ಅಂಕಣ

ಗೆಲುವಿನ ಸೌಧಕ್ಕೆ ಅಡಿಗಲ್ಲಾದ ನಾಯಕರು…

ನಾಯಕ,  ಪದವೊಂದಕ್ಕೆ ಹಲವಾರು  ವ್ಯಾಖ್ಯಾನಗಳಿವೆ. ಮುಂದಾಳು, ಗಟ್ಟಿಗ, ನಿಪುಣ, ಚಿಂತಕ, ಧೀರ ಎಂಬ ಕೆಲವು ಅಥವಾ ಇನ್ನೂ ಹಲವು ಸಮರೂಪಿ ಸಂದೇಶ ಸಾರುವ ಪದಗಳ ಸಮ್ಮಿಶ್ರಣದ ವ್ಯಕ್ತಿತ್ವ ನಾಯಕನೆನಿಸಿಕೊಳ್ಳುತ್ತದೆ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ದಿನಜೀವನದಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಕೆಲವು ನೋಡಲು ಚೆಂದವೆನಿಸಿದರೆ ಇನ್ನೂ ಕೆಲವು ಕೇಳಲಷ್ಟೇ ಲಾಯಕ್ಕಾಗಿರುತ್ತವೆ! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಎಂಬುದು ಕೇವಲ ಆಟವಲ್ಲ. ಅದೊಂದು ಭಾರಿ ಪ್ರೊಫೆಶನ್. ತಾಳ್ಮೆ, ನಿಖರತೆ, ಪೂರ್ವಭಾವಿ ಚಿಂತನೆ, ವ್ಯಕ್ತಿತ್ವ ವಿಕಸನ, ತಂತ್ರಗಾರಿಕೆ, ಸಂವಹನ ಎಂಬೆಲ್ಲ ಹಲವು ಅಂಶಗಳು ಸೇರಿ, ಕೇವಲ ಮನೋರಂಜನೆಯ ತಾಣವಾಗಷ್ಟೇ ಉಳಿದಿಲ್ಲ. ಶತಮಾನಗಳ ಇತಿಹಾಸವಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಸಹ ಹೀಗೆಯೇ ಕೇವಲ ಮನೋಲ್ಲಾಸಕೆಂದು ಆಡಲು ಶುರುವಾಗಿ ಇಂದು ಜೆಂಟಲ್ ಮ್ಯಾನ್ ಗೇಮ್ ಎನ್ನಿಸಿಕೊಂಡಿದೆ. ಭಾರತದಲ್ಲಿ ಕೇವಲ ರಾಜ ಮಹರಾಜಾರುಗಳಿಗಷ್ಟೇ ಸೀಮಿತವಾಗಿದ್ದ ಆಟವೊಂದು ಇಂದು ಸಕಲರಿಗೂ ಸಲ್ಲುವ ಹೊಂಗಿರಣವಾಗಿದೆ. ಕಳೆದ ನಾಲ್ಕೈದು ದಶಕಗಳಿಂದೀಚೆಗಂತೂ ದೇಶದ ಜನಮನದ ಅತ್ಯಾಪ್ತ ಅಂಶವಾಗಿಬಿಟ್ಟಿದೆ. ಹೀಗೆ ಕೇವಲ ದಶಕಗಳ ಅಂತರಲ್ಲಿ ಭಾರತೀಯ ಕ್ರಿಕೆಟ್ ಜಗತ್ತೇ ಹುಬ್ಬೇರುವಂತೆ ಬೆಳೆದು, ಹೊಳೆದು, ಉತ್ತುಂಗಕ್ಕೇರಿ ರಾರಾಜಿಸಲು ಕಾರಣಗಳು ಹಲವಿರಬಹುದು. ಅಂತಹ ಹಲವು ಕಾರಣಗಳಲ್ಲಿ ನಾಯಕನೆಂಬ ಅಂಶವೂ ಒಂದು. ಕಳೆಗುಂದಿದ ತಂಡದ ಚೈತನ್ಯನಾಗಿ, ತಂಡದೊಳಗಿನ ಕಿತ್ತಾಟ ಮನಸ್ತಾಪಗಳ ಶಮನವಾಗಿ, ಗೆಲುವಿನಲ್ಲಿ ಹಿಂದಿದ್ದು ಕಷ್ಟಗಾಲದಲ್ಲಿ ಮುಂಬಂದು ಎದೆಯೊಡ್ಡುವ ಧೀರನಾಗಿ ಅಷ್ಟೇ ಅಲ್ಲದೆ ತನ್ನ ನಂತರದ ಪೀಳಿಗೆಗಾಗಿ ಸದೃಢ ತಂಡದ ಬುನಾದಿಯೊಂದನ್ನು ಹಾಕಿಕೊಟ್ಟು ಹೋಗುವ/ಹೋಗಿರುವ ಹಲವಾರು ನಾಯಕರಿಂದ ಇಂದು ಟೀಮ್ ಇಂಡಿಯಾ ಎಂಬುದೊಂದಾಗಿದೆ. ಟೆಸ್ಟ್ ಪಂದ್ಯವನ್ನು ಆಡಲು ಶುರುವಿಟ್ಟು ಸುಮಾರು 86 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಭಾರತ ಇಂತಹ ಹಲವಾರು ನಾಯಕರನ್ನು ಕಂಡಿದೆ.

