Featured ಅಂಕಣ ಪ್ರಚಲಿತ

ಒಡೆದು ಆಳುವವರ ನಡುವೆ ದೃಢವಾಗಿ ನಿಲ್ಲಬೇಕಾಗಿದೆ

ದೇಶದೆಲ್ಲೆಡೆ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಸ್ತಿತ್ವ ಕಾಯ್ದುಕೊಳ್ಳಲು ಕರ್ನಾಟಕವೊಂದೇ  ಕೊನೆಯ ಆಶಾಕಿರಣ ಎಂದು ಬಿಜೆಪಿ ಅಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್ಸಿಗರಿಗೂ ಅದೀಗ ಮನದಟ್ಟಾದಂತಿದೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಂಡು ಅಸ್ತಿತ್ವ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕೈ ಪಕ್ಷವೀಗ ವಿಭಜನಾ ತಂತ್ರವನ್ನು ಮತ್ತಷ್ಟು ಹರಿತಗೊಳಿಸುತ್ತಿದೆ.

ಕಾಂಗ್ರೆಸ್ ಕಾರ್ಯತಂತ್ರದ ಮೊದಲ ಭಾಗ ಗುಜರಾತ್ ಕಲಿಕೆಯನ್ನು ಆಧರಿಸಿದೆ.  ಅಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಆಡಿದ್ದು ಜಾತಿಒಡಕಿನ ಆಟ.  ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಮತ್ತು ಹಾರ್ದಿಕ್ ಪಟೇಲ್ ಅವರನ್ನು ಬಳಸಿಕೊಂಡು  ಜಾತಿ ಆಧಾರಿತ ಚಳುವಳಿಗಳನ್ನು ಹುಟ್ಟುಹಾಕಿದ ಕಾಂಗ್ರೆಸ್‌, ಹಿಂದೂ ಸಮಾಜದಲ್ಲಿದ್ದ ಅತಿ ಸಣ್ಣ ಪ್ರಮಾಣದ ವಿರೋಧಾಭಾಸಗಳನ್ನು ಬೃಹದಾಕಾರವಾಗಿ ಹಿಗ್ಗಿಸಿ  ಬಿಜೆಪಿ ಹಾಕಿದ್ದ ಭದ್ರ ತಳಪಾಯವನ್ನು  ಸಡಿಲಗೊಳಿಸುವಲ್ಲಿ ಅಲ್ಪಮಟ್ಟಿಗೆ  ಸಫಲವಾಯಿತು. ತಾವು ಗುಜರಾತಿನಲ್ಲಿ ಪ್ರಯೋಗಿಸಿದ ತಂತ್ರದ ಸಣ್ಣ ಗೆಲುವಿನಿಂದ ಉತ್ತೇಜನ ಪಡೆದ ಕಾಂಗ್ರೆಸ್‌ ಅದನ್ನು ಕರ್ನಾಟಕದಲ್ಲೂ ಮುಂದುವರೆಸಿ ಹಿಂದೂ ಸಮಾಜವನ್ನು ಒಡೆಯಲು ಪಣತೊಟ್ಟಿತು.  ಕೈ ಕುಟಿಲ ತಂತ್ರದ ಎರಡನೆಯ ಭಾಗ ಬಹಳ ಸರಳ ಮತ್ತು ಸಾಮಾನ್ಯವಾಗಿ ನಾವು ನೀವು ಅರಿತಿರುವಂತದ್ದೇ-  ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದವರ ಓಲೈಕೆ.

ಕಾಂಗ್ರೆಸ್ ಮಾರ್ಗ:

ಕಾಂಗ್ರೆಸ್ ಪಕ್ಷ ಮತ್ತು ಅದರ ಮೂಲ ವ್ಯವಸ್ಥೆಯ ಕುಟಿಲ ಪ್ರತಿಭೆ 3 ವಿಷಯಗಳಲ್ಲಿದೆ (ಅಲ್ಪಸಂಖ್ಯಾತ ಓಲೈಕೆಯ ಮೂಲಭೂತ ತಂತ್ರ ಹೊರತುಪಡಿಸಿ).

  1.   ಹಿಂದೂ ಸಮಾಜದಲ್ಲಿನ ವೈರುಧ್ಯಗಳನ್ನು ಗುರುತಿಸುವುದು, ಈ ಚಿಕ್ಕಪುಟ್ಟ ವಿರೋಧಾಭಾಸಗಳನ್ನು ಬಳಸಿಕೊಂಡು ಪಡೆಯಬಹುದಾದ ರಾಜಕೀಯ ಲಾಭಕ್ಕೆ  ಅನುಗುಣವಾಗಿ ಅವುಗಳನ್ನು ವರ್ಗೀಕರಿಸುವುದು.
  2. ಈ ವೈರುಧ್ಯದ ವಿಷಬೀಜವನ್ನು ಬೃಹದಾಕಾರವಾಗಿ ಬೆಳೆಸಲು ಸಮರ್ಥರೆನಿಸುವ ನಾಯಕರನ್ನು ಆಯ್ಕೆಮಾಡಿ, ಅವರನ್ನು ಪೋಷಿಸಿ, ಉತ್ತೇಜಿಸುವುದು (ಕಾಂಗ್ರೆಸ್ ಒಳಗಿನ ನಾಯಕರು ಅಥವಾ ಹೊರಗಿನವರು).
  3. ತಮ್ಮ ವಿರೋಧಿ ಗುಂಪಿನವರೇ ತಪ್ಪಿತಸ್ಥರು, ಅಪರಾಧಿಗಳು, ಖಳರು ಎಂಬಂತೆ ಚಿತ್ರಿಸಲು ಮತ್ತು ತಾವು ನ್ಯಾಯಯುತ ಮತ್ತು ಸಮಂಜಸವಾದ ಮಾರ್ಗದಲ್ಲಿದ್ದೇವೆ ಎಂಬುದನ್ನು ಸ್ಪಷ್ಟೀಕರಿಸಲು ಶೈಕ್ಷಣಿಕ ಮತ್ತು ಮಾಧ್ಯಮ  ವ್ಯವಸ್ಥೆಯ ಬಳಕೆ.

ಕಾರ್ಯತಂತ್ರದ ಮೊದಲ ಭಾಗ-  ಹಿಂದೂ ಸಮಾಜದ ವಿಭಜನೆ:

ಕಳೆದ ಕೆಲ ತಿಂಗಳಿಂದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಸಂಘಟಿತ ಹೋರಾಟವನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿಯ ಪ್ರಬಲವಾದ ಮತಬ್ಯಾಂಕ್ ಎಂದು ಗುರುತಿಸಲ್ಪಟ್ಟಿರುವ ಸಮುದಾಯವನ್ನು ವಿಭಜಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷವೇಈ ಒಡಕಿನ ಹೋರಾಟಕ್ಕೆ ನಾಂದಿ ಹಾಡಿತು ಎಂಬುದು ರಾಜಕೀಯ ವಿಶ್ಲೇಷಕರಿಂದ ಹಿಡಿದು ಸಾಮಾನ್ಯ ಜನರಿಂದಲೂ ಕೇಳಿಬರುವ ಅಭಿಪ್ರಾಯ.

ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಲಿಂಗಾಯತರು ಪ್ರಯತ್ನ ಪಡುತ್ತಿರುವುದು ಇದೇ ಮೊದಲಲ್ಲ. ‘ವೀರಶೈವ ಲಿಂಗಾಯತ’  ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಹಿಂದೆ ಸಹ ಲಿಂಗಾಯತ ಸಮುದಾಯ ಅನೇಕ ಬಾರಿ ಧ್ವನಿ ಎತ್ತಿತ್ತು. ಇತ್ತೀಚಿಗೆ ಅಂದರೆ 2011-13ರಲ್ಲಿ ಶ್ರೀ ಶಾಮನೂರು ಶಿವಶಂಕರಪ್ಪ ಮತ್ತು ಭೀಮಣ್ಣ ಖಂಡ್ರೆ ನೇತೃತ್ವದಲ್ಲಿ ಪ್ರಯತ್ನ ನಡೆದಿತ್ತು. ಪಂಥದ  ವೀರಶೈವ ವಿಭಾಗ ವೇದ ಮತ್ತು ಆಗಮಗಳನ್ನು (ಹೀಗಾಗಿ, ಹಿಂದೂ ಧರ್ಮದಿಂದ ವಿಭಿನ್ನವಾಗಿಲ್ಲ) ಒಪ್ಪಿಕೊಳ್ಳುತ್ತದೆಯಾದ್ದರಿಂದ ಪ್ರಯತ್ನ ವಿಫಲವಾಯಿತು. ಪ್ರತ್ಯೇಕ ಧರ್ಮದ ಹೋರಾಟ ಸಂಪೂರ್ಣ ಸ್ತಬ್ಧಗೊಂಡ ಬಳಿಕ ಮತ್ತೆ ಅದು ಮೇಲೇಳುವಂತೆ ಕಡ್ಡಿ ಗೀರಿದವರು ಸಿದ್ದರಾಮಯ್ಯ.

ಸೈದ್ಧಾಂತಿಕ ಮೂಲಗಳು ಮತ್ತು ವೈರುಧ್ಯಗಳು:

ಪ್ರತ್ಯೇಕ ಧರ್ಮ ಆಂದೋಲನದ ಸೈದ್ಧಾಂತಿಕ ಮೂಲ ಆರಂಭವಾಗಿದ್ದು ಇತ್ತೀಚಿಗಲ್ಲ.  ವಚನ ಸಾಹಿತ್ಯ ಜಾತಿಪದ್ಧತಿ ವಿರೋಧಿ ಎಂಬ ಅಭಿಪ್ರಾಯ, 20ನೇ ಶತಮಾನದ ಅಧ್ಯಯನದಲ್ಲಿಯೇ ಮೊಳಕೆಯೊಡೆದಿತ್ತು. ಸಮುದಾಯದ ಪ್ರಮುಖ ವರ್ಗಗಳು, ವಿಶೇಷವಾಗಿ ಉತ್ತರ ಕರ್ನಾಟಕದ ಶಿಕ್ಷಿತವಲಯ ಈ ದೃಷ್ಟಿಕೋನವನ್ನು ಒಪ್ಪಿಕೊಂಡಿದ್ದೇ,  ಪ್ರತ್ಯೇಕ ಧರ್ಮ ಹೋರಾಟ ಹುಟ್ಟಿಕೊಳ್ಳಲು  ಕಾರಣವಾಯಿತು. ಸಮುದಾಯದ ವಿಭಾಗದ ಮುಖಂಡರು (ರಾಜಕೀಯ ಮತ್ತು ಧಾರ್ಮಿಕ),  ಬಸವಣ್ಣನವರನ್ನು ಪಂಥ / ಧರ್ಮದ ಸ್ಥಾಪಕ ಎಂದು ಪರಿಗಣಿಸುತ್ತಾರೆ, ಬಸವಣ್ಣ ವೇದ ಮತ್ತು ಆಗಮಗಳನ್ನು ತಿರಸ್ಕರಿಸಿದ್ದರು ಎಂದು ವಾದಿಸುತ್ತಾರೆ ಮತ್ತು ತಮ್ಮನ್ನು ಲಿಂಗಾಯತರೆಂದು ಗುರುತಿಸಿಕೊಳ್ಳಲು ಬಯಸುತ್ತಾರೆ. ತಮ್ಮ ನಂಬಿಕೆಗಳು  ವೀರಶೈವ- ಲಿಂಗಾಯತ ಸಮುದಾಯದವರಿಗಿಂತ ಭಿನ್ನವಾಗಿದೆ ಎನ್ನುತ್ತಾರೆ. ವೀರಶೈವರು ವೇದಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಮ್ಮಂತೆ(ಲಿಂಗಾಯತರಂತೆ)  ಬಸವಣ್ಣನವರಿಗೆ ಗುರುಪರಂಪರೆಯಲ್ಲಿ ಸ್ಥಾನ ನೀಡುವುದಿಲ್ಲ, ಹೀಗಾಗಿ ನಾವು ಅವರಿಂದ ಪ್ರತ್ಯೇಕವಾಗಿ ನಿಲ್ಲುತ್ತೇವೆ ಎಂಬುದು ಇವರ ವಾದ. ಇಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯವೇನೆಂದರೆ ಸಮುದಾಯದಲ್ಲಿ ವೈರುಧ್ಯಗಳು ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದವು-  ವೇದ ಮತ್ತು ಶೈವ-ಆಗಮಗಳನ್ನು ಒಪ್ಪಿಕೊಳ್ಳುವವರು ಮತ್ತು ಅದನ್ನು ಒಪ್ಪಿಕೊಳ್ಳದವರು.

