ಅಂಕಣ

  “ಕಲಾತ್ಮ” – ರಂಗಭೂಮಿ ತಂಡ..

ಬೆಂಗಳೂರು ನಗರದ ರಂಗಭೂಮಿ ತಂಡಗಳಲ್ಲಿ “ಕಲಾತ್ಮ” ತಂಡ ಹೊಸತು ಮತ್ತು ವಿಶಿಷ್ಟವಾದದ್ದು. ಸಾಮಾನ್ಯವಾಗಿ ಹೊಸ ತಂಡಗಳು ಆಡಿಷನ್ಸ್ ಕರೆದು ಪ್ರತಿಭಾನ್ವೇಷಣೆ ನಡೆಸಿ ಆಯ್ಕೆ ಪ್ರಕ್ರಿಯೆ ಕೈಗೊಂಡರೆ, ಕಲಾತ್ಮ ತಂಡವು ರಂಗಭೂಮಿಯಲ್ಲಿ ಆಸಕ್ತಿಯಿರುವ ಯಾರನ್ನೂ ಬೇಕಾದರೂ ತಂಡಕ್ಕೆ ಸೇರಿಸಿಕೊಳ್ಳುತ್ತದೆ ಮತ್ತು ಉಚಿತವಾಗಿ ಅವರನ್ನು ವಿವಿಧ ಚಟುವಟಿಕೆಗಳ ಮೂಲಕ ತರಬೇತಿಗೊಳಿಸಿ ನಂತರ ನಾಟಕ ಪ್ರದರ್ಶನಗಳನ್ನು ಮಾಡುತ್ತದೆ. ಈಗಾಗಲೇ ತಂಡವು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮೂವತ್ತಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಪ್ರದರ್ಶಿಸಿ ಜನಮೆಚ್ಚುಗೆಯನ್ನು ಪಡೆದಿದೆ ಮತ್ತು ಇತರ ಸಂಘ-ಸಂಸ್ಥೆಗಳ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿದೆ.

ಈಗಾಗಲೇ ಅನೇಕ ನಾಟಕಗಳಲ್ಲಿ ನಿರ್ದೇಶನದಿಂದ ಹಿಡಿದು ಎಲ್ಲಾ ರೀತಿಯ ಕೆಲಸಗಳನ್ನೂ ನಿರ್ವಹಿಸಿ ಅನುಭವವಿರುವ ಸಂಸ್ಥಾಪಕ ನಿರ್ದೇಶಕ ಅರಸುಭರತ್ ಗೌಡ ತಂಡದ ಮಾರ್ಗದರ್ಶನ,ಸಾಹಿತ್ಯ ರಚನೆ ಕೆಲಸ ಮಾಡಿದರೆ, ಬಾಲ್ಯದಿಂದಲೇ ರಂಗಭೂಮಿಯ ಒಡನಾಟದಲ್ಲಿ ಬೆಳೆದ,ತಂಡದ- ನಾಟಕಗಳ ನಿರ್ದೇಶಕರಾಗಿ ವಿಘ್ನೇಶ್ ಭಟ್ ಮತ್ತು ತಂಡದ ವ್ಯವಸ್ಥಾಪಕ ದೇವ್ ಗೌಡ ಇತರ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಾರೆ. “ಎಲ್ಲರೂ ತಂಡದ ಎಲ್ಲಾ ರೀತಿಯ ವಿಚಾರಗಳನ್ನು ತಿಳಿದಿರಬೇಕು ಮತ್ತು ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಬೇಕು”ಎಂಬುದು ವಿಘ್ನೇಶರ ಅಭಿಪ್ರಾಯವಾದರೆ, ತಂಡದ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗಬೇಕು, ಆ ಮೂಲಕ ಬದಲಾವಣೆ ಎಂಬುದು ನಮ್ಮಲ್ಲೇ ಶುರುವಾಗಿ ನಂತರ ಹೊರಗಿನ ಬದಲಾವಣೆ ಕುರಿತು ಯೋಜಿಸಲು ಶಕ್ತರಾಗಬೇಕು ಎಂಬುದು ಅರಸುಭರತ್ ಗೌಡರ ಆಲೋಚನೆ. ಅಂತೆಯೇ ತರಬೇತಿ ಚಟುವಟಿಕೆಗಳನ್ನು ಯೋಜಿಸಿ ನಡೆಸಲಾಗುತ್ತಿದೆ. ಇಲ್ಲಿ ಕನ್ನಡ ಭಾಷೆಗೆ ಆಧ್ಯತೆ ನೀಡಲಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ, ಕಲಿಯುವ ತರಗತಿಗಳನ್ನೂ ನಡೆಸಲಾಗುತ್ತದೆ. ಇದು ಸಾಮಾನ್ಯ ನಾಟಕ ತಂಡ ಎಂಬುದಕ್ಕಿಂತ “ಪಾಠ ಶಾಲೆ”ಯ ವಾತಾವರಣವನ್ನು ಹೊಂದಿದೆ.

