ಕರ್ನಾಟಕ-ತಮಿಳುನಾಡು ಎಂದರೆ ಕಾವೇರಿ ನದಿ ಗಲಾಟೆ, ಕರ್ನಾಟಕ-ಗೋವಾ ಮಹದಾಯಿ ನದಿ ಗಲಾಟೆ, ಕರ್ನಾಟಕ-ಆಂಧ್ರಪ್ರದೇಶ ಕೃಷ್ಣ ನದಿಯ ಗಲಾಟೆ. ಇನ್ನೆಷ್ಟು ವರ್ಷ ಈ ಗಲಾಟೆಗಳು ಮುಂದುವರೆಯಬೇಕು? ಇವತ್ತಿನ ಕಾವೇರಿ ತೀರ್ಪು, ನಾಳೆಯ ಮಹದಾಯಿ ತೀರ್ಪು, ನಮ್ಮ ಎಲ್ಲಾ ನದಿನೀರಿನ ಸಮಸ್ಯೆಯನ್ನು ಬಗೆಹರಿಸುತ್ತದೆಯೇ? ಹಾಗಾದರೆ ನಾಳೆಯಿಂದ ನದಿನೀರಿನ ಹಂಚಿಕೆಗೆ ರಾಜ್ಯಗಳ ನಡುವೆ ಅಂದರೆ ಅಂತರ ರಾಜ್ಯಗಳ ಅಮಾಯಕ ಜನರ ನಡುವಿನ ಗಲಾಟೆ ಖಾಯಂ ಆಗಿ ನಿಲ್ಲುತ್ತದೆಯೇ? ಇಲ್ಲ ಯಾರಿಗೂ ತಿಳಿದಿಲ್ಲ. ಮತ್ತೆ ಮುಂದಿನ ವರ್ಷ ಗಲಾಟೆಯಾಗಬಹುದು, ಹಿಂಸೆಯಾಗಬಹುದು ಯಾಕೆಂದರೆ ನಮ್ಮಲ್ಲಿ ನೀರನ್ನು ಉಳಿಸುವ ಮಾರ್ಗವೇ ಇಲ್ಲ.
ನದಿಯ ಅಳಿವು-ಉಳಿವು
ನ್ಯಾಯಾಲಯದ ಮೊರೆಹೋಗಿ ನೂರಾರು ವರ್ಷ ಹೋರಾಡುವುದು ಸುಲಭ. ಆದರೆ ನಮ್ಮ ನೀರನ್ನು ಉಳಿಸಿಕೊಳ್ಳುವುದು, ಅದನ್ನು ಸಮೃದ್ಧಿಪಡಿಸುವುದು, ಪುನಶ್ಚೇತನಗೊಳಿಸುವುದು, ಕಾಪಾಡಿಕೊಳ್ಳುವುದು, ಮಲಿನಗೊಳಿಸದಿರುವುದು ಕಷ್ಟ. ಅದಕ್ಕೆ ನೀರಿನ ಮಾತು ಬಂದರೆ ನಾವು ನ್ಯಾಯಾಲಯಕ್ಕೆ ಓಡಿ ಹೋಗುವುದು. ಅದೆಷ್ಟು ರಾಜಾಡಳಿತ ಮುಗಿದವು, ಅದೆಷ್ಟು ಸರ್ಕಾರ ಬಂದು ಹೋದವು; ಆದರೂ ಮೂಲಭೂತವಾದ, ಪ್ರಕೃತಿದತ್ತವಾದ ನೀರಿನ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಮೈಸೂರಿನ ಮಹಾರಾಜರಿಗಿದ್ದ ದೂರದೃಷ್ಟಿ ಮುಂದೆ ಬಂದ ಯಾವ ರಾಜಕಾರಣಿಗೂ ಬರಲೇ ಇಲ್ಲ. ಅಂದಿನ ನೀರಿನ ಸಮಸ್ಯೆಗೆ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಅರಮನೆಯ ಚಿನ್ನ, ಹಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನೆಲ್ಲ ಅಡ ಇಟ್ಟು ಅಣೆಕಟ್ಟು ಕಟ್ಟಿದರು. ಅದರ ಫಲದಿಂದಲೆ ಇಂದು ಕಾವೇರಿ ಕೊಳ್ಳದಲ್ಲಿ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆಯಾಗುತ್ತಿರುವುದು. ಅದರಿಂದಲೆ ಇಂದು ದೇಶದ ಲಕ್ಷಾಂತರ ಜನರ ಹಸಿವು ನೀಗುತ್ತಿರುವುದು. ನಮ್ಮ ಹಸಿವು ನೀಗಬೇಕಾದರೆ ನೀರು ಬೇಕು, ಬದುಕು ಹಸನಾಗಬೇಕಾದರೆ ನೀರು ಬೇಕು, ಜೀವನ ಸುಂದರವಾಗಿರಬೇಕಾದರೆ ನೀರುಬೇಕು,ಆರೋಗ್ಯ ಸರಿ ಇರಬೇಕಾದರೆ ನೀರು ಬೇಕು. ಆದರೆ ನದಿಯ ಅಥವಾ ಕೆರೆಯ ನೀರಿನ ಬದುಕನ್ನು ನಾವು ನೋಡುವುದೇ ಇಲ್ಲ! ನಮ್ಮ ನೀರಿನ ಮೂಲವಾದ ನದಿಯ ಆರೋಗ್ಯವನ್ನು ನಾವು ನೋಡುವುದೇ ಇಲ್ಲ!. ನದಿಯ ಆಯಸ್ಸನ್ನು ನೋಡುವುದಿಲ್ಲ ಎಂದರೆ, ನಮ್ಮಂತ ಸ್ವಾರ್ಥಿಗಳಿಗೆ ಆ ಭಗವಂತ ಈ ನೀರನ್ನೇಕೆ ಕೊಡಬೇಕು?
ಯಾವ ಸರ್ಕಾರಗಳು ತಮ್ಮ ಯೋಜನೆಗಳಲ್ಲಿ ನದಿಯನ್ನು ಉಳಿಸಿಕೊಳ್ಳುವ ಯೋಜನೆ ಹಾಕುವುದೇ ಇಲ್ಲ, ನದಿಯ ನೀರನ್ನು ಹೆಚ್ಚಿಸುವ ಆಲೋಚನೆಯು ಮಾಡುವುದಿಲ್ಲ, ನದಿಯ ನೀರಿನ ಗುಣಮಟ್ಟವನ್ನು ಕಾಪಾಡುವ ಕಾನೂನನ್ನು ನಿರ್ಮಿಸುವುದಿಲ್ಲ. ನದಿಗಳಿಂದ, ಸಮುದ್ರಗಳಿಂದ ತುಂಬಿದ್ದ ಭಾರತದಂತ ಅಮೃತ ಭೂಮಿಯಲ್ಲಿ ನದಿಯ ನೀರಿಗೆ ಗಲಾಟೆ ಕೋರ್ಟು ಅಂದರೆ ಅದು ದೇಶವೇ ತಲೆ ತಗ್ಗಿಸುವ ಸ್ಥಿತಿ ಅಂದರ್ಥ. ಭಾರತದಲ್ಲಿ ತುಂಬಿ ಹರಿಯುತ್ತಿದ್ದ ನದಿಗಳು ಬತ್ತಿ ಹೋಗುತ್ತಿವೆ, ಸಣ್ಣ ಪುಟ್ಟ ನದಿಗಳು ಹೇಳ ಹೆಸರಿಲ್ಲದಂತೆ ಅಳಿಸಿ ಹೋಗಿವೆ, ಅವು ಹರಿದಿದ್ದ ಕುರುಹು ಸಹ ನಮ್ಮಲ್ಲಿ ಇಲ್ಲ ಹಾಗಿರಬೇಕಾದರೆ ಈ ಸಮಸ್ಯೆ ಬಗೆಹರಿಯುವುದಾದರು ಹೇಗೆ? ಹಲವಾರು ಉಪನದಿಗಳು ಸೇರಿಯೇ ಕಾವೇರಿ, ಗಂಗಾ, ಕೃಷ್ಣ, ನರ್ಮದಾ ಹಾಗೂ ಹಲವು ನದಿಗಳು ಹರಿಯುವುದು. ಅಂತಹಾ ಉಪನದಿಗಳನ್ನು ನುಂಗಿಹಾಕಿದ ನಾವು ಇಂದು ನಮ್ಮ ನೀರಿನಲ್ಲೆ 14.75 ಟಿ.ಎಂ.ಸಿ ಹೆಚ್ಚುವರಿ ನೀರು ಪಡೆಯಲು ನ್ಯಾಯಾಲಯದ ಬಾಗಿಲಲ್ಲಿ ನಿಲ್ಲಬೇಕಾಯಿತು.
