ಅಂಕಣ

ಮೆಚ್ಚಲೇಬೇಕಿದೆ ಗೌತಮನ ಈ ಗಂಭೀರ ನಡೆ…!

ಡಿಸೆಂಬರ್ 15, 2016.

ದೇಸಿ ಕ್ರಿಕೆಟಿನ ಮಹಾರಾಜನೆಂದೇ ಬಿಂಬಿತನಾಗಿದ್ದ ಗ್ರೇಟ್ ನಾಯಕನೊಬ್ಬನ ಅಗ್ನಿಪರೀಕ್ಷೆಯ ದಿನವಂದು. ತಿಂಗಳುಗಳ ಕೆಳಗಷ್ಟೇ ಭಾರತ ತಂಡದ ನಾಯಕನಾಗಿ ಸತತ ಐದು ವರ್ಷಗಳ ಕಾಲ ತಂಡದ ಆಗುಹೋಗುಗಳ ಮಾವುತನಾಗಿದ್ದ ವ್ಯಕ್ತಿ ಇಂದು ಅಕ್ಷರ ಸಹ ತಂಡದಲ್ಲಿ ತನ್ನ ಸ್ಥಾನವನ್ನುಉಳಿಸಿಕೊಳ್ಳಲು ಹೆಣಗುತ್ತಿದ್ದಾನೆ. ಅದು ಕೂಡ ತಂಡದ ಒಬ್ಬ ಸಾಮಾನ್ಯ ಸದಸ್ಯನಾಗಿ! ಹತ್ತು-ಹನ್ನೆರೆಡು ವರ್ಷಗಳ ಕಾಲ ಕ್ರಿಕೆಟಿನಲ್ಲೇ ಬದುಕನ್ನು ಕಳೆದು, ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಅಜರಾಮರ ವ್ಯತಿತ್ವವೆನಿಸಿಕೊಂಡರೂ, ಯಾಕಪ್ಪ ಈತನಿಗೆ ಇನ್ನೂ ಆಡುವ ಹುಚ್ಚು ಎಂದು ಹೇಳಿದವರು ಅದೆಷ್ಟೋ. ಪಾತಾಳ ಸೇರುತ್ತಿದ್ದ ತಂಡವೊಂದನ್ನು ಶಿಖರದ ತುತ್ತ ತುದಿಯ ಬಳಿಗೆತಂದು ನಿಲ್ಲಿಸಿದ ವ್ಯಕ್ತಿಯನ್ನೇ ತಂಡದಿಂದ ತೆಗೆದು ಹಾಕಿದ್ದ ಮೇಲೆ ಪುನಃ ತಂಡದಲ್ಲಿ ಅವಕಾಶವನ್ನು ಕೋರುವುದು ಮರ್ಯಾದೆಗೇಡು ಎಂದು ಈತನ ಅಭಿಮಾನಿಗಳೇ ಅಂದು ಬಯ್ಯತೊಡಗಿದರು. ಸಂಸಾರದ ಜವಾಬ್ದಾರಿ, ಹಣದ ಕೊರತೆ ಏನಾದರೂ? ಬಿಲ್’ಕುಲ್ ಇಲ್ಲ! ಅಷ್ಟಕ್ಕೂ ಬೆಂಗಾಲದ ಅತಿ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಈತನ ಕುಟುಂಬಕ್ಕೆಹಣದ ಕೊರತೆ ಎಂದರೆ ಕೇಳಿದವರು ನಗುವರು. ಹಾಗಾದರೆ ತನ್ನ ಮೂವತ್ನಾಲ್ಕನೇ ವಯಸ್ಸಿನಲ್ಲಿಯೂ ಹಠಹಿಡಿದ ಮಗುವಿನಂತೆ ಈತ ಭಾರತ ತಂಡಕ್ಕೆ ಕಮ್ ಬ್ಯಾಕ್ ಆಗಲೇಬೇಕು ಎನುತ ಕೂತಿರುವುದಾದರೂ ಏತಕ್ಕೆ?  ಏಕೆಂದರೆ ಆತ ಸೌರವ್ ಗಂಗೂಲಿ! ಆಕಾಶವೇ ಕಳಚಿ ಬಿದ್ದರೂ ಸೋಲನೊಪ್ಪಿಕೊಳ್ಳದ, ಹೋದರೂ ತಲೆಯೆತ್ತಿ ಆತ್ಮಗೌರವದಿಂದ ಹೊರಡಬೇಕೆಂಬ ಖಯಾಲಿಯ ನಾಯಕ.

ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಚಿಂದಿ ಚಿತ್ರಾನ್ನವಾಗುತ್ತಿದ್ದ ತಂಡವನ್ನು ಒಂದುಗೂಡಿಸಿ ಬೆಳೆಸಿದ್ದಷ್ಟಲ್ಲದೆ; ವಿದೇಶಿ ನೆಲೆಗಳಲ್ಲಿ ಗೆಲುವೆಂಬ ಮಾಯಾಜಿಂಕೆಯ ಬೆನ್ನನೇರುವ ಕಲೆಯನ್ನು ತಂಡಕ್ಕೆ ಕರಗತಮಾಡಿ ತೋರಿಸಿದ ಶ್ರೇಯ ಗಂಗೂಲಿಯದು. ಮುಂದೊಂದು ದಿನ ತಾನೇ ಖುದ್ದಾಗಿ ತಂಡದ ಕೋಚ್ ಸ್ಥಾನಕ್ಕೆ  ಗ್ರೆಗ್ ಚಾಪೆಲ್ ಎಂಬ ಸಿಡುಕು ಮೋರೆಯ ವ್ಯಕ್ತಿಯನ್ನು ಆಯ್ದು ತಂದು ಆತನಿಂದಲೇ ತಂಡದಿಂದ ಹೊರಹಾಕಿಸಿಕೊಂಡ ಪ್ರಸಂಗ; ಬಹುಶಃ ಕ್ರಿಕೆಟ್ ಇತಿಹಾಸದಲ್ಲೇ ಬೇರ್ಯಾವ ತಂಡದಲ್ಲೂ ಬಂದಿರಲು ಸಾಧ್ಯವಿಲ್ಲ.

ಅಲ್ಲಿಂದ ಮುಂದೆ ನಡೆದದ್ದು ಮಾತ್ರ ಕಮ್ ಬ್ಯಾಕ್ ಕಿಂಗ್ ಎಂದು ಹೆಸರು ಗಳಿಕೊಂಡ ಈತನ ಯಶೋಗಾಥೆ.

ಅಂದು ಡಿಸೆಂಬರ್ 15, 2006 ರ ಸೌತ್ ಆಫ್ರಿಕಾ ವಿರುದ್ದದ ಮೊದಲ ಇನ್ನಿಂಗ್ಸ್ ನಲ್ಲಿ ಈತ ಗಳಿಸಿದ್ದು ಕೇವಲ 51 ರನ್ ಗಳಾದರೂ ಅದರಿಂದ ಆತ ತನ್ನನು ತಂಡದಿಂದ ಹೊರತಳ್ಳಿದವರಿಗೆ, ಆತನ ಬಗ್ಗೆ ಉಡಾಫೆಯ ಮಾತನ್ನಾಡಿದವರಿಗೆ, ಮುಳುಗುವಾಗಲೂ ತಮ್ಮವನೆಂಬ ಆತ್ಮೀಯತೆಯಿಂದಲೂ ಕೈಹಿಡಿದು ಮೇಲೆತ್ತದ ಇತರ ಆಟಗಾರರಿಗೆ ಇನ್ನಿಂಗ್ಸ್ ನ ಕೊನೆಯವರೆಗೂ ಸ್ಕ್ರೀಸ್ನ ಇನ್ನೊಂದು ಬದಿಯಲ್ಲಿ ನಿಂತು ಘರ್ಜಿಸುತ್ತಲೇ ಉತ್ತರಿಸಿದ. ಮಸಸ್ಸು ಮಾಡಿದರೆ ಕಮ್ ಬ್ಯಾಕ್ ಎಂಬುದು ಮೂವತ್ನಾಲ್ಕನೇ ವಯಸ್ಸಿನಲ್ಲಿಯೂ ಸಾಧ್ಯವಾಗದಿರದು ಎಂಬುದನ್ನು ಸಾಬೀತು ಮಾಡಿದ. ಅಂದು ಆತನ ಕಮ್ ಬ್ಯಾಕ್ ಜಗತ್ತಿಗೆ ತನ್ನ ಶಕ್ತಿಯ ಪ್ರಭಾವವನ್ನು ತೋರಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ತನಗೆ ತಾನೇ ಉತ್ತರಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದಿತು. ಆತ್ಮವಿಶ್ವಾಸ ಹಾಗೂ ತಕ್ಕ ಶ್ರಮವನ್ನು ವ್ಯಹಿಸಿದರೆ ಜಗತ್ತಿನಲ್ಲಿ ಅಸಾಧ್ಯವಾದುದು ಏನೇನೂ ಇಲ್ಲವೆಂಬುದನ್ನು ತೋರಿಸಿಕೊಡುವುದಾಗಿದ್ದಿತು.

