ಅಂಕಣ

ಕ್ಷಮಿಸುವುದಕ್ಕೂ ಧೈರ್ಯ ಬೇಕು!

ನೀವು ನಿಕ್ ವುಜಿಸಿಕ್ ಬಗ್ಗೆ ಕೇಳಿರಬಹುದು. ಆತನ ಸಾಕಷ್ಟು ವೀಡಿಯೋಗಳನ್ನು ನೋಡಿರಬಹುದು. ಆತನ ಬದುಕು ಎಂತವರನ್ನೂ ಪ್ರೇರೇಪಿಸುವಂತದ್ದು. ಸಣ್ಣ ಸಣ್ಣ ಕೊರತೆಗಳಿಗೆ ಕೊರಗುತ್ತಾ ದೂಷಿಸುತ್ತ ಇರುವವರು ಒಮ್ಮೆ ನಿಕ್’ನನ್ನು ನೋಡಲೇಬೇಕು. ಕೈ ಕಾಲುಗಳೆರಡೂ ಇಲ್ಲದೇ ಇದ್ದರೂ ಅದನ್ನು ಮೀರಿ ಬೆಳೆದು ಇಂದು ಇತರರಿಗೆ ಸ್ಫೂರ್ತಿ ತುಂಬುತ್ತಿದ್ದಾನೆ. ಆತನ ‘ಸ್ಟ್ಯಾಂಡ್ ಸ್ಟ್ರಾಂಗ್’ ಎಂಬ ವೀಡಿಯೋದಲ್ಲಿ ಆತ ಪ್ರಯತ್ನ ಪಡುವುದರ ಬಗ್ಗೆ, ಏನೇ ಆದರೂ ಕೈ ಚೆಲ್ಲಿ ಕೂರದಿರುವ ಬಗ್ಗೆ, ಪ್ರೀತಿಸುವುದರ ಬಗ್ಗೆ, ಟೀಕಿಸದೇ ಇರುವ ಬಗ್ಗೆ  ಹೇಳುವಾಗ ಇನ್ನೊಂದು ವಿಷಯದ ಬಗ್ಗೆಯೂ ಹೇಳುತ್ತಾನೆ. ಕ್ಷಮಿಸುವುದರ ಬಗ್ಗೆ! ಕ್ಷಮೆಯ ಕುರಿತು ಅಷ್ಟೊಂದು ಒತ್ತಿ ಹೇಳದಿದ್ದರೂ ಅದೇನೋ ಸ್ವಲ್ಪ ಜಾಸ್ತಿಯೇ ಮನಸ್ಸಿಗೆ ನಾಟುತ್ತದೆ.

ನಿಕ್ ಶಾಲೆಗೆ ಹೋಗುವಾಗ ಅಲ್ಲಿಯ ಕೆಲ ಹುಡುಗರು ಪ್ರತಿದಿನ ಆತನನ್ನು ರೇಗಿಸುತ್ತಿದ್ದರಂತೆ, ಆತನನ್ನು ಟೀಕಿಸುತ್ತಿದ್ದರಂತೆ. ಆತ ತನಗೆಷ್ಟು ನೋವಾದರೂ ಹೊರಗೆ ತೋರಿಕೊಳ್ಳದೆ ಇರುತ್ತಿದ್ದನಂತೆ. ಆದರೆ ಇದು ಪ್ರತಿದಿನ ನಡೆಯುತ್ತಲೇ ಇತ್ತು. ಯಾರೂ ಆತನ ಸಹಾಯಕ್ಕೆ ಬರುತ್ತಿರಲಿಲ್ಲ. ಕೆಲವರು ನಿಂತು ಸುಮ್ಮನೆ ಇದನ್ನೆಲ್ಲ ನೋಡಿದರೆ, ಇನ್ನು ಕೆಲವರು ನಗುತ್ತಿದ್ದರಂತೆ. ಇದರಿಂದ ರೋಸಿ ಹೋದ ನಿಕ್ ಸುಮಾರು ಮೂರು ವಾರಗಳ ನಂತರ ತಾನೇ ಖುದ್ದಾಗಿ ಆ ಹುಡುಗರಲ್ಲೊಬ್ಬನ ಬಳಿ ಹೋಗಿ, ಈ ರೀತಿ ಟೀಕಿಸಬೇಡ ಎಂದಿದ್ದ. ಅದಕ್ಕೆ ಆತ,

