Featured ಅಂಕಣ

ಮೂರು ದಿನಗಳ ಕಷ್ಟ ಕಳೆಯಲು ನೂರು ಕಷ್ಟಗಳ ಸಹಿಸಿಕೊಂಡವನು!

ಎರಡು ವಾರದ ಹಿಂದೆ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ “ಪ್ಯಾಡ್ ಮ್ಯಾನ್” ಸಿನೆಮಾ ಬಿಡುಗಡೆಗೊಂಡಿತು. ಬ್ಯಾಟ್‍ಮ್ಯಾನ್ ಗೊತ್ತು, ಹೀಮ್ಯಾನ್ ಗೊತ್ತು, ಸೂಪರ್ ಮ್ಯಾನ್ ಕೂಡ ಕೇಳಿ, ನೋಡಿ ಬಲ್ಲೆವು. ಆದರೆ ಪ್ಯಾಡ್ ಮ್ಯಾನ್ ಯಾರು? ಕುತೂಹಲ ಹುಟ್ಟುವುದು ಸಹಜ. ಅಂಥಾದ್ದೇ ಕುತೂಹಲವಿಟ್ಟುಕೊಂಡು ಥಿಯೇಟರಿಗೆ ಹೋಗಿ ಸಿನೆಮಾ ನೋಡಿ ಬಂದವರನ್ನು ಆವರಿಸಿಕೊಂಡದ್ದು ದುಃಖ, ಖುಷಿ, ನಗು, ವಿಷಾದಗಳ ಮಿಶ್ರಭಾವ. ಸಿನೆಮಾ ನೋಡುತ್ತಿದ್ದವರು ಅಲ್ಲಿ ಬರುವ ಹಾಸ್ಯ ಸನ್ನಿವೇಶಗಳನ್ನು ಹೇಗೆ ಕಣ್ಣೀರು ಹನಿಯುವಷ್ಟು ನಗುತ್ತ ಆನಂದಿಸುತ್ತಿದ್ದರೋ ಹಾಗೆಯೇ ಅಲ್ಲಿನ ದುರಂತ ಸನ್ನಿವೇಶಗಳನ್ನು ನೋಡುತ್ತ ಹೃದಯ ತುಂಬಿ ಬಂದು ಭಾವುಕರಾಗಿ ಕಣ್ಣೀರು ಹಾಕುತ್ತಿದ್ದರು. ಪ್ಯಾಡ್ ಮ್ಯಾನ್, “…. ಮ್ಯಾನ್” ಸರಣಿಯಲ್ಲಿ ಬರುವ ಉಳಿದ ಸೂಪರ್ ಹೀರೋಗಳಂತೆ ಆಕಾಶದಲ್ಲಿ ಹಾರುವುದಿಲ್ಲ, ತನ್ನ ಅಳತೆ ಮೀರಿ ಬೆಳೆಯುವುದಿಲ್ಲ, ಅನ್ಯಗ್ರಹದಿಂದ ಬರುವ ನೂರಾರು ಶತ್ರುಗಳನ್ನು ಬಗ್ಗು ಬಡಿದು ಭೂಗ್ರಹವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರುವುದಿಲ್ಲ. ಅಸಲಿಗೆ ಆತ ಯಾವ ಅತಿಮಾನುಷ ಶಕ್ತಿಗಳೂ ಇರದ ಸಾದಾಸೀದಾ ಮನುಷ್ಯ. ಆದರೂ ಜನಸಾಮಾನ್ಯರು ಯೋಚನೆಯೇ ಮಾಡದ ಒಂದು ಅದ್ಭುತ ಕೆಲಸವನ್ನು ಆತ ಮಾಡಿ ಮುಗಿಸುತ್ತಾನೆ. ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯನ್ನು ತಟ್ಟಬಲ್ಲ, ಮುಟ್ಟಬಲ್ಲ, ಪ್ರಭಾವಿಸಬಲ್ಲ ಉತ್ಪನ್ನವೊಂದನ್ನು ಆತ ತಯಾರಿಸಿ ಜನರ ಮುಂದಿಡುತ್ತಾನೆ. ತನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ಆತ ಅನುಭವಿಸಬೇಕಾಗುವ ಕಷ್ಟ, ಹೆಣಗಾಟ, ದುರಂತ ಸರಮಾಲೆಗಳ ಯಥಾವತ್  ಕಥನವೇ “ಪ್ಯಾಡ್ ಮ್ಯಾನ್” ಸಿನೆಮಾದ ಜೀವಾಳ.

