ಅಂಕಣ

ತಂಡ ಕಟ್ಟಿ ದೇಶವನ್ನು ನಿಯಂತ್ರಿಸುವುದು ಸಂಘದ ಉದ್ದೇಶವಲ್ಲ – ಭಾರತ ವಿಶ್ವಗುರುವಾಗಬೇಕು

ತೃತೀಯ ಸಂಘಶಿಕ್ಷಾ ವರ್ಗದಲ್ಲಿ ಸರಸಂಘಚಾಲಕ ಮೋಹನ್ ಭಾಗ್ವತ್ ಅವರ ಭಾಷಣದ ಪೂರ್ಣಪಾಠ

ಪ್ರತಿವರ್ಷ ನಾಗ್ಪುರದಲ್ಲಿ ತೃತೀಯ ಸಂಘ ಶಿಕ್ಷಾವರ್ಗ ನಡೆಯುತ್ತದೆ. ಸಮಾರೋಪ ಸಮಾರಂಭಕ್ಕೆ ದೇಶದ ಸಜ್ಜನರನ್ನು ಆಮಂತ್ರಿಸುವುದು ಪರಂಪರೆಯಾಗಿದೆ. ಯಾರಿಗೆ ಬರಲು ಸಾಧ್ಯವೋ ಅವರು ಬರುತ್ತಾರೆ, ಸಂಘದ ಸ್ವರೂಪವನ್ನು ನೋಡಿ ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ನಾವದನ್ನು ಮಾರ್ಗದರ್ಶನವೆಂದು ತಿಳಿದು ಮುಂದುವರೆಯುತ್ತೇವೆ. ಪರಂಪರೆಯ ಅನುಸಾರವೇ ಇಂದಿನ ಕಾರ್ಯಕ್ರಮವೂ ಸ್ವಾಭಾವಿಕವಾಗಿ ಮತ್ತು ಸರಳವಾಗಿ ಸಂಪನ್ನವಾಗುತ್ತಿದೆ. ಆದರೆ ಇಂದಿನ ಕಾರ್ಯಕ್ರಮದ ಬಗ್ಗೆ ಕೆಲವು ಚರ್ಚೆಗಳು ನಡೆದಿವೆ. ಇದರ ವಿರುದ್ಧವಾಗಿ ಮತ್ತು ಪರವಾಗಿ ನಡೆಯುತ್ತಿರುವ ಚರ್ಚೆಗಳಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಹಿಂದೆ ನಡೆದುಕೊಂಡು ಬಂದಂತೆ ಇಂದೂ ನಡೆಯುತ್ತಿದೆಯಷ್ಟೇ. ನಮಗೆ ಡಾ.ಪ್ರಣಬ್ ಮುಖರ್ಜಿ ಅವರ ಪರಿಚಯವಾಯಿತು. ದೇಶ ಅರಿತಿರುವಂತೆ ಅತ್ಯಂತ ಜ್ಞಾನ ಸಮೃದ್ಧ, ಅನುಭವ ಸಮೃದ್ಧ ಆದರಣೀಯರವರು, ಹಾಗಾಗಿ ನಾವು ಅವರಿಗೆ ಆಮಂತ್ರಣ ನೀಡಿದೆವು. ನಮ್ಮ ಹೃದಯದಲ್ಲಿದ್ದ ಸ್ನೇಹವನ್ನು ಗುರುತಿಸಿ ಅವರು ಆಗಮಿಸಿದ್ದಾರೆ. ಮುಖರ್ಜಿಯವರನ್ನು ಹೇಗೆ ಕರೆದರು ಮತ್ತು ಅವರು ಏಕೆ ನಾಗ್ಪುರಕ್ಕೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಗಳು ನಿರರ್ಥಕ. ಸಂಘ ಸಂಘವೇಡಾ.ಪ್ರಣಬ್ ಮುಖರ್ಜಿ ಡಾ.ಪ್ರಣಬ್ ಮುಖರ್ಜಿಯೇ. ಮತ್ತು ಹಾಗೆಯೇ ಮುಂದುವರೆಯಲಿದೆ.

