Featured ಅಂಕಣ

ಅಡಿಕೆಗೆ ಬೆಂಬಲವಾಗಿ ನಿಂತಿದ್ದ ನೀವೇ ಈಗ ಅಡಿಕೆ ನಿಷೇಧಕ್ಕೆ ಹೊರಟರೆ ಹೇಗೆ ಮೋದಿಜಿ?

ಈಗ ಒಂದು ಸುದ್ದಿ ಓಡಾಡುತ್ತಿದೆ. ಅದೇ ಅಡಿಕೆ ನಿಷೇಧದ ಸುದ್ದಿ. ಇದಕ್ಕೆ ಇಂಬು ಕೊಡುವಂತಹ ಒಂದು ವಿದ್ಯಮಾನ ಡಿಸೆಂಬರ್ 22, 2017 ರಂದು ನಡೆದಿದೆ(ಅಂದು ನಡೆದ ಈ ಘಟನೆ ಈಗ ಹೇಗೆ ಮುನ್ನೆಲೆಗೆ ಬಂತು? ಇದೂ ಕೂಡ ವಿಚಿತ್ರವೇ ಹೌದು). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಶ್ರೀಮತಿ ಅನುಪ್ರಿಯ ಪಟೇಲ್ ಡಿಸೆಂಬರ್ 22 ರಂದು ನಡೆದ ಲೋಕಸಭೆಯ ಪ್ರಶ್ನೋತ್ತರ ಸಮಯದ ವೇಳೆ ಬಿಹಾರ ಸಂಸದರಾದ ಶ್ರೀ ಓಂ ಪ್ರಕಾಶ್ ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ್ದರು. ಯಾದವ್ ಅವರು ‘ಸುಪಾರಿಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆಯೇ(ಅದು ಕ್ಯಾನ್ಸರ್ ಮತ್ತು ಇನ್ನಿತರೇ ವಿಧದಲ್ಲಿ) ಮತ್ತು ಬೀರುತ್ತದೆ ಎಂದಾದರೆ ಸರಕಾರ ಈ ಸುಪಾರಿ ಬಳಸುವುದನ್ನು ನಿಷೇಧಿಸುವ ಮಟ್ಟದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಂಡಿದೆ?’ ಎಂಬ ಪ್ರಶ್ನೆಯನ್ನು ಆಹಾರ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ರಾಜ್ಯ ಮಂತ್ರಿಗಳಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಶ್ರೀಮತಿ ಸುಪ್ರಿಯಾ ಪಟೇಲ್ ಅವರು ‘ ಹೌದು, ಸುಪಾರಿಯನ್ನು ಉಪಯೋಗಿಸುವುದರಿಂದ ಕ್ಯಾನ್ಸರ್’ನಂತಹ ಮಾರಕ ರೋಗಗಳು ಬರುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಭೀತಾಗಿದೆ ಮತ್ತು ಇದಕ್ಕೆ ಸಂಬಂಧ ಪಟ್ಟಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್(ಪ್ರೊಹಿಬಿಷನ್ ಅಂಡ್ ರಿಸ್ಟ್ರೀಕ್ಷನ್ ಓನ್ ಸೇಲ್ಸ್), ರೆಗ್ಯುಲೇಷನ್, 2011 ಈ ಕಾನೂನನ್ನು ಅಳವಡಿಸಲು ಸೂಚಿಸಲಾಗಿದೆ ಮತ್ತು ಬಹುಪಾಲು ಇದನ್ನು ರಾಜ್ಯಗಳು ಅಳವಡಿಸಿವೆ’ ಎಂಬ ಮಾತನ್ನು ಸದನಕ್ಕೆ ತಿಳಿಸಿದರು. ಕೆಲವೊಂದು ವಿಷಯ(ಅದರಲ್ಲೂ ಪ್ರಮುಖವಾಗಿ ಆರೋಗ್ಯಕ್ಕೆ ಸಂಬಧಪಟ್ಟ ವಿಷಯ ) ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದರಿಂದ ರಾಜ್ಯ ಸರಕಾರವೇ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದನ್ನು ಕೂಡ ಅವರು