ಹೆಚ್ಚುಕಡಿಮೆ ಹನ್ನೆರೆಡು ವರ್ಷಗಳ ನಂತರ ದೇಶ ಕಂಡ ಮತ್ತೊಬ್ಬ ಎಡಗೈ ಬ್ಯಾಟ್ಸಮನ್ ಇಂದು ಅದೇ ಸ್ಥಾನದಲ್ಲಿ ನಿಂತಿದ್ದಾನೆ. ಸಿಡುಕ, ಅಹಂಕಾರಿ, ರನ್ ಗಳಿಸಲು ಅಶಕ್ಯನಾದವ, ನಾಯಕನ ಹಿಡಿತವನ್ನು ಕಳೆಕೊಂಡಿರುವವ, ಹೀಗೆ ನಾನಾ ಬಗೆಯಲ್ಲಿ ಜರಿಯುವವರಿಗೆ ಉತ್ತರಿಸುವ ಪರಿಸ್ಥಿಯಲ್ಲಿದ್ದಾನೆ. ಆದರೆ ಉತ್ತರಿಸಬಲ್ಲನೆ? ಆತನ ಕ್ರಿಕೆಟ್ ವ್ಯಕ್ತಿವವನ್ನು ಚೆನ್ನಾಗಿ ಬಲ್ಲವರಿಗೆ ಈ ಪ್ರೆಶ್ನೆಗೆ ಉತ್ತರ ‘ಹೌದು’ ಎಂಬುದು ತಿಳಿದೇ ಇದೆ! ಹೆಸರು ಗೌತಮ್ ಗಂಭೀರ್. ಭಾರತಕ್ಕೆ 2007 ಹಾಗು 2011 ರ ವಿಶ್ವಕಪ್ ನ ಕಿರೀಟವನ್ನು ತೊಡಿಸಿದ ಕಾರ್ಯದಲ್ಲಿ ಸಿಂಹಪಾಲು ಶ್ರಮ ಇವನದ್ದೇ ಎಂಬುದು ಭಾರತೀಯರಿಗಲ್ಲದೆ ಕ್ರಿಕೆಟ್ ಆಡುವ ಎಲ್ಲ ದೇಶಗಳಿಗೂ ತಿಳಿದುಂಟು. ಟೆಸ್ಟ್, ಒಂಡೇ ಹಾಗು ಟೀ 20 ಯಾವುದೇ ಬಗೆಯಾಗಲಿ ಆಯಾ ಫಾರ್ಮ್ಯಾಟ್ ಗಳಿಗೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುತ್ತಿದ್ದ ಈತನ ಕ್ರಿಕೆಟ್ ಪಯಣ ಮಾತ್ರ ಒಂದು ದುರಂತ ಕತೆ ಎಂದರೆ ಸುಳ್ಳಾಗದು. ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ಅಗ್ರಮಾನ್ಯನಾಗಿರುತ್ತಿದ್ದ, ತಂಡದ ಕಿರಿಯ ಆಟಗಾರರೊಟ್ಟಿಗೆ ತನ್ನ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದ, ಸಂಧರ್ಭ ಬಂದಾಗ ತಂಡವನ್ನು ಮುನ್ನೆಡಿಸಿ ಗೆಲುವನ್ನು ಸಾಧಿಸುತ್ತಿದ್ದ ಆಟಗಾರನೊಬ್ಬ ಇಂದು ರಾಷ್ಟ್ರೀಯ ತಂಡದಲ್ಲಿ ಬಿಡಿ ಕನಿಷ್ಠ ಪಕ್ಷಮೋಜು ಮಸ್ತಿಯ ಹುತ್ತವೆಂದೇ ಕಾಣುವ  ಐಪಿಎಲ್ ನ ತಂಡವೊಂದರಲ್ಲೂ ಪರ್ಮನೆಂಟಾದ ಆಟಗಾರನೊಬ್ಬನಾಗಲು ಹೆಣಗುತ್ತಿದ್ದಾನೆ. ಪ್ಲೇ ಆಫ್ ದೂರದ ಮಾತು ಪ್ರತಿ ವರ್ಷ ಸೀಸನ್ ಮುಗಿದಾಗ ಕನಿಷ್ಠಪಕ್ಷ ಟಾಪ್ 5 ತಂಡದಲ್ಲೂ ಕಾಣದಿದ್ದ ಫ್ರಾಂಚೈಸಿಯೊಂದಕ್ಕೆ ಎರೆಡೆರಡು ಬಾರಿ ಪ್ರಶಸ್ತಿಯ ಪ್ರತಿಮೆಯನ್ನು ಮುಡಿಗೇರಿಸಿಕೊಟ್ಟ ಈತ ಅದೇ ಫ್ರಾಂಚೈಸಿಯಿಂದಲೇ ಹೊರಹಾಕಿಸಿಕೊಳ್ಳುತ್ತಾನೆ. ಹಣವೆಂದರೆ ಕ್ರಿಕೆಟ್, ಕ್ರಿಕೆಟ್ ಎಂದರೆ ಹಣವಾಗಿರುವ ಇಲ್ಲಿ ಫ್ರಾಂಚೈಸಿಗಳ ಕೈಕೆಳಗೆ ಆಡುವುದು ಕಬ್ಬಿಣ ಜಲ್ಲೆಯ ನುರಿತದಂತೆ ಎಂಬುದನ್ನು ಗಂಗೂಲಿ ತಾನು ಬರೆದ ಪುಸ್ತಕದಲ್ಲಿ (A Century Is Not Enough) ಸೊಗಸಾಗಿ ವರ್ಣಿಸಿದ್ದಾನೆ. ಆತನೂ ಕೆಲವರ್ಷಗಳ ಹಿಂದೆ ಅದೇ ಪ್ರಾಂಚೈಸಿಯಿಂದ ಹೀನಾಯವಾಗಿ ಹೊರಹಾಕಿಸಿಕೊಂಡಿದ್ದ. ಇಂದು ಗಂಭೀರ್ ನ ಸರದಿ. ಆದರೆ ಆತ ತಂಡದಿಂದ ಹೊರಬಿದ್ದ ಕೂಡಲೇ ಡೆಲ್ಲಿಯ ಡೆವಿಲ್ಸ್ ಗಳು ತೆಕ್ಕೆಗೆ ಹಾಕಿಕೊಂಡರೂ ಸೀಸನ್ ನ ಆರ್ಧ ಮ್ಯಾಚುಗಳು ಮುಗಿಯುವ ಮೊದಲೇ ಆತನನ್ನು ತಂಡದಲ್ಲಿ ಉಳಿಸಿಕೊಳ್ಳಲು ಅಶಕ್ಯವಾದವು.

