Featured ಅಂಕಣ

ಮರಳ ನೆಲದಲ್ಲಿ ಅರಳಿ ನಿಂತಿತ್ತು ಒಂದು ಮರ

ಪ್ರವಾಸಿಯೊಬ್ಬ ದಾರಿ ತಪ್ಪಿದ್ದಾನೆ. ಕೈಯಲ್ಲಿ ದಿಕ್ಸೂಚಿ, ನಕಾಶೆ ಯಾವುದೂ ಇಲ್ಲ. ಸ್ಮಾರ್ಟ್ ಫೋನ್ ಇದ್ದರೂ ಅದಕ್ಕೆ ಎರಡು ದಿನಗಳಿಂದ ಸಿಗ್ನಲ್ಲೇ ಸಿಕ್ಕಿಲ್ಲ. ಇನ್ನೇನು ಒಂದೆರಡು ತಾಸಿನಲ್ಲಿ ಅದು ಬ್ಯಾಟರಿ ಇಳಿದು ಸಂಪೂರ್ಣ ನಿಷ್ಕ್ರಿಯವೂ ಆಗಿಹೋದೀತು. ಯಾರನ್ನಾದರೂ ಕೇಳೋಣವೆಂದರೆ ಅಕ್ಕಪಕ್ಕದಲ್ಲಿ ನರಪಿಳ್ಳೆ ಬಿಡಿ, ನರಿಗಳ ಊಳು ಕೂಡ ಇಲ್ಲದಂಥ ಜಾಗ! ಅಲೆಮಾರಿ ದೋಚುಕಾರರ ಕೈಗೆ ಸಿಕ್ಕಿ ತನ್ನದೆಂಬ ಎಲ್ಲವನ್ನೂ… ಅಂಗಿ-ಪ್ಯಾಂಟು ಹೊರತುಪಡಿಸಿ ಎಲ್ಲವನ್ನೂ… ಕಳೆದುಕೊಂಡ ಪ್ರವಾಸಿಗೆ ಈಗ ಹೇಗಾದರೂ ಮಾನವಜೀವಿಗಳು ಕಣ್ಣಿಗೆ ಬಿದ್ದರೆ ಸಾಕಾಗಿದೆ. ನೂರಾರು ಒಂಟೆಗಳ ಸಾಲುಸಾಲು ಹೋಗುವ ಕ್ಯಾರವಾನ್‍ಗಳಲ್ಲಿ ಒಂದಾದರೂ ಕಣ್ಣಿಗೆ ಬಿದ್ದರೆ ಅವನ ಜೀವ ಉಳಿದಂತೆ. ಆದರೆ, ಅಂಥಾದ್ದೊಂದನ್ನು ಕಾಣುವುದಾದರೂ ಎಲ್ಲಿ?