 ಸಂಘದ ಹೆಸರಲ್ಲಿ ದೊಡ್ಡ ಸಂಸ್ಥೆ ಕಟ್ಟಿ ದೇಶದ ಆಗುಹೋಗುಗಳ ಮೇಲೆ ಅಧಿಕಾರ ಸ್ಥಾಪಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವಲ್ಲ. ಆಕಾಂಕ್ಷೆಯೊಂದಿಗೆ ಸಂಘ ಕೆಲಸವನ್ನೂ ಮಾಡುತ್ತಿಲ್ಲ. ಹಿಂದು ಸಮಾಜದಲ್ಲಿ ಪ್ರಭಾವ ಸೃಷ್ಟಿಸುವ ಸಂಘಟನೆ ಸಂಘವಲ್ಲ. ಸಂಘವು ಸಂಪೂರ್ಣ ಸಮಾಜವನ್ನು ಸಂಘಟಿತಗೊಳಿಸಬಯಸುತ್ತದೆ. ಇಲ್ಲಿ ಯಾರೂ ಹೊರಗಿನವರಿಲ್ಲ. ವಾಸ್ತವದಲ್ಲಿ ಯಾವುದೇ ಭಾರತೀಯನಿಗೆ ಇನ್ನೊಬ್ಬ ಭಾರತೀಯ ಹೊರಗಿನವನಾಗಲು ಸಾಧ್ಯವೇ ಇಲ್ಲ. ದೇಶದ ಸಾವಿರಾರು ವರ್ಷದ ಪರಂಪರೆ  ‘ವಿವಿಧತೆಯಲ್ಲಿ  ಏಕತೆ’. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಭಾರತೀಯನೇ; ಮತ್ತು ಭಾರತವನ್ನು ಪೂಜಿಸುವುದು ಆತನ ಕೆಲಸ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ದೇಶದ ಪ್ರಾಕೃತಿಕ ಸಂಪತ್ತು ಆತನ ಉಪಯೋಗಕ್ಕೆ ಮಾತ್ರವಿರುವುದಲ್ಲ. ಹೊರಗಿನಿಂದ ಬಂದವನಿಗೂ ಅದನ್ನು ನೀಡುತ್ತಿದ್ದೇವೆ. ವಿವಿಧ ಭಾಷೆಗಳು, ಪ್ರಾಂತಗಳು, ವಿವಿಧ ರಾಜಕೀಯ ಚಿಂತನೆಗಳೂ ನಮ್ಮಲ್ಲಿ ಇವೆ. ಇವೆಲ್ಲವನ್ನೂ ಗೌರವಿಸುತ್ತಾ, ಸ್ವಾಗತಿಸುತ್ತಾ, ವಿವಿಧತೆಯನ್ನು ಹಾಗೆಯೇ ಇರಲು ಬಿಡುವುದು ನಮ್ಮ ಸಂಸ್ಕೃತಿ. ವಿಶ್ವದ ಎಲ್ಲಾ ಸ್ವಾರ್ಥ ಮತ್ತು ಭೇದವನ್ನು ತೊಡೆದು ಸುಖಶಾಂತಿ ಮತ್ತು ಸಂತುಲಿತ ಜೀವನ ನೀಡುವ ಪ್ರಾಕೃತಿಕ ಧರ್ಮವಿದು. ಇದನ್ನು ಬೆಳೆಸಲು ಮತ್ತು ಕಾಪಾಡಲು ಬೆವರು ಹಾಗೂ ರಕ್ತವನ್ನು ಸುರಿಸಿದ ಮಹಾನುಭಾವರನ್ನು ನೆನೆಯುತ್ತೇವೆ ಮತ್ತು ಅವರ ಮಾರ್ಗದಲ್ಲಿ ನಡೆಯುತ್ತೇವೆ. ಶಾಸ್ತ್ರಾರ್ಥ ಮತ್ತು ವಾದ ವಿವಾದಗಳೂ ನಡೆಯುತ್ತವೆ. ಇವೆಲ್ಲ ಸಾಮಾನ್ಯ. ಮತಾಂತರವಾದರೂ, ಹೃದಯದಲ್ಲಿ ಭಾರತವನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ಸಂಕಲ್ಪವಿರಬೇಕು. ಒಂದೇ ಗುರಿಯೆಡೆ ವಿವಿಧ ದಾರಿಯಲ್ಲಿ ಕ್ರಮಿಸುವವರು ಸಂಕಲ್ಪವನ್ನೂ ಜೊತೆಗೊಯ್ಯಬೇಕು.

