ಅಂಕಣ ಸಂಪಾದಕೀಯ

ಮೂರು ವರ್ಷಗಳ ಪಯಣ..

ಇಲ್ಲಿಯವರೆಗೆ ಬಂದು ನಿಂತಿದ್ದೇವೆ. ಮೂರು ವರುಷಗಳ ಹಿಂದೆ ನಾವು ‘ರೀಡೂ’ವನ್ನು ಆರಂಭಿಸಿದಾಗ ಇಲ್ಲಿಯವರೆಗೆ ಬರುತ್ತೇವೆ ಎನ್ನುವ ಕಲ್ಪನೆಯೂ ಇರಲಿಲ್ಲ.  ನಿಜವನ್ನೇ ಹೇಳುವುದಾದರೆ  ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದವರಾದ ಕಾರಣ ನಮಗೊಂದು ಸ್ಪಷ್ಟ ಗುರಿ ಅಂತ ಇರಲಿಲ್ಲ. ಏನು ಎತ್ತ ಅಂತಲೇ ಗೊತ್ತಿರಲಿಲ್ಲವಂತೆ, ಸ್ಪಷ್ಟ ಗುರಿ ಇನ್ನೆಲ್ಲಿಂದ? ಏನೋ ಒಂದು ಮಾಡಬೇಕೆಂದುಕೊಂಡಿದ್ದನ್ನು ಈ ದಿನ ಮಾಡಿದ್ದೆವು ಅಷ್ಟೇ. ನಮಗೆ ಫ್ರೀ  ಟ್ರಾಫಿಕ್ ಸೃಷ್ಟಿ ಮಾಡಿಕೊಟ್ಟ ಫೇಸ್ಬುಕ್ಕಿನಲ್ಲಿ, ಒಂದಷ್ಟು ಬರಹಗಾರರೂ ಸಿಕ್ಕಿದರು. ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಲು ಒಂದು ಉತ್ತಮ ವೇದಿಕೆಗಾಗಿ ಅವರುಗಳು ಹುಡುಕಾಟದಲ್ಲಿದ್ದರು. ನಾವೂ ಸಹ ಅಂತಹಾ ಹವ್ಯಾಸಿಗಳ ಹುಡುಕಾಟದಲ್ಲಿದ್ದೆವು. “ರೋಗಿ ಬಯಸಿದ್ದೂ ಅದೇ, ವೈದ್ಯ ನೀಡಿದ್ದೂ ಅದೇ” ಎನ್ನುವಂತೆ! ಹಾಗಾಗಿ ನಮ್ಮ ನೆಟ್’ವರ್ಕ್ ಸುಲಭವಾಗಿ ಬೆಳೆಯಿತು.

ಆದರೆ ನಮ್ಮ ಹಾದಿ ಸುಲಭವಾಗಿರಲಿಲ್ಲ. ನಮ್ಮ ಪ್ರೊಫೆಶನಲ್ ಕೆಲಸದ ಜಂಜಾಟಗಳ ನಡುವೆ ಪ್ರತಿದಿನ  ಲೇಖನಗಳನ್ನು ಪ್ರಕಟಿಸಬೇಕು, ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು, ಹೊಸ ಬರಹಗಾರರನ್ನು ಹುಡುಕಬೇಕು, ಜಾಹೀರಾತುದಾರರನ್ನು ಸಂಪರ್ಕಿಸಬೇಕು, ಅದರ ಬಾಬ್ತಿನ ಹಣವನ್ನು ವಸೂಲು ಮಾಡಬೇಕು, ಎಲ್ಲವನ್ನೂ ಹೊಂದಾಣಿಸಿಕೊಂಡು ವೆಬ್ ತಾಣವನ್ನು ನಡೆಸಿಕೊಂಡು ಹೋಗಬೇಕು… ಸವಾಲುಗಳು ಒಂದಾ ಎರಡಾ…?   ಇದೆಲ್ಲ ನಮಗೆ ಗೊತ್ತಿರದೇ ಇದ್ದ ಸಂಗತಿಗಳೇನಲ್ಲ. ಆದರೆ ಮೇಲಿನ ಅಂಶಗಳ  ಕುರಿತಾಗಿ  ನಮ್ಮ ಪ್ರಯತ್ನಗಳು ಒಂದು ದಿನವೂ ನಿಂತಿರಲಿಲ್ಲ.

ನಾನು ಯಾಕೆ ಇಷ್ಟೆಲ್ಲಾ ಸಂಗತಿಗಳನ್ನು ಹೇಳುತ್ತಿದ್ದೇನೆಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಹೌದು..! ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನಮ್ಮ ಕಡೆಯಿಂದ ನಿರೀಕ್ಷಿತ ಕೆಲಸ ಆಗಲಿಲ್ಲ. ಬಹಳಷ್ಟು ಮಂದಿ ನಮ್ಮನ್ನು “ಏನು ಈಗ ರೀಡೂ ಡಲ್ ಆಗಿದೆ?” ಅಂತ ಕೇಳಿದವರಿಗೆ ಇಲ್ಲಿದೆ ನೋಡಿ ಉತ್ತರ.  ವೃತ್ತಿಯಿಂದ ನಾವೆಲ್ಲರೂ(ಸಂಪಾದಕೀಯ ಮಂಡಳಿಯಲ್ಲಿರುವವರು) ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವುದು, ಅದರಿಂದಾಗಿ ಈ ಕಡೆ ಜಾಸ್ತಿ ಗಮನ ಕೊಡಲಾಗಲಿಲ್ಲ ಎನ್ನುವುದು ಇದಕ್ಕೆ ಒಂದನೇ ಕಾರಣ.  

