ಅಂಕಣ

ಪ್ರತಿ ಪಯಣ ನೂತನ…

ಅದೊಂದು ಭಾನುವಾರದ ಮುಂಜಾನೆ. ರಾಶಿ ಭವಿಶ್ಯದಲ್ಲಿ ದೂರಪ್ರಯಾಣದಿಂದ ದೇಹಾಯಾಸ ಎಂದಿತ್ತು. ಹಾಗೆಂದು ಅದನ್ನು ಓದಿ ಮನೆಯಲ್ಲಿಯೇ ಇರಲು ಸಾಧ್ಯವೇ? ಹೊರಟಿದ್ದೆ, ನನ್ನ ಪಯಣದ ಸಹಪಾಠಿ ಫಾಸ್ಟ್ ಟ್ರ್ಯಾಕ್ ಬ್ಯಾಗ್ ಅನ್ನು ಬೆನ್ನ ಮೇಲೆ ಕೂರಿಸಿಕೊಂಡು. ಮುಂಜಾನೆಯಾದ್ದರಿಂದ ಬಸ್ಸಿನಲ್ಲಿ ಆಸನವನ್ನು ಅರಸುವ ಪ್ರಮೇಯ ಬರಲಿಲ್ಲ. ಎಂದಿನಂತೆ ನನ್ನಿಷ್ಟದ ಕಿಟಕಿ ಪಕ್ಕದ ಆಸನದಲ್ಲಿ ಆಸೀನನಾದೆ.

ಚಳಿಗಾಲ, ಕಿಟಕಿಯ ಗಾಜನ್ನು ತೆರೆಯುವ ಸಾಹಸಕ್ಕೆ ಮನಸ್ಸು ಒಪ್ಪಲಿಲ್ಲ. ಮುಂದಿನ ಕಾರ್ಯಕ್ರಮ ಇಯರ್ ಫೋನ್ ನಿಂದ ಕಿವಿಯನ್ನಲಂಕರಿಸುವುದು. ಅದನ್ನು ಪೂರೈಸಿದೆ. ಚಿ.ಉದಯಶಂಕರ್, ಹಂಸಲೇಖ, ಜಯಂತ್ ಸರ್, ನಮ್ಮ ವಿಕಟಕವಿ ಭಟ್ರು, ಕೆ ಕಲ್ಯಾಣ್, ಎಸ್.ಪಿ.ಬಿ, ಡಾರಾಜ್, ಸೋನು ನಿಗಮ್, ಶ್ರೇಯಾ ಘೋಶಾಲ್, ವಿಜಯ ಪ್ರಕಾಶ್ ಇವರೆಲ್ಲ ನನ್ನ ಒಂಟಿಪಯಣವನ್ನು ರಂಗೇರಿಸುವವರು. ಅವರ ಹಾಡುಗಳಿಲ್ಲದ ಪಯಣ ಅದೆಷ್ಟು ನೀರಸವಾಗಿರುತ್ತಿತ್ತಲ್ಲವೇ? ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಅಂತೂ ಬಸ್ ಹೊರಟಿತು. ಕಿವಿಯೊಳಗೊಂದು ಸಂಗೀತ ರಸಮಂಜರಿ ಕೂಡ ಆರಂಭವಾಯಿತು. “ನೂರೊಂದು ಬಾರಿ ಹರಿದು ನಾ ಬರೆದ ಓಲೆಯ, ತುಸುವಾದರೂ ತೆರೆದೋದದೆ ನೀ ಹಾಗೆ ಹೋದೆಯಾ?” ಎಂಬ ಸಾಲುಗಳು ಪ್ರಥಮವಾಗಿ ಆವರಿಸಿದವು. ಮಸುಕಾಗುತ್ತ ಮರೆಯಾಗುತ್ತಿದ್ದ ಶಶಿಗೆ ಭೂರಮೆ ಉಲಿದ ಸಾಲುಗಳೋ ಇವು ಎಂಬಂತಹ ಒಂದು ಪ್ರಶ್ನಾರ್ಥಕ ಭಾವ. ಇನ್ನೇನು ಭಾವದಲೆಯಲ್ಲಿ ಮೈಮರೆಯುತ್ತೇನೆನ್ನುವಾಗ ಕಣ್ಣಿಗೆ ಬಿದ್ದ; ಇನ್ನೊಬ್ಬ ಸುಂದರಾಂಗ. ಸೃಷ್ಟಿ ಬಿಡಿಸಿಟ್ಟ ಪಶ್ಚಿಮ ಘಟ್ಟದ ಅಂಚುಗಳಿಗೆ ನಿಧಾನವಾಗಿಶೇಡಿಂಗ್ಕೊಡುತ್ತ, ಬಾನ ಸೀರೆಯಂಚಿಗೆ ಚಿನ್ನದ ಲೇಪನಗೈಯುತ್ತ, ಸೌಪರ್ಣಿಕಾ ದರ್ಪಣದಿ ಕಂಡ ಬಾನ ಬಿಂಬಕ್ಕೆ ಕಣ್ ಹೊಡೆಯುತ್ತ, ಇಬ್ಬನಿಯ ಮೈ ಸೋಕಿ, ಅವಳು ನಾಚಿ ನೀರಾಗುವಂತೆ ಮಾಡುತ್ತ, ಸುಳಿದಲ್ಲೆಲ್ಲ ಕತ್ತಲ ಸರಿಸಿ, ಬೆಳಕ ಹರಿಸುತ್ತಿದ್ದ.

ಪಯಣ ಮುಂದುವರಿಯುತ್ತಿತ್ತು. ದಾರಿಬದಿಯ ಬಹುಮಹಡಿ ಕಟ್ಟಡಗಳಿಗೂ, ನಡುವೆ ಹಾಯುವ ಬೃಹತ್ ವಾಹನಗಳಿಗೂ, ನನಗೂ ಒಂದು ಶೀತಲ ಸಮರ. ಪ್ರತಿ ಬಾರಿ ಅಡೆತಡೆಗಳ ನಡುವೆ ಸುಂದರಾಂಗ ಕಂಡಾಗೆಲ್ಲ ಆಗುವ ಸಂತಸಕ್ಕೆ ಪಾರವಿಲ್ಲ. ಅಷ್ಟುಚಂದ ಗ್ವಾಂಪಿಯಾಗಿ ಸೂರ್ಯ ಹೊಳೆಯುತ್ತಿರುವಾಗ ಅವನದ್ದೊಂದುಕ್ಯಾಂಡಿಡ್ಕ್ಲಿಕ್ಕಿಸದೇ ಉಳಿಯಲು ಸಾಧ್ಯವೇ? ಖಂಡಿತ ಇಲ್ಲ. ಸಂಭಾವಿತ ಛಾಯಾಗ್ರಹಣಕ್ಕೆ ಚಾಲನೆ ನೀಡುವ ಎಂದೆನಿಸಿತು. ಸೂರ್ಯನ ಬೆಚ್ಚನೆ ಕಿರಣಗಳು ಸೋಕಿದ್ದರಿಂದ ಕಿಟಕಿ ತೆರೆಯುವ ಸಾಹಸಕ್ಕೆ ಧೈರ್ಯ ಬಂತು. ಆದರೇನು, ಕಿಟಕಿಯ ಗಾಜು ಚಳಿಯಲ್ಲಿ ಮರಗಟ್ಟಿ ಹೋಗಿತ್ತು. ಹಾಗಾಗಿ ಗಾಜಿನ ಮರೆಯಿಂದಲೇ ಫೋಟೋಗ್ರಫಿ ಮಾಡುವ ಅನಿವಾರ್ಯತೆ ಉಂಟಾಯಿತು.

ಪ್ರಕೃತಿಯಂತೂ ಪ್ರತಿಬಾರಿಯೂ ಕಾಣುವುದು ಹೊಸತರಂತೆಯೇ. ನೇಸರನೆಂಬ ಕಾಸಗಲ ಬೊಟ್ಟಿಟ್ಟ ಗರತಿಯಂತೆ ಒಮ್ಮೆ ಕಂಡರೆ, ಇನ್ನೊಮ್ಮೆ ತೆಂಗಿನ ಮರವೆಂಬ ನಕ್ಷತ್ರಕಡ್ಡಿಯನ್ನು ಸೂರ್ಯನಿಂದ ಹೊತ್ತಿಸಿಕೊಳ್ಳುತ್ತ ನಿಂತ ಪುಟ್ಟ ಮಗುವಂತೆ ಕಾಣುತ್ತದೆ, ಬೆಳಕಿನ ಸೀರೆಯುಟ್ಟ ಹರೆಯದ ಹುಡುಗಿಯಂತೆ ಮಗದೊಮ್ಮೆ. ಹೇಗೇ ಇರಲಿ ಅವಳ ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಆನಂದವನ್ನು ಅನುಭವಿಸುತ್ತಾ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯುತ್ತ ಪಯಣ ಸಾಗುತ್ತಿತ್ತು. ನನ್ನನ್ನು ಕಂಡ ಅಕ್ಕಪಕ್ಕದ ಸೀಟಿನವರು ಯಾವುದೋ ಮಾನಸಿಕ ರೋಗಿಯೋ ಎಂಬಂತೆ ದಿಟ್ಟಿಸುತ್ತಿದ್ದರು. ಆದರೇನು? ‘ಸಂಭಾವಿತನ ಛಾಯಾಗ್ರಹಣಮಾತ್ರ ನಿಲ್ಲಲಿಲ್ಲ.

ಗದ್ದೆಯ ತುಂಬೆಲ್ಲ ಹರಡಿದ ಮಂಜು ದೇವಲೋಕದಿಂದ ಹಿಟ್ಟಿನ ಡಬ್ಬ ಬಿತ್ತೇನೋ ಅನಿಸುವಂತಿತ್ತು. ಇನ್ನು ದೂರದಲ್ಲಿರುವ ಮರಗಳೋ ಬಣ್ಣ ಹಾಕದ ಬಾಂಬೇ ಮಿಠಾಯಿಯಂತೆ ಕಾಣುತ್ತಿದ್ದವು. ಇಬ್ಬನಿಯ ಪಾರದರ್ಶಕ ಪರದೆಯಿಂದ ರವಿಯ ಕಿರಣಗಳು ನುಸುಳುವಾಗ ಅದರ ಶಾಖಕ್ಕೆ ಕಳಚುವ ಬೆಳ್ಳಿಪರದೆ, ಜಗತ್ತೆಂಬ ಚಿತ್ರಮಂದಿರದ ಮುಂಜಾನೆಯ ದೇಖಾವೆಗೆ ಚಾಲನೆ ನೀಡಿದಂತಿತ್ತು.

ಹೀಗೆ, ಅಸಂಖ್ಯ ಕೋಟಿ ಬಾರಿ ಘಟಿಸಿರುವ ಮುಂಜಾವು ಪ್ರತಿ ಬಾರಿ ನೋಡುವಾಗಲೂ ಹೊಸದಾಗಿ ಕಾಣುವ ವೈಚಿತ್ರ್ಯದ ಗುಟ್ಟನ್ನು ಅದೆಷ್ಟು ಭದ್ರವಾಗಿ ಕಾದಿಟ್ಟಿದ್ದಾನೆ ಸೃಷ್ಟಿಕರ್ತ ಅನ್ನಿಸಿತು. “ಅದೇ ಭೂಮಿ, ಅದೇ ಬಾನು, ಪಯಣ ನೂತನ…” ಎಂಬ ಜಯಂತ್ ಕಾಯ್ಕಿಣಿ ಸರ್ ಸಾಲುಗಳು ಮನವನ್ನಾವರಿಸಿತು!

ತನ್ನ ಮೈಬಣ್ಣವನ್ನೆಲ್ಲ ಅವರಿವರಿಗೆ ಬಳಿದು ಬೆಳ್ಳಗಾದ ಸೂರ್ಯ ಅವನ ದೈನಿಕ ಪಯಣ ಮುಂದುವರೆಸಿದ. ಇತ್ತ ನಾನು, ಕ್ಲಿಕ್ಕಿಸಿದ ಫೋಟೊಗಳಲ್ಲಿ ಚಂದ ಅನಿಸಿದವುಗಳನ್ನು ಆರಿಸಿ ಅವುಗಳನ್ನುಎಡಿಟ್ಮಾಡಿ ಇನ್ಸ್ಟಾಗ್ರಾಮ್ಗೆ ಅಪಲೋಡ್ ಮಾಡುವ ನವಯುವಕರ ಮೂಲಭೂತ ಕರ್ತವ್ಯದಲ್ಲಿ ನಿರತನಾದೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!