ವೀರಶೈವ-ಲಿಂಗಾಯತ ಸಮುದಾಯದ ಜತೆ ಕಾಂಗ್ರೆಸ್ ಆಡಿದ್ದ ಆಟದಲ್ಲಿ ಕೂಡ ಈ ಹಿಂದೆ ವಿವರಿಸಿರುವ ‘ಕಾಂಗ್ರೆಸ್ ಮಾರ್ಗ’ದ ಛಾಪು ಸ್ಪಷ್ಟವಾಗಿತ್ತು. ಸಮುದಾಯದಲ್ಲಿದ್ದ ಸಣ್ಣ ಪ್ರಮಾಣದ ವೈರುಧ್ಯವನ್ನು ಕಂಡುಕೊಂಡ ಸಿದ್ದರಾಮಯ್ಯ, ಇದನ್ನು ಮತ್ತಷ್ಟು ಗಾಢವಾಗಿಸಿದರೆ ತಮಗಾಗುವ ರಾಜಕೀಯ ಲಾಭವನ್ನು ಮೌಲ್ಯಮಾಪನ ಮಾಡಿದರು. ಇದರಿಂದ ತಮಗೆ ಬಹಳ ಪ್ರಯೋಜನವಾಗಲಿದೆ ಎಂಬ ನಿರ್ಣಯಕ್ಕೆ ಬಂದ ಅವರು ಈ ಆಂದೋಲನವನ್ನು ಸಂಘಟಿಸಲು ಮತ್ತು ಮುನ್ನಡೆಸಲು ತಮ್ಮ ಸಚಿವ ಸಂಪುಟದಲ್ಲಿದ್ದ  ಲಿಂಗಾಯತ ಸಮುದಾಯದ ನಾಯಕರನ್ನು ನಿಯೋಜಿಸುವುದರ ಮೂಲಕ ರಾಜ್ಯ  ಹೊತ್ತಿ ಉರಿಯಲು ಬೆಂಕಿ ಕಡ್ಡಿ ಗೀರಿದರು. ಸಿ.ಎಂ. ಸಿದ್ದರಾಮಯ್ಯನವರ ಕೃಪಾಪೋಷಣೆಯಲ್ಲಿ ಬೆಳೆದಿರುವ ಪ್ರಗತಿಪರ ಚಿಂತಕರೆಂಬ ಹಣೆಪಟ್ಟಿ ಹೊತ್ತಿರುವ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಮತ್ತು ಚಂದ್ರಶೇಖರ ಪಾಟೀಲ್ (ಚಂಪಾ) ಮುಖ್ಯಮಂತ್ರಿ ಕೈಯ್ಯಲ್ಲಿ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತುಕೊಂಡು ಸಮಾಜ ವಿಭಜಿಸುವ ಮಹಾನ್ ಕಾರ್ಯಕ್ಕೆ ಅತ್ಯುತ್ಸಾಹದಿಂದ ಧುಮುಕಿದರು.

