ಅಂಕಣ

ಆಯ್ಕೆ ನಮ್ಮದು.. ಅನುಭವವೂ ನಮ್ಮದೆ!

ದಲ್ಲಾಳಿ. ಮೊದಲೆಲ್ಲ ಈ ಪದವೊಂದನ್ನು ಕೇಳಿದರೆ ಏನೋ ಒಂದು ಬಗೆಯ ಆತಂಕ, ಭಯ. ಪೋಕರಿ, ಪುಂಡ, ಉಂಡಾಡಿ ಗುಂಡ ಇಂತಹ ಸಮಾನಾರ್ಥಗಳನ್ನು ನೀಡುವ ಹಲವು ಪದಗಳು ತಲೆಯೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತಿದ್ದವು. ಏನೋ ಒಂದು ಬಗೆಯ ಕಾನೂನುಬಾಹಿರವಾದ  ಕಳ್ಳ ಕೆಲಸವನ್ನು ಮಾಡುವ ವ್ಯಕ್ತಿಯೇನೋ ಎನ್ನುವ ಹಾಗೆ. ಏಕೇ ಹಾಗನಿಸುತ್ತಿತೋ, ಖಂಡಿತಾ ತಿಳಿಯದು. ಆದರೆ ಕಾಲ ಕಳೆದಂತೆ ಈ ದಲ್ಲಾಳಿ ಎಂಬ ಪದ ದಿನಜೀವನದ ಆಗುಹೋಗುಗಳಲ್ಲಿ ಅದೆಷ್ಟರ ಮಟ್ಟಿಗೆ ಹಾಸು ಹೊಕ್ಕಿದೆ ಎಂದರೆ, ಅಂದು ಈ ಪದವೊಂದನ್ನು ಕೇಳಿ ಮೂಡುತ್ತಿದ್ದ ಹಲವು ಅರ್ಥಗಳನ್ನು ನೆನೆದು ಇಂದು ನಗು ಬರತೊಡಗುತ್ತದೆ. ವಿಪರ್ಯಾಸವೇನೋ ಎಂಬಂತೆ ಪ್ರಸ್ತುತ ಅದೆಷ್ಟೋ ಗಣಿತ ಪುಸ್ತಕಗಳ ಸಮಸ್ಯೆಗಳಲ್ಲಿ ದಲ್ಲಾಳಿ ಎಂಬ ಪದದ ಉಲ್ಲೇಖ ಅತಿಸಹಜವಾಗಿದೆ ಅಲ್ಲದೆ ದಲ್ಲಾಳಿಕೆಗೂ ಪ್ರಸ್ತುತ ದಿನಗಳಲ್ಲಿ ಕೋರ್ಸ್ಗಳೂ ಸಾಕಷ್ಟು ಬಂದಿವೆ. ಪರಿಣಾಮ ಪ್ರತಿಯೊಂದು ವ್ಯವಹಾರದ ಅವಿಭಾಜ್ಯ ಅಂಗಗಳಲ್ಲಿ ಈತನೂ ಒಬ್ಬನೇನೋ ಎನ್ನುವಷ್ಟರ ಮಟ್ಟಿಗೆ ಇದು ಬೆಳೆದು ನಿಂತಿದೆ. ಇಂದು ದಲ್ಲಾಳಿ ಎಂದರೆ ಒಂತರ ಮುಸ್ಸಂಜೆ ಮಾತು ಚಿತ್ರದ ಸುಧೀಪ್ ನಂತಾಗಿಬಿಟ್ಟಿದ್ದಾನೆ. ಆಪತ್ಬಾಂಧವ ಎಂದರೂ ತಪ್ಪಾಗದು. ಸಂತೆ, ಸರ್ಕಾರೀ ಕಚೇರಿ, ಶಿಕ್ಷಣ ಸಂಸ್ಥೆ, ಷೇರು ಪೇಟೆ, ರಿಯಲ್ ಎಸ್ಟೇಟ್ ಅಲ್ಲದೆ ಇಂದು ದೇವಸ್ಥಾನಗಳಿಗೂ ಈ ದಲ್ಲಾಳಿ ಎಂಬ ಶಬ್ದ ಜೋತುಬಿದ್ದಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇಂಗ್ಲಿಷಿನಲ್ಲಿ ಅಂದವಾಗಿ ಕಾಣಲೇನೋ ಎಂಬಂತೆ ಬ್ರೋಕರ್!