 ವೈವಿಧ್ಯತೆ ಸುಂದರವಾದದ್ದು. ಆದರೆ ಹೊರಗೆ ಕಾಣುತ್ತಿರುವ ವಿವಿಧತೆ ಒಂದು ಏಕತೆಯ ಆಧಾರದಲ್ಲಿ ಹುಟ್ಟಿದೆ. ಭಾವವನ್ನು ಮನದಲ್ಲಿಟ್ಟುಕೊಂಡು ನಾವೆಲ್ಲ ಒಂದು ಎಂಬ ಭಾವವಿರಬೇಕು. ಭಾರತವನ್ನು ಭವಿತವ್ಯದೆಡೆಗೆ ಕೊಂಡೊಯ್ಯುವುದು ಯಾವುದೇ ವ್ಯಕ್ತಿ, ಸಮಾಜ, ಸರ್ಕಾರ ಅಥವಾ ಸಿದ್ಧಾಂತವಲ್ಲ. ಸಮಾಜದಲ್ಲಿರುವ ಭೇದವನ್ನು ಮರೆತರೆ ಸರ್ಕಾರ, ನಾಯಕರು ಎಲ್ಲರೂ ಬದಲಾಗುತ್ತಾರೆ; ಆಗ ದೇಶದ ಭಾಗ್ಯ ಬದಲಾಗುತ್ತದೆ. ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಸಂಗ್ರಾಮದಲ್ಲಿ ಫಾಲ್ಗೊಂಡಿದ್ದ ವಿವಿಧ ವಿಚಾರಗಳ ಪ್ರಮುಖರಿಗೆ ಇದ್ದ ಚಿಂತೆಯೇನೆಂದರೆ, ‘ಈಗೇನೋ ಸ್ವಾತಂತ್ರ್ಯ ನಮಗೆ ಲಭಿಸಬಹುದು. ಆದರೆ ನಮಗೆ ಅಂಟಿರುವ ವ್ಯಾಧಿ ಮುಗಿಯುವುದಿಲ್ಲ. ಎಲ್ಲಿಯವರೆಗೆ ಸಾಮಾನ್ಯ ಸಮಾಜವನ್ನು ಏಕಾತ್ಮತಾ ದರ್ಶನದ ಮೂಲಕ ಒಂದಾಗಿ ಕಾಣುವುದಿಲ್ಲವೋ, ಅಲ್ಲಿಯವರೆಗೆ ದುರ್ದಶೆ ಅಂತ್ಯವಾಗುವುದಿಲ್ಲ’. ಸಂಘದ ಸಂಸ್ಥಾಪಕ ಡಾ.ಹೆಡ್ಗೇವಾರ್ ಅವರು  ಬಹುಮುಖೀ ಕಾರ್ಯಗಳ ಸಕ್ರಿಯ ಕಾರ್ಯಕರ್ತರಾಗಿದ್ದರು. ಏಕೆಂದರೆ ಅವರಿಗೆ ಸ್ವಂತದ್ದೇನನ್ನೋ ಮಾಡಿಕೊಳ್ಳಬೇಕೆಂಬ ಆಕಾಂಕ್ಷೆಗಳಿರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರಾಗಿ ಆಂದೋಲನದಲ್ಲಿ ಭಾಗವಹಿಸಿ ಎರಡು ಬಾರಿ ಸೆರೆವಾಸ ಅನುಭವಿಸಿದ್ದರು; ಅಗ್ರಗಣ್ಯ ಕ್ರಾಂತಿಕಾರಿಗಳೊಂದಿಗೆ ಜತೆಗೂಡಿ ಕ್ರಾಂತಿಯೋಜನೆಗಳ ರೂಪುರೇಷೆ ರಚಿಸಿದರು ಮತ್ತು ಅದರ ಅನುಷ್ಠಾನದಲ್ಲಿ ಪಾಲ್ಗೊಂಡರು; ಸಮಾಜ ಸುಧಾರಣೆ ಕೆಲಸದಲ್ಲಿ ಸುಧಾರಕರೊಂದಿಗೆ ಕೆಲಸ ಮಾಡಿದರು; ಧರ್ಮ ಸಂರಕ್ಷಣೆಯಲ್ಲಿ ಸಂತಮಹಾತ್ಮರೊಂದಿಗೆ ಕೆಲಸ ಮಾಡಿದರು. ಇವರೆಲ್ಲರೊಂದಿಗೆ ಕೆಲಸ ಮಾಡುವಾಗ ತಮ್ಮದೇ ಆದ ಹೊಸ ಚಿಂತನೆ ಮೊಳಕೆಯೊಡೆಯಿತು ಮತ್ತು ಇತರರ ಚಿಂತನೆಯನ್ನು ಪರಾಮರ್ಶಿಸುವ ಅವಕಾಶವೂ ದೊರೆಯಿತು.

