Featured ಅಂಕಣ

ಗಾಲಿಕುರ್ಚಿಯಿಂದಲೇ ಕಪ್ಪುರಂಧ್ರಗಳನ್ನು ಕೊರೆದ ಮಹಾವಿಜ್ಞಾನಿ – ಸ್ಟೀಫನ್ ಹಾಕಿಂಗ್

 

ಇಪ್ಪತ್ತನೇ ಶತಮಾನದಲ್ಲಿ ಸೈದ್ಧಾಂತಿಕ ಭೌತವಿಜ್ಞಾನವು ಎರಡು ಕವಲಿನಲ್ಲಿ ಬೆಳವಣಿಗೆಯಾಯಿತು. ಒಂದು ಕವಲು ಐನ್‌ಸ್ಟೀನ್ ನಿರೂಪಿಸಿದ ಸಾಪೇಕ್ಷತಾ ಸಿದ್ಧಾಂತವಾದರೆ, ಇನ್ನೊಂದು ಕವಲು ಹೈಸೆನ್‌ಬರ್ಗ್, ಷ್ರಾಡಿಂಜರ್ ಹಾಗೂ ಬೊಹರ್ ಹಾಗೂ ಐನಸ್ಟೀನ್‌ನ ಕೊಡುಗೆಯೊಡಗೂಡಿ ಇವರುಗಳಿಂದ ನಿರೂಪಿಸಲ್ಪಟ್ಟ ಕ್ವಾಂಟಂ ಮೆಕಾನಿಕ್ಸ್ ಸಿದ್ಧಾಂತ. ಸಾಪೇಕ್ಷತಾ ಸಿದ್ಧಾಂತವು ಅತಿ ದೊಡ್ಡ ಕಾಯಗಳಾದ ನಕ್ಷತ್ರಗಳು, ಗ್ಯಾಲಕ್ಸಿಗಳು, ಹಾಗೂ ನಮ್ಮ ಬ್ರಹ್ಮಾಂಡಕ್ಕೆ ಅನ್ವಯವಾದರೆ; ಕ್ವಾಂಟಂ ಸಿದ್ಧಾಂತವು ಅತಿ ಚಿಕ್ಕ ವಸ್ತುಗಳಾದ ಅಣು, ನ್ಯೂಟ್ರಾನ್, ಪ್ರೋಟಾನ್ ಮೊದಲಾದವುಗಳಿಗೆ ಅನ್ವಯವಾಗುತ್ತದೆ. ಇವೆರಡೂ ಸಿದ್ಧಾಂತಗಳೂ ಸಾಕಷ್ಟು ಪ್ರಯೋಗಗಳಿಂದ ಸಮರ್ಥಿಸಿಕೊಳ್ಳಲ್ಪಟ್ಟಿವೆ ಹಾಗೂ ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು ಆಯಾಮಗಳಲ್ಲಿ ಇವು ಬಳಕೆಯಾಗುತ್ತವೆ.

ಮಾರ್ಚ್ ೧೪, ೨೦೧೮ರಂದು ವಿಧಿವಶರಾದ ಸ್ಟೀಫನ್ ಹಾಕಿಂಗ್ ಅವರು ಸಾಪೇಕ್ಷತಾಸಿದ್ಧಾಂತ ಹಾಗೂ ಕಪ್ಪುರಂಧ್ರಗಳ ಮೇಲೆ ಸಂಶೋಧನೆ ನಡೆಸಿದ ಮಹಾವಿಜ್ಞಾನಿಯಾಗಿದ್ದರು. ಅವರು ಕ್ವಾಂಟಂ ಮೆಕಾನಿಕ್ಸ್’ನ ಕೆಲ ನಿಯಮಗಳನ್ನು ಕಪ್ಪುರಂಧ್ರಗಳ ಶೋಧನೆಯಲ್ಲಿ ಬಳಸಿಕೊಂಡರು. ಅವರ ಗಮನಾರ್ಹ ಕೊಡುಗೆಯೆಂದರೆ ರೋಜರ್ ಪೆನ್‌ರೋಸ್ ಜೊತೆ ಸೇರಿ ಗುರುತ್ವಾಕರ್ಷಣಬಲ ಅತಿಪ್ರಭಲಗೊಳ್ಳುವ ಸ್ಥಿತಿಯ ಬಗ್ಗೆ (ಅಂದರೆ ಉದಾಹರಣೆಗೆ ಕಪ್ಪು ರಂಧ್ರಗಳಲ್ಲಿ) ಹಲವಾರು ಪ್ರಮೇಯಗಳನ್ನು ಮಂಡಿಸಿದ್ದು. ಮುಂದಿನ ದಿನಗಳಲ್ಲಿ ಕ್ವಾಂಟಂ ಗ್ರಾವಿಟಿ ಅವರ ಸಂಶೋಧನಾಕ್ಷೇತ್ರವಾಗಿತ್ತು.