ಕಾರ್ಯತಂತ್ರದ ದ್ವಿತೀಯ ಭಾಗ- ಅಲ್ಪಸಂಖ್ಯಾತರ ಓಲೈಕೆ:

ಗುಜರಾತಿನಂತೆ, ಕರ್ನಾಟಕದಲ್ಲಿ  ಮುಸ್ಲಿಂ ಮತಗಳ ಮೇಲೆ ಕಾಂಗ್ರೆಸ್‌ಗೆ ಏಕಮಾತ್ರ ಪ್ರಾಬಲ್ಯವಿಲ್ಲ. ಹಾಗಾಗಿ ಕಾಂಗ್ರೆಸ್ಸಿನ ರಾಜ್ಯ ಮತ್ತು ರಾಷ್ಟ್ರ ನಾಯಕರು ರಾಜಕೀಯ ಲಾಭಕ್ಕಾಗಿ ಹಿಂದೂ ವಿರೋಧಿ ಆಟವಾಡುವ ಅನಿವಾರ್ಯತೆ ಇದೆ. ರಾಜ್ಯದ ಮುಸ್ಲಿಂ ಮತಕ್ಕಾಗಿ ಅವರು ಜೆಡಿಎಸ್ ಜತೆ ಸೆಣಸಾಡಲೇ ಬೇಕಿದೆ. ಕೆಲವು ಕ್ಷೇತ್ರಗಳಲ್ಲಂತೂ ಅವರು ಉಗ್ರರೊಂದಿಗೆ ಸಂಪರ್ಕ ಹೊಂದಿರುವ  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನಿಂದ ಸಹ ಪ್ರಬಲ ಪ್ರತಿಸ್ಪರ್ಧೆಯನ್ನೆದುರಿಸಬೇಕಾಗುತ್ತದೆ.  ಮುಸ್ಲಿಂ ಮತಗಳನ್ನು ಒಗ್ಗೂಡಿಸುವ ಸಲುವಾಗಿ ಟಿಪ್ಪುಗಿಂತ ದೊಡ್ಡ ಮುಸ್ಲಿಮನಂತೆ ಬಿಂಬಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. ಇನ್ನೊಂದೆಡೆ ಕ್ರೈಸ್ತರನ್ನು ಸೆಳೆಯಲು ಫ್ರಾನ್ಸಿಸ್ ಕ್ಸೇವಿಯರ್ ನಂತೆ ಪವಿತ್ರವಾಗಿ ಕಾಣಿಸಿಕೊಳ್ಳಬೇಕಾಗಿರುವ ಅನಿವಾರ್ಯತೆಯೂ ಇದೆ.  ಮುಸ್ಲಿಂ ಮತಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಹಿಂದೂ ವಿರೋಧಿ, ಮುಸ್ಲಿಂ ಮೂಲಭೂತವಾದಿ ಟಿಪ್ಪು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಕಾಂಗ್ರೆಸ್, ಇದೇ ಕಾರಣಕ್ಕೆ ತ್ರಿವಳಿ ತಲಾಖ್ ನಂತಹ ಅನಿಷ್ಠ ಪದ್ಧತಿಯನ್ನು ನಿಷೇಧಿಸುವ ಮಸೂದೆ ವಿರುದ್ಧ ಧ್ವನಿ ಎತ್ತುವ ಹೀನ ಕೆಲಸಕ್ಕೆ ನಿಂತಿದೆ.

