ಅಂಕಣ

ಸ್ಮಶಾನದಲ್ಲಿಯ ಖರ್ಜೂರಗಳು!

‘…ದಾರಿಯುದ್ದಕ್ಕೂ ಯೋಚಿಸುತ್ತಿದ್ದೆ, ಜೀವ ಇದ್ದಾಗ ಪ್ರೀತಿಸುವ ದೇಹವನ್ನು ಜೀವ ಹೋದಾಕ್ಷಣ ಅದನ್ನು ಪ್ರೀತಿಸುವುದಿರಲಿ ಹತ್ತಿರ ಹೋಗುವುದಕ್ಕೂ ಹೆದರುತ್ತೇವೆ.’


ಎಲ್ಲರಂತಿರಲಿಲ್ಲ ಆ ಬ್ರಾಹ್ಮಣರ ಹುಡುಗ, ಸುಬ್ರಹ್ಮಣ್ಯ ಭಟ್ಟ. ಎಂಟೊಂಭತ್ತು ವರುಷದವ ಇರಬಹುದು. ಅವನ ಸಮಾನ ವಯಸ್ಕರಿಗಿಂತ ಆಟ ಪಾಠಗಳಲ್ಲಿ ಭಿನ್ನವಾಗಿದ್ದ. ಎಲ್ಲರಂತೆ ಅವನೂ ಶಾಲೆಗೆ ಹೋಗುತ್ತಿದ್ದ. ಅವನ ಮನೆಯಿಂದ ಶಾಲೆಗೆ ಹೋಗಬೇಕಾದರೆ ಮಧ್ಯದಲ್ಲಿದ್ದ ಸ್ಮಶಾನವನ್ನು ದಾಟಿಯೇ ಹೋಗಬೇಕಿತ್ತು. ಶಾಲೆಗೆ ಹೋಗಲು ಬೇರೆ ಕಾಲುದಾರಿಯೂ ಇತ್ತು. ಆದರೆ ಆ ದಾರಿಯಿಂದ ಹೋದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ತನ್ನ ಎಲ್ಲಾ ಗೆಳೆಯರೂ ಅದೇ ಕಾಲುದಾರಿಯಲ್ಲಿ ಹೋಗುತ್ತಿದ್ದರು. ಆದರೆ ಸುಬ್ರಹ್ಮಣ್ಯ ಮಾತ್ರ ಯಾವಾಗಲೂ ಸ್ಮಶಾನಮಧ್ಯದಲ್ಲಿದ್ದ ದಾರಿಯಲ್ಲಿಯೇ ಹೋಗುತ್ತಿದ್ದ. ಆ ದಾರಿಯಲ್ಲಿ ಕೆಲವೊಮ್ಮೆ ಮಾತ್ರ ಗೆಳೆಯರು ಅವನಿಗೆ ಸಾಥ್ ಕೊಡುತ್ತಿದ್ದರು. ಯಾವಾಗ ತಮ್ಮ ತಂದೆತಾಯಿಯವರಿಗೆ ಮಕ್ಕಳು ಆ ಸ್ಮಶಾನದ ಒಳಹೋಗುವುದು ಗೊತ್ತಾಗುತ್ತಿತ್ತೊ ಅಂದು ಅವರಿಗೆ ಮನೆಯಲ್ಲಿ ಪೂಜೆ ಗ್ಯಾರಂಟಿಯಾಗಿರುತ್ತಿತ್ತು. ಪುನಃ ಸುತ್ತುವರೆದ ದಾರಿಯಿಂದಲೇ ಹೋಗಲು ಶುರುಮಾಡುತ್ತಿದ್ದರು. ಆದರೆ ಸುಬ್ರಹ್ಮಣ್ಯ ಮಾತ್ರ ಯಾವುದೇ ಅಂಜಿಕೆ ಇಲ್ಲದೆ ಅದೇ ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದ.

ಸ್ಮಶಾನ ಅಂದಮೇಲೆ ಅಲ್ಲಿ ಏನು ನಡೆಯುತ್ತದೆ, ಹೇಗೆ ಇರುತ್ತದೆ ಎಂದು ಸವಿಸ್ತಾರವಾಗಿ ಹೇಳಬೇಕಾಗಿಲ್ಲ. ಆದರೆ ಬಹಳಷ್ಟು ಜನರಿಗೆ ‘ಸ್ಮಶಾನ’ ಎಂದಾಕ್ಷಣ ಥಟ್ಟನೇ ತಮ್ಮ ತಲೆಯಲ್ಲಿ ಬರುವ ವಿಚಾರ ಭಯ. ಆ ಭಯದಿಂದಲೇ ಎಷ್ಟೋ ಜನರು ಈಗಲೂ ಸ್ಮಶಾನಕ್ಕೆ ಹೋಗುವುದಿಲ್ಲ. ಅವರಿಗೆ ಮೃತ ದೇಹಕ್ಕೆ ಸ್ಪರ್ಶಮಾಡುವ ಬೆಂಕಿಯನ್ನು ನೋಡಲಾಗುವುದಿಲ್ಲ. ಧೈರ್ಯ ಇದ್ದವರು ಮಾತ್ರ ಅಗ್ನಿಸ್ಪರ್ಶ ಮಾಡುವರು. ನಾನು ಸಣ್ಣವನಾಗಿದ್ದಾಗ ನನ್ನನ್ನೂ ಎಂದೂ ಸ್ಮಶಾನಕ್ಕೆ ನಮ್ಮ ಮನೆಯವರು ಕಳುಹಿಸುತ್ತಿರಲಿಲ್ಲವಾದ ಕಾರಣ ನನ್ನಲ್ಲಿ ಅಷ್ಟೊಂದು ಧೈರ್ಯ ಇರಲಿಲ್ಲ ಮತ್ತು ದಾರಿಯಲ್ಲಿ ಹೆಣದ ಮೆರವಣಿಗೆಯಾಗುತ್ತದೆ ಎಂದರೆ ಅದರ ಎದುರಿಗೆ ಹೋಗುವ ಸಾಹಸವನ್ನೂ ಮಾಡುತ್ತಿರಲಿಲ್ಲ ಮತ್ತು ಆ ದಾರಿಯಲ್ಲಿ ಒಂದು ತಿಂಗಳವರೆಗೆ ರಾತ್ರಿ ನಡೆದಾಡುವುದನ್ನು ಸ್ವಇಚ್ಛೆಯಿಂದ ನಿಷೇಧಮಾಡುತ್ತಿದ್ದೆ. ಇಂಥಹ ವಾತಾವರಣದಲ್ಲಿ ಬೆಳೆದ ನನಗೆ ಸ್ಮಶಾನದಲ್ಲಾಗುವ ಕಾರ್ಯದ ಬಗ್ಗೆ ಹೆಚ್ಚು ಕುತೂಹಲ.

