Featured ಅಂಕಣ

ಇತಿಹಾಸ ನನ್ನ ನೇತಾಜೀಗೆ ನ್ಯಾಯ ಒದಗಿಸಲಿಲ್ಲ!

ಕೆಲವು ವರ್ಷದ ಹಿಂದೆ ಉತ್ತರಭಾರತದಿಂದ ಬೆಚ್ಚಿಬೀಳಿಸುವ ಸಂಗತಿಯೊಂದು ವರದಿಯಾಗಿತ್ತು. ಸುಭಾಷ್ ಚಂದ್ರ ಬೋಸ್ 1945 ಆಗಸ್ಟ್ 18ರಂದು ವಿಮಾನಾಪಘಾತದಲ್ಲಿ ಮೃತಪಟ್ಟರೆಂಬ ಸುದ್ದಿಯನ್ನು ಸುಳ್ಳು ಮಾಡುವ ಸುದ್ದಿಯದು. ನೇತಾಜೀ ಇನ್ನೂ ಬದುಕಿದ್ದಾರೆ. ಅವರು ಉತ್ತರ ಭಾರತದಲ್ಲಿ ಓಡಾಡಿಕೊಂಡಿದ್ದಾರೆ ಎನ್ನುವ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಜನರಾದರೂ ಕೌತುಕದಿಂದಲೇ ಆಶಾಭಾವನೆಯೊಂದನ್ನು ಕಾಯ್ದಿಟ್ಟು ವದಂತಿ ಸತ್ಯವಾಗಲೆಂದು ಹರಕೆ ಹೊತ್ತರು.ಇತಿಹಾಸ ಅವರಿಗೆ ಯಾಕೆ ಹಾಗೆ ಮಾಡಿತೋ ಗೊತ್ತಿಲ್ಲ. ಅಥವಾ ಅವರೇ ಅದನ್ನು ಬಯಸಲಿಲ್ಲವೋ ಗೊತ್ತಿಲ್ಲ. ಆದರೆ ದೇಶ ಮಾತ್ರ ಅವರನ್ನು, ಅವರ ಇರುವಿಕೆಯನ್ನು ಕಾಯುತ್ತಲೇ ಇದೆ.

ಬ್ರಿಟಿಷ್ ಅಡಿಯಾಳಾಗದವರು

ದೇಶ ಹಾಗೆ ಕಾಯ್ದದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಯಾಕೆಂದರೆ ಸುಭಾಷ್ ಚಂದ್ರ ಬೋಸ್ ಇವತ್ತಿಗೂ ಬೇಕು ಎನ್ನುವಂತೆ ಜೀವನ ನಡೆಸಿದವರು. ದೇಶದ ಸ್ವಾತಂತ್ರ್ಯದ ಸಲುವಾಗಿ ಉಚ್ಚ ಕ್ರಾಂತಿಕಾರಕ ನಿಲುವುಗಳನ್ನು ತಳೆದವರವರು. ಮಾತ್ರವಲ್ಲ ಇಡೀ ಪರಂಗಿಗಳ ಸಾಮ್ರಾಜ್ಯವೇ ಪತರಗುಟ್ಟುವಂತೆ ಯೋಚನೆಗಳನ್ನು ಕಾರ್ಯಗತಗೊಳಿಸಿದವರು. ದೇಶದ ಇತಿಹಾಸ ಪ್ರತಿಪಾದಿಸುವ ನಿಷ್ಠುರವಾದ  ಅಂಶವೊಂದು ಅನೇಕರಿಗೆ ತಿಳಿದೇ ಇಲ್ಲ. ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗಲು ಬೋಸ್ ರೂಪಿಸಿದ ಸಶಸ್ತ್ರ ಹೋರಾಟವೇ ಪ್ರಮುಖ ಕಾರಣ. ಪ್ರಪಂಚದ ಇತಿಹಾಸ ಎಲ್ಲ ಕಡೆ  ಹೋರಾಟಗಳನ್ನು ದಾಖಲಿಸುತ್ತದೆ. ಶಾಂತಿ, ಸೌಹಾರ್ದತೆ, ಅಹಿಂಸೆ ಮೊದಲಾದ ಸಂಗತಿಗಳು ಬರೇ ಕಿವಿಗೆ ಇಂಪಷ್ಟೇ ವಿನಃಹ ಅವುಗಳ ಕಾರ್ಯಸಾಧನೆ ಆ ಕಾಲಕ್ಕೆ ಏನೂ ಇಲ್ಲವಾಗಿತ್ತು. ‘ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ್ಯಕೊಡುತ್ತೇನೆ’ ಎನ್ನುವ ನೇತಾಜೀಯ ಘೋಷಣೆಗೆ ನೂರಾರು ಯುವಕರು ಸಿಡಿದೆದ್ದು ನಿಂತಿದ್ದರು.ಆ ಮಹಾನುಭಾವರಾದರೂ ಸಾಮಾನ್ಯದವರಾಗಿರಲಿಲ್ಲ. ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಚತುರ ವಿದ್ಯಾರ್ಥಿಯೇ ಆಗಿದ್ದರು. ಆದರೆ ತಮ್ಮ ಜಾಣ್ಮೆಯನ್ನವರು  ಬ್ರಿಟಿಷರ ಚಾಕರಿಗೆ ಮೀಸಲಿಡಲಿಲ್ಲ. ಬದಲಾಗಿ ಅವರ ಚರಿತ್ರೆಯನ್ನೇ ಪಲ್ಲಟಗೊಳಿಸುವ ಯಜ್ಞಕ್ಕೆ ಬದುಕನ್ನು ಧಾರೆಯೆರೆದರು.