ಕ್ವಾಂಟಂ ಮೆಕಾನಿಕ್ಸ್ ಪ್ರಕಾರ ಕಪ್ಪುರಂಧ್ರಗಳು ಶಕ್ತಿಯನ್ನು ಪ್ರಸರಿಸುತ್ತವೆ. ನಾವು ಸಾಮಾನ್ಯವಾಗಿ ತಿಳಿದಂತೆ ಕಪ್ಪುರಂಧ್ರಗಳು ತನ್ನ ಬಳಿ ಬಂದ ಯಾವುದೇ ವಸ್ತು ಅಥವಾ ಶಕ್ತಿಯನ್ನು ಒಳಗೆ ಎಳೆದುಕೊಳ್ಳುತ್ತದೆ ಹಾಗೂ ಯಾವುದನ್ನೂ ಹೊರಗೆ ಬಿಡುವುದಿಲ್ಲ. ಕೆಲ ಸೋವಿಯತ್ ಭೌತಶಾಸ್ತ್ರಜ್ಞರಿಂದ ಸಲಹೆಗಳಿಂದ ಸ್ಫೂರ್ತಿಪಡೆದ ಹಾಕಿಂಗ್ ಒಂದು ನಿರ್ಣಯಕ್ಕೆ ಬರುತ್ತಾರೆ. ಏನೆಂದರೆ ಕ್ವಾಂಟಂ ಮೆಕಾನಿಕ್ಸ್ ನಿಯಮದಂತೆ ಕಪ್ಪುರಂಧ್ರಗಳು ಒಂದು ಸಣ್ಣಪ್ರಮಾಣದ ಶಕ್ತಿಯನ್ನು ಪ್ರಸರಿಸುತ್ತದೆ ಹಾಗೂ ತನ್ನ ಎಲ್ಲ ಶಕ್ತಿ ಮತ್ತು ತೂಕವನ್ನು ಕಳೆದುಕೊಳ್ಳುತ್ತದೆ. ಈ ಪ್ರಕ್ರಿಯೆ ತುಂಬಾ ದೀರ್ಘಕಾಲದ್ದಾಗಿದ್ದು, ಸಮಯವನ್ನು ನಿಖರವಾಗಿ ಹೇಳುವುದು ಕಷ್ಟ. ಈಗ ನಾವು ಬ್ರಹ್ಮಾಂಡದ ಆಯಸ್ಸು ಎಷ್ಟು ಎಂದು ತಿಳಿದಿದ್ದೇವೆಯೋ ಅದಕ್ಕಿಂತಲೂ ಹೆಚ್ಚು ವರ್ಷ ಬೇಕಾಗುವುದೆಂದು ಹೇಳಲಾಗುತ್ತದೆ. ಇದೇ ಕಪ್ಪುರಂಧ್ರಗಳ ಬಗ್ಗೆ ಹಾಕಿಂಗ್ ಅವರ ತೀವ್ರಗಾಮಿ ಸಂಶೋಧನೆಯಾಗಿದೆ. ಹಾಕಿಂಗ್ ರೇಡಿಯೇಶನ್ ಎಂದೇ ಕರೆಯಲ್ಪಟ್ಟ ಇದು ಮೊದಮೊದಲು ಒಪ್ಪಿಕೊಳ್ಳಲ್ಪಡದಿದ್ದರೂ, ಮುಂದೆ ೭೦ರ ದಶಕದಲ್ಲಿ ಇದಕ್ಕೆ ವ್ಯಾಪಕವಾಗಿ ಬೆಂಬಲ ದೊರಕಿ ಎಲ್ಲರಿಂದ ಒಪ್ಪಿಗೆಗೊಳಗಾಯಿತು.

ಮುಂದೆ ಸ್ಟೀಫನ್ ಹಾಕಿಂಗ್ ಕ್ವಾಂಟಂ ಮೆಕಾನಿಕ್ಸ್ ಸಿದ್ಧಾಂತವನ್ನು ಇಡೀ ಬ್ರಹ್ಮಾಂಡಕ್ಕೇ ಅನ್ವಯವಾಗುವುದರ ಬಗ್ಗೆ ಶೋಧನೆ ನಡೆಸಿದರು. ಬ್ರಹ್ಮಾಂಡದ ಗುಣಲಕ್ಷಣಗಳು, ಸಮಯ ಹಾಗೂ ದೇವರ ಅಸ್ತಿತ್ವ ಈ ಬಗ್ಗೆ ಆತನ ಆಸಕ್ತಿ ಮುಂದುವರಿಯಿತು. ಸ್ಟೀಫನ್ ಕಪ್ಪುರಂಧ್ರಗಳ ಗುಣಲಕ್ಷಣಗಳ ಬಗ್ಗೆ ಸಾರ್ವಜನಿಕ ಚರ್ಚೆಯನ್ನೊಳಗೊಂಡು ತನ್ನ ಸಹಭೌತಶಾಸ್ತ್ರಜ್ಞರಾದ ಕಿಪ್ ಥಾರ್ನ್‌ನಂಥವರ ಜೊತೆ ಪಂದ್ಯ ಕಟ್ಟಿದ್ದು. (ಕ್ರಿಸ್ಟೋಫರ್ ನೋಲನ್ ನಿರ್ಮಿಸಿದ ಪ್ರಸಿದ್ಧ ಚಲನಚಿತ್ರವಾದ ಇಂಟರ್ ಸ್ಟೆಲ್ಲರ್‌ನಲ್ಲಿ ಕಂಪ್ಯೂಟರ್ ಬಳಸಿ ಕಪ್ಪುರಂಧ್ರಗಳ ಗ್ರಾಫಿಕ್ ರೂಪಿಸಲು ನೆರವಾಗಿದ್ದ.)