ಅದಕ್ಕಾಗಿ ನನ್ನ ಹಿರಿಯ ಮಿತ್ರನನ್ನು ಕೇಳಿದೆ

“ಅಣ್ಣಾ..ಹೆಣ ಸುಡ್ತಾರಲ್ಲಾ..ಅಲ್ಲಿ ಏನ್ ಆಗುತೈತಿ..?” ಎಂದು. ಆತನೂ ಎಂದೂ ಸ್ಮಶಾನಕ್ಕೆ ಹೋಗಿರಲಿಲ್ಲ ಆದರೂ ಹೇಳಿದ: “ಹೆಣ ಸುಡುಬೇಕಾದ್ರ..ಅಲ್ಲೇ ಒಬ್ಬ ದೊಡ್ಡ ಕೋಲು ಇಲ್ಲಾ.. ಬಡಿಗಿ ಹಿಡ್ಕೊಂಡು ನಿಂತಿರ್ತಾನ..”, ನಾನು ಆತನ ಹಾವಭಾವವನ್ನೇ ನೋಡುತ್ತಿದ್ದೆ.

“..ಒಂದು ಎರಡ್ಮೂರು ತಾಸ್ ಆದಮೇಲೆ ತಲಿ ಸಿಡಿದು ಮೇಲೆ ಬರ್ತೈತಿ..ಆಗ ಕೋಲ್ ತಗೊಂಡು ರಪರಪ ಅಂತ ಹೊಡ್ದು ಅಲ್ಲೇ ಬೆಂಕ್ಯಾಗ ಹಾಕ್ತಾನ..” ಎಂದಾಗ ನನಗೆ ಮೈ ಒಮ್ಮೆಲೇ ಜುಮ್ ಎಂದಿತು. ನನ್ನ ಒಂದು ತಿಂಗಳ ನಿಷೇಧವನ್ನು ಎರಡು ತಿಂಗಳಿಗೆ ಏರಿಸಿದೆ ಮತ್ತು ಒಂದು ವಾರ ರಾತ್ರಿ ನಿದ್ದೆ ಹೇಗಿರುತ್ತದೆ ಎಂದು ಮರೆತೇ ಹೋಯಿತು. ಇಂಥಹ ಧೈರ್ಯವನ್ನು ಹೊಂದಿದ್ದ ನನಗೆ ಆ ಬ್ರಾಹ್ಮಣರ ಹುಡುಗ ಸುಬ್ರಹ್ಮಣ್ಯನ ಧೈರ್ಯ ಕೇಳಿ ಆಶ್ಚರ್ಯವಾಯಿತು. ಕಾರಣ ಆತನಿಗೆ ಸ್ಮಶಾನದಲ್ಲಿ ಹೆಣ ಸುಡುವ ದೃಶ್ಯಗಳನ್ನು ಶಾಲೆಗೆ ಹೋಗುವಾಗ ಬರುವಾಗ ನೋಡುವುದು ಸಾಮಾನ್ಯದ ವಿಷಯವಾಗಿತ್ತು.

ಒಂದು ದಿನ ಅದೇ ಸ್ಮಶಾನದಲ್ಲಿ ಯಾರೋ ಶವವನ್ನು ಮಣ್ಣು ಮಾಡಿ ಆಗತಾನೇ ಹೋಗಿದ್ದರು ಮತ್ತು ಸಮಾಧಿಯ ಹತ್ತಿರ ಹೆಣಕ್ಕೆ ಪೂಜೆ ಮಾಡಿದ ಪೂಜಾ ಸಾಮಾಗ್ರಿಗಳಲ್ಲಿ ಎಲೆ ಅಡಿಕೆ ಹೂ ಮತ್ತು ಖರ್ಜೂರ ಇಟ್ಟು ಹೋಗಿದ್ದರು. ಎಂದಿನಂತೆ ಶಾಲೆಗೆ ಹೋಗುವಾಗ ಆ ಹುಡುಗ ಅತ್ತಕಡೆ ಕಣ್ಣಾಯಿಸಿದ. ಖರ್ಜೂರ ತನ್ನನ್ನು ಕೈಬೀಸಿ ಕರೆದಂತಾಯಿತು. ಓಡಿದವನೇ ಅಲ್ಲಿದ್ದ ಎಲ್ಲಾ ಖರ್ಜೂರವನ್ನು ತನ್ನ ಜೇಬಿಗೆ ಹಾಕಿದ ಮತ್ತು ಒಂದೆರೆಡನ್ನು ತಿನ್ನುತ್ತಲೇ ಶಾಲೆಗೆ ನಡೆದ.