ಸ್ಪಷ್ಟಪಡಿಸಿ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳ ಪರ ಯಾವಾಗಲೂ ಇದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದರು. ಇವಿಷ್ಟು ಅಂದು ನಡೆದ ಘಟನೆಗಳು. ಇಲ್ಲಿ ಸುಪಾರಿ ಮತ್ತು ಅಡಿಕೆ ಈ ಎರಡು ಶಬ್ದಗಳನ್ನು ಜನ ಅರ್ಥೈಸಿಕೊಳ್ಳುವಲ್ಲಿ ಗೊಂದಲ ಉಂಟುಮಾಡಿಕೊಂಡಿದ್ದಾರೆ ಎಂದು ಹೇಳಬಹುದಾದರೂ ಈ ಪ್ರಶ್ನೆ ಮತ್ತು ಉತ್ತರಗಳು ಅಡಿಕೆ ಮಾರುಕಟ್ಟೆಯ ಮತ್ತು ಅಡಿಕೆ ಬೆಳೆಯ ಮೇಲೆ ಗಾಢ ಪರಿಣಾಮವನ್ನಂತೂ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಘಟನೆಯನ್ನು ‘ಅಳಿಯ ಅಲ್ಲ ಮಗಳ ಗಂಡ’ ಎಂಬ ಗಾದೆಯನ್ನು ವಿಸ್ತರಿಸಿ ಬರೆಯಲು ಜನ ಬಳಸಿಕೊಳ್ಳಬಹುದೇನೋ. ಅಲ್ಲವಾ? ಹಾಗಾಗಿ ಅಡಿಕೆ ಬೆಳೆಗಾರರು ‘ಇದು ನಮ್ಮ ವಿರುದ್ಧದ ನಿರ್ಧಾರ’ ಎಂದು ಬಹುಬೇಗನೆ ಅರ್ಥೈಸಿಕೊಳ್ಳಬಹುದು ಅದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರ ಅಡಿಕೆ ಜಗಿಯುವುದರಿಂದಲೇ ಕ್ಯಾನ್ಸರ್ ಬರುತ್ತದೆ ಎಂದು ನಂಬಿದೆ ಎಂದಾದರೆ ಅಥವಾ ಯಾವುದೋ ‘ಮೋಸದ ಸಂಶೋಧನೆ’ಯನ್ನೇ ಇದಕ್ಕೆ ದಾಖಲೆ ಎಂದು ತೋರಿಸಲು ಹೊರಟಿದ್ದರೆ ಅದರಷ್ಟು ಮೂರ್ಖತನ ಇನ್ನೊಂದಿಲ್ಲ.

ಶ್ರೀಮತಿ ಪಟೇಲ್ ಅವರಿಗೆ ಕೇಳಿದ ಪ್ರಶ್ನೆ ಆರೋಗ್ಯಕ್ಕೆ ಸಂಬಂಧ ಪಟ್ಟಿದ್ದು ಮತ್ತು ಅವರು ಉತ್ತರಿಸಿದ್ದು ಕೂಡ ಅದೇ ವಿಷಯದ ಅಡಿಯಲ್ಲಿ ಎಂಬುದನ್ನೂ ನಾವೆಲ್ಲ ಗಮನಿಸಬೇಕು. ಇನ್ನು ಈ ಅಡಿಕೆ ನಿಷೇಧದ ಬಗ್ಗೆ ಮಾತನಾಡಬೇಕಾದದ್ದು ಕೃಷಿ ಸಚಿವರು ಅಲ್ಲವಾ? ಅಷ್ಟನ್ನೂ ಯೋಚಿಸುವ ವ್ಯವಧಾನ ನಮಗೆ ಬೇಡವಾ? ಒಂದು ಹಳೆಯ ಘಟನೆಯನ್ನು ನಾವೆಲ್ಲ ಗಮನಿಸೋಣ. ಅದು 22 ಜುಲೈ 2014ರಂದು ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ನಡೆದ ಘಟನೆ. ಅಂದು ಕೇರಳದ ಸಂಸದ ಆಂಟೋ ಆಂಟೋನೀ ಅವರು ಅಡಿಕೆ ಬೆಳೆಯನ್ನು ನಿಷೇಧಿಸುವ ಬಗ್ಗೆಯೇ ನೇರವಾದ ಪ್ರಶ್ನೆಯನ್ನು ಆಗಿನ ಕೃಷಿ ಮತ್ತು ಆಹಾರ ಸಂಸ್ಕರಣ ಉದ್ಯಮದ  ರಾಜ್ಯ ಸಚಿವರಾಗಿದ್ದ ಶ್ರೀ ಡಾ. ಸಂಜೀವ್ ಕುಮಾರ್ ಬಲ್ಯಾನ್ ಅವರನ್ನು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಡಾ ಬಲ್ಯಾನ್ ಅವರು ಅಡಿಕೆಯನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಹಾಗಾದರೆ ಈಗ ನಾವು ಮತ್ತೆ ಕೃಷಿ ಸಚಿವರಿಂದಲೇ ಉತ್ತರವನ್ನು ನಿರೀಕ್ಷಿಸೋಣ ಅಲ್ಲವಾ?  

