ಅಣು ಭೂತ ಭೂಗೋಲ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ |
ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || ೦೮೪ ||
ಕಂತುಕ – ಚೆಂಡು.
ಅಣು ಭೂತ ಭೂಗೋಲ ತಾರಾಂಬರಾದಿಗಳ(ನ್)
..ಅಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಅಣುವೆಂದರೆ ವಸ್ತುವಿನ ಬರಿಗಣ್ಣಿಗೆ ಕಾಣಿಸದ ಸೂಕ್ಷ್ಮರೂಪ. ಸಕಲವು ಅಣುಗಳೆಂಬ ಮೂಲವಸ್ತುವಿನಿಂದಲೆ ಮಾಡಲ್ಪಟ್ಟಿದೆ – (ಪಂಚ)ಭೂತಗಳೂ ಸೇರಿದಂತೆ. ಬ್ರಹ್ಮಾಂಡದಲ್ಲಿ ಎಲ್ಲಕ್ಕು ಮೂಲವಸ್ತು ಪಂಚಭೂತಗಳೆ. ನಾವಿರುವ ಭೂಗೋಳವಾಗಲಿ, ತಾರೆಗಳಂತಹ ಕಾಯಗಳಿರುವ ಅಂಬರ (ಆಕಾಶ) ವಾಗಲಿ ಎಲ್ಲವು ಅದರಲ್ಲಿ ಮಾಡಲ್ಪಟ್ಟ ಸರಕುಗಳೆ (ಎಲ್ಲಕ್ಕು ಅವಕಾಶವಿತ್ತಿರುವ ಆಕಾಶವೆ ಪಂಚ ಭೂತಗಳಲ್ಲೊಂದು). ಇಂತಹ ಸಂಕೀರ್ಣವೆನಿಸುವ ಅಗಾಧಗಾತ್ರದ ವ್ಯವಸ್ಥೆಯಲ್ಲಿ, ಮೂಲತಃ ಅವುಗಳು ಹೀಗೇ ಇರಬೇಕೆಂದು ಚಿಂತಿಸಿ, ಆಲೋಚಿಸಿ, ಕಾರ್ಯರೂಪಕ್ಕಿಳಿಸುವವನೊಬ್ಬನಿರಬೇಕಲ್
ಕುಣಿಸುತಿರುವನು ತನ್ನ ಕೃತಿಕಂತುಕವ..
ನದರೊ..!ಳಣಗಿರ್ದು ಪರಬೊಮ್ಮ – ಮಂಕುತಿಮ್ಮ ||
ಹೀಗೆ ತನ್ನ ಬ್ರಹ್ಮಾಂಡವೆಂಬ ಕೃತಿಯನ್ನು ಸೃಜಿಸಿದ್ದೇನೊ ಆಯ್ತು. ಇನ್ನು ಅದನ್ನು ಪರಿಪಾಲಿಸಿಕೊಂಡು ನಿಭಾಯಿಸಬೇಡವೆ? ಅದು ಕೂಡ ಬೊಮ್ಮನಿಗೆ ಚೆಂಡಿನಾಟದಂತ ಲೀಲಾಜಾಲ ಕಾರ್ಯ. ತನ್ನ ಸೃಷ್ಟಿಯೆ ಅವನಿಗೊಂದು ಕಂತುಕ (ಚೆಂಡು) ಇದ್ದ ಹಾಗೆ. ಅದನ್ನು ತನಗೆ ಬೇಕಾದಂತೆ ಎಸೆದಾಡಿಸುತ್ತ ಕುಣಿಸುತ್ತಿದ್ದಾನಂತೆ ಬೊಮ್ಮ. ಆದರೆ ಅದು ಅವನ ಸೃಷ್ಟಿಯೆ ಆದ ಕಾರಣ ಅದು ಅಡ್ಡಾದಿಡ್ಡಿ ದಿಕ್ಕು ತಪ್ಪಿ ಹೋಗಬಾರದೆಂಬ ಕಾಳಜಿಯೂ ಅವನಿಗಿದೆ. ಅದಕ್ಕೆಂದೆ ತಾನು ಸೃಜಿಸಿದ ಅದೇ ಚೆಂಡಿನೊಳಗೆ ತಾನೂ ಕೂಡ ಬಂದು ಸೇರಿಕೊಂಡು, ತನ್ನ ಕೃತಿಯನ್ನು ತನಗೆ ಬೇಕಾದಂತೆ ಕುಣಿಸುತ್ತಿದ್ದಾನಂತೆ! ಅವನು ಕುಣಿಸಿದಂತೆ ಕುಣಿಯುವ ಪಾಡು ಈ ಜಗದ ಜನರಾದ ನಮ್ಮ ನಿಮ್ಮೆಲ್ಲರದು !
ಒಂದೆಡೆ ಆಸ್ತಿಕತ್ವದ ಎಳೆಯಲ್ಲಿ ಪರಬೊಮ್ಮ ಎಲ್ಲವನ್ನು ಸೃಜಿಸಿ, ನಿಭಾಯಿಸುತ್ತಿದ್ದಾನೆಂದು ಸಾರಿದ ಆಧ್ಯಾತ್ಮಿಕ ನಿಲುವು; ಮತ್ತೊಂದೆಡೆ ಅಣುಗಳೆಂಬ ಮೂಲವಸ್ತುವಿನಿಂದಾದ ಸರಕುಗಳೆ ಬ್ರಹ್ಮಾಂಡದಲ್ಲಿ ತುಂಬಿವೆ ಎನ್ನುವ ವೈಜ್ಞಾನಿಕ ದೃಷ್ಟಿಕೋನದ ಬಿತ್ತರ. ಹೀಗೆ ಎರಡು ದೃಷ್ಟಿಕೋನಗಳ ಸಮಷ್ಟಿಯಲ್ಲಿ ಒಂದು ಸತ್ಯ ಸಾರುವ ಕಗ್ಗದ ಸಾಮರ್ಥ್ಯ, ಚಾಣಾಕ್ಷತೆ ಬೆರಗುಗೊಳಿಸುವಂತದ್ದು! ಆಸ್ತಿಕರಿಗು, ನಾಸ್ತಿಕರಿಗು ಒಂದೇ ತಿನಿಸು ಬಡಿಸಿದರು ಅವರವರ ರುಚಿಗೆ ತಕ್ಕಂತೆ ವಿಶ್ಲೇಷಿಸುವ ಸಾಧ್ಯತೆಯಿರುವುದು ಪ್ರಾಯಶಃ ಈ ಕಾರಣದಿಂದಲೆ ಇರಬಹುದೇನೊ?
#ಕಗ್ಗ_ಟಿಪ್ಪಣಿ
– ನಾಗೇಶ ಮೈಸೂರು