ಶಾಲೆಯಲ್ಲಿ ಮಾಸ್ತರರ ಪಾಠ ಶುರುವಾಗಿತ್ತು. ಇತ್ತಕಡೆ ಇವನು ಒಂದೊಂದೇ ಖರ್ಜೂರವನ್ನು ಬಾಯಿಗೆ ಹಾಕುತ್ತಿದ್ದ. ಇವನು ತಿನ್ನುವ ಶಬ್ದ ಪಕ್ಕದಲ್ಲಿರುವವರಿಗೆ ಕೇಳದೇ ಇರುತ್ತದೆಯೇ? ರಾಘವೇಂದ್ರ ಇವನನ್ನೇ ನೋಡುತ್ತಿದ್ದ ತಕ್ಷಣವೇ ಸುಬ್ರಹ್ಮಣ್ಯ ಅವನ ಕೈಯಲ್ಲಿಯೂ ಒಂದೆರೆಡು ಖರ್ಜೂರ ಇಟ್ಟ. ಪಾಪ ರಾಘವೇಂದ್ರನಿಗೆಲ್ಲಿ ಗೊತ್ತಿತ್ತು ಅವು ಸ್ಮಶಾನದಲ್ಲಿಯ ಖರ್ಜೂರಗಳೆಂದು. ಸ್ವಲ್ಪ ಹೊತ್ತಿನ ನಂತರ ಶಾಲೆಯ ಕೊನೇ ಗಂಟೆ ಹೊಡೆಯಿತು. ಎಲ್ಲರೂ ತಮ್ಮ ತಮ್ಮ ಮನೆಗೆ ಸ್ಮಶಾನ ಸುತ್ತುವರೆದ ದಾರಿಯಿಂದಲೇ ಹಿಂತಿರುಗಿದರು ಆದರೆ ಸುಬ್ರಹ್ಮಣ್ಯ ಮಾತ್ರ ಅದೇ ದಾರಿಯಲ್ಲಿ ಮನೆಗೆ ಹೋದ.

ಮರುದಿನ ಶಾಲೆಗೆ ರಾಘವೇಂದ್ರ ಬರಲಿಲ್ಲ. ಅದರಿಂದ ಯಾವುದೇ ವ್ಯತ್ಯಾಸ ಶಾಲೆಯಲ್ಲಾಗಲಿ ಊರಲ್ಲಾಗಲಿ ಬೀಳಲಿಲ್ಲ. ಆದರೆ ಎಂಟು ದಿನದವರೆಗೆ ಶಾಲೆಗೆ ಹಾಜರಾಗದಿದ್ದನ್ನು ಕಂಡು ಶಾಲೆಯ ಮಾಸ್ತರು ರಾಘವೇಂದ್ರನ ಅಪ್ಪನನ್ನು ಬರಹೇಳಲು ಗುಮಾಸ್ತನನಿಗೆ ತಿಳಿಸಿದರು ಕಾರಣ ಆಗ ಪರೀಕ್ಷೆಯ ಸಮಯವಾಗಿತ್ತು. ಸ್ವಲ್ಪ ಹೊತ್ತಿನ ನಂತರ ರಾಘವೇಂದ್ರನ ತಂದೆಯೂ ಬಂದ. ಆತನ ಮುಖದಲ್ಲಿ ರೋಷ ಉಕ್ಕುತ್ತಿತ್ತು ಮತ್ತು ರಾಘವೇಂದ್ರನಿಗೆ ಏನೋ ಆಗಿದೆ ಎಂದು ಎದ್ದು ಕಾಣುತ್ತಿತ್ತು.

“..ಇವನಿಂದಲೇ ಸ್ವಾಮಿ ಎಲ್ಲಾ ಆಗಿದ್ದು..” ಎನ್ನುತ್ತಾ ಸುಬ್ರಹ್ಮಣ್ಯ ಕಡೆ ಕೈ ತೋರಿಸುತ್ತಾ ಕೂಗಾಡಿದ. ಮಾಸ್ತರಿಗೆ ಏನೂ ಗೊತ್ತಾಗಲಿಲ್ಲ ಮತ್ತು ಆಗ ಸುಬ್ರಹ್ಮಣ್ಯನಿಗೂ ಸಹ ಏನೂ ಅರ್ಥವಾಗಲಿಲ್ಲ.

“ತಾನ್ ಹಾಳ್ ಆಗೋದಲ್ದೇ ನನ್ನ್ ಮಗೂನ್ನೂ ಹಾಳ್ ಮಾಡ್ತಾ ಇದ್ದಾನೆ..” ಎಂದು ಮತ್ತೇ ಕೂಗಾಡುತ್ತಿದ್ದ.

“ಏನ್ ಆಯ್ತು ಅಂತ ಸ್ವಲ್ಪ ಬಿಡ್ಸೀ ಹೇಳ್ರೀ..” ಮಾಸ್ತರ್ ಕೇಳಿದರು.

“ಸಾರ್ ಇವ್ನೂ ಆ ಸ್ಮಸಾನದಾಗ ಬಿದ್ದ ಖರ್ಜೂರನ ಆರ್ಸಿಕೊಂಡು ತಿನ್ನೋದ್ ಅಲ್ದೇ..ನನ್ನ ಮಗುಗೂ ಕೊಟ್ಟಾನಾ..ಅದನ್ನ ನನ್ನ ಮಗ ತಿಂದು ಈಗ ಅವ್ನಿಗೇ ಜ್ವರಾ ಬಂದೈತ್ರಿ..” ಎಂದು ಹೇಳುತ್ತಾ ಸುಬ್ರಹ್ಮಣ್ಯನನ್ನು ಹೊಡೆಯಲು ಮುಂದಾದ.

“ನಿಲ್ರೀ..ನಾನ್ ಕೇಳ್ತೀನೀ..” ಎನ್ನುತ್ತಾ ಮಾಸ್ತರು ಅವನ ಕಡೆ ನೋಡಿದರು.

“..ಸಾರ್, ಹೌದು ನಾನೇ ಖರ್ಜೂರ ಕೊಟ್ಟೆ, ಆದ್ರೆ ರಾಘವೇಂದ್ರ.. ಆತನಿಗೂ ಬೇಕು ಅಂತ ಕೇಳಿದ್ದ..” ಎಂದು ಸುಬ್ರಹ್ಮಣ್ಯ ಪ್ರಾಮಾಣಿಕವಾಗಿ ಒಪ್ಪಿಕೊಂಡ. ರಾಘವೇಂದ್ರನ ಅಪ್ಪನಿಗೆ ಇನ್ನೂ ಸಿಟ್ಟು ಬಂದಿತ್ತು. ಹೇಗೋ ಸಮಾಧಾನ ಮಾಡಿ ಮಾಸ್ತರು ರಾಘವೇಂದ್ರನ ಅಪ್ಪನನ್ನು ಮನೆಗೆ ಕಳಿಸಿದರು.