ವೈಚಾರಿಕ ಭಿನ್ನಮತ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಹೋರಾಟದಲ್ಲಿ ಯಥಾವತ್ತು ಗಾಂಧಿಜೀ ಮುಂಚೂಣಿಯಲ್ಲಿದ್ದರು. ಆದರೂ ಗಾಂಧಿಜೀಯ ಹೋರಾಟಗಳು ಮೃದುಧೋರಣೆ ಹೊಂದಿದ್ದವು. ದೇಶದ ಹಿತಾಸಕ್ತಿಗಾಗಿ ಬೋಸ್ ಗಾಂಧಿಜೀಯನ್ನೇ ಎದುರು ಹಾಕಿಕೊಂಡರು. ತನ್ನನ್ನು ನೇತಾಜೀ ಎಂದು ಕರೆದ ಗಾಂಧಿಜೀ ವಿರುದ್ದವೇ ನೇತಾಜೀ ವೈಚಾರಿಕ ಭಿನ್ನಮತ ತಳೆದರು. ಶಸ್ತ್ರ ಹೋರಾಟದ ಈ ದೇಶದ ಪರಂಪರೆಯನ್ನು ಮುಂದುವರೆಸಿದ ಮಹಾನ್ ಚೇತನ ಅವರಾಗಿದ್ದರು. ಎಲ್ಲಿಯವರೆಗೆಂದರೆ ಕಾಂಗ್ರೆಸ್ಸಿನಿಂದ 1938ರಲ್ಲಿ ನೇತಾಜೀ ವಿರುದ್ದವೇ ಕಾಂಗ್ರೆಸ್ ಅಧಿವೇಶನದಲ್ಲಿ ಪಟ್ಟಾಭಿ ಸೀತಾರಾಮಯ್ಯ ಅಭ್ಯರ್ಥಿಯಾಗಿದ್ದರು. ದೇಶಾದ್ಯಂತ ಹೆಸರು ಮಾಡಿದ್ದ ಗಾಂಧಿಜೀ ಪಟ್ಟಾಭಿ ಪರವಾಗಿ ನಿಂತಿದ್ದರು. ಆದರೆ ದೇಶ ಬೋಸರ ಮೇಲೆ ಭರವಸೆ ಇಟ್ಟಿತು. ಚುನಾವಣೆಯ ಗೆಲುವು ನೇತಾಜೀಯ ಮಡಿಲಲ್ಲಿತ್ತು.ಆ ಕಾಲಕ್ಕೇ ಬೋಸ್ ವಿದೇಶಿ ಪತ್ರಿಕೆಗಳ ಮುಖಪುಟದಲ್ಲಿ ಮಿಂಚುತ್ತಿದ್ದರು. ‘ಮ್ಯಾಂಚೆಸ್ಟರ್ ಗಾರ್ಡಿಯನ್’ನಂತಹ ಪತ್ರಿಕೆ ಸುಭಾಷ್’ರ ಗುಣಗಾನ ಮಾಡುತ್ತಿತ್ತೆಂದರೆ ಅವರ ವರ್ಚಸ್ಸು ಯಾವ ಪರಿಇದ್ದಿರಬೇಡ?

