Featured ಪ್ರಚಲಿತ

ಭಾಗ್ಯಗಳ ಭರಾಟೆಯಿಲ್ಲದ ದೇಶದ ಪರ ಬಜೆಟ್!

ಈ ಬಾರಿಯ ಬಜೆಟ್ ಹಲವು ವಿಷಯಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ . ಮೊದಲನೆಯದಾಗಿ ಹೆಚ್ಚಿನ ಜನರು ಭಾವಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ ೨೦೧೯ ರಲ್ಲಿ ಚುನಾವಣೆ ಗೆಲ್ಲಲು ಏನು ಬೇಕು ಅದನ್ನ ಬಜೆಟ್ನಲ್ಲಿ ಅಳವಡಿಸಿಕೊಳ್ಳುತ್ತದೆ ಎನ್ನುವುದು . ತಾತ್ಕಾಲಿಕ ಶಮನ ನೀಡುವ ಅಥವಾ ಸುಖ ನೀಡುವ ಫಾರ್ಮುಲಾಗೆ ಮೋದಿ ಮಣೆ ಹಾಕಿಲ್ಲ . ಎರಡನೆಯದಾಗಿ ಮಧ್ಯಮ ವರ್ಗದ ಜನರಿಗೆ ಏನಾದರೂ ಒಂದಷ್ಟು ವಿನಾಯತಿ ಸಿಗಬಹದು ಎನ್ನುವ ಆಸೆಗೆ ತಣ್ಣೀರು ಎರಚಿಯಾಗಿದೆ . ಒಂದೇ ಸಮನೆ ಏರುತ್ತಿರುವ ತೈಲ ಬೆಲೆ ಸದ್ದಿಲ್ಲದೇ ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತೆ ಮಾಡಿದೆ. ವಸ್ತುಸ್ಥಿತಿ ಹೀಗಿರುವಾಗ ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆಯನ್ನ ಒಂದಷ್ಟು ಕಡಿಮೆ ಮಾಡಬಹುದಿತ್ತು . ಆದರೆ ಮೋದಿ ಸರಕಾರ ಮಧ್ಯಮ ವರ್ಗವನ್ನ ಪೂರ್ಣವಾಗಿ ಮರೆತು ಬಿಟ್ಟಿದೆ . ಗುಜರಾತ್ ಎಲೆಕ್ಷನ್’ನಲ್ಲಿ ತಮ್ಮ ಪಕ್ಷಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ಸಿಕ್ಕ ಪೆಟ್ಟನ್ನ ಮೋದಿ ಮತ್ತು ಜೈಟ್ಲಿ ಸ್ವಲ್ಪ ಹೆಚ್ಚಾಗೇ ಮನಸ್ಸಿಗೆ ಹಚ್ಚಿಕೊಂಡಂತಿದೆ . ರೈತಾಪಿ ಜನರಿಗೆ ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚಿನ ಆದ್ಯತೆ ಈ ಬಜೆಟ್ನಲ್ಲಿ ಕಾಣುತ್ತಿದೆ .

ಬಡ ಮತ್ತು ಅತಿ ಬಡ ಕುಟುಂಬಗಳ ಆರೋಗ್ಯದ ಭಾರವನ್ನ ಸರಕಾರ ಹೊರಲಿದೆ . ಹತ್ತಿರತ್ತಿರ ಹತ್ತು ಕೋಟಿ ಕುಟುಂಬ ಇದರ ಪ್ರಯೋಜನ ಪಡೆಯಲಿದೆ ಅಂದರೆ ಸರಿ ಸುಮಾರು ಐವತ್ತು ಕೋಟಿ ಜನರ ಆರೋಗ್ಯದ ಹಣೆಬರಹ ಸರಕಾರ ವಹಿಸಿಕೊಳ್ಳಲಿದೆ . ಈ ಯೋಜನೆ ಸರಿಯಾಗಿ ಲಾಗೂ ಆದರೆ ಇದೊಂದು ಜಗತ್ತಿನಲ್ಲಿ ಅತಿ ದೊಡ್ಡ ಆರೋಗ್ಯ ಯೋಜನೆ ಎನಿಸಿಕೊಳ್ಳಲಿದೆ . ಜೊತೆಗೆ ಮುಂಬರುವ ದಿನಗಳಲ್ಲಿ ಉಳಿದ ಜನರನ್ನೂ ಈ ಯೋಜನೆಯಲ್ಲಿ ಸೇರಿಸಿಕೊಂಡರೆ ಇದೊಂದು ಯೂನಿವರ್ಸಲ್ ಹೆಲ್ತ್ ಸಿಸ್ಟಮ್ ಎನಿಸಿಕೊಳ್ಳಲಿದೆ . ಆ ಮಟ್ಟಿಗೆ ಇದೊಂದು ಸ್ವಾಗತರ್ಹ ಬೆಳವಣಿಗೆ ಎನ್ನಬಹದು . ಆದರೇನು ನಮ್ಮ ಕಣ್ಣ ಮುಂದೆ ಅತ್ಯುತ್ತಮ ಯೋಜನೆಗಳು ಹಳ್ಳ ಹಿಡಿದ ಉದಾಹರಣೆಗಳು ಇವೆ . ಇಂತಹ ಆರೋಗ್ಯ ಯೋಜನೆಗಳು ಹಣಕ್ಕಾಗಿ ದುರುಪಯೋಗ ಪಡಿಸಿಕೊಳ್ಳದ ಹಾಗೆ ಕಾರ್ಯ ನಿರ್ವಹಿಸುವ ಪರಿಯನ್ನ ಕೂಡ ಸರಕಾರ ನೀಡಬೇಕಿದೆ . ಇಲ್ಲದಿದ್ದರೆ ಯಶಸ್ವಿನಿ ಯೋಜನೆಯಂತೆ ಇದೂ ಹಳ್ಳ ಹಿಡಿಯಲಿದೆ .

ಬೆಂಗಳೂರಿಗೆ ಸಬ್ ಅರ್ಬನ್ ರೈಲು ಮಂಜೂರು ಮಾಡಲಾಗಿದೆ . ಇದು ಹೇಳಿದ ರೀತಿಯಲ್ಲಿ ಅನುಷ್ಠಾನ ಆಗಿ ಬಿಟ್ಟರೆ ಬೆಂಗಳೂರಿನ ಭವಿಷ್ಯ ಬದಲಾಗಲಿದೆ . ಬೆಂಗಳೂರಿಗೆ ಬಂದವರು ವಿಧಿಯಿಲ್ಲದೇ ಇಲ್ಲಿ ವಾಸಿಸುತ್ತಾರೆ . ಈ ನಗರ ಜನ ವಸತಿಗೆ ಲಾಯಕಿಲ್ಲದೆ ಹಲವು ವರ್ಷಗಳು ಕಳೆದಿವೆ . ಕರ್ನಾಟಕದಲ್ಲಿನ ಆಡಳಿತ ಪಕ್ಷದ ಹಲವು ರಾಜಕಾರಿಣಿಗಳು ರಿಯಲ್ ಎಸ್ಟೇಟ್ ನಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ. ಹೀಗಾಗಿ ಅವರಿಗೆ ಸಾರಿಗೆ ವ್ಯವಸ್ಥೆ ಬೆಳೆಸುವ ಇಚ್ಛೆಯಿಲ್ಲ . ಗಮನಿಸಿ ನೋಡಿ. ಈ ರೀತಿಯ ಸಬ್ ಅರ್ಬನ್ ರೈಲು ಮಂಡ್ಯದಿಂದ ಬೆಂಗಳೂರಿನ ತನಕ ಹಬ್ಬಿ ಬಿಟ್ಟರೆ  ಬೆಂಗಳೂರಿನ ಈ ಜನಜಂಗುಳಿಯಲ್ಲಿ ವಾಸಿಸಲು ಯಾರು ಇಚ್ಛೆ ಪಡುತ್ತಾರೆ ? ಸಹಜವಾಗೇ ಬೆಂಗಳೂರು ನಗರದ ರಿಯಲ್ ಎಸ್ಟೇಟ್ ಮೌಲ್ಯ ಕುಸಿತ ಕಾಣುತ್ತದೆ . ಬಿಡದಿವರೆಗೆ ಆಗಲೇ ಮೆಟ್ರೋ ಸೌಕರ್ಯ ಸಿಕ್ಕಾಗಿದೆ ( ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ) ಅಲ್ಲಿಂದ ಮುಂದಕ್ಕೆ ಇಂತಹ ಅರ್ಬನ್ ರೈಲು ಸಿಕ್ಕರೆ  ಮೈಸೂರು ರಸ್ತೆ ರಾಜ ಮಾರ್ಗವಾಗಿ ಬದಲಾಗುತ್ತೆ . ಬೆಂಗಳೂರಿನ ದುಬಾರಿ ಲೇ ಔಟ್ಗಳ, ಸೈಟು ಬೆಲೆ ಆಕಾಶದಿಂದ ಭೂಮಿಗೆ ಇಳಿಯಲಿವೆ .