ಅರುಣಾಚಲಂ ಮುರುಘಾನಂದಮ್. ಹೆಸರೇನೋ ದೊಡ್ಡದೇ. “ನನ್ನ ಮಗ ಪ್ರಾಯವಾದ ಮೇಲೆ ದೊಡ್ಡ ಹೆಸರು ಮಾಡುತ್ತಾನೋ ಇಲ್ಲವೋ ಗೊತ್ತಿಲ್ಲ. ಅದಕ್ಕೇ, ಹುಟ್ಟುವಾಗಲೇ ದೊಡ್ಡ ಹೆಸರು ಇಟ್ಟು ಬಿಟ್ಟಿದ್ದೇವೆ” ಎಂದು ತಂದೆತಾಯಿ ಹಾಸ್ಯಕ್ಕಾಗಿ ಹೇಳುವಂತೆ, ಆ ಹುಡುಗನ ಬಾಲ್ಯ-ಯೌವನ ಸಾಧಾರಣವಾಗಿಯೇ ಇತ್ತು. ಹುಡುಗ ಶಾಲೆ ಸೇರಿದ. ಆದರೆ ಹೇಳಿಕೊಳ್ಳುವಂಥ ಮಹಾಸಾಧನೆಯನ್ನೇನೂ ಶೈಕ್ಷಣಿಕವಾಗಿ ತೋರಲಿಲ್ಲ. ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವನ ವಿದ್ಯಾರೇಖೆ ಅಳಿಸಿ ಹೋಗಿತ್ತು. ಪಬ್ಲಿಕ್ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ಮೇಲೆ ಶಾಲೆಯ ಕಂಟಕವೊಂದು ತಪ್ಪಿತು! ಕಾಲೇಜಿನ ಮೆಟ್ಟಿಲು ಹತ್ತುವ ಅವಕಾಶ ಆತನಿಗೆ ಸಿಗಲಿಲ್ಲ. ಅದರಿಂದ ಬೇಸರ ಆಗುವುದಕ್ಕಿಂತ ಹೆಚ್ಚಾಗಿ ಹುಡುಗನಿಗೆ ಖುಷಿಯೇ ಆಯಿತೆನ್ನಬೇಕು! ಯಾರು ಆ ಉದ್ದುದ್ದದ ಪುಸ್ತಕಗಳಲ್ಲಿ ತಲೆ ಹುದುಗಿಸಿ ಅರ್ಥವಾಗದ ವಿಚಾರಗಳನ್ನು ಅರಗಿಸಿಕೊಳ್ಳಲು ಪ್ರಯಾಸಪಡುತ್ತಾರೆ! ಹುಡುಗ ಶಾಲೆಗೆ ಗುಡ್‍ಬೈ ಹೇಳಿದ. ಉದ್ಯೋಗಪರ್ವ ಪ್ರಾರಂಭವಾಯಿತು. ಬದುಕೆಂಬುದು ಹೂವಿನ ಹಾಸಿಗೆಯಲ್ಲ, ಅದು ಮುಳ್ಳಿನ ಹಾದಿ ಎಂಬುದು ಅವನಿಗೆ ಶೀಘ್ರದಲ್ಲೇ ಅರಿವಿಗೆ ಬಂತು. ಹೊಟ್ಟೆಬಟ್ಟೆಗೆ ತಕ್ಕಷ್ಟು ದುಡಿಯುವ ಮತ್ತು ಮಧ್ಯಮವರ್ಗದ ಜೀವನವನ್ನು ಅಪಮಾನಕ್ಕೆ ಎಡೆಯಿಲ್ಲದಂತೆ ಕಳೆಯಬಹುದು ಎಂಬ ಸ್ಥಿತಿ ಬರುತ್ತಲೇ ಅರುಣಾಚಲನ ಮದುವೆ ಆಗಿ  ಬಿಟ್ಟಿತು. ಅದು ಪ್ರೇಮವಿವಾಹ ಅಲ್ಲ; ತಾಳಿ ಕಟ್ಟಿ ಮನೆ ತುಂಬಿಸಿಕೊಂಡ ಮೇಲೆ ಪ್ರೀತಿ ಹುಟ್ಟಬೇಕಾದ ಅರೇಂಜ್ಡ್ ಮ್ಯಾರೇಜ್. ನವವಧು ಶಾಂತಿಯನ್ನು ಅರುಣಾಚಲನ ಕುಟುಂಬ ಮನೆ ತುಂಬಿಸಿಕೊಂಡಿತು. ಅಲ್ಲಿಗೆ ಆತನ ಬದುಕಿನ ಎರಡನೆ ಅಧ್ಯಾಯ ಶುರುವಾಯಿತು.