ಆದರೆ ಇಲ್ಲಿ ಕೆಲವೊಂದು ಪ್ರಶ್ನೆಗಳಂತೂ ಸ್ವಾಭಾವಿಕವಾಗಿ ಎದ್ದಿವೆ. ‘ಬ್ಯಾನ್ ಆನ್ ಸುಪಾರಿ’ ಎನ್ನುವ ಕೇಂದ್ರ ಸರಕಾರ, ಬ್ರಾಕೆಟ್’ನಲ್ಲಿ ‘ಅರೆಕಾನಟ್’ ಅನ್ನುವುದನ್ನೂ ಸೇರಿಸಿದೆ ಅಂದರೆ ಇದು ಅಡಿಕೆ ನಿಷೇಧಿಸುವದರ ಮುನ್ಸೂಚನೆಯೇ? ಹಾಗಾದರೆ ಏನ್ಮಾಡುತ್ತಿದ್ದಾರೆ ನಮ್ಮ ರಾಜ್ಯದ ಕೇಂದ್ರ ಸಚಿವರುಗಳು ಮತ್ತು ನಮ್ಮ ಸಂಸದರುಗಳು? ಇಡೀ ದೇಶದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ನಮ್ಮ ಕರ್ನಾಟಕ ಅದರಲ್ಲೂ ಪ್ರಮುಖವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರಿನಲ್ಲಿ ಅಡಿಕೆ ಬೆಳೆಗಾರರ ಪ್ರಮಾಣ ಜಾಸ್ತಿ ಇದೆ. ಕರ್ನಾಟಕದ ಸುಮಾರು 2.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ(2013-14 ರ ಸರ್ವೇ ಪ್ರಕಾರ) ಅಂದರೆ ಭಾರತದ ಒಟ್ಟೂ ಅಡಿಕೆ ಪ್ರದೇಶದ ಶೇ.49 ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ನಾಲ್ಕು ಸಂಸದರುಗಳು ಅಡಿಕೆ ಬೆಳೆಗಾರರನ್ನು ಪ್ರತಿನಿಧಿಸುತ್ತಿದ್ದಾರೆ, ಆದರೆ ಯಾರಿಗೂ ಈ ನಿಲುವನ್ನು ಪ್ರಶ್ನಿಸುವ ಧಮ್ ಇಲ್ಲವೇ? ತಂಬಾಕು  ಬೆಳೆ ಅತಿ ಹೆಚ್ಚು ಉಪಯೋಗವಾಗುವುದು ಸಿಗರೇಟ್ ಉದ್ಯಮಗಳಲ್ಲಿ ಎನ್ನುವುದನ್ನು ಎಲ್ಲರೂ ಬಲ್ಲರು. ಆದರೆ ಸಿಗರೇಟ್ ನಿಷೇಧಿಸದೆ ಔಷಧೀಯ ಗುಣ ಹೊಂದಿರುವ ಮತ್ತು ಕೇವಲ ಪಾನ್ ಸುಪಾರಿಗೆ ಮಾತ್ರವಲ್ಲದೆ ಇನ್ನೂ ಅನೇಕ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸುವ ಅಡಿಕೆಯನ್ನು ಬ್ಯಾನ್ ಮಾಡಲು ಹೊರಟರೆ ಇದೊಂತರಾ ಉತ್ತರಕುಮಾರನ ಪೌರುಷ ಅನ್ನಲೇಬೇಕಲ್ಲವೇ?

ಕೆಲವು ದಿನಗಳ ಹಿಂದೆ ಯಾವುದೋ ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ‘ಆಣ್ವಿಕ ಸಂತಾನೋತ್ಪತ್ತಿ, ಅಭಿವೃದ್ಧಿ ಮತ್ತು ಅನುವಂಶಿಕತೆಯ ಶಾಸ್ತ್ರ’ ಇಲಾಖೆಯ ವಿಜ್ಞಾನಿಗಳು ಹಾಗೂ ಡಿ.ಎ.ಪಾಂಡು ಸ್ಮಾರಕ ಆರ್.ವಿ ದಂತವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಓರಲ್ ಮ್ಯಾಕ್ಸಿಲೊಫೇಸಿಯಲ್ ಸರ್ಜರಿ’ ಇಲಾಖೆ ವೈದ್ಯರ ಸಹಯೋಗದಲ್ಲಿ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಅಡಿಕೆಯು, ಕ್ಯಾನ್ಸರ್‌ಗೆ ಮುಂಚಿನ ರೋಗಸ್ಥಿತಿಯನ್ನು (ಫೈಬ್ರೋಸಿಸ್– ತಂತೂತಕವೃದ್ಧಿ) ಉಂಟು ಮಾಡುತ್ತದೆ. ಎಂಬ ಮೋಸದ ಸಂಶೋಧನೆಯೊಂದನ್ನು ಮಾಡಿದೆ. ಇದು ಲಕ್ಷ ಲಕ್ಷ ಅಡಿಕೆ ಬೆಳೆಗಾರರ ಹೊಟ್ಟೆಯ ಮೇಲೆ ಚಪ್ಪಡಿ ಕಲ್ಲೆಳೆಯುವ ಪ್ರಯತ್ನವಲ್ಲದೇ ಮತ್ತಿನ್ನೇನು? ಹಿಂದೊಮ್ಮೆ ಮೈಸೂರಿನ ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಅಡಿಕೆಯಲ್ಲಿ ವಿಷಕಾರಕ ಅಂಶವಿಲ್ಲ ಎಂದು ಹೇಳಿದೆ, ಹಾಗಾದರೆ ಯಾವ ಸಂಶೋಧನೆಯನ್ನು ಜನರು ನಂಬಬೇಕು? ಬಹುರಾಷ್ಟ್ರೀಯ ಸಿಗರೇಟ್ ಕಂಪನಿಗಳು ತೆರೆಮರೆಯಲ್ಲಿ ತಮ್ಮ ಲಾಬಿಯನ್ನು ಮಾಡುತ್ತಿರುವುದೇ ಕೆಲವೊಂದು ಬೆಳವಣಿಗೆಗೆ ಕಾರಣವೇ ಹಾಗಾದರೇ?

