ಅಂಕಣ

ಹಳೆಯ ನೆನಪುಗಳೊದಿಗೆ ಹೊಸ ವರ್ಷಾರಂಭ!

ದಿನಗಳು ಎಷ್ಟು ಬೇಗ ಕಳೆದುಹೋಗುತ್ತದೆ. ಆಗಲೇ ೨೦೧೭ರ ಕ್ಯಾಲೆಂಡರ್ ತೆಗೆದು ೨೦೧೮ರ ಕ್ಯಾಲೆಂಡರ್ ಹಾಕಿಯಾಗಿದೆ. ಯೋಚಿಸಿದರೆ ಇಷ್ಟು ಬೇಗ ಒಂದು ವರ್ಷ ಕಳೆದೇಹೋಯಿತೇ ಎನಿಸುತ್ತದೆ. ನೀವೆಲ್ಲ ಹೊಸವರ್ಷವನ್ನು ಸಂಭ್ರಮದಿಂದ ಅಚರಿಸಿರಬಹುದು, ಫ್ರೆಂಡ್ಸ್, ಹೋಟೆಲ್, ಪಾರ್ಟಿ ಜೊತೆಗೆ ೨೦೧೮ರಲ್ಲಿ ಏನೇನು ಮಾಡಬೇಕು, ಯಾವ ಯಾವ ಅಭ್ಯಾಸವನ್ನು ಬಿಡಬೇಕು, ಯಾವುದನ್ನು ರೂಢಿಸಿಕೊಳ್ಳಬೇಕು ಎಂದೆಲ್ಲಾ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರುತ್ತೀರಿ. ಆಗಲೇ ಒಂದು ವಾರ ಕಳೆದು ಹೋಗಿದ್ದರಿಂದ ಆ ಯೋಜನೆಯನ್ನು ಕೈ ಬಿಟ್ಟಿರಲೂಬಹುದು! ಅಂದಹಾಗೆ ನಾನು ಎಂದೂ ಹೊಸವರ್ಷವನ್ನು ಆಚರಿಸಿದವಳಲ್ಲ. ಆದರೆ ಈ ವರ್ಷದ ಆರಂಭ ಬಹಳ ಭಿನ್ನವಾಗಿತ್ತು ಎಂದು ಖಂಡಿತವಾಗಿಯೂ ಹೇಳಬಲ್ಲೆ. ಆಗಾಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುತ್ತಾರಲ್ಲ, ಈ ಬಾರಿಯ ವರ್ಷಾರಂಭ ಹಾಗೆಯೇ ಶುರುವಾಯಿತು ಎನ್ನಬಹುದು. ಯಾವ ಜಾಗದಿಂದ ನನ್ನ ಬದುಕು ಬದಲಾಗಿತ್ತೋ ಅಲ್ಲಿಂದ ೨೦೧೮ನ್ನು ಆರಂಭಿಸಿದ್ದೇನೆ. ಸುಮಾರು ಒಂಭತ್ತು ವರ್ಷಗಳ ಬಳಿಕ ಮಣಿಪಾಲ್’ಗೆ ಭೇಟಿ ನೀಡಿ!!

ಒಂಭತ್ತು ವರ್ಷಗಳ ನಂತರ ಮಣಿಪಾಲ್ ಹೋಗಲು ತುಂಬಾ ದೊಡ್ಡ ಕಾರಣವೇನಿರಲಿಲ್ಲ. ಸಾಕಷ್ಟು ದಿನದಿಂದ ಕೈ ನೋವಿನಿಂದ ಬಳಲುತ್ತಿದ್ದ ಅಜ್ಜಿಯನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗಲು ನಾನು ನನ್ನ ಕಸಿನ್ ಇಬ್ಬರೂ ಹೊರಟಿದ್ದೆವು ಅಷ್ಟೇ. ಹಾಗಂತ ಹೋಗುವಾಗ ಮಣಿಪಾಲ್’ಗೆ ಹೋಗುತ್ತಿದ್ದೇನೆ, ಇಷ್ಟು ವರ್ಷದ ಬಳಿಕ ಅಂತೆಲ್ಲ ಉತ್ಸಾಹವೇನಿರಲಿಲ್ಲ. ಎಲ್ಲಾ ಸಹಜವಾಗಿಯೇ ಇತ್ತು.  ಆದರೆ ಮಣಿಪಾಲ್ ಆಸ್ಪತ್ರೆಯ ಒಳಗೆ ಕಾಲಿಡುತ್ತಿದ್ದಂತೆ ನೆನಪುಗಳೆಲ್ಲಾ ಸ್ಮೃತಿಪಟಲದಲ್ಲಿ ಹಾದುಹೋಗಲಾರಂಭಿಸಿತ್ತು. ಮಣಿಪಾಲ್ ಸಾಕಷ್ಟು ಬದಲಾಗಿದ್ದೇನೋ ನಿಜ. ಕೆಲವು ಕಟ್ಟಡಗಳೆಲ್ಲಾ ಹೊಸದಾಗಿ ಮಾಡಲಾಗಿದೆ. ಆದರೆ ಅದೇನೋ ಆರ್ಥೋಪೆಡಿಕ್ ಒ.ಪಿ.ಡಿ.ಯ ಒಳಗೆ ಬರುತ್ತಿದ್ದಂತೆ ಒಂಭತ್ತು ವರ್ಷದ ಹಿಂದೆ ಮೊದಲ ಬಾರಿ ಅಲ್ಲಿಗೆ ಬಂದ ದಿನ ನೆನಪಾಗಿತ್ತು. ಆಗೇನೋ ಒಂದು ರೀತಿ ಅನಿಶ್ಚಿತತೆ ಇತ್ತು. ನನಗೇನಾಗಿದೆ, ಮುಂದೇನಾಗುವುದು ಎನ್ನುವುದರ ಅರಿವಿರಲಿಲ್ಲ. ಅದೇನೋ ಒಂದು ರೀತಿಯ ತಳಮಳ ಇತ್ತು. ಆದರೆ ಈಗ ಹಾಗಿರಲಿಲ್ಲ. ಒ.ಪಿ.ಡಿ.ಯಲ್ಲಿದ್ದವರನ್ನ ಒಮ್ಮೆ ನೋಡಿದಾಗ, ಒಂಭತ್ತು ವರ್ಷದ ಹಿಂದೆ ನಾನೂ ಕೂಡ ಹಾಗೆ ಕುಳಿತು ನನ್ನ ಸರದಿಗಾಗಿ ಕಾದಿದ್ದು ನೆನಪಾಗಿತ್ತು. ಹೇಳಿದೆನಲ್ಲ ನೆನಪುಗಳ ಸರಮಾಲೆಯೇ ಆರಂಭಗೊಂಡಿತ್ತು ಎಂದು. ಅದು ಸಹಜ ಕೂಡ, ನನ್ನ ಬದುಕಿನ ಅಮೂಲ್ಯವಾದ ಭಾಗ ಕಳೆದದ್ದು ಅಲ್ಲಿಯೇ. ಅಲ್ಲಿನ ಪ್ರತಿ ಜಾಗವೂ ಒಂದೊಂದು ನೆನಪನ್ನು ತಾಜಾಗೊಳಿಸುತ್ತಿತ್ತು.!

ಒ.ಪಿ.ಡಿ.ಯಿಂದ ಡಾಕ್ಟರ್ ಶರತ್ ರಾವ್ ಅವರ ಕ್ಯಾಬಿನ್’ಗೆ ಹೋಗಿ ಭೇಟಿ ಮಾಡಿದಾಗ, ನನ್ನ ಪರಿಚಯ ಹೇಳಿ, ತುಂಬಾ ನೆನಪು ಮಾಡಬೇಕೇನೋ ಅಂದುಕೊಂಡಿದ್ದೆ. “ನಾನು ಶ್ರುತಿ, ಆಸ್ಟಿಯೋಸರ್ಕೋಮ ಆಗಿತ್ತಲ್ಲ” ಎಂದ ಕೂಡಲೇ, ಅವರು “ಓಹ್.. ಪುಸ್ತಕ ಬರೆದವಳು! ಸಾಗರದವಳು ಅಲ್ವೇನೇ” ಎಂದುಬಿಟ್ಟಿದ್ದರು. “ಆಗ ಇಷ್ಟಿದ್ದಿ.. ಈಗ ಇಷ್ಟೆತ್ತರ(ತುಂಬಾ ಎತ್ತರ ಅಲ್ಲ!!) ಆಗಿದ್ದೀಯಾ” ಎಂದಾಗ ನಗುತ್ತಾ ತಲೆಯಾಡಿಸಿದ್ದೆ. ನಮ್ಮನ್ನು ನೋಡಿದ ಡಾಕ್ಟರ್’ನ್ನು ವರ್ಷಗಳ ನಂತರ ಭೇಟಿ ಮಾಡಿದಾಗ, ಮತ್ತೆ ಅದೇ ಆಪ್ಯಾಯತೆ ಸಿಕ್ಕುಬಿಟ್ಟರೆ ಇನ್ನೇನು ಬೇಕು. ‘ಡು ನಾಟ್ ಸ್ಟೇರ್’