ಈ ತಂತ್ರವನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಕಾಂಗ್ರೆಸ್ ಒಂದು ಮಟ್ಟದ ಪರಿಣತಿಯನ್ನು ಸಾಧಿಸಿದೆ. ವಿಪರ್ಯಾಸವೆಂದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರ ಏಕೈಕ ಸಾಧನೆ ಇದೆಂದರೂ ತಪ್ಪಲ್ಲ.  ಕಾಂಗ್ರೆಸ್‌  ಅಧಿಕಾರಕ್ಕೆ ಬಂದ ಹೊಸತರಲ್ಲಿ,  ಸರ್ಕಾರದಿಂದ ಪಡೆದುಕೊಂಡ ಸಾಲವನ್ನು ಮರಳಿಸದಂತೆ  ಕೆಪಿಸಿಸಿ  ಅಧ್ಯಕ್ಷ ಜಿ. ಪರಮೇಶ್ವರ  ಮುಸ್ಲಿಂ ಸಮುದಾಯದವರಿಗೆ ಉತ್ತೇಜಿಸಿದ್ದರು.  ಇದು ಅಭಿವೃದ್ಧಿ ಪ್ರಕ್ರಿಯೆಯ ಒಂದು ಭಾಗ  ಎಂಬುದು ಅವರ ಅಸಂಬದ್ಧ ನಡೆಯ ವಿವರಣೆಯಾಗಿತ್ತು. ಅದರಂತೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿಯಲ್ಲಿ ಅಲ್ಪಸಂಖ್ಯಾತರಲ್ಲಿ ಸಾಲ ಮನ್ನಾ ಮಾಡಲಾಯಿತು. ಇದಕ್ಕಾಗಿ ಸರಕಾರ ವ್ಯಯಿಸಿದ್ದು 28.38ಕೋಟಿ ರೂ.  ಬಳಿಕ,  ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆ, ಯಾತ್ರೆಗಳಿಗೆ ಸಹಾಯಧನವನ್ನು ಒದಗಿಸಲಾಯಿತು,  ಹಿಂದೂಗಳ ವಿಚಾರಕ್ಕೆ ಬಂದಾಗ ಸರ್ಕಾರ ಉಲ್ಟಾ ಹೊಡೆಯಿತು.  ನಾಡಹಬ್ಬ ದಸರಾ(2016)ವನ್ನು ಸರಳವಾಗಿ ಆಚರಿಸಲಾಯಿತು. ಅದಕ್ಕೆ ಸರ್ಕಾರ ನೀಡಿದ್ದು ಬರದ ನೆಪ. ಆದರೆ  ಕಳೆದ 2 ವರ್ಷಗಳಲ್ಲಿ ಮುಖ್ಯಮಂತ್ರಿ ಅಲ್ಪಸಂಖ್ಯಾತ ಅಭಿವೃದ್ಧಿ ಕಾರ್ಯಕ್ಕೆ ಮಂಜೂರಾದ ಬಜೆಟ್‌ಅನ್ನು 75 ಕೋಟಿಯಿಂದ ಬರೋಬ್ಬರಿ 500 ಕೋಟಿರೂ.ಗೆ ಏರಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ 15% ನಿಧಿಯನ್ನು ಅಲ್ಪಸಂಖ್ಯಾತರಿಗೆ ಮೀಸಲಾಗಿಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದ್ದು,  ಅದರಲ್ಲಿ 10% ಮುಸ್ಲಿ ಸಮುದಾಯಕ್ಕೆ ಎಂದು ಹೇಳಿದೆ.

2017- 18 ರ ಸಾಲಿನಲ್ಲಿ ಮುಖ್ಯಮಂತ್ರಿ ಅಲ್ಪಸಂಖ್ಯಾತ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿಯಲ್ಲಿ, ರಾಜ್ಯ ಸರಕಾರ ಅಲ್ಪಸಂಖ್ಯಾತ ಸಮುದಾಯದವರಿಗೆ 690 ಕೋಟಿ ರೂ. ಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ. ಆದರೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಡಿಯಲ್ಲಿ ಬುಡಕಟ್ಟು ಸಮುದಾಯಕ್ಕೆ ದೊರೆತಿದ್ದು ಕೇವಲ 2 ಕೋಟಿ ರೂ. ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ದೊರೆತಿದ್ದು 90 ಕೋಟಿ ರೂ.. ಅಲ್ಪಸಂಖ್ಯಾತರಿಗೆ ನೀಡಲಾಗುವ ಸಹಾಯಧನದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡುವ ಸಹಾಯಧನ ವರ್ಷ ಕಳೆದಂತೆ ತಗ್ಗುತ್ತಲೇ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ತುಷ್ಟೀಕರಣದ ಇನ್ನೊಂದು ರೂಪವೆಂದರೆ ಉಗ್ರ ಮತ್ತು ಭಯೋತ್ಪಾದಕರ ಜತೆ ನಂಟಿರುವ ಸಂಘ- ಸಂಘಟನೆಗಳ ಬಗ್ಗೆ ‘ಸಹಿಷ್ಣುತೆ ಮತ್ತು ಸಂಪೂರ್ಣ ಬೆಂಬಲ’ ನೀಡಿರುವುದು. ಗೃಹ ಸಚಿವಾಲಯದ ಮನವಿಯನ್ನು ಲೆಕ್ಕಿಸದೇ ಮೈಸೂರಿನಲ್ಲಿ(2009) ಕೋಮುಗಲಭೆ ನಡೆಸಿದ 214 ಆರೋಪಿಗಳ ಮೇಲಿನ ಪ್ರಕರಣವನ್ನು ಹಿಂಪಡೆಯುವುದರ ಮೂಲಕ ಈ ಅಪಾಯಕಾರಿ ಓಲೈಕೆ ನೀತಿಗೆ ಸಿಎಂ  ನಾಂದಿ ಹಾಡಿದರು.  ಇತ್ತೀಚೆಗೆ ಕೊಲೆಯಾದ ಪರೇಶ್ ಮೆಸ್ತಾ ಮತ್ತು ದೀಪಕ್ ರಾವ್ ಸೇರಿದಂತೆ ರಾಜ್ಯದ 21 ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಮೌನ ಮತ್ತು ಆರೋಪಿಗಳ  ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಮೂಲಕ  ಉಗ್ರ ಸಂಘಟನೆಗಳಿಗೆ ’ನಿಮ್ಮ ಬೆನ್ನಿಗೆ ನಾವಿದ್ದೇವೆ’, ಎಂಬ ಸಂದೇಶ ನೀಡಿದೆ. ಈ ಮೂಲಕ ಸರಕಾರ ಓಲೈಕೆ ರಾಜಕಾರಣದ ಕರಾಳ ರೂಪವನ್ನು ಅನಾವರಣಗೊಳಿಸಿದೆ.

ತನ್ನ ಕುಟಿಲ ತಂತ್ರ ಕಾರ್ಯಾಚರಣೆ ಇಮ್ಮಡಿಗೊಳಿಸಲಿರುವ ಕಾಂಗ್ರೆಸ್:

ಗುಜರಾತಿನಲ್ಲಿ ಜಾತಿ ಆಧಾರಿತ ಕ್ರೋಢೀಕರಣದಿಂದ ಸಿಕ್ಕಿರುವ ಅಲ್ಪ ಯಶಸ್ಸಿನಿಂದ ಪ್ರೇರಣೆ ಪಡೆದುಕೊಂಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ನಡೆಯುತ್ತಿರುವ ಲಿಂಗಾಯತ ವಿಭಜನಾ ಕಾರ್ಯತಂತ್ರವನ್ನು ಚುರುಕುಗೊಳಿಸಲಿದೆ.   ಅಲ್ಪಸಂಖ್ಯಾತರ ಓಲೈಕೆ ಪರಿಧಿಯನ್ನೂ ಇನ್ನಷ್ಟು ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಗುಜರಾತಿನಲ್ಲಿ ಬಳಸಲಾದ  ಕಾರ್ಯತಂತ್ರಕ್ಕಿಂತ ಕರ್ನಾಟಕದಲ್ಲಿ ನಡೆಸಿರುವ ಪ್ರತ್ಯೇಕ ಧರ್ಮ ಆಂದೋಲನ ಎಷ್ಟೋ ಪಟ್ಟು ಹೆಚ್ಚು ಅಪಾಯಕಾರಿ. ಆದರೆ, 2018ರ ಕರ್ನಾಟಕ ವಿಧಾನಸಭೆ ಚುನಾವಣೆಯೊಳಗೆ, ಈ ಆಂದೋಲನಕ್ಕೆ ಪರಿಣಾಮಕಾರಿ ಜನಬೆಂಬಲ ವ್ಯಕ್ತವಾಗುವ ಸಾಧ್ಯತೆಗಳು ಬಹಳ ಕಡಿಮೆ.