ತ್ರೈಲೋಕ್ಯನಾಥ್ ಚಕ್ರವರ್ತಿ ಬಂಗಾಳದ ಸುಪ್ರಸಿದ್ಧ ಕ್ರಾಂತಿಕಾರಿಗಳು. 1989ರಲ್ಲಿ ಡಾ.ಹೆಡ್ಗೇವಾರರ ಜನ್ಮಶತಾಬ್ದಿ ಸಮಿತಿಗೆ ಸದಸ್ಯರಾಗಲು ಅವರನ್ನು ನಿಮಂತ್ರಿಸಲು ಕೆಲವು ದೆಹಲಿಯ ಕಾರ್ಯಕರ್ತರು ಭೇಟಿಯಾಗಿದ್ದರು. ಸಂದರ್ಭದಲ್ಲಿ ‘1911ರಲ್ಲಿ ಡಾಕ್ಟರ್ಜೀ ಕೋಲ್ಕತ್ತದ ನನ್ನ ಮನೆಗೆ ಬಂದಿದ್ದರು. ಸಮಾಜವನ್ನು ಎದ್ದುನಿಲ್ಲಿಸದೇ ಇದ್ದರೆ ಯಾವುದೇ ಉತ್ತಮ ಕೆಲಸ ಸಫಲವಾಗುವುದಿಲ್ಲ. ಬಹುಷಃ ಕೆಲಸವನ್ನು ನಾನೇ ಮಾಡಬೇಕಾಗಿದೆ ಎಂದೆನಿಸುತ್ತಿದೆಎಂದು ಡಾ ಜೀಯವರು ನನ್ನಲ್ಲಿ ಹೇಳಿದ್ದರು ಎಂದು ಚಕ್ರವರ್ತಿಯವರು ತಿಳಿಸಿದ್ದರು. ದೊಡ್ಡ ಜನರೆಲ್ಲರೂ ದೊಡ್ಡ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ನಾನು ಕೆಲಸಗಳನ್ನು ಮಾಡದಿದ್ದರೂ ಅವುಗಳು ನಡೆಯುತ್ತವೆ ಎಂದು ನಿಶ್ಚಯಿಸಿ 1911ರಿಂದಲೇ ಕೆಲಸ ಪ್ರಾರಂಭಿಸಿದರು. ಅದರ ಫಲಶೃತಿಯಾಗಿ 1925 ವಿಜಯದಶಮಿಯಂದು ತಮ್ಮ ಮನೆಯಲ್ಲಿಯೇ ಯುವಕರನ್ನು ಸೇರಿಸಿ, ‘ಹಿಂದು ಸಮಾಜ ಭಾರತದ ಉತ್ತರದಾಯಿ ಸಮಾಜವಾಗಿದೆ. ಕೇವಲ ಪರಂಪರೆಯಿಂದ ಬಂದಿದ್ದಾನೆ ಎಂಬ ಕಾರಣಕ್ಕಾಗಿ ಅಲ್ಲ ಅಥವಾ ಭಾರತದಲ್ಲಿ ಬಹುಸಂಖ್ಯಾತವಾಗಿದ್ದಾನೆ ಎಂಬ ಮಾತ್ರಕ್ಕಾಗಿ ಅಲ್ಲ. ಭಾರತದ ಭಾಗ್ಯದ ಪ್ರಶ್ನೆಯನ್ನು ಆತನಿಗೇ ಕೇಳಲಾಗುತ್ತದೆ. ಆತನೇ ಉತ್ತರದಾಯಿಯಾಗಿದ್ದಾನೆ. ಹಾಗಾಗಿ ಹಿಂದು ಸಮಾಜವನ್ನು ಸಂಘಟಿಸುವ ಕಾರ್ಯವು ಇಂದಿನಿಂದ ಪ್ರಾರಂಭವಾಗಿದೆಎಂದು ಹೇಳಿದ್ದರು.