ಮನುಷ್ಯನ ದುರಾಸೆ
ಭೂಮಿಯ ಅಂತರ್ಜಲ ಹಾಗೂ ಮಳೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಬ್ಧಾರಿ. ನೀರಿಗೆ ಆಹಾಕಾರ ಪಡುತ್ತಿರುವ ನಾವು ಅದೆಷ್ಟು ಕಾಡುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ? ಅದೆಷ್ಟು ಕೆರೆಗಳನ್ನು ಉಳಿಸಿಕೊಂಡಿದ್ದೇವೆ? ಇದು ಕೇವಲ ನಮ್ಮ ರಾಜ್ಯದ ಸಮಸ್ಯೆಯಲ್ಲ, ರಾಷ್ಟ್ರದ ಸಮಸ್ಯೆ. ಕೆರೆಗಳೆಲ್ಲ ನಮ್ಮ ಆಟದ ಮೈದಾನವಾದವು, ಬಸ್ ನಿಲ್ದಾಣವಾದವು, ಆಸ್ಪತ್ರೆಯಾದವು, ದೊಡ್ಡ ದೊಡ್ಡ ಬಡಾವಣೆಯಾದವು. ಉಳಿದ ಕೆರೆಗಳು ನಮ್ಮ ಮನೆಯ ಮೋರಿನ್ನು ಕುಡಿಯುವ ಜಾಗವಾದವು, ಕಸವನ್ನು ತನ್ನ ಮಡಿಲಲ್ಲಿ ಇಟ್ಟುಕೊಳ್ಳುವ ಜಾಗವಾದವು. ಇದರ ದುಷ್ಪರಿಣಾಮವನ್ನು ಯೋಚಿಸುವ ಹಂತಕ್ಕೂ ನಾವು ಹೋಗಲಿಲ್ಲ. ಉಪನದಿಗಳು ದೊಡ್ಡ ಮೋರಿಯಾದವು, ಕಾರ್ಖಾನೆಗಳ ತ್ಯಾಜ್ಯವನ್ನು ಹೊತ್ತೊಯುವ ಮಾಧ್ಯಮವಾದವು. ಆದರೆ ನಾವ್ಯಾರು ಆ ನದಿಗಳ ಬಗ್ಗೆ ಆ ಕೆರೆಗಳಬಗ್ಗೆ ಯೋಚನೆಮಾಡಲಿಲ್ಲ. ಹಿಂದಿನ ಕಾಲದಲ್ಲಿ ಕೆರೆಯ ನೀರನ್ನು ಉಳಿಸಿಕೊಳ್ಳಲು ಆ ಊರಿನ ಗೌಡನ ಹೆಂಡತಿ, ಸೊಸೆ, ಬಾಣಂತಿ, ಬಸುರಿಯರು ಕೆರೆಗೆ ಹಾರಿದರು ಎಂದು ಕಥೆ ಓದುತ್ತಿದ್ದೆವು. ಆದರೆ ಈಗ ಆ ಕೆರೆಯನ್ನು ಈ ರಾಜಕಾರಣಿ ಕಬಳಿಸಿದ, ಈ ಕೆರೆಯನ್ನು ಈ ಕಾರ್ಖಾನೆಯು ನುಂಗಿಹಾಕಿತು, ಅಲ್ಲಿದ್ದ ಕೆರೆ ಇಂದು ದೊಡ್ಡ ಬಹುಮಹಡಿ ಕಟ್ಟಡವಾಗಿದೆ ಎಂದು ಹೇಳುತ್ತೇವೆ. ನಾವು ಬೆಳೆಯುವ ವೇಗದಲ್ಲಿ ನಮಗೆ ಬೇಕಾದ ಆಧುನಿಕತೆಯ ಆತುರದಲಿ ನಮ್ಮ ಮೂಲ ಜೀವಜಲವನ್ನೆ ನುಂಗಿಹಾಕಿ ಇಂದು ಅದೇ ನೀರಿಗೆ ರಸ್ತೆಗಳಲ್ಲಿ ಬೆಂಕಿಹಾಕಿ, ಲಾರಿ ಬಸ್ಸುಗಳಿಗೆ ಕಲ್ಲುಹೊಡೆದು ನಮ್ಮ ನೀರು ನಮ್ಮ ಹಕ್ಕು ಎನ್ನುತ್ತೆವೆ. ಒಂದು ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳದ ನಾವು ಅದರ ಕುರಿತು ಹೋರಾಟ ನಡೆಸುತ್ತೆವೆ.
