ಆನೆ ನಡೆದದ್ದೇ ದಾರಿ ಎನ್ನುವ ಒಂದು ಮಾತಿದೆ. ಅದು ಇಂದಿನ ಶ್ರೀ ನರೇಂದ್ರ ಮೋದಿ ಸರಕಾರಕ್ಕೆ ಹೆಚ್ಚು ಅನ್ವಯಿಸುತ್ತದೆ. ಹೀಗಾಗಲು ಕಾರಣ ನಮ್ಮ ಭಾವುಕ ಜನ. ಹೌದು ದಶಕಗಳಿಂದ ಜಿಡ್ಡುಗಟ್ಟಿದ ನಮ್ಮ ಮನಸ್ಸಿಗೆ ಸಾಂತ್ವನ ನೀಡುವ ಮಾತನಾಡಿದವರು ಅಪ್ಯಾಯವಾಗುವುದು ಸಹಜ ತಾನೆ? ನಮಗೂ ಆಗಿದ್ದು ಅದೇ. ಮೋದಿ ಸಹಜ ಮಾತುಗಾರ ಮಾತಿನಿಂದ ಜನರನ್ನು ಮೋಡಿ ಮಾಡುವ ಚತುರತೆ ಮತ್ತು ಕಲೆ ಅವರಿಗೆ ಸಿದ್ಧಿಸಿದೆ. ಫಲಿತಾಂಶವಾಗಿ ೨೦೧೪ ರಲ್ಲಿ ಭಾರತದ ಚುನಾವಣೆಯ ಚರಿತ್ರೆಯಲ್ಲಿ ಹಿಂದೆಂದೂ ಕಾಣದ ಯಶಸ್ಸು ಅವರಿಗೆ ಸಿಕ್ಕಿತು. ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ದೇಶದ ಬಗ್ಗೆ, ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿದ್ದು ಸುಳ್ಳಲ್ಲ. ಹೀಗೆ ಭಾರತದ ಭವಿಷ್ಯದ ಬಗ್ಗೆ ಕನಸು ಕಂಡವರಲ್ಲಿ ನಾನೂ ಒಬ್ಬ. ನರೇಂದ್ರ ಮೋದಿಯವರ ವಿರಮಿಸದೆ ಕೆಲಸ ಮಾಡುವ ಶೈಲಿ, ನಡೆ – ನುಡಿಯಲ್ಲಿನ ಗಾಂಭೀರ್ಯ ಇವಕ್ಕೆ ಮನ ಸೋತವರ ಪಟ್ಟಿಯಲ್ಲಿ ಖಂಡಿತ ನನ್ನ ಹೆಸರೂ ಇತ್ತು. ಶ್ರೀ ನರೇಂದ್ರ ಮೋದಿಯವರ ಸರಕಾರ ಮಾಡಿದ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಿ ಅನೇಕ ಲೇಖನಗಳನ್ನೂ ಬರೆದಿದ್ದೇನೆ. ಹಾಗೆಯೇ ಅವರ ಸರಕಾರ ಇಟ್ಟ ತಪ್ಪುಹೆಜ್ಜೆಗಳ ಬಗ್ಗೆಯೂ ಯಾವುದೇ ಅಳುಕಿಲ್ಲದೆ ಹೇಳಿದ್ದೇನೆ. ಇವತ್ತು ಈ ಬರಹ ಬರೆಯಲು ಮುಖ್ಯ ಕಾರಣ ಇದೇ ವಾರ ಸಣ್ಣಉಳಿತಾಯದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿರುವುದು ಮತ್ತು ಬ್ಯಾಂಕ್ಗಳು ಅವ್ಯಾಹತವಾಗಿ ಜನಸಾಮಾನ್ಯರನ್ನು ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಲೂಟಿ ಮಾಡುತ್ತಿರುವುದಾಗಿದೆ. ಏನಿದು ಅನ್ನುವುದನ್ನು ಒಂದೊಂದಾಗಿ ನೋಡೋಣ.
ಕುಸಿಯುತ್ತಿರುವ ಬಡ್ಡಿ ದರ
೨೦೧೪ ರಲ್ಲಿ ಮೋದಿಯವರು ಸರಕಾರದ ಚುಕ್ಕಾಣಿ ಹಿಡಿದಾಗ ಇದ್ದ ಬಡ್ಡಿ ದರ ಮತ್ತು ಇಂದಿನ ಬಡ್ಡಿ ದರದಲ್ಲಿ ೩ ಪ್ರತಿಶತ ಕುಸಿತ ಕಂಡಿದೆ. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳನ್ನು ಭೇಟಿಮಾಡುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಆ ಅನುಭವದಿಂದ ಹೇಳುತ್ತೇನೆ, ಈ ಮಟ್ಟದಲ್ಲಿ ಬಡ್ಡಿ ಬೇರೆ ಯಾವುದೇ ದೇಶದಲ್ಲಿ ಕುಸಿದಿದ್ದರೆ ಆ ದೇಶದಲ್ಲಿ ಆಂತರಿಕ ಕಲಹ ಶುರುವಾಗುತ್ತಿತ್ತು. ನನ್ನ ಓದುಗರಲ್ಲಿ ಮತ್ತು ನನ್ನ ಕ್ಲೈಂಟ್’ಗಳಲ್ಲಿ ಹಿರಿಯ ನಾಗರಿಕರೂ ಕೂಡ ಬಹಳ ಸಂಖ್ಯೆಯಲ್ಲಿ ಇದ್ದಾರೆ. ಅವರಲ್ಲಿ ಲಕ್ಷ್ಮಿಕಾಂತ್ ಒಬ್ಬರು. ಅವರು ಹೇಳುತ್ತಾರೆ ನನಗೆ ತಿಂಗಳಿಗೆ ೨೫ ಸಾವಿರ ಬಡ್ಡಿ ಬರುತಿತ್ತು. ಇಂದಿಗೆ ಅದು ೧೮ ಸಾವಿರಕ್ಕೆ ಕುಸಿದಿದೆ. ಬೆಂಗಳೂರಿನಂತ ನಗರದಲ್ಲಿ ಬದುಕು ನಡೆಸುವುದು ಬಹಳವೇ ಕಷ್ಟವಾಗಿದೆ ಎಂದು. ಇದು ಅವರೊಬ್ಬರ ಕಥೆಯಲ್ಲ, ಅವರಂತಹ ಹನ್ನೆರಡು ಕೋಟಿ ಜನರ ಅಳಲು. ನಮ್ಮದು ಸೋಶಿಯಲ್ ಸೆಕ್ಯೂರಿಟಿ ಇಲ್ಲದ ದೇಶ. ಸರಕಾರಿ ಕೆಲಸದಲ್ಲಿರುವರಿಗೆ ಪಿಂಚಣಿ ಸಿಗುತ್ತೆ, ಆದರೆ ಇತರರ ಗತಿ ಏನು? ಅವರು ಬ್ಯಾಂಕ್’ನಲ್ಲಿ ಠೇವಣಿ ಇಟ್ಟ ಹಣದ ಮೇಲೆ ಬರುವ ಬಡ್ಡಿಯಿಂದ ಜೀವನ ಹೇಗೋ ಸಾಗಿಸುತ್ತಿದ್ದರು. ಈಗ ಕುಸಿದ ಬಡ್ಡಿ ದರದಲ್ಲಿ ಅವರ ಆದಾಯ ಕುಸಿಯಿತು. ಆದರೆ ಬೆಲೆ ಮತ್ತು ಖರ್ಚು? ಇಂತವರು ಬದುಕುವುದು ಹೇಗೆ? ನರೇಂದ್ರ ಮೋದಿಯವರೇ ನೀವು ಕೂಡ ಬಡತನದಿಂದ ಬಂದವರು, ನಮ್ಮ ದೇಶವನ್ನು ಚೆನ್ನಾಗಿ ಅರಿತವರು. ನಮ್ಮ ದೇಶದ ಬೆನ್ನೆಲುಬು ಸಣ್ಣ ಉಳಿತಾಯ, ನೀವು ಅದಕ್ಕೆ ಕೊಳ್ಳಿಇಟ್ಟರೆ ಹೇಗೆ? ಜನ ಸಾಮಾನ್ಯ ಉಳಿತಾಯ ಏಕೆ ಮಾಡಬೇಕು? ಇಟ್ಟ ಹಣಕ್ಕೆ ತಕ್ಕ ಬಡ್ಡಿ ಬಾರದ ಮೇಲೆ ಅವನು ಉಳಿತಾಯದಲ್ಲಿ ಆಸಕ್ತಿ ಕಳೆದುಕೊಳ್ಳುವುದಿಲ್ಲವೇ? ಹೀಗೆ ಬಡವನ, ಜನಸಾಮಾನ್ಯನ ಬಡ್ಡಿ ಕಡಿತಗೊಳಿಸಿ ಅದನ್ನ ನೀವು ಕೊಟ್ಟಿದ್ದಾದರೂ ಯಾರಿಗೆ?