ಇಂಗ್ಲೀಷಿನಲ್ಲಿ “ಸೀ ಇಟ್ ಟು ಬಿಲೀವ್ ಇಟ್” ಎಂಬ ಮಾತಿದೆ. “ನೀವು ಅದನ್ನು ನಂಬಬೇಕಾದರೆ ನೋಡಬೇಕು. ನೋಡದೆ ಇದ್ದರೆ ನಂಬಲಿಕ್ಕೇ ಸಾಧ್ಯವಿಲ್ಲ” ಎಂಬಂಥ ಸನ್ನಿವೇಶಗಳಿಗೆ ಬಳಕೆಯಾಗುವ ಮಾತದು. ಆಫ್ರಿಕಾದ ಮರುಭೂಮಿಗೂ ಆ ಮಾತನ್ನು ಅನ್ವಯಿಸಬಹುದು. ಯಾಕೆಂದರೆ ನಮ್ಮೂರು, ನಮ್ಮ ಕೆರೆ, ನಮ್ಮ ಆಟದ ಮೈದಾನ ಎನ್ನುತ್ತ ಬಾವಿಯೊಳಗಿನ ಕಪ್ಪೆಯಂತೆ ಅಷ್ಟಿಷ್ಟು ಜಗತ್ತನ್ನು ಮಾತ್ರ ನೋಡಿರುವ ನಮಗೆ ಸಹಾರಾ ಮರುಭೂಮಿಯ ಉದ್ದಗಲಗಳ ಅಂದಾಜು ಕಣ್ಣಾರೆ ಕಾಣದೆ ಸಿಗುವಂಥಾದ್ದಲ್ಲ. ಆಫ್ರಿಕಾ ಖಂಡ, ಭೂಪಟದ ಅರ್ಧ ಭಾಗವನ್ನು ಆವರಿಸಿಕೊಳ್ಳಬಲ್ಲಷ್ಟು ಬೃಹತ್ ಭೂಖಂಡ. ಆಫ್ರಿಕಾದೊಳಗೆ ಒಂದಿಡೀ ಯುರೋಪನ್ನೂ ಒಂದಿಡೀ ಉತ್ತರ ಅಮೆರಿಕಾವನ್ನೂ ತುರುಕಿಸಬಹುದು. ಅಷ್ಟೇ ಅಲ್ಲ; ಅವೆರಡನ್ನು ತುಂಬಿಸಿದ ಮೇಲೆ ಉಳಿವ ಜಾಗದಲ್ಲಿ ಚೀನಾ ಮತ್ತು ಭಾರತ ಎರಡನ್ನೂ ತಕರಾರಿಲ್ಲದೆ ಕೂರಿಸಬಹುದು! ಭಾರತ ಮತ್ತು ಚೀನಾ – ಎರಡನ್ನೂ ಮರಳಿಂದ ತುಂಬಿಸಿಬಿಟ್ಟರೆ ಎಷ್ಟೋ ಅಷ್ಟು ದೊಡ್ಡದು ಆಫ್ರಿಕಾದ ಸಹಾರಾ ಮರಳುಗಾಡು! ಅಂಥದೊಂದು ಭೂಭಾಗದ ನಟ್ಟನಡುವಲ್ಲಿ ನಕಾಶೆಯನ್ನೋದಲು ಯಾವ ಸಾಧನಗಳೂ ಇಲ್ಲದೆ ನಿಂತಿರುವವನ ಪರಿಸ್ಥಿತಿ ಹೇಗಿರುತ್ತದೆ? ಸುಮ್ಮನೆ ಕಲ್ಪಿಸಿಕೊಳ್ಳಿ! ನಮ್ಮ ಕಥಾನಾಯಕ ಪ್ರವಾಸಿಯ ಅವಸ್ಥೆ ಅಂಥಾದ್ದು!

ಸುತ್ತಮುತ್ತ ಎತ್ತೆತ್ತ ನೋಡಿದರೂ ಮರಳೇ ಮರಳು ತುಂಬಿರುವ ಆ ಸುಡುಗಾಡಲ್ಲಿ ನಡೆದೂ ನಡೆದು ಅಲೆದೂ ಅಲೆದು ಇನ್ನೇನು ಕುಸಿದುಬೀಳಬೇಕೆಂಬ ಸ್ಥಿತಿಯಲ್ಲಿದ್ದಾಗ ಆತನಿಗೆ ದೂರದಲ್ಲೊಂದು ಮರ ಕಾಣಿಸುತ್ತದೆ. ಮರಳುಗಾಡಲ್ಲಿ ಮರ! ಸಮುದ್ರದ ನಡುಮಧ್ಯದಲ್ಲಿ ಗೋಪುರ ನಿಲ್ಲಿಸುವುದು ಎಷ್ಟು ಅಸಂಭವನೀಯವೋ ಹಾಗೆ ಗರಿಕೆಯೂ ಮೊಳೆಯದ ನೆಲದಲ್ಲಿ ಒಂದು ವೃಕ್ಷ ತಲೆಯೆತ್ತಿನಿಂತಿದೆ ಎಂಬುದನ್ನು ಅವನಿಗೆ ನಂಬಲೇ ಆಗುವುದಿಲ್ಲ. ಆದರೂ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದವನು ಜೊಂಡು ಹಿಡಿದು ಬದುಕುವ ಆಸೆ ಕಂಡಂತೆ ಆ ಪ್ರವಾಸಿ ಮರದತ್ತ ಆಸೆಯಿಂದ ಕಾಲೆಳೆದುಕೊಂಡು ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ ಮರದ ಬುಡದಲ್ಲಿ ಒಂದು ಸಣ್ಣ ಚರ್ಮದ ಚೀಲದಲ್ಲಿ ನೀರು! ಯಾರೋ ಪುಣ್ಯಾತ್ಮರು ತನ್ನಂತೆ ದಾರಿ ತಪ್ಪಿ ಅಲೆದು ಬರುವವರಿಗಾಗಿಯೇ ಉಳಿಸಿಹೋಗಿರುವ ಜೀವಾಮೃತ! ಅದನ್ನು ತೊಟ್ಟೂ ಬಿಡದೆ ಕುಡಿದ ಮೇಲೆ ಆತನಿಗೆ ಅಲ್ಲೇ ಪಕ್ಕದಲ್ಲಿ ಒಂದು ಪೊಟ್ಟಣದಲ್ಲಿ ಎರಡು ರೊಟ್ಟಿಗಳನ್ನು ಕಟ್ಟಿ ಇಟ್ಟದ್ದೂ ಕಾಣಿಸುತ್ತದೆ. ಅವನ್ನು ಮುರಿದು ಬಾಯಿಗಿಟ್ಟರೆ ಅದಕ್ಕಿಂತ ರುಚಿಕಟ್ಟಾದ ಮೃಷ್ಟಾನ್ನ ಭೋಜನ ಬೇರಿಲ್ಲ ಅನ್ನಿಸುತ್ತದೆ ಅವನಿಗೆ. ಇಂದೋ ನಿನ್ನೆಯೋ ಒಂದು ದೊಡ್ಡ ಕ್ಯಾರವಾನ್ ಈ ದಾರಿಯಲ್ಲಿ ಬಂದು, ಇಲ್ಲಿ ತಂಗಿ, ನಂತರ ಹೊರಟಿದೆ ಎಂಬುದು ಅವನಿಗೆ ಖಚಿತವಾಗುತ್ತದೆ. ಅದು ಹೊರಟ ದಾರಿಯಲ್ಲಿ ಮುನ್ನಡೆದರೆ ಆ ಕ್ಯಾರವಾನನ್ನು ಕೂಡಿಕೊಳ್ಳಬಹುದು. ಇಲ್ಲವೇ, ಅದೇ ಮರದ ಬುಡದಲ್ಲಿ ಅರ್ಧ ಅಥವಾ ಒಂದು ದಿನ ಕಳೆದರೆ ಮುಂದಿನ ಕ್ಯಾರವಾನನ್ನು ಬರಮಾಡಿಕೊಳ್ಳಬಹುದು. ಇನ್ನೇನು ಸತ್ತೆ ಎಂದು ಭೂಮಿಯ ಆಸೆ ಬಿಟ್ಟಿದ್ದ ಪ್ರವಾಸಿ, ಇದೀಗ ಆ ಮರದ ಬುಡದಲ್ಲಿ ಭೂಮಿಗೆ ಗಟ್ಟಿಯಾಗಿ ತಳವೂರಿ ಕೂರುತ್ತಾನೆ, ಮುಂದಿನ ದಾರಿಯೇನೆಂದು ನಿರೀಕ್ಷಿಸುತ್ತ.

