ಅಂಕಣ ಪ್ರಚಲಿತ

ಕ್ಯಾಶ್ ಇಲ್ಲದೆ ಎ.ಟಿ.ಎಮ್. ಭಣ ಭಣ- ಸಾಮಾನ್ಯರ ಬಾಳು ಕಾಂಚಾಣವಿಲ್ಲದೆ ಕುರುಡು

ದೇಶದ ಎಂಟು ರಾಜ್ಯಗಳ ಎ.ಟಿ.ಎಮ್.ಗಳಲ್ಲಿ ದುಡ್ಡು ಖಾಲಿಯಾಗಿ ಎ.ಟಿ.ಎಮ್’ಗಳು ಭಣಗುಟ್ಟುತ್ತಿವೆ. ದೇಶದಲ್ಲಿ ಮತ್ತೆ ನೋಟಬಂದಿಯಂತಹ ವಾತಾವರಣ ಸೃಷ್ಟಿಯಾಗಿದೆಯಾ? ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ,  ಮಧ್ಯಪ್ರದೇಶ ಹಾಗೂ ತೆಲಂಗಾಣ ಸಹಿತವಾಗಿ ಅನೇಕ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಕ್ಯಾಶ’ನ ಭಾರಿ ಅಭಾವ ತಲೆದೂರಿದೆ. ಎ.ಟಿ.ಎಮ್’ಗಳಲ್ಲಿ ಹಣ ಖಾಲಿಯಾಗಿದೆ. ಜನರ ಜೇಬುಗಳೆಲ್ಲ ಖಾಲಿಯಾಗಿ ಜನತೆ ಬ್ಯಾಂಕ್’ಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದನ್ನು ನೋಟು ಅಮಾನ್ಯೀಕರಣದ ನಂತರದ ಅತಿ ದೊಡ್ಡ ಕ್ಯಾಶ್’ನ ಬರ ಅಂದರೆ ತಪ್ಪಾಗಲಿಕ್ಕಿಲ್ಲ.

ಹಾಗಾದರೆ ಈ ಸ್ಥಿತಿ ಏಕೆ ಮತ್ತು ಹೇಗೆ ಉದ್ಭವಿಸಿತು ಮತ್ತು ಇದರ ಹಿಂದಿನ ಸಂಭವನೀಯ ಕಾರಣಗಳೇನು? ಎ.ಟಿ.ಎಮ್’ಗಳಲ್ಲಿ ಹಣ ಇಲ್ಲ ಇದು ಎಲ್ಲರಿಗೂ ತಿಳಿದ ವಿಷಯ ಆದರೆ ಹಣ ಖಾಲಿಯಾಗಲು ಏನು ಕಾರಣ? ದೇಶದ ಕೆಲ ರಾಜ್ಯಗಳಲ್ಲಿ ಜನರು ಅವಶ್ಯಕತೆಗಿಂತ ಹೆಚ್ಚಿನ ಹಣವನ್ನು ಎ.ಟಿ.ಎಮ್’ಗಳಿಂದ ತೆಗಿದಿದ್ದಾರೆ ಎಂಬುದು ಒಂದು ತರ್ಕ. ಆದರೆ ಜನರು ಅಚಾನಕವಾಗಿ/ಧಿಡೀರಾಗಿ ಏಕೆ ಇಷ್ಟೊಂದು ಪ್ರಮಾಣದಲ್ಲಿ ಹಣವನ್ನು ತೆಗೆದಿರಬಹುದು? ಈಗ ಕೆಲ ರಾಜ್ಯದಲ್ಲಿ ಬೆಳೆಗಳ ಕಟಾವು ಆಗಿ ರಾಶಿ ಹಾಕಲಾಗಿದೆ, ಈ ಬೆಳೆಗಳ ಖರೀದಿಯ ವ್ಯಾಪಾರ ಜರುಗುವದು ಕ್ಯಾಶ್’ನಲ್ಲೇ, ಹಾಗಾಗಿ ಕಳೆದ  ಕೆಲ ದಿನಗಳಲ್ಲಿ ಎ.ಟಿ.ಎಮ್’ಗಳಿಂದ ಭಾರಿ ಪ್ರಮಾಣದಲ್ಲಿ ಕ್ಯಾಶ್ ಡ್ರಾ ಮಾಡಲಾಗಿದೆ ಎನ್ನಲಾಗುತ್ತಿದೆ. ಇದಲ್ಲದೆ ಇನ್ನೊಂದು ಪ್ರಮುಖ ಕಾರಣವೆಂದರೆ ಸರಕಾರ ತರಲುದ್ದೇಶಿಸಿರುವ ಫೈನಾನ್ಸಿಯಲ್ ರೆಸುಲಶನ್ ಐಂಡ್ ಡಿಪೊಸೀಟ್ ಇನ್ಷುರನ್ಸ್ ಬಿಲ್’ನ ಕುರಿತಾಗಿ ಜನತೆಯಲ್ಲಿ ಹುಟ್ಟಿಸಿದ ಭ್ರಮೆ. ಈ ಬಿಲ್ ಪಾಸಾಗಿ ಕಾನೂನಾಗಿ ಮಾರ್ಪಾಡಾದರೆ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗಿರುವ ಸಾಮಾನ್ಯರ ಹಣ ಸುರಕ್ಷಿತವಾಗಿರುವದಿಲ್ಲ ಮತ್ತು ಒಂದು ಪಕ್ಷ ಬ್ಯಾಂಕ್ ದಿವಾಳಿಯದಲ್ಲಿ ಜನತೆಯ ಹಣ ಮುಳುಗಿ ಹೋಗುವದೆಂದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಲ್’ನ ಕುರಿತಾಗಿ ಸತ್ಯಕ್ಕೆ ದೂರವಾದ ಉಹಾಪೋಹದ ಮಾತುಗಳನ್ನು ತೇಲಿಬಿಡಲಾಯಿತು. ಈ ಉಹಾಪೋಹದ ಮಾತುಗಳಿಗೆ ಕಿವಿಗೊಡದಿರಲು ಸರಕಾರ ಅನೇಕ ಬಾರಿ ಮನವಿ ಮಾಡಿ ಇಂತಹ ಸುಳ್ಳು ಸುದ್ದಿಯನ್ನು   ಖಂಡಿಸಿದೆ. ಆದರೂ ಜನ ಕಷ್ಟಪಟ್ಟು ಸಂಪಾದಿಸಿದ ಹಣದ ಅಸುರಕ್ಷತೆಯ ಭೀತಿಯಿಂದ ಎ.ಟಿ.ಎಂ’ಗಳಿಂದ ನಿರಂತರವಾಗಿ ಹಣ ತೆಗೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್’ಗಳಲ್ಲಿ ನಡೆದ ಭಾರಿ ಹಗರಣಗಳು ಜನರಲ್ಲಿ ಮನೆಮಾಡಿದ ಅಸುರಕ್ಷತೆಯ ಭಾವಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿವೆ. ಸಾವಿರಾರು ಕೋಟಿ ರೂಪಾಯಿಗಳ ಸಾಲ ತೆಗೆದುಕೊಂಡು ಬ್ಯಾಂಕ್’ಗಳಿಗೆ ಪಂಗನಾಮ ಹಾಕಿ ಕೆಲ ಖದೀಮರು ವಿದೇಶಕ್ಕೆ ಹಾರಿ ಹೋಗಿದ್ದರೆ. ಇವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾದರೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಪರಿಸ್ಥಿತಿಯಲ್ಲಿ ತಮ್ಮ ಹಣದ ಸುರಕ್ಷತೆಯ ಕುರಿತ ಜನತೆಯ ಆತಂಕ ಸಹಜವಾದದ್ದೇ ಆಗಿದೆ. ಈಗಿನ ನಿಯಮಗಳಂತೆ ಭಾರತದಲ್ಲಿಯ ಯಾವುದೇ ಬ್ಯಾಂಕ್ ದಿವಾಳಿಯಾದರೆ ಒಂದು ಲಕ್ಷ ರೂಪಾಯಿಯಷ್ಟು ನಿವೇಶಕರ ದುಡ್ಡಿಗೆ ಭಾರತ ಸರಕಾರವು ಜವಾಬ್ದಾರಿ ಹೊರುತ್ತದೆ. ಈ ಬಿಲ್ ಪಾಸ್ ಆದರೆ ಇರುವ ಒಂದು ಲಕ್ಷ ರೂಪಾಯಿಯ ಗ್ಯಾರಂಟಿಯನ್ನು  ಸರಕಾರ ಅಂತ್ಯಗೊಳಿಸಿವುದು