ಉದಾಹರಣೆ ನೋಡಿ, ದೈತ್ಯ ಕಾರ್ಪೊರೇಟ್ ಸಂಸ್ಥೆಗಳು ಹತ್ತು ರೂಪಾಯಿ ಬಡ್ಡಿ ನೀಡಿ ಲಕ್ಷ ರೂಪಾಯಿ ಸಾಲ ಪಡೆಯುತ್ತಿದ್ದವು. ಇದೀಗ ಅದೇ ಹತ್ತು ರುಪಾಯಿಗೆ ಲಕ್ಷದ ಜಾಗದಲ್ಲಿ ಒಂದೂವರೆ ಲಕ್ಷ ಸಿಗುತ್ತದೆ. ಅಂದರೆ ಅವರ ಪಾಲಿಗೆ ಡೆಟ್ ಮತ್ತಷ್ಟು ಅಗ್ಗವಾಯಿತು. ಜನ ಸಾಮಾನ್ಯನ ಬದುಕು ಅದಕ್ಕಿಂತ ಕೇವಲವಾಗಿ ಹೋಗಿದೆ. ನೀವು ಮಾಡಿದಕ್ಕೆಲ್ಲ ಜೈಕಾರ ಹಾಕುವ ನಿಮ್ಮ ಅಂಧಾಭಿಮಾನಿಗಳು ಹೀಗೆ ಬಡ್ಡಿ ಕಡಿಮೆ ಮಾಡುವುದರಿಂದ ಗೃಹಸಾಲ ಕೂಡ ಕಡಿಮೆಯಾಗಿಲ್ಲವಾ? ಎನ್ನುವ ಪ್ರಶ್ನೆ ಹಾಕುತ್ತಾರೆ. ಸತ್ತು ಬಿದ್ದಿರುವ ರಿಯಲ್ ಎಸ್ಟೇಟ್ ದಂಧೆಗೆ ಮರುಜೀವ ಕೊಡಲು ಮಾಡಿರುವ ಹುನ್ನಾರ ಇದು ಎಂದು ಇವರಿಗೆ ತಿಳಿ ಹೇಳುವುದು ಹೇಗೆ? ಇನ್ನಷ್ಟು ಜನ ಇದರಿಂದ ದೈತ್ಯ ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಿನ ಕೆಲಸವನ್ನು ಸೃಷ್ಟಿಸಲು ಸಾಧ್ಯ ಎಂದರು. ಹೊಸ ಕೆಲಸದ ಸೃಷ್ಟಿ ಆಗಿದೆಯೇ? ಕೊಬ್ಬಿ ಗೂಳಿಯಂತಿದ್ದ ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚಿನ ಮೇವು ಸಿಕ್ಕಿದೆ ಅಷ್ಟೇ. ಭಾರತದಲ್ಲಿ ೧೨ ಕೋಟಿಗೂ ಮೀರಿದ ಹಿರಿಯ ನಾಗರಿಕರಿದ್ದಾರೆ. ಅವರಿಗೆ ಬೇಸಿಕ್ ವೈದ್ಯಕೀಯ ಸೌಲಭ್ಯವಿಲ್ಲ. ಅವರ ಜೀವನದ ಹೊಣೆ ಅವರ ಮೇಲೆ ಇದೆ. ಇದೀಗ ನಿಮ್ಮ ಹುಚ್ಚಾಟದ ಪ್ರಯೋಗದಲ್ಲಿ ಅವರ ಆದಾಯ ಕುಸಿದಿದೆ . ಅವರ ನೋವಿಗೆ ನೀವು ಮೂಲ ಕಾರಣ.
