Featured ಅಂಕಣ ಪ್ರಚಲಿತ

ಫೇಸ್’ಬುಕ್’ನ ಅವಾಂತರ: ಖಾಸಗಿ ಮಾಹಿತಿಗೆ ಸಂಚಕಾರ – ದೇಶಕ್ಕೆ ಗಂಡಾಂತರ!!

ಫೇಸ್’ಬುಕ್’ನ ಸಂಸ್ಥಾಪಕ  ಮಾರ್ಕ್ ಜುಕರಬರ್ಗ್’ರ ಇತ್ತೀಚಿಗೆ “ನಮ್ಮ ಮೇಲೆ ನಿಮ್ಮ ದತ್ತಾಂಶ (ಡೇಟಾ) ಸುರಕ್ಷಿತವಾಗಿಡುವ ಗುರುತರ ಜವಾಬ್ದಾರಿ ಇದೆ. ನಮಗೆ ಹಾಗೆ ಮಾಡಲು ಆಗದಿದ್ದರೆ ನಾವು ಇದಕ್ಕೆ ಲಾಯಕ್ಕೇ ಅಲ್ಲ! ಇದು ಒಂದು ವಿಶ್ವಾಸಘಾತ ಮತ್ತು ಇದರ ಪುನರಾವರ್ತನೆಯಾಗದಂತೆ ನಾವು ಕ್ರಮಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ನಮಗೆಲ್ಲ ತಿಳಿದಿರುವಂತೆ, ಫೇಸ್’ಬುಕ್’ನಲ್ಲಿಯ ನಮ್ಮ ದತ್ತಾಂಶವನ್ನು ‘ಕೇಂಬ್ರಿಜ್ ಎನಲೆಟೀಕಾ’ ಎಂಬ ಕ೦ಪನಿಯು ನಮ್ಮ ಒಪ್ಪಿಗೆ ಪಡೆಯದೆ ಅನೈತಿಕವಾಗಿ ಮಾರಿಕೊಂಡು ಸಾಮೂಹಿಕ ಸನ್ನಿ ಸೃಷ್ಟಿಸಲು ಬಳಸಿಕೊಳ್ಳುತ್ತಿದೆ! ಫೇಸ್’ಬುಕ್’ನ 5 ಕೋಟಿ ಬಳಕೆದಾರರ ದತ್ತಾಂಶ ಕಳುವಾಗಿದೆ!

‘ಕೇಂಬ್ರಿಜ್ ಎನಲೆಟೀಕಾ’ದ ಸಹಾಯ ಪಡೆದು ಚುನಾವಣೆಯಲ್ಲಿ ಲಾಭ ಪಡೆಯಲಾಗಿದೆ ಎಂದು ನಮ್ಮ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ, ಪರಸ್ಪರ ಕೆಸೆರೆರಚಾಟದಲ್ಲಿ ನಿರತವಾಗಿವೆ! ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್’ಬುಕ್’ನ ದತ್ತಾಂಶದ ಸಹಾಯದಿಂದಲೇ ಚುನಾವಣೆಯಲ್ಲಿ ಜಯಗಳಿಸಿದರೆಂಬ ಆರೋಪ ಕೇಳಿ ಬರುತ್ತಿದೆ. ಡೊನಾಲ್ಡ್ ಟ್ರಂಪ್’ರ ಚುನಾವಣಾ ರಣನೀತಿಕಾರರು ‘ಕೇಂಬ್ರಿಜ್ ಎನಲೆಟೀಕಾ’ದ ಸಹಯೋಗದಿಂದ  ಫೇಸ್’ಬುಕ್’ನಿಂದ ಕದ್ದ  ದತ್ತಾಂಶದಿಂದ ಟ್ರಂಪ್ ಪರ ನಕಲಿ ವಾತಾವರಣ/ಹವಾ ಸೃಷ್ಟಿಸಿ ಗೆಲುವಿಗೆ ಕಾರಾಣೀಕರ್ತರಾದರೆಂಬುದು ಆರೋಪ. ಇಲ್ಲಿ ನಾವೆಲ್ಲ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್, ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಲಾಗ್’ಇನ್ ಮಾಡಿದಾಗ, ನಮಗೆ ವಿಶಿಷ್ಟವಾದ ಮಾಹಿತಿ ಪದೇ ಪದೇ (ಫೇಸ್’ಬುಕ್ ಅಥವಾ ಟ್ವಿಟರ್) ಕಾಣಿಸಿಕೊಳ್ಳುತ್ತಿರುವದನ್ನು  ನೋಡಿದಾಗ, ಸಾವಿರಾರು