 ನಾವೆಲ್ಲ ಒಂದು ಎಂಬುದು ನಮ್ಮ ದೃಷ್ಟಿ. ಕೆಲವರಿಗೆ ಅದು ಅರಿವಾಗಿದೆ, ಕೆಲವರಿಗೆ ಅರಿವಾಗಿಲ್ಲ. ಇನ್ನು ಕೆಲವರಿಗೆ ಅರಿವಾಗಿದ್ದರೂತಮಗೆ ನಷ್ಟವಾಗುತ್ತದೆಎಂಬ ಕಾರಣಕ್ಕೆ ವಿರುದ್ಧವಾಗೇ ನಡೆಯುತ್ತಾರೆ. ಆದರೆ ಪ್ರತಿಯೊಬ್ಬರೂ ನೆನಪಿಡಬೇಕಾದ ಸಂಗತಿಗಳೆಂದರೆ

1)    ಎಲ್ಲರ ಮಾತೆ  ಭಾರತ ಮಾತೆ.

2) ಎಲ್ಲರ ಪೂರ್ವಿಕರೂ ಒಬ್ಬರೇ (ಇದು ಡಿಎನ್ ಯಿಂದ ಸಾಬೀತಾಗಿದೆ).

3) ಎಲ್ಲರ ಜೀವನದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವವಿದೆ.

 ಇದನ್ನು ತಿಳಿದರೆ ಸಂಕುಚಿತ ಚಿಂತನೆಗಳೆಲ್ಲ ಕಳಚಿ ರಾಷ್ಟ್ರ ಕಾರ್ಯದಲ್ಲಿ ಒಂದಾಗುತ್ತೇವೆ.

ಸುವಾತಾವರಣ ಸೃಷ್ಟಿಸುವವರು ಬೇಕು

 ಸಂಘದ ಕಾರ್ಯ ಸಮಾಜದಲ್ಲಿ ಸಂಘಟನೆ ಮಾಡುವುದಲ್ಲ; ಸಮಾಜವನ್ನೇ ಸಂಘಟಿಸುವುದು. ಏಕೆಂದರೆ ಸಂಘಟಿತ ಸಮಾಜವೇ ಭಾರತದ ಭಾಗ್ಯ ಬದಲಿಸುತ್ತದೆ. ಭಾಷಣಗಳನ್ನು ಕೇಳಿ, ಪುಸ್ತಕಗಳನ್ನು ಓದಿ ಸಂಘಟನೆ ಮಾಡಲಾಗುವುದಿಲ್ಲ. ಸಂಘಟನೆಗೆ ಸೌಹಾರ್ದತೆ, ಸೌಮನಸ್ಕತೆ ಅಗತ್ಯವಿದೆ. ಇದನ್ನು ಇಂದಿನ ಭಾಷೆಯಲ್ಲಿಡೆಮಾಕ್ರಟಿಕ್ ಮೈಂಡ್’. ಎನ್ನಲಾಗುತ್ತದೆ. ವ್ಯವಹಾರವು ಸ್ವಭಾವಕ್ಕೆ ಸಂಬಂಧಿಸಿರುತ್ತದೆ ಮತ್ತು ಸ್ವಭಾವವು ಅಭ್ಯಾಸದಿಂದ ರೂಪುಗೊಳ್ಳುತ್ತದೆ. ಪ್ರತಿಯೊಬ್ಬರೂ ಚಿಂತನೆ ಅಧ್ಯಯನ ನಡೆಸಿ ಅಭ್ಯಾಸಗಳನ್ನು ರೂಪಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಏನು ವಾತಾವರಣ ಸೃಷ್ಟಿಯಾಗಿದೆಯೋ ಅದರ ಪ್ರಕಾರ ನಡೆಯುತ್ತಾರೆ. ವಾತಾವರಣವನ್ನು ಸಿದ್ದಪಡಿಸುವ ಜನರಿದ್ದಾರೆ; ಅವರು ಅತ್ಯಗತ್ಯ.