ಅರುಣಾಚಲನ ಬದುಕಿನ ಗತಿಯೇ ತಿರುಗಿ ಹೋಗುವಂಥ ಘಟನೆ ನಡೆದದ್ದು ಶಾಂತಿ ಆತನ ಮನದನ್ನೆಯಾಗಿ, ಮಡದಿಯಾಗಿ ಮನೆಗೆ ಕಾಲಿಟ್ಟ ಮೇಲೆಯೇ. ಅದೊಂದು ಸಾಧಾರಣ ಬೆಳಗಿನಲ್ಲಿ, ಸರ್ವೇಸಾಧಾರಣವಾದ ಪರಿಸ್ಥಿತಿಯೊಂದು ಅವನ ಬದುಕಿನ ದಿಕ್ಕುದೆಸೆಗಳನ್ನೆಲ್ಲ ಬದಲಿಸಿ ಹಾಕುತ್ತದೆಂದು ಅವನಿಗಾದರೂ ಗೊತ್ತಿತ್ತೋ ಇಲ್ಲವೋ! ಅದೊಂದು ದಿನ ಬೆಳಗ್ಗೆ, ಅರುಣಾಚಲನ ಮಡದಿ ಶಾಂತಿ ಅವನ ಮುಂದಿನಿಂದ ನಡೆದು ಹೋಗುತ್ತಿದ್ದಳು. ಕೈಯಲ್ಲೊಂದು ಪೊಟ್ಟಣವಿತ್ತು. ಅದನ್ನು ಆಕೆ ಸೆರಗಿನ ಎಡೆಯಲ್ಲಿ ಬಚ್ಚಿಟ್ಟುಕೊಂಡು ನಡೆಯುತ್ತಿದ್ದಳು. “ಏನನ್ನು ಹಾಗೆ ಬಚ್ಚಿಟ್ಟುಕೊಂಡು ಹೋಗುತ್ತಿದ್ದೀ?”, ಅನುನಯದಿಂದ ಕೇಳಿದ ಅರುಣಾಚಲ. ಆಕೆ ಆ ಕ್ಷಣದಲ್ಲಿ ಏನಾದರೊಂದು ಹೊಳೆದ ಉತ್ತರ ಹೇಳಿ ಜಾರಿಕೊಂಡಿದ್ದರೆ ಆ ಘಟನೆಗೇನೂ ಮಹತ್ತ್ವವೇ ಇರುತ್ತಿರಲಿಲ್ಲ. ಆದರೆ, ಪ್ರೀತಿಯಿಂದ ಕೇಳಿದ ಗಂಡನ ಮುಖಕ್ಕೆ ಬೀಸಿ ಹೊಡೆದಂತೆ ಆಕೆ “ಅದು ಗಂಡಸರಿಗೆ ಅಗತ್ಯವಿಲ್ಲದ ಸಂಗತಿ” ಎಂಬ ವಿಲಕ್ಷಣ ಉತ್ತರ ಕೊಟ್ಟು ಬಿಟ್ಟಳು. ಅಂಥ ಉತ್ತರದಿಂದ ಕುತೂಹಲ ಕೆರಳುವ ಯಾವುದೇ ಸಹಜ ಗಂಡಸಿನಂತೆ ಅರುಣಾಚಲನ ಆಸಕ್ತಿಯೂ ಇಮ್ಮಡಿಯಾಗಿ ಬಿಟ್ಟಿತು. ಆಕೆ ಕದ್ದುಮುಚ್ಚಿ ಬಚ್ಚಿಟ್ಟು ಸಾಗಿಸುತ್ತಿದ್ದ ವಸ್ತು ಏನೆಂಬುದನ್ನು ತಿಳಿಯಲೇಬೇಕೆಂಬ ಹಠ ಹುಟ್ಟಿತು. ಒತ್ತಾಯ ಮಾಡಿ ಕೇಳಿದಾಗ ಶಾಂತಿ ತನ್ನ ಸೆರಗಿನ ಮರೆಯಲ್ಲಿದ್ದ ಪೊಟ್ಟಣವನ್ನು ಎದುರು ಹಿಡಿದಳು. ಅದೊಂದು ಕೊಳೆಯಾದ ಬಟ್ಟೆ. ನೆಲ ಒರೆಸುವ ವಸ್ತ್ರದಂತಿತ್ತು. ಅಲ್ಲಲ್ಲಿ ಕೆಂಪುಬಣ್ಣ ಮೆತ್ತಿಕೊಂಡಿತ್ತು. ಏನಿದು ಎಂದು ಕೇಳಿದಾಗ ಆಕೆ ಅದು ಋತುಸ್ರಾವದ ಸಮಯದಲ್ಲಿ ಹೆಂಗಸರು ತಮ್ಮ ಸೊಂಟದ ಭಾಗದಲ್ಲಿ ಕಟ್ಟಿಕೊಳ್ಳುವ ಬಟ್ಟೆಯ ತುಂಡು ಎಂದು ವಿವರವಾದ ಉತ್ತರ ಕೊಟ್ಟಳು. ಅಷ್ಟೊಂದು ಕೊಳಕು ಬಟ್ಟೆಯನ್ನು ತನ್ನ ಅತಿಸೂಕ್ಷ್ಮವಾದ ಅಂಗದ ಬಳಿ ಆಕೆ ಸುತ್ತಿಕೊಳ್ಳುತ್ತಾಳೆಯೇ ಎಂದು ಅರುಣಾಚಲನಿಗೆ ಆ ಕ್ಷಣಕ್ಕೆ ದಿಗ್ಭ್ರಮೆ, ಗಾಬರಿ, ಅಸಹ್ಯ, ನಾಚಿಕೆ ಎಲ್ಲವೂ ಆದವು. ವಿಚಾರಿಸಿದಾಗ ಶಾಂತಿ, ತಾನು ತನ್ನ ನಾದಿನಿಯರು ಎಲ್ಲರೂ ಅಂಥ ಬಟ್ಟೆಗಳನ್ನೇ ಬಳಸುತ್ತಿರುವುದೆಂದೂ, ಉತ್ತಮ ಗುಣಮಟ್ಟದ ಬಟ್ಟೆ ಬಳಸಲು ಹೋದರೆ ಮನೆಯ ಬೇರೆ ಖರ್ಚುವೆಚ್ಚಗಳಲ್ಲಿ ಕೈ ಬಿಗಿ ಮಾಡಬೇಕಾಗುತ್ತದೆ ಎಂದೂ ಹೇಳಿದಳು. ಇದುವರೆಗೆ ಕಂಡಿರದಿದ್ದ ಹೊಸ ಪ್ರಪಂಚವೊಂದು ಈಗ ತಾನೇ ತಾನಾಗಿ ಕಣ್ಣೆದುರು ತೆರೆದುಕೊಂಡಾಗ ಹೇಗೋ, ಹಾಗೆ ಮೈಮರೆತುನಿಂತಿದ್ದ ಅರುಣಾಚಲ!

