ಅಂಕಣ

ಸಿದ್ದರಾಮಯ್ಯರಿಗೆ ಐದು ವರುಷ ಕಾಂಗ್ರೆಸ್ ರೌಡಿಗಳಿಗೆ ನಿಮಿಷ!!

ಕರ್ನಾಟಕದ ರಾಜಕೀಯದ ವಾಸ್ತುವೆ ಸರಿಯಿಲ್ಲ ಅನ್ನಿಸುತ್ತದೆ. ಪ್ರತಿ ಚುನಾವಣಾ ವರ್ಷಗಳಲ್ಲು ಮಾಧ್ಯಮಗಳಲ್ಲಿ ಆಯಾಯ ಸರ್ಕಾರದ ಅಥವಾ ಅದಕ್ಕೆ ಸಂಬಂದಿಸಿದ ಸುದ್ದಿಗಳು ನಿರಂತರವಾಗಿ ರೆಕ್ಕೆಪುಕ್ಕಗಳೊಂದಿಗೆ 24 ಘಂಟೆಗಳು ಪ್ರಸಾರವಾಗುತ್ತವೆ. ಕಳೆದ ಭಾ.ಜ.ಪ. ಸರ್ಕಾರದಲ್ಲಿ ಸುದ್ದಿಮಾಧ್ಯಮಗಳಿಗೆ ಸುದ್ದಿಯ ಸುಗ್ಗಿಯೇ ಸಿಕ್ಕಿತ್ತು. ಭ್ರಷ್ಟಾಚಾರ, ಶಾಸಕರ ಗುಂಪುಗಾರಿಕೆ, ಅಶ್ಲೀಲ ಚಿತ್ರಗಳ ವೀಕ್ಷಣೆ, ಕಾಮಪುರಾಣಗಳು, ಬದಲಾದ ಮುಖ್ಯಮಂತ್ರಿಗಳು ಆದರೂ ಬದಲಾಗದ ಆಡಳಿತ, ಜೈಲಿಗೆ ಹೋದ ಮುಖ್ಯಮಂತ್ರಿಗಳು ಹೀಗೆ ಹತ್ತು ಹಲವು ವಿಷಯಗಳಿಂದ ಆಡಳಿತ ವಿರೋಧಿ ಅಲೆ ಸೃಷ್ಠಿಯಾಯಿತು. ಈ ವಿಷಯಗಳು ಜನರ ಮನಸಲ್ಲಿ ಮಾಸುವ ಮುನ್ನವೇ ಈ ಸರ್ಕಾರದ ಸಮಯದಲ್ಲೂ ಇದೇ ತರಹದ ಆದರೆ ವಿಭಿನ್ನ ಸುದ್ಧಿಗಳು ಪ್ರಸಾರವಾಗುತ್ತಿವೆ.

ಮಾನ್ಯ ಮುಖ್ಯಮಂತ್ರಿಗಳು ಐದು ವರ್ಷಗಳ ಕಾಲ ಕಳೆದ ಭಾ.ಜ.ಪ. ಸರ್ಕಾರದಲ್ಲಿ ನಡೆದ ಅಸಹ್ಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿದರು. ಗುಂಪುಗಾರಿಕೆ ಒಳಜಗಳಗಳಿದ್ದರು ಅದ್ಯಾವುದು ಹೊರ ಬಾರದಂತೆ ನೋಡಿಕೊಂಡರು. ಇದ್ಯಾವುದರ ಹಂಗು ಇಲ್ಲದೆ ನೆಡೆಸಿದ ಸರ್ಕಾರ ಕರ್ನಾಟಕದ ಶೇ.60 ರಷ್ಟು ಜನರ ಮನಸನ್ನು ಗೆದ್ದಿತ್ತು. ಭಾ.ಜ.ಪ. ಸರ್ಕಾರ ಬೇಕೆಂದು ಮನೆಯಲ್ಲಿ ಟಿ.ವಿ. ನೋಡಿ ಹೇಳುವವರು ಸಹಾ ಸಿದ್ದರಾಮಯ್ಯ ಐದು ವರ್ಷ ಗೆದ್ದ ಅನ್ನುತ್ತಿದ್ದರು. ಬೇಜವಾಬ್ದಾರಿ, ಮೊಂಡುತನ, ನಿರ್ಲಕ್ಷದ ಹೇಳಿಕೆಗಳು ಆಗಾಗ ಸಿಟ್ಟು ತರಿಸುತ್ತಿದ್ದರು ಹೋಗಲಿ ಬಿಡು ಎಂದು ಸುಮ್ಮನಿದ್ದರು. ಕಳೆದ ನಾಲ್ಕು ವರ್ಷಗಳು ಈ ಸರ್ಕಾರದ ಮೇಲೆ ಸಾಮಾನ್ಯವಾಗಿ ಬಹುಸಂಖ್ಯೆಯಲ್ಲಿ ವಿರೋಧವಿರಲಿಲ್ಲ. ಸಂಘ ಪರಿವಾರ ಮತ್ತು ಭಾ.