“ಯಾಕೆ ನಿನಗೆ ನೋವಾಗುತ್ತದೆಯ?” ಎಂದು ಕೇಳಿದ.

“ಇಟ್ಸ್ ಕಿಲ್ಲಿಂಗ್ ಮಿ”

“ನಾವು ಏನೋ ತಮಾಷೆಗಾಗಿ ಮಾಡಿದ್ದಷ್ಟೇ” ಎಂದು ಆತ ಹೇಳಿದಾಗ

“ನಾನು ಅದನ್ನು ಕ್ಷಮಿಸುತ್ತೇನೆ.. ಗೀವ್ ಮಿ ಎ ಹಗ್” ಎಂದಿದ್ದ ನಿಕ್.

ಪ್ರತಿದಿನ ಶಾಲೆಯಲ್ಲಿ ಎಲ್ಲ ಮಕ್ಕಳ ಎದುರಿಗೆ ಅತನನ್ನು ಟೀಕಿಸಲಾಗುತ್ತಿತ್ತು. ಪ್ರತಿದಿನ ನಿಕ್ ‘ನನಗೆ ಯಾಕೆ ಹೀಗೆ ಮಾಡಿದೆ’ ‘ನಾನು ಯಾಕೆ ಹೀಗಿದ್ದೇನೆ’ ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದ. ಆತ್ಮಹತ್ಯೆಯಂತಹ ವಿಚಾರಗಳು ಬರುತ್ತಿದ್ದವು, ಅಷ್ಟು ನೋವಾಗಿತ್ತು ಆತನಿಗೆ. ಆದರೂ ಆತ ಅವರನ್ನ ಕ್ಷಮಿಸುತ್ತಾನೆ!

ಅಬ್ದುಲ್ಲಾ ಹುಸೇನ್’ಜಾದಾ ಎಂಬ ೧೮ ವರ್ಷದ ಹುಡುಗನನ್ನು ಚೂರಿ ಇರಿದು ಕೊಲೆ ಮಾಡಲಾಗುತ್ತದೆ. ಕೊಲೆಗಾರನಿಗೆ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ. ಇರಾನ್’ನಲ್ಲಿ ಇಂತಹ ಸಂದರ್ಭಗಳಲ್ಲಿ ಕೊಲೆಗೀಡಾದ ವ್ಯಕ್ತಿಯ ಕುಟುಂಬದವರಿಗೆ ಶಿಕ್ಷೆ ನೀಡುವುದನ್ನು ನೋಡಲು ಅವಕಾಶ ನೀಡಲಾಗುತ್ತದೆ. ಆ ದಿನ ಆ ಕೊಲೆಗಾರನನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಅಬ್ದುಲ್ಲಾನ ತಾಯಿ ಸಮೆರಾ ಆದನ್ನು ನಿಲ್ಲಿಸುತ್ತಾಳೆ. ಆತನ ಕುತ್ತಿಗೆಯಿಂದ ಹಗ್ಗವನ್ನು ತೆಗೆದು ತಾನು ಆತನನ್ನ ಕ್ಷಮಿಸಿದ್ದೇನೆ ಎಂದು ಹೇಳುತ್ತಾಳೆ.

ಚಾರ್ಲ್ಸ್’ಸ್ಟನ್’ನ ಚರ್ಚ್’ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಹುಡುಗಿಯೊಬ್ಬಳು ಕೋರ್ಟ್’ನಲ್ಲಿ ಆ ಆರೋಪಿ ಎದುರು ನಿಂತು, “ನೀನು ನನ್ನಿಂದ ಬಹಳ ಅಮೂಲ್ಯವಾದುದನ್ನ ಕಸಿದುಕೊಂಡಿದ್ದೀಯ.. ಆದರೂ ನಾನು ನಿನ್ನನ್ನ ಕ್ಷಮಿಸುತ್ತೇನೆ” ಎನ್ನುತ್ತಾಳೆ.

ಇಂತಹ ಅನೇಕ ಘಟನೆಗಳಿವೆ. ಸಾಕಷ್ಟು ಜನರಿದ್ದಾರೆ, ತಮಗೆ ನೋವು ನೀಡಿದವರನ್ನು ಕ್ಷಮಿಸಿದವರಿದ್ದಾರೆ. ಅದಕ್ಕೆ ಇನ್ನೊಂದು ಉದಾಹರಣೆ ಲೂಯಿಸ್ ಜ್ಯಾಂಪೆರ್ನಿ.

ಲೂಯಿಸ್ ಜ್ಯಾಂಪೆರ್ನಿ ಅಮೇರಿಕಾದ ಏರ್’ಫೋರ್ಸ್’ನಲ್ಲಿ ಲೆಫ್ಟಿನೆಂಟ್ ಆದವನು. ೨ನೇ ವಿಶ್ವಯುದ್ಧ ಆಗುತ್ತಿದ್ದ ಸಮಯ ಅದು. ಜಪಾನೀಯರು ಆಕ್ರಮಿಸಿಕೊಂಡಿದ್ದ ಒಂದು ದ್ವೀಪದ ಬಳಿ ಇವರ ಯುದ್ಧವಿಮಾನ ಕ್ರ್ಯಾಶ್ ಆಗಿದ್ದನ್ನ ಹುಡುಕಲು ಲೂಯಿಸ್ ಮತ್ತು ತಂಡ ಹೊರಡುತ್ತದೆ. ದುರದೃಷ್ಟವೆಂಬಂತೆ ಇವರ ಹೋಗುತ್ತಿದ್ದ ವಿಮಾನವೂ ಕೂಡ ತಾಂತ್ರಿಕ ದೋಷಗಳಿಂದಾಗಿ ಅಪಘಾತಕ್ಕೀಡಾಗಿ, ಸಮುದ್ರದಲ್ಲಿ ಬೀಳುತ್ತದೆ. ಅದರಿಂದ ಹೇಗೂ ಬಚಾವಾಗಿ ದ್ವೀಪದ ದಡ ಸೇರುವ ಲೂಯಿಸ್’ನನ್ನು ಸೆರೆ ಹಿಡಿಯಲಾಗಿ ಅತನನ್ನು ಯುದ್ಧಖೈದಿಯನ್ನಾಗಿ ಮಾಡುತ್ತಾರೆ. ಅಲ್ಲಿಯ ಗಾರ್ಡ್ ಮುತ್ಸುಹಿರೋ ವತನಬೇ  ಎಂಬಾತ ಪ್ರತಿದಿನ ಲೂಯಿಸ್ ಹಾಗೂ ಆತನ ಸಂಗಡಿಗನಿಗೆ ಅತ್ಯಂತ ಕ್ರೂರವಾಗಿ  ಹಿಂಸೆ ನೀಡುತ್ತಿದ್ದನು. ಇದು ವಿಶ್ವಯುದ್ಧ ಮುಗಿಯವವರೆಗೂ ಹೀಗೆ ಮುಂದುವರೆದಿತ್ತು ಕೂಡ. ೨ನೇ ವಿಶ್ವಯುದ್ಧ ಮುಗಿದ ನಂತರ ಅಮೇರಿಕಾಗೆ ಹಿಂದಿರಿಗಿದರೂ ಕೂಡ ಅಲ್ಲಿ ತನ್ನ ಮೇಲಾದ ಕ್ರೌರ್ಯಗಳು ದುಸ್ವಪ್ನದಂತೆ ಆತನನ್ನು ಕಾಡುತ್ತಿತ್ತು. ಇದಾಗಿ ಸುಮಾರು ೫೩ ವರ್ಷಗಳ ನಂತರ, ತನ್ನ ೮೧ನೇ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಇರುವಾಗ ಜಪಾನ್’ನಲ್ಲಿ ಒಲಂಪಿಕ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದಾಗ. ಮುತ್ಸುಹಿರೋನನ್ನು ಭೇಟಿಯಾಗ ಬಯಸುತ್ತಾನೆ ಲೂಯಿಸ್. ಆದರೆ ಆತ ಲೂಯಿಸ್’ನನ್ನು ಭೇಟಿಯಾಗಲು ನಿರಾಕರಿಸಿಬಿಡುತ್ತಾನೆ. ಆದರೂ ಕೂಡ ಲೂಯಿಸ್ ಆತನಿಗೊಂದು ಪತ್ರ ಕಳುಹಿಸುತ್ತಾನೆ. “ನನಗೆ ಅಷ್ಟೆಲ್ಲಾ ಹಿಂಸೆಯಾಗಿದ್ದರೂ ಕೂಡ, ನಿನ್ನನ್ನು ನಾನು ಕ್ಷಮಿಸಿದ್ದೇನೆ” ಎಂದು.