ಆಗೆಲ್ಲ ದೇಶದಲ್ಲಿ ಕ್ರಿಕೆಟ್ ಎಂದರೆ ಬಾಂಬೆ, ಮದ್ರಾಸ್, ದೆಹಲಿ, ಕೋಲ್ಕತ್ತ ಎಂಬಷ್ಟೇ ವಲಯಗಳಿಗೆ ಸೀಮಿತವಾಗಿದ್ದವು. ಒಬ್ಬ ಆಟಗಾರ ಕ್ರಿಕೆಟರ್ ಎಂದೆನಿಸಿಕೊಳ್ಳುವುದಕ್ಕೆ ಹೆಚ್ಚಾಗಿ ಇವಿಷ್ಟೇ ವಲಯವೊಂದರಾವುದರಲ್ಲಾದರೂ ಬೆವರು ಸುರಿಸಬೇಕಾಗಿದ್ದಿತು. ಅಲ್ಲದೆ ವಲಯಗಳಲ್ಲಿನ ಭೇದಭಾವಗಳೂ ಕೊಂಚ ಹೆಚ್ಚಾಗೇ ಇದ್ದ ಕಾಲವದಾಗಿತ್ತು. ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಹತ್ತಿರಹತ್ತಿರ ಮೂರು ದಶಕಗಳಾಗಿದ್ದರೂ ಕನಿಷ್ಠ ಒಂದಾದರೂ ಪಂದ್ಯವನ್ನು ಭಾರತ ತಂಡ ವಿದೇಶಿ ನೆಲದಲ್ಲಿ ಗೆದ್ದಿರಲಿಲ್ಲ. ಅಲ್ಲೊಂದು ಇಲ್ಲೊಂದು ಪಂದ್ಯಗಳ ಡ್ರಾ ಅನ್ನು ಬಿಟ್ಟರೆ ಉಳಿದಂತೆ ಸರಣಿ ಸರಣಿ ಸೋಲುಗಳೇ ತಂಡದ ಸಾಧನೆಯಾಗಿರುತ್ತಿತ್ತು. ಅಂತಹ ಕಾಲಘಟ್ಟದಲ್ಲಿ ತಂಡವನ್ನು ಮುನ್ನೆಡಸಲು ಬಂದವನೇ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಅಥವಾ ಕ್ರಿಕೆಟ್ ಪ್ರಿಯರ  ಟೈಗರ್ ಪಟೌಡಿ. ಹೆಸರಿಗೆ ತಕ್ಕಂತೆ ಆತ ಕೇವಲ ಒಬ್ಬ ನವಾಬನಂತಿರದೆ ಹುಲಿಯ ಕೆಚ್ಚನ್ನು ತಂಡದಲ್ಲಿ ಹಚ್ಚಿಸಿದ ನಾಯಕನಾಗಿದ್ದ. 1961 ರಲ್ಲಿ  ಟೈಗರ್ ತಂಡದ ಚುಕ್ಕಾಣಿಯನ್ನು ಹಿಡಿದಾಗ ಆತನಿಗೆ ಕೇವಲ 21 ವರ್ಷಗಳು! ಆಡಿದ್ದ ಪಂದ್ಯಗಳು ಕೇವಲ ಮೂರೇ ಮೂರು!! ಸಂಪೂರ್ಣ ಹಿರಿಯರ ಅತಿ ಕಿರಿಯ ನಾಯಕನಾಗಿ ತಂಡವನ್ನು ನಡೆಸಿದ ಆತ, ಎಲ್ಲಾ ಅಂದುಕೊಂಡಂತೆ ತಂಡದ ಜೋಳಿಗೆಗೆ ಮಗದೊಂದು ಸೋಲಿನ ಉಡುಗೊರೆಯನ್ನು ಗಳಿಸಲಿಲ್ಲ. ಕಡೆಯಪಕ್ಷ ಗೆಲ್ಲಲಾಗದಿದ್ದರೂ ಅಂದು ಪಂದ್ಯವನ್ನು ಡ್ರಾ ನಲ್ಲಿ ಅಂತ್ಯಗೊಳ್ಳುವಂತೆ ಮಾಡಿದ್ದ ಚಿಗುರು ಮೀಸೆಯ ಪೋರ. ಆ ಮೂಲಕ ದೇಶೀ ಕ್ರಿಕೆಟ್ ವಲಯದಲ್ಲಿ ಒಂದು ಬಗೆಯ ನವಚೈತನ್ಯನ್ನು ಮೂಡಿಸಿದ್ದ. ಟೆಸ್ಟ್ ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ಮಹತ್ವವನ್ನು ಅರಿತಿದ್ದ ಪಟೌಡಿ ಮೂರು ಸ್ಪಿನ್ನರ್ಗಳ ತಂಡವನ್ನು ಆಟದ ಕಣಕ್ಕೆ ಇಳಿಸಲು ಮೊದಲುಮಾಡಿದ. ಅಲ್ಲಿಂದ ಮುಂದೆ ಸದೃಢ ಸ್ಪಿನ್ನರ್ಗಳ ತಂಡವೊಂದನ್ನು ಕಟ್ಟುವಲ್ಲಿ ಯಶಸ್ವಿಯಾದ. ಇಂದು ಏರಪಲ್ಲಿ ಪ್ರಸನ್ನ, ವೆಂಕಟರಾಘವನ್,  