ಜ.ಪ.ದ ಜನರು ನಿಮ್ಮ ಸರ್ಕಾರವನ್ನು ನಿರಂತರ ನಿಂದಿಸುತ್ತಾ ಬಂದರು. ಜನ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ. ವಿರೋಧ ಪಕ್ಷವಾದ ಭಾ.ಜ.ಪ. ಮೃತಾವ್ಯಸ್ಥೆಯಲ್ಲಿದಿದ್ದರಿಂದ ನಿಮ್ಮ ಸರ್ಕಾರದ ವಿರುದ್ಧ ಮಾಡುವ ಯಾವ ಆರೋಪಕ್ಕೂ ಸಹ ದಾಖಲೆ ಒದಗಿಸದೆ ನಿಷ್ಕ್ರಿಯವಾಗಿ ನಿಷ್ಪ್ರಯೋಜಕವಾಗಿತ್ತು. ಅಮಿತ್ ಷಾ ಬಂದು ಗುದ್ದದೆ ಮುದ್ದುಮಾಡಿ ಹೋಗಿದ್ದರೆ ಇವರು ಈ ಚುನಾವಣೆಗೂ ಎದ್ದೇಳುತ್ತಿರಲಿಲ್ಲ ಹಾಗೂ ನಿಮ್ಮ ನಿದ್ದೆಗೂ ಭಂಗ ಬರುತ್ತಿರಲಿಲ್ಲ ಅನ್ನಿಸುತ್ತದೆ.

ಲೋಕಾಯುಕ್ತದ ಕತ್ತು ಹಿಸುಕಿದಾಗ, ಪೋಲಿಸರನ್ನು ರಾಜಕೀಯ ಹಸ್ತಕ್ಷೇಪದಿಂದ ದುರ್ಬಲರನ್ನಾಗಿ ಮಾಡಿದಾಗ ಜನ ಅಷ್ಟು ಬೇಸತ್ತುಕೊಳ್ಳಲಿಲ್ಲ. ರಾಜಕೀಯದ ಆಟಗಳು ಎಂದು ಸುಮ್ಮನಿದ್ದರು. ಸರ್ಕಾರದ ವಿರುದ್ಧ ಹೋರಾಟ ಮಾಡಲಿಲ್ಲ. ಅಂದ ಹಾಗೆ ಆಡಳಿತದ ಪೂರ್ಣಾವಧಿಯು ದುರಾಡಳಿತವೇ ಇತ್ತು ಎಂದಲ್ಲ. ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್’ನಂತಹ ಯೋಜನೆಗಳು ನಿಮ್ಮ ‘ಕೈ’ ಹಿಡಿದಿತ್ತು. ರಾಜಕೀಯದ ಒಳ ಲಾಭವಿದ್ದರು ಜನರು ಅದು ನಾಲ್ಕು ಜನ ನಿಜವಾದ ಬಡವರಿಗೆ ಸಹಾಯವಾದೀತು ಬಿಡು ಎಂದು ಸುಮ್ಮನಿದ್ದರು. ಆ ಯೋಜನೆಗಳು ನಿಜಕ್ಕು ಸದುಪಯೋಗವಾದವು. ಯಾವುದೋ ಒಬ್ಬ ಮಂತ್ರಿ ಅಕ್ರಮವಾಗಿ ಸಂಪಾದಿಸಬಹುದಿದ್ದ ಒಟ್ಟು ಹಣ, ಹಸಿವು ಮುಕ್ತ ಕರ್ನಾಟಕಕ್ಕೆ ನೀವು ನೀಡಿದ ವಾರ್ಷಿಕ ಹಣವಿರಬಹುದು. ಯಾವನೋ ಒಬ್ಬ ರಾಜಕಾರಣಿಯೋ, ಅಧಿಕಾರಿಯೋ ತಿನ್ನುವ ಬದಲು ಬಡ ಜನರಾದರು ಊಟ ಮಾಡಲಿ ಎಂಬ ಸದುದ್ದೇಶ ನಿಮ್ಮದಿರಬಹುದು. ಆ ನೈಜ ಬಡವರ ಆಶಿರ್ವಾದವೇ ನಿಮ್ಮನ್ನು ರಾಜ್ಯ ರಾಜಕೀಯದ ಕಾಂಗ್ರೆಸ್’ನಲ್ಲಿ ಉತ್ತುಂಗದಲಿ ಕೂರಿಸಿತು.