ಮತ್ತೊಂದು  ಕಡೆ ವ್ಯೂ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವುದಕ್ಕಾಗಿ, ಆ ಮೂಲಕ ಹಣ ಮಾಡಿಕೊಳ್ಳುವುದಕ್ಕಾಗಿ ಸುಳ್ಳು ಸುದ್ದಿಗಳನ್ನು, ರಂಜನೀಯ ಕಂಟೆಂಟ್’ಗಳನ್ನೇ ಅತಿರಂಜಿತವಾಗಿ ಪ್ರಕಟಿಸುವ ಸುದ್ದಿ ತಾಣಗಳು  ನಾಯಿಕೊಡೆಗಳಂತೆ ಹುಟ್ಟಿಕೊಳ್ಳತೊಡಗಿದವು. ತಮ್ಮ ಸುದ್ದಿತಾಣಗಳ ಮೇಲೆ ಇನ್ಯಾರೋ ಉದ್ಯಮಿ ಹಣ ಹೂಡಿದ್ದರಿಂದಾಗಿ  ಬರಹಗಾರರಿಗೆ ಉತ್ತಮ ಸಂಭಾವನೆಯನ್ನೂ ನೀಡತೊಡಗಿದವು(ಇದು ಅಗತ್ಯವಾದದ್ದೇ ಎನ್ನೋಣ). ರೀಡೂ ಕನ್ನಡ ಹವ್ಯಾಸಿಗಳಿಗೆ ಒಂದು ವೇದಿಕೆಯೇ ಹೊರತು ಸಂಪಾದನೆಯ ದಾರಿ ಖಂಡಿತಾ ಅಲ್ಲ.  ಸಂಪಾದನೆಯ ಮುಖ ನೋಡಿದ ಕೆಲ ಹವ್ಯಾಸಿಗಳು ಉತ್ತಮ ಸಂಭಾವನೆ ನೀಡುವ ಸುದ್ದಿತಾಣಗಳ ಜೊತೆ ಕೈ ಜೋಡಿಸಿದರ ನೇರ ಪ್ರಭಾವ ನಮ್ಮ ಮೇಲಾಯಿತು. ಇದು ಎರಡನೆಯ ಕಾರಣ.

ಆದರೆ ಇಷ್ಟು ಮಾತ್ರಕ್ಕೆ ನಾವು ಆಸಕ್ತಿ ಕಳೆದುಕೊಂಡಿದ್ದೇವೆ ಎಂದರ್ಥವಲ್ಲ..  ಮೊದಲನೆಯದಾಗಿ ನಾವು ರೀಡೂ ಕನ್ನಡವನ್ನು ಆರಂಭಿಸಿದ್ದು ಯಾರಿಗೋ ಕಾಂಪಿಟೀಷನ್ ಕೊಡುವುದಕ್ಕಾಗಿ ಅಲ್ಲ.  ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದೂ ಇಲ್ಲ. ಎರಡನೆಯದ್ದು ಅದೇನೇ ಬಂದರೂ ನಮ್ಮ ಪ್ರಯತ್ನ ನಿಲ್ಲುವುದಿಲ್ಲ. ಹೇಗೆ ನಾವು ಹೆಚ್ಚೆಚ್ಚು ಜನರನ್ನು ತಲುಪಬಹುದು, ವೆಬ್ಸೈಟನ್ನು ಹೇಗೆ ರೀಡರ್ ಫ್ರೆಂಡ್ಲಿ ಮಾಡಬಹುದು ಮುಂತಾದ ವಿಚಾರಗಳ ಕುರಿತು ನಮ್ಮ ಸಂಶೋಧನೆಗಳು, ಮಾತುಕತೆಗಳು ನಿರಂತರವಾಗಿ ಸಾಗುತ್ತಿದೆ.  ಹಾಗಂತ ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಸುಳ್ಳು ಸುದ್ದಿಗಳನ್ನು, ಅತಿರಂಜಿತ ಲೇಖನಗಳನ್ನು ಖಂಡಿತಾ ಹಾಕುವುದಿಲ್ಲ.  ಲೇಖನಗಳಿಲ್ಲದೇ ಖಾಲಿ ಹೊಡೆದರೂ  ಪರವಾಗಿಲ್ಲ, ಸುಳ್ಳು ಸುದ್ದಿಗಳನ್ನು ಪ್ರಕಟಿಸಬಾರದು ಎನ್ನುವ ಪಾಲಿಸಿ ನಮ್ಮದು.

ನಮ್ಮ ಈ ಪಾಲಿಸಿ ನಿಮಗಿಷ್ಟವಾಗುತ್ತದೆ ಅಂತ ಭಾವಿಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಸಹಕಾರಕ್ಕಾಗಿ ವಂದನೆಗಳು..

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!