ನಿಜ ಹೇಳಬೇಕೆಂದರೆ ಪ್ರಸ್ತುತ ಆರ್ಥಿಕ ವ್ಯವಸ್ಥೆಯನ್ನೆ ಹಾಳುಗೆಡವಿರುವ  ಹಲವು ಮಹಾಮಾರಿಗಳಲ್ಲಿ ಈ ಬ್ರೋಕರಿಕೆಯೂ ಒಂದು! ಅಲ್ಲದೆ ಮತ್ತೇನು? ಬೆಳೆಗಾರ ರೈತ. ಭಕ್ಷಿಸುವವ ಗ್ರಾಹಕ. ಇವೆರಡರ ಮಧ್ಯೆ ಡೊಂಬರಾಟ ಕುಣಿಯುವವನೇ ದಲ್ಲಾಳಿ. ಕೆಲಸ ಸರ್ಕಾರೀ ನೌಕರರದ್ದು. ಸೇವೆ ಸಲ್ಲಬೇಕಾಗಿರುವುದು ಜನಸಾಮಾನ್ಯರಿಗೆ. ಮಧ್ಯೆ ದಲ್ಲಾಳಿಯ ಕೊಂಡಿಯಾಕಯ್ಯ? ಎಂದರೆ ಉತ್ತರ ಮಾತ್ರ ತೇಲುವ ಗಾಳಿಗೆ ಪ್ರಿಯವಾದೀತು. ಮನೆ ಹಾಗೂ ತೋಟ ಅವನದ್ದು, ಮಾರುವವನಾತ. ಹಣ ಹಾಗೂ ಶ್ರಮ ಈತನದ್ದು, ಕೊಳ್ಳುವವನೀತ. ಆದರೂ ತಮಾಷೆಯೆಂದರೆ ಇಲ್ಲಿ ಇಬ್ಬರೂ ಆಯ್ದುಕೊಳ್ಳುವುದು ಬ್ರೋಕರ್’ಗಳನ್ನೇ. ಅದು ಸಹ ತಾವಾಗಿಯೇ! ಕೊಳ್ಳುವವ ಮಾರುವವನಲ್ಲಿ ಬಾಯಿಬಿಟ್ಟು ವ್ಯಾಪಾರ ಕುದುರಿಸಲು ಅದೇನೋ ಒಂದು ಬಗೆಯ ಹಿಂಜರಿತ, ಮುಜುಗರ. ಇಬ್ಬರೂ ನ್ಯಾಯಾಧಿಪತಿಗಳಿಗೆ ಚರ್ಚೆಯನ್ನು ಒಪ್ಪಿಸುವ ವಕೀಲರಂತೆ ದಲ್ಲಾಳಿಗಳನ್ನು ತೂಗುವ ತಕ್ಕಡಿಯೇನೋ ಎಂಬಂತೆ ಕಾಣಬಯಸುತ್ತಾರೆ. ಅಲ್ಲಿರುವ ಕಡ್ಡಿಯನ್ನು ಇಲ್ಲಿಗೆ ಎತ್ತಿಡುವಷ್ಟೂ ಕಾಯಕವನ್ನು ಮಾಡದೆ ಆತ ಬ್ರೋಕರಿಕೆಯ ಕೃಪಾಕಟಾಕ್ಷದಲ್ಲಿ ಕಮಿಷನ್ ಎಂಬ ಮಾನದಂಡದ ಮೂಲಕ ಭರಪೂರ ಹಣವನ್ನು ಗಳಿಸಿಕೊಳ್ಳುತ್ತಾನೆ. ಇದು ಆಸ್ತಿಪಾಸ್ತಿಯ ವಿಚಾರವಾದರೆ ಇನ್ನು ಸರ್ಕಾರೀ ಕಚೇರಿಗಳಲ್ಲಂತೂ ಬ್ರೋಕರಿಕೆಯ ಕರಾಳ ಛಾಯೆ ಹೇಳತೀರದು. ಒಂದು ಸೂಕ್ಷ್ಮಾತಿಸೂಕ್ಷ್ಮ  ಕೆಲಸಕ್ಕೂ ಮೈ ನೋವು, ಕಾಲುನೋವು, ಸರ್ ಇಲ್ಲ, ಮೇಡಂ ಇಲ್ಲ, ಇದ್ದರೂ ಅವರಿಗೆ ಹುಷಾರಿಲ್ಲ, ವಿವರಗಳು ತಪ್ಪಾಗಿ ಬರೆಯಲಾಗಿದೆ ಎಂಬ ನೂರೆಂಟು ಕಾರಣಗಳ ಹಿಂದೆ ಇರುವ ಏಕೈಕ ಕಾರಣ ಅಮಾಯಕರ ಕೈಯಿಂದ  ಒಂದಿಷ್ಟು ಹಣವನ್ನು ಪೀಕುವಿಕೆ. ಇವರುಗಳ ಈ ತಳ-ಬುಡ ಇಲ್ಲದ ಸಾಬೂಬಿಕೆ ಸೋತ ಜನಸಾಮಾನ್ಯ ಕೊನೆಗೆ ಆಯ್ದುಕೊಳ್ಳುವುದು ಕೆಲಸವಿಲ್ಲದೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸರ್ಕಾರಿ ಕಚೇರಿಗಳ ಹೊರಗೆ ಅಲೆಯುವ ಆಪತ್ಬಾಂದವರನ್ನು, ಅರ್ಥಾತ್ ದಲ್ಲಾಳಿಗಳನ್ನು. ಅಲ್ಲಿನ ದಲ್ಲಾಳಿಗಳೋ ಇಡೀ ಸರ್ಕಾರೀ ಕಚೇರಿಯೇ ತಮ್ಮದೆಂಬಂತೆ ತನಗೆ, ಸಬೂಬು ನೀಡಿದವರಿಗೆ, ಹುಷಾರಿಲ್ಲದ್ದ ಸರ್ ಹಾಗು ಮೇಡಂಗಳಿಗೆ  ಎಂಬಂತೆ ಎಲ್ಲರಿಗೂ ಸಾಕೆನ್ನುವಷ್ಟು ಕಮಿಷನ್ ಅನ್ನು ಇರಿಸಿಕೊಂಡು ನೂರು ರೂಪಾಯಿಗಳಲ್ಲಿ ಆಗುವ ಕೆಲಸವನ್ನು ಸಾವಿರ ರೂಪಾಯಿಗಳಿಗೆ ಸರಿದೂಗಿಸಿ ಹಣವನ್ನು ಜಡಿಯುತ್ತಾರೆ.  ಹೀಗೆ ಎದ್ವಾ-ತದ್ವಾ ಹಣವನ್ನು ಪೀಕಿದರೆ ನೋಡಿ ಎರಡೇ ದಿನಗಳಲ್ಲಿ ಕೆಲಸ ಕಂಪ್ಲೀಟ್! ಅಂತಹ ಅಚ್ಚುಕಟ್ಟಾದ ವ್ಯವಸ್ಥೆ ಇಂದು ನಮ್ಮ ಕಣ್ಣ ಮುಂದೆಯೇ, ನಮ್ಮದೇ ಸರ್ಕಾರೀ ಕಚೇರಿಗಳಲ್ಲಿ ರಾಜಾರೋಷವಾಗಿ ನಡೆಯುತ್ತಿವೆ. ಅಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ವಿಷಯವೆಂದರೆ ಹಣ ಇರುವವರೇನೋ ಇಂತಹ ಬ್ರೋಕರ್ ಮಹಾಷಯರ ಸಹಾಯವನ್ನು ಪಡೆದು, ಅವರು ಕೇಳಿದಷ್ಟು ಹಣವನ್ನು ಸುರಿದು ಕೆಲಸವನ್ನು ಮಾಡಿಕೊಳ್ಳುತ್ತಾರೆ. ಆದರೆ ಇಂದು ಬೆವರು ಸುರಿಸಿದರೇನೇ ನಾಳೆಯ ಅನ್ನವನ್ನು ಕಾಣುವ ಸಾಮಾನ್ಯರ ಕತೆಯೇನು? ಹಣವನ್ನು ಕಂಡರೆಯೇ ಉಸಿರಾಡುವ ಖಯಾಲಿಯ ಬೊಜ್ಜುಗಟ್ಟಿದ ನೌಕರಶಾಯಿ ವ್ಯವಸ್ಥೆಯನ್ನು ಹುಟ್ಟುಹಾಕಿರುವವರು ನಾವೆಯೇ. ಇಂದು ಅದೇ ವ್ಯವಸ್ಥೆ ನಮ್ಮ ಬುಡಕ್ಕೇ ಬೆಂಕಿಯಿಡುವಂತಾಗಿರುವಾಗ ಮಾತ್ರ ಬೊಬ್ಬೆಯೊಡೆಯುತ್ತಿದ್ದೇವೆ.