ನಿಮ್ಮ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬಂದಾಗ ಅದನ್ನು ಸಮರ್ಥಿಸಿದ ರೀತಿ, ಉತ್ತರ ಕೊಟ್ಟ ಬಗೆ, ವಿರೋಧ ಪಕ್ಷವನ್ನು ಅವರ ದುರಾಡಳಿತದ ಅವಧಿಯನ್ನು ನೆನಪಿಸಿ ನೆನಪಿಸಿ ಕಟ್ಟುಹಾಕಿದ ಪರಿ ಭಂಡತನವೋ ಮೊಂಡುತನವೋ ನೀವೊಬ್ಬ ಪ್ರಭಾವಿನಾಯಕರನ್ನಾಗಿ ಹೊರ ಹೊಮ್ಮಿಸಿತು. ಕಾಂಗ್ರೆಸ್‍ನ ಆಂತರ್ಯದಲ್ಲಾಗಲಿ, ಹೊರಗಾಗಲಿ, ವಿರೋಧ ಪಕ್ಷವಾಗಲಿ ಯಾರೆ ಯಾಗಲಿ ನಿಮ್ಮ ವಿರುದ್ಧ ಇದುವರೆಗೂ ಒಂದು ಭ್ರಷ್ಟಾಚಾರದ ಪ್ರಕರಣವನ್ನು ದಾಖಲೆ ಸಮೇತ ಹೊರ ತರಲು ಯಾರಿಗೂ ಆಗಲೇ ಇಲ್ಲ. ಕಾಂಗ್ರೆಸೇತರ ಪಕ್ಷಗಳಲ್ಲು ನಿಮ್ಮಂಥ ಭಂಡ ಧೈರ್ಯನಾಯಕರು ಬೇಕು. ಪರಿಸ್ಥಿತಿ ಯಾವುದೇ ಇರಲಿ ಅದನ್ನು ಎದುರಿಸುವ ಬಗೆ ತಿಳಿದಿರಬೇಕು ಅನ್ನುವುದನ್ನು ನಿಮ್ಮಿಂದ ನೋಡಿ ಕಲಿಯಬೇಕು. ಭಾ.ಜ.ಪ.ದ ಯಡ್ಡ್ಯೂರಪ್ಪನವರು ಮುಖ್ಯಮಂತ್ರಿಯಾದಾಗ ಅವರಿಗೆ ಅವರ ಪಕ್ಷದ ಇತರ ನಾಯಕರನ್ನೆ ಹಿಡಿದಿಡುವ ಕಲೆ ತಿಳಿಯಲಿಲ್ಲ. ಗುಂಪುಗಾರಿಕೆ ಭಿನ್ನಮತಗಳಾದಾಗ ಅದನ್ನು ಬಗೆಹರಿಸಲು ತಿಳಿಯದೇ ಒದ್ದಾಡಿದರು. ಒಳ್ಳೆಯ ಸಂಕಲ್ಪವಿದ್ದರು ಒಳಜಗಳದ ಸುಳಿಯಲ್ಲಿ ಸಿಲುಕಿ ಆಡಳಿತಾತ್ಮಕವಾಗಿ ಸತ್ತೇ ಹೋಗಿದ್ದರು ಎನ್ನಬಹುದು. ವಿರೋಧ ಪಕ್ಷದ ನಾಯಕರಾಗಿ ನಿವಿದ್ದಿರಿ ಇದನ್ನು ನೋಡಿ ಒಂದು ಆಡಳಿತ ಪಕ್ಷ ಅಂದರೆ ಹೇಗಿರಬಾರದೆಂಬ ಪಾಠವನ್ನು