ಗಾಲಿಕುರ್ಚಿಯಿಂದಲೇ ನಭದೆಡೆಗೆ

ಇಂತಹ ಮಹಾವಿಜ್ಞಾನಿ ತನ್ನ ಜೀವನವನ್ನೆಲ್ಲ ಗಾಲಿಕುರ್ಚಿಯಲ್ಲೇ ಕಳೆಯಬೇಕಾಗಿ ಬಂದದ್ದು ದುರಂತ. ಇಂಗ್ಲೆಂಡಿನ ಆಕ್ಸ್’ಫರ್ಡ್‌ನಲ್ಲಿ ೧೯೪೨, ಜನವರಿ ೮ರಂದು ಫ್ರ್ಯಾಂಕ್ ಮತ್ತು ಇಸಾಬೆಲ್ಲಾ ದಂಪತಿಗಳಿಗೆ ಜನಿಸಿದರು. ಒಬ್ಬ ದತ್ತುಅಣ್ಣನಿದ್ದು ಇಬ್ಬರು ತಂಗಿಯರ ಪುಟ್ಟ ಕುಟುಂಬವದು. ಸೆಂಟ್ ಅಲ್ಬಾನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಮುಂದೆ ಯೂನಿವರ್ಸಿಟಿ ಆಫ್ ಆಕ್ಸ್’ಫರ್ಡ್‌ನಲ್ಲಿ ಬಿ.ಎ. ಹಾಗೂ ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್’ನಲ್ಲಿ ಎಂ.ಎ. ಪಿ.ಎಚ್‌ಡಿ. ಡಿಗ್ರಿ ಪಡೆದುಕೊಂಡರು. ತಂದೆಗೆ ಸ್ಟೀಫನ್ ವೈದ್ಯನಾಗಲಿ ಎಂಬಾಸೆ. ಆದರೆ ಗಣಿತದಲ್ಲಿ ಅಸಾಧಾರಣ ಅಭಿರುಚಿ ಇರುವ ಸ್ಟೀಫನ್ ಭೌತಶಾಸ್ತ್ರವನ್ನು ಆಯ್ದುಕೊಂಡರು. ೨೧ನೇ ವರ್ಷದವರೆಗೂ ಚೆನ್ನಾಗಿಯೇ ಇದ್ದ ಸ್ಟೀಫನ್ ಅವರಿಗೆ ಅದೊಂದು ದಿನ ಜೀವನವೇ ತಿರುವುಕಂಡ ದಿನವೆನ್ನಬಹುದು; ಇದ್ದಕ್ಕಿದಂತೆ ಅನಾರೋಗ್ಯಕ್ಕೊಳಗಾದ ಸ್ಟೀಫನ್ ಅವರ ಅನಾರೋಗ್ಯವು ವೈದ್ಯರಿಂದ ಕರೆಸಿಕೊಂಡದ್ದು ‘ಮೋಟಾರ್ ನ್ಯೂರಾನ್’ ಎಂದು. ಕೋಟಿಗೊಬ್ಬರಿಗೆ ಬರುವ ಈ ಕಾಯಿಲೆ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ವಿಜ್ಞಾನಿಯಾಗಿ ಏನಾದರೂ ಸಾಧಿಸಬೇಕೆಂಬಾಸೆ ಹೊತ್ತ, ಅವೆರಡರಲ್ಲೂ ಅಸಾಧಾರಣ ಪ್ರತಿಭೆ ತೋರುತ್ತಿದ್ದ ಸ್ಟೀಫನ್ ಅವರಿಗೆ ಬಂದೆರಗಿದ್ದು ದುರದೃಷ್ಟವಲ್ಲದೆ ಮತ್ತೇನು? ಈ ಕಾಯಿಲೆ ಮೆದುಳನ್ನು ಕ್ರಿಯಾಶೀಲವಾಗಿಟ್ಟರೂ ದೇಹ ಮಾತ್ರ ಕ್ರಮೇಣ ತನ್ನ ಕ್ರಿಯಾಶೀಲತೆ ಕಳೆದುಕೊಳ್ಳುತ್ತ ಹೋಗುವ ವಿಚಿತ್ರ ಕಾಯಿಲೆ. ಮೆದುಳೇ ಸ್ಟೀಫನ್ ಅವರ ಪ್ರಯೋಗಶಾಲೆಯಾಯ್ತು ಎಂದರೂ ಸರಿ. ಕೆಲಕಾಲ ಖಿನ್ನತೆಯಿಂದ ಬಳಲಿದ ಸ್ಟೀಫನ್ ಅವರು ತನಗಿಂತಲೂ ಹೆಚ್ಚು ವಿಚಿತ್ರ ಕಾಯಿಲೆಯಿಂದ, ಅದರಲ್ಲೂ ಚಿಕ್ಕ ಮಗುವೊಂದರ ಕಾಯಿಲೆ ನೋಡಿ, ತನ್ನದೇನೂ ಅಲ್ಲ ಅವರ ಮುಂದೆ ಎಂಬ ತಿಳಿವಳಿಕೆ ಮೂಡಿ ಮುಂದೆ ಖಿನ್ನತೆ ಬಿಟ್ಟು ತನ್ನ ಕ್ಷೇತ್ರದಲ್ಲಿ ಕ್ರಿಯಾಶೀಲರಾದರು. ಕ್ರಮೇಣ ಗಾಲಿಕುರ್ಚಿಗಂಟಿಕೊಂಡೇ ಕಳೆದ ಸ್ಟೀಫನ್ ದೇಹ ತಿರುಚಿದಂತೆ ಕಂಡರೂ ಕಣ್ಣುಗಳು ಮಾತ್ರ ಸದಾ ಯೋಚಿಸುತ್ತ ಹೊಳೆಯುತ್ತಿತ್ತು.