ಬ್ಯಾಂಕ್ ಎನ್ನುವ ಹುಚ್ಚಾಸ್ಪತ್ರೆ
ಬ್ಯಾಂಕ್ಗಳು ಇಂದು ಬ್ಯಾಂಕ್ಗಳಾಗಿ ಉಳಿದಿಲ್ಲ ಅದೊಂದು ಹುಚ್ಚಾಸ್ಪತ್ರೆ ಎನ್ನಿಸುತ್ತದೆ. ಅವರು ಹಾಕುತ್ತಿರುವ (ಜಡಿಯುತ್ತಿರುವ ಎನ್ನುವ ಪದ ಹೆಚ್ಚು ಸೂಕ್ತ ) ಚಾರ್ಜುಗಳು ಸಾಮಾನ್ಯನ ಜೀವನವನ್ನು ನರಕ ಸದೃಶವಾಗಿಸಿದೆ. ಅಲ್ಲ ಸ್ವಾಮಿ, ನೀವು ತಳ ಮಟ್ಟದಿಂದ ಬಂದವರು, ನಿಮಗೆ ನಮ್ಮ ದೇಶದ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. ಇಂತಹ ಮನೆಹಾಳು ಕೆಲಸ ರಾಹುಲ್ ಗಾಂಧಿಯ ಸರಕಾರ ಮಾಡಿದ್ದರೆ ಆತನಿಗೆ ನಮ್ಮ ದೇಶದ ಬಗ್ಗೆ ಏನು ಗೊತ್ತು ಎನ್ನಬಹುದಿತ್ತು. ಆದರೆ ನಿಮ್ಮ ಸರಕಾರ ಮಾಡಿದ್ದೇನು? ಬ್ಯಾಂಕ್ಗಳು ತಮ್ಮ ಇಚ್ಚೆಯಂತೆ ಫೀಸ್ ಜಡಿಯಲು ಬಿಟ್ಟಿರಲ್ಲ… ನಮ್ಮ ದೇಶದ ಜನ ಸಾಮಾನ್ಯನ ತಲಾದಾಯ ನಿಮಗೆ ಗೊತ್ತಿಲ್ಲದೇ ಇರುವ ವಿಷಯವೇನು ಅಲ್ಲ. ಹತ್ತುಸಾವಿರ ರೂಪಾಯಿ ಮಾಸಿಕ ಸಂಬಳದಲ್ಲಿ ಮೂರು ಸಾವಿರವೋ ಅಥವಾ ಎರಡು ಸಾವಿರವೋ ಆತನೇಕೆ ಮಿನಿಮಮ್ ಬ್ಯಾಲೆನ್ಸ್ ಬ್ಯಾಂಕಿನಲ್ಲಿ ಇಡಬೇಕು? ಎಸ್.ಬಿ.ಐ. ಕಳೆದ ಏಪ್ರಿಲ್’ನಿಂದ ನವೆಂಬರ್ ತಿಂಗಳವರೆಗೆ ಮಿನಿಮಮ್ ಬ್ಯಾಲೆನ್ಸ್ ಇಟ್ಟಿಲ್ಲ ಎನ್ನುವ ಕಾರಣಕ್ಕೆ ಜನರಿಂದ ಸಾವಿರದ ಏಳುನೂರು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪೆನಾಲ್ಟಿ ರೂಪದಲ್ಲಿ ವಸೂಲಿ ಮಾಡಿದೆ. ಮೋದಿಜಿ ನಿಮಗೆ ಗೊತ್ತಿರುತ್ತೆ, ಆದರೂ ಹೇಳುತ್ತೇನೆ ಕೇಳಿ, ಎಸ್.ಬಿ.ಐ. ಒಟ್ಟು ಗ್ರಾಹಕರ ಸಂಖ್ಯೆ ಹತ್ತಿರತ್ತಿರ ೩೭ ಕೋಟಿ. ಅಷ್ಟು ಜನರ ಬಳಿ ಆವರೇಜ್ ಮೂರು ಸಾವಿರ ಇಡಿಸಿಕೊಂಡರೆ ಬ್ಯಾಂಕಿಗೆ ಬಂದ ಬಿಟ್ಟಿ ಹಣದ ಲೆಕ್ಕ ನೀವೇ ಹಾಕಿ. ಇದು ಸಾಲದು ಎನ್ನುವಂತೆ ಒಂದಷ್ಟು ಟ್ರಾನ್ಸಾಕ್ಷನ್ ನಂತರ ಜಡಿಯುವ ಫೀಸ್’ಗಳ ಲೆಕ್ಕವನ್ನು ನಾನು ಇಲ್ಲಿ ಕೊಡಲು ಹೋಗುವುದಿಲ್ಲ. ಒಂದು ಕಡೆ ಡಿಜಿಟಲ್ ಎನ್ನುತ್ತೀರಿ, ಇನ್ನೊಂದು ಕಡೆ ಜನ ಬ್ಯಾಂಕಿಗೆ ಹೆದರಿ ದೂರ ಹೋಗುವಂತ ವಾತಾವರಣ ನೀವೇ ಸೃಷ್ಟಿಸುತ್ತೀರಿ ಹೀಗೇಕೆ ?