ನಮಾಮಿ ಗಂಗಾ
ಕೇಂದ್ರ ಸರ್ಕಾರದ ನಮಾಮಿ ಗಂಗಾ ಯೋಜನೆ ಕೇವಲ ಗಂಗಾ ನದಿಯ ಉಳಿವಿಗಲ್ಲ. ಆ ಯೋಜನೆ ದೇಶದ ಎಲ್ಲಾ ನದಿಗಳ, ಕೆರೆಗಳ, ಬಾವಿಗಳ ನೀರಿನ ಉಳಿವಿಗಾಗಿ ಮತ್ತು ಸ್ವಚ್ಛತೆಗಾಗಿ. ಅದನ್ನು ಮರೆತ ನಾವು ನಮ್ಮೂರಿನ ಕೆರೆ, ನದಿ, ಅಣೆಕಟ್ಟು, ಕಾಲುವೆ ನೀರಿನ ಬಗ್ಗೆ ಯೋಚನೆಮಾಡುವುದೇ ಇಲ್ಲ. ಕಾವೇರಿ ನೀರಿಗಾಗಿ ಬಡಿದಾಡುವ ನಾವು ಅಭಿವೃಧ್ಧಿ ಹೆಸರಲ್ಲಿ ಕೊಡಗಿನ ಕಾಡಿನ ಮರಗಳ ಬುಡಕ್ಕೆ ಕೊಡಲಿ ಇಟ್ಟಾಗ ಪ್ರತಿಕ್ರಿಯುಸುವುದೇ ಇಲ್ಲ, ಅಲ್ಲಿ ಒಂದು ರೈಲು ಬರುತ್ತದೆ ಎಂದೋ, ಕೇರಳಕ್ಕೆ ವಿದ್ಯುತ್ ಕಂಬಗಳು ಬರುತ್ತವೆಂದೋ ಸಂಭ್ರಮಿಸುತ್ತೆವೆ. ಆದರೆ ಈ ಮರಗಳು ಹೋದರೆ ಮಳೆ ಹೇಗೆ ಬರುತ್ತದೆ? ಮಳೆಬರದಿದ್ದರೆ ಕಾವೇರಿ ಹೇಗೆ ತುಂಬುತ್ತದೆ ಎಂದು ಯೋಚಿಸುವುದು ಇಲ್ಲ. ನಮ್ಮ ವಾಹನ ನಿಲ್ಲಿಸಲು ನೆರಳನ್ನು ಹುಡುಕುವ ನಾವು ಅದೇ ನಮ್ಮ ಮನೆಯ ಮುಂದೆ ಒಂದು ಮರನೆಡುವುದಿಲ್ಲ ಕಟ್ಟಡ ಬಿರುಕು ಬಿಡುತ್ತದೆ ಎಂಬ ಕುಂಟುನೆಪ ಹೂಡಿ, ಮರದಿಂದ ಮನೆಗೆ ಹುಳ ಹುಪ್ಪಟ ಹಾವು ಚೇಳು ಬರುತ್ತವೆಂದು ಕತ್ತರಿಸುತ್ತೆವೆ. ಮರ ಕಡಿದ ನಾವು ಬೇಸಿಗೆಯ ಬಿಸಿಲನು ತಾಳದೆ ಅದೇ ಪ್ರಕೃತಿಯನ್ನು ಬಯ್ಯುತ್ತೇವೆ. ಪ್ರಕೃತಿಯನ್ನು ಹಾಳುಮಾಡಿ ಭೌಗೋಳಿಕ ಋತುಮಾನಗಳಿಗೆ ಕೊಡಲಿ ಇಟ್ಟು ಮಳೆ ಬರಲಿಲ್ಲ , ಅಕಾಲಿಕ ಮಳೆ, ಅತಿವೃಷ್ಠಿ, ಅನಾವೃಷ್ಠಿ, ಬರ, ಬಿಸಿಲು ಎಂದು ಅದೇ ಪ್ರಕೃತಿಯನ್ನು ನಿಂದಿಸುತ್ತೇವೆ. ಅದನ್ನು ಹಾಳು ಮಾಡುವಾಗ ಯೋಚಿಸದ ನಾವು ಅದರ ಪರಿಣಾಮಗಳ ಬಗ್ಗೆ ಪುಂಖಾನುಪುಂಖವಾಗಿ ಚರ್ಚಿಸುತ್ತೇವೆ. ಕಾಡು ಉಳಿದರೆ ನೀರು ಇಲ್ಲದಿದ್ದರೆ ಏನು ಇಲ್ಲ. ಇನ್ನಾದರು ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಕಟ್ಟಡಗಳ ಹಾರಿಝಾಂಟಲ್ ಗ್ರೋತ್’ಗಿಂತ ವರ್ಟಿಕಲ್ ಗ್ರೋತ್ ಬಗ್ಗೆ ಯೋಚಿಸಲಿ. ಕಾರ್ಖಾನೆಗಳಿಗೆ ಎಕ್ಕರೆಗಟ್ಟಲೆ ಭೂಮಿ ಕೊಡುವ ಬದಲು ಕಟ್ಟಡಗಳ ಮಹಡಿಗಳ ಹಂಚಿಕೆಯ ಬಗ್ಗೆ ಯೋಚಿಸಲಿ.
ಭವಿಷ್ಯ
ಇಂದೇನೋ ದೀಪಕ್ ಮಿಶ್ರರಂತಹ ಉತ್ತಮೋತ್ತಮ ನ್ಯಾಯಧೀಶರು ಬಂದು ನಮ್ಮ ಬೇಡಿಕೆಯನ್ನು ಪರಿಗಣಿಸಿ ನಮಗೆ ಕಾವೇರಿ ವಿಷಯದಲ್ಲಿ ನ್ಯಾಯ ಒದಗಿಸಿದ್ದಾರೆ. ಆದರೆ ಈ ತೀರ್ಪು ಮುಂದಿನ ಹದಿನೈದು ವರ್ಷಗಳಿಗೆ ಮಾತ್ರ, ಆದರೆ ಮತ್ತೆ ಹದಿನೈದು ವರ್ಷಗಳ ನಂತರ ಮತ್ತೊಮ್ಮೆ ನ್ಯಾಯಾಲಯಕ್ಕೆ ಹೋಗುತ್ತೇವೆ. ನಮ್ಮ ಉದ್ದೇಶ ಮತ್ತೊಮ್ಮೆ ನ್ಯಾಯಾಲಯಕ್ಕೆ ಹೋಗಲೇಬಾರದು, ಪ್ರತಿರಾಜ್ಯವು ನೈಸರ್ಗಿಕ ಸಂಪತ್ತನ್ನು ಕಾಪಾಡೊಕೊಳ್ಳಬೇಕು. ನಮ್ಮಲ್ಲಿ ಉಳಿದಿರುವ ನದಿಗಳನ್ನಾದರು ಜೀವಂತ ಉಳಿಸಿಕೊಳ್ಳಬೇಕು. ಕಾಡನ್ನು ಕಾಪಾಡಿಕೊಂಡರೆ ಮಳೆ ನಿಶ್ಚಿತ, ಮಳೆ ನಿಶ್ಚಿತವಾದರೆ ನದಿ ಒಡಲು ತುಂಬುವುದು ನಿಶ್ಚಿತ.