ಜನರು ಒಂದೇ ವಿಷಯದ ಕುರಿತು ಹಲವಾರು ಬಾರಿ ತಮ್ಮ ಗೋಡೆಗಳಲ್ಲಿ ಬರೆಯುತ್ತಿದ್ದಂತೆ ಭಾಸವಾಗುತ್ತದೆ. ಇದರಿಂದ ನಮ್ಮ ಮನಸ್ಸಿನಲ್ಲಿ ಒಂದು ವಿಚಿತ್ರ ವಾತಾವರಣದ ಚಿತ್ರಣ ಮೂಡಿ ಮನಸ್ಸು ಆ ವಿಷಯದತ್ತ ವಾಲುತ್ತ ಹೋಗುತ್ತದೆ. ಯಾವಾಗ ಜನರು ಪದೇ ಪದೇ ಗೋಚರಿಸುವ ಇಂಥ ಟ್ವೀಟ್’ಗಳನ್ನು, ಪೋಸ್ಟ್’ಗಳನ್ನು ಓದುತ್ತಾರೋ, ಅವರಿಗೆ ಒಬ್ಬ ವ್ಯಕ್ತಿ/ರಾಜಕಾರಣಿ ನಿಜವಾಗಿಯೂ ಜನಪ್ರೀಯತೆಯ ಶಿಖರಕ್ಕೇರುತ್ತಿದ್ದಾನೆಂದು ಭಾಸವಾಗಿ ಅದನ್ನೇ ನಂಬಲು ಪ್ರಾರಂಭಿಸುತ್ತಾರೆ.  ಆದರೆ ಇದೊಂದು ನಕಲಿ ಹವಾ ಸೃಷ್ಟಿಸಿ, ಜನರನ್ನು ಸಾಮೂಹಿಕ ಸನ್ನಿಗೆ ಒಳಪಡಿಸುವ ಪ್ರಯತ್ನವಾಗಿರುತ್ತದೆ.  ‘ಕೇಂಬ್ರಿಜ್ ಎನಲೆಟೀಕಾ’ದ ಪ್ರಮುಖ ನಿರ್ದೇಶಕ ರಾಬರ್ಟ್ ಮರ್ಸರ್ ಜಗತ್ತಿನ ಪ್ರಮುಖ ಉದ್ಯೋಗಪತಿಯಾಗಿದ್ದು, ಡೊನಾಲ್ಡ್ ಟ್ರಂಪ್’ರ ಸಮರ್ಥಕರೆಂಬುದು ಜಗಜ್ಜಾಹೀರಾಗಿದೆ. ರಾಬರ್ಟ್ ಮರ್ಸರ್’ರ ಮೇಲೆ ಎರಡು ಪ್ರಮುಖ ಆರೋಪಗಳಿವೆ. ಮೊದಲೇನೆಯದಾಗಿ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಅಭಿಪ್ರಾಯವನ್ನು ಪ್ರಭಾವಿತಗೊಳಿಸಿದರೆಂದು ಮತ್ತು ‘ಬ್ರೇಕ್ಸಿಟ್’ ಅಂದರೆ ಯುರೋಪ್’ನಿಂದ ಬ್ರಿಟನ್ ಹೊರನಡೆವ ಸಂದರ್ಭದಲ್ಲಿ ನಡೆಸಿದ ಜನಮತ ಸಂಗ್ರಹದಲ್ಲಿ ಜನರ ಅಭಿಪ್ರಾಯವನ್ನು ಪ್ರಭಾವಿತಗೊಳಿಸಿದರೆಂದು. ಈ ಎರಡೂ ಘಟನೆಗಳಲ್ಲಿ ಅವರು ನಕಲಿ ವಾತಾವರಣವನ್ನು ಸೃಷ್ಟಿಸಿದರು, ಜನರಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್, ಟ್ವಿಟರ್’ನಲ್ಲಿ ನಕಲಿ ವಾತಾವರಣದ  ಪೋಸ್ಟಗಳು ಪದೇ ಪದೇ  ಕಂಡು ದೇಶದ ಒಲವು ಒಂದು ನಿರ್ದಿಷ್ಟ ದಿಸೆಯಲ್ಲಿ/ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬಲಾರಂಭಿಸುತ್ತಾರೆ ಮತ್ತು ತಾವು ಕೂಡ ಇದೇ ಥೇಯರಿಯನ್ನು ವಿಶ್ವಾಸಾರ್ಹವೆಂದು ತಿಳಿದು ಅದರತ್ತ ಸೆಳೆಯಲ್ಪಡುತ್ತಾರೆ. ಬ್ರಿಟನ್ ಸರ್ಕಾರ ಬ್ರೇಕ್ಸಿಟ್’ನಲ್ಲಿ ‘ಕೇಂಬ್ರಿಜ್ ಎನಲೆಟೀಕಾ’ದ ಪಾತ್ರದ ಕುರಿತು ಗಂಭೀರ ತನಿಖೆ ಕೂಡ ನಡೆಸುತ್ತಿದೆ. ಈ ನಾಟಕ ಜಗದ ಬೆಳಕಿಗೆ ಬರುವಂತೆ ಮಾಡಿದ ವಿಸಲ್ ಬ್ಲೋವರ್ ಅಮೇರಿಕದ ಕ್ರಿಸ್ಟೋಫರ್ ವ್ಯಾಲಿ ಎಂಬ ವ್ಯಕ್ತಿ. ಈತ ರಾಬರ್ಟ್ ಮರ್ಸರ್’ರ ‘ಕೇಂಬ್ರಿಜ್ ಎನಲೆಟೀಕಾ’ದ ಉದ್ಯೋಗಿಯಾಗಿದ್ದ. ಈತ ಹೇಳುವಂತೆ ಫೇಸ್’ಬುಕ್’ನ 5 ಕೋಟಿ ಜನರ ದತ್ತಾಂಶ ಆಧರಿಸಿ ಟ್ರಂಪ್’ರ ಚುನಾವಣಾ ಪ್ರಚಾರವನ್ನು ವಿನ್ಯಾಸಗೊಳಿಸಲಾಯಿತು. 2016ರಲ್ಲಿ ನಡೆದ ಅಮೇರಿಕದ ಚುನಾವಣೆಗಾಗಿ 2014ರಲ್ಲೇ ‘ಕೇಂಬ್ರಿಜ್ ಎನಲೆಟೀಕಾ’ ಕಾರ್ಯಪ್ರವೃತ್ತವಾಗಿತ್ತು. ಇದಕ್ಕಾಗಿ ಒಬ್ಬ ಸಂಶೋಧಕ ಮತ್ತು ಮಾನಸಿಕ ತಜ್ಞ ಅಲೆಕ್ಸಾಂಡರ್ ಕೊಗನ್’ರ ಸೇವೆ ಪಡೆದು ಅವರಿಗೆ ಲಕ್ಷಗಟ್ಟಲೇ ಡಾಲರ್’ಗಳ ಭಾರಿ ಮೊತ್ತವನ್ನು ಸಂದಾಯಿಸಿ, ಫೇಸ್’ಬುಕ್’ನ ದತ್ತಾಂಶ ಕದಿಯುವ  ಅಪ್ಲಿಕೇಷನ್ನೊಂದನ್ನು  ತಯಾರಿಸಿದ ಆರೋಪ ‘ಕೇಂಬ್ರಿಜ್ ಎನಲೆಟೀಕಾ’ದ ಮೇಲಿದೆ.  ಕೊಗನ್’ರ ಈ ಅಪ್ಲಿಕೇಷನ್’ನ ಹೆಸರು ‘ದಿಸ್ ಈಸ್ ಯುವರ್ ಡಿಜಿಟಲ್ ಲೈಫ್”, 270000 ಜನ ಈ ಅಪ್ಲಿಕೇಷನ್’ನ್ನು ಡೌನ್’ಲೋಡ್ ಮಾಡಿಕೊಂಡಿದ್ದರು. ಇವರೆಲ್ಲರ ದತ್ತಾಂಶವಷ್ಟೇ ಅಲ್ಲ, ಇವರ ಸ್ನೇಹಿತರ, ಸಂಬಧಿಕರ ಮಾಹಿತಿಯೂ ಕೂಡ ಕದಿಯಲ್ಪಟ್ಟಿತು!

ನಮ್ಮೆಲ್ಲರನ್ನು ಕಾಡುವ ಕೌತುಕ ಹಾಗೂ ಆತಂಕದ ಪ್ರಶ್ನೆ, ಯಾವುದೋ ಅಪ್ಲಿಕೇಶನ್ನೊಂದು ನಮ್ಮ ಖಾಸಗಿ ಮಾಹಿತಿಯನ್ನು ಹೇಗೆ ಕದ್ದು ಸಂಗ್ರಹಿಸಲು ಸಾಧ್ಯ?  ಇದಕ್ಕೆಲ್ಲ ಕಾರಣ ನಮ್ಮ ನಿರ್ಲಕ್ಷ ಮತ್ತು ಅಜಾಗರುಕತೆ. ಯಾರು ಎ೦ಡ್ರೋಯಿಡ್ ಉಪಕರಣಗಳಲ್ಲಿ ಫೇಸ್’ಬುಕ್ ಉಪಯೋಗಿಸುತ್ತಾರೋ ಅಂಥವರ ಎಸ್.ಎಂ.ಎಸ್. ಮತ್ತು ಕಾಲ್ ಡಾಟಾದ ವಿವರಗಳನ್ನು ಕಳೆದ ಹಲವು ವರ್ಷಗಳಿಂದ ಸಂಗ್ರಹಿಸಲಾಗುತ್ತಿದೆ! ಫೇಸ್’ಬುಕ್’ನಲ್ಲಿ ಸಂಪೂರ್ಣ ದತ್ತಾಂಶವನ್ನು ಡೌನ್’ಲೋಡ್ ಮಾಡುವ ವಿಕಲ್ಪವಿರುತ್ತದೆ. ವಿಶ್ವಾದ್ಯಂತ ಫೇಸ್’ಬುಕ್ ಬಹಳಷ್ಟು ಬಳಕೆದಾರರಿಗೆ ಈ ಡೇಟಾ ಫೈಲ್’ನಲ್ಲಿ ತಮ್ಮ ಹಳೆಯ ಕಾಲ್ ಹಿಸ್ಟ್ರಿ ಸಿಕ್ಕಿದೆ! ಫೇಸ್’ಬುಕ್ ತನ್ನ ಮೇಸೆಂಜರ್ ಅಪ್ಲಿಕೇಶನ್ ಮುಖಾಂತರ ಈ ಡೇಟಾವನ್ನು ಸಂಗ್ರಹಿಸುತ್ತಿದೆ.