ಅವನ ಮುಂದಿನ ಹೆಜ್ಜೆ, ಹೆಂಡತಿಗಾಗಿ ಒಂದೊಳ್ಳೆಯ ಸ್ಯಾನಿಟರಿ ಪ್ಯಾಡ್ ಅರ್ಥಾತ್ ಋತುವಸ್ತ್ರವನ್ನು ಅಂಗಡಿಯಿಂದ ಕೊಂಡು ತಂದು ಕೊಡುವುದು. ಸರಿ, ಮೆಡಿಕಲ್ ಶಾಪಿಗೆ ಹೋದ. ಸ್ಯಾನಿಟರಿ ಪ್ಯಾಡ್ ಬೇಕು ಅಂದ. ಇವನೇನೋ ಹೆರಾಯಿನ್, ಕೊಕೇನ್‍ಗಳನ್ನು ಕೇಳಿದನೆಂಬಂತೆ ದುರುಗುಟ್ಟಿ ನೋಡುತ್ತ ಅಂಗಡಿಯಾತ ಆ ಪ್ಯಾಡ್ ಅನ್ನು ಬೇಗಬೇಗ ಪೇಪರಿನಲ್ಲಿ ಸುತ್ತಿಟ್ಟುಕೊಟ್ಟ. ಅದನ್ನು ಯಾರೂ ಸಾರ್ವಜನಿಕವಾಗಿ ಪ್ರದರ್ಶಿಸಬಾರದು; ಅಂಗಡಿಯಲ್ಲಿ ತರಕಾರಿ-ಬೇಳೆ ಕೊಂಡಷ್ಟು ಆರಾಮಾಗಿ ಸ್ಯಾನಿಟರಿ ಪ್ಯಾಡ್‍ಗಳನ್ನು ಕೊಳ್ಳುವಂತಿಲ್ಲ; ಕೊಂಡರೂ ಅದನ್ನು ಅತ್ಯಂತ ಗೌಪ್ಯವಾಗಿ ಮನೆಗೆ ತಲುಪಿಸಬೇಕು ಎಂಬ ಅಘೋಷಿತ ಸಂವಿಧಾನ ಹಳ್ಳಿಯಲ್ಲಿತ್ತು. ತನ್ನ ಮಡದಿಗಾಗಿ ಪತಿಯೇ ಮೆಡಿಕಲ್ ಅಂಗಡಿಗೆ ಬಂದು ಅದನ್ನು ಒಯ್ಯುವುದು? ಶಾಂತಂ ಪಾಪಂ! ಅಂಥದೊಂದು ಸನ್ನಿವೇಶವನ್ನು ಆ ಹಳ್ಳಿಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಹಾಗಿದ್ದ ಜಗತ್ತಿನಲ್ಲಿ ಅರುಣಾಚಲ, ತನಗೇ ಗೊತ್ತಿಲ್ಲದಂತೆ ಕ್ರಾಂತಿಯ ಪ್ರಥಮ ಹೆಜ್ಜೆಯನ್ನು ಊರಿಯಾಗಿತ್ತು!

ತೂಗಿ ನೋಡಿದರೆ ಆ ಪ್ಯಾಕು 100 ಗ್ರಾಂಗಳಷ್ಟೂ ಭಾರವಿರಲಿಲ್ಲ. ಹೊರಗಿನ ಕವರ್ ಒಡೆದು ನೋಡಿದರೆ ಒಳಗೆ 8 ಅಂಗುಲ ಉದ್ದ, 2 ಅಂಗುಲ ಅಗಲದ ಹತ್ತಿಯ ಬಟ್ಟೆ ಇತ್ತು. ಹತ್ತಿಯ ತುಣುಕೊಂದನ್ನು ಅದೇಕೆ ಬಹುರಾಷ್ಟ್ರೀಯ ಕಂಪೆನಿಗಳು ಊಹಿಸಲಾಗದಷ್ಟು ದೊಡ್ಡ ಮೊತ್ತದ ದರ ವಿಧಿಸಿ ಮಾರಾಟ ಮಾಡುತ್ತಿವೆ? ಅರುಣಾಚಲನಿಗೆ ವಿಸ್ಮಯವಾಯಿತು. ಪ್ಯಾಡ್ ಅನ್ನು ಬಿಡಿಸಿ ನೋಡಿದಾಗ ಅವನಿಗೆ ಅದರಲ್ಲೇನೂ ವಿಶೇಷ ಕಾಣಲಿಲ್ಲ. ಇಂಥವನ್ನು ತಾನೂ ತಯಾರಿಸಲಾರೆನೇ ಅನ್ನಿಸಿತು. ಸರಿ, ಕೆಲಸ ಶುರು ಮಾಡಿದ. ಮೊದಲ ಪ್ರಾಯೋಗಿಕ ವಸ್ತ್ರವನ್ನು ತಯಾರಿಸಿ ಮಡದಿಗೆ ಕೊಟ್ಟ. ಆದರೆ ಅದನ್ನು ತಿಂಗಳಿಗೊಮ್ಮೆಯಷ್ಟೇ ಧರಿಸಿ, ಅದರ ಗುಣಾವಗುಣಗಳನ್ನು ಹೇಳಬಹುದಾಗಿತ್ತು. ಋತುಸ್ರಾವ, ತಿಂಗಳಿಗೊಮ್ಮೆ ನಡೆವ ಸಂಗತಿ ತಾನೆ? ಅರುಣಾಚಲನಿಗೆ ತಾನು ತಯಾರಿಸಿದ ಉತ್ಪನ್ನದ ಧನ-ಋಣಾಂಶಗಳ ಬಗ್ಗೆ ಬೇಗನೇ ತಿಳಿಯಬೇಕಿತ್ತು. ತಿಂಗಳು ಪೂರ್ತಿ ಕಾಯುವಷ್ಟು ವ್ಯವಧಾನ ಖಂಡಿತ ಅವನಿಗಿರಲಿಲ್ಲ. ಹಾಗಾಗಿ ತನ್ನ ತಂಗಿಯರಿಗೆ ಆ ಹತ್ತಿಯ ಬಟ್ಟೆಗಳನ್ನು ಕೊಟ್ಟು, ಅದರ ಬಗ್ಗೆ ಅವರ ಅಭಿಪ್ರಾಯ ಕೇಳಿದ. ಅಣ್ಣನೊಡನೆ ಇಂಥ ಸ್ತ್ರೀಸಂಬಂಧಿ ವಿಷಯಗಳನ್ನು ಚರ್ಚಿಸಲು ಅವರಿಗೆ ಮಣದಷ್ಟು ಮುಜುಗರ. ಮನೆಯಿಂದ ತಕ್ಕ ಸಹಕಾರ ದೊರೆಯುತ್ತಿಲ್ಲ ಎಂಬುದು ಖಚಿತವಾದ ಮೇಲೆ ಅರುಣಾಚಲ, ಹಳ್ಳಿಯಿಂದ ಹೊರಗೆ ಇದ್ದ ಒಂದು ಮೆಡಿಕಲ್ ಕಾಲೇಜಿನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ನಿಂತ. ಅಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ತಾನು ತಯಾರಿಸಿದ ಋತುವಸ್ತ್ರಗಳನ್ನು ಕೊಟ್ಟು ಅವರ ಅಭಿಪ್ರಾಯ ಕೇಳಿದ. ಆದರೆ ಅದೂ ಬಹಳ ದಿನಗಳ ಕಾಲ ಸುಸೂತ್ರವಾಗಿ ಮುಂದುವರಿಯಲಿಲ್ಲ. ಇವನಿಗೇನೋ ಬುದ್ಧಿಭ್ರಮಣೆಯಾಗಿರಬೇಕು – ಕೆಲವರು ಹೇಳಿದರು. ಹುಡುಗಿಯರ ಹುಚ್ಚು ಅಂತ ಕಾಣುತ್ತೆ; ಅವರಿಗಾಗಿ ಗಾಳ ಹಾಕಲು ಹೀಗೆ ಬಹುಕೃತವೇಷ ಧರಿಸಿದ್ದಾನೆ – ಎಂದರು ಹಲವರು. ಈತನೊಬ್ಬ ಕಾಮಾಂಧ! ಸೈಕೋಪಾತ್! ವಿಕೃತಕಾಮಿ! – ಬೆಲೆ ಕಟ್ಟಿದರು ಊರವರು. ಅದ್ಯಾವುದೂ ಅಲ್ಲ ಕಣ್ರೀ, ಈತನಿಗೆ ಯಾವುದೋ ಹುಚ್ಚುದೆವ್ವ ಮೈಯಲ್ಲಿ ಸೇರಿಕೊಂಡಿದೆ. ಹುಣಸೆ ಬರಲಿನಲ್ಲಿ ಬಾರಿಸಿದರೆ ಇಲ್ಲವೇ ಬರೆಗೋಳ ಕಾಯಿಸಿ ಬರೆ ಇಟ್ಟರೆ ಸರಿ ಹೋದೀತು ಎಂದು ಮತ್ತಿನ್ನಷ್ಟು ಜನ ತೀರ್ಪು ಕೊಟ್ಟರು. ಇವೆಲ್ಲದರ ಅಂತಿಮ ಪರಿಣಾಮವೆಂದರೆ ಆತನ ಹೆಂಡತಿ, ತಂಗಿಯರು, ತಾಯಿ ಅವನನ್ನು ಬಿಟ್ಟು ಹೋದದ್ದು. ಮತ್ತು ಊರಿನ ಸಮಸ್ತರು ಒಮ್ಮತದಿಂದ ನಿರ್ಣಯಿಸಿ ಆತನಿಗೆ ಊರಿಂದ ಬಹಿಷ್ಕಾರ ಹಾಕಿದ್ದು!

ಅಲ್ಲಿಂದ ಮುಂದಿನದ್ದು ಇತಿಹಾಸ. ಅರುಣಾಚಲಂ ಬಯಸಿದ್ದು ತನ್ನ ಪತ್ನಿಗೆ ಉತ್ತಮ ಗುಣಮಟ್ಟದ, ಆರೋಗ್ಯ ಕಾಪಾಡುವ ಸ್ವಚ್ಛ  ಋತುವಸ್ತ್ರವನ್ನು ಒದಗಿಸಬೇಕು ಎಂದಷ್ಟೇ. ಆದರೆ ಅದಕ್ಕೆ ಆತ ತೆತ್ತ ಬೆಲೆ ಮಾತ್ರ ದೊಡ್ಡದು! ಪ್ರಯೋಗದ ಮೇಲೆ ಪ್ರಯೋಗ ಮಾಡುತ್ತ ತನ್ನ ಋತುವಸ್ತ್ರಗಳನ್ನು ಉತ್ತಮಪಡಿಸುವುದು ಹೇಗೆ ಎಂದೇ ಹಗಲಿರುಳು ಯೋಚಿಸುತ್ತ ಕೂತವನಿಗೆ ಕೊನೆಗೆ ತನ್ನ ಉತ್ಪನ್ನವನ್ನು ಯಾರ ಮೇಲೂ ಪ್ರಯೋಗಿಸಲು ಸಾಧ್ಯವಾಗದ ವಿಷಮ ಸ್ಥಿತಿ ಬಂದೊದಗಿತು. ಅವನಲ್ಲಿ ಒಬ್ಬರೇ ಒಬ್ಬರು ಹೆಂಗಸರೂ ಮಾತಾಡದಂಥ ವಿಚಿತ್ರ ಸನ್ನಿವೇಶ ಏರ್ಪಟ್ಟಿತು. ಆದರೆ ಸಂಶೋಧನೆಯ ಹುಚ್ಚು ಅವನೊಳಗೆ ಯಾವ ಪರಿಯಲ್ಲಿ ಆವಾಹನೆಗೊಂಡಿತ್ತೆಂದರೆ ಕೊನೆಗೆ ಆತನೇ ಸ್ವತಃ ಆ ವಸ್ತ್ರಗಳನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಪ್ರಯೋಗಿಸಿ ನೋಡಿದ! ಫುಟ್‍ಬಾಲ್ ಒಂದರಲ್ಲಿ ಆಡಿನ ರಕ್ತ ತುಂಬಿಸಿಕೊಂಡು, ಅದು ಹನಿಹನಿಯಾಗಿ ಆ ವಸ್ತ್ರದ ಮೇಲೆ ಜಿನುಗುವಂತೆ ವ್ಯವಸ್ಥೆ ಮಾಡಿದ. ಸೈಕಲ್ ಹೊಡೆಯುವಾಗ, ಓಡುವಾಗ, ದೈಹಿಕ ಶ್ರಮದ ಕೆಲಸ ಮಾಡುವಾಗ ಆ ವಸ್ತ್ರ ಹೇಗೆ ಎಷ್ಟು ಪ್ರಮಾಣದ ನೆತ್ತರನ್ನು ಹೀರಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಿದ. ಸುಮಾರು ಎಂಟು ವರ್ಷಗಳ ಸತತ ಪರಿಶ್ರಮದ ನಂತರ ಅರುಣಾಚಲನಿಗೆ, ಋತುವಸ್ತ್ರಗಳನ್ನು ತಯಾರಿಸುವ ಅತ್ಯಂತ ಸರಳ ಯಂತ್ರಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಯಿತು. ಅವನ ಅವಸ್ಥೆಯನ್ನು ಕಂಡು ಮರುಗಿದ್ದ ಕೆಲ ಸ್ನೇಹಿತರು ಆ ಯಂತ್ರಕ್ಕೆ ಪೇಟೆಂಟ್ ದೊರಕಿಸಿಕೊಡಲು ಸಹಾಯ ಮಾಡಿದರು. ಅದಾದ ಬಳಿಕ, ಅರುಣಾಚಲಂ, ತನ್ನ ಯಂತ್ರವನ್ನು ಹೊತ್ತು ಊರೂರು ಸುತ್ತತೊಡಗಿದ. ಮಹಿಳೆಯರನ್ನು ಕೂಡಿಸಿ ಅವರಿಗೆ ಅದರ ಪ್ರಾತ್ಯಕ್ಷಿಕೆ ತೋರಿಸಿ, ಋತುವಸ್ತ್ರಗಳನ್ನು ಅದರಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಕಲಿಸಿದ. ಇಷ್ಟು