‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿಗೆ ಇವತ್ತು ಅರ್ಥ ಉಳಿದಿಲ್ಲ.ಬಹುತೇಕ ಜನರು ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುವುದಿಲ್ಲ. ಬದಲಿಗೆ ಡಾಕ್ಟರ್’ಗಳೆಂದರೆ ದುಡ್ಡು ಸುಲಿಯುವವರು,ಆಸ್ಪತ್ರೆಗಳೆಂದರೆ ದರೋಡೆ ಮಾಡುವ ತಾಣ ಎಂಬ ನಂಬಿಕೆ ಜನರಲ್ಲಿ ಬೇರೂರತೊಡಗಿದೆ.ವೈದ್ಯರೂ ಕೂಡ ಮೊದಲಿನ ಹಾಗೆ ಈಗ ತಮ್ಮ ವೃತ್ತಿಯನ್ನು ಸೇವೆಯೆಂದು ಪರಿಗಣಿಸುತ್ತಿಲ್ಲ.ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಎಂಟು-ಹತ್ತು ವರ್ಷ ಓದಿ ವೈದ್ಯಕೀಯ ಪದವಿ ಮತ್ತು ಮುಂದಿನ ಸ್ನಾತಕೋತ್ತರ ಪದವಿ ಗಳಿಸುವಷ್ಟರಲ್ಲಿ ಹೈರಾಣಾಗಿ ಹೋಗಿ ತಾನು ಆರಿಸಿಕೊಂಡ ಕ್ಷೇತ್ರವನ್ನು ಸೇವೆಯಂತೆ ಮುಂದುವರೆಸಿಕೊಂಡು ಹೋಗಲು ಯಾವ ವೈದ್ಯನೂ ಇಷ್ಟಪಡುವುದಿಲ್ಲ.ಬದಲಿಗೆ ತಾನು ಓದಲು ಖರ್ಚು ಮಾಡಿದ ಹಣವನ್ನು ಆದಷ್ಟು ಬೇಗ ಮರಳಿ ಗಳಿಸುವುದೇ ಮೊದಲ ಆದ್ಯತೆಯಾಗಿರುತ್ತದೆ. ರೋಗಿಗಳಿಗೂ ವೈದ್ಯರ ಮೇಲೆ ನಂಬಿಕೆ ಕಡಿಮೆಯಾಗಿದೆ. ವೈದ್ಯರೂ ರೋಗಿಗಳನ್ನು ಕೇವಲ ಗ್ರಾಹಕರಾಗಷ್ಟೇ ನೋಡುವ ಪರಿಪಾಠವನ್ನು ನಿಧಾನವಾಗಿ ಬೆಳೆಸಿಕೊಳ್ಳುತ್ತಿದ್ದಾರೆ.
ರೀಡೂ ಕನ್ನಡದ ರೆಗ್ಯುಲರ್ ಓದುಗರಿಗೆ ಡಾ.ದಯಾನಂದ ಲಿಂಗೇಗೌಡ ಅವರನ್ನು ಪರಿಚಯಿಸುವ ಅಗತ್ಯವಿಲ್ಲವೆಂದುಕೊಳ್ಳುತ್ತೇನೆ. ವೃತ್ತಿಯಿಂದ ವೈದ್ಯರಾಗಿದ್ದರೂ ಕನ್ನಡ ಸಾಹಿತ್ಯದ ಮೇಲೆ ಒಂದಷ್ಟು ಆಸಕ್ತಿ,ಪ್ರೀತಿಯನ್ನಿಟ್ಟುಕೊಂಡು ಬರವಣಿಗೆಯ ಕೃಷಿ ಮಾಡುತ್ತಿದ್ದಾರೆ.ನಾಡಿನ ಪತ್ರಿಕೆಗಳಲ್ಲಿ,ನಮ್ಮ ರೀಡೂ ವೆಬ್ಸೈಟ್’ನಲ್ಲಿ ಸುಮಾರು ಲೇಖನಗಳನ್ನು ಬರೆದಿದ್ದಾರೆ.ವೈದ್ಯಕೀಯ ಜಗತ್ತಿನ ಕುರಿತು ಅವರು ಬರೆದಿರುವ ಕಾದಂಬರಿ ‘ಸತ್ಯಮೇವ ಜಯತೆ’.