ಜಿಎಸ್ಟಿ ಎನ್ನುವ ಪೂರ್ವತಯಾರಿ ಇಲ್ಲದೆ ನೆಡೆಸುತ್ತಿರುವ ಕಸರತ್ತು
ನಿಮ್ಮ ಮಾತುಗಳನ್ನು ಕೇಳಿದರೆ ನೀವೊಬ್ಬ ದಾರ್ಶನಿಕ ಎನ್ನುವ ಭಾವನೆ ಸಾಮಾನ್ಯನಲ್ಲಿ ಹುಟ್ಟುತ್ತದೆ. ಆದರೆ ನೀವೇನು ಮಾಡಿದಿರಿ, ಜಿ.ಎಸ್.ಟಿ. ಎನ್ನುವ ಹೊಸ ತೆರಿಗೆ ನೀತಿಯನ್ನ ಡಿಮಾನಿಟೈಸಷನ್ ತರಹ ರಾತ್ರೋರಾತ್ರಿ ಚಾಲನೆಗೆ ತಂದು ಬಿಟ್ಟಿರಿ. ಅದಕ್ಕೆ ಬೇಕಾದ ಪೂರ್ವಸಿದ್ಧತೆ ಮಾಡಿಕೊಳ್ಳಲೇ ಇಲ್ಲ. ಸಣ್ಣ ಮತ್ತು ಮಧ್ಯಮ ವರ್ಗದ ವರ್ತಕರಲ್ಲಿ ತೆರಿಗೆ ಕಟ್ಟಲು ಹಿಂಜರಿಕೆಯಿಲ್ಲ. ನಿಮ್ಮ ಜಿ.ಎಸ್.ಟಿ. ವೆಬ್’ಸೈಟ್ ಕ್ರ್ಯಾಶ್ ಆಗುವುದರ ಕುರಿತು ಭಯವಿದೆ. ಈ ವೆಬ್’ಸೈಟ್ ಆಗಾಗ ಕುಸಿಯುತ್ತದೆ. ಮಜಾ ನೋಡಿ ಇಲ್ಲಿನ ಫ್ಲಿಪ್’ಕಾರ್ಟ್ ಮತ್ತು ಅಮೆಜಾನ್ ವೆಬ್ ಸೈಟ್’ಗಳು ಮೆಗಾಸೇಲ್ ವೇಳೆಯಲ್ಲೂ ಕುಸಿಯುವುದಿಲ್ಲ. ಜನರಿಗೆ ಜಿ.ಎಸ್.ಟಿ. ಬಗ್ಗೆ ಒಂದಷ್ಟು ತಿಳುವಳಿಕೆ ಕೊಟ್ಟು ಅದನ್ನು ಜಾರಿಗೆ ತರಬಹುದಿತ್ತು. ಇದೀಗ ವಿಷಯ ತಜ್ಞರ ಕೊರತೆ ಹೆಚ್ಚಾಗಿ ಕಾಡುತ್ತಿದೆ. ತಜ್ಞರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಹೀಗಿರುವಾಗ ವ್ಯಾಪಾರಿ ಏನು ಮಾಡಬೇಕು ?