ರಸ್ತೆ , ರೈಲು ಜೊತೆಗೆ ವಿಮಾನ ನಿಲ್ದಾಣಗಳನ್ನು ಹೆಚ್ಚು ಮಾಡುವ ಪ್ರಸ್ತಾಪ ಕೂಡ ಇಲ್ಲಿದೆ . ಒಟ್ಟಿನಲ್ಲಿ ಮೂಲಭೂತ  ಸೌಕರ್ಯಕ್ಕೆ  ಹೆಚ್ಚಿನ ಮನ್ನಣೆ ಕೂಡ ಸಿಕ್ಕಿದೆ . ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಬೇಕೆಂದರೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಣಬೇಕು ಎನ್ನುವ ಅರಿವು ಸರಕಾರಕ್ಕಿದೆ. ಹೀಗಾಗಿ ಈ ಕ್ಷೇತ್ರಕ್ಕೂ ಸಿಕ್ಕ ಬೇಕಾದ ಪ್ರಾಶಸ್ತ್ಯ ಸಿಕ್ಕಿದೆ .

ಹೀಗೆ ಒಂದಲ್ಲ ಹಲವು ಸೆಕ್ಟರ್’ಗಳನ್ನ ತೆಗೆದುಕೊಂಡು ವಿಶ್ಲೇಷಣೆ ಮಾಡಬಹದು . ಅವುಗಳಿಂದ ನನಗೇನು ಲಾಭ ? ಎನ್ನುವುದು ಜನ ಸಾಮಾನ್ಯನ ಪ್ರಶ್ನೆ . ಹೌದು ಬೆಂಗಳೂರಿಗೆ ಅರ್ಬನ್ ರೈಲು ಬರುವುದಕ್ಕೆ ಸಮಯ ಹಿಡಿಯುತ್ತದೆ . ನಮ್ಮ ಸಾಮಾಜಿಕ ಮತ್ತು ರಾಜಕೀಯ ವಾತಾವರಣ ಹೇಗಿದೆಯೆಂದರೆ ನಾಳೆ ಇಂದು ಬಜೆಟ್ ಮಂಡಿಸಿದ ಸರಕಾರ ಇರುತ್ತದೆ ಎಂದು ಹೇಳಲು ಬರುವುದಿಲ್ಲ .ವಸ್ತುಸ್ಥಿತಿ ಹೀಗಿರುವಾಗ ಜನ ಸಾಮಾನ್ಯ ಕೇಳುವ ಪ್ರಶ್ನೆ ಸಾಧುವಾಗಿದೆ . ಆತನ ಪ್ರಶ್ನೆ ಇಂದು ನನಗೇನು ಲಾಭವಾಯಿತು? ಆ ನಿಟ್ಟಿನಲ್ಲಿ ಮೋದಿ ಸರಕಾರ ಯಾವುದೆ ಸಿನಿಕತೆ ತೋರದೆ ಪ್ರಾಕ್ಟಿಕಲ್ ಆಗಿ ದೇಶದ ಉದ್ದಾರಕ್ಕೆ ಏನು ಬೇಕು ಅದನ್ನ ಮಾಡಿದೆ . ಮಧ್ಯಮ ವರ್ಗಕ್ಕೆ ಸದ್ಯದ ಮಟ್ಟಿಗೆ ಲಾಭ ಎನ್ನುವಂತದ್ದು ಏನೂ ಇಲ್ಲ . ಗಮನಿಸಿ, ಜನರ ನಡುವೆ ಹೆಚ್ಚಿನ ವ್ಯತ್ಯಾಸವೇನು ಇಲ್ಲ . ಬಡ ವರ್ಗ ಓಟಿಗಾಗಿ ಐನೂರು ಸಾವಿರಕ್ಕೆ ಕೈಚಾಚುತ್ತೆ . ಮಧ್ಯಮ ವರ್ಗ ತೆರಿಗೆ ವಿನಾಯತಿಗಾಗಿ ಸರಕಾರದ ಮುಂದೆ ಗೋಗರೆಯುತ್ತೆ . ಉಳಿದ ಅತಿ ಸಣ್ಣ ಶ್ರೀಮಂತ ವರ್ಗಕ್ಕೆ ಬಜೆಟ್ ಯಾವ ಪರಿಣಾಮವೂ ಬೀರುವುದಿಲ್ಲ .