ಭಾರತದಲ್ಲಿ ವೈದ್ಯಕೀಯ ಕ್ಷೇತ್ರದ ಪ್ರಸಕ್ತ ಸ್ಥಿತಿಗತಿಗಳೇನು,ಖಾಸಗಿ ಆಸ್ಪತ್ರೆಗಳು ವೈದ್ಯಲೋಕವನ್ನು ದಂಧೆಯನ್ನಾಗಿಸಿರುವುದು ಏಕೆ ಮತ್ತು ಹೇಗೆ? ಭ್ರಷ್ಠ ವ್ಯವಸ್ಥೆಯೊಳಗೆ ಸಿಕ್ಕಿಕೊಂಡು ಪ್ರಾಮಾಣಿಕರು ಹೇಗೆಲ್ಲ ನರಳುತ್ತಾರೆ ಎಂಬುದನ್ನು ಡಾ.ದಯಾನಂದ ಅವರು ಮನಮುಟ್ಟುವಂತೆ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಮಂಡ್ಯದ ಸಮೀಪದ ಹಳ್ಳಿಯೊಂದರಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಹುಡುಗ ವಿಶ್ವನಾಥ ಹೈಸ್ಕೂಲಿಗೆ ಇಂಗ್ಲೀಷ್ ಮೀಡಿಯಂಗೆ ಸೇರಿದಾಗ ಇಂಗ್ಲೀಷ್ ಕಬ್ಬಿಣದ ಕಡಲೆಯಾಗಿ ಒದ್ದಾಡುತ್ತಾನೆ.ಆ ಕಾರಣದಿಂದಾಗಿ ಆಂಗ್ಲ ಭಾಷೆಯ ಮೇಲೆ ಒಂಥರಾ ತಿರಸ್ಕಾರ ಬೆಳೆಸಿಕೊಂಡು ಕನ್ನಡದಲ್ಲೇ ಏನಾದರೂ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಅಂತ ಅಂದುಕೊಳ್ಳುತ್ತಿರುತ್ತಾನೆ.ಆದರೆ ಮಗ ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು ಎಂಬುದು ವಿಶ್ವನ ಅಪ್ಪನ ಆಸೆ.ಪಿಯೂಸಿಯಲ್ಲಿ ಸೈನ್ಸ್ ತೆಗೆದುಕೊಂಡು ಚೆನ್ನಾಗಿ ಓದಿ ಪಾಸಾದರೂ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೇರಲು ಬೇಕಾದಷ್ಟು Rank ಸಿಇಟಿ ಪರೀಕ್ಷೆಯಲ್ಲಿ ಬರುವುದಿಲ್ಲ.ಮತ್ತೊಂದು ವರ್ಷ ಕೋಚಿಂಗ್ ತೆಗೆದುಕೊಂಡು ಓದಿ ಸಿಇಟಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾನೆ ವಿಶ್ವ.ಇಂಗ್ಲೀಷನ್ನು ದ್ವೇಷಿಸುತ್ತಿದ್ದ ವಿಶ್ವ ಮುಂದೆ ಎಂಬಿಬಿಎಸ್ ಓದಿ ಡಾಕ್ಟರ್ ಆಗಿ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು Transplant Surgeon ಆಗುವುದು ಹೇಗೆ,ವೈದ್ಯಕೀಯ ವ್ಯಾಸಂಗ ಮಾಡುವಾಗ ಆತ ಎದುರಿಸಿದ ಸನ್ನಿವೇಶಗಳು ಯಾವುವು ಎಂಬುದನ್ನೆಲ್ಲ ನೀವು ಕಾದಂಬರಿಯಲ್ಲೇ ಓದಬೇಕು.
ಡಾ.ವಿಶ್ವನಾಥ ಖಾಸಗಿ ಆಸ್ಪತ್ರೆಯೊಂದರಲ್ಲಿ ಸರ್ಜರಿ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.ಅಲ್ಲಿಂದ ಮುಂದೆ ಖಾಸಗಿ ಆಸ್ಪತ್ರೆಗಳ ಕರಾಳ ಮುಖವನ್ನು ಕಾದಂಬರಿ ಒಂದೊಂದಾಗಿ ಬಿಚ್ಚಿಡುತ್ತಾ ಹೋಗುತ್ತದೆ.ದುಡ್ಡು ಗಳಿಸಲು ಮತ್ತು ದುಡ್ಡು ಉಳಿಸಲು ಕಾರ್ಪೋರೇಟ್ ಆಸ್ಪತ್ರೆಗಳು ಯಾವೆಲ್ಲ ಮಾರ್ಗಗಳನ್ನು ಅನುಸರಿಸುತ್ತವೆ,ಅದರಿಂದ ರೋಗಿಗಳಿಗೆ ಹೇಗೆಲ್ಲ ತೊಂದರೆಯಾಗುತ್ತದೆ ಎಂಬುದನ್ನು ಡಾ.ದಯಾನಂದರು ತಮ್ಮ ಪುಸ್ತಕದಲ್ಲಿ ಸಾಧ್ಯಂತವಾಗಿ ವಿವರಿಸಿದ್ದಾರೆ.ಒಂದು ಉದಾಹರಣೆ ನೋಡುವುದಾದರೆ ಕಾದಂಬರಿಯ ನಾಯಕ ಡಾ.ವಿಶ್ವನಾಥ ಕೆಲಸ ಮಾಡುವ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್’ನ ನರ್ಸ್ ಆಗಿ ಹಿಂದೆ ಅದೇ ಆಸ್ಪತ್ರೆಯ ಕ್ಯಾಂಟೀನ್’ನಲ್ಲಿ ಕೆಲಸ ಮಾಡುತ್ತಿರುವ ಒಬ್ಬಳನ್ನು ಇದ್ದಕ್ಕಿದ್ದಂತೆ ನೇಮಿಸಿ ಬಿಡುತ್ತಾರೆ.OT ಯಲ್ಲಿ ಕೆಲಸ ಮಾಡಲು ತರಬೇತಿ ಪಡೆದ ನರ್ಸ್’ಗಳನ್ನು ಸೇರಿಸಿಕೊಂಡರೆ ಹೆಚ್ಚು ಹಣ ಕೊಡಬೇಕಾಗುತ್ತದೆಂದು ಆಸ್ಪತ್ರೆಯ ಆಡಳಿತ ಮಂಡಳಿ ಮಾಡುವ ಉಪಾಯವದು.ಆಪರೇಷನ್ ಥಿಯೇಟರ್’ನಲ್ಲಿ ಹೇಗೆ ವರ್ತಿಸಬೇಕು,ಹೇಗೆ ಕೆಲಸ ಮಾಡಬೇಕು ಎಂಬ ತಿಳುವಳಿಕೆ ಇಲ್ಲದ, ಕ್ಯಾಂಟೀನ್’ನಲ್ಲಿ ಕೆಲಸಕ್ಕಿದ್ದು ಈಗ ನರ್ಸ್ ಆಗಿ ಬದಲಾದ ಆ ಹೆಂಗಸು ಸರ್ಜರಿ ಮಾಡಲು ಉಪಯೋಗಿಸುವ ಉಪಕರಣವೊಂದನ್ನು ಗ್ಲೌಸ್ ಧರಿಸದೇ ಹಾಗೆ ಬರಿಗೈಯಲ್ಲಿ ಮುಟ್ಟಿ ಬಿಡುತ್ತಾಳೆ.ಇದರಿಂದಾಗಿ ಆಪರೇಷನ್ ಮಾಡಿಸಿಕೊಂಡ ರೋಗಿಗೆ ಇನ್ಫೆಕ್ಷನ್ ಆಗಿ ಆತ ಐಸಿಯುನಲ್ಲಿ ಅಡ್ಮಿಟ್ ಆಗುತ್ತಾನೆ.ಇನ್ಫೆಕ್ಷನ್ ಕಡಿಮೆ ಮಾಡಲು ಒಳ್ಳೆಯ Antibiotics ಅನ್ನು ಉಪಯೋಗಿಸೋಣವೆಂದರೆ ಆಸ್ಪತ್ರೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ಔಷಧ ಕಂಪೆನಿ ತಯಾರಿಸುವ ಔಷಧಗಳನ್ನಷ್ಟೇ ಆಸ್ಪತ್ರೆಯಲ್ಲಿ ಬಳಸಬೇಕೆಂದು ನಿಯಮವಿರುತ್ತದೆ.