ನಿಕ್ ತನ್ನ ಅನುಭವವನ್ನು ಹೇಳಿಕೊಳ್ಳುತ್ತಾ ಒಂದು ಮಾತನ್ನು ಹೇಳುತ್ತಾನೆ. “ಟೀಕಿಸಲು ಧೈರ್ಯ ಬೇಕಾಗಿಲ್ಲ. ಆದರೆ ಹಾಗೆ ಟೀಕಿಸಿದವರನ್ನು, ನಮಗೆ ನೋವುಂಟು ಮಾಡಿದವರನ್ನು ಕ್ಷಮಿಸಲು ಧೈರ್ಯ ಬೇಕು” ಎಂದು. ಅಕ್ಷರಶಃ ನಿಜ. ಲೂಯಿಸ್ ಕಳುಹಿಸಿದ ಪತ್ರವನ್ನು ಆತ ಓದಿದನೋ ಇಲ್ಲವೋ, ಆತನಿಗೆ ಪಶ್ಚಾತ್ತಾಪವಾಗಿತ್ತೋ ಇಲ್ಲವೋ, ಆದರೆ ತನಗೆ ವರ್ಷಗಳ ಕಾಲ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ ವ್ಯಕ್ತಿಯನ್ನು ಕ್ಷಮಿಸುವುದಕ್ಕೆ ಧೈರ್ಯ ಖಂಡಿತ ಬೇಕು.