ನೀವು ಅಲ್ಲೆ ಕಲಿತರಿ ಅನ್ನಿಸುತ್ತದೆ. ಅದಕ್ಕೆ ನೀವು ಆಡಳಿತಕ್ಕೆ ಬಂದ ಕೂಡಲೆ ನಿಮ್ಮಲ್ಲೂ ವಿರೋಧಿ ಬಣವಿತ್ತು. ಮೂಲ ಕಾಂಗ್ರೆಸಿಗರು, ವಲಸೆ ಕಾಂಗ್ರೆಸಿಗರು ಎಂಬ ಗುಂಪು ಮಾಡಿದ್ದರು. ನೀವು ಅದೆಲ್ಲವನ್ನು ಮೆಟ್ಟಿನಿಂತಿರಿ. ವಿರೋಧಿ ಬಣವನ್ನು ಒಲೈಕೆಯೂ ಮಾಡಲಿಲ್ಲ, ಅವರ ವಿರುದ್ಧವು ಮಾತನಾಡಲಿಲ್ಲ. ರಾಜಕೀಯದ ಗಾಳದಲ್ಲಿ ಎಲ್ಲರನ್ನು ಕಟ್ಟಿಹಾಕಿದಿರಿ. ಕಾಂಗ್ರೆಸ್ ಅಂದರೆ ಸಿದ್ದರಾಮಯ್ಯ ಸಿದ್ದರಾಮಯ್ಯ ಅಂದರೆ ಕಾಂಗ್ರೆಸ್ ಎಂಬ ಮಟ್ಟಕ್ಕೆ ಪಕ್ಷದಲ್ಲೂ ನಿಮ್ಮ ಪಕ್ಷದ ಹೈಕಮಾಂಡಿಗೂ ತಿಳಿಸಿದಿರಿ. ಪಕ್ಷ ಮತ್ತು ಸರ್ಕಾರ ನಿಮ್ಮ ಹಿಡಿತಕ್ಕೆ ಪಡಿದಿರಿ. ನಾಲ್ಕುವರೆ ವರ್ಷ ಬಂಡಾಯವಿಲ್ಲದ ಸರ್ಕಾರ ನಡೆಸಿದಿರಿ.

ಭಾ.ಜ.ಪ.ದವರು ನಿಮ್ಮ ಸರ್ಕಾರದ ವಿರುದ್ಧ ಇರದ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಪ್ರಯತ್ನಿಸಿದರು. ಅದು ಸಫಲವಾಗಿರಲಿಲ್ಲ. ಕರಾವಳಿಯಲ್ಲಿ ಸರಣಿ  ಹಿಂದುಹುಡುಗರ ಕೊಲೆಗಳಾದಾಗ ಅದಕ್ಕೆ ಸರ್ಕಾರ ಪ್ರತಿಕ್ರಿಯಿಸಿದ ರೀತಿ ಜನರಲ್ಲಿ ಬೇಸರ ಮೂಡಿಸಿತ್ತು. ಆಡಳಿತ ವಿರೋಧಿ ಅಲೆ ಸೃಷ್ಟಿಸಲೆಂದೆ ಅಮಿತ್ ಷಾರನ್ನು ಕರೆಸಿ ಹಿಂದು ವಿರೋಧಿ ಸಿದ್ದರಾಮಯ್ಯ ಎಂದು ಹೇಳಿಸಿದಾಗಲು, ಜನಪ್ರಿಯ ಹಾಗು ಜನಪರ ಪ್ರಧಾನಿಗಳಾದ ಮೋದಿಯವರು ಎರಡೆರಡು ಬಾರಿ ಬಂದು ಪರ್ಸೆಂಟೇಜ್ ಸರ್ಕಾರವೆಂದಾಗಲು ಅದು ಅಷ್ಟು ಫಲಕಾರಿಯಾಗಿರಲಿಲ್ಲ. ಭಾ.ಜ.ಪ.ದ ಪ್ರತಿ ತಂತ್ರಕ್ಕು ನಿಮ್ಮ ಪ್ರತಿಕ್ರಿಯೆ ಮತ್ತು ಪ್ರತಿತಂತ್ರಗಳು ವಿರೋಧ ಪಕ್ಷದ ನಿದ್ದೆಗೆಡಿಸಿತ್ತು. ನಿಮ್ಮನ್ನು ಮಣಿಸಲು ತಂತ್ರಗಳು ಹೊಳೆಯದೆ ಹೇಳಿದನ್ನೆ ಹೇಳುತ್ತಿದ್ದರು. ಮಾನ್ಯ ಪ್ರಧಾನಿಗಳೇ ನಿಮ್ಮ ಸರ್ಕಾರವನ್ನು 10% ಸರ್ಕಾರ ಎಂದು ಹೇಳಿಹೋದರೂ, ಇದುವರೆಗು ಸ್ಥಳೀಯ ಭಾ.ಜ.ಪ. ನಾಯಕರಿಗೆ ಅದಕ್ಕೆ ಪೂರಕ ದಾಖಲೆ ಒದಗಿಸಲಾಗದೆ ಬರಿ ಕೈಲಿ ಕೂತಿದ್ದರು. ಫೈರ್ ಬ್ರಾಂಡ್ ಸಂಸದರನ್ನು ನಿಮ್ಮ ವಿರುದ್ಧ ಬಿಟ್ಟಾಗಲು ನೀವು ಸಮರ್ಥವಾಗಿ ಎದುರಿಸಿದಿರಿ ಹಾಗೂ ನಿಮ್ಮ ಕಾಂಗ್ರೆಸನ ಸಭೆಯಲ್ಲಿ ಅವರನ್ನು ಭಾ.ಜ.ಪದ ಫೈರ್ ಬ್ರಾಂಡ್ ಸಂಸದರನ್ನು ಹೊಗಳಿ ಅವರಂತೆ ನಮ್ಮಲ್ಲಿಯೂ ಇರಬೇಕು ಆದರೆ ಪದಗಳ ಬಳಕೆಯಲ್ಲಿ ಎಚ್ಚರವಿರಲಿ ಎಂದು ಹೇಳಿದಿರಿ. ರಮ್ಯರವರು ಮೋದಿಯವರನ್ನು ಕುಡುಕ ಎಂದು ನಿಂದಿಸಿದಾಗ ಅದು ರಾಜಕೀಯದ ಮಜಲು ಪಡೆದು ಮತ್ತೇನೋ ಆಗಬಹುದು ಎಂದು ಅರಿತ ನೀವು ಬಹಿರಂಗವಾಗಿಯೇ ಅದನ್ನು ಖಂಡಿಸಿ ರಮ್ಯರವರಿಗೆ ಬುದ್ಧಿ ಹೇಳಿದಿರಿ. ಅದೆಲ್ಲವು ನಿಮ್ಮ ರಾಜಕೀಯ ಚಾಣಾಕ್ಷತನಕ್ಕೆ ಮೆಚ್ಚಬೇಕಾದುದೆ. ಆದರೆ ನಿಮ್ಮ ಮೂಗಿನ ಕೆಳಗೆ ನಡೆದ ಕಾಂಗ್ರೆಸ್ ನಾಯಕರ ದರ್ಪ ಮತ್ತು ಪುಂಡಾಟವನ್ನು ತಡೆಯುವಲ್ಲಿ ವಿಫಲರಾದಿರಿ ಅಲ್ಲವೇ ಮಾನ್ಯ ಮುಖ್ಯಮಂತ್ರಿಗಳೆ??

ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಶಿಖಾರವರ ಮೇಲೆ ನಿಮ್ಮ ಶಿಷ್ಯ ಮರಿಗೌಡರು ಜಗಳಕ್ಕೆ ಬಿದ್ದಾಗಲೆ ನೀವು ಎಚ್ಚೆತ್ತುಕೊಳ್ಳಬೇಕಿತ್ತು. ಆ ಪ್ರಕರಣದಲ್ಲಿ ನೀವು ಮೈ ಮರೆತಿದ್ದು ನಲಪಾಡ್ ಹ್ಯಾರಿಸ್ ಮಗನ ಪ್ರಕರಣದಲ್ಲಿ ಕೈ ಹಿಸುಕಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿತು. ಭಾ.ಜ.ಪ. ಯಾವ ಆಡಳಿತ ವಿರೋಧಿ ಅಲೆ ಹುಟ್ಟು ಹಾಕಲು ಪ್ರಯತ್ನಿಸಿ ವಿಫಲವಾಗಿತ್ತೊ ಅದೇ ಆಡಳಿತ ವಿರೋಧಿ ಅಲೆ ಹುಟ್ಟಿಕೊಳ್ಳಲು ಶಾಸಕರಾದ ಹ್ಯಾರಿಸ್’ರವರ ಮಗ ನಲಪಾಡ್‍ನ ಪ್ರಕರಣ, ಬಿ.ಬಿ.ಎಂ.ಪಿಯಲ್ಲಿ ಜಲಮಂಡಳಿಯ ಮಾಜಿ ಅಧ್ಯಕ್ಷರ ಪೆಟ್ರೋಲ್ ಬಾಟಲ್ ದರ್ಪ, ಶಾಸಕ ಬೈರತಿ ಬಸವರಾಜರ ಬೆಂಬಲಿಗರ ಪೋಲಿಸ್ ಮೇಲಿನ ಹಲ್ಲೆ, ಇನ್ಯಾರೋ ಶಾಸಕರ ಕಡೆಯವರಿಂದ ಕಾರ್ಮಿಕರ ಮೇಲೆ ಹಲ್ಲೆ ಮತ್ತು ಅದಕ್ಕೆ ನಿಮ್ಮ ಗೃಹ ಮಂತ್ರಿಗಳ ಹೇಳಿಕೆ ಈ ಎಲ್ಲಾ ಪ್ರಕರಣಗಳು ನಿಮ್ಮ ಸರ್ಕಾರದ ವಿರುದ್ಧ ಜನರ ಭಾವನೆಗಳನ್ನು ಬೆಳೆಸಲು ಪುಷ್ಠಿಕೊಟ್ಟು ಅದನ್ನು ಪೋಷಿಸಲು ಚುನಾವಣಾ ಸಮಯದ ಸದವಕಾಶ ವಿರೋಧ ಪಕ್ಷಗಳಿಗೆ ಒದಗಿ ಬಂದಿದೆ ಅನ್ನುವುದಂತು ಸತ್ಯ. ಇದರೊಂದಿಗೆ ಈಗ ಡಿ.ಕೆ.ರವಿ, ಪೋಲಿಸ್ ಗಣಪತಿ ಇನ್ನಿತರ ಪ್ರಕರಣಗಳು ಸೇರಿಕೊಳ್ಳುತ್ತವೆ. ನಿಮ್ಮ ಐದು ವರ್ಷದ ಫಲವನ್ನು ಐದು ನಿಮಿಷದಲ್ಲಿ ನಿಮ್ಮ ಪಕ್ಷದ ಪುಂಡರು ಮತ್ತು ದುರಹಾಂಕಾರಿಗಳು ಹಾಳು ಮಾಡಿಬಿಟ್ಟರು. ಸಿದ್ದರಾಮಯ್ಯರಿಗೆ ಐದು ವರ್ಷ ಪುಂಡರಿಗೆ ನಿಮಿಷ ಎಂಬತೆ ಆಯಿತು. ಸಿದ್ದರಾಮಯ್ಯನವರೇ ಮತ್ತು ಗೃಹಮಂತ್ರಿಗಳೆ ಕರ್ನಾಟಕಕ್ಕೆ ಒಂದು ಸದೃಢ ಮತ್ತು ರಾಜಕೀಯ ನಿಶ್ಪಕ್ಷಪಾತ ಗೃಹಇಲಾಖೆಯನ್ನು ನೀಡಿ ಕರ್ನಾಟಕಕ್ಕೆ ಗೂಂಡಾ ರಾಜ್ ಹಣೆಪಟ್ಟಿ ಬರುವ ಮೊದಲು ನಿಮ್ಮ ಆಡಳಿತಾವಧಿಯ ಸಂಧ್ಯಾಕಾಲದಲ್ಲಾದರೂ ಒಂದು ಪವರ್ ಫುಲ್ ಪೋಲಿಸ್ ಇಲಾಖೆಯನ್ನು ನೀಡಿ ಎಂಬುದಷ್ಟೆ ಕನ್ನಡಿಗರ ಬೇಡಿಕೆ.