ಗುಜರಾತ್ ಚುನಾವಣೆಯಲ್ಲಿ ಐದುಲಕ್ಷ ಐವತ್ತು ಸಾವಿರ ಕುಲಗೆಟ್ಟ ಮತ ಚಲಾವಣೆಯಾಗಿದೆ (NOTA ) ಅಂದರೆ ಮೋದಿಯವರೇ ಗಮನಿಸಿ, ಅವರು ರಾಹುಲ್ ಗಾಂಧಿ ಬೇಡ ಎನ್ನುವ ಜೊತೆಗೆ ನಿಮ್ಮನ್ನೂ ತಿರಸ್ಕರಿಸಿದ್ದಾರೆ . ಬಿಜೆಪಿ ಮತ್ತು ಕಾಂಗ್ರೆಸ್ ನಂತರ ಅತಿ ಹೆಚ್ಚು ಮತ ಕುಲಗೆಟ್ಟ ಮತ ಎಂದರೆ ಜನ ಯಾವ ಮಟ್ಟಿಗೆ ಬೇಸತ್ತಿದ್ದಾರೆ ಎನ್ನುವುದನ್ನು ತಿಳಿಯಿರಿ. ಬುಲೆಟ್ ಟ್ರೈನ್ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಓಲೈಕೆ ಇರಲಿ, ಆದರೆ ಅದು ಸಾಮಾನ್ಯ ಮನುಷ್ಯನ ಬಲಿ ಕೊಟ್ಟು ಆಗದಿರಲಿ. ಸದ್ಯದ ಮಟ್ಟಿಗೆ ನಿಮ್ಮ ಸರಕಾರ ತೆಗೆದು ಕೊಂಡಿರುವ ವಿತ್ತ ನೀತಿಗಳು ಜನ ಸಾಮಾನ್ಯನ ಪರವಾಗಿಲ್ಲ. ಭಾರತದ ಬೆನ್ನೆಲುಬು ಸಣ್ಣ ಉಳಿತಾಯ, ನೀವು ಬೆನ್ನೆಲುಬು ಮುರಿದು ಮ್ಯಾರಥಾನ್ ಓಡು ಎನ್ನುತ್ತೀರಿ ಅದು ಹೇಗೆ ಸಾಧ್ಯ ?
ಇಷ್ಟೆಲ್ಲಾ ಪ್ರಯೋಗಗಳು ಬೇರೆ ಯಾವುದಾದರೂ ದೇಶದಲ್ಲಿ ಆಗಿದ್ದರೆ ಆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತಿತ್ತು. ಆ ಮಟ್ಟದ ಆಂತರಿಕ ಕಲಹ ಅಲ್ಲಾಗುತ್ತಿತ್ತು. ಆದರೆ ನಮ್ಮ ಭಾರತದಲ್ಲಿ ಏನೂ ಆಗಿಲ್ಲವೇನೂ ಅನ್ನುವಂತಿದೆ. ಅದಕ್ಕೆ ಮೋದಿಯವರ ಮೇಲೆ ಜನ ಇಟ್ಟಿರುವ ವಿಶ್ವಾಸ ಎಷ್ಟು ಕಾರಣವೋ ಅಷ್ಟೇ ಅವರ ಮೇಲೆ ಕೆಲ ಜನರು ತೋರಿಸುತ್ತಿರುವ ಅಂಧಾಭಿಮಾನವೂ ಕಾರಣ ಮತ್ತು ನಮ್ಮ ನಾಗರಿಕರಲ್ಲಿ ಅವರ ಹಕ್ಕು ಮತ್ತು ಭಾದ್ಯತೆಗಳ ಬಗ್ಗೆ ಇರದ ಅರಿವು. ನಮ್ಮ ಪರಿಸ್ಥಿತಿ ನೋಡಿ ನಮಗೆ ಬೇರೆ ಆಯ್ಕೆಯೂ ಇಲ್ಲ.
ಮೋದಿ ಮಾಡಿದ್ದೆಲ್ಲವೂ ತಪ್ಪು ಎನ್ನುವುದು ನನ್ನ ಅಭಿಪ್ರಾಯವಲ್ಲ. ಇನ್’ಫ್ಯಾಕ್ಟ್, ಡಿಮಾನಿಟೈಸೇಷನ್, ಜಿ.ಎಸ್.ಟಿ. ಮುಂತಾದವುಗಳನ್ನು ಬೆಂಬಲಿಸಿ ಬರೆದವನು ನಾನು. ಆದರೆ ಆ ಬಳಿಕ ಬ್ಯಾಂಕ್’ಗಳು ಹಗಲು ದರೋಡೆಗಿಳಿದಿರುವುದನ್ನು ನೋಡುತ್ತಾ ಕೂರಲು ಸಾಧ್ಯವಿಲ್ಲ. ಹೇಗೆ ಮೋದಿ ಮಾಡಿದ್ದೆಲ್ಲವೂ ತಪ್ಪು ಎನ್ನಲು ಸಾಧ್ಯವಿಲ್ಲವೋ ಹಾಗೆಯೇ ಮೋದಿ ಮಾಡಿದ್ದೆಲ್ಲವೂ ಸರಿ ಎನ್ನಲೂ ಸಾಧ್ಯವಿಲ್ಲ!