ದಿನವೂ ಆತನ ಚಲನವಲನಗಳನ್ನು ಸಂಶಯದಿಂದಲೇ ನೋಡುತ್ತಿದ್ದ ಮಂದಿಗೆ ಈಗ ಸ್ವಲ್ಪಮಟ್ಟಿಗೆ ವಿಶ್ವಾಸ ಮೂಡತೊಡಗಿತು. ಈ ವ್ಯಕ್ತಿ ಸಭ್ಯ. ವಿಕೃತಕಾಮಿಯೇನಲ್ಲ ಎಂಬ ಭರವಸೆ ಹುಟ್ಟಿತು! ಮಾರುದೂರ ಹಾರಿ ಹೋಗಿದ್ದವರು ಒಂದೊಂದೇ ಹೆಜ್ಜೆಯಿಟ್ಟು ಹತ್ತಿರ ಸುಳಿದರು. ಊರ ಹೆಂಗಸರು ನಿಧಾನವಾಗಿ ಈತನಲ್ಲಿ ವಿಶ್ವಾಸ ತಳೆದರು. ಕೆಲ ಹಳ್ಳಿಗಳಲ್ಲಿ ಈತನ ಯಂತ್ರಗಳನ್ನಿಟ್ಟು ಹೆಂಗಸರು ಋತುವಸ್ತ್ರಗಳನ್ನು ತಯಾರಿಸಲೂ ತೊಡಗಿಬಿಟ್ಟರು. 50ರಿಂದ 80 ರುಪಾಯಿಗಳವರೆಗೆ ಬೆಲೆ ಬಾಳುತ್ತಿದ್ದ ಕಂಪೆನಿ ಪ್ಯಾಡ್‍ಗಳಿಗೆ ಸೆಡ್ಡು ಹೊಡೆಯುವಂತೆ ಅರುಣಾಚಲಂ ನಿರ್ಮಿಸಿದ ಯಂತ್ರ ಕೇವಲ ಎರಡೂವರೆ ರುಪಾಯಿಯಲ್ಲಿ ಅದೇ ಗುಣಮಟ್ಟದ ಪ್ಯಾಡ್‍ಗಳನ್ನು ಕೊಡತೊಡಗಿತು!

ವ್ಯತ್ಯಾಸ ಕಣ್ಣಿಗೆ ಹೊಡೆದು ಕಾಣುವಂತಿತ್ತು. ಅರುಣಾಚಲಂ ನಿರ್ಮಿಸಿ ಕೊಡುತ್ತಿದ್ದ ಯಂತ್ರಗಳು ಜನಪ್ರಿಯವಾದವು. ಒಂದು ಡೈನಿಂಗ್ ಟೇಬಲ್ ಮೇಲೆಯೂ ಇಟ್ಟು ಕಾರ್ಯ ನಿರ್ವಹಿಸಬಹುದಾದ ಆ ಯಂತ್ರದಲ್ಲಿ ದಿನಕ್ಕೆ 200ರಿಂದ 250 ಪ್ಯಾಡ್‍ಗಳನ್ನು ತಯಾರಿಸಬಹುದಿತ್ತು. ಹಳ್ಳಿಗೊಂದು ಅಂಥ ಋತುವಸ್ತ್ರ ಕೇಂದ್ರ ಸ್ಥಾಪಿಸಿದರೆ ಹಳ್ಳಿಯ ಎಲ್ಲ ಮಹಿಳೆಯರಿಗೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಸ್ತ್ರದ ಸರಬರಾಜು ಮಾಡಬಹುದು; ಮಾತ್ರವಲ್ಲದೆ ಕನಿಷ್ಠ 10 ಹೆಂಗಸರಿಗೆ ಉದ್ಯೋಗವನ್ನೂ ಕಲ್ಪಿಸಬಹುದು ಎಂಬುದು ಅರುಣಾಚಲಂ ಮಾದರಿಯ ಹೆಗ್ಗಳಿಕೆ. ಆತನ ಯೋಜನೆ ಇದೀಗ 8 ವರ್ಷಗಳನ್ನು ಪೂರೈಸಿ ಮುಂದೋಡುತ್ತಿದೆ. ಪಿ&ಜಿ, ಜಾನ್ಸನ್ ಆಂಡ್ ಜಾನ್ಸನ್‍ನಂಥ ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಪ್ರತಿಸ್ಫರ್ಧಿಯಾಗಿ ಬೆಳೆಯುವ ಮಟ್ಟಕ್ಕೆ ಆತನ ಯೋಜನೆ ಯಶಸ್ವಿಯಾಗಿದೆ. ಅರುಣಾಚಲಂ ಭಾರತದ ಬಹುತೇಕ ಎಲ್ಲ ಪ್ರತಿಷ್ಠಿತ ಮ್ಯಾನೇಜ್‍ಮೆಂಟ್ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಹೋಗಿದ್ದಾನೆ. ತನ್ನ ಕತೆಯನ್ನು ಅತ್ಯಂತ ರಸವತ್ತಾಗಿ ಹೇಳುವ ಅರುಣಾಚಲಂ, ದುಡ್ಡು ಮಾಡಲೆಂದು ಆವಿಷ್ಕಾರ ಮಾಡಬೇಡಿ; ಸಮಾಜವನ್ನು ಉದ್ಧಾರ ಮಾಡುವ ಮನಸ್ಸಿನಿಂದ ಆವಿಷ್ಕಾರ ಮಾಡಿ – ಎಂದು, ಮ್ಯಾನೇಜ್‍ಮೆಂಟ್ ಪಾಠಗಳಿಗೇ ತಿರುಮಂತ್ರದ ರೀತಿಯಲ್ಲಿ ಭಾಷಣ ಕೊಡುತ್ತಾನೆ! ಹೇಳಿದ್ದನ್ನು ಸ್ವತಃ ಮಾಡಿ ತೋರಿಸುವವರು ಎಂಬ ಅಲ್ಪಸಂಖ್ಯಾತ ಸಮುದಾಯದ ಹೆಮ್ಮೆಯ ಪ್ರತಿನಿಧಿಯಾಗಿರುವ ಆತ, ತನ್ನ ಯಂತ್ರದ ಪೇಟೆಂಟ್ ಮಾಡಿಸಿದರೂ ಅದರಿಂದ ಲಕ್ಷ-ಕೋಟಿಗಳನ್ನು ಗಳಿಸುವತ್ತ ಲಕ್ಷ್ಯ ವಹಿಸಿಲ್ಲ. ಆತನ ದೃಷ್ಟಿ ಏನಿದ್ದರೂ ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ಋತುವಸ್ತ್ರ ಬಳಸಲಾಗದ ಸ್ಥಿತಿಯಲ್ಲಿರುವ 98% ಮಹಿಳೆಯರಿಗೆ ಸಹಾಯ ಮಾಡುವುದರತ್ತ ಮಾತ್ರ.

ಪರಿಹಾರ ಇಟ್ಟುಕೊಂಡು ನಂತರ ಪ್ರತಿಭಟನೆ ಮಾಡಿ – ಎಂಬುದು ಡಾ. ಹರೀಶ್ ಹಂದೆಯವರ ಮಾತು. ಅರುಣಾಚಲಂ ಮುರುಘಾನಂದಮ್ ಮಾಡಿದ್ದು ಅಕ್ಷರಶಃ ಅದನ್ನೇ. ಈತನ ಏಕವ್ಯಕ್ತಿ ಸಾಹಸದಿಂದಾಗಿ ಇಂದು ಮಲ್ಟಿಮಿಲಿಯನೇರ್ ಬಹುರಾಷ್ಟ್ರೀಯ ಕಂಪೆನಿಗಳು ದುಬಾರಿ ಬೆಲೆಗೆ ಋತುವಸ್ತ್ರ ಮಾರಿ ಕೋಟಿಗಟ್ಟಲೆ ದುಡ್ಡು ದೋಚಲಿಕ್ಕಾಗದೆ ಬೆಲೆ ಇಳಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಂದಿವೆ. ಅರುಣಾಚಲಂ, ತನ್ನ ಆವಿಷ್ಕಾರದಿಂದ ಕೋಟಿ ಬಿಡಿ, ಲಕ್ಷಗಳನ್ನೂ ಮಾಡಿಕೊಳ್ಳಲಿಲ್ಲ! ವಿಚ್ಛೇದನ ಕೊಡುವೆನೆಂದು ಬೆದರಿಸಿ ದೂರ ಸರಿದಿದ್ದ ಪತ್ನಿ ಶಾಂತಿ, ಕೋಪವಿಳಿಸಿಕೊಂಡು ಶಾಂತಳಾಗಿ ಮರಳಿ ಆತನ ತೆಕ್ಕೆ ಸೇರಿದ್ದೇ ಆತನಿಗೆ ಇದುವರೆಗೆ ಸಿಕ್ಕಿರುವ ಬಹುದೊಡ್ಡ ಬಹುಮಾನ. ತಮಾಷೆ ಎಂದರೆ, ಆತನ ಬದುಕನ್ನು ತೆರೆಯ ಮೇಲೆ ತಂದಿರುವ ಅಕ್ಷಯ್ ಕುಮಾರ್ ಮತ್ತು ಆತನ ಸಿನೆಮಾ ನಿರ್ಮಾಪಕರು ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ, ಸಿನೆಮಾ ಬಿಡುಗಡೆಯಾದ ಮೂರು ದಿನಗಳಲ್ಲಿ 40 ಕೋಟಿ ರುಪಾಯಿ ಬಾಚಿ ಬಿಟ್ಟಿದ್ದಾರೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!