ಅಂದ ಹಾಗೆ, ನಾನು ಹೇಳಹೊರಟಿರುವುದು ಆ ಪ್ರವಾಸಿಯ ಬಗ್ಗೆ ಅಲ್ಲ, ಬದಲು ಆ ಮರದ ಬಗ್ಗೆ! ಅದೊಂದು ಅಕೇಶಿಯಾ ಮರ. ಎತ್ತರ ಬಹಳವೇನಿಲ್ಲ, ಕೇವಲ ಹತ್ತು ಅಡಿಗಳಷ್ಟೇ. ಅಷ್ಟೆಂದರೆ ಎಷ್ಟು? ನಮ್ಮ ಮನೆಗಳೆದುರಿನ ಕರವೀರ, ಸಂಪಿಗೆ, ಮಂದಾರ ಹೂಗಳ ಮರಗಳೆಷ್ಟೋ ಅಷ್ಟೇ ಎತ್ತರದ್ದು. ಹಾಗಾದರೆ ಅದರಲ್ಲೇನು ವಿಶೇಷ ಎನ್ನುತ್ತೀರಿ ತಾನೆ? ಆ ಇಡೀ ವಲಯ ಅದೆಷ್ಟು ಸಪಾಟಾಗಿ ಸಮತಟ್ಟಾಗಿದೆಯೆಂದರೆ ಐದು ಮೈಲಿ ದೂರದಲ್ಲಿರುವವನಿಗೆ ಕೂಡ ಆ ಪುಟಾಣ  ಮರ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ! ಸುತ್ತಮುತ್ತ ಗುರುತಿಡಲು ಏನೇನೂ ಇಲ್ಲದ ಆ ಮರಳುಗಾಡಲ್ಲಿ ಆ ಮರದ ಗುರುತಿಲ್ಲದ ಸ್ಥಳೀಯರೇ ಇಲ್ಲ. ಅಸಲಿಗೆ ಆ ಮರದ ಅಕ್ಕಪಕ್ಕ ಒಂದೆರಡಲ್ಲ, ಹತ್ತು ಮೈಲಿ ಸುತ್ತಾಡಿದರೂ ನಿಮಗೆ ಅಂಥ ಇನ್ನೊಂದು ಮರ ಕಾಣಿಸದು. ಆ ಮರದಿಂದ ಯಾವುದೇ ದಿಕ್ಕಿನಲ್ಲಿ 250 ಮೈಲಿಗಳಷ್ಟು ದೂರ ಹೋದರೂ ಒಂದೇ ಒಂದು ಮರದ ಸುಳಿವೂ ಆ ಪ್ರದೇಶದಲ್ಲಿಲ್ಲ! ಅದೇ ಕಾರಣಕ್ಕೆ ಆ ಮರವನ್ನು ಆ ದೇಶದ ಎಲ್ಲ ಭೂಪಟಗಳಲ್ಲಿ ಒಂದು ಚುಕ್ಕೆ ಇಟ್ಟು ಗುರುತಿಸುತ್ತಾರೆ. ಭೂಪಟ ಅದೆಷ್ಟೇ ಸಣ್ಣದಿರಲಿ, ಬರೆಯುವಾಗ ಯಾವ ನದಿ, ಪಟ್ಟಣ, ಹಳ್ಳಿಯನ್ನಾದರೂ ಅವರು ಬಿಟ್ಟಾರು; ಆದರೆ ಆ ಒಂದು ಚುಕ್ಕಿಯನ್ನಿಟ್ಟು ಮರವನ್ನು ಗುರುತಿಸುವುದನ್ನು ಮಾತ್ರ ತಪ್ಪಿಸಲಾರರು! ಮರವನ್ನು ಕೇಂದ್ರವಾಗಿಟ್ಟುಕೊಂಡು 400 