 ತಾತ್ವಿಕ ಚರ್ಚೆಯಲ್ಲಿ ಸಾಮಾನ್ಯರಿಗೆ ಆಸಕ್ತಿಯಿಲ್ಲ. ಚರ್ಚೆಗೆ ಕೂರುವವರ ಅಭಿಪ್ರಾಯಗಳು ಪ್ರತ್ಯೇಕವಾಗಿರುತ್ತವೆನಮ್ಮ ದೇಶದ ವಿವಿಧ ಋಷಿಗಳು ವಿವಿಧ ಆಯಾಮಗಳನ್ನು ನೀಡಿದ್ದಾರೆ. ಗುರುವು ನೀಡುವ ಉಪದೇಶವನ್ನು ಶಿಷ್ಯರು ಮತ್ತೊಂದು ರೀತಿಯಲ್ಲಿ ಗ್ರಹಿಸಿ ಅನುಸರಿಸುತ್ತಾರೆ! ಯಾರನ್ನು ಪ್ರಮಾಣವಾಗಿಟ್ಟುಕೊಳ್ಳುವುದು? ಶೃತಿ ಮತ್ತು ಸ್ಮೃತಿಯಲ್ಲಿ ವ್ಯತ್ಯಾಸವಿದೆ. ವಿಶಾಲವಾದ ದೇಶದಲ್ಲಿ ಅಸಂಖ್ಯ ಜನಸಮುದಾಯದ ನಡುವೆ ತಮ್ಮ ಆಚರಣೆಯಿಂದ ಸಮಾಜ ಹಿತೈಷಿ ಆಚರಣೆಯ ವಾತಾವರಣ ನಿರ್ಮಿಸುವ ಕಾರ್ಯಕರ್ತರ ಸಮೂಹ ಬೇಕು. ಇದುವೇ ಸಂಘದ ಪ್ರಯಾಸ. ವಿಚಾರ, ಭಾಷೆ, ಜಾತಿ, ಪಂಥ ಏನೇ ಇದ್ದರೂ, ಸಂಪೂರ್ಣ ರಾಷ್ಟ್ರವನ್ನು ತನ್ನದೆಂದು ತಿಳಿಯುತ್ತ ವ್ಯಾಪಕ ದೃಷ್ಟಿಯಿಂದ, ದೇಶದ ಹಿತದ ದೃಷ್ಟಿಯಿಂದ ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ಆಜೀವಿಕ ವ್ಯವಹಾರ ನಡೆಸಿ ಸುತ್ತಲಿನ ಸಮಾಜಕ್ಕೆ ಉದಾಹರಣೆಯಾಗಿ ನಿಲ್ಲುವ ಕಾರ್ಯಕರ್ತರು ಬೇಕು. ಅಂಥವರು ವಾತಾವರಣ ನಿರ್ಮಿಸುತ್ತಾರೆ. ಅವರೂ ಸಾಮಾನ್ಯ ಜನರಾಗಿರುತ್ತಾರೆಯೇ ಹೊರತು ಮಹಾನ್ ಪುರುಷರಂತೆ ಕಾಣುವುದಿಲ್ಲ. ಸಾಮಾನ್ಯ ಜನರು ಮಹಾನ್ ವ್ಯಕ್ತಿಗಳ ಜಯಂತಿ, ಪುಣ್ಯತಿಥಿಗಳನ್ನು ಆಚರಿಸುತ್ತಾರೆ, ಆದರೆ ತಮ್ಮ ಸುತ್ತಮುತ್ತಲಿರುವವರನ್ನು ನೋಡಿ ಅನುಸರಿಸುತ್ತಾರೆ. ನಮ್ಮಲ್ಲಿ ಮಹಾನ್ ಆದರ್ಶ, ಚಿಂತನೆಗಳಿಗೆ ಕೊರತೆಯಿಲ್ಲ; ಆಚರಣೆಯಲ್ಲಿ ಅದು ಕಂಡುಬರುತ್ತಿರಲಿಲ್ಲ. ಆದರ್ಶಗಳ ಆಚರಣೆಯಲ್ಲಿ ನಾವು ನಿಕೃಷ್ಟರಾಗಿದ್ದೆವು; ಪ್ರಸ್ತುತ ಸುಧಾರಿಸಿದ್ದೇವೆ ಎನ್ನಬಹುದು. ಇಂತಹ ಶೀಲವಂತ, ಚಾರಿತ್ರ್ಯವಂತರನ್ನು ನಿರ್ಮಿಸುವ ಕೆಲಸ ಸಂಘದ್ದು.