ಚಂದ್ರಶೇಖರ್ ಅಥವಾ ಭೀಷನ್ ಸಿಂಗ್ ಬೇಡಿಯೆಂಬ ಸ್ಪಿನ್ ಮಾಂತ್ರಿಕರ ಹೆಸರನ್ನು ನಾವು ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆಂದರೆ ಅದರ ಬಹುಪಾಲು ಶ್ರೇಯ ನಾಯಕ ಪಟೌಡಿಗೂ ಸಲ್ಲಬೇಕು. ಅಂತೂ 1967 ರ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಮೂರುವರೆ ದಶಕಗಳಿಂದಲೂ ಕಾಡುತ್ತಿದ್ದ ಬರವನ್ನು ಪಟೌಡಿ ಹಾಗು ತಂಡ ಕೊನೆಗೊಳಿಸಿತು. ಭಾರತ ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಗೆಲವು ಹಾಗು ಸರಣಿ ಗೆಲುವನ್ನೂ ತನ್ನದಾಗಿಸಿಕೊಂಡಿತು. ಅಪಘಾತವೊಂದರಲ್ಲಿ ತನ್ನ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಮುಂದೆಂದೂ ಕ್ರಿಕೆಟ್ ಅನ್ನು ಆಡಲಾಗದು ಎಂಬಂತಹ ಸಂದರ್ಭದಲ್ಲಿ ಕೆಲ ತಿಂಗಳಾಗುವುದರೊಳಗೆಯೇ ಮತ್ತೊಮ್ಮೆ ಆಟದ ಅಂಗಳಕ್ಕೆ ಇಳಿದು ಶತಕವೊಂದನ್ನು ಭಾರಿಸುವ ಕೆಚ್ಚೆದೆ ಪಟೌಡಿಯದಾಗಿದ್ದಿತು. ಇದೇ ಕೆಚ್ಚೆದೆಯ ನಾಯಕತ್ವ ಮುಂದೆ ಹಲವಾರು ಆಟಗಾರರಿಗೆ ಸ್ಫೂರ್ತಿಯಾಯಿತು.

1975 ರಷ್ಟರಲ್ಲಿ ಪಟೌಡಿ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಅಷ್ಟರೊತ್ತಿಗೆ ಭಾರತ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಛಾಪನ್ನು ಮೂಡಿಸುತ್ತಿತ್ತಾದರೂ, ದೇಶದ ಮಟ್ಟಕ್ಕೆ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾದರೂ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ನನ್ನು ತನ್ನದಾಗಿರಿಸಿಕೊಂಡಿರಲಿಲ್ಲ. ಅಂತಹ ಒಂದು ಮೇಜರ್ ಬ್ರೇಕಿಗೋಸ್ಕರ ತಂಡ ಸನ್ನದ್ಧವಾಗಿದ್ದಿತು. ಅದು ವಿಶ್ವಕಪ್ 1983. ಜೂನ್ 18. ಭಾರತ ಸರಣಿಯಲ್ಲಿ ನಾಲ್ಕು ಪಂದ್ಯಗಳಾಡಿ ಎರಡರಲ್ಲಿ ಗೆದ್ದು ಮತ್ತೆರಡರಲ್ಲಿ ಸೋತಿದ್ದಿತು. ಜಿಂಬಾಬ್ವೆ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಭಾರತ ಕೇವಲ ಒಂಬತ್ತು ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಎದುರಾಳಿ ತಂಡಕ್ಕೆ ಒಪ್ಪಿಸಿತು. ತಂಡದ ಅಗ್ರಮಾನ್ಯ ಆಟಗಾರರೆಲ್ಲ ಪೆವಿಲಿಯನ್ ತಲುಪಿ ಇನ್ನೇನು ಕೆಲವೇ ನಿಮಿಷಗಳಲ್ಲಿ ತಂಡ ಆಲೌಟ್ ಆಗುತ್ತದೆ ಎನ್ನುವಾಗ ಬ್ಯಾಟ್ ಬೀಸಲು ಬಂದವನೇ ಇಪ್ಪತ್ತನಾಲ್ಕು ವರ್ಷ, ಆರು ಅಡಿ ಎತ್ತರದ ನಾಯಕ ಕಪಿಲ್ ದೇವ್. ಇಡೀ ಇನ್ನಿಂಗ್ಸ್ನನ್ನು ಕಟ್ಟುವ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಎಳೆದುಕೊಂಡ ಈತ ಆಗಿನ ಕಾಲಕ್ಕೆ ಯಾರು ಕೇಳರಿಯದ ಮಟ್ಟದ ಬ್ಯಾಟಿಂಗ್ನನ್ನು ಅಲ್ಲಿಪ್ರದರ್ಶಿಸುತ್ತಾನೆ. ಒಂದು ಸಮಯಕ್ಕೆ 17 ರನ್ಗಳನ್ನು ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ತಂಡ ಇನ್ನಿಂಗ್ಸ್ ಮುಗಿಯುವಾಗ ಬರೋಬ್ಬರಿ 266 ರನ್ಗಳನ್ನು ತನ್ನ ಖಾತೆಯಲ್ಲಿ ಇರಿಸಿಕೊಂಡಿತ್ತು. 16 ಬೌಂಡರಿ ಹಾಗು 6 ಸಿಕ್ಸರ್ಗಳನ್ನು ಒಳಗೊಂಡ 175 ರನ್’ಗಳ ಪ್ರಚಂಡ ಆಟವನ್ನು ಆಡಿ ಕಪಿಲ್ ಒಂದು ಬದಿಯಲ್ಲಿ ಅಜೇಯನಾಗಿ ಉಳಿದಿದ್ದ. ನಂತರದ ಇನ್ನಿಂಗ್ಸ್ ನಲ್ಲಿ ಜಿಂಬಾಂಬೆಯನ್ನು 235 ರನ್ ಗಳಿಗೆ ಕಟ್ಟಿಹಾಕಿ ತಂಡಸರಣಿಯಲ್ಲಿ ಮರುಜೀವವನ್ನು ಪಡೆಯಿತು. ನಂತರ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ನನ್ನು ಮಣಿಸಿ ದೈತ್ಯ ವೆಸ್ಟ್ ಇಂಡೀಸ್ ವಿರುದ್ದದ ಫೈನಲ್ಸ್ ಗೆ ಅಣಿಯಾಯಿತು. ಅಂದು ಸೋಲೆಂಬುದು ಭಾರತಕ್ಕೆ ಕಟ್ಟಿಟ್ಟ ಬುತ್ತಿ ಎಂಬುದು ಬಹುಪಾಲು ಜನರಿಗೆ ಸಹಜವಾಗಿಯೇ ಅನ್ನಿಸಿದ್ದ ವಿಷಯ. ಆದರೆ ಕಪಿಲ್ ತಂಡವನ್ನು ಯಾವುದೇ ಆತಂಕಗಳಿಗೂ ಎಡೆಮಾಡಿಕೊಡದೆ ಮುನ್ನಡೆಸುತ್ತಾನೆ. ಭಾರತ ನೀಡಿದ 183 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ಗೆ ಗೆಲುವು ನೀರು ಕುಡಿದಷ್ಟೇ ಸುಲಭವಾಗಿದ್ದಿತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮತ್ತೊಮ್ಮೆ ಆಸರೆಯಾದವನು ಅದೇ ನಾಯಕ. ಮದನ್ ಲಾಲ್ರ ಎಸೆತವನ್ನು ವೆಂಡಿಸ್ ನ ಲೆಜೆಂಡ್ VVN ರಿಚರ್ಡ್ಸ್ ಮಿಡ್ ವಿಕೆಟ್ನ ಕಡೆಗೆ ಬಾರಿಸಿದಾಗ ಬಹುಪಾಲು ಮಂದಿ ಆಕಾಶದಲ್ಲಿ ತೇಲುತ್ತಿದ್ದ ಬಾಲನ್ನು ನೋಡುತ್ತಿದ್ದರೆ ವಿನಃ ಮಿಂಚಿನ ವೇಗದಲ್ಲಿ ಕಪಿಲ್ ಅದೇ ದಿಕ್ಕಿನಲ್ಲಿ ಓಡುವುದನ್ನು ಗಮನಿಸಲಿಲ್ಲ! ಕಷ್ಟಕರವಾಗ ಆ ಕ್ಯಾಚ್ ಅನ್ನು ಕಪಿಲ್ ಹಿಡಿದಿದ್ದೆ ತಡ ನೆರೆದಿದ್ದ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಇತ್ತ ಕಡೆ ಸೋಲು ಗ್ಯಾರಂಟಿ ಎಂದು ಕೈಚೆಲ್ಲಿ ಕೂತಿದ್ದ ಲಕ್ಷಾಂತರ ಭಾರತೀಯರ ರೋಮರೋಮಗಳು ಎದ್ದು ನಿಂತವು.  