ಆದರೆ ರಾಘವೇಂದ್ರನಿಗೆ ಖರ್ಜೂರ ಕೊಟ್ಟ ವಿಷಯ ಅವರಪ್ಪನಿಗೆ ಹೇಗೆ ಗೊತ್ತಾಯ್ತು ಎಂದು ಸುಬ್ರಹ್ಮಣ್ಯನಿಗೆ ಗೊತ್ತಾಗಲೇ ಇಲ್ಲ. ಬಹುಶಃ ರಾಘವೇಂದ್ರನೇ ಹೇಳಿರಬೇಕೆಂದು ತಿಳಿದ.

“..ಅಯ್ಯೋ..ಕತ್ತೆ ಬಡವ.. ನಿನ್ಗೆ ನಾಚ್ಗೆ ಆಗಲ್ವಾ ಸುಡುಗಾಡ್ನಲ್ಲಿರೋ ಖರ್ಜೂರ ತಿನ್ನೋಕೆ.. ಅಲ್ಲೆಲ್ಲಾ ದೆವ್ವ ಪಿಶಾಚಿ ಓಡಾಡ್ತಿರ್ತಾವೆ.. ಅದೆಷ್ಟು ಧೈರ್ಯನೋ ನಿನಗೆ ..” ಎನ್ನುತ್ತಾ ಮಾಸ್ತರು ಹಿಗ್ಗಾಮುಗ್ಗಾ ಥಳಿಸಿದರು. ಆದರೆ ತಾನು ಮಾಡಿದ್ದು ತಪ್ಪು ಎಂದು ಆ ಹುಡುಗನಿಗೆ ಅನಿಸಲೇ ಇಲ್ಲ ಕಾರಣ ಅದರಲ್ಲಿ ಅಂಥದ್ದೇನು ತಪ್ಪು ಆತನಿಗೆ ಕಾಣಲಿಲ್ಲ.

ರಾಘವೇಂದ್ರನಿಗೆ ಜ್ವರ ಬಂದುದಕ್ಕೆ ಕಾರಣವೇ ಬೇರೆಯಾಗಿತ್ತು. ಯಾವತ್ತು ಖರ್ಜೂರ ತಿಂದಿದ್ದನೋ ಅಂದು ಭಾರಿ ಮಳೆಯಾಗಿತ್ತು. ಮಳೆ ಎಂದರೆ ಮಕ್ಕಳು ಸುಮ್ಮನೆ ಸುರಿಯುವುದನ್ನು ನೋಡುತ್ತಿರುತ್ತಾರೆಯೇ, ಅದರಲ್ಲಿ ನಿಂತು ಅಭಿಷೇಕ ಮಾಡಿಸಿಕೊಂಡಾಗಲೇ ಅವರಿಗೆ ತೃಪ್ತಿ, ಮನಸ್ಸಿಗೆ ನೆಮ್ಮದಿ. ಹಾಗೆಯೇ ಆಗಿತ್ತು ಆ ದಿನ. ರಾಘವೇಂದ್ರ ಮಳೆಯಲ್ಲಿ ಪೂರ್ಣ ನೆನೆದಿದ್ದ. ರಾತ್ರಿಯ ಮಳೆಗಾಳಿ ಆತನ ಮೇಲೆ ಭಾರಿ ಪರಿಣಾಮವನ್ನು ಬೀರಿತ್ತು, ಬೆಳ್ಳಿಗ್ಗೆಯಾದೊಡನೆ ಮೈ ಬಿಸಿ ಏರಿತ್ತು.

ಇನ್ನೊಂದು ವಿಚಿತ್ರ ಸಂಗತಿ ಎಂದರೆ ರಾಘವೇಂದ್ರ ತಿಂದ ಖರ್ಜೂರ ಸ್ಮಶಾನದಲ್ಲಿಯದೆಂದು ಆತನಿಗೂ ಸಹಾ ಗೊತ್ತಿರಲಿಲ್ಲ ಹಾಗಾದರೆ ಆತನ ಅಪ್ಪನಿಗೆ ಗೊತ್ತಾಗಿದ್ದಾದರೂ ಹೇಗೆ..ಅಲ್ಲವೇ?

ಶಾಂತ ಇವರ ಜೊತೆಯಲ್ಲಿಯೇ ಓದುತ್ತಿದ್ದ ಸಹಪಾಠಿ. ಸುಬ್ರಹ್ಮಣ್ಯನ ಮನೆಯ ಪಕ್ಕದ ಮನೆಯವಳು. ಓದಿನಲ್ಲಿ ಬಲು ಮುಂದು. ನೋಡಲೂ ಸುಂದರವಾಗಿಯೇ ಇದ್ದಾಳೆ. ಸುಂದರವಾಗಿರುವ ಹುಡುಗಿಯರು ಬೇರೆಯವರ ವಿಷಯದಲ್ಲಿ ಮೂಗುತೂರಿಸುವುದು ಸ್ವಲ್ಪಮಟ್ಟಿಗೆ ನಿಜವಿರಬಹುದೇನೋ. ಏಕೆಂದರೆ ಇಷ್ಟೆಲ್ಲಾ ರಾದ್ಧಾಂತಕ್ಕೆಲ್ಲಾ ಅವಳೇ ಕಾರಣಕರ್ತಳು!

ಸುಬ್ರಹ್ಮಣ್ಯ ಸ್ಮಶಾನದಿಂದ ಖರ್ಜೂರ ತೆಗೆದುಕೊಂಡು ಹೋಗುವುದನ್ನು ಅವಳ ಚಿಕ್ಕಪ್ಪ ಮನೆಯಲ್ಲಿ ಎಲ್ಲರೆದುರಿಗೂ ಹೇಳಿದ್ದ..