ಆ ಕಂಪೆನಿ ಕಳಪೆ ಗುಣಮಟ್ಟದ ಔಷಧಿಗಳನ್ನು ಉತ್ಪಾದಿಸಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿರುತ್ತದೆ.ಕಡಿಮೆ ಸಂಬಳ ಕೊಟ್ಟರೂ ಕೆಲಸಕ್ಕೆ ಬರುತ್ತಾರೆ ಅಂತ ಎಂಬಿಬಿಎಸ್ ಓದಿರದ,ಇಂಗ್ಲೀಷ್ ಔಷಧಿಗಳ ಬಗ್ಗೆ ಜ್ಞಾನವಿರದ ಆಯುರ್ವೇದ,ಹೋಮಿಯೋಪತಿ ಓದಿದ ವೈದ್ಯರನ್ನು ಆಸ್ಪತ್ರೆಯ ಆಡಳಿತ ಮಂಡಳಿ ICU ಥರದ ಆಯಕಟ್ಟಿನ ಜಾಗಗಳಲ್ಲಿ ಕೆಲಸಕ್ಕೆ ನೇಮಿಸುತ್ತದೆ.ಇಂಥ ಹಲವು ಉದಾಹರಣೆಗಳಿವೆ ಕಾದಂಬರಿಯಲ್ಲಿ. ಡಾ.ವಿಶ್ವನಾಥನಿಗೆ ಇವೆಲ್ಲವೂ ಅರಿವಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡು ಸಾಧ್ಯವಾದಷ್ಟು ಪ್ರಾಮಾಣಿಕವಾಗಿರಲು ಪ್ರಯತ್ನಿಸುತ್ತಾನೆ.
ಕಾದಂಬರಿಯ ಇನ್ನೊಂದು ಪ್ರಮುಖ ಪಾತ್ರ ಡಾ.ಕವಿಕಟ್ಟಿಯವರದ್ದು.ಅವರು ಡಾ.ವಿಶ್ವನಾಥ ಕೆಲಸ ಮಾಡುವ ಆಸ್ಪತ್ರೆಯ ಮುಖ್ಯಸ್ಥರು.ರೋಗಿಗಳಿಗೆ ಏನಾದರೂ ಪರವಾಗಿಲ್ಲ ತನಗೆ,ತಮ್ಮ ಆಸ್ಪತ್ರೆಗೆ ಲಾಭವಾಗಬೇಕೆಂಬ ಮನಸ್ಥಿತಿ ಉಳ್ಳವರು.ದುಡ್ಡು ಮಾಡುವ ಉದ್ದೇಶದಿಂದ ಮತ್ತು ಸ್ವಲ್ಪವೂ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯವಿರಲಿ ಇಲ್ಲದಿರಲಿ ಎಲ್ಲರಿಗೂ USG Scan,CT Scan,MRI,Endoscopy ಮುಂತಾದ Investigations ಅನ್ನು ಮಾಡಲು ಆದೇಶಿಸುತ್ತಾರೆ.ನಾರ್ಮಲ್ ಡೆಲಿವರಿ ಆಗುತ್ತದೆಂದು ನೂರಕ್ಕೆ ನೂರ ಹತ್ತು ಪಟ್ಟು ಖಚಿತವಿದ್ದರೆ ಮಾತ್ರ ನಾರ್ಮಲ್ ಹೆರಿಗೆ ಮಾಡಿಸುವಂತೆ, ಇಲ್ಲದಿದ್ದರೆ ಒಂದು ಪರ್ಸೆಂಟ್ ಅನುಮಾನವಿದ್ದರೂ ಸಿಸೇರಿಯನ್ ಹೆರಿಗೆ ಮಾಡಿ,ಆ ಮೂಲಕ ಆಸ್ಪತ್ರೆಗೆ ಇನ್ನಷ್ಟು ಆದಾಯ ತಂದು ಕೊಡಲು ಪ್ರಸೂತಿ ಶಾಸ್ತ್ರದ ಮುಖ್ಯಸ್ಥರಿಗೆ ಸೂಚಿಸುತ್ತಾರೆ ಕವಿಕಟ್ಟಿಯವರು.