ಅರ್ಧದಷ್ಟು ಕ್ರಿಕೆಟ್ ಇಂದು ದೈಹಿಕ ಆಟವಾದರೆ ಉಳಿದರ್ಧ ಅಥವಾ ಇನ್ನೂ ಹೆಚ್ಚಿನ ಬಾಗ ಅದೊಂದು ಮೆಂಟಲ್ ಗೇಮ್ ಎಂಬುವುದು ಸರ್ವ ಆಟಗಾರರ ಒಕ್ಕೊರಲ ಅನಿಸಿಕೆ. ಅಲ್ಲದೆ ಇಂದು ಆಡುವವರಿಗಿಂತಲೂ ಹೆಚ್ಚಾಗಿ ಎ.ಸಿ. ಕೋಣೆಯಲ್ಲಿ ಬೊಬ್ಬೆಹೊಡೆಯುವವರು, ಸ್ಟಾಟಿಸ್ಟಿಕ್ಸ್’ನ ದಾಸರಾಗಿ ಅದನ್ನು ಪುಂಖಾನುಪುಂಖಾವಾಗಿ ಜನಮಾನಸದೊಳಗೆ ಹರಿಬಿಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. ‘ವರ್ಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮೆನ್’, ‘ಸ್ಮಾರ್ಟ್ ಸ್ಟ್ರೈಕ್ ರೇಟ್’, ‘ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್’, ‘ಬೆಸ್ಟ್ ಸ್ಟ್ರೈಕ್ ರೇಟ್’ – ಹೀಗೆ ಆಟಗಾರರನ್ನು ಅಳೆದು ತೂಗುವ ನೂರಾರು ಕೆಟಗರಿಗಳು ಇಂದು ಕ್ರಿಕೆಟ್’ನಲ್ಲಿವೆ. ಆಟಗಾರ ಕ್ರೀಡಾಂಗಣದಲ್ಲಿ ದೈಹಿಕವಾಗಿ ಸೆಣೆಸುವುದಲ್ಲದೆ ಆಫ್ ದಿ ಫೀಲ್ಡ್ ಇಂತಹ ಅರ್ಥವಿಲ್ಲದ ಅಂಕೆ ಸಂಖ್ಯೆಗಳೊಟ್ಟಿಗೆ ಮಾನಸಿಕವಾಗಿ ಗುದ್ದಾಡಬೇಕು. ಇಂತಹ ಗುದ್ದಾಟದಿಂದಲೇ ಇಂದು ಒಬ್ಬ ಆಟಗಾರ ಕ್ಷಣಮಾತ್ರದಲ್ಲಿ ಯಶಸ್ಸಿನ ಉತ್ತುಂಗದಿಂದ ಸೋಲಿನ ಕೂಪದೊಳಗೆ ದೊಪ್ಪನೆ ಬೀಳುವುದು. ಹಾಗಾಗಿ ಕಮ್ ಬ್ಯಾಕ್ ಎಂಬುವುದು ಅಂದಿನಷ್ಟು ಇಂದು ಸುಲಭವಲ್ಲ. ಏಕೆಂದರೆ ಅಂದು ಆಟಗಾರನ ಕಂಬ್ಯಾಕ್ ಇಂಟರ್ನೆಟ್ಟಿನ ಬಹುಕೋಟಿ ಟ್ವೀಟ್, ಕಾಮೆಂಟ್’ಗಳೊಟ್ಟಿಗಿರದೆ ಕೇವಲ ಕ್ರೀಡಾಂಗಣದೊಳಗಿನ ಬ್ಯಾಟು ಬಾಲುಗಳೊಟ್ಟಿಗಿದ್ದಿತು. ಬೆವರು ಸುರಿಸಿ ಹೆಸರು ಗಳಿಸುವುದರೊಟ್ಟಿಗಿದ್ದಿತು.

ಇಂದು ಗಂಭೀರ್ ದೆಹಲಿ ತಂಡದ ನಾಯಕನ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದರೆ ಅದರ ಹಿಂದೆಯೂ ಹೀಗೆಯೇ ಬೊಬ್ಬೆಹೊಡೆದು ಬೀಗುವ ನೂರಾರು ಬಾಯಿಗಳು ಹಾಗು ಅವುಗಳೊಳಗಿನ ಸಾವಿರಾರು ಸ್ಟ್ಯಾಟಿಸ್ಟಿಕ್ಸ್ ಗಳೂ ಕಾರಣವಿರಬಹುದು. ಇಂದು