“ಆ ಭಟ್ರು ಹುಡುಗನಿಗೆ.. ಅದೇನ್ ಧೈರ್ಯ.. ನಾವು ಇಷ್ಟು ದೊಡ್ಡವ್ರು ಆದ್ರು ಸ್ಮಶಾನಕ್ಕ ಹೊಗಾಕ ಹೆದ್ರುತೀವಿ.. ಅಂತದ್ರಲ್ಲಿ ಅವ ಬಿಂದಾಸ್ ಅಡ್ಡ್ಯಾಡ್‍ತ್ತಿದ್ದ.. ಸಮಾಧಿ ಅತ್ರ ಹೋಗಿ, ಅಲ್ಲಿದ್ದ ಖರ್ಜೂರ ತಗೊಂಡು ಜೇಬಲ್ಲಿ ಹಾಕೊಂಡು ಹೋದ..” ಎಲ್ಲರೂ ಆಶ್ಚರ್ಯದಿಂದ ಕೇಳುತ್ತಿದ್ದರು.

“ಅದನ್ನೆಲ್ಲಾ ತಿಂದ್ರ ಜ್ವರ ಬರೋದು ಗ್ಯಾರಂಟಿ..” ಎಂದು ಹೇಳಿ ಮುಗಿಸಿದ್ದ.

ಮರುದಿನ ಶಾಲೆಯಲ್ಲಿ ಸುಬ್ರಹ್ಮಣ್ಯ ಏನನ್ನೋ ಬಾಯಾಡಿಸುತ್ತಿದ್ದ.. ಆಗ ಶಾಂತಿ ಕೇಳಿಯೇ ಬಿಟ್ಟಳು

“ಈಗ ನೀ ತಿನ್‍ತಿರೋದು ಸ್ಮಶಾನದಾಗ ಬಿಸಾಕಿದ್ರಲ್ಲ ಅವಾ ಅಲ್ಲೇನು..”

“ಎ ಇಲ್ಲೇ..ಇದು ನಮ್ಮನೆಯಂದೇ..ನಿನ್ನೆ ಖರ್ಜುರಾ ಇದ್ವಲ್ಲಾ ಅವು ಅಲ್ಲಿವು..” ಎಂದು ಪ್ರಾಮಾಣಿಕವಾಗಿ ಹೇಳಿ..

“ಅವು ಬೇಕಾದ್ರೆ ಇದಾವೆ..ಕೊಡಬೇಕಾ..” ಎಂದು ಒಂದೆರೆಡು ಖರ್ಜುರ ಜೇಬಿನಿಂದ ತೆಗೆದೇಬಿಟ್ಟ.

“ಛೀ.. ಅವುನ್ನೆಲ್ಲಾ ತಿಂದ್ರಾ.. ಜ್ವರ ಬರ್ತಾವ್ ಅಂತ ನಮ್ಮ ಚಿಕ್ಕಪ್ಪ ಹೇಳ್ಳಾರ..ನನಗೆ ಬ್ಯಾಡ..” ಎಂದು ಅವನಿಂದ ದೂರ ನಿಂತಳು.

“ಏ..ನಿನ್ನೆ ನಾ ರಾಘವೇಂದ್ರಗ ಇವನ್ನಾ ಕೊಟ್ಟಿದ್ದು..ಅವ ತಿಂದ..ಏನು ಆಗಿಲ್ಲಾ..ಅವನಿಗೇ..” ಎಂದು ಅವಳಿಗೆ ಸಮಜಾಯಿಸಿದ. ಆದರೆ ಯಾವುದಕ್ಕೂ ಶಾಂತ ಮರು ಮಾತನಾಡಲಿಲ್ಲ.

ಒಂದು ವಾರವಾದರೂ ರಾಘವೇಂದ್ರ ಶಾಲೆಗೆ ಬರದೇ ಇದ್ದುದನ್ನು ಕಂಡು ಶಾಂತ ಅಂದಾಜು ಮಾಡಿದಳು ಮತ್ತು ರಾಘವೇಂದ್ರನ ಜ್ವರಕ್ಕೆ ಕಾರಣ ಆ ಸ್ಮಶಾನದ ಖರ್ಜೂರಗಳೇ ಎಂದು ಮನದಟ್ಟು ಮಾಡಿಕೊಂಡಳು. ತಕ್ಷಣವೇ ರಾಘವೇಂದ್ರನ ಅಪ್ಪನಿಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ರಾಘವೇಂದ್ರನ ಅಪ್ಪ ಸುಬ್ರಹ್ಮಣ್ಯನ ತಂದೆ ರಾಮಾ ಭಟ್ಟರಿಗೆ ತಿಳಿಸಲು ಮುಂದಾಗಿದ್ದ ಆದರೆ ಅವರ ಮಗ ಸ್ಮಶಾನದಲ್ಲಿಯ ಪದಾರ್ಥ ತಿನ್ನುತ್ತಾನೆಂದು ಗೊತ್ತಾದರೆ ಭಟ್ಟರು ಬಹಳವೇ ನೊಂದುಕೊಳ್ಳುತ್ತಾರೆಂದು, ಸುಬ್ರಹ್ಮಣ್ಯನ ಮೇಲಿನ ಸಿಟ್ಟನ್ನು ಹಾಗೆಯೇ ಅದುಮಿಕೊಂಡಿದ್ದ. ಇದಾವುದು ಸುಬ್ರಹ್ಮಣ್ಯನಿಗೆ ಗೊತ್ತಿರಲಿಲ್ಲ.

ಖರ್ಜೂರ ತಿನ್ನುವ ಪದಾರ್ಥ. ಅದು ಎಲ್ಲಿಯದಾದರೇನು? ಮನೆಯಲ್ಲಿಯದಾಗಲಿ, ಅಂಗಡಿಯಲ್ಲಿಯದಾಗಲಿ ಅಥವಾ ಸುಡುಗಾಡಿನದಾಗಲಿ.. ಆ ವಯಸ್ಸಿಗೇ ದೆವ್ವ, ಪಿಶಾಚಿ, ಭೂತ ಇವ್ಯಾವು ಇಲ್ಲವೆಂದು ನಂಬಿದ್ದ ಅವನು. ಸ್ಮಶಾನ, ಅದೂ ಒಂದು ಜಾಗ ಮಾತ್ರ. ಸತ್ತಮೇಲೆ ಹೂಳುವುದು, ಇದರಲ್ಲಿ ಅಂಥಹದ್ದೇನೂ ವಿಶೇಷವಿರಲಿಲ್ಲ ಆತನಿಗೆ. ಇಂತಹ ಬಾಲ್ಯವನ್ನು ಕಳೆದಿದ್ದ ಆ ಹುಡುಗನ ‘ಧೈರ್ಯ’ ಮುಂದೆ ಆತನಿಗೇ ಹೇಗೆ ಸಹಾಯವಾಯಿತು..?