ವಿಶ್ವಕಪ್ ಅನ್ನು ಎತ್ತಿ ಹಿಡಿದಷ್ಟೇ ಖುಷಿಯಲ್ಲಿ ದೇಶ ಸಂಭ್ರಮಿಸಿತು! ಆ ಕ್ಯಾಚಿನ ಮುಖೇನ ಕಪಿಲ್ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದನು. ಅಲ್ಲಿಂದ ಮುಂದಕ್ಕೆ ತರಗಲೆಗಳಂತೆ ಉದುರತೊಡಗಿದ ವಿಂಡೀಸ್ ತಂಡ 140 ರನ್ ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಒಪ್ಪಿಸಿ ಚೊಚ್ಚಲ ಪ್ರಶಸ್ತಿಗೆ ಭಾರತವನ್ನು ಭಾಜನವಾಗುವಂತೆ ಮಾಡಿತು. ಇಡೀ ಸರಣಿಯಲ್ಲಿ ಕಪಿಲ್ ಗಳಿಸಿದ್ದು 303 ರನ್ ಹಾಗು ಪಡೆದದ್ದು 12 ವಿಕೆಟ್ ಗಳು. ಆಗಿನ ಕಾಲಕ್ಕೆ ಅದೊಂದು ಮಹತ್ತರವಾದ ಸಾಧನೆ. ‘Leading from the Front’ ಎಂಬ ನಾಣ್ಣುಡಿಯಂತೆ ಕಪಿಲ್ ತಂಡವನ್ನು ಮುನ್ನಡೆಸಿದ. ಕ್ರೀಡಾವಲಯದಲ್ಲಿ ವಿಶ್ವದ ಗಮನವನ್ನು ದೇಶದೆಡೆ ತಿರುಗುವಂತೆ ಮಾಡಿದ. ಇಂತಹದೊಂದು ಬ್ರೇಕ್ಗೋಸ್ಕರ ಕಾಯುತ್ತಿದ್ದ ತಂಡ ಮುಂದೆ ಮತ್ತೊಂದು ಮಗದೊಂದು ಸಾಧನೆಗಳನ್ನು ಮಾಡುತ್ತಾ ಮುನ್ನಡೆಯಿತು. ದೇಶದಲ್ಲಿ ಕ್ರಿಕೆಟ್ ಕ್ರಾಂತಿಯನ್ನೇ ಹಬ್ಬಿಸಿತು 1983 ರ ವಿಶ್ವಕಪ್.

ಅಲ್ಲಿಂದ ಮುಂದೆ ತಂಡ ವರ್ಲ್ಡ್ ಚಾಂಪಿಯನ್ ಶಿಪ್ ಹಾಗು ಇನ್ನಿತರೇ ಬಹುಮುಖ್ಯ ಸರಣಿಗಳನ್ನು ಗೆಲ್ಲತೊಡಗಿತ್ತು. ವಿಶ್ವದ ಅಗ್ರಮಾನ್ಯ ತಂಡಗಳಲ್ಲಿ ಒಂದಾಗಿದ್ದಿತು. ವರ್ಷ 1999. ಕಪಿಲ್ ದೇವ್ ನಿವೃತ್ತಿಯಾಗಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಲವದು. ಭಾರತ ಸಚಿನ್, ಅಜರುದ್ದೀನ್, ಗಂಗೂಲಿ, ದ್ರಾವಿಡ್, ಜಡೇಜಾ, ಕುಂಬ್ಳೆ ಎಂಬ ಹಲವು ದಂತಕತೆಗಳ ತಂಡವಾಗಿ ಹೊರಹೊಮ್ಮಿತ್ತು. ಇಂತಹ ಒಂದು ತಂಡಕ್ಕೆ ಕಾಡ್ಗಿಚ್ಚಿನಂತೆ ಬಂದು ಅಪ್ಪಳಿಸಿದ ಸುದ್ದಿ ಮ್ಯಾಚ್ ಫಿಕ್ಸಿಂಗ್! ಸೌತ್ ಆಫ್ರಿಕಾ ಸರಣಿಯಿಂದ ಶುರುವಾಗಿರಬಹುದಾದ ಈ ಬೆಂಕಿಗೆ ತಂಡದ ಅತಿರಥ ಮಹಾರಥಿಗಳ ಸ್ಥಾನವನ್ನೇ ಬಲಿಕೊಡಬೇಕಾಯಿತು. ವಿಶ್ವ ಕ್ರಿಕೆಟಿನಲ್ಲಿ ದೇಶದ ಮಾನ ಮೂರು ಕಾಸಿಗೆ ಹರಾಜಾಯಿತು. ಅತ್ತ ಕಡೆ ನಾಯಕತ್ವವನ್ನು ವಹಿಸಿಕೊಂಡು ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದ ಸಚಿನ್ ತಂಡವನ್ನು ಇನ್ಮುಂದೆ ಮುನ್ನಡೆಸಲು ನಿರಾಕರಿಸತೊಡಗಿದ. ವಿಶ್ವರಾಂಕಿಂಗ್ ನಲ್ಲಿ ಭಾರತ ಎಂಟನೇ ಸ್ಥಾನಕ್ಕೆ ಕುಸಿಯಿತು. ಆಗ ಆಯ್ಕೆ ಸಮಿತಿಯ ಮುಂದೆ ಇದ್ದ ಏಕೈಕ ಆಯ್ಕೆ ಬೆಂಗಾಲದ ಹುಲಿ ಖ್ಯಾತಿಯ ಸೌರವ್ ಗಂಗೂಲಿ. ಅಷ್ಟರಲ್ಲಾಗಲೇ ವಿಶ್ವದ ಅಗ್ರಮಾನ್ಯ ಬ್ಯಾಟ್ಸಮನ್ ಗಳಲ್ಲಿ ಒಬ್ಬನಾಗಿದ್ದ ಸೌರವ್ ನಾಯಕನಾದ ಮೇಲೆ ಮಾಡಿದ ಮೊದಲ ಕೆಲಸ ತಂಡದ ಕಟ್ಟುವಿಕೆ. ಲೆಜೆಂಡರಿ ಆಟಗಾರರ ಸ್ಥಳಕ್ಕೆ ಯುವಪೀಳಿಗೆಯನ್ನು ತಯಾರು ಮಾಡುವ ಬಗೆ. ಇಂದು ದೇಶದ ಟಾಪ್ ಕ್ರಿಕೆಟರ್ ಗಳಲ್ಲಿ ಒಂದಾಗಿರುವ ಸೆಹ್ವಾಗ್, ಜಹೀರ್ ಖಾನ್, ಯುವರಾಜ್, ಮುಹಮದ್ ಕೈಫ್, ಪಾರ್ಥಿವ್ ಪಟೇಲ್, ಇರ್ಫಾನ್ ಪಠಾಣ್, ಬಾಲಾಜಿ ಹೀಗೆ ಇನ್ನೂ ಹಲವು ಯುವ ಚಹರೆಗಳ ಆಯ್ಕೆ ಗಂಗೂಲಿಯ ನಿರ್ದೇಶನದ ಮೇರೆಯೇ ನಡೆಯಿತು. ಹೀಗೆ ಯುವ ಪಡೆಯ ತಂಡವನ್ನು ಕಟ್ಟಿಕೊಂಡು ಜಗತ್ತನ್ನು ಜಯಿಸಲು ಹೋದ ಸೌರವ್ ಅಕ್ಷರಸಹ ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಭಾರತ ಅದೆಷ್ಟೇ ಬಲಿಷ್ಟವಾಗಿದ್ದರೂ ವಿದೇಶಿನೆಲಗಳಲ್ಲಿ ಆದರ ಸಾಧನೆ ನಗಣ್ಯ ಎಂಬ ಮಾತೊಂದು ಇದ್ದಿತು. ಈ ಮಾತಿಗೆ ಅಪವಾದವೇನೋ ಎಂಬಂತೆ ಸೌರವ್ ಹಾಗು ತಂಡ ಅಂದು ಆಟವನ್ನು ಆಡಿತ್ತು. ತಾವೇ ರಾಜರು ಎಂಬಂತೆ ಬೀಗುತ್ತಿದ್ದ ಬಿಳಿಯರ ಸೊಕ್ಕನ್ನು ಅವರದೇ ನೆಲದಲ್ಲಿ ಅಡಗಿಸುವ ಚತುರತೆಯನ್ನು ಗಂಗೂಲಿ ತಂಡಕ್ಕೆ ಕಲಿಸಿಕೊಟ್ಟಿದ್ದ. ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹೀಗೆ ಹೊಡದೆಯಲ್ಲ  ಅಸಾಧ್ಯವಾಗಿದ್ದ ಸಾಧನೆಯೊಂದನ್ನು ಗಂಗೂಲಿ ಹಾಗೂ ತಂಡ ಮಾಡುತ್ತದೆ. ಎಂಟನೇ ಸ್ಥಾನದಲ್ಲಿದ್ದ ತಂಡ ಕೆಲವೇ ವರ್ಷಗಲ್ಲಿ ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿರುತ್ತದೆ. ಕಳೆಗುಂದುತ್ತಿದ್ದ ತಂಡಕ್ಕೆ ಮರುಜೀವ ಬರುತ್ತದೆ.

