ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ, ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ ಅಧಿಕಾರವನ್ನು ಅಥವಾ ಗದ್ದುಗೆಯನ್ನು ಏರಿದಾಗ ಮಾತ್ರವಾ? ಈ ಪ್ರಶ್ನೆಗೆ ಉತ್ತರ ಸುಮಾರಿದೆ. ಆದರೆ ಸಭ್ಯರು ಎನ್ನಿಸಿಕೊಂಡವರು ಚುನಾವಣೆ ಗೆದ್ದು ಅಧಿಕಾರ ಅನುಭವಿಸಿದ್ದು ಈ ರಾಜಕೀಯ ಇತಿಹಾಸದಲ್ಲಿ (ಪ್ರಮುಖವಾಗಿ ನಮ್ಮ ರಾಜ್ಯ ರಾಜಕಾರಣದಲ್ಲಿ) ಅಪರೂಪ ಎನ್ನಿಸುವುದಂತೂ ಹೌದು. ಕಾಂಗ್ರೆಸ್ ನಲ್ಲಿ ಸುದರ್ಶನ್, ಬಿ ಎಲ್ ಶಂಕರ್ ರಂತವರು, ಜೆಡಿಎಸ್ ನಲ್ಲಿ ಶಶೀಭೂಷಣ ಹೆಗಡೆ, ಎಂ ಸಿ ನಾಣಯ್ಯರಂತವರು, ಬಿಜೆಪಿಯಲ್ಲಿ ಬಿ ಶಿವಪ್ಪ, ಪ್ರಮೋದ್ ಹೆಗಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿಯಂತವರು (ಶೆಟ್ಟಿಯವರು ಚುನಾವಣಾ ರಾಜಕಾರಣದಲ್ಲೂ ಅಜಾತ ಶತ್ರು ಎನ್ನಿಸಿಕೊಂಡರು. ಆದರೆ ಬಿಜೆಪಿ ಅವರನ್ನು ಪರಿಗಣಿಸಿದ್ದು ಈ ಬಾರಿಯ ಚುುನಾವಣೆಯಲ್ಲಿ ಮಾತ್ರ ) ಚುನಾವಣಾ ರಾಜಕಾರಣದಲ್ಲಿ ಸೈ ಎನ್ನಿಸಿಕೊಳ್ಳಲಿಲ್ಲ. ನಾನು ಸಧ್ಯದ ರಾಜಕೀಯ ವ್ಯವಸ್ಥೆಯಲ್ಲಿ ಇಷ್ಟಪಟ್ಟ ಮತ್ತು ಇಂತವರು ರಾಜಕೀಯಕ್ಕೆ ಸಂದರೆ ರಾಜಕೀಯದ ಕೊಳಕು ತೊಲಗಬಹುದೇನೋ ಅನ್ನಿಸಿದ ಕೆಲವರಲ್ಲಿ ನಮ್ಮ ತೇಜಸ್ವಿ ಸೂರ್ಯ ಮೊದಲಿಗರಾಗುತ್ತಾರೆ. ನನ್ನ ಪ್ರಕಾರ ಈತ ಕೂಡ ಹೊಸ ತಲೆಮಾರಿನ ರಾಜಕಾರಣಕ್ಕೆ ಅತ್ಯಂತ ಅವಶ್ಯವಿರುವ ರಾಜಕಾರಣಿ. ಇಂತವರನ್ನು ರಾಜಕಾರಣದಿಂದ ದೂರವಿಡಬಾರದು! ಹೌದು, ಸುಳ್ಳಿನ ವಿರುದ್ಧ, ಈ ಕೊಳಕು ವ್ಯವಸ್ಥೆಯ ವಿರುದ್ಧ, ಕೊಂಕು ಹೇಳುವ ಕೆಲವು ವ್ಯಕ್ತಿಗಳ ವಿರುದ್ಧ ಇಂತಹ ಅನೇಕ ವೈರುಧ್ಯಗಳ ಎದಿರು ಇವರು ಗೆಲ್ಲಲೇಬೇಕು ಮತ್ತು ಪ್ರಸ್ತುತ ರಾಜಕಾರಣಕ್ಕೆ ಸಲ್ಲಲೇಬೇಕು. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನನ್ನಂತಹ ಅನೇಕ ಯುವಕರನ್ನು ಸೆಳೆದ ವ್ಯಕ್ತಿತ್ವ ಎಂದರೆ ಅದು ‘ತೇಜಸ್ವಿ ಸೂರ್ಯ’. ನಮಗೆ ಹಳೇ ತಲೆಗಳ ಸಹವಾಸ ಸಾಕು ಹೊಸಬರು ಬರಲಿ ಎನ್ನುವುದು ಬಿಜೆಪಿ ಕಾರ್ಯಕರ್ತರ ಸದ್ಯದ ಬೇಡಿಕೆ ಅಥವಾ ಒಂದು ನಿರೀಕ್ಷೆ.ಈ ನಿರೀಕ್ಷೆಗೆ ಉತ್ತರವಾದವರಲ್ಲಿ ರಾಜೇಶ್ ನಾಯ್ಕ,ಹರೀಶ್ ಪೂಂಜ, ಭರತ್ ಶೆಟ್ಟಿ,ಸುನಿಲ್ ನಾಯ್ಕರಂತವರೂ ಹೌದು. ಆದರೆ ‘ತೇಜಸ್ವಿ’ ಕೂಡ ರಾಜಕೀಯಕ್ಕೆ ಸಲ್ಲಲೇಬೇಕು. ಈಗ ಇಂತಹ ನಿರೀಕ್ಷೆ ಕೈಗೂಡಬಹುದಾದ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಅದೇ ಪ್ರಸ್ತುತ ಜಯನಗರದ ಚುನಾವಣೆ.
ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಒಬ್ಬ ಪ್ರಬುದ್ಧ ಯುವ ರಾಜಕಾರಣಿ ಯಾರಾದರೂ ಇದ್ದರೆ ಅದು ತೇಜಸ್ವೀಸೂರ್ಯ ಅನ್ನಿಸುತ್ತಿದೆ. ಉತ್ತಮ ಶಿಕ್ಷಣ ಪಡೆದಿರುವ, ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುತ್ತಿರುವ, ವೈಚಾರಿಕ ನೆಲೆಗಟ್ಟಿನ ಅಡಿಯಲ್ಲಿ ಉತ್ತಮ ಬೌಧ್ಧಿಕ ಮಟ್ಟವನ್ನು ಹೊಂದಿರುವ, ಭಾಷಣ ಹಾಗೂ ಟಿ.ವಿ ಡಿಬೇಟ್ಗಳ ಮೂಲಕ ಸಮಾಜದ ಮೇಲೆ ಪರಿಣಾಮ ಬೀರುತ್ತಿರುವ ಯುವ ರಾಜಕಾರಣಿ ತೇಜಸ್ವಿ. ಬಿಜೆಪಿಯಲ್ಲಿ ಹೊಸ ತಲೆಮಾರಿನ ಅನೇಕ ಯುವ ನಾಯಕರು ಇದ್ದಾರೆ ಆದರೆ ಅವರೆಲ್ಲರಿಗೂ ಮಾದರಿ ಮತ್ತು ಒಬ್ಬ ಯಶಸ್ವಿ ನಾಯಕನಾಗುವ ಸರ್ವ ಅರ್ಹತೆ ತೇಜಸ್ವಿ ಸೂರ್ಯರಲ್ಲಿ ಕಾಣಿಸುತ್ತಿದೆ. ಟಿವಿ ಡಿಬೇಟ್ ನಲ್ಲಂತೂ ಕಾಂಗ್ರೆಸ್ ನ ಉಗ್ರಪ್ಪನಂತಹ ಉಗ್ರಪ್ಪನಿಗೇ ನೀರು ಕುಡಿಸಿದ ವಾಕ್ಚತುರ ತೇಜಸ್ವಿ ಸೂರ್ಯ. ಕಾನೂನಾತ್ಮಕವಾಗಿ ಕೂಡ ಬಿಜೆಪಿಗೆ ರಕ್ಷೆ ಒದಗಿಸುತ್ತಿರುವ ತೇಜಸ್ವಿ ಪ್ರಸ್ತುತ ಕರ್ನಾಟಕ ಹೈ ಕೋರ್ಟ್ನ’ಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಇಪ್ಪತ್ತಾರು ವರ್ಷದ ಈ ತರುಣ ಮುಂಚಿನಿಂದಲೂ ಬೇರೆ ಬೇರೆ ಹೋರಾಟದಲ್ಲಿ ಬಾಗಿಯಾಗುತ್ತಲೆ ಬಂದವರು. 2008 ರಲ್ಲಿ ಅರೈಸ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪನೆ ಮಾಡಿದ ತೇಜಸ್ವಿಯವರ ಮತ್ತು ಆ ಸಂಸ್ಥೆಯ ಉದ್ದೇಶ ‘ರಾಷ್ಟ್ರೀಯ ವಿಚಾರಧಾರೆಗಳ’ ವಿಚಾರದಲ್ಲಿ ಯುವಕರನ್ನು ಜಾಗೃತಗೊಳಿಸುವುದಾಗಿತ್ತು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಮತ್ತು ಜೊತೆ ಜೊತೆಯಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ತಮ್ಮ ವಿದ್ಯಾರ್ಥಿ ಜೀವನವನ್ನು ಕಳೆದವರು ತೇಜಸ್ವಿ. ಆರನೇ ತರಗತಿಯಲ್ಲಿಯೇ ರಾಷ್ಟ್ರೀಯ ಬಾಲಶ್ರೀ ಪ್ರಶಸ್ತಿ ಪಡೆದ ಈ ಬಾಲಕ 2010ರಲ್ಲಿ ಗ್ರೀನ್ ಇಂಡಿಯಾ ಮಿಶನ್ ಅನ್ನೋ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಈತನ ಚಾಣಾಕ್ಷ ಸಂಘಟನಾ ಚತುರತೆಗೆ ನಮ್ಮೆದುರಿಗಿರುವ ನಿದರ್ಶನ ಅಂದರೆ ‘ಮಂಗಳೂರು ಚಲೋ’ ರ್ಯಾಲಿ. ಅಂದಿನ ಸಿದ್ದರಾಮಯ್ಯ ಸರಕಾರದ ನಿದ್ದೆಗೆಡಿಸಿದ ಹೋರಾಟ ಇದಾಗಿತ್ತು.. ಇದಲ್ಲದೇ ಮೂವತ್ತು ವರ್ಷದೊಳಗಿನ ಯುವ ರಾಜಕಾರಣಿಗಳಿಗೆ ಎಂದು ಕಳೆದ ವರ್ಷ ಆಯೋಜಿಸಿದ್ದ ‘ಯಂಗ್ ಪೊಲಿಟಿಕಲ್ ಲೀಡರ್ಸ್ ವಿಸಿಟ್ ಟು ಯುಕೆ’ ಪ್ರವಾಸದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದು ಕೂಡ ಇದೇ ತೇಜಸ್ವಿ ಸೂರ್ಯ. ಮತ್ತೆ ಅದಕ್ಕೂ ಮುಖ್ಯವಾಗಿ ಮೊನ್ನೆ ಮೊನ್ನೆ ಪೋಸ್ಟ್ ಕಾರ್ಡ್ ನ್ಯೂಸ್ ನ ವಿಕ್ರಮ ಹೆಗ್ಡೆ ಅವರನ್ನು ಸಿದ್ಧ ಸರಕಾರ ಅನ್ಯಾಯವಾಗಿ ಜೈಲಿನಲ್ಲಿಟ್ಟಾಗ ಅವರ ಪರ ಸತತವಾಗಿ ವಾದ ನಡೆಸಿದ್ದು ಇದೇ ತೇಜಸ್ವಿ ಸೂರ್ಯ. ಹಳೇ ನಾಯಕರುಗಳನ್ನು ನೋಡಿಯಾಗಿದೆ. ಈಗೇನಿದ್ದರು ಹೊಸ ತಲೆಮಾರಿನ ಯುವಕರನ್ನು ಬಿಜೆಪಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಬೇಕು. ಇದು ಭವಿಷ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಲಾಭವನ್ನು ತಂದು ಕೊಡುವದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನೂ ವಿಶೇಷವೇಂದರೆ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಹೊಗಳಿಕೆಗೆ ತೇಜಸ್ವಿ ಸೂರ್ಯ ಅವರು ಇತ್ತಿಚಿಗಷ್ಟೆ ಪಾತ್ರರಾಗಿದ್ದರು. ಚುನಾವಣೆಗೂ ಮುನ್ನ ನಡೆದ ಯುವ ಮೋರ್ಚಾ ಕಾರ್ಯಕರ್ತರ ಸಂವಾದದಲ್ಲಿ ನರೇಂದ್ರ ಮೋದಿಯವರು ತೇಜಸ್ವಿ ಸೂರ್ಯ ಅವರಿಗೆ ” ಆಪ್ ಸ್ವಯಂ ಸೂರ್ಯ ಹೈ, ಸ್ವಯಂ ತೇಜಸ್ವಿ ಬಿ ಹೈ” ಅಂತ ಹೇಳಿದ್ದು ಇಲ್ಲಿ ಸ್ಮರಿಸಬಹುದು.
ತೇಜಸ್ವಿ ಭಾರತೀಯ ಜನತಾ ಪಕ್ಷದ ಆಶಾಕಿರಣದಂತೆ ಗೋಚರಿಸಲು ಇನ್ನೊಂದು ಕಾರಣವೇನೆಂದರೆ ಅವರ ಕ್ಲೀನ್ ಇಮೇಜ್. ಈ ಕ್ಲೀನ್ ಇಮೇಜ್ ಅನ್ನು ಮಾಪನ ಮಾಡಲು ಅವರಿನ್ನೂ ಚುನಾವಣಾ ರಾಜಕೀಯಕ್ಕೆ ಧುಮುಕಿಲ್ಲ ಎನ್ನುವವರು ಇದ್ದಾರೆ. ಆದರೆ ಹೋರಾಟದ ಹಾದಿ ಮತ್ತು ಕಳೆದ ಒಂದೂವರೆ ವರ್ಷದಿಂದ ಅವರ ಸಾಮಾಜಿಕ ಕಳಕಳಿಯ ಹಾದಿ ನೋಡಿದರೆ ಖಂಡಿತ ಅವರನ್ನು ಕ್ಲೀನ್ ಇಮೇಜ್ ಇರುವಂತಹಾ ಯುವ ನಾಯಕ ಎನ್ನಬಹುದು.ಇನ್ನು ಕೆಲವೊಂದು ವಿಷಯದಲ್ಲಿ ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯತೆಯ ಬಗ್ಗೆ ಎಲ್ಲ ಟಿವಿ ಡಿಬೆಟ್ಗ’ಳಲ್ಲಿ ಪರಿಪಕ್ವವಾಗಿ ವಾದಿಸಬಲ್ಲ ಮತ್ತು ವಿಷಯ ಮಂಡಿಸಬಲ್ಲ ಹೊಸ ತಲೆಮಾರಿನ ಹುಡುಗ ತೇಜಸ್ವಿ. ಹಾಗಾಗಿಯೇ ಅವರು ಯುವಕರಿಗೆ ಇಷ್ಟವಾಗುವುದು. ‘ಭಾರತಕ್ಕೇನಾದರೂ ಕೊಡುಗೆ ನೀಡಬೇಕೆನ್ನುವುದೇ ನನ್ನ ಗುರಿ ಮತ್ತು ಉದ್ದೇಶ…’ ಎನ್ನುವ ತೇಜಸ್ವಿ ‘ರಾಷ್ಟ್ರೀಯ’ ವಿಚಾರಧಾರೆಯನ್ನು ಯುವ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ಅತ್ಯಂತ ಶುದ್ಧವಾಗಿ ಅಳವಡಿಸಿಕೊಂಡು ರಾಜ್ಯ ಬಿಜೆಪಿಯ ಹೊಸ ಆಶಾ’ಕಿರಣ’ವಾಗಿ ಕಾಣಿಸುತ್ತಿರುವುದು ತೇಜಸ್ವಿ’ಸೂರ್ಯ’. ಅವರು ಚುನಾವಣಾ ರಾಜಕಾರಣಕ್ಕೆ ಧುಮುಕಲಿ ಮತ್ತು ಯಶ ಸಿಗಲಿ ಎಂಬ ಆಸೆ ನನ್ನದು. ಬಿಜೆಪಿ ಹಿಂಜರಿಯದೇ ಈ ಯುವ ನಾಯಕನನ್ನು ಚುನಾವಣಾ ರಾಜಕೀಯಕ್ಕೆ ತಂದು ಬೆಳೆಸಲಿ ಎಂಬುದೇ ನನ್ನ ಆಶಯ ಕೂಡ.
ಒಂದನ್ನು ಸ್ಪಷ್ಟಪಡಿಸುತ್ತೇನೆ, ನಾನು ಹೀಗೆ ಬರೆಯುವುದಕ್ಕೆ ಯಾರೂ ಕಾರಣರಲ್ಲ. ನಾನು ಇದುವರೆಗೆ ಒಮ್ಮೆಯೂ ತೇಜಸ್ವಿಯವರನ್ನು ನೇರವಾಗಿ ಭೇಟಿ ಮಾಡಲಿಲ್ಲ, ಕೈ ಕುಲುಕಲಿಲ್ಲ. ವೇದಿಕೆಯ ಮುಂದೆ ಕುಳಿತು ಅವರ ಅಗಾಧ ಭಾಷಣವನ್ನು ಕೇಳಿದ್ದೇನೆ. ಪ್ರತೀ ಭಾರಿಯೂ ಅಂದುಕೊಳ್ಳುವುದು, ಈತನ ದನಿಯನ್ನು ವಿಧಾನ ಸೌಧದಲ್ಲೋ ಅಥವ ಲೋಕಸಭೆಯಲ್ಲೋ ಕೇಳುವ ಅವಕಾಶವನ್ನು ಆದಷ್ಟು ಬೇಗ ದೇವರು ನನಗೊದಗಿಸಿಕೊಡಲೀ ಎಂದಾಗಿತ್ತು. ಈಗ ಕಾಲ ಕೂಡಿ ಬಂದಿದೆ. ಬಿಜೆಪಿಯ ವರಿಷ್ಠರು ‘ತೇಜಸ್ವಿ’ಯ ತೇಜಸ್ಸನ್ನು ಎಲ್ಲರಿಗೂ ತಲುಪುವಂತೆ ಮಾಡಲಿ. ಇದು ನನ್ನ ಆಸೆ ಮತ್ತು ನಿರೀಕ್ಷೆ.