ಇಲ್ಲಿದೆ ಸ್ಟೋರಿ..

ನಾನು ಊರಿಗೆ ಹೋಗಿದ್ದಾಗ ರಫಿ ನಮ್ಮ ಲ್ಯಾಂಡ್‍ಲೈನ್ ನಂಬರಿಗೆ ಫೋನ್ ಮಾಡಿ ಬೇಗ ಸರಕಾರಿ ಆಸ್ಪತ್ರೆಯ ಹತ್ತಿರ ಬರಲು ಹೇಳಿದ. ನಾನು ತಡ ಮಾಡದೇ ಶರ್ಟ್ ಹಾಕುತ್ತಾ ಆಸ್ಪತ್ರೆಯ ದಾರಿ ಹಿಡಿದೆ. ಎಲ್ಲರಂತೆ ವಿಚಾರಣೆ ಕೊಠಡಿ ಹತ್ತಿರ ಹೋದಾಗ ನನ್ನ ಸ್ನೇಹಿತ ರಘುವಿನ ತಾಯಿ ಸ್ವರ್ಗವಾಸಿಯಾಗಿದ್ದರು. ತಾಯಿಗೆ ಒಬ್ಬನೇ ಮಗ. ಬಲು ಅಕ್ಕರೆಯಿಂದ ಅವನನ್ನು ಸಾಕಿದ್ದಳು ತಾಯಿ. ತಾನು ಸಣ್ಣವನಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ. ತಂದೆ ಇಲ್ಲದ ಮಗನನ್ನು ಅವರ ಕೊರತೆ ಕಾಣದ ಹಾಗೆ ನೋಡಿಕೊಂಡಿದ್ದಳು ತಾಯಿ. ತಾಯಿ ಇಲ್ಲದ ದುಃಖ ಬಲ್ಲವರೇ ಬಲ್ಲರು ಎನ್ನುವ ಹಾಗೆ ಸ್ನೇಹಿತ ತುಂಬಾ ನೊಂದಿದ್ದ. ಅವರ ಅಂತ್ಯಕ್ರಿಯೆಯನ್ನು ಮಾಡಬೇಕು ಆದರೆ ತಮ್ಮ ಸ್ವಂತ ಊರಾದ ತುಮಕೂರಿನಲ್ಲಿ ಮಾಡಬೇಕೆಂಬುದು ತಾಯಿಯ ಆಸೆಯಾಗಿತ್ತು. ಅಲ್ಲಿಗೆ ಕೊಂಡೊಯ್ಯಲು ಆಂಬುಲೆನ್ಸ್ ಹುಡುಕಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಎಲ್ಲಾ ಕಡೆಯಿಂದಲೂ ಪ್ರಯತ್ನ ನಡೆಯಿತು. ಕೆಲವರೆಂದರು ತುಮಕೂರಿನಿಂದಲೇ ಆಂಬುಲೆನ್ಸ್ ತರಿಸೋಣವೆಂದು. ಇನ್ನೂ ಕೆಲವರು ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಕನಿಷ್ಟ ಆರು ತಾಸು ಬೇಕು, ಇಲ್ಲಿಯೇ ಹತ್ತಿರವಿದ್ದಿದ್ದರೆ ಚೆನ್ನಾಗಿತ್ತು ಎಂದು. ಇದೆಲ್ಲಾ ಸನ್ನಿವೇಶಗಳನ್ನು ಸುಬ್ರಹ್ಮಣ್ಯ ಭಟ್ಟ ನೋಡುತ್ತಾ ನಿಂತಿದ್ದ ಆದರೆ ಈಗ ಆತನಿಗೆ ವಯಸ್ಸು ಒಂಬತ್ತಲ್ಲಾ ಮೂವತ್ತು..! ಅಲ್ಲಿ ಮಾತನಾಡುತ್ತಿದ್ದವರ ಯಾರ ಮಾತನ್ನೂ ಕೇಳದೆ ಸೀದಾ ರಘುವಿನ ಹತ್ತಿರ ಹೋದ..

“ನಾವು ಆಂಬುಲೆನ್ಸ್‍ಗೆ ಕಾದ್ರೆ ತಡ ಆಗತೈತಿ..ನೀ ನಿನ್ನ ಕಾರು ಗಾಡಿ ತಗಿತೀನಿ ಅಂದ್ರ..ನಾ ಡ್ರೈವ್ ಮಾಡ್ತೀನಿ..!” ಎಂದ, ನಮಗೇನೂ ಹೇಳಲು ತೋಚಲಿಲ್ಲ. ರಘುನೂ ಒಪ್ಪಿಕೊಂಡ. ನಾಲ್ಕೇ ತಾಸಿನಲ್ಲಿ ತುಮಕೂರಿನ ರಘುವಿನ ಸ್ವಂತ ಮನೆ ಹತ್ತಿರ ಬಂದು ನಿಂತಿತು ಕಾರು. ಅಂದಿನ ವಿಧಿವಿಧಾನಗಳು ಮುಗಿದವು. ರಘುನನ್ನು ಸಂತೈಸಿ ನಮ್ಮ ಮನೆಗೆ ಹಿಂತಿರುಗಿದೆವು.