ತಮ್ಮ ತಂಗಿಯ ಸ್ನೇಹಿತೆ ಜೇನ್ ವಿಲ್ಡೆಳಲ್ಲಿ ಅನುರಕ್ತರಾದ ಸ್ಟೀಫನ್, ಅವರನ್ನೇ ೧೯೬೫ರಲ್ಲಿ ವಿವಾಹವಾದರು. ೧೯೯೫ರಲ್ಲಿ ಇಬ್ಬರಲ್ಲೂ ಬಿರುಕು ಮೂಡಿ ವಿಚ್ಛೇದನದ ನಂತರ ಎಲೈನೆ ಮಾಸನ್ ಎಂಬಾಕೆಯನ್ನು ೧೯೯೫ರಲ್ಲಿ ವಿವಾಹವಾದರೂ ೨೦೦೬ರಲ್ಲಿ ವಿಚ್ಛೇದನವಾಯಿತು. ೧೯೮೮ರಲ್ಲಿ ಹೊರತಂದ ಆತನ ಬೆಸ್ಟಸೆಲ್ಲರ್ ಪುಸ್ತಕವಾದ ’ದ ಬ್ರೀಫ್ ಹಿಸ್ಟರಿ ಆಫ್ ಟೈಮ್’ನಲ್ಲಿ ಅವರು ಹೀಗೆ ಬರೆದುಕೊಳ್ಳುತ್ತಾರೆ – ೧೯೮೨ರಲ್ಲಿ ನಾನು ಹಾರ್ವರ್ಡ್‌ನಲ್ಲಿ ನೀಡಿದ ಲೆಕ್ಚರ್‌ಗಳನ್ನು ಪುಸ್ತಕರೂಪಕ್ಕೆ ತರಲು ಪ್ರಯತ್ನಿಸಿದೆ. ಬ್ರಹ್ಮಾಂಡದ ಬಗ್ಗೆ ಕಪ್ಪುರಂಧ್ರಗಳ ಬಗ್ಗೆ ಈಗಾಗಲೇ ಸಾಕಷ್ಟು ಪುಸ್ತಕ ಬಂದಿದೆಯಾದರೂ ಅವ್ಯಾವವೂ ಸಹ ವಿಶ್ವ ಎಲ್ಲಿಂದ ಜನಿಸಿತು? ಹೇಗೆ, ಯಾಕೆ ಅದು ಆರಂಭವಾಯ್ತು? ಇದಕ್ಕೆ ಅಂತ್ಯವಿದೆಯೇ, ಇದ್ದರೆ ಹೇಗೆ? ಈ ಎಲ್ಲ ಪ್ರಶ್ನೆಗೆ ಉತ್ತರಿಸಲು ಅಸಮರ್ಥವಾಗಿದ್ದನ್ನು ನಾನು ಗುರುತಿಸಿದೆ. ಆಧುನಿಕ ವಿಜ್ಞಾನ ಎಷ್ಟರಮಟ್ಟಿಗೆ ತಾಂತ್ರಿಕವಾಗಿದೆಯೆಂದರೆ ಇಂತಹವುಗಳನ್ನೆಲ್ಲ ವಿವರಿಸಲು ಬೇಕಾದ ಗಣಿತದಲ್ಲಿ ಕೆಲವೇಕೆಲವು ತಜ್ಞರು ನಮಗೆ ದೊರಕುತ್ತಾರೆ.

ಈ ವಿಶ್ವದ ಮೂಲ ಹಾಗೂ ಹಣೆಬರಹವನ್ನು ಗಣಿತದ ಸಹಾಯವಿಲ್ಲದೆ ಹೇಳಬರಬೇಕು ಹಾಗೂ ವಿಜ್ಞಾನ ಓದಿಲ್ಲದ ಸಾಮಾನ್ಯನೂ ಸಹ ವಿಶ್ವದ ಬಗ್ಗೆ ಅರಿಯುವಂತಾಗಬೇಕು, ಈ ಆಶಯವನ್ನಿಟ್ಟುಕೊಂಡು ಈ ಪುಸ್ತಕವನ್ನು ಹೊರತಂದಿದ್ದೇನೆ.

ಈ ಮೋಟಾರ್ ನ್ಯೂರಾನ್ ಕಾಯಿಲೆಗಂಟಿಕೊಳ್ಳಬೇಕಾದ ದುರದೃಷ್ಟ ನನ್ನದಾದರೂ ಸದಾ ನನಗೆ ಬೆಂಬಲವಾಗಿರುವ ಜೇನ್ ಹಾಗೂ ರಾಬರ್ಟ್, ಲೂಸಿ, ಟಿಮ್ಮಿ ಈ ಮೂರು ಮಕ್ಕಳಿಂದಾಗಿ ನನಗೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿದೆ. ನನ್ನ ಮನಸ್ಸಿನಲ್ಲಿರುವಂತೆ ನಾನು ಥಿಯಾರಿಟಿಕಲ್ ಫಿಸಿಕ್ಸ್‌ನಲ್ಲಿ ಸಂಶೋಧನೆಯನ್ನು ಮುಂದುವರಿಸಿದ್ದೇನೆ. ಯಾವ ನಿರೀಕ್ಷೆಯನ್ನೂ ಮಾಡದೆ ನೆರವಾಗುವ ಸಹೋದ್ಯೋಗಿಗಳಿಗೆ ನಾನು ಚಿರರುಣಿ.