ಮಾರುಕಟ್ಟೆಯ ವಿಚಾರಕ್ಕೆ ಬಂದಾಗ ಕಾಫಿ ಬೆಳೆಯ ಇತಿಹಾಸವನ್ನು ಒಮ್ಮೆ ಗಮನಿಸೋಣ. ಸುಮಾರು 90ರ ದಶಕದವರೆಗೂ ಕಾಫಿ ಬೆಳೆಗಾರ ಅಂದು ತಾನು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರುವಂತೆಯೇ ಇರಲಿಲ್ಲ. ತಾವು ಬೆಳೆದದ್ದೆಲ್ಲವನ್ನೂ ಒಂತಿಬ್ಬರು ಮಧ್ಯವರ್ತಿ ಮಹಾಶಯರುಗಳಿಗೆ (ಕಾಫಿ ಬೋರ್ಡ್) ನೀಡಿ ಅವರು ಕೊಟ್ಟಷ್ಟನ್ನು ಪಡೆದುಕೊಳ್ಳಬೇಕಾಗಿದ್ದಿತು. ಲೇಖಕರಾದರೂ ಸ್ವತಃ ಕಾಫಿ ಬೆಳೆಗಾರರಾಗಿದ್ದ ಮೂಡಿಗೆರೆಯ ಪೂರ್ಣ ಚಂದ್ರ ತೇಜಸ್ವಿಯವರು ಅಂದು ಈ ಮಧ್ಯವರ್ತಿ ಹಾವಳಿಯ ಮೇಲೆ ಬೇಸತ್ತು, ಅಂತಾರಾಷ್ಟ್ರೀಯ ಮಟ್ಟದಲ್ಲಿ  ಮೂಟೆಗೆ (50 ಕೆಜಿ ಯ ಬ್ಯಾಗುಗಳು) ಐದರಿಂದ ಆರುಸಾವಿರ  ರೂಪಾಯಿಗಳಿದ್ದರೂ ಬೆಳೆಗಾರರಿಗೆ ಕಾಫಿ ಬೋರ್ಡ್ ಕೊಡುತ್ತಿರುವುದು ಕೇವಲ ಎಂಟನೂರರಿಂದ ಒಂಬೈನೂರು ರೂಪಾಯಿಗಳು ಮಾತ್ರ. ಕೂಡಲೇ ಮುಕ್ತ ಮಾರುಕಟ್ಟೆಗೆ ಅವಕಾಶ ಸಿಗದಿದ್ದರೆ ತಾವು ಸಂತೆಯಲ್ಲಿ ನಿಂತು ಕಾಫಿಯನ್ನು ಮಾರುವುದಾಗಿ ಗುಡುಗಿದ್ದರು. ಕೂಡಲೇ ಕಕ್ಕಾಬಿಕ್ಕಿಯಾದ ಕಾಫಿ ಬೋರ್ಡಿನ ಅಧಿಕಾರಿಗಳು ಮರುಕ್ಷಣವೇ ಸಂಧಾನವನ್ನೂ ಮಾಡಿದರೂ ಅಂದು ಹಚ್ಚಿಕೊಂಡ ಕಿಚ್ಚು ಕೂಡಲೇ ಶಮನಗೊಳ್ಳಲ್ಲಿಲ್ಲ. ಕ್ರಮೇಣ ದೇಶ ನೇರ ವಿದೇಶಿ ಹೂಡಿಕೆಯ ಬಕಪಕ್ಷಿಯಾಗತೊಡಗಿದಾಗ ಕಾಫಿ ಮಾರುಕಟ್ಟೆಯೂ  ಮುಕ್ತ ವ್ಯಾಪಾರವಾಗಿ ಪ್ರತಿ ಬ್ಯಾಗಿಗೆ ಸಾವಿರ ರೂಪಾಯಿಯಿದ್ದ ಬೆಲೆ ಕೂಡಲೇ ಎಳರಿಂದ ಎಂಟು ಸಾವಿರಗಳಿಗೂ ಹೋಗಿರುವುದುಂಟು. ಒಂದಲ್ಲ ಎರಡಲ್ಲ ಬರೋಬ್ಬರಿ ಏಳರಿಂದ ಎಂಟು ಪಟ್ಟು ಹಣವನ್ನು ಮಧ್ಯವರ್ತಿ ಜಾಲ ಅಂದು ಆವರಿಸಿಬಿಟ್ಟಿದಿತು. ಕಾಫಿ ಬೆಳೆಗಾರರರು ನಿಟ್ಟುಸಿರು ಬಿಟ್ಟರು. ತಮ್ಮ ಬೆಳೆಯ ನಿಜಮೌಲ್ಯವನ್ನು ಅರಿಯತೊಡಗಿದರು.