ಈ ಮೇಸೆಂಜರ್  ಅಪ್ಲಿಕೇಷನ್  ತನ್ನನ್ನು ಎ೦ಡ್ರೋಯಿಡ್   ಫೋನ್’ನ ಡಿಫಾಲ್ಟ್ ಎಸ್.ಎಂ.ಎಸ್. ಅಪ್ಲಿಕೇಷನ್ನಾಗಿಸಲು ನಿರಂತರವಾಗಿ ಬಳಕೆದಾರರ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತದೆ! ಫೇಸ್’ಬುಕ್’ನಲ್ಲಿ ಬಹಳಷ್ಟು ಗೇಮ್ಸ್ ಮತ್ತು ಕ್ವಿಜ್’ಗಳಿರುತ್ತವೆ, ಬಹುತೇಕ ಜನ ಇಂತಹ ಆಟಗಳಲ್ಲಿ ಪಾಲ್ಗೊಳ್ಳತ್ತಾರೆ. ಇಂತಹ ಆಟಗಳನ್ನು ಡೌನ್’ಲೋಡ್ ಮಾಡಿಕೊಳ್ಳುವಾಗ ಅಥವಾ ಕ್ವಿಜ್’ಗಳಲ್ಲಿ ಭಾಗವಹಿಸುವಾಗ ಮೊಬೈಲ್ ಸ್ಕ್ರೀನ್’ ಮೇಲೆ  ಪಾಪ್’ಅಪ್ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. ಈ ಪಾಪ್’ಅಪ್  ಸಂದೇಶದ ಮುಖಾಂತರ ಆಗಂತುಕ ಅಪ್ಲಿಕೇಷನ್ ನಿಮ್ಮ ಕೌಟುಂಬಿಕ ದತ್ತಾಂಶವನ್ನು (ಫ್ಯಾಮಿಲಿ ಡೇಟಾ) ಬಳಸಲು ಸಮ್ಮತಿ ಕೇಳುತ್ತದೆ. ಇಂತಹ ಸಂದೇಶಗಳು ಗೇಮ್’ನ ಮಧ್ಯೆ ಬಂದಾಗ ಉಂಟಾಗುವ ಕಿರಿಕಿರಿ ಮತ್ತು ಆಟಕ್ಕೆ ಉಂಟುಮಾಡುವ ಭಂಗದಿಂದ ತಪ್ಪಿಸಿಕೊಳ್ಳಲು ಜನರು ಗಡಿಬಿಡಿಯಲ್ಲಿ ಸಂದೇಶವನ್ನು ಓದದೇ ಅರ್ಥಮಾಡಿಕೊಳ್ಳದೇ  ‘ಓಕೆ’ ಗುಂಡಿಯನ್ನು ಒತ್ತಿ ಬಿಡುತ್ತಾರೆ. ಇದರಿಂದ ನಮ್ಮ ದತ್ತಾಂಶ ಕಳುವಾಗಿ ಯಾರದೋ ಕೈ ಸೇರಿ ಬಿಡುತ್ತದೆ. ಫೇಸ್’ಬುಕ್’ನಲ್ಲಿ “ನೀವು ಅನ್ಯ ಲಿಂಗಿಗಳಾಗಿದ್ದಾರೆ ಹೇಗೆ ಕಾಣುತ್ತಿರಿ?, ನೀವು ಯಾವಾಗ ಮತ್ತು ಹೇಗೆ ಸಾವನ್ನಪ್ಪುತ್ತೀರಿ?, 50 ವರ್ಷದ ನಂತರ ನೀವು ಹೇಗೆ ಕಾಣುತ್ತೀರಿ?. ಮುಂದಿನ ಜನ್ಮದಲ್ಲಿ ನೀವು ಎಲ್ಲಿ ಮತ್ತು ಏನಾಗಿ ಹುಟ್ಟುತ್ತೀರಿ?, ಹೋದ ಜನ್ಮದಲ್ಲಿ ನೀವು ಏನಾಗಿದ್ರೀ?” ಎಂಬುದನ್ನು ತಿಳಿಯಲು ಲಿಂಕ್ ಒ೦ದನ್ನು ಕ್ಲಿಕ್ಕಿಸಲು ಕೇಳಲಾಗುತ್ತದೆ. ಯಾವಾಗ ಈ ಲಿಂಕ್’ಗಳ ಮೇಲೆ ವ್ಯಕ್ತಿ ಕ್ಲಿಕ್ಕಿಸುತ್ತಾನೋ ಆಗ ಆತನ ಫೇಸ್’ಬುಕ್’ನಲ್ಲಿರುವ ಖಾಸಗಿ ಮಾಹಿತಿ ಥರ್ಡ್ ಪಾರ್ಟಿ ಕಂಪನಿಯೊಂದರ ಕೈಸೇರುತ್ತದೆ. ಆದ್ದರಿಂದ ನಾವು ಇಂತಹ ಕೌತುಕವೆನಿಸಿದರೂ ಅಸಂಬದ್ಧವಾಗಿರುವ ಪ್ರಶ್ನೆಗಳುಳ್ಳ ಅಥವಾ ಆಸೆ ತೋರಿಸುವ ಲಿಂಕ್’ಗಳ ಮೇಲೆ ಕ್ಲಿಕ್ಕಿಸದೇ ಇರುವುದು ಒಳಿತು. ಫೇಸ್’ಬುಕ್’ನ ಮೂಲಗಳು ಹೇಳುವಂತೆ ಅದು ಜನರ ಹೆಸರು ಮತ್ತು ಭಾವಚಿತ್ರವನ್ನು ಮಾತ್ರ  ಸಾರ್ವಜನಿಕಗೊಳಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಇಂತಹ ಅಪ್ಲಿಕೇಷನ್’ಗಳ ಜಾಲದಲ್ಲಿ ಸಿಕ್ಕಿಕೊಂಡಾಗ ಆತನ ಖಾಸಗಿ ಮಾಹಿತಿಗಳಾದ, ಐ.ಪಿ.ಅಡ್ರೆಸ್, ಲೋಕೇಶನ್, ಈ ಮೇಲ್ ಐಡಿ, ಜನ್ಮ ದಿನಾಂಕ, ಫೋನ್ ನಂಬರ್ ಹಾಗೂ ಇತರೆ ದತ್ತಾಂಶಗಳು ಮೂರನೆಯ ವ್ಯಕ್ತಿ/ಕಂಪನಿಯ ಕೈ ಸೇರಿ ಬಿಡುತ್ತವೆ.  ಉದ್ದೇಶಪೂರ್ವಕವಾಗಿಯೇ ‘ಕೇಂಬ್ರಿಜ್  ಎನಲೆಟೀಕಾ’ ಮತ್ತು ಅದಕ್ಕೆ  ಸಂಬಧಿಸಿದ ಅಪ್ಲಿಕೇಷನ್’ಗಳಿಗೆ ಜನರ  ಖಾಸಗಿ ಮಾಹಿತಿಯನ್ನು ಒದಗಿಸಿದ ಆರೋಪ ಫೇಸ್’ಬುಕ್ ಮೇಲಿದೆ.

ಫೇಸ್’ಬುಕ್ ಬಳಕೆದಾರರ ದತ್ತಾಂಶ/ಮಾಹಿತಿಯನ್ನು  ಕದಿಯಲು ಮಾನಸಿಕ ತಜ್ಞ  ಅಲೆಕ್ಸಾಂಡರ್ ಕೊಗನ್’ರ ಕಂಪನಿ ‘ಗ್ಲೋಬಲ್ ಸೈನ್ಸ್ ರಿಸರ್ಚ್’  ಜನರಿಗೆ  ಸಮೀಕ್ಷೆಯೊಂದರಲ್ಲಿ  ಭಾಗವಹಿಸಲು ಹಣದ ಪ್ರಲೋಭನೆ ನೀಡಿತ್ತು. ಹೀಗೆ ಕದ್ದ ಮಾಹಿತಿಯನ್ನು ‘ಕೇಂಬ್ರಿಜ್ ಎನಲೆಟೀಕಾ’ಗೆ ನೀಡಲಾಯಿತು. ಈ ಮಾಹಿತಿಯ ಮುಖಾಂತರ ಆಯಾ  ಭಾಗದ ಜನರ ಭಾವನೆ, ಆಚಾರ ವಿಚಾರ,ಅಭಿರುಚಿ, ವಿವಿಧ ವಿಷಯಗಳ ಕುರಿತ ಆಸಕ್ತಿ, ಆ ಜನ ಬಹುವಾಗಿ ಚರ್ಚಿಸುವ ವಿಷಯಗಳು,ಪ್ರಮುಖ ವಿಚಾರಗಳು, ಅವರ ಮನಸ್ಸಿಗೆ ಭಾವನಾತ್ಮಕವಾಗಿ ಹತ್ತಿರವಾದ ವಿಷಯಗಳು, ಜನರ ಲೈಕ್ಸ್ ಮತ್ತು ಡಿಸ್’ಲೈಕ್ಸ್, ಜನತೆಯ ಮನೋವೈಜ್ಞಾನಿಕ ಪಾಶ್ವಚಿತ್ರ (ಪ್ರೊಫೈಲ್), ಜನತೆಯನ್ನು ಪ್ರಭಾವಿತಗೊಳಿಸುವ ವಿಷಯಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ, ಜನತೆಯ ಬ್ರೈನ್ ಮ್ಯಾಪಿಂಗ್ ಮಾಡಿ ಅದನ್ನು  ವಿಶ್ಲೇಷಿಸಿ ಅದಕ್ಕನುಗುಣವಾಗಿ ತನ್ನ ಕಕ್ಷಿದಾರರಿಗೆ ಅನುಕೂಲವಾಗುವ0ತೆ ಸಾಮಾಜಿಕ ಜಾಲತಾಣಗಳ ತಂತ್ರಾಂಶಗಳನ್ನು ತಿರುಚಿ ಉಪಯೋಗೋಸಿಕೊಳ್ಳಲಾಯಿತು. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 5ಕೋಟಿ ಜನರ ಈ ರೀತಿಯ ಮಾಹಿತಿಯನ್ನು ಕದ್ದು ಡೊನಾಲ್ಡ್ ಟ್ರಂಪ್’ರ ಪ್ರಚಾರ ತಂತ್ರವನ್ನು ವಿನ್ಯಾಸಗೊಳಿಸಲಾಯಿತು! ರೇಡಿಯೋ ಅಥವಾ ಟಿ.ವಿ.ಯಲ್ಲಿ  ರಾಜಕೀಯ ಜಾಹಿರಾತುಗಳು ಪ್ರಸಾರವಾದರೆ ಅವು ಇಡೀ ದೇಶದ ಜನತೆಗೆ ಒಂದೇ ತೆರನಾಗಿರುತ್ತವೆ. ಆದರೆ ಈ ರೀತಿ ಕದ್ದ ಮಾಹಿತಿ ಮತ್ತು ಮನೋವೈಜ್ಞಾನಿಕ ಪಾಶ್ವಚಿತ್ರ (ಪ್ರೊಫೈಲ್) ಆಧರಿಸಿ ತಯಾರಿಸಲಾದ ಪ್ರಚಾರ, ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ಮತದಾರರನ್ನು ಗುರಿಯಾಗಿಸಿಕೊಂಡು ಅವರವರ ಅಭಿರುಚಿಗೆ ತಕ್ಕಂತೆ ಅವರ ಗೋಡೆಗಳ ಮೇಲೆ ಗೋಚರಿಸುವಂತೆ ಮಾಡಲಾಗುತ್ತದೆ. ಇಂತಹ ತಂತ್ರಗಾರಿಕೆಯಿಂದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಗೆಲ್ಲಲಾಯಿತೆಂದು ಹೇಳಲಾಗುತ್ತಿದೆ. ಭಾರತದಂತಹ ದೇಶದಲ್ಲಿ ಪ್ರತಿವರ್ಷ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ ನಡೆದೇ ಇರುತ್ತದೆ,ಹಾಗಾಗಿ  ‘ಕೇಂಬ್ರಿಜ್ ಎನಲೆಟೀಕಾ’ದ೦ತಹ ಕಂಪನಿಗಳಿಗೆ ಒಂದು ದೊಡ್ಡ ಹಬ್ಬ! ಈ ರೀತಿ ಅನೈತಿಕವಾಗಿ ಫೇಸ್’ಬುಕ್ ಬಳಕೆದಾರರ ಮಾಹಿತಿ ಕದಿಯುವದು ಅಕ್ಷಮ್ಯ ಅಪರಾಧ. ಫೇಸ್’ಬುಕ್ ಈಗ ಕೇವಲ ನಮ್ಮ ಭಾವಚಿತ್ರ,ಪೋಸ್ಟ್’ಗಳನ್ನು,ವಿಚಾರಗಳನ್ನು ಹಂಚಿಕೊಳ್ಳುವ ಮತ್ತು ಬಂಧು ಮಿತ್ರರೊಂದಿಗೆ ಸಂಪರ್ಕದಲ್ಲಿರುವ ಒಂದು ಜಾಲತಾಣವಾಗಿ ಉಳಿದಿಲ್ಲ. ಫೇಸ್’ಬುಕ್ ವಿವಿಧ ದೇಶಗಳಲ್ಲಿ ಸರಕಾರಗಳನ್ನು ಅಧಿಕಾರಕ್ಕೆರಿಸುವ ಮತ್ತು ಅಧಿಕಾರದಿಂದಿಳಿಸುವ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ಒಂದು ಜಾಗತಿಕ ಶಕ್ತಿಯಾಗಿ (ಗ್ಲೋಬಲ್ ಪವರ್) ಹೊರಹೊಮ್ಮುತ್ತಿದೆ.ಯಾವ ದೇಶದ ಚುನಾವಣೆಯಲ್ಲಿ ಯಾವ ವಿಷಯ ಪ್ರಮುಖವಾಗುತ್ತದೆ ಎಂಬುದನ್ನೂ, ಆಯಾ ದೇಶದಲ್ಲಿ ತನ್ನ ಕಕ್ಷಿದಾರ ರಾಜಕೀಯ ವ್ಯಕ್ತಿಗಳಿಗೆ ಅನುಕೂಲವಾಗುವ ಮತ್ತು ವಿರೋಧಿಗಳಿಗೆ ಪ್ರತೀಕೂಲವಾಗುವ ನಕಲಿ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇದೆಲ್ಲಕ್ಕೂ ಆಧಾರ ನಮ್ಮೆಲ್ಲರ ಫೇಸ್’ಬುಕ್ ಖಾತೆಯಿಂದ  ಕದಿಯಲ್ಪಟ್ಟ  ದತ್ತಾಂಶ!