ಇಷ್ಟು ಪ್ರಕರಣಗಳು ಧರ್ಮಸ್ಥಳಕ್ಕೆ ಮಾಂಸ ತಿಂದು ಹೋದಾಗ ನೀವು ನೀಡಿದ ಪ್ರತಿಕ್ರಿಯೆಗೆ ತಳುಕು ಹಾಕಿ. ಕಾಲವೆ ಎಲ್ಲದಕ್ಕು ಉತ್ತರಿಸುತ್ತದೆ ಹಾಗೂ ಕಾಲವೇ ಹಲವೊಮ್ಮೆ ಪ್ರಶ್ನೆಯಾಗುತ್ತದೆ ಎಂದು ಮಾತನಾಡುವಂತಾಗಿದೆ. ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಇಟ್ಟು ಅಧಿಕಾರಕ್ಕಾಗಿ ಈಗ ಬೀದಿ ಬೀದಿ ಸುತ್ತುತ್ತಿರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ಕಾಕತಾಳೀಯ ಎಂಬಂತೆ ಹಲವು ಪ್ರಕರಣಗಳು ಸಹ ಧರ್ಮಸ್ಥಳದ ಪ್ರವೇಶದ ನಂತರವೇ ಈಗ ಹೊರಹೊಮ್ಮಿವೆ. ನಂಬಿಕೆಯೋ ಮೂಢನಂಬಿಕೆಯೋ ತಿಳಿಯದಾಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Puneeth G

ಎಂ.ಸಿ.ಎ. ವಿದ್ಯಾಭ್ಯಾಸ ಮುಗಿಸಿ ಸೀನಿಯರ್ ಸಾಫ್ಟ್’ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲೇಖನಗಳನ್ನು ಕಳೆದ 2 ವರ್ಷಗಳಿಂದ ಬರೆಯುತ್ತಿದ್ದು ಲೇಖನಗಳು ರಾಷ್ಟ್ರೀಯ ಹಿತಾಸಕ್ತಿಯಿಂದಕೂಡಿರುತ್ತದೆ. ದೇಶದಲ್ಲಿನ ಸ್ಥಳಿಯ ವಿದ್ಯಮಾನಗಳ ಆಗುಹೋಗುಗಳನ್ನು ವಿಮರ್ಶಿಸಿ ಬರೆಯುವುದು ಇವರ ಹವ್ಯಾಸ. ಇವರ ಲೇಖನಗಳು ಚಾಮರಾಜನಗರದ ರೇಷ್ಮೆನಾಡು, ಮೈಸೂರಿನ ಜನಮನ, ಮೈಸೂರು ವಿಜಯ, ತ್ರಿವೇಣಿಸಂಗಮ ಹಾಗೂ ಹಾಸನದ ಜನಮನದಲ್ಲಿ ಪ್ರಕಟಗೊಂಡಿರುತ್ತದೆ. ‘ವಿದ್ಯಾಸ್ಪಂದನ’ವೆಂಬ ಸಂಸ್ಥೆಯನ್ನು ಕಟ್ಟಿ ಅದರಲ್ಲಿ ಸ್ಥಳೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಗಳಿಗೆ ಪ್ರೋತ್ಸಾಹ ಮಾಡುತ್ತಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!