ಕಿಲೋಮೀಟರ್ ತ್ರಿಜ್ಯವಿರುವ ವೃತ್ತ ರಚಿಸಿದರೆ, ಆ ವೃತ್ತದೊಳಗಿನ ಪ್ರದೇಶದಲ್ಲಿ ಒಂದೇ ಒಂದು ವೃಕ್ಷವೂ ಸಿಗದು ಎಂಬ ಕಾರಣಕ್ಕೇ ಆ ಮರ ವಿಶೇಷವೆನಿಸಿತು, ಪ್ರಸಿದ್ಧವಾಯಿತು. ಜನ ಅದನ್ನು ಟೆನಾರೆಯ ವೃಕ್ಷ – ಟ್ರೀ ಆಫ್ ಟೆನಾರೆ ಎಂದು ಕರೆದರು. 1939ರಲ್ಲಿ ಅದನ್ನು ಕಂಡು ಪುಳಕಿತನಾದ ಫ್ರೆಂಚ್ ಇತಿಹಾಸಜ್ಞ ಮೈಕೆಲ್ ಲೆಸ್ಯೂ ಎಂಬಾತ “ಯೂ ಮಸ್ಟ್ ಸೀ ಇಟ್ ಟು ಬಿಲೀವ್ ಇಟ್. ಅಂಥದೊಂದು ವಿಚಿತ್ರ ಇದೆಯೆಂದು ನೀವು ನಂಬಬೇಕಾದರೆ ಆ ವೃಕ್ಷವನ್ನು ಅದರ ವಿಸ್ತಾರವಾದ ಮರಳುಗಾಡಿನ ಹಿನ್ನೆಲೆಯಲ್ಲಿ ಕಣ್ಣಾರೆ ನೋಡಬೇಕು” ಎಂದು ಉದ್ಗರಿಸಿದ.

ಟೆನಾರೆಯ ವೃಕ್ಷ ಇದ್ದದ್ದು ಆಫ್ರಿಕಾದ ನಡುವಲ್ಲಿ; ಅಲ್ಜೀರಿಯಾ, ಚಾಡ್, ಲಿಬಿಯಾ, ನೈಜೀರಿಯಾ, ಮಾಲಿ ಮುಂತಾದ ದೇಶಗಳಿಂದ ಸುತ್ತುವರಿದಿರುವ ನೈಜರ್ ಎಂಬ ದೇಶದಲ್ಲಿ. ನೈಜರ್‍ನ ಬಹುತೇಕ ಭಾಗವನ್ನು ಆವರಿಸಿರುವುದು ಮರುಭೂಮಿಯೇ. ಅಂಥದೊಂದು ವಿಶಾಲ ಉಸುಕಿನ ನೆಲದ ನಟ್ಟನಡುವಲ್ಲಿ ಹತ್ತಡಿಯ ಆ ವೃಕ್ಷ ಇತ್ತು. ಅದನ್ನು ಅಲ್ಲಿ ಯಾರು ನೆಟ್ಟರು? ಮರಳಿನ ಮಹಾ ಹಾಸಿಗೆಯ ನಡುವಲ್ಲಿ ಅದರ ಬೀಜ ಬಿತ್ತಿದವರಾದರೂ ಯಾರು? ಯಾರಿಗೂ ಗೊತ್ತಿರಲಿಲ್ಲ. ಆಫ್ರಿಕಾದ ಬುಡಕಟ್ಟು ಜನ, ಆ ಮರದ ಮೇಲೆ ಹಲವು ಜನಪದ ಕತೆಗಳನ್ನು ಕೇಳಿದ್ದರು. ಆ ಕತೆಗಳನ್ನೆಲ್ಲ ಅವರ ಅಜ್ಜಂದಿರು ತಮ್ಮ ಅಜ್ಜಂದಿರ ಬಾಯಿಯಿಂದ ಕೇಳಿದ್ದರಂತೆ. ಅಂದರೆ, ಒಂದೈದಾರು ತಲೆಮಾರುಗಳ ಹಿಂದಿನವರು ಕೂಡ ಆ ಪ್ರದೇಶದಲ್ಲಿ ಆ ಮರವನ್ನು ಕಂಡಿದ್ದರು. ಅವರು ಕಂಡಾಗಲೂ ಆ ಮರವಷ್ಟೇ ಅಲ್ಲಿತ್ತೇ ಹೊರತು ಅದರ ಆಚೀಚೆ ಅದರ ದಾಯಾದಿಗಳು ಯಾರೂ ಇರಲೇ ಇಲ್ಲ. ಮರದ ಬಗ್ಗೆ ಕುತೂಹಲಗೊಂಡ ಸಸ್ಯಶಾಸ್ತ್ರಜ್ಞರು ಬಂದು ಅದರ ವಯಸ್ಸು ಅಳೆದಾಗ ತಿಳಿಯಿತು; ಅದು ಕನಿಷ್ಠ 300 ವರ್ಷಗಳಿಂದ ಅಲ್ಲಿ ನಿಂತಿದೆ! ಸಹಾರಾ ಮರುಭೂಮಿ – ಸುಮಾರು ಐನೂರು ವರ್ಷಗಳ ಹಿಂದೆ ಈಗಿರುವ ಸ್ಥಿತಿಯಲ್ಲಿ ಇರಲಿಲ್ಲ. ಮರುಭೂಮಿಯೇ ಆದರೂ ಅದರ ವಿಸ್ತಾರ ಈಗಿನಷ್ಟಿರಲಿಲ್ಲ. ನೀರಿನ ಪಸೆ ಹೆಚ್ಚೇ ಇತ್ತು. ಅಂಥ ಕಾಲದಲ್ಲಿ ನೈಜರ್ ದೇಶದೊಳಗೂ ಅಷ್ಟಿಷ್ಟು ವನಸಿರಿಯಿತ್ತು. ಮರಗಿಡ ಇದ್ದವು. ಆದರೆ ಬರಬರುತ್ತ ಬರದ ಛಾಯೆಯೇ ಹೆಚ್ಚಾಗಿ ಮಳೆಯ ಮೋಡಗಳ ಭೇಟಿ ಕಡಿಮೆಯಾಗಿ ಆ ದೇಶದ ಭೌಗೋಳಿಕ ಪರಿಸ್ಥಿತಿ ಬದಲಾಯಿತು. ಮರುಭೂಮಿ ವಿಸ್ತರಿಸಿತು. ಒಂದಾನೊಂದು ಕಾಲದಲ್ಲಿ ಹಸಿರು ಎಲೆ, ಹಳದಿ ಹೂವಿಂದ ತುಂಬಿಕೊಂಡು ಯಥೇಚ್ಛವಾಗಿದ್ದ ಅಕೇಷಿಯಾ ಮರಗಳು ಕಡಿಮೆಯಾದವು. ವಾರ್ಷಿಕ 2 ಸೆಂಟಿಮೀಟರ್‍ಗಿಂತಲೂ ಕಡಿಮೆ ಮಳೆ ಬೀಳುವ ನೆಲದಲ್ಲಿ ಅವು ಹೇಗಾದರೂ ಬದುಕಬೇಕು? ಮರಗಳು ಒಂದೊಂದಾಗಿ ನಶಿಸಿಹೋದವು. ಮಣ್ಣಿನ ನೆಲ ಮರಳಿಂದ ಮುಚ್ಚಿಕೊಂಡಿತು. ಎಲ್ಲ ಬದಲಾವಣೆಗಳಾಗುತ್ತ ಇದ್ದಂತೆ ಒಂದು ಮರ ಮಾತ್ರ ಗತಕಾಲದ ಹಸಿರು ನೆನಪು ಹೊತ್ತು ಗಟ್ಟಿಯಾಗಿ ನಿಂತುಬಿಟ್ಟಿತು. ನಿಂತದ್ದು ನಿಂತೇ ಇತ್ತು ಬರೋಬ್ಬರಿ 300 ವರ್ಷ!