ಅಡಿಕೆ ಜಗಿಯುದರಿಂದಲೇ ಕ್ಯಾನ್ಸರ್ ಬರುತ್ತದೆ ಎಂದು ಸಂಸತ್ತಿನಲ್ಲಿ ಸರಕಾರ ಹೇಳಲು ಹೊರಟಿದೆ ಅಂತಾದರೆ ಇದೆ ಅಡಿಕೆಯ ಮೇಲೆ ಹಲವು ಕಡೆ ನಡೆದ ಸಂಶೋಧನೆಯನ್ನೂ ಕೆದಕಬೇಕಲ್ಲವೇ? ಹಾಗಾದರೆ ಚೆನ್ನೈನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಮೈಕ್ರೋಬಯಾಲಜಿ ವಿಭಾಗ ನಡೆಸಿರುವ ಸಂಶೋಧನೆ ಸುಳ್ಳೇ? ಅವರ ಸಂಶೋಧನೆಯಲ್ಲಿ ಅಡಕೆ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ ಎಂಬುದನ್ನು ಅವರು ಹೇಳುತ್ತಾರೆ, ಅದು ಹೇಗೆಂದರೆ ತಾಂಬೂಲ (ವೀಳ್ಯದೆಲೆ, ಅಡಕೆ, ಸುಣ್ಣ, ಲವಂಗ, ಏಲಕ್ಕಿ ಮಿಶ್ರಣ)ವನ್ನು  ಜನರು ಜೀರ್ಣ ಕ್ರಿಯೆ ಸುಗಮವಾಗಿಸಲು ಬಳಸುತ್ತಾರೆ.  ಔಷಧೀಯ ಗುಣಗಳಿವೆ ಎಂಬುದನ್ನು ತಿಳಿದುಕೊಳ್ಳಲು ಅಥವಾ ಸಾಭೀತು ಪಡಿಸಲು ತಾಂಬೂಲವನ್ನು ಗರ್ಭಿಣಿಯರಿಗೆ ಮತ್ತು ಇತರರಿಗೆ ಅದನ್ನು ಸೇವನೆಗೆ ನೀಡಲಾಯಿತು. ಅದನ್ನು ಪ್ರತ್ಯೇಕವಾಗಿ ಅಧ್ಯಯನ ನಡೆಸಿದಾಗ ತಾಂಬೂಲ ಅಥವಾ ಪಾನ್‌ನಲ್ಲಿ ವಿವಿಧ ರೋಗಗಳ ನಿವಾರಣೆ ಸಾಧ್ಯ ಎಂದು ಗೊತ್ತಾಗಿತ್ತು.  ಅಡಿಕೆಯಲ್ಲಿ  ಔಷಧೀಯ ಗುಣಗಳಿದ್ದು, ಅದನ್ನು ಬಾಯಿಹುಣ್ಣು, ಕ್ಯಾನ್ಸರ್, ಹಲ್ಲಿಗೆ ಸಂಬಂಧಿತ ರೋಗ ಮಾತ್ರವಲ್ಲದೆ ಬಾಯಿ ದುರ್ವಾಸನೆ ತಡೆಗೆ ಬಳಸಬಹುದು ಎಂಬುದು ಕೂಡ ಇದೆ ಸಂಶೋಧನೆಯಲ್ಲಿ ಸಾಬೀತಾಯಿತು. ಅಡಕೆಯಲ್ಲಿ ಒಸಡು ಗಟ್ಟಿಗೊಳಿಸುವ ಮತ್ತು ಹಲ್ಲು ಹಾಳಾಗುವುದನ್ನು ತಡೆಯುವ ಗುಣಗಳಿವೆ. ತಾಂಬೂಲ ಸೇವನೆಯಿಂದ ಹಲ್ಲು ನೋವು ನಿವಾರಣೆ ಮತ್ತು ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಪ್ರಮುಖವಾದ ಇನ್ನೊಂದು ಅಂಶವನ್ನು ಈ ಸಂಶೋಧನೆ ಹೊರ ಹಾಕಿತ್ತು ಅದೇನೆಂದರೆ, ಮಾಂಸಾಹಾರ ಸೇವನೆ ಮಾಡುವವರಿಗೆ ಹೆಚ್ಚು ರೋಗ ಬರಲು ಮುಖ್ಯ ಕಾರಣವೇನೆಂದರೆ ಪ್ರಾಣಿಗಳನ್ನು ಕೊಲ್ಲುವ ಸಂದರ್ಭದಲ್ಲಿ ಅವು ಹೆದರಿಕೊಳ್ಳುತ್ತವೆ. ಇದು ಅವುಗಳ ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಮಾಂಸಾಹಾರ ಮತ್ತು ಮದ್ಯ ಸೇವನೆಯಿಂದ ಬರುವ ರೋಗ ಹತೋಟಿಯಲ್ಲಿಡಲು ಆಗಾಗ ತಾಂಬೂಲ ಸೇವನೆ ಉತ್ತಮ. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಔಷಧೀಯ ಗುಣಗಳ ಪಟ್ಟಿಯನ್ನು ಈ ಸಂಶೋಧನೆ ಹೊರಹಾಕಿದೆ. ‘ಆ್ಯಂಟಿ ಮೈಕ್ರೋಬಯಾಲಜಿ ಎಫೆಕ್ಟ್ ಆಫ್ ಚ್ಯೂಯಿಂಗ್ ತಾಂಬೂಲಂ (ಬೀಟೆಲ್ ಲೀವ್ಸ್ ಆ್ಯಂಡ್ ಇಟ್ಸ್ ಕಾಂಬಿನೇಷನ್ ) ಬೈ ಟೆಸ್ಟಿಂಗ್ ಸಲೈವ ಆಫ್ ವಾಲೆಂಟಿಯರ್ಸ್‌’ ಎಂಬ ಶೀರ್ಷಿಕೆಯಲ್ಲಿ  ಇಂಡಿಯನ್ ಜರ್ನಲ್ ಆಫ್ ಎಪ್ಲೈಡ್ ರಿಸರ್ಚ್ ಪತ್ರಿಕೆಯ 2013ರ ಫೆಬ್ರವರಿಯ ಸಂಚಿಕೆಯಲ್ಲಿ ಇದರ ಸಂಪೂರ್ಣ ವರದಿ ಪ್ರಕಟವಾಗಿದೆ. ಹಾಗಾದರೆ ಇದನ್ನೂ ಸರಕಾರ ಒಪ್ಪಬೇಕಲ್ಲವ?

ಕೇಂದ್ರ ಮಂತ್ರಿ ಅನುಪ್ರಿಯಾ ಪಟೇಲ್ ಅವರು ಲೋಕಸಭೆಯಲ್ಲಿ ನೀಡಿರುವ ಉತ್ತರದ ಪ್ರತಿ

ಇನ್ನು ಪ್ರಮುಖವಾಗಿ ನಮ್ಮವರೇ ಆದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ  ಮಂಡಗದ್ದೆಯ ಯುವ ಸಂಶೋಧಕ ನಿವೇದನ್‌ ನೆಂಪೆ ಅವರ ಬಗ್ಗೆ ನೀವೆಲ್ಲ ಕೇಳಿರಬಹುದು. ಆಸ್ಟ್ರೇಲಿಯಾದಲ್ಲಿ ಲಕ್ಷ ಲಕ್ಷ ಹಣ ಸಿಗುತ್ತಿದ್ದ ಉದ್ಯೋಗವನ್ನು ಬಿಟ್ಟು ಮರಳಿ ಊರಿಗೆ ಬಂದು ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಆರೋಗ್ಯಕ್ಕೆ ಸಹಕಾರಿಯಾದ 21 ಅಂಶಗಳು ಅಡಿಕೆಯಲ್ಲಿವೆ ಎಂಬ ಅಂಶ ಇಂಟರ್‌ನ್ಯಾಷನಲ್‌ ಫಾರ್ಮಾ ಜರ್ನಲ್‌ನಲ್ಲಿ ಲಭಿಸಿತು. ಮುಂದೆ ಅವರೇ  ‘ಅರೆಕಾ ಟೀ’ ಉತ್ಪನ್ನವನ್ನು ತಯಾರಿಸಿದರು. ಈಗ ಮತ್ತೆ ಅಡಿಕೆ ನಿಷೇಧದ ಕಿಡಿ ಹೊತ್ತಿರುವಾಗ ಅವರನ್ನು ಮಾತನಾಡಿಸಿದೆ. ತಾಯ್ನಾಡಿನ ಮತ್ತು ನಮ್ಮ ಪರಂಪರೆಯ ಬಗ್ಗೆ ಅವರಿಗಿರುವ ಗೌರವ ಮತ್ತು ಜವಾಬ್ದಾರಿಯನ್ನು ನೋಡಿದಾಗ ಖುಷಿಯಂತೂ ಆಗುತ್ತದೆ. ‘ಇನ್ನೊಂದು ಹದಿನೈದು ದಿನದಲ್ಲಿ ಇಡೀ ಜಗತ್ತಿನ ಸಂಶೋಧಕರು ಮತ್ತು ಜನಸಾಮಾನ್ಯರು  ಆಶ್ಚರ್ಯಗೊಳ್ಳುವಂತಹ ಅಡಿಕೆಯ ಮೇಲಿನ ಸಂಶೋಧನಾ ವರದಿಯನ್ನು ನಾವು