ಇದೊಂತರ ಕಚ್ಚು, ಎಂದರೆ ಕಪ್ಪೆಗೆ ಸಿಟ್ಟು ಬೇಡ ಎಂದರೆ ಹಾವಿಗೆ ಸಿಟ್ಟು ಎನ್ನುವ ಪರಿಸ್ಥಿತಿ . ಕಪ್ಪೆ ತನ್ನ ಜೀವ ಹೋಗುತ್ತದೆ ಎನ್ನುವ ಭಯ ಹಾವಿಗೆ ತನ್ನ ಆಹಾರ ತಪ್ಪುತ್ತದೆ ಎನ್ನುವ ಕೋಪ  . ಇವೆರಡನ್ನೂ ಏಕಕಾಲದಲ್ಲಿ ಖುಷಿಯಾಗಿಡಲು ಹೇಗೆ ಸಾಧ್ಯ? ಸದ್ಯದ ಜೈಟ್ಲಿ ಬಜೆಟ್ ಪರಿಸ್ಥಿತಿ  ಈ ಹಾವು ಕಪ್ಪೆ ದೃಷ್ಟಾಂತಕ್ಕಿಂತ ಭಿನ್ನವೆನ್ನೆಲ್ಲ .

ರೈತಾಪಿ ಜನಕ್ಕೆ ಬಡ ಮತ್ತು ಅತಿ ಬಡವರ ಕೈಗೆ ಪುರಿಉಂಡೆ  ಕೊಟ್ಟಿದೆ, ತೆರಿಗೆಯಿಂದ ಬಚಾವಾಗಲು ಸಾಧ್ಯವಿಲ್ಲದ, ತೆರಿಗೆ ವಂಚಿಸಲು ಸಾಧ್ಯವಿರುವ ಜಾಗದಲ್ಲೂ ನಾಳೆ ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದರೇನು ಗತಿ? ಎಂದು ಹೆದರಿ ಬಾಳುವ ಎಲ್ಲಾ ರೀತಿಯಲ್ಲೂ , ಎಲ್ಲಾ ಕಾಲದಲ್ಲೂ ತ್ಯಾಗ ಮತ್ತು ತುಳಿತ ಎರಡಕ್ಕೂ ಒಳಗಾಗುತ್ತ ಬಂದಿರುವ ಮಧ್ಯಮ ವರ್ಗದ ಬವಣೆಯ ಬದುಕು ಮುಂದುವರಿದಿದೆ .

ನಮ್ಮ ಕಣ್ಣಿಗೆ ೧೮೫೭ ರ ಘಟನೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ . ಬ್ರಿಟಿಷರ ಕಣ್ಣಿಗದು ಸಿಪಾಯಿ ದಂಗೆ ! ಒಂದು ಘಟನೆಗೆ ಎರಡು ರೂಪ . ಬಿರುಸಾದ ಮಳೆ ಹಲವರಿಗೆ ಖುಷಿ ತರುತ್ತದೆ . ಹಲವರಿಗೆ ದುಃಖ . ಮಧ್ಯಮ ವರ್ಗದ ದೃಷ್ಟಿಯಿಂದ ಪ್ರಯೋಜನವಿಲ್ಲದ ಬಜೆಟ್ ! ಬಡ ಮತ್ತು ಅತಿ ಬಡವನಿಗೆ ಕೊನೆಗೂ ದೇವರು ಕಣ್ಣು ತೆರೆದ ಎನ್ನಿಸಿದರೆ ಅಚ್ಚರಿಯಲ್ಲ . ಶ್ರೀಮಂತನಿಗೆ ಇದಾವುದೂ ತಟ್ಟುವುದಿಲ್ಲ . ಮೋದಿ ಸರಕಾರ ಕೇವಲ ಚುನಾವಣೆ ಗೆಲ್ಲುವುದನ್ನ ಉದ್ದೇಶವಾಗಿರಿಸಕೊಂಡಿದ್ದರೆ  ಈ ಬಜೆಟ್ ಬೇರೆಯ ರೂಪದಲ್ಲಿ ಇರುತ್ತಿತ್ತು . ಚುನಾವಣೆ ಮತ್ತು ರಾಜಕೀಯ ಮೀರಿದ ದೇಶದ ಬೆಳವಣಿಗೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ . ನನಗೇನು ಲಾಭ ? ಎನ್ನುವುದನ್ನ ಮೀರಿ ನೋಡಿದಾಗ ಅದರ ಅರಿವು ನಮ್ಮದಾದೀತು . ಅಸ್ಥಿರ ಬದುಕಿನಲ್ಲಿ ನಾಳೆ ಕಂಡವರಾರು ? ಎನ್ನುವ ಜನ ಹೆಚ್ಚಿರುವಾಗ ಇದನ್ನ ತಿಳಿ ಹೇಳುವುದು ಕೂಡ ಕಷ್ಟವಾದೀತು .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!