ದೇಶದ ಎಲ್ಲಾ ನದಿಗಳನ್ನು ಜೋಡಿಸಿ ಸಮುದ್ರ ಸೇರುವ ಮೊದಲು, ಒಂದು ಶೇಖರಣಾ ಘಟಕವನ್ನು ಸ್ಥಾಪಿಸಿ ಎಲ್ಲಾ ನದಿಗಳನ್ನು ಮತ್ತು ಸಮುದ್ರವನ್ನು ಜೀವಂತವಿಡಬಹುದು. ಸಮುದ್ರದ ನೀರನ್ನು ಸಂಸ್ಕರಿಸಿ ಬಳಸುವ ಯೋಚನೆಯನ್ನು ಮಾಡಬೇಕು. ಆ ನಿಟ್ಟಿನಲ್ಲಿ ಯೋಚಿಸದಿದ್ದರೆ ಸಮಸ್ಯೆಗಳು ನಿರಂತರ. ದಕ್ಷಿಣಭಾರತಕ್ಕಂತೂ ಸಮುದ್ರದ ನೀರಿಗೆ ಕೊರತೆ ಇಲ್ಲ. ಆದರೆ ಕೃಷಿ ಮತ್ತು ಕುಡಿಯುವ ನೀರಿಗೆ ತೊಂದರೆಯಾದರೆ ಯಾವ ರಾಜ್ಯವೂ ಸಹ ಸಮುದ್ರದ ನೀರಿನ ಮರುಬಳಕೆಯ ಬಗ್ಗೆ ಯೋಚಿಸಿಯೇ ಇಲ್ಲ. ನೀರಿನ ಮಧ್ಯವಿರುವ ನಾವು ನೀರಿಗಾಗಿ ಹೊಡೆದಾಡುತ್ತಿದ್ದೇವೆ ಅಂದು ಅನ್ನಿಸುವುದಿಲ್ಲವೆ? ರಾಜಕಾರಣವನ್ನು ಮೀರಿ ಯೋಚಿಸಿದರೆ ಎಲ್ಲದಕ್ಕೂ ಪರಿಹಾರವಿದೆ. ಆದರೆ ಆಳುವ ಸರ್ಕಾರಗಳು ಮತಕ್ಕಾಗಿ, ರಾಜಕೀಯಕ್ಕಾಗಿ ಸಮಸ್ಯೆಯನ್ನು ಬಿಗಿಗೊಳಿಸಿ ನ್ಯಾಯಾಲಯ ಅದು ಇದು ಎಂದು ಹೇಳಿ ಸಮಸ್ಯೆಯನ್ನು ಜೀವಂತವಿಡುತ್ತವೆ. ರಾಜ್ಯ ರಾಜ್ಯಗಳ ಸೌಹಾರ್ದವೇ ರಾಷ್ಟ್ರದ ಶಕ್ತಿ. ಪ್ರಜಾಪ್ರಭುತ್ವದಲ್ಲೂ ನಾವು ರಾಜಪ್ರಭುತ್ವದಂತೆ ಪರರಾಜ್ಯಗಳೊಂದಿಗೆ ಪರಸ್ಪರ ಹೋರಾಡುತ್ತೇವೆಂದರೆ ಗಣರಾಜ್ಯ ಭಾರತದ ಕಲ್ಪನೆಗೆ ಬೆಲೆಯಿದೆಯೇ?
ನಾವು ಸರ್ಕಾರದ ಜೊತೆ ಸೇರಿ ನಮ್ಮ ನದಿಗಳನ್ನು ಸೇರಿದಂತೆ ಇನ್ನಿತರ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಬೇಕು. ನದಿಗಳನ್ನು ಜೀವಂತವಿಡಲು ಪ್ರಯತ್ನಿಸಬೇಕು. 2500ವರ್ಷದ ಕಾವೇರಿಹೋರಾಟ ಇಂದು ಒಂದು ತಾರ್ಕಿಕ ಅಂತ್ಯ ಕಂಡಿದೆ. ಮುಂದೆ ಮಹಾದಾಯಿ ಇದೆ, ಅದು ಶತಮಾನವನ್ನು ದಾಟದಿರಲಿ.
ನಮ್ಮ ನದಿ ನಮ್ಮ ಹಕ್ಕು ಅದು ಈ ಪವಿತ್ರ ದೇಶದ ಆಸ್ತಿ ಅದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ.