ಪ್ರಚಲಿತ

ಸರ್ಕಾರಿ ಶಾಲೆಗಳನ್ನೆ ಉಳಿಸಿಕೊಳ್ಳುವ ತಾಕತ್ತಿಲ್ಲದವರು ನಮ್ಮ ಮಠ ಮಂದಿರಗಳನ್ನು ತೆಗೆದುಕೊಂಡು ಯಾರಿಗೆ ಮಾರುತ್ತೀರಾ?

ಕರ್ನಾಟಕ ಸರ್ಕಾರವು ರಾಜ್ಯದ ಮಠ ಮಂದಿರಗಳು ಹಾಗೂ ಅವುಗಳ ಸುಪರ್ದಿಯಲ್ಲಿರುವ ದೇವಸ್ಥಾನಗಳನ್ನು ತನ್ನ ಅಧೀನದಲ್ಲಿರುವ ಮುಜುರಾಯಿ ಇಲಾಖೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ಆ ನಿರ್ಧಾರವನ್ನು ಮುಖ್ಯಮಂತ್ರಿಗಳು ತಳ್ಳಿಹಾಕಿದರೂ, ಹಿಂದೂ ವಿರೋಧಿ ಈ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಆದಾಯವಿರುವ ಎಲ್ಲಾ ದೇವಾಲಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು; ಮಠಗಳಿಗೆ ಅದರ ಆದಾಯವನ್ನು ತಪ್ಪಿಸಿ ಮಠಗಳನ್ನು ಮಠದ ಪೀಠಾಧಿಪತಿಗಳನ್ನು ಬೀದಿಗೆ ತರುವ ಹುನ್ನಾರ ಈ ಸೋಗಲಾಡಿ ಸಿದ್ದಾಂತದ ಎಡಪಂಕ್ತೀಯ ಗಂಜಿಗಿರಾಕಿಗಳ ಗುಲಾಮ ಸರ್ಕಾರ ನಡೆಸುತ್ತಲೇ ಇದೆ.

ರಾಜ್ಯಸರ್ಕಾರವು ಮಠಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ಯೋಚಿಸುವ ಮೊದಲು ತನ್ನ ಯೋಗ್ಯತೆಯನ್ನು ಅವಲೋಕಿಸಿಕೊಳ್ಳಬೇಕಿತ್ತು. ಚುನಾವಣೆಯ ಸಮಯದಲ್ಲಿ ಅದೇ ಮಠಗಳ ಒಳ ನುಗ್ಗಿ ಮಠಾಧೀಶರ ಕಾಲುಹಿಡಿದು ಚುನಾವಣೆಯಲ್ಲಿ ತಮ್ಮ ಮತ್ತು ತಮ್ಮ ಸಮುದಾಯದ ಬೆಂಬಲಬೇಕು ಎಂದು  ರಾಜಕಾರಣಿಗಳು ಹೇಳುತ್ತಾರೆ. ಅದೆಷ್ಟೋ ಮಠಾಧೀಶರ ಆಶೀರ್ವಾದದಿಂದಲೇ ಶಾಸಕರು ಮತ್ತು  ಮಂತ್ರಿಯಾಗಿರುವವರು ನಮ್ಮ ಮುಂದೆ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಾರೆ. ಆದರೆ ಅವರೇ ಇಂದು ಮಠಗಳ ‘ಗಳು’ಗಳಿಗೆ (ಛಾವಣಿಯ ಮರದ ಕಡ್ಡಿಗಳು) ಬೆಂಕಿ ಹಚ್ಚಿ ಚಳಿಕಾಯಿಸಿಕೊಳ್ಳಲು ಕಾಯುತ್ತಿದ್ದಾರೆ.

ಮಠಗಳಿಗೆ ಭಾರತದಲ್ಲಿ ತನ್ನದೇ ಆದ ಪರಂಪರೆ ಇದೆ. ಅದರದೆ ಆದ ಮರ್ಯಾದೆ, ಗೌರವವಿದೆ. ಮಠಗಳು ಭಾರತದ ಉದ್ದಗಲಕ್ಕೆ ತಮ್ಮ ಕೊಡುಗೆ ನೀಡಿದೆ. ಅದರ ಆವಶ್ಯಕತೆ ಮತ್ತು ಅನುಕೂಲತೆಗಳನ್ನು ಅರಿಯದ ಸರ್ಕಾರ ಅವನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳಲು ನಿರ್ಧರಿಸಿರುವುದು ವಿಷಾದನೀಯ. ಮಠಗಳು ಭಾರತದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಗುರುತು. ಅವು ಭಾರತದ ಭವ್ಯ ಗುರು-ಶಿಷ್ಯ ಪರಂಪರೆಯ ಕುರುಹು ಅವುಗಳ ಅಸ್ತಿತ್ವ ಭಾರತದ ಹೆಮ್ಮೆ ಮತ್ತು ಘನತೆ.

ದೇವಸ್ಥಾನಗಳು – ಹಸಿವು ನೀಗಿಸುವ ಅನ್ನದೇಗುಲ:

ಮಾನ್ಯ ಮುಖ್ಯಮಂತ್ರಿಗಳೇ ಒಮ್ಮೆ ಯೋಚಿಸಿ ನೀವು ನೀಡಿರುವ ಅನ್ನಭಾಗ್ಯ ಮತ್ತು ಇಂದಿರಾ ಉಪಹಾರಮಂದಿರಗಳು ಕೊಡುವ ವಾರ್ಷಿಕ ಊಟವನ್ನು ಧರ್ಮಸ್ಥಳದ ಶ್ರೀ ಮಂಜುನಾಥನ ದೇವಸ್ಥಾನವು ಒಂದು ಹೊತ್ತಿಗೆ ನೀಡುತ್ತದೆ. ಹೊರನಾಡಿನ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಒಂದು ದಿನ ತಯಾರಿಸುವ ಪಲ್ಯ ಮತ್ತು ಕೋಸಂಬರಿಯಷ್ಟು ನಿಮ್ಮ ಇಂದಿರಾ ಕ್ಯಾಂಟೀನ್‍ನಲ್ಲಿ ಉಪ್ಪಿಟ್ಟು ಮತ್ತು ಕೇಸರಿ ಬಾತು ಸಹ ಒಂದು ತಿಂಗಳಿಗೆ ತಯಾರಾಗುವುದಿಲ್ಲ ಅನ್ನಿಸುತ್ತದೆ. ಹಸಿವು ಮುಕ್ತ ಕರ್ನಾಟಕ ಮಾಡುತ್ತೇನೆಂದು ಬೀಗುತ್ತೀರಲ್ಲ ಮುಖ್ಯಮಂತ್ರಿಗಳೆ, ಒಮ್ಮೆ ಎದೆ ಮುಟ್ಟಿ ಹೇಳಿ ನೋಡೋಣ ನಮ್ಮ ದೇವಾಲಯಗಳು ನೀಡುವ ಗುಣಮಟ್ಟದ ಪ್ರಸಾದ ಭೋಜನದಷ್ಟು ಊಟವನ್ನು ಕನಿಷ್ಠ ಪಕ್ಷ ಒಂದು ಹೊತ್ತಾದರೂ ಕೊಡುವ ಯೋಗ್ಯತೆ ಮತ್ತು ಶಕ್ತಿ ನಿಮ್ಮ ಸರ್ಕಾರಕ್ಕೆ ಇದೆಯೆಂದು. ಒಮ್ಮೆ ಯೋಚಿಸಿ ಮುಖ್ಯಮಂತ್ರಿಗಳೆ, ಮುಜುರಾಯಿ ಸಚಿವರೆ ನಿಮಗೆ ಈ ತಾಕತ್ತು ಇದೆಯಾ?

ನಿಮ್ಮ ಮುಜುರಾಯಿ ಫಲಕ ಹೊತ್ತ ದೇವಾಲಯಗಳೂ ಇವೆ ಅಲ್ಲಿ ಏಕೆ ಧರ್ಮಸ್ಥಳದಷ್ಟು ಊಟ ನೀವು ಹಾಕುವುದಿಲ್ಲ? ನಾಡಿನ ಅಧಿದೇವತೆ ಚಾಮುಂಡಿ ಬೆಟ್ಟವೂ ಸಹ ಸರ್ಕಾರದ ಸುಪರ್ದಿಯಲ್ಲೇ ಇರುವುದು ಅಲ್ಲಿ ಅದೆಷ್ಟು ಜನಕ್ಕೆ ಘನತೆವೆತ್ತ ನಿಮ್ಮ ಸರ್ಕಾರ ಊಟ ಹಾಕುತ್ತಿದೆ? ಹೊರನಾಡಿನ ಅನ್ನಪೂರ್ಣೇಶ್ವರಿ , ಕಟೀಲಿನ ದುರ್ಗಾಪರಮೇಶ್ವರಿ, ಶೃಂಗೇರಿಯ ಶ್ರೀ ಶಾರದಾ ಪೀಠವು ಸಹ ಶಕ್ತಿ ಕೇಂದ್ರಗಳೇ ಅಲ್ಲಿ ಭಕ್ತರಿಗೆ ಸಿಗುವ ಸತ್ಕಾರ, ಸೌಕರ್ಯ, ಸೌಲಭ್ಯ, ವಸತಿ ಹಾಗೂ ಭೋಜನ ಸರ್ಕಾರ ನಡೆಸುವ ಚಾಮುಂಡಿ ಬೆಟ್ಟದಲ್ಲಿ ಏಕಿಲ್ಲ?? ಇದೇ ನಮ್ಮ ಮಠಗಳು ಮತ್ತು ನಿಮ್ಮ ಸರ್ಕಾರ ನಡೆಸುವ ದೇವಸ್ಥಾನಗಳಿಗೆ ಇರುವ ವ್ಯತ್ಯಾಸ. ಆದರೆ ಅದರಲ್ಲಿರುವ ಎಲ್ಲಾ ದೇವರು ಒಬ್ಬಳೆ ಶ್ರೀ ಶಕ್ತಿ ಪಾರ್ವತಿ. ಆದರೆ ದೇವಾಲಯವನ್ನು ನಡೆಸುವ ಸಂಸ್ಥೆಗಳು ಮಾತ್ರ ಬೇರೆ ಬೇರೆ. ಅಂತಹ ಶಕ್ತಿ ಪೀಠಗಳನ್ನು ಮಠಗಳು ನೆಡೆಸಿ ಆ ದೇವಾಲಯದ ಘನತೆಯನ್ನು ಹೆಚ್ಚಿಸಿವೆ, ಸರ್ಕಾರದ ದೇವಾಲಯಗಳು ಸುಣ್ಣ ಬಣ್ಣ ಕಾಣದೆ ನಿಂತಿವೆ.

ನಂಜನಗೂಡಿನ ನಂಜುಂಡೇಶ್ವರ, ಮಹದೇಶ್ವರ ಬೆಟ್ಟದ ಮಹದೇಶ್ವರ, ಧರ್ಮಸ್ಥಳ, ಮುರುಡೇಶ್ವರ ಹಾಗೂ ಗೋಕರ್ಣ ಕರ್ನಾಟಕದ ಪ್ರಮುಖ ಶಿವನ ದೇವಾಲಯಗಳು. ಅದರಲ್ಲಿ ನಂಜನಗೂಡಿನ ನಂಜುಂಡೇಶ್ವರ ಮತ್ತು ಮಲೈ ಮಹದೇಶ್ವರ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಭಕ್ತರಾದ ನಮಗೆ ಧರ್ಮಸ್ಥಳದಲ್ಲಿರುವ ಶಿವನಿಗೂ ನಂಜನಗೂಡಿನಲ್ಲಿರುವ ಶಿವನಿಗೂ ವ್ಯತ್ಯಾಸವಿಲ್ಲ ಆದರೆ ಈ ಎರಡು ದೇವಸ್ಥಾನಗಳ ಆಡಳಿತಗಳಲ್ಲಿನ ವ್ಯತ್ಯಾಸವನ್ನು ಕಾಣುತ್ತೇವೆ. ನಂಜನಗೂಡಿನಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ, ದುಡ್ಡಿದ್ದವರಿಗೆ, ರಾಜಕಾರಣಿಗಳಿಗೆ, ಪರಿಚಯಸ್ತರಿಗೆ ಮೊದಲ ಆದ್ಯತೆ. ಅಂತಹವರನ್ನು ಗರ್ಭಗುಡಿಯ ತನಕಲೂ ಕರೆದುಕೊಂಡು ಹೋಗುತ್ತಾರೆ ಹಾಗೂ ಹೂವಿನ ಪ್ರಸಾದ, ತೀರ್ಥದಿಂದ ಹಿಡಿದು ದೇವಾಲಯದ ಹೊರಗೆ ಬರುವವರೆಗೂ ಪ್ರತಿಯೊಂದಕ್ಕೂ ದುಡ್ಡು ಬೇಕು. ದುಡ್ಡಿಲ್ಲದಿದ್ದರೆ ಇಲ್ಲಿ ಹಳೆಯ ಹೂವು ಸಹ ಸಿಗುವುದಿಲ್ಲ. ಇದೇ ಪರಿಸ್ಥಿತಿ ಮಹದೇಶ್ವರ ಬೆಟ್ಟದಲ್ಲೂ ಸಹ ಇದೆ. ಆದರೆ ಅದೇ ಧರ್ಮಸ್ಥಳಕ್ಕೆ ಹೋದರೆ ಪ್ರತಿ ಹೆಜ್ಜೆಗೂ ಶಿಸ್ತು. ಎಲ್ಲರಿಗೂ ಒಂದೇ ಹಂತದವರೆಗೆ ಪ್ರವೇಶ, ಸರ್ವರಿಗೂ ಪ್ರಸಾದ ಭೋಜನ. ಸ್ವಚ್ಛತೆ ಹಾಗೂ ಶಿಸ್ತು ಮತ್ತು ಭಕ್ತಿ ಇಲ್ಲಿ ಕಾಣುತ್ತದೆ. ಧರ್ಮಸ್ಥಳದ ನೇತ್ರಾವತಿ ನದಿ, ಸುಬ್ರಹ್ಮಣ್ಯದ ಕುಮಾರಧಾರ, ಶೃಂಗೇರಿಯ ತುಂಗೆ ಏನು ದೇವಸ್ಥಾನ ಭಾಗವಲ್ಲ. ಆದರೆ ಆ ದೇವಾಲಯಗಳು ನದಿಯ ದಡದಲ್ಲಿವೆ ಅಷ್ಟೆ. ಈ ದೇವಾಲಯದ ಆಡಳಿತ ಮಂಡಳಿಗಳು ಆ ನದಿಗಳ ಸ್ವಚ್ಛತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿ ಕೊಳ್ಳಲು ಪ್ರಯತ್ನಿಸುತ್ತವೆ ಹಾಗೂ ಅಲ್ಲಿ ಸ್ನಾನಕ್ಕೆ ತೆರಳುವ ಭಕ್ತರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿವೆ. ಆದರೆ ಕಪಿಲಾ ನದಿಯ ದಡೆಯಲ್ಲಿರುವ ನಂಜುಂಡೇಶ್ವರ ದೇವಾಲಯನ್ನು ನಡೆಸುವ ಸರ್ಕಾರ ಕಪಿಲಾ ನದಿಯ ಸ್ವಚ್ಛತೆ, ಪಾವಿತ್ರ್ಯತೆ ಹಾಗೂ ಭಕ್ತರ ಸುರಕ್ಷತೆಯ ಬಗ್ಗೆ ಅದೆಷ್ಟು ಗಮನ ಕೊಟ್ಟಿದೆ?? ಇದೇ ಸ್ವಾಮಿ ಮಾನ್ಯ ಮುಖ್ಯಮಂತ್ರಿಗಳೆ ನಿಮಗೂ ಶ್ರೀ ಮಠದ ಸ್ವಾಮಿಜೀಗಳಿಗೂ ಆಡಳಿತದಲ್ಲಿರುವ ನೈಜ ವ್ಯತ್ಯಾಸ. ಇದು ಕೇವಲ ಉದಾಹರಣೆ ಅಷ್ಟೆ.

ಮಾನ್ಯ ಮುಖ್ಯಮಂತ್ರಿಗಳೆ ನಿಮ್ಮ ಸರ್ಕಾರದ ಅಧೀನದಲ್ಲೇ ಇಂದಿಗೂ ಅದೆಷ್ಟೋ ಪ್ರಸಿದ್ದ ಹಳ್ಳಿಯ ದೇವಾಲಯಗಳು, ಬೆಟ್ಟಗಳ ಮೇಲಿನ ದೇವಾಲಯಗಳು , ಸುಂದರವಾದ ಪ್ರಕೃತಿಯ ಮಧ್ಯವಿರುವ ದೇವಾಲಯಗಳಿವೆ. ಅವೆಲ್ಲವೂ ಸಹ ಪ್ರವಾಸಿ ತಾಣಗಳು ಉದಾಹರಣೆಗೆ ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ, ಯಾಣ, ಸಿಗಂದೂರು ಚೌಡೇಶ್ವರಿ, ಪಾರ್ವತಿ ಬೆಟ್ಟ, ಹುಲಗನ ಮುರಡಿ ವೆಂಕಟರಮಣ ಹೀಗೆ ಹತ್ತು ಹಲವು ಪ್ರಸಿದ್ದ ಪ್ರವಾಸಿ ತಾಣಗಳು. ಆದರೆ ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಈ ದೇವಾಲಗಳಿಗೆ ಹೋಗಲು ಇಂದಿಗೂ ಸಾಕಷ್ಟು ಪ್ರಮಾಣದ ನಿಮ್ಮ ಸರ್ಕಾರಿ ಬಸ್ಸುಗಳೇ ಇಲ್ಲ. ಸರಿಯಾದ ರಸ್ತೆಗಳೇ ಇಲ್ಲ. ನಿಮ್ಮ ಅಧೀನದಲ್ಲಿರುವ ಈಗಿನ ದೇವಾಲಗಳಿಗೆ  ಮೂಲಸೌಲಭ್ಯ ಕಲ್ಪಿಸಲು ನಿಮ್ಮಿಂದ ಆಗಿಲ್ಲ! ಇನ್ನು ಎಲ್ಲಾ ತರಹದ ಸೌಲಭ್ಯ ಹೊಂದಿರುವ ಈ ಹೊಸ ದೇವಾಲಗಳನ್ನು ನಿಮ್ಮ ಸುಪರ್ದಿಗೆ ಸೇರಿಸಿಕೊಂಡು ಏನು ಮಾಡುತ್ತಿರಿ? ಅವನ್ನು ನೂರೆಂಟು ಕಾನೂನು, ಆದೇಶ , ನೇಮಕಾತಿಗಳನ್ನು ಮಾಡಿ ಹಾಳು ಮಾಡುತ್ತೀರಿ ಅಷ್ಟೆ. ನಿಮ್ಮ ಸರ್ಕಾರದ ಮುಜರಾಯಿ ಇಲಾಖೆಗೆ ಆಗುವುದು ಇಷ್ಟೆ  ಎಂದು ಸಾರ್ವಜನಿಕರಿಗೆ ತಿಳಿದಿದೆ. ನಿಮ್ಮ ದೇವಾಲಯಗಳಿಗೆ ಆದಾಯ ಕಮ್ಮಿಯಾಯಿತೆಂದು ಆದಾಯ ವಿರುವ ಈ ದೇವಾಲಯವನ್ನು ನುಂಗಿ ನೀರು ಕುಡಿಯುವ ಪ್ರಯತ್ನವೇ ಇದು?

ಸರ್ಕಾರಿ ವಿದ್ಯಾದೇಗುಲಗಳ ದುರವಸ್ಥೆ:

ನಿಜವಾದ ಮಂದಿರಗಳೆಂದರೆ ಶಾಲೆಗಳು ದೇವಾಲಯದ ದೀಪದ ಜ್ಯೋತಿಯಿಂದ ಬಾಳು ಬೆಳಕಾಗುವುದು ಇಲ್ಲವೋ ಅದೆಲ್ಲ ನಂಬಿಕೆ. ಆದರೆ ಶಾಲೆಗಳ ಶಿಕ್ಷಣ ಜ್ಯೋತಿಯಿಂದ ಬಾಳು ಬೆಳಕಾಗುತ್ತದೆ. ಆದ್ದರಿಂದಲೆ ಮಠಗಳು ಸಾಮಾಜಿಕ ಆರ್ಥಿಕ ವ್ಯವಹಾರದಲ್ಲಿ ಶಾಲೆಗಳನ್ನು ಕಾಲೇಜುಗಳನ್ನು ನಡೆಸುತ್ತಿರುವುದು. ಮೈಸೂರಿನ ಸುತ್ತೂರು ಮಠವು 350ಕ್ಕೂ ಹೆಚ್ಚು ಜೆ.ಎಸ್.ಎಸ್ ಶಿಕ್ಷಣಸಂಸ್ಥೆಯನ್ನು ಭಾರತ ಮತ್ತು ಹೊರ ದೇಶದಲ್ಲೂ ಹೊಂದಿದೆ. ಉಡುಪಿಯ ಅದಮಾರು ಮಠ ಪೂರ್ಣಪ್ರಜ್ಞಾ ಶಿಕ್ಷಣಸಂಸ್ಥೆ ರಾಜ್ಯಾಧ್ಯಂತವಿದೆ. ಸಿದ್ದಗಂಗಾ ಮಠ, ಬಾಲಗಂಗಾಧರ ಸ್ವಾಮಿಗಳ ಮಠ, ಚಿತ್ರದುರ್ಗದ ಮಠ, ಶೃಂಗೇರಿಯ ಶಕ್ತಿ ಮತ್ತು ಜ್ಞಾನ ಪೀಠ, ರಾಮಕೃಷ್ಣ ಆಶ್ರಮ ಹೀಗೆ ಹತ್ತು ಹಲವು ಮಠಗಳು ಪ್ರಾಥಮಿಕ ಹಂತದಿಂದ ಹಿಡಿದು ವ್ಯದೈಕೀಯ ಪದವಿ ತನಕಲು ಶಿಕ್ಷಣಸಂಸ್ಥೆಯನ್ನು ಹೊಂದಿವೆ ಅದರಲ್ಲಿ ಹಲವು ಸಂಸ್ಥೆಗಳು ಉಚಿತ ಶಿಕ್ಷಣದಿಂದ ಹಿಡಿದು ಆಧುನಿಕತೆಯ ವೈಫೈ ತನಕ ಸೌಲಭ್ಯವನ್ನು ಒದಗಿಸುತ್ತವೆ. ಈ ಮಠಗಳ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ತೆಗೆದುಕೊಳ್ಳಲು ಜನ ಕಾಯುತ್ತಾರೆ, ನಿಮ್ಮ ಹಲವು ಮಂತ್ರಿಗಳು ಮತ್ತು ಶಾಸಕರು ಈ ಮಠಗಳಿಗೆ ಶಿಫಾರಸ್ಸು ಪತ್ರವನ್ನು ಕೊಟ್ಟಿರುತ್ತಾರೆ ತಮಗೆ ಬೇಕಾದವರಿಗೆ ಒಂದು ಸೀಟು ಕೊಡಿ ಎಂದು ಬೇಕಾದರೆ ವಿಚಾರಿಸಿ. ಹೇಳಿ ಮುಖ್ಯಮಂತ್ರಿಗಳೆ ನಿಮ್ಮ ಸರ್ಕಾರ ನಡೆಸುವ ಶಾಲೆಗಳಿಗೆ ಅದೆಷ್ಟು ಮಂದಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಸರತಿಯ ಸಾಲಿನಲ್ಲಿ ನಿಂತಿದ್ದಾರೆ? ಅದೆಷ್ಟು ಮಂದಿ ನಿಮ್ಮ ಶಾಸಕರು, ಸಚಿವರು, ರಾಜಕೀಯ ಮುಖಂಡರು ತಮ್ಮ ಅಧೀನದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ತಮ್ಮ ಕಡೆಯವರಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ?

ಸರ್ಕಾರಿ ಆದೇಶದ ಅನ್ವಯ ಹೆಚ್ಚುಕಮ್ಮಿ 2959 ಸರ್ಕಾರಿ ವಿದ್ಯಾಮಂದಿರಗಳನ್ನು ಮುಚ್ಚುವ ಸಿದ್ಧತೆ ನಡೆಸುತ್ತಿದೆ. ಸರ್ಕಾರಿ ಮಾಹಿತಿಯಂತೆ ಸರಿ ಸುಮಾರು 12,360 ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕೇವಲ 11 ರಿಂದ 30 ಅಷ್ಟೆ. ಕಾಲಕ್ರಮೇಣ ಅದನ್ನು ಮುಚ್ಚುತ್ತೀರಿ ಅಂದರೆ ಒಟ್ಟು 15,319 ಶಾಲೆಗಳು ತನ್ನ ಬಾಗಿಲನ್ನು ಹಾಕಿಕೊಳ್ಳಲಿದೆ. ಅಲ್ಲಿಗೆ ಹದಿನೈದು ಸಾವಿರದ ಮುನ್ನೂರ ಹತ್ತೊಂಬತ್ತು ಶಾಲೆಗಳ ಆಸ್ತಿ, ಜಾಗ ಇಂದಲ್ಲ ನಾಳೆ ಯಾವುದೋ ರಿಯಲ್ ಎಸ್ಟೇಟ್ ಉದ್ಯಮಿಯ ಕೈಸೇರುವುದರಲ್ಲಿ ಅನುಮಾನವೇ ಇಲ್ಲ. ಹೀಗೆ ಸರ್ಕಾರಿ ವಿದ್ಯಾಮಂದಿರಗಳನ್ನೆ ನೆಟ್ಟಗೆ ನಡಸುವ ತಾಕತ್ತಿಲ್ಲದೆ ಮುಚ್ಚಿ ಮಾರುವ ಸರ್ಕಾರವು, ಇನ್ನು ನಮ್ಮ ಮಠ ಮಂದಿರ ದೇವಾಲಯಗಳನ್ನು ತೆಗೆದುಕೊಂಡು ಉಳಿಸುತ್ತದೆಯೆ? ಹಲವು ವರ್ಷಗಳ ನಂತರ ಒಂದು ಜೇ.ಸಿ.ಬಿಯನ್ನು ತರಿಸಿ ಅದನ್ನು ಉರುಳಿಸಿ ಅಲ್ಲಿ ಅಪಾರ್ಟಮೆಂಟ್ ಗಳು, ಕಾರ್ಖಾನೆಗಳು ಬರುವ ಹಾಗೆ ಮಾಡುತ್ತವೆ. ಇನ್ನು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಮಾತನಾಡುವ ಹಾಗೆ ಇಲ್ಲ ಅವೆಲ್ಲವು ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆಯುವ ಹಾಗಿದೆ.

ಮಾನ್ಯ ಮುಖ್ಯಮಂತ್ರಿಗಳೆ ನಿಮ್ಮ ಸರ್ಕಾರದ ಈ ಆಘಾತಕಾರಿ ನಿರ್ಧಾರದಿಂದ ಹೊರಬನ್ನಿ. ದಯಮಾಡಿ ನಮ್ಮ ಭಕ್ತಿ ಮತ್ತು ಶಕ್ತಿ ಕೇಂದ್ರಗಳಿಗೆ ದಾಳಿ ಮಾಡಬೇಡಿ ಎಂಬುದಷ್ಟೆ ಸಮಸ್ತ ಹಿಂದುಗಳ ಬೇಡಿಕೆ.

-ಪುನೀತ್.ಜಿ.ಕೂಡ್ಲೂರು.

ಸೀನಿಯರ್ ಸಾಫ್ಟ್‍ವೇರ್ ಇಂಜಿನಿಯರ್

ಹಾಗೂ ಅಂಕಣಕಾರರು.

ಮೈಸೂರು.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!