ತಮ್ಮ ಆಸ್ಪತ್ರೆಗೆ ಔಷಧಗಳನ್ನು ಪೂರೈಸುವ ಕಂಪೆನಿಯು ಕಳಪೆ ಗುಣ್ಣಮಟ್ಟದ ಮಾತ್ರೆ,ಇಂಜೆಕ್ಷನ್’ಗಳನ್ನು ಕೊಡುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಪದೇ ಪದೇ ತಿಳಿಸಿದರೂ ಅದೇ ಕಂಪೆನಿಯ ಔಷಧಗಳನ್ನೇ ಕಡ್ದಾಯವಾಗಿ ಬಳಸುವಂತೆ ತಾಕೀತು ಮಾಡುತ್ತಾರೆ.ಸರ್ಕಾರದ ಜನಪ್ರಿಯ ಆರೋಗ್ಯವಿಮಾ ಯೋಜನೆಯೊಂದನ್ನು ಹೈಜಾಕ್ ಮಾಡಿ ತಾವು ಲಾಭ ಮಾಡಿಕೊಳ್ಳುತ್ತಾರೆ.ಇಷ್ಟೆಲ್ಲ ಮಾಡಿದರೂ ಡಾ.ಕವಿಕಟ್ಟಿಯವರು ತಮಗಿರುವ ಪ್ರಭಾವದಿಂದ ಮಹಾ ಧರ್ಮಿಷ್ಠನಂತೆ,ಬಡ ರೋಗಿಗಳ ಸೇವೆ ಮಾಡುವ ವೈದ್ಯನಂತೆ ಪೋಸು ಕೊಡುತ್ತ ಮೆರೆಯುತ್ತಾರೆ.
ಇಂಥ ಕವಿಕಟ್ಟಿಯವರಿಗೂ ಆಘಾತವಾಗುವ ಘಟನೆಯೊಂದು ನಡೆಯುತ್ತದೆ.ಇದ್ದಕ್ಕಿದ್ದಂತೆ ನಡೆಯುವ ಆ ಘಟನೆ ಯಾವುದು,ಡಾ.ವಿಶ್ವನಾಥ ಮುಂದೇನಾಗುತ್ತಾನೆ,ಮೇಲೆ ಹೇಳಿದ ಉದಾಹರಣೆಗಳ ಜೊತೆಗೆ ಇನ್ನೂ ಯಾವ ಯಾವ ರೀತಿ ಖಾಸಗಿ ಆಸ್ಪತ್ರೆಗಳು,ಅಲ್ಲಿನ ವೈದ್ಯರು,ಆಡಳಿತ ಮಂಡಳಿ ರೋಗಿಗಳ ಜೀವ,ಹಣದ ಜೊತೆ ಆಟವಾಡುತ್ತಾರೆ,ಕಾದಂಬರಿಗೆ ಸಿಗುವ ತಾರ್ಕಿಕ ಅಂತ್ಯ ಯಾವ ರೀತಿಯದ್ದು ಎಂಬುದನ್ನು ತಿಳಿಯಲು ನೀವು ‘ಸತ್ಯಮೇವ ಜಯತೆ’ ಓದಬೇಕು.
ಡಾ.ದಯಾನಂದ ಲಿಂಗೇಗೌಡರು ಇನ್ನೊಂದು ಕಾರಣಕ್ಕೆ ಇಷ್ಟವಾಗುತ್ತಾರೆ.ವೈದ್ಯಕೀಯ ಜಗತ್ತಿನ ಜೊತೆಗೆ ಕಾದಂಬರಿಯಲ್ಲಿ ಕನ್ನಡದ ಭವಿಷ್ಯದ ಬಗ್ಗೆಯೂ ಚರ್ಚಿಸುತ್ತಾರೆ.ಕಾದಂಬರಿಯ ಆರಂಭದ ಭಾಗಗಳಲ್ಲಿ ಇಂಗ್ಲೀಷ್ ಯಾವ ರೀತಿ ಅನಿವಾರ್ಯವಾಗಿದೆ,ಅದು ಅನ್ನ ಕೊಡುವ ಭಾಷೆಯಾಗಿದ್ದು ಏಕೆ,ಇದರಿಂದ ಕನ್ನಡದ ಮಕ್ಕಳಿಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಆಗುತ್ತಿರುವ ನಷ್ಟವೇನು,ಕನ್ನಡವನ್ನು ಉಳಿಸುವುದು ಹೇಗೆ ಎಂಬುದನ್ನೆಲ್ಲ ಚರ್ಚಿಸುತ್ತಾರೆ.ಅಲ್ಲದೆ ಕಾದಂಬರಿಯ ಮಧ್ಯೆ ಅಲ್ಲಲ್ಲಿ ಜನಪ್ರಿಯ ಕನ್ನಡ ಚಿತ್ರಗೀತೆಗಳನ್ನು,ಭಾವಗೀತೆಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರುವುದರಿಂದ ಕಾದಂಬರಿ ಮತ್ತಷ್ಟು ಆಪ್ತವಾಗುತ್ತದೆ.