೧೯೮೫ರಲ್ಲಿ ಸ್ಟೀಫನ್ ನ್ಯೂಮೋನಿಯಾಕ್ಕೆ ಒಳಗಾದಾಗ ಈ ಪುಸ್ತಕದ ಮೊದಲ ಡ್ರಾಫ್ಟ್ ಮಾತ್ರ ಆಗಿತ್ತು. ಉಳಿದ ಕೆಲಸವೆಲ್ಲ ಬಾಕಿ ಇತ್ತು. ತೀವ್ರ ನಿರಾಸೆಗೊಳಗಾದ ಸ್ಟೀಫನ್ ಅವರಿಗೆ ನೆರವಾಗಿದ್ದು ಅವರ ವಿದ್ಯಾರ್ಥಿ ಬ್ರಯಾನ್ ವಿಟ್. ಟ್ರೆಕಿಯೋಸ್ಟೊಮಿ ಆಪರೇಷನ್‌ಗೆ ಒಳಗಾದ ಸ್ಟೀಫನ್ ಅವರು ಮಾತನಾಡುವ ಸಾಮರ್ಥ್ಯವನ್ನೇ ಕಳೆದುಕೊಂಡರು. ಇತರರೊಡನೆ ಸಂವಹನವೇ ಕಷ್ಟವಾಗಿ ಹೋಯ್ತು. ಪುಸ್ತಕ ಮುಗಿಸುವ ಬಗ್ಗೆ ಯೋಚನೆಯಾಯ್ತು. ಆದರೆ ಬ್ರಯಾನ್ ಅದರ ಪರಿಸ್ಕರಣೆಗೆ ನೆರವಾಗಿದ್ದಲ್ಲದೆ, ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ವರ್ಡ್ಸ್ ಪ್ಲಸ್ ಇಂಕ್‌ನ ವಾಲ್ಟ್ ವೋಲ್ಟೋಜ್ ಅವರಿಂದ ಲಿವಿಂಗ್ ಸೆಂಟರ್ ಎನ್ನುವ ಕಮ್ಯೂನಿಕೇಷನ್ ಪ್ರೋಗ್ರಾಂಅನ್ನು ಕೊಡುಗೆ ಕೊಡಿಸಿದ. ಆಗ ಹಾಕಿಂಗ್ ಅವರಿಗೆ ಸ್ಪೀಚ್ ಪ್ಲಸ್‌ನವರು ನೀಡಿದ ಸ್ಪೀಚ್ ಸಿಂಥೆಸೈಸರ್ ಬಳಸುವ ಮೂಲಕ ಬರೆಯುವದು, ಓದುವುದು, ಹಾಗೂ ಜನರೊಡನೆ ಸಂವಹನ ನಡೆಸುವುದು ಸಾಧ್ಯವಾಯಿತು. ಅವರ ಗಾಲಿಕುರ್ಚಿಗೆ ಒಂದು ಸಿಂಥೆಸೈಸರ್ ಹಾಗೂ ಕಂಪ್ಯೂಟರ್‌ಅನ್ನು ಡೆವಿಡ್ ಮ್ಯಾಸನ್ ಎಂಬಾತ ಜೋಡಿಸಿಕೊಟ್ಟ. ಇದರಿಂದ ಅವರಿಗೆ ಇನ್ನೂ ಚೆನ್ನಾಗಿ ಸಂವಹನ ನಡೆಸುವುದು ಸಾಧ್ಯವಾಯಿತು.

