ಗುಜರಾತ್’ನ ಪ್ರಭಾಸ ಕ್ಷೇತ್ರದಲ್ಲಿರುವ ಸೋಮನಾಥ ಮಂದಿರ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅಗ್ರಸ್ಥಾನದಲ್ಲಿದ್ದು ಹಿಂದೂಗಳಿಗೆ ಅತ್ಯಂತ ಪವಿತ್ರವಾದುದಾಗಿದೆ. ಹಲವಾರು ಬಾರಿ ದಾಳಿಗೊಳಗಾಗಿ ಪುನಃ ನಿರ್ಮಿಸಲ್ಪಟ್ಟಿದೆ. ಆದರೆ ಆ ಎಲ್ಲಾ ದಾಳಿಗಳಲ್ಲಿ ಇತಿಹಾಸ ಪ್ರಮುಖವಾಗಿ ಉಲ್ಲೇಖಿಸುವುದು ಮೊಹಮ್ಮದ್ ಘಜ್ನಿಯ ದಾಳಿ. ಕ್ರಿ.ಶ.೧೦೨೫-೧೦೨೬ ನಡುವೆ ನಡೆಸಿದ ಆ ದಾಳಿಯಲ್ಲಿ ಘಜ್ನಿ ಇಡೀ ಸೋಮನಾಥ ಮಂದಿರವನ್ನೇ ಧ್ವಂಸಗೊಳಿಸಿದ್ದಲ್ಲದೆ, ಮಂದಿರದ ರಕ್ಷಣೆಗೆ ನಿಂತಿದ್ದ ಸಾವಿರಾರು ಜನರ ಕೊಲೆಗೈಯ್ಯಲಾಯಿತು, ಸಂಪತ್ತನ್ನು ಲೂಟಿ ಮಾಡಲಾಯಿತು. ಆದರೆ ಇವೆಲ್ಲದರ ನಡುವೆ ಮರೆತುಹೋಗಿರುವ ಬಹಳ ಮುಖ್ಯವಾದ ಅಂಶ ಘಜ್ನಿಯನ್ನೂ ಅಚ್ಚರಿಗೊಳಿಸಿದ್ದ ಸೋಮನಾಥ ಮಂದಿರದಲ್ಲಿದ್ದ ತೇಲುವ ಶಿವಲಿಂಗ!!
ಪರ್ಷಿಯಾದ ಅಲ್-ಖಾಜ್ವಿನಿ ಎಂಬ ಭೂಗೋಳತಜ್ಞ ಸೋಮನಾಥ ಮಂದಿರದಲ್ಲಿದ್ದ ಶಿವಲಿಂಗದ ಕುರಿತು ಹಾಗೂ ಅಲ್ಲಿ ಘಜ್ನಿಯಿಂದಾದ ದಾಳಿಯ ಕುರಿತು ತನ್ನ ಗ್ರಂಥದಲ್ಲಿಈ ರೀತಿ ಹೇಳುತ್ತಾನೆ: “ಸೋಮನಾಥ ಮಂದಿರವು ಭಾರತದ ಪ್ರಮುಖ ಮಂದಿರಗಳಲ್ಲೊಂದು. ಅಲ್ಲಿನ ಪ್ರಮುಖ ವಿಶೇಷತೆ ಮಂದಿರದ ಶಿವಲಿಂಗವಾಗಿತ್ತು. ಮಂದಿರದ ಮಧ್ಯಭಾಗದಲ್ಲಿದ್ದ ಲಿಂಗವು ಮೇಲಿನಿಂದ ಅಥವಾ ಕೆಳಗಿನಿಂದ ಯಾವುದೇ ಆಧಾರವಿಲ್ಲದೇ ಇದ್ದದ್ದು ದಾಳಿಕೋರರನ್ನೂ ಅಚ್ಚರಿಗೊಳಿಸುವಂತಿತ್ತು. ಪ್ರತಿದಿನ ಸಾವಿರ ಬ್ರಾಹ್ಮಣರು ಅಲ್ಲಿ ಪೂಜೆಗೈಯ್ಯುತ್ತಿದ್ದರು ಹಾಗೂ ಐನೂ್ರು ಕನ್ಯೆಯರು ದ್ವಾರದ ಬಳಿ ಸಂಗೀತ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು. ಭವನವು ೫೬ ತೇಗದ ಕಂಬಗಳನ್ನು ಹೊಂದಿದ್ದು ಕಂಬಗಳ ಮೇಲೆ ಸೀಸದ ಲೇಪನ ಮಾಡಲಾಗಿತ್ತು. ಕ್ರಿ.ಶ. ೧೦೨೫ ಡಿಸೆಂಬರ್’ನಲ್ಲಿ ಮೊಹಮ್ಮದ್ ಘಜ್ನಿ ದಾಳಿ ಮಾಡಿದಾಗ ಭಾರತೀಯರು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರು. ಎಷ್ಟೋ ಜನ ಮಂದಿರಕ್ಕೆ ಕಣ್ಣೀರಿಡುತ್ತಾ ಬರುತ್ತಿದ್ದರು. ತಮ್ಮ ಕೊನೆಯುಸಿರಿನವರೆಗೂ ಮಂದಿರದ ರಕ್ಷಣೆಗೆ ಹೋರಾಡಿದರು. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನ ಪ್ರಾಣತೆತ್ತರು. ಧ್ವಂಸ ಮಾಡುತ್ತಾ ಗರ್ಭಗುಡಿ ಪ್ರವೇಶಿಸಿದ ಘಜ್ನಿ ಯಾವುದೇ ಆಧಾರವಿಲ್ಲದೇ ತೇಲುವಂತೆ ಕಾಣುತ್ತಿದ್ದ ಶಿವಲಿಂಗವನ್ನು ನೋಡಿ ದಂಗಾಗಿದ್ದ. ಈ ಅಚ್ಚರಿಯ ಬಗ್ಗೆ ತನ್ನ ಜೊತೆಗಾರರನ್ನು ಕೇಳಿದಾಗ ಸಾಕಷ್ಟು ಪರೀಕ್ಷಿಸಿ ಒಬ್ಬಾತ ಅಲ್ಲಿಯ ಮೇಲಾವರಣವು ಕಾಂತೀಯ ವಸ್ತುವಿನಿಂದ ಮಾಡಲ್ಪಟ್ಟಿದ್ದು ಲಿಂಗವು ಕಬ್ಬಿಣದ್ದಾಗಿರಬೇಕು ಎನ್ನುತ್ತಾನೆ. ಕೆಲವರು ಅದನ್ನು ಒಪ್ಪಿಕೊಂಡರೂ, ಕೆಲ ಜೊತೆಗಾರರು ಅಲ್ಲಗಳೆಯುತ್ತಾರೆ. ನಂತರ ಮೇಲಾವರಣದ ಕಲ್ಲುಗಳನ್ನು ತೆಗೆಯುತ್ತಾ ಬಂದಂತೆ ಶಿವಲಿಂಗವು ಬಾಗುತ್ತಾ ಕೊನೆಯಲ್ಲಿ ನೆಲಕ್ಕೆ ಇಳಿಯುತ್ತದೆ.”
