ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಲ್ಚೆಂಡಿನಾಟದ ಉತ್ಸವ ಈ ಸಲ ನಡೆಯುತ್ತಿರುವುದು ಫುಟ್‍ಬಾಲ್ ಸ್ವರ್ಗ ಎಂದೇ ಕರೆಯಬಹುದಾದ ಬ್ರೆಜಿಲ್‍ನಲ್ಲಿ! ಕ್ರಿಕೆಟ್ ಸೀಸನ್ ಶುರವಾದರೆ ಸಾಕು ಟಿವಿ ಮುಂದೆ ಜಮೆಯಾಗಿ ಊಟ-ನಿದ್ದೆಗಳನ್ನೂ ಮರೆಯುವ ಭಾರತೀಯ ಕ್ರಿಕೆಟ್ ಫ್ಯಾನ್‍ಗಳ ಹಾಗೆ ಬ್ರೆಜಿಲಿಯನ್ನರಿಗೆ ಫುಟ್‍ಬಾಲ್ ಕೂಡ ಒಂದು ಧರ್ಮವೇ! ತಮ್ಮ ದೇಶವನ್ನು ಪ್ರತಿನಿಧಿಸುತ್ತ ಅಂಗಳಕ್ಕಿಳಿಯುವವರೆಲ್ಲ ದೇವತೆಗಳೇ! ಅಲ್ಲಿ ಈ ಸಲದ ಫುಟ್‍ಬಾಲ್ ಪಂದ್ಯಾವಳಿಗೆ ಸೇರಿರುವ ಜನಸಾಗರವನ್ನು ಕಂಡು ಸ್ವತಃ ಫಿಫಾ ಅಧ್ಯಕ್ಷನೇ ದಂಗಾಗಿ ಹೋಗಿದ್ದಾನೆ. ಅದೇ ಅಮಲಿನಲ್ಲಿ “ಇಡೀ ಜಗತ್ತೇ ಇಲ್ಲಿದೆ! ಇದೇ ಜನಪ್ರಿಯತೆಯನ್ನು ಕಾಲ್ಚೆಂಡು ಉಳಿಸಿಕೊಳ್ಳುವುದಾದರೆ, ವರ್ಲ್ಡ್ ಕಪ್ ಏಕೆ, ಇಂಟರ್-ಪ್ಲಾನೆಟರಿ ಕಪ್ ಕೂಡ ಆಡಬಹುದೋ ಏನೋ! ಯಾಕಾಗದು!” ಎಂದು ಉದ್ಗರಿಸಿದ್ದಾನೆ. ಅಂದರೆ, ಭೂಮಿಯ ಮೇಲಲ್ಲ, ಸೌರವ್ಯೂಹದ ಇತರ ಗ್ರಹಗಳಲ್ಲೂ ಕಾಲ್ಚೆಂಡು ಆಡುವಷ್ಟು ಮುಂದೆ ಹೋಗಬಹುದು ಎನ್ನುವುದು ಅವನ ಮಾತಿನ ಅರ್ಥ. ಶಹಬ್ಬಾಸ್, ಉತ್ಪ್ರೇಕ್ಷಾಲಂಕಾರದಲ್ಲಿ ಅವನಿಗೆ ನೂರಕ್ಕೆ ನೂರು ಮಾರ್ಕು ಕೊಡಬೇಕು!