ವಿಜ್ಞಾನಕ್ಷೇತ್ರದ ಹತ್ತುಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಹಾಕಿಂಗ್ ಕ್ಯಾಲಿಫೋರ್ನಿಯಾದ ಕ್ಯಾಲ್‌ಟೆಕ್ ಯೂನಿವರ್ಸಿಟಿಯಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಕೆಲಸ ಮಾಡಿದ ಬಳಿಕ  ಕೇಂಬ್ರಿಡ್ಜ್’ನ  ಲ್ಯೂಕಾಸಿಯನ್ ಪ್ರೊಫೆಸರ್ ಆಫ್ ಮೆಥೆಮೆಟಿಕ್ಸ್ ಆಗಿ ೧೯೭೦ರ ವೇಳೆಗೆ ಹಾಗೂ ೧೯೭೪ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿಗೆ ಆಯ್ಕೆಯಾದರು. ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದದ್ದು ಅವರ ಇನ್ನೊಂದು ಕೊಡುಗೆ. ಅವರ ಪ್ರಸಿದ್ಧ ಪುಸ್ತಕ ‘ಅ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಸಾಪೇಕ್ಷತಾ ಸಿದ್ಧಾಂತ, ಕ್ವಾಂಟಂ ಮೆಕಾನಿಕ್ಸ್, ಕಾಸ್ಮಾಲಜಿ, ಕಪ್ಪು ರಂಧ್ರಗಳು ಹಾಗೂ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ವರ್ತಮಾನದ ಸವಾಲುಗಳ ಬಗ್ಗೆ ಸಾಮಾನ್ಯರಿಗೂ ತಿಳಿಯುವ ಭಾಷೆಯಲ್ಲಿ ಚರ್ಚಿಸಿದ್ದು ಈ ಪುಸ್ತಕ ಅತಿ ಹೆಚ್ಚು ಜನರನ್ನು ತಲುಪುವುದಕ್ಕೆ ಕಾರಣವಾಯ್ತು. ಹಾಗೆಯೇ ಭೌತಶಾಸ್ತ್ರವು ಜನಪ್ರಿಯಗೊಳ್ಳುವಂತೆ ಹಲವಾರು ಪುಸ್ತಕಗಳನ್ನು ತಾವೇ ಬರೆದದ್ದಲ್ಲದೇ ಇತರರೊಡಗೂಡಿಯೂ ಬರೆದದ್ದು ವಿಶೇಷ.

ಹಾಕಿಂಗ್ ಭೌತಶಾಸ್ತ್ರದಲ್ಲಿ ಮಾಡಿದ ಕಾರ್ಯಕ್ಕೆ ನಿಜವಾಗಿ ಬೇಕಾದದ್ದು ಅಗಾಧ ಗಣಿತದ ಪಾಂಡಿತ್ಯ. ಅದಕ್ಕೆ ಪುಟಗಟ್ಟಲೇ ಈಕ್ವೇಷನ್ ಬರೆಯಬೇಕು, ಸಾಧಿಸಬೇಕು, ಅದಕ್ಕೆ ಕೈಗಳು ಬೇಕು. ಆದರೆ ಕೈಗಳೇ ಸೋತ ಹಾಕಿಂಗ್ ಅವರ ಅಸಾಧಾರಣ ಪ್ರತಿಭೆಯನ್ನು ಅಂಧ ಸಂಗೀತಗಾರ ಮೊಝಾರ್ಟ್‌ನ ಪ್ರತಿಭೆಗೆ ಹೋಲಿಸಲಾಗುತ್ತದೆ. ಮೋಟಾರ್ ನ್ಯೂರಾನ್‌ನಂತಹ ಭೀಕರ ಕಾಯಿಲೆ ಇಲ್ಲದಿದ್ದರೆ ಈ ದೈತ್ಯ ಪ್ರತಿಭೆ ಇನ್ನೆಷ್ಟು ಸಾಧಿಸುತ್ತಿತ್ತೋ! ಶಾಲೆಯಲ್ಲಿ ಐನ್’ಸ್ಟೀನ್ ಎಂದೇ ಕರೆಸಿಕೊಂಡಿದ್ದ ಸ್ಟೀಫನ್ ಅವರು ಐನಸ್ಟೀನ್ ಅವರ ಹುಟ್ಟುಹಬ್ಬದಂದೇ ವಿಧಿವಶರಾದದ್ದು ಭವಿಷ್ಯದ ಮತ್ತೊರ್ವ ಐನ್‌ಸ್ಟೀನ್ ಹುಟ್ಟಿನ ಸೂಚಕವಿರಬಹುದೇನೋ.

       

  • ಸರೋಜಾ ಪ್ರಭಾಕರ್,
  • ಆದಿತ್ಯ ಗಾಂವ್ಕರ್, ಸಂಶೋಧನಾ ವಿದ್ಯಾರ್ಥಿ, ಕೊಲಂಬಿಯಾ ಯುನಿವರ್ಸಿಟಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!