ಇದೇ ಬಗೆಯ ಮಹಾ ಬದಲಾವಣೆ ಇಂದು ಇತರೇ ವಲಯಗಳಲ್ಲೂ ಬೇಕಾಗಿದೆ. ಹೆಚ್ಚಾಗಿ ನಗರಸನಭೆ, ಪುರಸಭೆಯಂತಹ ಸರ್ಕಾರೀ ಕಚೇರಿಗಳಲ್ಲಿ. ಕಚೇರಿಯ ಗುಮಾಸ್ತನನ್ನೂ ಅಣ್ಣ ಅಪ್ಪ ಎಂದು ಸಂಭೋದಿಸುತ್ತಾ ಮಾತಿಗಿಳಿಯುವ ಅಮಾಯಕರ ಶೋಷಣೆಗೆ ಇಲ್ಲಿ ಕೊನೆಯೇ ಇಲ್ಲದಂತಾಗಿದೆ. ಅವರ ಪರವಾಗಿ ವಾದಿಸಬೇಕಾದವರು ಇಂದು ಕ್ಯಾರೇ ಎನ್ನದೆ ಅಡ್ಡಾಡಿಕೊಂಡಿದ್ದಾರೆ. ಬಡಜನರ ಬೆವರಿನ ಸರ್ಕಾರದ ಹಣವನ್ನು ಸಂಬಳ ರೂಪದಲ್ಲಿ ಪಡೆಯುವುದಲ್ಲದೆ ಕೆಲಸ ಪೂರ್ಣಗೊಳ್ಳಲು ಅದೇ ಬೆವರಿನ ಮತ್ತಷ್ಟು ಹಣವನ್ನು ಗಿಂಬಳವಾಗಿ ನೀಡಲೇಬೇಕು. ಅದೂ ಕೂಡ ದಲ್ಲಾಳಿಗಳ ಹದ್ದುಬಸ್ತಿನಲ್ಲಿಯೇ. ಸೋಜಿಗವೋ ಏನೋ ಹಲವು ಬಾರಿ ಇಷ್ಟೆಲ್ಲಾ ‘ಅಂಶ’ಗಳನ್ನೂ ಪಾಲಿಸಿಯೂ ಜನಸಾಮನ್ಯ ಕೊನೆಗೆ ವ್ಯಥೆಪಡುವುದು ಮಾತ್ರ ತಪ್ಪುವುದಿಲ್ಲ. ಇದ್ಯಾವ ಬಗೆಯ ಡೆಮಾಕ್ರಸಿ ಸ್ವಾಮಿ? ಬಡಪಾಯಿಯ ಬವಣೆಗೆ ಅಂತ್ಯವೆಂದು?  ಪ್ರತಿ ಚುನಾವಣೆಯಲ್ಲೂ ಮಾಡುವ ಅದೇ ತಪ್ಪನ್ನು ಎಲ್ಲಿಯವರೆಗೂ ಜನಸಾಮಾನ್ಯ ಪುನರಾವರ್ತಿಸುತ್ತಾನೆಯೋ ಅಲ್ಲಿಯವರೆಗೂ ಫಲಾನುಭವಿಯೂ ಅವನೇ.  ಆಯ್ಕೆ ನಮ್ಮದು. ಅನುಭವವೂ ನಮ್ಮದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!