ಅವನೇನೋ ಖುಷಿ ಹೆಚ್ಚಾಗಿ ಮಿದುಳಲ್ಲಿ ರಕ್ತಪರಿಚಲನೆ ಇಳಿದಾಗ ಹೇಳಿದ ಮಾತದು. ಅದನ್ನೇ ನಿಜ ಮಾಡಲಿಕ್ಕಾಗುತ್ತದೆಯೇ? ಒಂದು ವೇಳೆ, ಈ ಭೂಮಿಯನ್ನು ಬಿಟ್ಟು ಬೇರೆ ಗ್ರಹದಲ್ಲಿ ಚೆಂಡಾಟ ಆಡಲು ಹೊರಟಿರೆಂದೇ ಇಟ್ಟುಕೊಳ್ಳೋಣ. ಯಾವ ಗ್ರಹಕ್ಕೆ ಹೋಗುತ್ತೀರಿ? ಎಲ್ಲಿ ಗೋಲು ನೆಡುತ್ತೀರಿ? ಪೆನಾಲ್ಟಿ ಶೂಟ್ ಹೇಗೆ ಮಾಡುತ್ತೀರಿ? ತುಂಬ ದೂರ ಬೇಡ, ನಮ್ಮ ತೀರ ಸಮೀಪದ ಚಂದ್ರನನ್ನು ತೆಗೆದುಕೊಂಡರೆ ಹೇಗೆ ಎನ್ನುತ್ತೀರೇನೋ! ಚಂದ್ರನ ಮೇಲೆ ಇಳಿದ ಮಾನವರ ಚಿತ್ರ ನೋಡಿದ್ದೀರಲ್ಲ? ಅಲ್ಲಿ ನಮ್ಮ ಹಾಗೆ ವಾಕಿಂಗೋ ರನ್ನಿಂಗೋ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಚಂದ್ರನ ಗುರುತ್ವ ಭೂಮಿಯದರ 1/6 ಅಷ್ಟೆ. ಅಂದರೆ, ಭೂಮಿಯಲ್ಲಿ 60 ಕೆಜಿ ತೂಗುವ ವ್ಯಕ್ತಿ ಚಂದ್ರನ ಮೇಲೆ ಕೇವಲ 10 ಕೆಜಿ ಭಾರದವನಾಗುತ್ತಾನೆ. ತೂಕ ಇಳಿಸಲು ಡಯೆಟ್ ಮಾಡುವ ಲಲನಾಮಣಿಗಳು ಅಲ್ಲಿ ಎರಡೆರಡು ಸಲ ಊಟ ಮಾಡಬೇಕಾಗಬಹುದು! ಇಂತಿಪ್ಪ ಗ್ರಹದಲ್ಲಿ ಕಾಲ್ಚೆಂಡು ಆಡುವುದು ಹೇಗೆ? ಚೆಂಡೆಸೆಯಲು ಹಾರಿ ನೆಗೆದ ಕ್ರೀಡಾಳು ಮತ್ತೆ ನೆಲ ಮುಟ್ಟಲು ಒಂದೆರಡು ನಿಮಿಷ ಬೇಕಾಗಬಹುದು! (ನಮ್ಮ ಧೋನಿ ಏನಾದರೂ ಸಿಕ್ಸರ್ ಹೊಡೆದರೆ ಏನಾಗಬಹುದು ಕಲ್ಪಿಸಿ) 1971ರಲ್ಲಿ ಈ ನೆಲದ ಮೇಲಿಳಿದಿದ್ದ ಅಲನ್ ಶೆಫರ್ಡ್ ತನ್ನ ಜೊತೆ ಒಂದೆರಡು ಗಾಲ್ಫ್ ಬಾಲು-ಕೋಲುಗಳನ್ನೂ ಒಯ್ದಿದ್ದನಂತೆ. ಚಂದ್ರನ ಮೇಲೆ ನಿಂತು ಒಂದು ಕೈಯಿಂದ ಬೀಸಿದ ದಾಂಡಿಗೆ ಚೆಂಡು ಹಾರಿದ್ದಾದರೂ ಎಷ್ಟು ದೂರ! ಇನ್ನು ಅವನ ಜೊತೆ ಹೋಗಿದ್ದ ಎಡ್ಗರ್ ಮಿಚೆಲ್‍ಗೆ ಜಾವಲಿನ್ ಎಸೆಯುವ ಆಸೆಯಾಗಿ, ತನ್ನೊಡನೆ ಕೊಂಡುಹೋಗಿದ್ದ ಜಾವೆಲಿನ್‍ನಂಥದ್ದೇ ರಚನೆಯನ್ನು ಎತ್ತಿ ಎಸೆದನಂತೆ. ಅದು ಹಾರಿದ ರಭಸಕ್ಕೆ ವಿಸ್ಮಿತನಾದ ಎಡ್ಗರ್, “ಇದು ಮನುಷ್ಯನೊಬ್ಬ ಮಾಡಿರಬಹುದಾದ ಅತ್ಯಂತ ದೊಡ್ಡ ಎಸೆತ” ಎಂದು ಉದ್ಗರಿಸಿದ. ಇನ್ನು ಗಂಟೆಗೆ 100 ಮೈಲಿ ವೇಗದಲ್ಲಿ ಚೆಂಡು ಒದೆಯಬಲ್ಲ ಡೇವಿಡ್ ಬೆಕಮ್ ಏನಾದರೂ ಇಲ್ಲಿ ನಿಂತು ಒಂದು ಕಾಲು ನೋಡುವಾ ಎಂದುಕೊಂಡರೆ, ಚೆಂಡು ಹೆಕ್ಕಲಿಕ್ಕೇ ಬಸ್‍ನಲ್ಲಿ ಹೋಗಬೇಕಾಗಬಹುದು. ಫುಟ್‍ಬಾಲ್‍ನಲ್ಲೇನಿದ್ದರೂ ವೇಗಕ್ಕೇ ಪ್ರಾಧಾನ್ಯ. ಒಂದೊಂದು ಸೆಕೆಂಡನ್ನು ಕೂಡ ಲೆಕ್ಕಾಚಾರದಿಂದ ವ್ಯಯಿಸುತ್ತ, ಅಂಗಳ ತುಂಬ ಇಲಿಮರಿಗಳಂತೆ ಕ್ರೀಡಾಳುಗಳು ಓಡಾಡುವುದೇ ಚಂದ, ಮಾತ್ರವಲ್ಲ ರೋಮಾಂಚಕ. ಅಂಥಾ ಕ್ರೀಡೆಯನ್ನು ಚಂದ್ರನ ಮೇಲೆ ಆಡಿದರೆ, ಅವರೆಲ್ಲ ಕಾಂಗರೂಗಳಂತೆ ಅಂಗಳದಲ್ಲಿ ಪುಟಿಯಬೇಕಾಗುತ್ತದೆ. ಇಂಥಾ ನೀರಸ ಆಟ ನೋಡಲು ಚಂದ್ರನವರೆಗೆ ಹೋಗಬೇಕಾ ಅಂತ ಅನ್ನಿಸಬಹುದು.
ಹೆಚ್ಚಾಗಿ ಕ್ರೀಡಾಳುಗಳು ತಮ್ಮ ಕಠಿಣ ಅಭ್ಯಾಸವನ್ನು ಸಾಗರಮಟ್ಟದಿಂದ ಬಹಳ ಎತ್ತರದಲ್ಲಿರುವ ಜಾಗದಲ್ಲಿ ಮಾಡುತ್ತಾರೆ. ಆಮ್ಲಜನಕ ಕಮ್ಮಿ ಇರುವ ಇಂತಹ ಜಾಗದಲ್ಲಿ ಆಡುವುದು ನಿಜಕ್ಕೂ ಕಠಿಣ. ಆಮ್ಲಜನಕ ಕಮ್ಮಿ ನಿಜ, ಆದರೆ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ಏನೂ ಇರುವುದಿಲ್ಲ ಅಲ್ಲವೆ! (ಇಲ್ಲವಾದರೆ, ಅವರೆಲ್ಲ ಬೆನ್ನಿಗೆ ಸಿಲಿಂಡರ್ ಕಟ್ಟಿಕೊಂಡು ಆಡಬೇಕಾಗಿತ್ತು!) ಆದರೆ, ನಮ್ಮ ಸಮೀಪದ ಗ್ರಹ ಮಂಗಳನಲ್ಲೇನಾದರೂ ಆಡಲು ಹೋಗುವುದಾದರೆ, ಈ ಸಿಲಿಂಡರಿನ ವ್ಯವಸ್ಥೆ ಮಾಡಿಕೊಳ್ಳುವುದು ಕಡ್ಡಾಯ. ಯಾಕೆಂದರೆ, ಅಲ್ಲಿ ಒಂದೇ ಒಂದು ಉಸಿರಾಟಕ್ಕೆ ಬೇಕು ಎಂದರೂ ಔನ್ಸಿನಷ್ಟು ಆಮ್ಲಜನಕ ಸಿಗುವುದಿಲ್ಲ. ಇರುವುದೆಲ್ಲ ಬರೀ ಇಂಗಾಲದ ಡೈ ಆಕ್ಸೈಡ್ ಮಾತ್ರ! ಅಲ್ಲದೆ, ಕ್ರೀಡಾಳುಗಳು ಎರಡೆರಡು ಪಟ್ಟಿ ಇರುವ ದಪ್ಪದ ವಿಕಿರಣ ನಿರೋಧಕ ಕವಚ ಹಾಕಿಕೊಳ್ಳಬೇಕು. ಓಜೋನ್ ಪದರವೇ ಇಲ್ಲದಿರುವ ಮಂಗಳನಲ್ಲಿ ಸುತ್ತಮುತ್ತ ಎಲ್ಲ ವಿಕಿರಣಗಳ ಮಳೆಯೇ ನಡೆಯುತ್ತಿರುತ್ತದೆ.