ಹೊಸದಾರಿ ತೋರಿದಾತ

1923ರಲ್ಲಿ ಬಂಗಾಳದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾವು ಏರುತ್ತಿತ್ತು. ಚಿತ್ತರಂಜನ್ ದಾಸ್ ಉಗ್ರ ಭಾಷಣಗಳು ಬ್ರಿಟಿಷರ ನಿದ್ದೆ ಕಸಿಯುತ್ತಿತ್ತು. ಆ ಕಾಲಕ್ಕೆ ‘ಸ್ವರಾಜ್ಯ’ ಪತ್ರಿಕೆ ಪ್ರಾರಂಭಿಸಿದ  ಬೋಸ್ ಬ್ರಿಟಿಷರ ನಯವಂಚಕತನಗಳನ್ನು ಲೇಖನಿ ಮೂಲಕ ಬಯಲು ಮಾಡತೊಡಗಿದರು.’ಫಾರ್ವರ್ಡ್’ ಪತ್ರಿಕೆಯ ಲೇಖನಗಳನ್ನಂತೂ ಜನ ಹುಚ್ಚೆದ್ದು ಓದುತ್ತಿದ್ದರು. ಸಹಜವಾಗಿ ಬ್ರಿಟಿಷರ ಸಕಾರಕ್ಕೆ ನಡುಕ ಶುರುವಾಗಿ ಬೋಸ್ ಬಂಧನಗಳೂ ಎಗ್ಗಿಲ್ಲದೆ ನಡೆದವು. ದಿನಕಳೆದಂತೆ ನೇತಾಜೀ ದಾರಿತೋರುವ ನಕ್ಷತ್ರದಂತೆ ಬದಲಾದರು. ಎಸೆದ ಕಲ್ಲುಗಳಲ್ಲೇ ಅಭೇಧ್ಯಕೋಟೆಯೊಂದು ನಿರ್ಮಾಣಗೊಳ್ಳುತ್ತಿತ್ತು.

ವಿದೇಶಾಂಗ ನೀತಿ ಚತುರ

ನೆಹರೂ, ಗಾಂಧಿಗೆ ಸುಭಾಷ್ ಚಂದ್ರ ಬೋಸರ ಮೇಲೆ ಅಸಹನೆ ಶುರುವಾಗಲಾರಂಭಿಸಿತು. ತನ್ನದು ಸಿಂಹ ಮಾದರಿಯ ಹೋರಾಟ ಎನ್ನುವಂತೆ ಸುಭಾಷ್  ಪ್ರಪಂಚದ ಇತರ ಕಡೆ  ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಭಿಪ್ರಾಯ ರೂಪಿಸತೊಡಗಿದರು. ಇವತ್ತಿನ ಕಾಲಕ್ಕೆ ಪ್ರಪಂಚ ಒಂದು ಎನ್ನುವ ತಂತ್ರಜ್ಞಾನ ಇದೆ. ಆ ಕಾಲಕ್ಕೆ ವಿದೇಶಾಂಗ ನೀತಿ ರೂಪಿಸುವುದು, ಇನ್ನೊಂದು ರಾಷ್ಟ್ರದ ಬೆಂಬಲ ಯಾಚಿಸುವುದು, ರಹಸ್ಯವಾಗಿ ಬಾಂಧವ್ಯ ವೃದ್ದಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಆದರೆ ನೇತಾಜೀಗೆ ಭಾರತ ಮಾತೆಯ ದಾಸ್ಯ ನಿದ್ದೆಗೆಡಿಸಿತ್ತು. ಅವರು ಬ್ರಿಟಿಷರಿಂದ ದೇಶವನ್ನು ಬಂಧಮುಕ್ತಗೊಳಿಸುವ ಸಲುವಾಗಿ ಕಾಬೂಲ್, ಅಫಘಾನಿಸ್ತಾನ, ಜರ್ಮನಿ ಹೀಗೆ ಊರೂರು ತಿರುಗಿದರು. ಹಿಟ್ಲರ್’ನಂತಹ ಘಟಾನುಘಟಿಗಳನ್ನು ಮಾತಾಡಿಸಿದರು. ಅವರ ಶ್ರಮ ಸಾಮಾನ್ಯವಾದುದಾಗಿರಲಿಲ್ಲ. ರಷ್ಯಾವನ್ನು ಕಬಳಿಸುವ ಮಹದಾಸೆ ಹೊಂದಿದ್ದ ಹಿಟ್ಲರ್’ನೊಂದಿಗೆ ಅವರು ನಿರಂತರ ಸಂಪರ್ಕ ಸಾಧಿಸುವ ಯತ್ನ ಮಾಡಿದರು.