ಬಿಡುಗಡೆ ಮಾಡುತ್ತೇವೆ’ ಎಂಬ ಶುಭ ಸುದ್ದಿಯನ್ನು ನಿವೆದನ್ ನೀಡಿದರು. ಆ ವರದಿಯಲ್ಲಿ ಅಡಿಕೆಯಲ್ಲಿರುವ ಔಷಧೀಯ ಗುಣಗಳ ಸಂಪೂರ್ಣ ವರದಿಯೂ ಇರುತ್ತದೆಯಂತೆ. ಈ ವರದಿ ಭಾರತದ ಅದರಲ್ಲೂ ಪ್ರಮುಖವಾಗಿ ನಮ್ಮ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರಿಗೆ ಆಶಾಕಿರಣವಾಗುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವರದಿಯನ್ನಿಟ್ಟುಕೊಂಡು ಸುಳ್ಳು ವರದಿಯನ್ನು ಕೊಟ್ಟಿರುವ ಮತ್ತು ಕೊಡಿಸಿರುವ ಡೋಂಗಿ ಸಂಶೋಧಕರ ಹುಟ್ಟಡಗಿಸಬಹುದು. ತಂಬಾಕು ಬೆಳೆಗಾರರು ಅಡಿಕೆಗೆ ಪರ್ಯಾಯವಾಗಿ ಏಲಕ್ಕಿಯನ್ನು ಬಳಸಿಕೊಂಡು ‘ಗುಟ್ಕಾ’ ತಯಾರಿಸಲು ಶುರು ಮಾಡಿದ್ದಾರೆ. ಹಾಗಾಗಿ ಅಡಿಕೆಯ ಅವಶ್ಯಕತೆ ಅವರಿಗಿಲ್ಲ. ಅಡಿಕೆಯ ಮೇಲೆ ನೀಡಲಾಗಿರುವ ಸುಳ್ಳು ವರಧಿಯ ಹಿಂದೆ ದೊಡ್ಡ ಜಾಲವೇ ಇದೆ. ಆದಷ್ಟು ಬೇಗ ಸತ್ಯ ಹೊರಬರಲಿ ಎನ್ನುವುದೇ ಆಶಯ.    

ಈಗ ಈ ಅಡಿಕೆಯನ್ನು ನಿಷೇಧಿಸಿ ಏನ್ಮಾಡುವವರಿದ್ದೀರಿ ನೀವು? ಅಡಿಕೆ ಬೆಳೆಯಲ್ಲಿ ಸುಮಾರು ಶೇ.81 ಕ್ಕಿಂತ ಹೆಚ್ಚು ಪ್ರದೇಶವು ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರಿಂದ ಕೂಡಿದೆ ಅಂದರೆ ನೀವು ಇವರ ತುತ್ತು ಕೂಳನ್ನು ಕಸಿಯಲು ಹೊರಟಿದ್ದೀರಾ? ಭಾರತದಲ್ಲಿ ಸುಮಾರು ಮೂರು ಕೋಟಿ ವಿವಿಧ ಆಸಕ್ತರು ಅಡಿಕೆ ಉತ್ಪಾದನೆ, ಸಂಸ್ಕರಣೆ ಹಾಗೂ ವ್ಯಾಪಾರ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಹಾಗಿದ್ದರೆ ಇವರನ್ನು ನೀವು ನಿರ್ಗತಿಕರನ್ನಾಗಿ ಮಾಡಲು ಹೊರಟಿದ್ದೀರಾ? 1991 ರಿಂದ ಕಳೆದ 25 ವರ್ಷಗಳಲ್ಲಿ ಭಾರತದಿಂದ ಅಡಿಕೆ ರಪ್ತಾಗುವ ಅಡಿಕೆ ಉತ್ಪನ್ನಗಳ ಮಟ್ಟ ಸುಮಾರು ಮೂರು ಪಟ್ಟು ಹೆಚ್ಚಾಗಿದೆ, ಅಂದರೆ ಅಡಿಕೆ ದೇಶದ ಪ್ರಗತಿಯಲ್ಲೂ ಕೈ ಜೋಡಿಸಿದೆ ಅಂತಾಯ್ತು. ಅದೂ ನಿಮಗೆ ಬೇಕಾಗಿಲ್ಲವೇ? ಈಗ ಅಡಿಕೆ ತಿನ್ನುವುದೇ ಜೀವಕ್ಕೆ ಮಾರಕ ಎಂದು ಬಿಂಬಿಸಿ ಯಾರ ಲಾಬಿಗೆ ಮಣಿಯಲು ತಯಾರಾಗಿದ್ದೀರಿ? ಪ್ರತೀ ಎಕರೆ ಅಡಿಕೆ ತೋಟದಲ್ಲಿ ಅಡಿಕೆ ಕೃಷಿಗೆ ಸುಮಾರು 250 ಮಾನವ ದಿನಗಳು ಮತ್ತು ಮೌಲ್ಯವರ್ಧನೆಗೆ ಸುಮಾರು 200 ಮಾನವ ದಿನಗಳನ್ನು ವಾರ್ಷಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಕ್ಷೇತ್ರ ಮಟ್ಟದಲ್ಲಿ ಸುಮಾರು ಹತ್ತು ಲಕ್ಷ ಕಾರ್ಮಿಕರಿಗೆ ಜೀವನೋಪಾಯ ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡುತ್ತಿರುವುದು ಇದೇ ಅಡಿಕೆ ಬೆಳೆ ಎಂಬುದು ನಿಮಗೆ ನೆನಪಿಲ್ಲವೇ? ಒಂದು ವೇಳೆ ಅಡಿಕೆ ನಿಷೇಧ ಮಾಡಿದರೆ ಬರೋಬ್ಬರಿ 75 ಸಾವಿರ ಕೋಟಿ ವಹಿವಾಟು ಸ್ಥಗಿತಗೊಳ್ಳುತ್ತದೆ. 500 ರಿಂದ 1000 ಕೋಟಿ ವಿದೇಶಿ ವಿನಿಮಯ ನಷ್ಟವಾಗುತ್ತದೆ ಎಲ್ಲಕ್ಕಿಂತ ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿಯ ರೈತರ ಜೀವಕ್ಕೇ ಕೊಳ್ಳಿ ಇರಿಸಿದಂತಾಗುತ್ತದೆ. ಇದೇ ನಿಮ್ಮ ಗುರಿಯೇ?

ಏನ್ಮಾಡುತ್ತೀದ್ದೀರಿ ಸನ್ಮಾನ್ಯ ಅನಂತಕುಮಾರ್ ಹೆಗಡೆಯವರೇ? ಅಡಿಕೆಗೆ ಪರ್ಯಾಯವಾದ ಬೆಳೆಯನ್ನು ಬೆಳೆಯಬೇಕು ಎನ್ನುವ ನಿಮ್ಮ ವಾದ ನಿಜಕ್ಕೂ ಒಪ್ಪಬೇಕಾದದ್ದೇ. ಆದರೆ ಆ ಪರ್ಯಾಯ ಬೆಳೆ ಬೆಳೆದು, ಅದು ಫಲ ಕೊಡುವವರೆಗೂ ಕಾಯುವಷ್ಟು ಆರ್ಥಿಕ ಸದೃಢತನ ನಮ್ಮ ರೈತರಿಗಿಲ್ಲ. ಕೋಕೋ, ಅರಗು, ಆಗರ್’ವುಡ್ ಬೆಳೆಯನ್ನೇನೋ ನೀವು  ಪರಿಚಯಿಸಿದಿರಿ. ಆದರೆ ಸರಕಾರದಿಂದ ಆ ಬೆಳೆ ಬೆಳೆಯಲು ಏನು ಪ್ರೋತ್ಸಾಹ ನೀಡಿದಿರಿ? ಎಕರೆ ಪ್ರದೇಶಕ್ಕೆ ಲಕ್ಷ ಲಕ್ಷ ಸಾಲ ಹೊತ್ತುಕೊಂಡಿರುವ ರೈತರ ಸಾಲಭಾರವನ್ನು ಇಳಿಸಲು ಏನು ಪ್ರಯತ್ನವನ್ನು ನೀವು ಮಾಡಿದ್ದೀರಿ? ಫಸಲು ನೀಡುತ್ತಿರುವ ಅಡಕೆಯನ್ನು ತಿರಸ್ಕರಿಸುವ ಧೈರ್ಯ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರಿಗಿಲ್ಲ ಮಹಾಸ್ವಾಮಿಗಳೇ. ಈಗ ನಮ್ಮ ಪರವಾಗಿ ಧ್ವನಿಯೆತ್ತಿ. ಅಡಿಕೆ ಉಳಿದರೆ ಮಲೆನಾಡು ಉಳಿದೀತೂ. ಇದು ಕೇವಲ ನಿಮ್ಮೊಬ್ಬರ ಜವಾಬ್ದಾರಿಯಲ್ಲ. ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ದೇಶಪಾಂಡೆ, ಕಾಗೇರಿ, ಕುಮಾರಸ್ವಾಮಿ ಹೀಗೆ ಎಲ್ಲರ ಜವಾಬ್ದಾರಿ ಇದು. ಸಾಲ ಮನ್ನಾ ಮಾಡಿ ಎಂಬ ಬೇಡಿಕೆಯನ್ನಿಟ್ಟರೆ ಬೆಳೆಯನ್ನೇ ನಿಷೇಧಿಸುವ ಬೆದರಿಕೆ ಒಡ್ಡುತ್ತಿದ್ದೀರಲ್ಲ ನಿಮಗೇನೆನ್ನೋಣ ಗೊತ್ತಾಗುತ್ತಿಲ್ಲ.ಕರ್ನಾಟಕದ ಕಾಫಿ ಬೆಳೆಗಾರರು ಮೂರು ಬಾರಿ ಸಾಲ ಮನ್ನಾ ಮಾಡಿಸಿಕೊಂಡು ಬರುತ್ತಾರೆ ಆದರೆ ಉತ್ತರಕನ್ನಡವೆಂಬ ಜಿಲ್ಲೆಯ ಅಡಿಕೆ ಬೆಳೆಗಾರರ ಸಾಲ ಮನ್ನಾವನ್ನು ಒಮ್ಮೆಯಾದರೂ ಮಾಡುವ ಇರಾದೆ ಯಾವುದೇ ಒಬ್ಬ ರಾಜಕಾರಣಿಗೂ ಇಲ್ಲ ಅಲ್ಲವಾ? ಉತ್ತರಕನ್ನಡ ರಾಜಕಾರಣಿಗಳು ಪ್ರಬುದ್ಧರಾಗಿದಿದ್ದರೆ  ಈ ಸಮಸ್ಯೆಗಳೆಲ್ಲವೂ ಯಾವತ್ತೋ ಕೊನೆಯಾಗುತ್ತಿತ್ತು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಎಲ್ಲರೂ ಅಷ್ಟೇ.ಇಲ್ಲಿ ಎಲ್ಲರಿಗೂ ರಾಜಕೀಯವೇ ಮುಖ್ಯ.

ಅಡಿಕೆ ತಿನ್ನುವುದರಿಂದಲೇ ಕ್ಯಾನ್ಸರ್ ಬರುತ್ತದೆ ಎನ್ನುವ ವಾದವನ್ನಿಟ್ಟುಕೊಂಡು ಅಡಿಕೆಯನ್ನೇ ನಿಷೇಧಿಸಲು ಕೇಂದ್ರ ಹೊರಟಿದೆ ಅಂದರೆ ಇದು ಒಂದು ‘ಬಯಾಸ್ಡ್’ ನಿರ್ಧಾರ ಎನ್ನಬಹುದು. ಆಯಕಟ್ಟಿನ ಜಾಗದಲ್ಲಿ ಕೂತಿರುವ ಅಧಿಕಾರಿಗಳು ಸರಿಯಾದ ಮೂಲಗಳಿಂದ ಸತ್ಯವಿರುವ ವಿಚಾರಗಳನ್ನು ಮತ್ತು ವರದಿಯನ್ನು ಸಂಬಂದಪಟ್ಟ ಸಚಿವರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ವಾಸ್ತವವನ್ನು ಅರಿಯುವ ಪ್ರಯತ್ನವನ್ನು ಚೂರಾದರೂ ಮಾಡಬೇಕು. ಇಲ್ಲಿ ಇವೆರಡೂ ಆದಂತೆ ಕಾಣುತ್ತಿಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ  ಕಾಲದಲ್ಲಿ, ಕರಾವಳಿಯ ಅಡಿಕೆ ಬೆಳೆಗೆ ಬೆಂಬಲ ಬೆಲೆ ಕುಸಿದಿದ್ದಾಗ, ಇಲ್ಲಿಯ ಅಡಿಕೆಯನ್ನು ಆಮದು ಮಾಡಿಕೊಂಡು ಅಡಿಕೆ ಬೆಳೆಗಾರರ ಬೆಂಬಲಕ್ಕೆ ನಿಂತಿದ್ದ ಮೋದಿಯವರ ಸರಕಾರವೇ ಈಗ ಅಡಿಕೆ ನಿಷೇಧಕ್ಕೆ ಹೊರಟಿರುವುದು ಮಾತ್ರ ವಿಪರ್ಯಾಸ!

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!