ಮಂಗಳ ಬೇಡ ಅಂತಾದರೆ ಶುಕ್ರ ಗ್ರಹದತ್ತ ತಿರುಗಬೇಕು. ಇಲ್ಲಾದರೂ ಫುಟ್‍ಬಾಲ್ ಆಡುವುದಕ್ಕೆ ಸಾಧ್ಯವೇ ಎಂದರೆ ನಕಾರವೇ ಉತ್ತರ. ಹೆಚ್ಚುಕಡಿಮೆ ಭೂಮಿಯಷ್ಟೇ ಉದ್ದ-ಅಗಲ ಇರುವ ಶುಕ್ರನ ಗುರುತ್ವ ಭೂಮಿಯಷ್ಟೇ ಎನ್ನುವುದನ್ನು ಒಪ್ಪೋಣ. ಆದರೆ, ಅಲ್ಲಿರುವ ವಾತಾವರಣ ಎಂಥಾದ್ದು? ಕೇವಲ ಗಂಧಕ ಸಂಯುಕ್ತಗಳ ಮಿಶ್ರಣ! ಶುಕ್ರನಲ್ಲಿ ಮಳೆ ಎಂದರೆ ಪ್ರಬಲ ಗಂಧಕಾಮ್ಲದ ಸುರಿಮಳೆ! ಈ ಮಳೆಯಲ್ಲಿ ನಿಲ್ಲುವುದು ಬಿಡಿ, ಬೆರಳ ತುದಿಯನ್ನು ಕೂಡ ಅದ್ದಲು ಸಾಧ್ಯವಿಲ್ಲ! ಸರಿ, ಮಳೆ ನಿಂತಾಗ ಆಡೋಣ ಅನ್ನುತ್ತೀರಾ? ಶುಕ್ರನ ಮೇಲಿನ ತಾಪಮಾನ ಬರೋಬ್ಬರಿ 400 ಡಿಗ್ರಿ ಸೆಲ್ಸಿಯಸ್. ಅಂದರೆ, ಮನೆಯಲ್ಲಿ ಮ್ಯಾಗಿ ಮಾಡುವ ಓವನ್‍ನ ಅತ್ಯುಗ್ರ ಉಷ್ಣಕ್ಕಿಂತಲೂ ಎರಡು ಪಟ್ಟು ಹೆಚ್ಚು. ಈ ಬಿಸಿಯಲ್ಲಿ ಚೆಂಡು ಮಾತ್ರವಲ್ಲ, ಚೆಂಡಾಡುವ ಕ್ರೀಡಾಪಟುಗಳೂ ಎಲ್ಲ ದ್ರವರೂಪಕ್ಕಳಿದು ಆವಿಯಾಗುತ್ತಾರೆ!
ಹಾಗಾದರೆ ಗುರು ಗ್ರಹದತ್ತ ಹೋಗೋಣ. ಹೇಗೂ ಅದು ಭೂಮಿಗಿಂತ ಬಹುಪಾಲು ದೊಡ್ಡದು; ಅಲ್ಲೇ ಒಂದು ಫುಟ್‍ಬಾಲ್ ಕ್ರೀಡಾಂಗಣ ಕಟ್ಟಬಹುದು ಎಂದು ಯೋಚಿಸುತ್ತಿದ್ದೀರಾ? ಅಸಲಿಗೆ ಗುರುವಿನಲ್ಲಿ ಗೋಲು ಊರಲು ಅಥವಾ ನಿಮ್ಮ ಕಾಲು ಊರಲು ನೆಲ ಇದ್ದರೆ ತಾನೇ! ಗುರು ಗ್ರಹದ ಗಾತ್ರವೇನೋ ದೊಡ್ಡದೇ; ಆದರೆ ಅಲ್ಲಿ ಹೆಸರಿಗಾದರೂ ಒಂದು ಚದರಡಿ ಜಾಗ ಸಿಗುವುದಿಲ್ಲ. ಇಡೀ ಗ್ರಹವೇ ಗಾಳಿ ಅಥವಾ ಅನಿಲಗಳ ಉಂಡೆ. ಶನಿ, ಯುರೇನಸ್, ನೆಪ್ಚೂನ್‍ಗಳ ಕತೆಯೂ ಅಷ್ಟೇ. ಇವೆಲ್ಲ ಭೂಮಿಯ ವ್ಯಾಸದ 5ರಿಂದ 11 ಪಟ್ಟು ದೊಡ್ಡದಾಗಿದ್ದರೂ, ಎಲ್ಲವೂ ಅನಿಲದುಂಡೆಗಳೇ. ಇಂಥಾ ಮಾಯಾಂಗಣದಲ್ಲಿ ಪೆನಾಲ್ಟಿ ಆಡುವುದು ಹೇಗೆ! ಪೆನಾಲ್ಟಿಯೇ ಇಲ್ಲದ ಮೇಲೆ ಆಟಕ್ಕೆ ರೋಚಕತೆಯಾದರೂ ಹೇಗೆ ಬಂದೀತು! ಈ ಹೊಗೆ ಹಾಕಿಸಿಕೊಳ್ಳುವ ಗ್ರಹಚಾರಕ್ಕೆ ಅಷ್ಟು ದೂರ ಹೋಗಬೇಕಾ ಎಂದು ಅಂದುಕೊಳ್ಳದಿದ್ದರೆ ಕೇಳಿ! ಅಷ್ಟು ಮಾತ್ರವಲ್ಲದೆ, ಒಂದು ವೇಳೆ ಗುರುವಿನ ಮೇಲ್ಮೈ ನೆಲದ ಹಾಗಿದ್ದರೂ ಫುಟ್‍ಬಾಲ್ ಆಡುವುದಕ್ಕದು ಪ್ರಶಸ್ತವಲ್ಲ. ಏಕೆಂದರೆ, ಗುರುವಿನ ಗುರುತ್ವ ಭೂಮಿಗಿಂತ ಎರಡೂವರೆ ಪಟ್ಟು ಹೆಚ್ಚು. ಅಂದರೆ ನಮ್ಮಲ್ಲಿ ಅನಾಯಾಸವಾಗಿ ಒದೆಯಬಹುದಾದ ಕಾಲ್ಚೆಂಡು ಕೂಡ ಅಲ್ಲಿ ಶಾಟ್‍ಪುಟ್‍ನ ಕಲ್ಲಿನ ಗುಂಡಿನಂತಿರುತ್ತದೆ! ಇದನ್ನು ಹಗುರದ ಚೆಂಡೆಂದು ಒದೆಯಲು ಹೋದಿರೋ ಕಾಲಿನ ಕೀಲು ಮುರಿದುಕೊಂಡು ಭೂಮಿಗೆ ಬಿದ್ದೀರ ಜೋಕೆ!
ಗುರು ಗ್ರಹಕ್ಕೆ 16 ಚಂದ್ರರು ಸುತ್ತುತ್ತಿದ್ದಾರೆ. ಕೆಲವು ಹತ್ತು-ಹದಿನೈದು ಕಿಮೀ ಉದ್ದದ ತುಂಡುಗಳಾದರೆ, ಇನ್ನು ಕೆಲವು ಭೂಮಿಯಷ್ಟೇ ದೊಡ್ಡವು. ಇಲ್ಲಾದರೂ ಚೆಂಡಾಡಲು ಸಾಧ್ಯವಾ ನೋಡೋಣ. ಈ ಉಪಗ್ರಹಗಳಲ್ಲಿ ಪ್ರಮುಖವಾದ ಯುರೋಪಾ ಹೇಳಿಕೇಳಿ ಮಂಜಿನ ಗಟ್ಟಿ. ಅಂದರೆ, ಶೂನ್ಯ ಡಿಗ್ರಿಯ ಮಂಜಲ್ಲ; ಮೈನಸ್ 200ಕ್ಕಿಳಿಯುವ ಮಂಜು! ಇಂತಹ ಶೀತದಲ್ಲಿ ನಿಂತರೆ ಚೆಂಡನ್ನು ಒದೆಯಬೇಕಿದ್ದ ಕಾಲು ಕ್ಷಣಮಾತ್ರದಲ್ಲಿ ಸೆಟೆದೇಹೋದೀತು! ಅಲ್ಲದೆ, ದೇಹದೊಳಗೆ ಹರಿಯುವ ರಕ್ತವೆಲ್ಲ ಅಲ್ಲಲ್ಲೇ ನಾಳಗಳಲ್ಲಿ ಗಟ್ಟಿಯಾಗಿ, ದೇಹವೇ ಬಂಡೆಗಲ್ಲಂತೆ ನಿಶ್ಚೇಷ್ಟಿತವಾಗಬಹುದು. ಇದು ಸರಿಯಿಲ್ಲ ಎಂದು ಇನ್ನೊಂದು ಪ್ರಮುಖ ಉಪಗ್ರಹವಾದ ಅಯೋದತ್ತ ಹೋಗಬೇಡಿ. ಯಾಕೆಂದರೆ, ಯುರೋಪಾ ಮಂಜಿನ ದುಂಡುಗಲ್ಲಾದರೆ, ಅಯೋ ನಿತ್ಯಜ್ವಾಲಾದೇವಿ! ಅಯೋ ಎಂಬ ಸುಂದರಿಯನ್ನು ಜ್ಯುಪಿಟರ್ ನಿರಂತರವಾಗಿ ಅತ್ಯಾಚಾರ ಮಾಡಿದ ಎನ್ನುವುದು ಗ್ರೀಕ್‍ಪುರಾಣ. ಆ ಕತೆಗೆ ಅನ್ವರ್ಥದ ಹಾಗೆ ಈ ಅಯೋದೇವಿಯ ಮೈಯಲ್ಲಿ ನಿತ್ಯ ಜ್ವಾಲಾರಸದ ಒಸರು. ಯಾವ ಕ್ಷಣದಲ್ಲಿ ನೆಲದ ಯಾವ ಮೂಲೆ ಬಿರುಕೊಡೆದು ಲಾವಾ ಹಾರುತ್ತದೋ ಹೇಳುವ ಹಾಗೇ ಇಲ್ಲ! ಇಡೀ ಸೌರವ್ಯವಸ್ಥೆಯಲ್ಲೇ ಅತ್ಯಂತ ಪಟುವಾದ ಅಗ್ನಿಪರ್ವತದ ಸಮೂಹ ಇರುವುದು ಈ ಅಯೋದಲ್ಲಿ! ಆಡಲು ಹೋಗಿ ಅಯ್ಯಯ್ಯೋ ಎನ್ನುತ್ತ ಓಡಿಬರುವ ಅವಸ್ಥೆ ಯಾಕೆ ಬೇಕು!
ಇನ್ನು ಇವೆಲ್ಲದರಾಚೆ ಪ್ಲುಟೊ ಗ್ರಹದತ್ತ ಹೋಗಬೇಕೆಂದರೂ ಅದು ಶೀತಲಪೆಟ್ಟಿಗೆಯೇ. ಯುರೋಪಾದ ಸ್ಥಿತಿಯೇ ಇಲ್ಲೂ ಇದೆ. ಸೂರ್ಯನೇ ಮಂಕುಮಂಕಾದ ಮಿಣುಕು ಹುಳದಂತೆ ಕಾಣುವ ಈ ಗ್ರಹದಲ್ಲಿ ನಡುಮಧ್ಯಾಹ್ನದ ಕತ್ತಲೆಯಲ್ಲೂ ತಾಪಮಾನ ಮಾತ್ರ ಮೈನಸ್ 300! ಆಡುವುದು ಬಿಟ್ಟು ಜೀವ ಉಳಿಸಿಕೊಂಡರೆ ಸಾಕು ಅನ್ನಿಸುವಂತಹ “ಘನ”ಗಂಭೀರ ಪರಿಸ್ಥಿತಿ!
ಈಗ ಹೇಳಿ, ಅಂತರ್’ಗ್ರಹ ಫುಟ್‍ಬಾಲ್ ಮ್ಯಾಚ್ ಬೇಕಾ? ಅಥವಾ ಇಲ್ಲೇ, ದೇವರು ದಯಪಾಲಿಸಿದ ಭೂಲೋಕದಲ್ಲೇ ಆಡಿ ಖುಷಿಪಡೋಣವಾ?
(ನಾಲ್ಕು ವರ್ಷಗಳ ಹಿಂದೆ, ಬ್ರೆಜಿಲ್‍ನಲ್ಲಿ ವಿಶ್ವಕಪ್ ಫುಟ್‍ಬಾಲ್ ಪಂದ್ಯಾವಳಿ ನಡೆದಾಗ ಬರೆದ ಲೇಖನ. ಹೊಸ ದಿಗಂತದಲ್ಲಿ ಪ್ರಕಟಿತ)