 

ಭಾರತೀಯ ಸೈನಿಕರನ್ನು ಒಟ್ಟುಗೂಡಿಸಿ ಅಜಾದ್ ಹಿಂದ್ ಫೌಜ್ ಕಟ್ಟಿದ ಧೀಶಕ್ತಿಯ ಪರಿಚಯ ಭಾರತೀಯರಿಗೆ ಅರಿವಾಗುವ ಕಾಲ ಹತ್ತಿರ ಬಂದಿತ್ತು. ಬೋಸ್ ಯುದ್ಧ ತಯಾರಿಯಲ್ಲಿ ತೊಡಗಿದ್ದರು. ಶಸ್ತ್ರಾಸ್ತ್ರಗಳ ಸಂಗ್ರಹ, ಮಾತುಕತೆಗಳು ಜೋರಾಗುತ್ತಿದ್ದ ಕಾಲವದು. ಅಂಡಮಾನ್ ನಿಕೋಬಾರ್ ಧ್ವೀಪಸಮೂಹಗಳಲ್ಲಿ ಭಾರತದ ಕೆಚ್ಚು ಶೇಖರಣೆಗೊಳ್ಳುತ್ತಿತ್ತು. ಅಹಿಂಸಾ  ಹೋರಾಟದ ಆಮೆಗತಿಯಿಂದ ಬೇಸತ್ತಿದ್ದ ದೇಶದ ಜನತೆ ಸುಭಾಷರ ಸಶಸ್ತ್ರಕ್ರಾಂತಿಯತ್ತ ಎದುರು ನೋಡುತ್ತಿದ್ದರು. ದಕ್ಷಿಣದ  ಮಧುರೈ ಬಹುಕಾಲದ ಹಿಂದೆಯೇ ಬೋಸರ ಕುರಿತಾಗಿ ವಿಶ್ವಾಸ ವ್ಯಕ್ತಪಡಿಸಿಯೂ ಇತ್ತು. ಅವರು ಕಾಂಗ್ರೆಸ್ಸಿನ ಜೊತೆಗೆ ಭಿನ್ನ ನಿಲುವು ತಳೆದು ತಮಿಳ್ನಾಡಿಗೆ ಬಂದಾಗ ಜನ ಅವರನ್ನು ಹೊಸದೊಂದು ಬೆಳಕೆನ್ನುವಂತೆಯೇ ಆದರಿಸಿದ್ದರು.