ಸೈಬರ್ ತಜ್ಞ ಪವನ ದುಗ್ಗಲ್ ಹೇಳುವಂತೆ ಇಂತಹ ದತ್ತಾಂಶ ಕದಿಯುವುದನ್ನು ತಡೆಯುವಲ್ಲಿ ನಮ್ಮ ದೇಶದಲ್ಲಿ ಯಾವುದೇ ಕಾನೂನುಗಳಿಲ್ಲ ಮತ್ತು ಕದ್ದ ದತ್ತಾಂಶದ ಸಹಾಯದಿಂದ ಫೇಸ್’ಬುಕ್’ನ ಅಲ್ಗೊರಿತಮ್’ಗಳನ್ನು ಬದಲಿಸಿ ನ್ಯೂಸ್ ಫೀಡ್ ಮುಖಾಂತರ ಫೇಸ್’ಬುಕ್ ಬಳಕೆದಾರರ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ತಕ್ಕಂತೆ ನಕಲಿ ವಾತಾವರಣ ಸೃಷ್ಟಿಸಿವುದನ್ನು ತಡೆಯುವದು ಅಷ್ಟು ಸುಲಭವಲ್ಲ. ಇಲ್ಲಿ ಒಬ್ಬ ವ್ಯಕ್ತಿಗೆ ಒಂದು ವಿಷಯದ ಇನ್ನೊಂದು ಮಗ್ಗುಲನ್ನು ಅರಿಯಲು ಸಾಧ್ಯವೇ ಆಗುವುದಿಲ್ಲ!  ನಾವು ತಿನ್ನುವ ಆಹಾರ,ನಮ್ಮ ಆಯ್ಕೆಯ ಚಲನಚಿತ್ರಗಳು,  ನೆಚ್ಚಿನ ತಾಣಗಳು, ಶಾಪಿಂಗ್ ತಾಣಗಳು, ನಾವು ಇಷ್ಟಪಡುವ ಮತ್ತು ವಿರೋಧಿಸುವ ವಿಷಯಗಳು  ಮತ್ತು ವ್ಯಕ್ತಿಗಳ ವಿವರಗಳ ಮಾಹಿತಿ ಫೇಸ್’ಬುಕ್’ನಂತಹ ಸಾಮಾಜಿಕ ಜಾಲತಾಣಗಳ ತಿಜೋರಿಯಲ್ಲಿ ಕೈದಾಗಿದೆ. ದತ್ತಾಂಶ ಸುರಕ್ಷತೆಯ ಕಾನೂನು ಇಲ್ಲದಿರುವದರಿಂದ ಲಂಗುಲಗಾಮಿಲ್ಲದೆ ಈ ಮಾಹಿತಿಯ ದುರುಪಯೋಗವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಸಾಮಾಜಿಕ ಮೋಸಗಾರಿಕೆಯಿಂದ ಬೇಸತ್ತು  “ಡೀಲೀಟ್ ಫೇಸ್’ಬುಕ್” ಕ್ಯಾಂಪೇನ್ ಕೂಡ ಪ್ರಾರಂಭವಾಗಿದೆ! ಕೋಟಿಗಟ್ಟಲೆ ಫೇಸ್’ಬುಕ್ ಬಳಕೆದಾರರು ತಮ್ಮ ಫೇಸ್’ಬುಕ್ ಖಾತೆಯನ್ನು ಅಳಿಸಿಹಾಕುವ ತಯಾರಿಯಲ್ಲಿದ್ದಾರೆ!!

ಸಿಂಗಾಪುರದ ಸಂಸದೀಯ ಸಮಿತಿಯೊಂದು 22 ಮಾರ್ಚ್ 2018ರಂದು ಫೇಸ್’ಬುಕ್, ಟ್ವಿಟರ್, ಗೂಗಲ್’ನ ಅಧಿಕಾರಿಗಳನ್ನು ಫೇಕ್ ನ್ಯೂಸ್ ಕುರಿತಾದ ಚರ್ಚೆಗೆ ಸಿಂಗಾಪುರನ ಸಂಸತ್’ಗೆ ಆಹ್ವಾನಿಸಿತ್ತು. ಸಮಿತಿಯ ಸದಸ್ಯರು ಫೇಸ್’ಬುಕ್’ನ ಅಧಿಕಾರಿಯನ್ನು  ‘ಕೇಂಬ್ರಿಜ್ ಎನಲೆಟೀಕಾ’ ಕುರಿತಾಗಿ ಪ್ರಶ್ನಿಸಿದಾಗ, ಆ ಅಧಿಕಾರಿ ಉತ್ತರ ನೀಡದೆ ಜಾರಿಕೊಳ್ಳಲು ಯತ್ನಿಸಿದ. ಆಗ ಸಿಂಗಾಪುರದ ಭಾರತೀಯ ಮೂಲದ ಗೃಹ್ರ‍್ಮಂತ್ರಿ ಷಣ್ಮುಗಮ್ ಅಧಿಕಾರಿಗೆ ಛೀಮಾರಿ ಹಾಕಿ ಫೇಸ್’ಬುಕ್ ನ೦ಬುಗೆಯ ಪಾಲುದಾರನಾಗಿರಬೇಕಾದ ಕೇಳಿದ ಪ್ರಶ್ನೆಗೆ ನೇರವಾಗಿ ಜವಾಬ್ದಾರಿಯುತವಾಗಿ ಉತ್ತರಿಸುವಂತೆ, ಇಲ್ಲವಾದಲ್ಲಿ ಕಠಿಣಕ್ರಮ ಎದುರಿಸುವಂತೆ ತಾಕೀತು ಮಾಡಿದರು. ‘ಕೇಂಬ್ರಿಜ್ ಎನಲೆಟೀಕಾ’ದ ಮಾಜಿ ಉದ್ಯೋಗಿ ಕ್ರಿಸ್ಟೋಫರ್ ವ್ಯಾಲಿ ಭಾರತದ ರಾಜಕೀಯ ಪಕ್ಷವೊಂದನ್ನು ಹೆಸರಿಸಿ, ಅದು ‘ಕೇಂಬ್ರಿಜ್ ಎನಲೆಟೀಕಾ’ದ ಕಕ್ಷಿದಾರನಾಗಿತ್ತೆಂದು ಹೇಳಿ, ಆ ಪಕ್ಷಕ್ಕೆ ಮುಜುಗುರ ಉಂಟುಮಾಡಿದ್ದಾರೆ. ತೀರ ನಿನ್ನೆಯಷ್ಟೇ ಬೆಳಕಿಗೆ ಬಂದ ಸಂಗತಿಯೆಂದರೆ “ಸಿಕ್ರೇಟ್ಸ್ ಆಫ್ ಸಿಲಿಕಾನ್ ವ್ಯಾಲಿ” ಎಂಬ ಸಾಕ್ಷ ಚಿತ್ರದಲ್ಲಿ ‘ಕೇಂಬ್ರಿಜ್ ಎನಲೆಟೀಕಾ’ದ ಮಾಜಿ ಸಿ.ಈ.ಓ.ರ ಲಂಡನ್ ಕಚೇರಿಯಲ್ಲಿ ಭಾರತದ ರಾಜಕೀಯ ಪಕ್ಷವೊಂದರ ಚಿಹ್ನೆಯುಳ್ಳ ದೊಡ್ಡ ಚಿತ್ರವೊಂದು ಗೋಡೆಯ ಮೇಲೆ ಕಾಣಿಸಿಕೊಂಡದ್ದು!