ವೈದ್ಯಕೀಯ ಜಗತ್ತಿನ ಬಗ್ಗೆ ಕಥೆ,ಕಾದಂಬರಿಗಳು ಕನ್ನಡದಲ್ಲಿ ಅಷ್ಟಾಗಿ ಬಂದಿಲ್ಲ.ಅದರಲ್ಲೂ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ವ್ಯಾಪಾರದ ದಿಗ್ದರ್ಶನ ಮಾಡಿಸುವ ಪುಸ್ತಕಗಳು ಹುಡುಕಿದರೂ ಸಿಗುವುದು ತುಂಬಾ ಕಷ್ಟ.ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡುತ್ತವೆ ಎಂದು ಸುಮಾರು ಜನರಿಗೆ ಗೊತ್ತೇ ವಿನಃ ಅವು ಹೇಗೆ ಮಾಡುತ್ತವೆ ಮತ್ತು ಯಾಕಾಗಿ ಮಾಡುತ್ತವೆ ಅಂತ ಬಹುತೇಕರಿಗೆ ಗೊತ್ತಿಲ್ಲ.ಇಂಥ ಅಪರೂಪದ ವಿಷಯವನ್ನು ಕಾದಂಬರಿಯ ರೂಪದಲ್ಲಿ ಸುಂದರವಾಗಿ ವಿವರಿಸುವ ಪ್ರಯತ್ನ ಮಾಡಿರುವುದಕ್ಕೆ ಡಾ.ದಯಾನಂದ ಲಿಂಗೇಗೌಡರು ಅಭಿನಂದನಾರ್ಹರು.ರೇಡಿಯಾಲಜಿಸ್ಟ್ ಆಗಿ ತಮ್ಮ ಬಿಡುವಿಲ್ಲದ ವೃತ್ತಿಯ ನಡುವೆಯೂ ಕನ್ನಡ ಲೇಖನ,ಕಾದಂಬರಿ ಬರೆಯುವುದು ಅವರಿಗೆ ಕನ್ನಡದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. pothi.com ಎಂಬ ವೆಬ್ಸೈಟಿನಲ್ಲಿ ಈ ಪುಸ್ತಕ E-Book ರೂಪದಲ್ಲೂ ದೊರೆಯುತ್ತದೆ.ಅಲ್ಲಿಂದ E-book ಖರೀದಿಸಲು ಲಿಂಕ್ ಇಲ್ಲಿದೆ. https://pothi.com/pothi/book/ebook-dayananda-lingegowda-satya-meeva-jayathe ಇತರ ಪುಸ್ತಕ ಮಳಿಗೆಗಳಿಂದಲೂ ಕೊಂಡು ಮುದ್ರಿತ ಪುಸ್ತಕವನ್ನೂ ಓದಬಹುದು. `Pan Pan Doctor’ ಎಂಬ ಹೆಸರಿನಲ್ಲಿ ಈ ಕಾದಂಬರಿ ಇಂಗ್ಲೀಷಿಗೂ ಅನುವಾದವಾಗಿದೆ.ಅಮೆಝಾನ್’ನಲ್ಲಿ ಲಭ್ಯವಿದೆ.
ಒಂದಲ್ಲ ಒಂದು ಹಂತದಲ್ಲಿ ರೋಗಿಗಳಾಗಿ ಆಸ್ಪತ್ರೆಯ ಮೆಟ್ಟಿಲು ಹತ್ತುವ ನಾವೆಲ್ಲರೂ ಅವಶ್ಯವಾಗಿ ಓದಬೇಕಾಗಿರುವ ಕೃತಿ ‘ಸತ್ಯಮೇವ ಜಯತೆ’.