ಕಾರಣ ಸಿಗದ ಮರಣ

ಅವರ ನಿರ್ಗಮನದ ಬಗೆಗೆ ನೂರಾರು ಕತೆಗಳಿವೆ. ವಿಮಾನ ಅಪಘಾತವಾಯಿತೆಂದು ದೇಶ ಹೇಳುತ್ತದೆ. ಆದರೆ, “ಸುಭಾಷ್ ಏನಾದರೂ ಸೈನ್ಯ ತೆಗೆದುಕೊಂಡು ಭಾರತದ ಗಡಿಗೆ ಬಂದರೆ ನಾನೇ ಸ್ವತಃ ಕತ್ತಿ ಹಿಡಿದು ಓಡಿಸುತ್ತೇನೆ” ಅಂತ ನೆಹರೂ ಸ್ವತಃ  ಹೇಳಿದ್ದರು. ನೆಹರೂರವರಿಗೆ ಬೋಸ್ ಬಗೆಗೆ ವಿಪರೀತ ಅಸಹನೆ ಬೇಗುದಿಗಳಿದ್ದವು. ಅಂತಹವರು ಪ್ರಧಾನಿಯಾದ ಮೇಲೆ ನೇತಾಜೀ ಸಾವಿನ ಬಗೆಗೆ ಯಾವ ಕಾಳಜಿ ವಹಿಸಿಯಾರು? ದೇಶದ ವ್ಯವಸ್ಥೆ ಮೂರು ಸಮಿತಿಗಳನ್ನು ನೇತಾಜೀ ಸಾವಿನ ಸಲುವಾಗಿಯೇ ನೇಮಿಸಲಾಗಿತ್ತು. ಫ್ರೆಂಚ್ ಪತ್ರಿಕೆಯೊಂದು ನೇತಾಜೀ ಸತ್ತಿಲ್ಲ ಎನ್ನುವ ವಿಸ್ಪೋಟಕ ವರದಿಯನ್ನೇ ಪ್ರಕಟಿಸಿತ್ತು. ಇಂಡೋನೇಷಿಯಾದ ಮೂಲಕ ಅವರು ತಪ್ಪಿಸಿಕೊಂಡರೆನ್ನುವ ಬಗೆಗೆ ವರದಿಗಳೂ ಆದವು. 1999ರ ಸಮಿತಿ ಅವರು ಬದುಕಿರಲೂಬಹುದೆನ್ನುವ ಊಹೆ ವ್ಯಕ್ತಪಡಿಸಿತು. ಆದರೆ ಬೋಸ್ ಇಂದು ಭಾರತದ ಜೊತೆಗೆ ಭೌತಿಕವಾಗಿಲ್ಲದಿರಬಹುದು. ವಿಚಾರಧಾರೆಯಾಗಿ ನಮ್ಮ ನಡುವೆ ಮೇಳೈಸುತ್ತಲೇ ಇದ್ದಾರೆ.

ಎಷ್ಟೊಂದು ಜನರು ನಾಯಕರು ನಿಗೂಢವಾಗಿ ನಾಪತ್ತೆಯಾದರು. ಶಾಸ್ತ್ರಿಯಂತಹವರ ಸಾವಿನ ಬಗೆಗೆ ಇಂದಿಗೂ ಅನುಮಾನಗಳಿವೆ. ಇತಿಹಾಸದ ನ್ಯಾಯಗಳು ಹೀಗೇಕೆ ಎನ್ನುವ ಚಿಂತೆ ಕಾಡುತ್ತದೆ. ನೇತಾಜೀಗೆ ಇತಿಹಾಸ ಕೊಡದ ನ್ಯಾಯಗಳನ್ನು ಭರತವರ್ಷ ಕೊಡುತ್ತದೆ; ಕೊಡಲೇಬೇಕು. ನೇತಾಜೀ ಭಾರತದ ಪಾಲಿಗೆ ಚಿರಂಜೀವಿಯಾಗೇ ಇರಲಿ. ಜನ್ಮದಿನ ದೇಶದ ಜನಗಳಲ್ಲಿ ಹೊಸ ಕೆಚ್ಚು ತುಂಬಲಿ.

ಶಿವಪ್ರಸಾದ್ ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Surya

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸುರ್ಯದವರಾದ ಶಿವಪ್ರಸಾದ್ 1990ರಲ್ಲಿ ಜನಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ನಂತರ ಇದೀಗ ಉದ್ಯೋಗ ನಿಮಿತ್ತ ಬೆಳಗಾವಿಯ ಅಥಣಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ವಿಧ್ಯಮಾನಗಳ ವಿಶ್ಲೇಷಣೆಯ ಜೊತೆಗೆ ಸೃಜನಶೀಲ ಸಾಹಿತ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕತೆ, ಕವನ, ಹಾಸ್ಯಪ್ರಬಂಧ ಲೇಖಕರ ಆಸಕ್ತಿಯ ಕ್ಷೇತ್ರಗಳು. ಚಾರಣ ಮೆಚ್ಚಿನ ಹವ್ಯಾಸಗಳಲ್ಲಿ ಒಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!