ಅಥವಾ ಕಡಿಮೆ ಮಾಡುವದೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿ ಭ್ರಮೆ ಹುಟ್ಟಿಸಲಾಯಿತು. ಆದರೆ ಪರಿಣಿತರು ಹೇಳುವಂತೆ ಈ ಬಿಲ್ ಪಾಸ್ ಆದಲ್ಲಿ ಈ ಒಂದು ಲಕ್ಷ ರೂಪಾಯಿಗಳ ಮಿತಿಯನ್ನು ಹೆಚ್ಚಿಸಲೂ ಬಹುದು. ಕೆಲ ಆರ್ಥಿಕ ತಜ್ಞರೂ ಹೇಳುವಂತೆ ಬಹಳಷ್ಟು ಜನ 2000 ರೂಪಾಯಿಗಳ ನೋಟುಗಳನ್ನು ಬ್ಯಾಂಕ್ ಅಥವಾ ಎ.ಟಿ.ಎಂ’ಗಳಿಂದ ತೆಗೆದು ಕ್ಯಾಶ್’ನ ಜಮಾಖೋರಿತನದಲ್ಲಿ ತೊಡಗಿದ್ದಾರಂತೆ. ನೋಟು ಅಪನಗದೀಕರಣದ ನಂತರ ಅನೇಕರ ಕಾಳದಂಧೆಗೆ ಬ್ರೇಕ್ ಬಿದ್ದು ಕಪ್ಪು ಹಣದ ಹಾವಳಿ ತುಸು ಕಡಿಮೆಯಾಗಿತ್ತು. ಈ ಸಂದರ್ಭದಲ್ಲಿ ಇಂಥ ಕಾಳಧನಿಕರಿಗೆ ತಮ್ಮ ಬಿಳಿ ಹಣವನ್ನು ಬಳಸುವದು ಅನಿವಾರ್ಯವಾಗಿದ್ದರಿಂದ, ಬ್ಯಾಂಕ್ ಹಾಗೂ ಎ.ಟಿ.ಎಂ’ಗಳಿಂದ ಭಾರಿ ಪ್ರಮಾಣದ ಹಣವನ್ನು ತೆಗೆದು ಕ್ಯಾಶ್’ನ ಜಮಾವಣೆಗಿಳಿದರಬಹುದು! ಪಿ.ಎನ್.ಬಿ. ಬ್ಯಾಂಕ್ ಹಗರಣದ ತರುವಾಯ ಜನರಿಗೆ ಬ್ಯಾಂಕ್’ಗಳ ವಿಶ್ವಾಸರ್ಹತೆಯ ಮೇಲೆ  ನಂಬಿಕೆ ಕಡಿಮೆಯಾಗಿ ಹಣದ ಸುರಕ್ಷತೆಯ ಬಗ್ಗೆ ಸಂಶಯ ಮತ್ತು ಭಯ ಹುಟ್ಟಿ, ಪ್ರಾಯಶಃ ಜನರು ಬ್ಯಾಂಕ್’ಗಳಲ್ಲಿ ಹಣ ಜಮಾ ಮಾಡುವದನ್ನೇ ಕಡಿಮೆ ಮಾಡಿ ತಾವು ಬ್ಯಾಂಕ್’ಗಳಲ್ಲಿ ಹೂಡಿದ ಹಣವನ್ನು ತೆಗೆಯಲು ಪ್ರಾರಂಭಿಸಿರಬಹುದು!

ದೇಶದ ವಿವಿಧ ಪ್ರದೇಶಗಳಲ್ಲಿ ತಲೆದೂರಿದ ಕ್ಯಾಶ್’ನ ಕೊರತೆಯ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸ್ಪಷ್ಟೀಕರಣ ನೀಡುತ್ತಾ ದೇಶದಲ್ಲಿ ಯಾವುದೇ ರೀತಿಯಿಂದಲೂ ಕ್ಯಾಶ್’ನ ಕೊರತೆ ಇಲ್ಲವೆಂದು ಮತ್ತು ಆರ್.ಬಿ.ಐ. ಬಳಿಯ ಕರೆನ್ಸಿ ಚೆಷ್ಟ್’ನಲ್ಲಿ ಪರ್ಯಾಪ್ತವಾದ ನಗದು ಇದೆ ಎಂದು ಹೇಳಿದೆ.  ಆದರೆ ಭೂಮಿಗತ ವಸ್ತುಸ್ಥಿತಿಯನ್ನು ಅವಲೋಕಿಸಿದಾಗ ನಮಗೆ ವಾಸ್ತವಿಕತೆಯ ಅರಿವಾಗುತ್ತದೆ. ಜನತೆ ಖಾಲಿಯಾದ ಎ.ಟಿ.