ಭಾರತ ಸರಕಾರವು ಫೇಸ್’ಬುಕ್ ಕುರಿತು ಕಠಿಣ ಧೋರಣೆ ತಳಿಯುವ ಅವಶ್ಯಕತೆ ಇದೆ ಎಂಬ ಕೂಗು ಕೇಳಿ ಬರುತ್ತಿದ್ದಂತೆ, ಭಾರತ ಸರಕಾರ ಫೇಸ್’ಬುಕ್’ಗೆ ಭಾರತೀಯ ಪ್ರಜೆಗಳ ದತ್ತಾಂಶದ ಸುರಕ್ಷತೆ ಮತ್ತು ಸೋರಿಕೆಯ ಕುರಿತು ಹಲವು ಪ್ರಶ್ನೆಗಳಿಗೆ 7 ದಿನಗಳಲ್ಲಿ ಉತ್ತರಿಸುವಂತೆ ನೋಟಿಸ್ ನೀಡಿದೆ. ಮುಂದಿನ ದಿನಗಳಲ್ಲಿ ದೇಶ ದೇಶಗಳ ಮಧ್ಯದ ಬೇಹುಗಾರಿಕೆಯೂ ಕೂಡ ಫೇಸ್’ಬುಕ್’ನ ದತ್ತಾಂಶವನ್ನು ಆಧರಸಿಯೇ ನಡೆದರೆ ಅಚ್ಚರಿ ಇಲ್ಲ! ಯಾವುದೇ ಹೆಚ್ಚಿನ ಅಪಾಯವಿಲ್ಲದೇ ದೊರಕುವ ದತ್ತಾಂಶಕ್ಕೆ ಲಗ್ಗೆ ಇಡಲು ಬೇಹುಗಾರಿಕಾ ಸಂಸ್ಥೆಗಳು ಸಹಜವಾಗಿಯೇ ತುದಿಗಲಮೇಲಿರುತ್ತವೆ. ಒಮ್ಮೆ ಸಾರ್ವಜನಿಕವಾದ ನಮ್ಮ ಮಾಹಿತಿ ನಮ್ಮ ದೌರ್ಬಲ್ಯವೂ ಆಗಬಹುದು. ದತ್ತಾಂಶ ಕದಿಯುವಿಕೆ ಮತ್ತು ದುರುಪಯೋಗದ ಮಿತಿ ನಮ್ಮ ಊಹೆಗೂ ಮೀರಿದ್ದು! ಇದರಿಂದ  ಆಗಬಹುದಾದ ಅನಾಹುತದಿಂದ  ನಮ್ಮ ದತ್ತಾಂಶದ ಸುರಕ್ಷತೆಯ ಜವಾಬ್ದಾರಿಯ ಹೊಣೆಗಾರಿಕೆ ಕುರಿತು ನಾವೂ ಎಚ್ಚೆತ್ತುಕೊಂಡು ಸರಕಾರದ ಮೇಲೂ ಒತ್ತಡ ಹೇರಬೇಕು. ಅಚ್ಚರಿಯೆಂದರೆ ನಮ್ಮ ದೇಶದಲ್ಲಿ ಆಧಾರದ ದತ್ತಾಂಶ ಸೋರಿಕೆಯಾಗುತ್ತದೆಂದು ಗುಲ್ಲೆಬ್ಬಿಸಿ ನ್ಯಾಯಾಲಯದ ಕಟಕಟೆ  ಏರಿದ್ದಾರೆ. ಆದರೆ ಫೇಸ್’ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಿಂದ ಸೋರಿಕೆಯಾಗುವ ಮಾಹಿತಿ ಕುರಿತು ಚಕಾರವೆತ್ತುತ್ತಿಲ್ಲವೆಂಬುದು ವಿಪರ್ಯಾಸ!!

ಶ್ರೀನಿವಾಸ.ನಾ.ಪಂಚಮುಖಿ

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!