ಈ ಸತ್ಯವನ್ನು ಅರ್ಥಮಾಡಿಕೊಂಡಿರುವ ಕಾಂಗ್ರೆಸ್, ಈಗಾಗಲೇ ನೆಲಕಚ್ಚಿರುವ ವಿವಾದವನ್ನು  ಮತ್ತೆ ಹುಟ್ಟಿಸಿ ಮುಂದುವರೆಸಿದರೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದೆ. ಜತೆಗೆ  ಭವಿಷ್ಯದಲ್ಲಿ (2018ರ ವಿಧಾನಸಭಾ ಚುನಾವಣೆಯಲ್ಲಿ) ಮತ್ತೆ ಮೇಲೆದ್ದು ತಮಗೆ ಮಾರಕವಾಗಬಹುದೆಂಬ ಭೀತಿಯನ್ನು ಸಹ ಹೊಂದಿದೆ. ಹೀಗಾಗಿ ನಾಮಾವಶೇಷ ಇಲ್ಲದಂತೆ ಅದನ್ನು  ಸಮಾಧಿ ಮಾಡೋಣವೆಂದು  ತಜ್ಞರ ಸಮಿತಿಯನ್ನು ನೇಮಿಸಿದೆ.  ವಿಧಾನಸಭಾ ಚುನಾವಣೆಗೂ ಪೂರ್ವ ವರದಿ ನೀಡಲಾಗದು ಎಂದು ಸಮಿತಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಶತಾಯಗತಾಯ ಹಿಂದೂಧರ್ಮದಲ್ಲಿ ಒಡಕನ್ನು ತಂದು, ಅಧಿಕಾರವನ್ನು ಪುನಃ ಪಡೆಯಲೇಬೇಕೆಂಬ ಹಠಸಾಧನೆಗೆ ನಿಂತಿರುವ ಕಾಂಗ್ರೆಸ್ ಮತ್ತಷ್ಟು ಅಪಾಯಕಾರಿ ಹೆಜ್ಜೆ ಇಡಬಹುದು. ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿರುವ ಮತ್ತು ಈಗ ಮತ್ತಷ್ಟು ವಿಸ್ತರಣೆ ಕಂಡಿರುವ ಅಲ್ಪಸಂಖ್ಯಾತ ಓಲೈಕೆ ನೀತಿಯಿಂದ ಕೈಗೆ ದೊರೆಯುತ್ತಿರುವ ಲಾಭ ಮುಂದುವರಿಯುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಅವರು ಅದೇನೇ ಮಾಡಲಿ, ಕುಟಿಲ ಕಾಂಗ್ರೆಸ್ ರಾಜ್ಯದ ಸಾಮಾಜಿಕ ಸಾಮರಸ್ಯಕ್ಕೆ ಶಾಶ್ವತ ಹಾನಿಯನ್ನುಂಟು ಮಾಡುವ, ಅದನ್ನು ಅಧಿಕಾರದಿಂದ ದೂರಕ್ಕೆ ಕೆಳಗಿಳಿಸಬೇಕೆಂಬುದು ಕನ್ನಡಿಗರ ತುಡಿತ.

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!