ಅಲ್ಲಿಂದ ಅಲ್ಟ್ರಾಸೌಂಡ್ ಸ್ಕ್ಯಾನ್ ಹಾಗೂ ಎಕ್ಸ್-ರೇ ಎಂದು  ಆ ಕಾರಿಡಾರ್’ಗಳಲ್ಲಿ ಓಡಾಡುವಾಗ ಮತ್ತೆ ಹಳೆಯ ನೆನಪು. ಆ ಕಾರಿಡಾರ್’ಗಳಲ್ಲಿ ಎಷ್ಟು ಬಾರಿ ತಿರುಗಾಡಿದ್ದೆನೋ ಏನೋ.. ಅದೂ ಕೂಡ ವೀಲ್’ಚೇರಿನಲ್ಲಿ! ಆದರೆ ಈಗ ಆ ಕಾರಿಡಾರ್’ಗಳಲ್ಲಿ ನಾನೇ ಸ್ವತಃ ಓಡಾಡುತ್ತಿದ್ದೆ. ಹಿಂದೆ ಮಣಿಪಾಲದಲ್ಲಿದ್ದಾಗ ಮೊದಲ ಕೆಲದಿನಗಳು ಸ್ಕ್ಯಾನಿಂಗ್’ಗಳಲ್ಲಿಯೇ ಕಳೆದುಹೋಗಿತ್ತು. ಎಷ್ಟರಮಟ್ಟಿಗೆ ಎಂದರೆ “ಮಣಿಪಾಲ್’ನಲ್ಲಿ ಇರೋ ಎಲ್ಲಾ ಮಷಿನ್’ಗಳಿಗೂ ನನ್ನ ಪರಿಚಯ ಇದೆ” ಎಂದು ಹೇಳಿಕೊಂಡು ನಗುತ್ತಿದ್ದೆ.  ವೀಲ್’ಚೇರಿನಲ್ಲಿ ಹೋಗಿ, ನಮ್ಮ ಸರದಿಗಾಗಿ ಕಾದು, ಸ್ಕ್ಯಾನಿಂಗ್ ಮುಗಿಸಿ, ಮತ್ತೆ ವಾರ್ಡ್’ಗೆ ಹೋಗುವುದು. ಅದರಲ್ಲೇ ನಮಗೇನಾಗಿದೆ ಎಂದು ಗೊತ್ತಾದರೆ ಪುಣ್ಯ, ಇಲ್ಲವೆಂದರೆ ಇನ್ನೊಂದಿಷ್ಟು. ಒಟ್ಟಿನಲ್ಲಿ ಸ್ಕ್ಯಾನ್ ಎಂದರೇನೇ ರೋಸಿ ಹೋಗಿರುತ್ತದೆ. ಮೊನ್ನೆ ಅಲ್ಲಿ ಕೆಲವರನ್ನು ವೀಲ್’ಚೇರಿನಲ್ಲಿ, ಟ್ರಾಲಿಯಲ್ಲಿ ನೋಡಿದಾಗ ಇನ್ನೊಂದು ವಿಷಯ ಗಮನಿಸಿದೆ. ನಾನು ಯಾರನ್ನು ದಿಟ್ಟಿಸಿ ನೋಡುವುದಿಲ್ಲ ಎಂದು. ಯಾಕೆಂದರೆ ನಾವು ವೀಲ್’ಚೇರಿನಲ್ಲೋ ಅಥವಾ ಟ್ರಾಲಿಯಲ್ಲೋ, ಅಥವಾ ವಾಕರ್’ನೊಂದಿಗೋ ಇರುವಾಗ ಜನ ದಿಟ್ಟಿಸಿ ನೋಡಿದರೆ ಹೇಗನಿಸುತ್ತಿದೆ ಎನ್ನುವುದರ ಅನುಭವ ನನಗೆ ಚನ್ನಾಗಿದೆ. ಇದು ನನ್ನ ಸಲಹೆ ಕೂಡ ಹೌದು.

ಸರಿ ಈ ಸ್ಕ್ಯಾನ್, ಎಕ್ಸ್-ರೇ ಮುಗಿವಷ್ಟರಲ್ಲಿ ಊಟದ ಸಮಯವಾಗಿತ್ತು. ನನ್ನ ಕಸಿನ್ ಕ್ಯಾಂಟೀನ್’ಗೆ ಹೋಗೋಣ ಎಂದ ಕೂಡಲೇ ನಾನು ‘ಕ್ಯಾಂಟೀನಾ?’ ಎನ್ನುವಂತೆ ನೋಡಿದೆ. ಅವಳು ನನ್ನನ್ನ ಅರ್ಥ ಮಾಡಿಕೊಂಡವಳಂತೆ ನೋಡಿ, “ಅಲ್ಲಿ ಡಾಕ್ಟರ್ಸ್ ಕೆಫೆ ಅಂತ ಹೊಸತಾಗಿ ಆಗಿದೆ. ಚೆನ್ನಾಗಿರುತ್ತದೆ” ಎಂದಳು. ಹಿಂದೆ ನಾನು ಮಣಿಪಾಲದಲ್ಲಿದ್ದಾಗ ಕ್ಯಾಂಟೀನ್ ಊಟವೆಂದರೆ ಆಗುತ್ತಿರಲಿಲ್ಲ. ಸರಿಯಾಗಿ ಹೇಳಬೇಕೆಂದರೆ ಊಟ ಎಂದರೇನೆ ಆಗುತ್ತಿರಲಿಲ್ಲ. ಆದರೆ ಈಗ ಆಕೆ ಹೇಳಿದಂತೆ ಊಟ ರುಚಿಕಟ್ಟಾಗಿದ್ದಿದ್ದು ಹೌದು. ಸಮಯದೊಂದಿಗೆ ಎಲ್ಲವೂ ಬದಲಾಗುತ್ತದೆ ಎನ್ನುತ್ತಾರಲ್ಲ, ನಿಜ. ಸಮಯದೊಂದಿಗೆ ಮಣಿಪಾಲದ ಊಟದ ರುಚಿಯೂ ಬದಲಾಗಿತ್ತು.

ಬದುಕೆಂಬ ವೇದಾಂತ

ಆದರೆ ಆಸ್ಪತ್ರೆಗಳಲ್ಲಿ ಒಂದು ವಿಷಯ ಎಂದೂ ಬದಲಾಗುವುದಿಲ್ಲ. ವೇದಾಂತಗಳು!! ನೀವು ಎಷ್ಟು ವರ್ಷದ ನಂತರ ಹೋದರೂ ಅಷ್ಟೇ!  ಕಂಡು ಕೇಳಿದ ವೇದಾಂತಗಳೆಲ್ಲ ನೆನಪಾಗುವುದು ಅಲ್ಲಿಯೇ. ಇದು ಮಾತ್ರ ಬದಲಾಗುವುದಿಲ್ಲ. ಬದುಕನ್ನು  ತುಂಬಾ ಆಳವಾಗಿ ನೋಡುವುದು ಅಲ್ಲಿಯೇ. ಬದುಕು ಇಷ್ಟೇ! ಅಥವಾ ಬದುಕು ಎಷ್ಟು? ಎನ್ನುವುದೆಲ್ಲದರ ಅರಿವಾಗುವುದು ಅಲ್ಲಿಯೇ ತಾನೇ? ಅಲ್ಲಿ ಬ್ಯಾಂಡೇಜ್’ಗಳಲ್ಲಿ ಜನರನ್ನು ನೋಡಿದಾಗ, ಕೈ ಕಾಲುಗಳಿಗೆ ಬೋಲ್ಟ್, ನಟ್ ಎಲ್ಲ ಹಾಕಿ ಏನೇನೋ ಫಿಕ್ಸ್ ಮಾಡಿರುವುದನ್ನು ನೋಡಿದಾಗ ನಮ್ಮ ದೇಹ ಒಂದು ಮಷಿನ್ ಇದ್ದ ಹಾಗೇ ಅಷ್ಟೇ ಅಂತ ಅನ್ನಿಸದೇ ಇರಲಾರದು. ಆ ರೀತಿಯ ಯೋಚನೆಯ ಮಧ್ಯೆ ನಮ್ಮನ್ನು ಒಂದು ಹಂತಕ್ಕೆ ರಿಪೇರಿ ಮಾಡಿಕೊಳ್ಳಬಹುದಲ್ಲ ಎನ್ನುವುದೇ ಸಮಾಧಾನ.

ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಕಂಡು ಬರೋದು ಹತಾಶೆ, ನಿರಾಸೆ, ಅಸಹಾಯಕತೆ, ಇದೆಲ್ಲ ಯಾವಾಗ ಮುಗಿಯುವುದೋ ಅನ್ನೋ ಕಾತರ ಅಷ್ಟೇ! ಅದೊಂದು ಬೇರೆಯದೇ ಪ್ರಪಂಚವಾಗಿರುತ್ತದೆ. ಹಾಗಂತ ಅಲ್ಲಿ ಒಳ್ಳೆಯದೇನೂ ಇರುವುದೇ ಇಲ್ಲ ಅಂತೇನಲ್ಲ. ಅ ಎಲ್ಲಾ ನೆಗೆಟಿವ್ ಎಮೋಷನ್ಸ್’ಗಳ ನಡುವೆ ಒಂದು ಹೊಸ ಬದುಕು ಸಿಗುವುದೂ ಅಲ್ಲಿಂದಲೇ ಆಗಿರುತ್ತದೆ. ಮೊನ್ನೆ ಹೋದಾಗ ಅನಿಸಿದ್ದೂ ಕೂಡ ಇದೇ, ಸುಮಾರು ಆರೇಳು ತಿಂಗಳುಗಳ ಕಾಲ ಮಣಿಪಾಲ್ ಎನ್ನುವುದು ನನ್ನ ಜಗತ್ತಾಗಿತ್ತು. ಆ ಜಗತ್ತಿನಲ್ಲಿ ಹೇಗಿದ್ದೆ ಎನ್ನುವ ನೆನಪುಗಳು ಬರದೇ ಇರಲು ಹೇಗೆ ಸಾಧ್ಯ. ಈಗ ಒಂಭತ್ತು ವರ್ಷಗಳು ಕಳೆದ ಮೇಲೆ ಬದುಕಲ್ಲಿ ಎಷ್ಟು ಬದಲಾವಣೆಗಳಾಗಿ ಹೋಗಿದೆ ಎನ್ನುವುದು ಕೂಡ ಗಮನಕ್ಕೆ ಬಂದಿತ್ತು. ಹಾಗೆ ಈಗ ನಾನು ಕರೆಯುವ ‘ನನ್ನ ಜಗತ್ತು’ ಎಷ್ಟು ಕಷ್ಟಪಟ್ಟು ಪಡೆದಿದ್ದು ಎನ್ನುವುದೂ ನೆನಪಾಯಿತು!