ದಾರಿಯುದ್ದಕ್ಕೂ ಯೋಚಿಸುತ್ತಿದ್ದೆ ಜೀವ ಇದ್ದಾಗ ಪ್ರೀತಿಸುವ ದೇಹವನ್ನು ಜೀವ ಹೋದಾಕ್ಷಣ ಅದನ್ನು ಪ್ರೀತಿಸುವುದಿರಲಿ ಅದರ ಹತ್ತಿರ ಹೋಗುವುದಕ್ಕೂ ಹೆದರುತ್ತೇವೆ. ಇಲ್ಲಿ ಎಲ್ಲರೂ ಹಾಗೆ ಇರುವರೆಂದು ಹೇಳುವುದಿಲ್ಲ. ಭಾಗಶಃ ಜನರು ಮಾತ್ರ ಆ ಧೈರ್ಯವನ್ನು ಹೊಂದಿದ್ದಾರೆ. ಅವರಲ್ಲೊಬ್ಬ ಈ ಸುಬ್ರಹ್ಮಣ್ಯ ಭಟ್ಟ. ಇದಕ್ಕೆ ಸರಿಹೊಂದುವಂತೆ ಈಗ ಅಂಕೋಲದ ರಾಜು ನಾಯ್ಕ, ಮಲ್ಲಾಪುರದ ಪ್ರಶಾಂತ ಗಾವಂಕರ್, ಕಾರವಾರದ ಆರೆಮ್ ನಾಯ್ಕರಂತವರೂ ಇದ್ದಾರೆ. ಇಂಥಹ ಎಷ್ಟೋ ಜೀವವಿರದ ದೇಹಕ್ಕೆ ಮಣ್ಣು ಕೊಡುವುದರಲ್ಲಿ ಇವರ ಕೈ ಯಾವಾಗಲೂ ಮುಂದೆ ಇರುತ್ತದೆ. ಆ ದೇಹ ಒಂದುವಾರ ಪೂರ್ತಿ ನೀರಿನಲ್ಲಿಯೇ ಇದ್ದು ಬಂದಿರುವಂತಹದ್ದಾಗಿರಲಿ ಅಥವಾ ಆತ್ಮಹತ್ಯೆ ಮಾಡಿಕೊಂಡು ಎರಡುಮೂರು ದಿನಗಳಾಗಿರಲಿ. ಯಾವುದಕ್ಕೂ ಅಂಜದೇ ಇಂಥಹ ಪುಣ್ಯದ ಕೆಲಸದಲ್ಲಿ ಪಾಲುಗೊಳ್ಳುತ್ತಾರೆ ಎಂದರೆ ಇವರಿಗೆ ಇಷ್ಟೊಂದು ಧೈರ್ಯ ಹೇಗೆ ಬಂತು ಎಂದು ಪ್ರಶಾಂತನನ್ನು ಕೇಳಿದೆ.

“ಏನಿಲ್ಲ ಮರಾಯಾ.. ನಮ್ಮೂರಿಂದ ನಮ್ಮಜ್ಜಿ ಊರಿಗೆ ಆಗಾಗ ಹೋಗಿ ಬರ್ತಾಇದ್ವೀ.. ನನ್ನ ಅಜ್ಜಿಗೆ ನಾನಂದ್ರೆ ಭಾಳ ಪ್ರೀತಿ ಇತ್ತು.. ಅವ್ರಿಗೂ ವಯಸ್ಸಾಗಿತ್ತಲ್ಲಾ.. ಒಂದು ದಿನ ಅವ್ರ ಮನಿಗೆ ಹೋದಾಗ ರಾತ್ರಿ ಅವ್ರು ಜೊತೆಗೆ ಮಲುಕ್ಕೊಂಡೆ.. ಬೆಳ್ಳಿಗ್ಗೆ ಎದ್ದಾಗ ನಮ್ಮ ಅಜ್ಜಿ ತೀರ್ಕೊಂಡಿದ್ರು.. ನಮ್ಮ ತಂದೆವ್ರೂ ಹೇಳಿದ್ರು ನೀವು ಸಣ್ಣವೂ ಇದೀರ್ರಿ.. ಮನೆಯಲ್ಲಿಯೇ ಇರಿ ಅಂತ ಹೇಳಿ… ಸ್ಮಶಾನದಲ್ಲಿ ಅವ್ರ ಅಂತ್ಯಕ್ರಿಯೆ ಮಾಡಿ ಬಂದ್ರು.. ಆದ್ರೆ ನನಗೆ ಅಜ್ಜಿ ಮೇಲೆ ಭಾಳ ಪ್ರೀತಿ ಇತ್ತಲ್ಲಾ.. ಈಗ ಅವ್ರರನ್ನಾ ನೋಡೋಣ ಅಂತ ಸ್ಮಶಾನಕ್ಕ ಹೋದೆ ಅಲ್ಲಿ ಅಜ್ಜಿನ ಸುಟ್ಟಿದ್ರು.. ಏನಾಗಿರಬೌದು ಅವ್ರ ದೇಹ ಅಂತ ಕುತೂಹಲದಿಂದ ಆ ಬೂದಿಯಲ್ಲಿ ಕಡ್ಡಿ ಹಾಕಿ ನೋಡ್ದೆ.. ಎಲ್ಲಾ ಎಲುಬುಗಳು.. ಆಗ ನನಗೆ ಏನೂ ಹೆದ್ರಿಕಿ ಆಗಲಿಲ್ಲ ಯ್ಯಾಕಂದ್ರ.. ಆಕಿ ನಮ್ಮಜ್ಜಿ ಇದ್ಲು.. ಅದೇ ನನ್ನ ಮನಸ್ಸಿನ್ಯಾಗ ಕುಂದ್ರಿತು.. ‘ನಮ್ಮೋರು’ ಅನ್ನೋದ್ರಿಂದ ನಮಿಗೆ ಏನೂ ಕೆಟ್ಟುದ್ದು ಆಗಕಿಲ್ಲಾ ಅಂತ..” ಎಂದು ತನ್ನ ಮೊದಲ ಇನ್ನಿಂಗ್ಸ್ ಪ್ರಾರಂಭವಾಗಿದ್ದನ್ನು ಸವಿಸ್ತಾರವಾಗಿ ತಿಳಿಸಿದ. “ಮತ್ತೂ ನಾಗ್ರಾಜ್…” ಎಂದು ಮುಂದುವರೆಸುತ್ತಾ