ಕೆಲವು ಸಂದರ್ಭಗಳಲ್ಲಿ ಧೈರ್ಯಕ್ಕಿಂತ ಹೆಚ್ಚು ಕೆಲಸ ಮಾಡುವುದು ಪ್ರೀತಿ! ನಾವು ಪ್ರೀತಿಸುವವರು ನಮಗೆ ನೋವುಂಟು ಮಾಡಿದಾಗ ಅಲ್ಲಿ ದೊಡ್ಡ ಪಾತ್ರ ವಹಿಸುವುದು ಪ್ರೀತಿಯೇ ಆಗಿರುತ್ತದೆ.  ನಮ್ಮ ನೋವು, ಕೋಪ ಎಲ್ಲಕ್ಕಿಂತ ಪ್ರೀತಿ ದೊಡ್ಡದಾಗಿ ಕಾಣುತ್ತದೆ. ಕ್ಷಮಿಸಿಬಿಡುತ್ತೇವೆ. ಆದರೆ ಆ ನೋವಿಗೆ ಕಾರಣ ಯಾವುದೋ ಮೂರನೇ ವ್ಯಕ್ತಿಯಾದಾಗ ಮಾತ್ರ ಧೈರ್ಯವೇ ಬೇಕು. ಆದರೆ ಹಾಗೇ ಕ್ಷಮಿಸಿದ ನಂತರ ನಾವದನ್ನ ಮರೆತುಬಿಡುತ್ತೇವಾ? ಆ ದುಃಖ ಕಡಿಮೆಯಾಗಿಬಿಡುತ್ತದೆಯೇ? ಕೆಲವರು ಹೇಳುವುದನ್ನ ಕೇಳಿರಬಹುದು, ‘ಕ್ಷಮೆ’ ಆ ದುಃಖವನ್ನು ಮರೆಯಲು ಸಹಾಯ ಮಾಡುತ್ತದೆ ಎಂದು. ಆದರೆ ನಮಗೆ ಅತೀವ ಸಂತೋಷವನ್ನು ಕೊಟ್ಟ ಹಾಗೂ ಅತೀವ ನೋವನ್ನು ಕೊಟ್ಟ ಘಟನೆಗಳನ್ನು ನಾವೆಂದಿಗೂ ಮರೆಯುವುದಿಲ್ಲ. ಸಮೆರಾ ಎಂದಿಗೂ ತನ್ನ ಮಗನನ್ನು ಕಳೆದುಕೊಂಡಿದ್ದನ್ನ ಮರೆಯುವುದಕ್ಕೆ ಆಗುವುದಿಲ್ಲ. ಚರ್ಚ್ ದಾಳಿಯಲ್ಲಿ ಕಳೆದುಕೊಂಡ ತಾಯಿಯನ್ನು ಆ ಮಗಳು ನೆನೆಯದೇ ಇರಲಾರಳು. ಹಾಗಿದ್ದರೂ ಕ್ಷಮಿಸಬೇಕಾ? ನೋವು ನೀಡಿದ ವ್ಯಕಿಯ ಮುಖದಲ್ಲಿ ಒಂದಿನಿತೂ ಪಶ್ಚಾತ್ತಾಪ ಇಲ್ಲದೇ ಇದ್ದರೂ ಕ್ಷಮಿಸಬೇಕಾ? ನಮಗಾದ ನೋವನ್ನು ಮರೆಯಲಾಗದೇ ಇದ್ದರೂ,  ‘ಕ್ಷಮೆ’ ನಮ್ಮಲ್ಲಿ ಹುಟ್ಟಿಕೊಳ್ಳುವ ಕೋಪ, ದ್ವೇಷವನ್ನು ಒಂದು ಹಂತಕ್ಕೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ.

ಸದ್ಗುರು ಹೀಗೆ ಒಂದು ಸಂದರ್ಭದಲ್ಲಿ ಹೇಳುತ್ತಾರೆ, “ಕ್ಷಮೆ ಇರುವುದು ನೋವನ್ನು ಮರೆಯುವುದಕ್ಕಾಗಿ ಅಲ್ಲ, ಆ ನೋವಿದ್ದರೂ ಕೂಡ, ಅದನ್ನುಂಟು ಮಾಡಿದ ವ್ಯಕ್ತಿಯ ಬಗ್ಗೆ ಯಾವುದೇ ಕಹಿಭಾವ ಇಲ್ಲದಿರುವುದು” ಎಂದು. ಹಾಗೆ ಕ್ಷಮಿಸುವುದು ಸುಲಭವಲ್ಲ. ನಿಜವಾಗಿಯೂ ಅದಕ್ಕೆ ಸಾಕಷ್ಟು ಧೈರ್ಯ ಬೇಕು! ಆದರೂ ಧೈರ್ಯ ಮಾಡಿ ಕ್ಷಮಿಸಬಲ್ಲೆವು ಎಂದರೆ ಅದು ನಮ್ಮ ದೊಡ್ಡ ಶಕ್ತಿಯೇ ಆಗಿರುತ್ತದೆ!  

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!