ಡಾ. ನಿಶಿತ್ ಸಾವಲ್ ತಮ್ಮ ಒಂದು ಪ್ರಬಂಧದಲ್ಲಿ ಈ ಅಚ್ಚರಿಯ ಕುರಿತು ಹೇಳುತ್ತಾ ಅದು “ಮ್ಯಾಗ್ನೆಟಿಕ್ ಲೆವಿಟೇಷನ್”ನಿಂದಾಗಿ ಸಾಧ್ಯವಾಗಿದ್ದು ಎನ್ನುತ್ತಾರೆ. ಅಲ್ಲದೇ ಅಲ್ಲಿದ್ದ ಶಿವಲಿಂಗವು ಐರನ್-ನಿಕ್ಕಲ್ ಮೀಟಿಯೋರೈಟ್’ನಿಂದ ಮಾಡಲ್ಪಟ್ಟಿರಬೇಕು ಎನ್ನುತ್ತಾರೆ. ಇದಕ್ಕೆ ಸ್ಕಂದಪುರಾಣದಲ್ಲಿ ಬರುವ ಸೋಮನಾಥ ಲಿಂಗದ ವರ್ಣನೆಯನ್ನು ಉಲ್ಲೇಖ ಮಾಡುವುದಲ್ಲದೇ, ಅರಬ್ ಇತಿಹಾಸಜ್ಞ ಅಬುಲ್’ಫೆಡಾ ಘಜ್ನಿಯ ದಾಳಿಯನ್ನು ವರ್ಣಿಸಿರುವುದನ್ನು ಕೂಡ ಗಮನಿಸುವಂತೆ ಹೇಳುತ್ತಾರೆ. ಆತ ಉಲ್ಲೇಖಿಸುವಂತೆ ಘಜ್ನಿಯು ಶಿವಲಿಂಗವನ್ನು ಖಂಡಿಸಲು ಅದರ ಸುತ್ತ ಬೆಂಕಿ ಹಾಕಿದ್ದನು. ಐರನ್-ನಿಕ್ಕೆಲ್ ಮೀಟಿಯೋರೈಟ್’ಗಳು ಭೂಮಿಯಲ್ಲಿ ಸಿಗುವ ಎಲ್ಲ ಕಲ್ಲುಗಳಿಗಿಂತಲೂ ಬಹಳ ಗಟ್ಟಿಯಾಗಿರುತ್ತದೆ ಹಾಗೂ ಅತ್ಯಧಿಕ ಮ್ಯಾಗ್ನೆಟಿಕ್ ಆಗಿರುತ್ತದೆ. ಹಾಗಾಗಿ ಕಲ್ಲು ಹಾಗೂ ಸುತ್ತಿಗೆಗಳಿಂದ ಖಂಡಿಸಲು ಪ್ರಯತ್ನಿಸಿ ಸೋತ ನಂತರ ಘಜ್ನಿಯು ಪ್ರಾಚೀನವಾದ ಬೆಂಕಿ ಹಾಗೂ ನೀರನ್ನು ಬಳಸಿ ಖಂಡಿಸುವ ತಂತ್ರವನ್ನು ಬಳಸಿದ್ದನಿರಬೇಕು ಎನ್ನುತ್ತಾರೆ ಡಾ.ನಿಶಿತ್.
ಇನ್ನು ಮ್ಯಾಗ್ನೆಟಿಕ್ ಲೆವಿಟೇಷನ್ ಬಗ್ಗೆ ಹೇಳುತ್ತಾ ಒಂದು ಮ್ಯಾಗ್ನೆಟ್’ನಿಂದ ಇನ್ನೊಂದು ಮ್ಯಾಗ್ನೆಟ್’ನ ಸ್ಥಿರವಾದ ಲೆವಿಟೇಷನ್ ಸಾಧ್ಯವಿಲ್ಲ ಎನ್ನುತ್ತಾರೆ. ಹಾಗಾಗಿ ಮ್ಯಾಗ್ನೆಟ್ ಅಲ್ಲದೇ ಬೇರೇನನ್ನೋ ಬಳಸಿರಲೇಬೇಕು ಎನ್ನುವ ನಿಶಿತ್ ಅದಕ್ಕೆ ಉತ್ತರವಾಗಿ ಡಯಾಮ್ಯಗ್ನೆಟಿಕ್ ಆಗಿರುವ ಬಿಸ್ಮತ್ ಎನ್ನುತ್ತಾರೆ. ಹಾಗಾಗಿ ಅಲ್ಲಿ ಮ್ಯಾಗ್ನೆಟ್ ಜೊತೆ ಜೊತೆಗೆ ಡಯಾಮ್ಯಗ್ನೆಟಿಕ್ ಆಗಿರುವ ಬಿಸ್ಮತ್’ನ್ನು ಕೂಡ ಬಳಸಿದ್ದರು. ಮ್ಯಾಗ್ನೆಟ್ ಶಿವಲಿಂಗವನ್ನು (ಐರನ್-ನಿಕ್ಕೆಲ್ ಮೀಟಿಯೋರೈಟ್ ಮಾಡಲ್ಪಟ್ಟ) ಆಂಟಿ ಗ್ರಾವಿಟಿ ಫೋರ್ಸ್’ನೊಂದಿಗೆ ಮೇಲಕ್ಕೆ ಎತ್ತಿದರೆ, ಡಯಾಮ್ಯಾಗ್ನೇಟಿಕ್ ಬಿಸ್ಮತ್ ಲೆವಿಟೇಷನ್’ಗೆ ಸ್ಥಿರತೆ ನೀಡುತ್ತಿತ್ತು. ಬಿಸ್ಮತ್’ನ್ನು ಶಿವಲಿಂಗದ ಕೆಳಗೆ ಹಾಗೂ ಮೇಲೆ ಎರಡೂ ಕಡೆಯಲ್ಲಿ ಬಳಸಿರಬೇಕು ಎನ್ನುತ್ತಾರೆ ನಿಶಿತ್.