“..ಯಾರೋ..ತೀರಿ ಹೋಗಿರ್ತಾರಾ, ಅವ್ರೂ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಬರೋದಿಕ್ಕೆ ತಡ ಆಗತೈತಿ.. ಅಂತ ಗೊತ್ತಾತು ಅಂದ್ರ ನಾವೇ ಮುಂದೆ ಹೋಗಿ ಎಲ್ಲಾ ಕೆಲ್ಸ ಮಾಡಿತೀವಿ.. ಯಾಕಂದ್ರೆ ಎಲ್ಲರೂ ಮುಂದೆ ಬರೋಕೆ ರೆಡಿ ಇರಲ್ಲಾ. ಹಂಗಂತ ಹೇಳಿ ಸುಮ್ನೇ ಕುಂದ್ರಕೂ ಬರಲ್ಲಾ.. ಯಾರಾದ್ರೂ ಕೈಹಾಕಬೇಕಲ್ಲಾ… ಮತ್ತೊಂದು.. ಸತ್ತೋರ್ಗೆ ನಾವೇನ್ ಅನ್ಯಾಯ ಮಾಡಿರಲ್ಲಾ.. ಇನ್ನು ಅವ್ರಿಂದ ನಮಿಗೇನು ತೊಂದ್ರೆ..” ಎಂದು ನನಗೆ ಪ್ರಶ್ನೆ ಹಾಕಿದ. ಆತನ ಮಾತಿನಲ್ಲಿಯೂ ಅರ್ಥವಿತ್ತು. ನಿನ್ನ ಮಾತೂ ನಿಜ ಎಂದು ತಲೆಯಾಡಿಸಿದೆ. ಅಲ್ಲಿಯೇ ಇದ್ದ ರಾಜುನನ್ನು ಕೇಳಿದಾಗ ಅವನ ಮಾತಿನ ಧಾಟಿ ಬೇರೆಯಾಗಿತ್ತು…

“ನನ್ದು ಅಂಕೋಲ ಅಲ್ಲಾ.. ಈ ಕಡೆ ಯಕ್ಷಗಾನ ಹೆಚ್ಚು ಅದನ್ನ ನೋಡಕೆ ರಾತ್ರೆಲ್ಲಾ ಹೋಗುತ್ತಿದ್ವೀ..ಹಂಗಾಗಿ ರಾತ್ರಿ ಅಂದ್ರ ನನಗೇ ಭಯ ಇರಲೇ ಇಲ್ಲ ಮತ್ತು ನಮ್ಮ ಮನೇ ಹಿಂದೇನೇ ಸ್ಮಶಾನ ಇತ್ತು.. ಯಾರಾದ್ರೂ  ಸತ್ತಿದ್ರೆ.. ಅಲ್ಲಿ ನಡೆಯುತ್ತಿದ್ದ ಎಲ್ಲಾ ಕರ್ಮಗಳನ್ನು ನೋಡುತ್ತಿದ್ದೆ…ಇನ್ನೊಂದು ತಮಾಷೆ ಅಂದ್ರೆ ಆಗ ಸ್ಮಶಾನದಾಗ ಕೋಳಿ ಬಿಡೋರು..ಅವನ್ನ ಹಿಡಿಯಾಕೆ ನನ್ನ ಸೀನಿಯರ್ ಹೋಗೋರು ಅವರ್ಜೊತಿಗೆ ನಾನೂ ಹೋಗ್ತಿದ್ದೆ.. ಹಂಗಾಗಿ ಸ್ಮಶಾನದಾಗ ಅಡ್ಡಾಡೋದು ಕಾಮನ್ ಆಗಿತ್ತು..” ಎಂದು ಸ್ಟೋರಿ ಹೇಳ್ದಾ.

ಈ ಇಬ್ಬರಿಂದ ಒಂದು ವಿಷಯ ಕಾಮನ್ ಆಗಿತ್ತು. ಮನುಷ್ಯನಿಗೆ ಧೈರ್ಯ ಬರಬೇಕಾದರೆ ತಮ್ಮ ಬಾಲ್ಯದಲ್ಲಿ ಘಟಿಸಿದ ಘಟನೆಗಳು ಮತ್ತು ತಾವು ಬೆಳೆದು ಬಂದ ಬಾಲ್ಯದ ಹಾದಿ ಬಹುಮುಖ್ಯ ಪಾತ್ರವನ್ನ ವಹಿಸುತ್ತವೆ ಎನ್ನುವುದು.. ಅಲ್ಲವೇ..?

Facebook ಕಾಮೆಂಟ್ಸ್

ಲೇಖಕರ ಕುರಿತು

Nagaraj Mukari

ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ. ಪ್ರಸಕ್ತ ಕಾರವಾರದ ಕೈಗಾ ಅಣು ಸ್ಥಾವರದಲ್ಲಿ ನೌಕರಿ. ನಿಸರ್ಗ ಪ್ರಕಾಶನ, ಹಾಸನ ಅವರಿಂದ 2012ರಲ್ಲಿ ‘ಮಲೆನಾಡಿನ ಕಾನನ’ ಕವಿತೆಗೆ ‘ಕವನ ಕುಸುಮ’ ಪ್ರಶಸ್ತಿ. 2013ರಲ್ಲಿ ಚೊಚ್ಚಲ ಕೃತಿ ‘ನನ್ನ ಹೆಜ್ಜೆಗಳು’ ಕವನ ಸಂಕಲನ, 2016ರಲ್ಲಿ ‘ಲಾಸ್ಟ್ ಬುಕ್’ಅನುಭವ ಬರಹಗಳು ಎರಡನೇ ಕೃತಿ ಬಿಡುಗಡೆ. ಮೂರನೇ ಕೃತಿ ಹನಿಗವನ ಸಂಕಲನ ‘ಪ್ರೂಟ್ಸ್ ಸಲಾಡ್’ ಬಿಡುಗಡೆಯ ಹಂತದಲ್ಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!