 ಯಾವುದೇ ಕೆಲಸವನ್ನು ಮಾಡಲು ಶಕ್ತಿ ಬೇಕು. ಇದು ವಿಜ್ಞಾನಸಿದ್ಧ ನಿಯಮ. ಮತ್ತು ಶಕ್ತಿಗೆ ಸಂಘಟನೆಯೇ ಆಧಾರ. ಶಕ್ತಿಗೆ ಶೀಲದ ಆಧಾರವಿಲ್ಲದೇಹೋದರೆ ಅದು ದಾನವೀ ಶಕ್ತಿಯಾಗುತ್ತದೆ. ವಿದ್ಯಾವಂತರು ಸಮಯ ವ್ಯರ್ಥ ಮಾಡುತ್ತಾರೆ, ಶ್ರೀಮಂತರು ಹಣದ ಮದ ಪ್ರದರ್ಶಿಸುತ್ತಾರೆ, ಮತ್ತು ಶಕ್ತಿವಂತರು ತಮಗೆ ಬೇಕಾದದ್ದನ್ನೆಲ್ಲ ಪಡೆಯಲು ಮತ್ತು ಪರರನ್ನು ಪೀಡಿಸಲು ತಮ್ಮ ಶಕ್ತಿ ಉಪಯೋಗಿಸುತ್ತಾರೆ! ಇವನ್ನೆಲ್ಲ ದುಷ್ಟ ಜನರು ಮಾಡುತ್ತಾರೆ. ಸಜ್ಜನರ ವ್ಯವಹಾರ ಇದಕ್ಕೆ ವಿರುದ್ಧವಾದದ್ದು. ಸಜ್ಜನರು ತಮ್ಮ ವಿದ್ಯೆಯನ್ನು ಸಮಾಜದ ಜ್ಞಾನವನ್ನು ಹೆಚ್ಚಿಸಲು; ಹಣವನ್ನು ದಾನಕ್ಕೆ; ಶಕ್ತಿಯ ಉಪಯೋಗವನ್ನು ದುರ್ಬಲರ ರಕ್ಷಣೆಗೆ ಬಳಸುತ್ತಾರೆ. ಶಕ್ತಿಗೆ ಶೀಲದ ಆಧಾರವಿರಬೇಕು. ಇಲ್ಲದಿದ್ದರೆ ಅನಿಯಂತ್ರಿತ ಶಕ್ತಿ ಆಪತ್ತು ತರಬಹುದು. ಹಾಗಾಗಿ ವಿದ್ಯೆ, ಹಣ, ಶಕ್ತಿ ಎಲ್ಲವನ್ನೂ ಸಮಾಜಕ್ಕಾಗಿ ಬಳಸಬೇಕು. ಶಕ್ತಿಯ ಉತ್ಪತ್ತಿ, ಶೀಲದ ಉತ್ಪತ್ತಿ, ಜ್ಞಾನದ ಆರಾಧನೆ, ವೀರವ್ರತ ಆರಾಧನೆ, ಧ್ಯೇಯನಿಷ್ಠೆ ಇವಿಷ್ಟನ್ನು ಸ್ವಯಂಸೇವಕರು ಪ್ರತಿದಿನ ಪ್ರಾರ್ಥನೆಯಲ್ಲಿ ಭಗವಂತನನ್ನು ಕೇಳುತ್ತಾರೆ.