ಮುಂದೆ ಗ್ರೆಗ್ ಚಾಪೆಲ್ ನಂತಹ ಸಿಡುಕು ಮೋರೆಯ ವ್ಯಕ್ತಿಯಿಂದಾಗಿ ಮತ್ತೊಮ್ಮೆ ಅಲ್ಲೋಲಕಲ್ಲೋಲವಾದ ತಂಡ ನಾಯಕನನ್ನೇ ಹೊರಹಾಕುವ ಸಂದರ್ಭವೊಂದು ಎದುರಾಗುತ್ತದೆ. ಗಂಗೂಲಿ ಅಂದು ನಾಯಕತ್ವದಿಂದಷ್ಟೇ ಅಲ್ಲದೆ ತಂಡದಿಂದಲೂ ಹೊರಗುಳಿಯಬೇಕಾಗುತ್ತದೆ. ಆದರೇನಂತೆ ಕೈಕಟ್ಟಿ ಕೂರುವ ಜಾಯಮಾನ ಗಂಗೂಲಿಯದಾಗಿರಲಿಲ್ಲ. ದೇಶೀ ರಣಜಿ ಪಂದ್ಯಗಳಲ್ಲಿ ಬೆವರು ಸುರಿಸಿ ಮತ್ತೊಮ್ಮೆ ತಂಡಕ್ಕೆ ಪುನರಾಯ್ಕೆಯಾಗುತ್ತಾನೆ. ಈ ಕಮ್ ಬ್ಯಾಕ್ ಅಂದಿನ ಅದೆಷ್ಟು ಯುವಪೀಳಿಗೆಗೆ ಸ್ಫೂರ್ತಿದಾಯಕವಾಯಿತೆಂದು ಹೇಳಲಾಗದು. ಮುಂದೆ 2007 ರ ವಿಶ್ವಕಪ್ ನ ಸೋಲಿನಿಂದ ದ್ರಾವಿಡ್ ನಾಯಕತ್ವದಿಂದ ಕೆಳಗಿಳಿದಾಗ ಎಲ್ಲರ ದೃಷ್ಟಿ ಮತ್ತೊಮ್ಮೆ ಗಂಗೂಲಿಯ ಮೇಲೆ ಇದ್ದಿರುತ್ತದೆ. ಆದರೆ ಆಯ್ಕೆ ಸಮಿತಿ ಒಲವು ತೋರಿಸಿದ್ದು ಮಾತ್ರ ಮಹೇಂದ್ರ ಸಿಂಗ್ ಧೋನಿ ಎಂಬ ಮ್ಯಾಚ್ ವಿನ್ನರ್ ನ ಮೇಲೆ. ಆತ ತನ್ನ ಆಯ್ಕೆಯನ್ನು ಅದೆಷ್ಟರ ಮಟ್ಟಿಗೆ ಸಮರ್ಥಿಸಿಕೊಂಡ ಎಂದರೆ ಆತ ದೇಶವಷ್ಟೇ ಅಲ್ಲದೆ ಇಡೀ ವಿಶ್ವದಲ್ಲೇ ಮಹೋನ್ನತ ನಾಯಕನೆನ್ನುವ ಬಿರುದಿಗೆ ಭಾಜನನಾಗುತ್ತಾನೆ. ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ತಂಡದ ಅಗ್ರಸ್ಥಾನ, ಟೀ 20 ಹಾಗು ಏಕದಿನ ವಿಶ್ವಕಪ್ , ಚಾಂಪಿಯನ್ಸ್ ಟ್ರೋಫಿಗಳ ಗೆಲುವುಗಳಲ್ಲದೆ ಇನ್ನೂ ಹಲವಾರು ಸರಣಿಗಳನ್ನು ಜಯಿಸತೊಡಗಿದ. ಒಂದು ಕಾಲಕ್ಕೆ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಎಂದರೆ ಹೇಗೆ ಇತರ ತಂಡಗಳು ನಡುಗುತ್ತಿದ್ದವೋ ಅಂತೆಯೇ ಭಾರತವನ್ನು ಧೋನಿ ಸಜ್ಜುಗೊಳಿಸಿದ. ಅಗ್ರೆಸಿವ್ ಎಂಬ ಪದಕ್ಕೆ ಅಪವಾದ ಏನೋ ಎಂಬಂತೆ ಧೋನಿ ಆಡುವುದು ಎಲ್ಲರಿಗು ತಿಳಿದಿರುವ ವಿಷಯವೇ. ತಾಳ್ಮೆ ಎಂಬ ಅಂಶ ಅದೆಷ್ಟರ ಮಟ್ಟಿಗೆ ನಾಯಕನಾದವನಿಗೆ ಪ್ರಾಮುಖ್ಯವಾದುದು ಎಂಬುದು ಧೋನಿಯನ್ನು ನೋಡಿಯೇ ಕಲಿಯಬೇಕೇನೋ. ಇಂದು ಟ್ವಿಟ್ಟರ್, ಫೇಸ್ಬುಕ್ ಗಳ ಸಂತೆಯಲ್ಲಿ ತಮ್ಮ ಸ್ಥಾನಮಾನದ ಒಂದಿಷ್ಟೂ ಘನತೆ, ಜವಾಬ್ದಾರಿಯನ್ನು ಅರಿಯದ ಅದೆಷ್ಟೋ ಆಟಗಾರರಿಗೆ ಧೋನಿ ಒಬ್ಬ ಮಾದರಿ ಪುರುಷ. ನಯನಾಜೂಕು, ಮಾತಿನ ಮೇಲೆ ಹಿಡಿತ, ಎಷ್ಟು ಬೇಕೋ ಅಷ್ಟೇ ಹೇಳುವ /ಕೇಳುವ ಪ್ರಬುದ್ಧತೆ ಇವೆಲ್ಲವೂ ಧೋನಿಯನ್ನು ಒಬ್ಬ ವಿಭಿನ್ನ ಬಗೆಯ ನಾಯಕನಾಗಿ ಮಾಡಿವೆ.