ನಿರ್ದೇಶಕರಿಬ್ಬರೂ ಸಮಾನ ಮನಸ್ಕರಾಗಿದ್ದು, ಎಲ್ಲ ವಿಷಯಗಳಲ್ಲೂ ಕಟ್ಟುನಿಟ್ಟಾದ ಕಾರಣ ವಿಧೇಯತೆ ಹೊಂದಿರುವ, ಬದ್ಧತೆಯಿರುವ ಸದಸ್ಯರು ಮಾತ್ರ ಇಲ್ಲಿ ಉಳಿಯಲು ಸಾಧ್ಯ. ಹಾಗಾಗಿ ತಂಡದಲ್ಲಿ ಶಿಸ್ತಿನ, ಸ್ವಚ್ಛ ವಾತವರಣವಿದೆ.ಕೇವಲ ನಾಟಕಗಳಲ್ಲದೇ ಹಂತ ಹಂತವಾಗಿ ವಿವಿಧ ರೀತಿಯ ಕಲಾಪ್ರಕಾರಗಳನ್ನು ತಂಡ ಅಳವಡಿಸಿಕೊಳ್ಳಲಿದೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ವರ್ಷಾಂತ್ಯದಲ್ಲಿ ತಂಡವು ಸ್ವಂತ ರಚನೆಯ ಹೊಸ ಬಗೆಯ ನಾಟಕಗಳನ್ನು ಪ್ರದರ್ಶಿಸುವ ಯೋಜನೆಗಳನ್ನು ಹೊಂದಿದೆ. ಈ ಬಗ್ಗೆ ಕೆಲಸಗಳು ನಡೆದಿದ್ದು, ಮೊದಲಿಗೆ ಶ್ರೀ ರಾಜೇಂದ್ರ ಕಾರಂತರು ರಚಿಸಿರುವ “ತಂತಿ” ಎಂಬ ನಾಟಕವನ್ನು ವಿಘ್ನೇಶ್ ಭಟ್ಟರ ನಿರ್ದೇಶನದಲ್ಲಿ ತಂಡವು ಇದೇ ಏಪ್ರಿಲ್ 29 ರಂದು ಮಲ್ಲತ್ತಹಳ್ಳಿಯ “ಕಲಾಗ್ರಾಮ”ದಲ್ಲಿ ಸಂಜೆ 7 ಗಂಟೆಗೆ ಪ್ರದರ್ಶನವನ್ನು ನೀಡಿದೆ.

29-4-2018 ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಖ್ಯಾತ ರಂಗಕರ್ಮಿ ರಾಜೇಂದ್ರ ಕಾರಂತರು ಬರೆದ ‘ತಂತಿ’ ನಟಕದ ಪ್ರದರ್ಶನ ನಡೆಯಿತು. ಕಲಾತ್ಮ ತಂಡದಿಂದ ಪ್ರದರ್ಶನಗೊಂಡ ಈ ನಾಟಕಕ್ಕೆ  ನಿರ್ದೇಶನ ಮತ್ತು ಬೆಳಕಿನ ಹೊಣೆ ಹೊತ್ತವರು ವಿಘ್ನೇಶ್ ಭಟ್.

