್ ಟ್ಯಾಕ್ಸ್ ಎಂಬ ಕಠಿಣ ಟ್ಯಾಕ್ಸ್ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಪರದಾಡುವ ದಿನ ದೂರವಾಗಿದ್ದು ಜಿ ಎಸ್ ಟಿ ಬಂದ ಮೇಲೆ. ಸಣ್ಣ ಉದ್ಯಮದಾರರಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು ಜಿ ಎಸ್ ಟಿ ಬಂದ ಮೇಲೆ. ಅನ್ಆರ್ಗನೈಸ್ಡ್ ಸೆಕ್ಟರ್ ಗಳನ್ನು ಒಂದು ವ್ಯವಸ್ಥೆಯಡಿಯಲ್ಲಿ ತಂದು ಅದರಲ್ಲಿ  ಪಾರದರ್ಶಕತೆ ಇರುವಂತೆ ಆಗಿದ್ದು ಜಿ ಎಸ್ ಟಿ ಬಂದ ಮೇಲೆ. ಹಾಗಾಗಿ ಜಿ ಎಸ್ ಟಿಯನ್ನು ಒಂದು ಪಾರದರ್ಶಕ ತೆರಿಗೆ ವ್ಯವಸ್ಥೆ ಎನ್ನಲು ಯಾಕೆ ಅಡ್ಡಿ? ಮೋದಿ ಇದನ್ನು ಜಾರಿಗೆ ತಂದರು. ಎಂಬ ಒಂದೇ ಪೊಲಿಟಿಕಲ್ ಅಜೆಂಡಾದಿಂದಾಗಿ ಇದನ್ನು ವಿರೋಧಿಸುವವರು ಈಗ ಒಂದಾಗಿರುವುದು ಮತ್ತೆ ನಮ್ಮನ್ನು,ನಮ್ಮ ವ್ಯವಸ್ಥೆಯನ್ನ  ತಳ ಮುಟ್ಟಿಸಲು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ .
ಎಲ್ಲರೂ ಸೇರಿ ಒಂದು ವ್ಯವಸ್ಥೆಯನ್ನು ಸರಿ ಪಡಿಸಲು ಪಣ ತೊಡಬೇಕು. ಅದನ್ನು ಬಿಟ್ಟು ಕಳ್ಳ ದಾರಿಯಿಲ್ಲವೆಂಬ ಕಾರಣಕ್ಕೆ ಹೊಸ ವ್ಯವಸ್ಥೆಯನ್ನು ವಿರೋಧಿಸುವುದು ಅದೆಷ್ಟು ಸರಿಯೋ ನನಗೆ ಗೊತ್ತಿಲ್ಲ. ಜಿ ಎಸ್ ಟಿ ಎಂಬ ಈ ಕೂಸನ್ನು ಸರಿಯಾಗಿ ಬೆಳೆಸಿ ನಮ್ಮ ಮನೆಯ ನಾಳಿನವರಿಗೊಂದು ಚಂದದ ಕೊಡುಗೆ ಕೊಡುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ ಎನ್ನುವುದನ್ನು ಮರೆಯುವುದು ಬೇಡ. ಹೌದು, ಮತ್ತೆ 2019 ಕ್ಕೆ ಮೋದಿ ವಿರೋಧಿಸಲು ಜಿಎಸ್ಟಿ ಕಾರಣ ಅನ್ನುವವರಿಗೆ ಉತ್ತರಿಸಲು ನಾನಂತೂ ಸಿದ್ಧನಾಗಿದ್ದೇನೆ. ನೀವು?

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!