ಎಂ’ಗಳಿಂದ ಕ್ಯಾಶ್’ನ ಕೊರತೆಯಿಂದ ಸಂಕಷ್ಟಕ್ಕೀಡಾಗಿ ಪರದಾಡುತ್ತಿರುವದಂತೂ ಸುಳ್ಳಲ್ಲ. ಮದುವೆ, ಮುಂಜಿವೆಯ ಶುಭ ಸಮಾರಂಭಗಳಿಗೂ ಚುನಾವಣೆಯ ನೀತಿ ಸಂಹಿತೆಯ ಜೊತೆಗೆ ಕ್ಯಾಶ’ನ ಕೊರತೆಯ ಬಿಸಿ ತಟ್ಟಿ ಜನತೆಯನ್ನು ಕಂಗಾಲಾಗಿಸಿದೆ. ಅಕ್ಷತೃತೀಯಾದ ಶುಭ ಮುಹೂರ್ತದಲ್ಲಿ ಜರುಗಿದ ಸಕಲ ಸಮಾರಂಭಗಳಿಗೆ ವ್ಯಯಿಸಲು ಕೈಯಲ್ಲಿ ಕಾಸಿರಲಿಲ್ಲ,  ಆಸ್ಪತ್ರೆಯಲ್ಲಿ ಭರ್ತಿಯಾಗಿರುವ ಪರಿಜನರ ಬಿಲ್ ಕಟ್ಟಲೂ ಜನರ ಬಳಿ ಹಣವಿಲ್ಲ, ಜನರು ಅಕ್ಷರಶಃ ಕ್ಯಾಶ್’ಲೆಸ್ ಆಗಿದ್ದಾರೆ! ಕೆಲ ಜನರು ಹೇಳುವಂತೆ ನಮ್ಮ ರಾಜ್ಯದಲ್ಲಿಯ ಚುನಾವಣೆಯ ಕಾರಣದಿಂದ ಭಾರಿ ಪ್ರಮಾಣದ ಹಣವನ್ನು ಬ್ಯಾಂಕ್’ಗಳಿಂದ ಹೊರತೆಗೆಯಲಾಗಿದ್ದು, ಕ್ಯಾಶ್’ನ ಕೊರತೆಗೆ ಇದು ಒಂದು ಕಾರಣವಾಗಿರಬಹುದು! ಸಾಮಾನ್ಯವಾಗಿ ದೇಶದಲ್ಲಿ ಪ್ರತಿ ತಿಂಗಳು ಎ.ಟಿ.ಎಂ’ಗಳಿಂದ 20000 ಕೋಟಿ ರೂಪಾಯಿಗಳಷ್ಟು ಹಣವನ್ನು ಹೊರತೆಗೆಯಲಾಗುತ್ತದೆ. ಆದರೆ ಕಳೆದ ಹದಿನೈದು  ದಿನಗಳಲ್ಲಿ 45000 ಕೋಟಿ ರೂಪಾಯಿಗಳಷ್ಟು ಹಣವನ್ನು ಬ್ಯಾಂಕ್’ಗಳಿಂದ ಪಡೆಯಲಾಗಿದೆ. ಕ್ಯಾಶ್’ನ ಕುಂಡಲಿಯ ಮೇಲೆ ಕಾಳ ಕುಬೇರರ ಮಾಯಾಜಾಲ ಆವರಿಸಿದೆಯಾ? ಈ ಪರಿಸ್ಥಿತಿ ರಾತೋರಾತ್ರಿ ಹುಟ್ಟಿಕೊಂಡಿದೆಯಾ ಅಥವಾ ಇದರ ಹಿಂದೆ ವ್ಯವಸ್ಥಿತ ಪಿತೂರಿ ಏನಾದರೂ ನಡೆಡಿದೀಯಾ? ಈ ಪ್ರಶ್ನೆಗಳಿಗೆ ಸೂಕ್ತ ತನಿಖೆ ನಡೆದರೆ ಮಾತ್ರ ಉತ್ತರ ದೊರೆಯಬಹುದು. ಬ್ಯಾಂಕ್ ಹಾಗೂ ಸಂಬಂಧಿತ ಅಧಿಕಾರಿಗಳು ಹೇಳುವಂತೆ ಇನ್ನೂ ಎರಡು ಮೂರು ದಿನಗಳಲ್ಲಿ ಎ.ಟಿ.ಎಂ’ಗಳಲ್ಲಿ ಹಣ ಮೊದಲಿನ೦ತೆ ದೊರೆತೂ ಪರಿಸ್ಥಿತಿ ಸಾಮಾನ್ಯವಾಗಲಿದೆಯಂತೆ. ಏನಾದರೂ ಆಗಲಿ ಜನರ ಕಷ್ಟ ಪರಿಹಾರವಾಗಿ ಎ.ಟಿ.ಎಂ’ಗಳಲ್ಲಿ ಸಾಕಷ್ಟು ಹಣದೊರೆತು  ಸಾಮಾನ್ಯ ಜನರು ನಿಟ್ಟುಸಿರು ಬಿಡುವ೦ತಾಗಬೇಕು.

ಶ್ರೀನಿವಾಸ.ನಾ.ಪಂಚಮುಖಿ                             

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!