ಬದಲಾಗದ ಸಣ್ಣಸಣ್ಣ ವಿಚಾರಗಳು

ಮಣಿಪಾಲ್ ಹೋಗಿ ಡಾಕ್ಟರ್ ಭಾಸ್ಕರಾನಂದ್ ನೆನಪಾಗದಿದ್ದರೆ ಹೇಗೆ? ಅಲ್ಲಿ ಹೋದಮೇಲೆ ಎಲ್ಲರೂ ನೆನಪಾಗಲೇಬೇಕು. ಡಾಕ್ಟರ್ ರಿತೇಶ್, ಡಾಕ್ಟರ್ ವಾದಿರಾಜ್. ಆದರೆ ಇವರೆಲ್ಲ ಈಗ ಮಣಿಪಾಲಿದಲ್ಲಿಲ್ಲ. ಸದ್ಯ ಹತ್ತಿರದ ಉಡುಪಿಯಲ್ಲಿದ್ದಿದ್ದು ಭಾಸ್ಕರಾನಂದ್! ಮಣಿಪಾಲಿದಲ್ಲಿದ್ದ ಅಷ್ಟೂ ದಿನಗಳಲ್ಲಿ, ಆ ಎಲ್ಲಾ ನೋವಿನಲ್ಲಿ ಮನಸ್ಸಿಗೆ ಮುದ ನೀಡುತ್ತಿದ್ದದ್ದು ಭಾಸ್ಕರಾನಂದ್ ಅವರ ಮಾತುಗಳು ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಅವರನ್ನು ಭೇಟಿಮಾಡುವ ಉದ್ದೇಶವೇನೋ ಇತ್ತು. ಆದರೆ ಅವರು ಕಾನ್ಫರೆನ್ಸ್ ಸಲುವಾಗಿ ಜೈಪುರ ಹೊರಟಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆದರೆ ಅವರೊಂದಿಗೆ ಫೋನಿನಲ್ಲಿ ಮಾತಾಡಿದಾಗ, ನಾನು ಶ್ರುತಿ ಎನ್ನುತ್ತಿದ್ದಂತೆ “ಹೇಳು ಮಗೂ” ಎಂದಾಗ ಆದ ಸಂತೋಷವಿದೆಯಲ್ಲ ಅದಕ್ಕೆ ಸರಿಸಾಟಿ ಯಾವುದೂ ಇಲ್ಲ. ಮೊದಲೂ ಅವರು ನನ್ನನ್ನು ಹಾಗೆಯೇ ಕರೆಯುತ್ತಿದ್ದರು. ಈಗಲೂ ಅದನ್ನೇ ಕೇಳಿದಾಗ  ಕೆಲವೊಂದಿಷ್ಟು ಎಂದೂ ಕೂಡ ಬದಲಾಗಬಾರದು ಎನಿಸಿತು! ಅಲ್ಲದೇ ನಿಜವಾದ ಆನಂದ ಇರುವುದು ಇಂತಹ ಸಣ್ಣ ಸಣ್ಣ ಕ್ಷಣಗಳಲ್ಲೇ!

ಹಾಗೆಯೇ ಬದಲಾಗದೇ ಇರುವ ಇನ್ನೊಂದು ಅಂಶವನ್ನು ನಾನು ಹೇಳಲೇಬೇಕು. ಆಸ್ಪತ್ರೆಯ ಫೋನ್ ರಿಂಗಾಗುವ ಶಬ್ದ ನನಗೆ ಇಷ್ಟವಾಗುತ್ತಿರಲಿಲ್ಲ. ಅಂದರೆ ಅಷ್ಟು ಕಾಲ ಅಲ್ಲಿದ್ದು, ಅದನ್ನ ಕೇಳಿ ಕೇಳಿ ರೋಸಿ ಹೋಗಿದ್ದು. ಆ ಶಬ್ದ ಬೇರೆ ಕಡೆ ಕೇಳಿದರೂ ಆಸ್ಪತ್ರೆಯ ನೆನಪಾಗುತ್ತಿತ್ತು. ನಾನೀಗಲೂ ಅದನ್ನು ಇಷ್ಟಪಡುವುದಿಲ್ಲ ಎಂದು ಮೊನ್ನೆ ಹೋದಾಗ, ಅದನ್ನು ಕೇಳಿದಾಗಲೇ ಗೊತ್ತಾಗಿದ್ದು!!

ಅಂತೂ ಹೊಸವರ್ಷವನ್ನು ಹಳೆಯ ನೆನಪುಗಳನ್ನು ತಾಜಾಗೊಳಿಸಿಕೊಂಡು ಆರಂಭಿಸಿದ್ದೆ. ಹಳೆಯ ನೆನಪುಗಳ ಮೆಲುಕು ಅನಿವಾರ್ಯವೂ ಹೌದು. ನಾವೇನನ್ನು ದಾಟಿ ಬಂದಿದ್ದೇವೆ, ಈಗ ದಕ್ಕಿರುವ ಈ ಕ್ಷಣ ಎಷ್ಟು ಅಮೂಲ್ಯವಾದದ್ದು ಎನ್ನುವುದರ ಅರಿವಾಗುವುದು ಆಗಲೇ! ಒಂಭತ್ತು ವರ್ಷಗಳ ಈ ಪಯಣವನ್ನು ಮತ್ತೊಮ್ಮೆ ನೋಡಿ ಆರಂಭಿಸಿದ ಈ ವರ್ಷ ಖಂಡಿತವಾಗಿಯೂ ಸುಂದರವಾಗಲಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!