1938-39ರಲ್ಲಿ ಮರಳುಗಾಡಿನ ಈ ಒಂಟಿ ಮರದ ಧಿಮಾಕು ಕಂಡು ವಿಸ್ಮಯಗೊಂಡ ಫ್ರೆಂಚ್ ಸೇನಾ ತುಕಡಿಯೊಂದರ ಸೈನಿಕರು, ಇಲ್ಲಿ ಮರ ಹಸಿರುಟ್ಟು ನಿಂತಿರಬೇಕಾದರೆ ಹತ್ತಿರದಲ್ಲೇ ನೀರಿನ ಒರತೆಯೂ ಅಂತರ್ವಾಹಿನಿಯಾಗಿ ಹರಿಯುತ್ತಿರಬಹುದು ಎಂದು ಊಹಿಸಿ ಬಾವಿ ತೋಡುವುದಕ್ಕೆ ಶುರು ಮಾಡಿದರು. ತೋಡುತ್ತ ತೋಡುತ್ತ ನೀರು ಸಿಕ್ಕಬೇಕಾದರೆ 100ಕ್ಕೂ ಹೆಚ್ಚು ಅಡಿ ಆಳಕ್ಕೆ ಹೋಗಬೇಕಾಯಿತು. ಅಷ್ಟು ಆಳಕ್ಕೆ ಹೋಗಿ ನೋಡಿದಾಗ ಅವರಿಗೆ ಕಂಡಿದ್ದು ನೀರು ಮಾತ್ರವಲ್ಲ, ನೀರಿಗೆ ನಾಲಗೆ ಇಟ್ಟಿದ್ದ ವೃಕ್ಷದ ಬೇರು ಕೂಡ! ಸೈನಿಕರು ಹೌಹಾರಿದರು. ನೆಲದ ಮೇಲೆ ಕೇವಲ ಹತ್ತಡಿ ಹರಡಿಕೊಂಡ ವೃಕ್ಷ ನೆಲದಡಿಯಲ್ಲಿ ನೂರು ಅಡಿಗಳಷ್ಟು ಕೆಳಗೆ ಬೇರು ಚಾಚಿ ನೀರಿನ ಸರ್ವೇಕಾರ್ಯ ನಡೆಸಿಬಿಟ್ಟಿತ್ತು! ಎಲ ಎಲಾ ಗಟ್ಟಿಪಿಂಡವೇ ಎಂದು ಹೇಳುವ ಸರದಿ ಸೈನಿಕರದಾಯಿತು.

ಈ ಒಂಟಿ ಮರ ಅಲ್ಲಿಂದ ಮುಂದಕ್ಕೆ ನೈಜರ್ ದೇಶದ ವಿಶೇಷಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಟೆನಾರೆ ಎಂಬ ಆ ಪ್ರದೇಶದಲ್ಲಿದ್ದ ಬುಡಕಟ್ಟು ಜನರಂತೂ ಈ ಮರವನ್ನು ದೇವತೆ ಎಂದೇ ಪರಿಗಣ ಸಿದರು. ಅದರ ರೆಂಬೆಕೊಂಬೆಗಳನ್ನು ಕಡಿಯುವುದಾಗಲೀ ಎಲೆಗಳನ್ನು ಕೀಳುವುದಾಗಲೀ ಅವರಲ್ಲಿ ನಿಷಿದ್ಧವಾಗಿತ್ತು. ತಮ್ಮ ಪಂಚಾಯ್ತಿ ಸಭೆಗಳನ್ನು ನಡೆಸಲು ಅವರು ಸೇರುತ್ತಿದ್ದದ್ದು ಆ ಮರದ ಬುಡದಲ್ಲೇ. ಅತ್ತಣಿಂದ ಇತ್ತಣ ನಗರಗಳಿಗೆ ಸಾವಿರಾರು ಮೈಲಿ ನಡೆದುಹೋಗುವ ಕ್ಯಾರವಾನ್ ಯಾತ್ರಿಕರಿಗೆ ಆ ಮರ ಕೈಗಂಬದಂತಿತ್ತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೈನಿಕರು ಮ್ಯಾಪುಗಳನ್ನು ಬರೆದುಕೊಳ್ಳುವಾಗ ಆ ಮರವನ್ನು ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟು ಮುಂದುವರಿಯುವ ಕ್ರಮವೂ ಇತ್ತು. ನೈಜರ್ ದೇಶದ ಎಲ್ಲ ಭೂಪಟಗಳಲ್ಲಿ ಆ ವೃಕ್ಷ ತಪ್ಪದೆ ಕಾಣ ಸಿಕೊಳ್ಳುತ್ತಿತ್ತು. ಆದರೆ, ಅಷ್ಟೆಲ್ಲ ಪೂಜೆ-ಮರ್ಯಾದೆ ಮಾಡಿಸಿಕೊಂಡ ಮರಕ್ಕೂ ಗ್ರಹಚಾರ ತಪ್ಪಲಿಲ್ಲ ನೋಡಿ! ಮುನ್ನೂರು ವರ್ಷಗಳ ಎಲ್ಲ ನೈಸರ್ಗಿಕ ಪ್ರಕೋಪಗಳನ್ನೂ ಎದುರಿಸಿ ನಿಂತಿದ್ದ ಮರಕ್ಕೆ 1973ರ ಒಂದು ದಿನ ಯಮಧರ್ಮರಾಯ ಟ್ರಕ್ಕು ಓಡಿಸಿಕೊಂಡು ಬರುತ್ತಾನೆಂಬುದು ಮಾತ್ರ ಗೊತ್ತಿರಲಿಲ್ಲ! ಆ ವರ್ಷದ ಒಂದು ದಿನ ಕುಡಿದ ಮತ್ತಲ್ಲಿ ಆ ದಾರಿಯಾಗಿ ಟ್ರಕ್ಕೊಂದನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ಬಂದೂ ಬಂದು ಆ ಮರಕ್ಕೆ ನೇರವಾಗಿ ಡಿಕ್ಕಿಹೊಡೆದ! ಆ ಕ್ಷಣವೇ ಮರ ತನ್ನ ಸೊಂಟ ಮುರಿದು ಬಿತ್ತು. ನೈಜರ್‍ನ ಒಂಟಿ ಮರದ ದುರ್ಮರಣ ನ್ಯಾಷನಲ್ ನ್ಯೂಸ್ ಆಯಿತು. ಅದರ ಪಾರ್ಥಿವ ಶರೀರವನ್ನು ನೈಜರ್‍ನ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಸಾಗಿಸಿ ಅಲ್ಲಿ ಪ್ರದರ್ಶನಕ್ಕಿಡಲಾಯಿತು. ಮರವಿದ್ದ ಜಾಗದಲ್ಲಿ ಅಜ್ಞಾತ ಕಲಾವಿದನೊಬ್ಬ ಒಂದು ಲೋಹದ ಕಲಾಕೃತಿಯನ್ನು ನಿಲ್ಲಿಸಿದ.

ನಿಸರ್ಗದ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಗೆದ್ದು ಬರಬಲ್ಲ ಛಲ ನಿಸರ್ಗದೊಳಗೇ ಇರುತ್ತದೆ ಎಂಬುದಕ್ಕೆ ಮರ ಪ್ರತೀಕವಾಗಿದ್ದರೆ, ನಿಸರ್ಗದ ಎಂಥ ವಿಶೇಷಗಳನ್ನೂ ಒಂದೇ ಕ್ಷಣಕ್ಕೆ ಅಳಿಸಿ ಇತಿಹಾಸಕ್ಕೆ ಸೇರಿಸುವ ಶಕ್ತಿ ತನಗಿದೆ ಎಂದು ತೋರಿಸಿಕೊಟ್ಟ ಪಾಪಿ ಮನುಷ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!