ಏನೂ ಅರಿಯದ ಅಪ್ರಾಪ್ತ ವಯಸ್ಸಿನಲ್ಲೇ ತನಗೆ ಇಷ್ಟವಿಲ್ಲದಿದ್ದರೂ ವಿದ್ಯೆಯಿರದ, ನಾಜೂಕಿಲ್ಲದ, ಒಡ್ಡ, ಒರಟ, ಕುಡುಕನಾದ ತನ್ನ ಸೋದರಮಾವನೊಂದಿಗೆ ಮದುವೆ ಬಂಧನಕ್ಕೆ ಒಳಪಡುವ ಸ್ತ್ರೀ ನಂತರ ತನ್ನ ಬದುಕಿನ ಸ್ವಾತಂತ್ರ್ಯ ಕಳೆದುಕೊಂಡು ಅವನ ಕಪಿ ಮುಷ್ಟಿಯಿಂದ ಹೊರ ಬರಲು ಹಪಹಪಿಸುವ ಹೆಣ್ಣಿನ ಭಾವನಾತ್ಮಕತೆ ಯಥಾವತ್ತಾಗಿ ಮೂಡಿ ಬಂದಿತು.ತನ್ನ ಮಗುವಿಗೆ ತಾತ ದಿನ ನಿತ್ಯ ಹೇಳುವ ಕಥೆಯಲ್ಲಿ ರಾಜನು ರಾಕ್ಷಸನ ವಿರುದ್ಧ ಹೋರಾಡಿ ರಾಣಿಯನ್ನು ಬಿಡಿಸಿಕೊಂಡು ಹೋಗುವಂತೆ, ಅವಳಿಗೂ ಇಷ್ಟವಿಲ್ಲದ ತನ್ನ ಗಂಡನಿಂದ ಬಿಡಿಸಿಕೊಂಡು, ಸುಂದರ ಬದುಕನ್ನು ಕಟ್ಟಿಕೊಡಬಲ್ಲ ಆ ರಾಜಕುಮಾರ ಎಂದು ಬರುವನೋ ಎಂಬ ನಿರೀಕ್ಷೆಯಲ್ಲಿಯೇ ಇರುವ ಅವ‌ಳ‌ ಕಲ್ಪನಾ ಚಿತ್ರಣವನ್ನೂ ಸಹ ರಂಗದ ಮೇಲೆ ತರುವ ಪ್ರಯತ್ನ ಮಾಡಲಾಗಿದ್ದು, ಅದರಂತೆ ಕಾಲ್ಪನಿಕವಾದ ರಾಜ, ರಾಣಿ ಮತ್ತು ರಾಕ್ಷಸನ ಪಾತ್ರಗಳು ಹಾಡುಗಳ ಮೂಲಕ ಬಂದು ಹೋಗುತ್ತವೆ. ಇದಕ್ಕೆ ಹೊಂದುವಂತೆ ಅರಸುಭರತ್ ಗೌಡರು ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ಬಹಳ ಸೊಗಸಾಗಿ ಮಾಡಿದ್ದಾರೆ.

ಅಶೋಕ್ ಗೌಡ, ಸಂಗೀತ, ದೇವ್ ಗೌಡ ಮತ್ತು ಮಾ|ಲಿಖಿತ್ ಮುಖ್ಯ ಪಾತ್ರಗಳಲ್ಲಿ ಮಿಂಚಿದರು. ಒಂದೊಳ್ಳೆ ಕಥಾವಸ್ತು ಹೊಂದಿದ್ದ ಈ ನಾಟಕದಲ್ಲಿ ಕನಿಕರ, ಅಳು ಮತ್ತು ನಗೆ ಹುಟ್ಟಿಸುವ ಪಾತ್ರಗಳಿದ್ದು  ನಿರ್ದೇಶಕರ ಕೆಲಸ ಪ್ರೇಕ್ಷಕರ ಮನ ಗೆದ್ದಿದೆ. ಅರ್ಹ ನಟರಿರುವ ಈ ಹೊಸ ತಂಡವು ಬೆಳಕು ಮತ್ತು ರಂಗಸಜ್ಜಿಕೆಯೆಡೆ ಇನ್ನೂ  ಸ್ವಲ್ಪ ಗಮನವಹಿಸಬೇಕಿದೆ. ಒಟ್ಟಿನಲ್ಲಿ ‘ಕಲಾತ್ಮ’ ತಂಡದ ಮೊದಲ ಪ್ರದರ್ಶನವು ಚೊಕ್ಕವಾಗಿ ಮೂಡಿ ಬಂತು.

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!