ಅಲ್-ಖಾಜ್ವಿನಿಯ ಉಲ್ಲೇಖವನ್ನೊಮ್ಮೆ ನೆನಪಿಸಿಕೊಳ್ಳಿ. “ಭವನವು ೫೬ ತೇಗದ ಕಂಬಗಳನ್ನು ಹೊಂದಿದ್ದು ಕಂಬಗಳ ಮೇಲೆ ಸೀಸದ ಲೇಪನ ಮಾಡಲಾಗಿತ್ತು.” ಕಂಬಗಳ ಮೇಲೆ ಸೀಸದ ಲೇಪನ ಮಾಡುವ ಆವಶ್ಯಕತೆ ಏನಿತ್ತು? ಮರದ ಕಂಬಗಳಿಗೆ ಹುಳ ಹಿಡಿಯಬಹುದೆಂದರೆ ಅಲ್ಲಿಯ ವಾತಾವರಣವೇನು ಅ ರೀತಿಯದ್ದಲ್ಲ. ಅಲ್ಲದೇ ಅಂತಹ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎನ್ನುವಂತಿದ್ದರೆ ಸೀಸ ಸಾಮಾನ್ಯವಾದ ಆಯ್ಕೆ ಕೂಡ ಅಲ್ಲ. ಅದಕ್ಕೆ ನಿಶಿತ್, ಅದು ಸೀಸವಾಗಿರದೇ ಬಿಸ್ಮತ್ ಆಗಿರಬೇಕು ಎನ್ನುತ್ತಾರೆ. ಬಿಸ್ಮತ್ ನೋಡಲು ಸೀಸದಂತೆಯೇ ಕಾಣುತ್ತದೆ ಹಾಗೂ ಸೀಸದಷ್ಟೇ ಗಟ್ಟಿ. ಹಾಗಾಗಿ ಅಲ್-ಖಾಜ್ವಿನಿ ಅದನ್ನು ಸೀಸ ಎಂದು ಉಲ್ಲೇಖಿಸಿರುತ್ತಾನೆ. ಅಷ್ಟು ಹಿಂದಿನ ಕಾಲದಲ್ಲಿ ಅಂತಹ ಗೊಂದಲ ಸಹಜ ಕೂಡ. ಅಲ್ಲದೇ ಬಿಸ್ಮತ್ ಸೀಸದಂತೆ ಕಂಡರೂ ಕೂಡ ಅದು ಸೀಸಕ್ಕಿಂತ ಹತ್ತು ಪಟ್ಟು ಹೆಚ್ಚು ಡಯಾಮ್ಯಾಗ್ನೆಟಿಕ್ ಆಗಿದೆ.