ಹೀಗೆ ದೇಶದ ಅತಿ ಯಶಸ್ವೀ ನಾಯಕನಾಗಿದ್ದ ಧೋನಿಯ ದಾಖಲೆಯನ್ನು ಮುರಿಯಲು ಸದ್ಯಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವಾಗಲೇ  ಬೆಂಕಿಯ ಚೆಂಡಿನಂತೆ ಸಿಡಿದು ಹೊರಬಂದಿದದ್ದು ‘ಈತ’. ಮೂರು ಬಗೆಯ ಆವೃತ್ತಿಗಳಲ್ಲೂ 50 ರ ಮೇಲಿನ ಬ್ಯಾಟಿಂಗ್ ಸರಾಸರಿಯನ್ನು ಹೊಂದಿ, ನಾಯಕನಾಗಿ ಪ್ರಚಂಡ ಯಶಸ್ಸನ್ನು ಗಳಿಸಿರುವ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಗೆ ಹೇಳಿಮಾಡಿಸಿರುವ ಆಟಗಾರ. ಅಂದು ಕೇವಲ ಡ್ರಾ ಮಾಡುವುದಕ್ಕಷ್ಟೆ ಆಡುತ್ತಿದ್ದ ಭಾರತ ತಂಡ ಇಂದು ಗೆಲ್ಲುವುದಕಷ್ಟೇ ಮಾತ್ರವೇನೋ ಎಂಬಂತೆ ಆಡುತ್ತಿದೆ. ಪ್ರತಿ ಸರಣಿಯನ್ನು ವೈಟ್ವಾಷ್ ಮಾಡಿಯೇ ಗೆಲ್ಲಬೇಕು ಏನೋ ಎಂಬಂತೆ ಆಡುವ ಕೊಹ್ಲಿ ಹಾಗು ತಂಡ ಇನ್ನೂ ಹಲವಾರು ಕಠಿಣ ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಿದೆ. ಸ್ವದೇಶೀ ನೆಲದಲ್ಲಿ ತಂಡದ ಸಾಧನೆ ಅದೆಷ್ಟೇ ಉತ್ತಮವಾಗಿರಬಹುದು ಆದರೆ ವಿದೇಶಿ ನೆಲದಲ್ಲೂ ಅದೇ ಬಗೆಗಿನ ಸಾಧನೆಯನ್ನು ಮಾಡಬೇಕಿದೆ. ಪ್ರಸ್ತುತ ತಂಡ ಹಾಗು ನಾಯಕನನ್ನು ನೋಡಿದರೆ ಅಂತಹ ಸವಾಲುಗಳು ನೀರು ಕುಡಿದಷ್ಟೇ ಸುಲಭವೆಂದೆನಿಸದಿರದು.

ಒಟ್ಟಿನಲ್ಲಿ ಅಂದು ಜೀವನ ನಿರ್ವಹಣೆಗಷ್ಟೇ ಆಡಲು ಶುರುವಾದ ಆಟ ಪ್ರತಿಷ್ಠೆ, ಹೆಸರು, ಸಾಧನೆ ಹಾಗು ಪ್ರಭುತ್ವವನ್ನು ಸಾಧಿಸಲು ಇಂದು ಆಡಲಾಗುತ್ತಿದೆ. ಇಂದು ಇಡೀ ವಿಶ್ವವನ್ನೇ ಬಗ್ಗುಬಡಿಯಬಲ್ಲ ಭಾರತ ತಂಡವೊಂದು ನಮ್ಮ ಮುಂದಿಂದೆ ಎಂದರೆ ಅದಕ್ಕೆ ಇವರಿಷ್ಟೇ ಅಲ್ಲದೆ ಇನ್ನೂ ಹಲವಾರು ಆಟಗಾರರ, ನಾಯಕರ ಕೊಡುಗೆಯೂ ಮಹತ್ತ್ವವಾದುದು. ಸ್ವಾತಂತ್ರ್ಯ ಪೂರ್ವ ಆಂಗ್ಲರ ಸೊಕ್ಕನ್ನು ಬಗ್ಗು  ಬಡಿಯುತ್ತಿದ್ದ, ದೇಶದ ಮೊದಲ ಟೆಸ್ಟ್ ಕ್ಯಾಪ್ಟನ್ CK ನಾಯ್ಡುನಂತರದ ಸುನಿಲ್ ಗವಾಸ್ಕರ್,ಬಿಷನ್ ಸಿಂಗ್ ಬೇಡಿ, ಮೊಹಮ್ಮೆದ್ ಅಝರುದ್ದೀನ್ ನಂತಹ ಇನ್ನೂ ಹಲವಾರು ನಾಯಕರು, ಸಚಿನ್ , ಸೆಹ್ವಾಗ್, ಗಂಭೀರ್, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್, ಯುವರಾಜ್ ರಂತಹ ಆಟಗಾರರ ನೆರವಿನಿಂದ ಇಂದು ಕ್ರಿಕೆಟ್ ಎಂಬುದು ಮನೆಮಾತಿನ ಕ್ರೀಡೆಯಾಗಿದೆ. ಆದರೆ ಇದೇ ಯಶಸ್ಸನ್ನು ಮುಂದೆ ಅದೆಷ್ಟು ವರ್ಷಗಳ ಕಾಲ ತಂಡ ಮುಂದುವರೆಸಿಕೊಂಡು ಹೋಗುವುದೋ ಎಂಬುದನ್ನು ಮಾತ್ರ ಕಾದುನೋಡಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!