 1925ರಲ್ಲಿ ಸಂಘ ಪ್ರಾರಂಭವಾಯಿತು. ಎಲ್ಲಾ ವಿರೋಧದ ನಡುವೆಯೂ ಬೆಳೆಯಿತು. ಇಂದು ಲೋಕಪ್ರಸಿದ್ಧಿ  ಪಡೆದಿದೆ. ಆದರೆ ಪ್ರಸಿದ್ಧಿಹೊಂದುವುದು ಸಂಘದ ಉದ್ದೇಶವಲ್ಲ. ಅನುಕೂಲದ ದಿನವೂ ಬರಬಹುದು. ಅನುಕೂಲವು ನಮ್ಮನ್ನು ವಿಶ್ರಾಂತಿಯೆಡೆಗೆ ಕೊಂಡೊಯ್ಯಬಹುದು. ಆದರೆ ನಮಗೆ ವಿಶ್ರಾಂತಿಯಿಲ್ಲ; ಭಾರತ ಮಾತೆಯ ಪರಮವೈಭವವೇ ನಮ್ಮ ಲಕ್ಷ್ಯ ಕೆಲಸವನ್ನು ಮಾಡುವ ಕಾರ್ಯಕರ್ತರ ಪ್ರಶಿಕ್ಷಣ ಪ್ರತಿವರ್ಷ ನಡೆಯುತ್ತದೆ. ಎಲ್ಲಾ ಶಿಕ್ಷಾರ್ಥಿಗಳು ಸಿರಿವಂತರಲ್ಲ. ತಮ್ಮದೇ ಖರ್ಚಿನಲ್ಲಿಇಲ್ಲಿಗೆ ಬರುವ ಸ್ವಯಂಸೇವಕರಲ್ಲಿ ಕೆಲವರು ಕೆಲವು ತಿಂಗಳಿನಿಂದ ಹಣ ಹೊಂದಿಸಿರುತ್ತಾರೆ. ಹೀಗೆ ತಮ್ಮದೇ ಖರ್ಚಿನಲ್ಲಿ ಬರುವ ಇವರಿಗೆ ನಾವು ಧನ್ಯವಾದಗಳನ್ನೂ ಹೇಳುವುದಿಲ್ಲ. ಆದರೆ, ಏನನ್ನೂ ಅಪೇಕ್ಷೆ ಮಾಡಬೇಡ ಎಂಬ ಸ್ವಭಾವವನ್ನು ಅಭ್ಯಾಸದ ಮೂಲಕ ಕಲಿಸಿರುತ್ತೇವೆ. ಇಲ್ಲಿಯವರೆಗೆ ಕೇಳಿ ತಿಳಿದಿದ್ದ ಭಾರತದ ಭಾಷೆ, ಮತಪಂಥ, ಅಂತಸ್ತಿನ ವೈವಿಧ್ಯತೆಯನ್ನು ತೃತೀಯ ವರ್ಷಕ್ಕೆ ಬರುವ ಸ್ವಯಂಸೇವಕರು ಸ್ವತಃ ಅನುಭವಿಸುತ್ತಾರೆ. ಕೊನೆಯ ದಿನ ಇಲ್ಲಿಂದ ಹೊರಡುವಾಗ ಅಗಲುವಿಕೆಯ ಕಣ್ಣೀರಿಡುತ್ತಾರೆ.

 ಹೀಗೆ, ದೇಶದ ಏಕತೆಯ ಅನುಭವವನ್ನು ಮೂಡಿಸುವ ತೃತೀಯ ವರ್ಷ ಸಂಘಶಿಕ್ಷಾವರ್ಗ ಸಮಾರೋಪದಂದು ಆಗಮಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಪ್ರಣಬ್ರವರ ಮಾತುಗಳನ್ನು ಪಾಥೇಯದಂತೆ ಸ್ವೀಕರಿಸಿ ಸಂಘಕಾರ್ಯ ನಿರತರಾಗೋಣ.

 

‘ವಿಕ್ರಮ’ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ

Facebook ಕಾಮೆಂಟ್ಸ್

ಲೇಖಕರ ಕುರಿತು

Vrushanka Bhat

Editor at Vikrama Kannada Weekly

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!