ಮಾನಸಿಕವಾಗಿ ಒಬ್ಬ ಆಟಗಾರ ಸೋತನೆಂದರೆ ಆತನಿಗೆ ತನ್ನ ಕರಿಯರ್’ನನ್ನು ಕೊನೆಗೊಳಿಸಿದಷ್ಟೇ ದುಃಖ ಹತಾಶೆಯನ್ನು ಸಹಿಸಿಕೊಳ್ಳಬೇಕಾಗುವುದು. ಆದರೆ ಮಾನವನ ಗುಣವೈಖರಿಯನ್ನು ಹೀಗೀಗೆ ಇಂತಿಷ್ಟೇ ಎಂದು ಏಳಲು ಸಾಧ್ಯವಿದೆಯೇ? ತನ್ನ 42 ನೇ ವಯಸ್ಸಿನಲ್ಲಿ ಚೊಚ್ಚಲ ರಣಜಿ ಪಂದ್ಯವನ್ನಾಡಿ ನೋಡುಗರ ರೋಮು ರೋಮುಗಳನ್ನು ಎದ್ದು ನಿಲ್ಲಿಸಿದ್ದ ಪ್ರವೀಣ್ ತಾಂಬೆಯಾಗಲಿ, ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ಬಡಿದುರುಳಿಸಿ ಪುನಃ ಕ್ರಿಕೆಟ್ ಮೈದಾನದಲ್ಲಿ ಫೊರು ಸಿಕ್ಸರ್’ಗಳ ಸುರಿಮಳೆಗೈಯುವ ಯುವರಾಜ್ ಸಿಂಗ್’ರಂತವರಾಗಲಿ ಅಥವಾ ತಿನ್ನಲು ಹಿಟ್ಟಿಲ್ಲದೆ ಇರಲೊಂದು ಸೂರಿರದೆ ಕಡುಕಷ್ಟದಲ್ಲಿ ಬದುಕಿ ಕೋಟ್ಯಧಿಪತಿಗಳಾಗಿರುವ ಅದೆಷ್ಟೋ ಆಟಗಾರರಾಗಿರಲಿ ಇಂದು ಅವರೆಲ್ಲ ಈಜಿ ಒದ್ದಾಡಿ ಜೀವನವನ್ನು ಒಂದು ಆದರ್ಶಪರವಾದ ಹೊತ್ತಿಗೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದರೆ ಅದರಲ್ಲಿ ಕ್ರಿಕೆಟ್ ಎಂಬ ಆಪತ್ಭಾಂದವನ ಕೃಪೆ ಅದೆಷ್ಟಿದೆ ಎಂದು ತಿಳಿಯುತ್ತದೆ. ಇಷ್ಟೆಲ್ಲಾ ಸಾಧ್ಯತೆಗಳಿರುವ ಆಟವೊಂದರಲ್ಲಿ ಮಹಾಒತ್ತಡವಿರುವ ಅದೆಷ್ಟೋ ಮ್ಯಾಚುಗಳಲ್ಲಿ ಬೌಂಡರಿಯ ಅಷ್ಟದಿಕ್ಕುಗಳಿಗೂ ಮನಬಂದಂತೆ ಚಚ್ಚಿ ಬೌಲರ್’ಗಳ ಬೆವರಿಳಿಸುತ್ತಿದ್ದ ಗೌತಮನೆಂಬ ಗಂಭೀರ ವ್ಯಕ್ತಿಗೆ ಮಗದೊಮ್ಮೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಮತ್ತೊಂದು ಸೆಂಚೂರಿಯನ್ನು ಗಳಿಸುವುದು ಯಾವ ಮಹಾಕಷ್ಟದ ಕಾರ್ಯ?

ಆದರೆ ಗಂಭೀರ್’ನ ಈ ನಡೆ ಇನ್ನೊಂದು ಬಗೆಯಲ್ಲಿ ನೋಡಬಯಸುವವರಿಗೆ ಬೇರೆಯದ್ದೇ ನೀತಿಪಾಠವನ್ನು ಹೇಳಿಕೊಡುತ್ತದೆ. ತನಗಿಂತ ತಂಡ ಮೊದಲು, ಹಣಕ್ಕಿಂತ ಆಟ ಮಿಗಿಲು ಎನ್ನುವುದು ಕೇವಲ ಬಾಯಿಮಾತಿನ ವಚನಗಳಂತಾಗಿರುವಾಗ ಗೌತಮ್ ಗಂಭೀರ್ ಅವುಗಳನ್ನು ಅಕ್ಷರ ಸಹ ನಿಜಜೀವನದಲ್ಲೇ ಮಾಡಿ ತೋರಿಸಿದ್ದಾನೆ. ತಂಡ ಸೋಲಿನ ಸರಮಾಲೆಯನ್ನೇ ಮುಡಿಗೇರಿಸಿಕೊಳ್ಳುತ್ತಿರುವಾಗ ಕಾರಣ ನಾನಲ್ಲ ನೀನು, ನೀನಲ್ಲ ಅವನು ಎಂದು ಬ್ಲೇಮ್ ಗೇಮ್ಗಳು ನಡೆಯುತ್ತಿರುವಾಗ ಹೀನಾಯ ಪ್ರದರ್ಶನದ ಅಷ್ಟೂ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೇರಿಸಿಕೊಂಡು ನಾಯಕನ ಸ್ಥಾನವನ್ನು ತೇಜಿಸಿದ್ದನಲ್ಲದೆ; ತಾನು ಪಡೆದಿದ್ದ ಅಷ್ಟೂ ಹಣವನ್ನು ಫ್ರಾಂಚೈಸಿಗಳಿಗೆ ಹಿಂದಿರುಗಿಸಲೂ ಮುಂದಾಗಿದ್ದಾನೆ. ಹಣವೇ ಸರ್ವಸ್ವವಾಗಿರುವ ಪ್ರಸ್ತುತ ಕಾಲದಲ್ಲಿ ಕೂತಕೂತಲ್ಲೆ ಸಿಗುವ ಕೋಟಿ ಕೋಟಿ ರೂಪಾಯಿಗಳನ್ನು ಹಿಂತಿರುಗಿಸುವವರು ಎಲ್ರಿ ಸಿಗುತ್ತಾರೆ? ಆತ ಬೇರೇನೂ ಮಾಡದೆ ಕೇವಲ ಬೆಂಚಿನ ಮೇಲೆ ಕುಳಿತು ಚಪ್ಪಾಳೆ ತಟ್ಟಿದರೂ ಸಾಕಾಗಿದ್ದಿತು. ಅಷ್ಟೂ ಹಣವು ಬಡ್ಡಿಸಮೇತ ಆತ ಅಕೌಂಟಿನಲ್ಲಿ ಬಿದ್ದಿರುತ್ತಿತ್ತು. ಆದರೆ ಸ್ಪೋರ್ಟ್ಸ್-ಮ್ಯಾನ್ಷಿಪ್ ಎಂಬುದು ರಕ್ತದ ಕಣಕಣದಲ್ಲಿ ಅಡಗಿರುವವರಿಗೆ ಆಡದೆ ಸಿಗುವ ಬಹುಮಾನವೂ ಕಸಕ್ಕೆ ಸಮವಾಗಿರುತ್ತದೆ ಎಂಬುದು ಇಲ್ಲಿ ತಿಳಿಯುತ್ತದೆ. ಅಲ್ಲದೆ ಪ್ರಸ್ತುತ ಚುನಾವಣೆಯ ಈ ದಿನಗಳಲ್ಲಿ ರಾಜಕಾರಣಿಗಳೂ ಸಹ. ಹೀಗೆಯೇ ಆತ್ಮಾವಲೋಕನ ಮಾಡಿಲೊಳ್ಳಬಲ್ಲರೇ ಎಂಬೊಂದು ಪ್ರಶ್ನೆ ನಮ್ಮನ್ನು ಕಾಡದಿರದು? ಜಿಲ್ಲೆಯ ಅಥವಾ ತಾಲೂಕಿನ ಜೀರೋ (0) ಅಭಿವೃದ್ಧಿಗೆ ಮರುಗಿ ತಾನು ಈ ಕಾರ್ಯಕ್ಕೆ ಲಾಯಕ್ಕಲ್ಲವೆನ್ನುತ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಇವರುಗಳೂ ನೀಡಬಲ್ಲರೇ? ಇಂಪಾಸಿಬಲ್! ಅಲ್ಲವೇ? ಅದೇನೇ ಇರಲಿ ಈ ಬಾರಿ ಚುನಾವಣಾ ಆಯೋಗವೇನಾದರೂ ಗಂಭೀರ್’ನನ್ನೇ ತನ್ನ ಬ್ರಾಂಡ್ ಅಂಬಾಸಿಡರ್’ನನ್ನಾಗಿ ಮಾಡಿದ್ದರೆ ಜನರ ಹಣವನ್ನು ಕೊಳ್ಳೆಯೊಡೆಯುವ ಅದೆಷ್ಟೋ ಕಳಪೆ ರಾಜಕಾರಣಿಗಳಿಗೆ ಪರೋಕ್ಷವಾಗಿ ಮಹತ್ತರವಾದ ಸಂದೇಶವೊಂದು ತಲುಪುತ್ತಿತ್ತೇನೋ?!

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!