ಅಲ್ಲದೇ ಬಿಸ್ಮತ್ ಅಷ್ಟು ಗಟ್ಟಿಯಲ್ಲ, ಸುಲಭವಾಗಿ ಒಡೆದುಹೋಗಬಹುದು ಎನ್ನುವ ಕಾರಣಕ್ಕಾಗಿ ತೇಗದ ಮರಗಳನ್ನು ಆಂತರಿಕ ಆಧಾರವಾಗಿ ಬಳಸಲಾಗಿ, ನಂತರ ಬಿಸ್ಮತ್’ನ್ನು ಲೇಪಿಸಲಾಯಿತು. ಇಬನ್ ಜಾಫಿರ್ ಎಂಬಾತ ಸೋಮನಾಥ ದೇವಾಲಯದ ನೆಲವು ಕೂಡ ತೇಗದ ಹಲಗೆಗಳಿಂದ ಮಾಡಲ್ಪಟ್ಟಿದ್ದು ಮಧ್ಯೆ ಸೀಸವನ್ನು ಬಳಸಲಾಗಿತ್ತು ಎನ್ನುತ್ತಾನೆ. ಪುನಃ ಅದು ಸೀಸ ಅಲ್ಲ, ಬಿಸ್ಮತ್! ಮಂದಿರವನ್ನು ಕಟ್ಟುವವರಿಗೆ ಶಿವಲಿಂಗ ಲೆವಿಟೇಟ್ ಆಗಲು ಸಾಕಷ್ಟು ಡಯಾಮ್ಯಾಗ್ನೆಟಿಕ್ ಫೋರ್ಸ್ ಬೇಕಾಗುವುದು ಎಂದು ಗೊತ್ತಿದ್ದರಿಂದ ನೆಲದಲ್ಲಿಯೂ ಮರದ ಹಲಗೆಗಳ ಮಧ್ಯೆ ಬಿಸ್ಮತ್’ನ್ನು ಬಳಸಿದ್ದರು. ಅಷ್ಟು ಹಿಂದಿನ ಕಾಲದಲ್ಲಿಯೂ, ಇಷ್ಟೆಲ್ಲಾ ಬುದ್ಧಿವಂತಿಕೆಯಿಂದ ಅದ್ಭುತವಾದ ಮಂದಿರವನ್ನು ಕಟ್ಟಿದವರನ್ನು ಖಂಡಿತವಾಗಿ ಶ್ಲಾಘಿಸಲೇ ಬೇಕು.
ಅಂದಹಾಗೆ ಸೋಮನಾಥ ದೇವಾಲಯದ ಈ ಅದ್ಭುತ ಶಿವಲಿಂಗದ ಬಗ್ಗೆ ಒಂದು ಕುತೂಹಲಕಾರಿ ಕಥೆಯೂ ಇದೆ. ಶ್ಯಮಂತಕ ಮಣಿಯ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ. ಕೃಷ್ಣನ ಬಗ್ಗೆ ತಿಳಿದವರೆಲ್ಲ ಶ್ಯಮಂತಕ ಮಣಿಯ ಕಥೆಯನ್ನು ಕೇಳಿರಲೇಬೇಕು. ಇಂದಿಗೂ ಕೂಡ ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರುವುದು ಅದನ್ನ ತಪ್ಪಿಸಿಕೊಳ್ಳಲು ಕೃಷ್ಣ ಹಾಗೂ ಶ್ಯಮಂತಕ ಮಣಿಯ ಕಥೆ ಕೇಳಬೇಕು ಎನ್ನುತ್ತಾರೆ. ಶ್ಯಮಂತಕ ಮಣಿಯಿಂದ ಪ್ರತಿದಿನ ಎಂಟು ಭಾರ ಚಿನ್ನವನ್ನು ಪಡೆಯಬಹುದಿತ್ತಂತೆ, ಇಂದಿನ ಲೆಕ್ಕಾಚಾರದ ಪ್ರಕಾರದಲ್ಲಿ ಹೇಳುವುದಾದರೆ ಸುಮಾರು ೧೭೦ ಪೌಂಡ್’ನಷ್ಟು. ಆ ಶ್ಯಮಂತಕ ಮಣಿ ಆಮೇಲೇನಾಯಿತು ಎಂದು ಯಾರಿಗೂ ತಿಳಿದಿಲ್ಲ. ಕೆಲವರ ಪ್ರಕಾರ ಸೋಮನಾಥ ಮಂದಿರದ ಶಿವಲಿಂಗದ ಮಧ್ಯೆ ಶ್ಯಮಂತಕ ಮಣಿಯನ್ನು ಇಡಲಾಗಿತ್ತು. ಶ್ಯಮಂತಕ ಮಣಿಯು ರೇಡಿಯೋಆಕ್ಟಿವ್ ಹಾಗೂ ಆಲ್ಕೆಮಿಕ್ (Alchemic) ಗುಣಗಳನ್ನು ಹೊಂದಿದ್ದಾಗಿತ್ತು, ಹಾಗಾಗಿಯೇ ಅದರಿಂದ ಚಿನ್ನವನ್ನು ಪಡೆಯಬಹುದಾಗಿತ್ತು ಎನ್ನುವರು. ಅಲ್ಲದೇ ಅದು ತನ್ನ ಸುತ್ತ ಒಂದು ಪೋರ್ಸ್ ಫೀಲ್ಡ್ ಸೃಷ್ಟಿಸಿಕೊಳ್ಳಬಹುದಾಗಿದ್ದರಿಂದ ಶಿವಲಿಂಗ ಲೆವಿಟೇಟ್ ಮಾಡಲು ಸಾಧ್ಯವಿತ್ತು ಎನ್ನುತ್ತಾರೆ ಕೆಲವರು. ಅಲ್ಲಿ ಬರುವ ಭಕ್ತಾದಿಗಳಿಗೆ ರೇಡಿಯೇಷನ್ ಆಗದಂತೆ ಶಿವಲಿಂಗವನ್ನು ಬಿಲ್ಪಪತ್ರೆಗಳಿಂದ ಮುಚ್ಚಲ್ಪಡುತ್ತಿತ್ತು. ಬಿಲ್ಪಪತ್ರೆಯು ರೇಡಿಯೋ ಪ್ರೊಟೆಕ್ಟಿವ್ ಗುಣಗಳನ್ನು ಹೊಂದಿದ್ದರಿಂದ ಅದನ್ನು ತಡೆಯಬಹುದು ಎನ್ನುವ ಕಾರಣಕ್ಕೆ. ಶ್ಯಮಂತಕ ಮಣಿ ಅಲ್ಕೆಮಿಕ್ ಗುಣಗಳನ್ನು ಬಹುಶಃ ಹೊಂದಿತ್ತೇನೋ, ಬಿಲ್ಪಪತ್ರೆಗಳು ರೇಡಿಯೋ ಪ್ರೊಟೆಕ್ಟಿವ್ ಎನ್ನುವುದು ಸತ್ಯವೂ ಹೌದು, ಆದರೆ ಶ್ಯಮಂತಕಮಣಿ ಸೋಮನಾಥ ದೇವಾಲಯದ ಶಿವಲಿಂಗದ ಮಧ್ಯೆ ಇತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿ, ಲೂಟಿ ಮಾಡಿದ ಘಜ್ನಿ ಆ ಶಿವಲಿಂಗವನ್ನು ಖಂಡಿಸಿದ್ದ. ನಂತರ ಅದರೊಂದಿಗೆ ಹಿಂದಿರುಗಿದ್ದ ಘಜ್ನಿ ಆಪ್ಘಾನಿಸ್ತಾನದಲ್ಲಿ ಆ ಸಮಯದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಜಾಮಿಯಾ ಮಸೀದಿಯ ಮೆಟ್ಟಿಲುಗಳಿಗೆ ಶಿವಲಿಂಗದ ತುಂಡುಗಳನ್ನು ಬಳಸಿದನಂತೆ. ನಂಬಿಕೆಗಳು, ಪರಂಪರೆಗಳು, ಸಂಸ್ಕೃತಿಗಳೆಲ್ಲ ಭಿನ್ನವಾಗಿದ್ದರೂ ಕೂಡ ಕೊನೆಯ ಪಕ್ಷ ಆ ಮಂದಿರವನ್ನು ನಿರ್ಮಿಸಿದವರ ಬುದ್ಧಿವಂತಿಕೆಯನ್ನು ಘಜ್ನಿ ಗೌರವಿಸಿದ್ದಿದ್ದರೆ ಇಂದು ಇತಿಹಾಸ ಬೇರೆ ರೀತಿಯೇ ಇರುತ್ತಿತ್ತು. ಇಂದು ಸೋಮನಾಥ ಮಂದಿರದ ವೈಭವ ಇನ್ನೂ ಹೆಚ್ಚಿರುತ್ತಿತ್ತೇನೋ.