ಅಂಕಣ

ಹೀಗೊಂದು ಹೊಸ’ವರ್ಷ’ ಭವಿಷ್ಯ!

ಕಳೆದ ಮದ್ಯ(ಧ್ಯ)ರಾತ್ರಿಯ ಆಚರಣೆಯೊಂದಿಗೆ ಮತ್ತೊಂದು ಹೊಸವರ್ಷ ಬಂದೇಬಿಟ್ಟಿತು. ಆಚರಣೆಯ ಅಮಲು ಕಳೆಯುತ್ತಿದ್ದಂತೆ ಕೆಲವರಿಗೆ ಎಲ್ಲವೂ ಮಾಮೂಲು ಅನಿಸಲಾರಂಭಿಸುತ್ತಿದಂತೆ ಮತ್ತೆ ವರ್ಷವೂ ಹಳೆಯದೆನಿಸುತ್ತದೆ. ಆಗ ಹೊಸತೆನಿಸುವುದು ಕ್ಯಾಲೆಂಡರ್ ಮಾತ್ರ. ವರ್ಷ ಹದಿನೇಳು ತುಂಬಿ ಹದಿನೆಂಟಕ್ಕೆ ಬೀಳುತ್ತಿರುವ ಇದು ಹದಿಹರೆಯದ ಉತ್ತುಂಗ. ಹುಡುಗಿಯ ಹುಚ್ಚುಕೋಡಿಯ ಮನಸ್ಸಿನಂತೆ ಇದ್ದರೂ ಇರಬಹುದೇ? 2017 ಬೆಸ ಆದ್ದರಿಂದ ಬೇಸರ, ಆದರೆ 18 ಸಮ ಎಲ್ಲವೂ ಸಮರಸ ಎನ್ನುವಂತಿಲ್ಲ. ಹಾಗಾದರೆ ಹೊಸವರ್ಷದ ಭವಿಷ್ಯ ಹೇಗಿರಬಹುದು? ನೋಡೋಣ. ಅಂದ ಹಾಗೆ ಇದು ಗ್ರಹಗತಿಯ ಲೆಕ್ಕಾಚಾರದ ಭವಿಷ್ಯವಲ್ಲ ಬದಲಾಗಿ ಹಿಂದಿನ ವರ್ಷದ ಸ್ಥಿತಿ ಗತಿಗಳ ಆಧಾರದಲ್ಲಿ ಕಂಡುಕೊಂಡದ್ದು!!

ಪ್ರತೀ ವರ್ಷದಂತೆ ಈ ವರ್ಷವೂ ಜನರು ಹೊಸ ವರ್ಷದ ಹೊಸ್ತಿಲಲ್ಲಿ ಹೊಸ ಹೊಸ ರೆಸಲ್ಯೂಷನ್‌ಗಳ ದೊಡ್ಡ ದೊಡ್ಡ ಪಟ್ಟಿ ಮಾಡುತ್ತಾರೆ. ಆದರೆ ಅವುಗಳು ಅನುಷ್ಠಾನಕ್ಕೆ ಬರುವ ಯಾವುದೇ ಖಾತ್ರಿಯಿಲ್ಲ. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ, ಸಾಹಿತ್ಯ ಸಮ್ಮೇಳನದ ನಿರ್ಣಯ ಹಾಗೂ ಹೊಸ ವರ್ಷದ ರೆಸಲ್ಯೂಷನ್  ಹೀಗೆ ಇವುಗಳೆಲ್ಲವನ್ನೂ ಒಂದೇ ಬಗೆಯ ದೋಷ ಕಾಡುತ್ತಿರುವುದರಿಂದ ಇವು ಯಾವುದೂ ಹಿಂದೆಯೂ ಕಾರ್ಯರೂಪಕ್ಕೆ ಬಂದಿಲ್ಲ, ಮುಂದೆಯೂ ಬರುವ ಸಾಧ್ಯತೆ ಕ್ಷೀಣ.

ಈ ವರ್ಷವೂ ರಾಜ್ಯ ಹಾಗೂ ರಾಷ್ಟ್ರಕ್ಕೆ ಶತ್ರುಬಾಧೆಯ ಅಪಾಯವಂತೂ ಇದ್ದಿದ್ದೇ! ಪಾಕಿಸ್ಥಾನ, ಚೀನಾಗಳಂತಹ ನೆರೆರಾಷ್ಟ್ರಗಳು ಮತ್ತು ಗೋವಾ, ಮಹಾರಾಷ್ಟ್ರ, ತಮಿಳುನಾಡುಗಳಂತಹ ನೆರೆ ರಾಜ್ಯಗಳಿರುವಾಗ ಇಂತಹ ಬಾಧೆಗಳು ಬಹುನಿರೀಕ್ಷಿತವೇ ಸರಿ. ಆದಷ್ಟು ಇವುಗಳೊಂದಿಗೆ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾದ ಅವಶ್ಯಕತೆಯಿದೆ. ಇದಕ್ಕೂ ಮಿಗಿಲಾದ ಅಪಾಯ ಇರುವುದು ದೇಶದೊಳಗೇ ಇದ್ದುಕೊಂಡು ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವವರಿಂದ. ಅವರ ವರ್ತನೆಯಲ್ಲಿ ಈ ವರ್ಷವೂ ಯಾವ ಸುಧಾರಣೆಯೂ ಕಾಣದು.

ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ, ಸಾಮಾಜಿಕ ಜಾಲತಾಣಗಳಲ್ಲಿ ತಿಕ್ಕಾಟ, ಸಂಘರ್ಷ, ಪೋಲಿಸ್ ದೂರು, ಬಂಧನ ಮುಂತಾದ ಘಟನಾವಳಿಗಳು ನಡೆದು ಜನರ ಮಾನಸಿಕ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಯಿದೆ.

ಇನ್ನು ಈ ವರ್ಷದಲ್ಲಿಯೂ ಕೂಡಾ ಕೆಲವರಿಗೆ ಬಿಟ್ಟಿ ನಿವೇಶನ ಸಿಗುವ ಯೋಗವಿದೆ. ಹಾಗಂಥ ಇದು ಅರ್ಹ ಫಲಾನುಭವಿಗಳಿಗಲ್ಲ ಬದಲಾಗಿ ಸದಾ ಆಡಳಿತ ಪಕ್ಷದ ಪರ ನಿಲ್ಲುವ, ಅವರ ತಪ್ಪುಗಳ ಬಗ್ಗೆ ಅಪ್ಪಿ ತಪ್ಪಿಯೂ ಚಕಾರವೆತ್ತದೆ ತಾವು ನಿಷ್ಪಕ್ಷಪಾತ ಧೋರಣೆಯವರು ಎನ್ನುತ್ತಲೇ ಒಂದು ನಿರ್ಧಿಷ್ಟ ಪಕ್ಷ ಹಾಗೂ ಸಿದ್ಧಾಂತದ ವಿರುದ್ಧವೇ ಸದಾ ಹುಯಿಲೆಬ್ಬಿಸುವ ಹಲವರಿಗೆ ಮುಂದಿನ ದಿನಗಳಲ್ಲಿ ಈ ಯೋಗ ಕೂಡಿಬರಬಹುದು. ಆದರೆ ಮತ ಚಲನೆಯ ಪಥದಲ್ಲಿ ವ್ಯತ್ಯಾಸ ಕಂಡುಬಂದು ಏನಾದರೂ ಬದಲಾವಣೆ ಸಂಭವಿಸಿದ್ದೇ ಆದಲ್ಲಿ ಈ ಯೋಗಕ್ಕೆ ಕಲ್ಲುಬೀಳುವುದು ನಿಶ್ಚಿತ.

ಧನಲಾಭಕ್ಕೆ ಪೂರಕವಾದ ಹಲವಾರು ಬೆಳವಣಿಗೆಗಳಿಗೆ ಈ ಹೊಸ ವರ್ಷವು ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಈ ವರ್ಷದಲ್ಲಿ ಚುನಾವಣೆ ಇರುವುದರಿಂದ ಸೂಟ್‘ಕೇಸ್‘ಗಳ ವಿನಿಮಯ ನಡೆಯುವ ಸಂಭವನೀಯತೆ ಹೆಚ್ಚಿದ್ದು ಕೆಲವು ವ್ಯಕ್ತಿ ಹಾಗೂ ಪಕ್ಷಗಳ ಆರ್ಥಿಕ ವಹಿವಾಟು ಜೋರಾಗಿರುತ್ತದೆ. ಅದರಲ್ಲಿ ಒಂದಷ್ಟು, ಜನರ ಕೈಸೇರುತ್ತದೆ ಎಂದೂ ನಿರೀಕ್ಷಿಸಬಹುದು. ಏಕೆಂದರೆ ಅವರು ಮತದಾರರು ಎಂಬ ನೆಲೆಯಲ್ಲಿ ಮಾತ್ರ. ಬಹುಮತ ಬರದೇ ಇದ್ದ ಪಕ್ಷದಲ್ಲಿ ಕಾಂಚಾಣದ ಖದರ್ ಇನ್ನೂ ಹೆಚ್ಚಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪಕ್ಷೇತರರಿಗೆ ಈ ಬಾರಿಯೂ ಅಂತದ್ದೊಂದು ಅದೃಷ್ಟ ಕೂಡಿಬರಬಹುದು.

ಅಷ್ಟೇ ಅಲ್ಲದೆ ಇನ್ನೊಂದು ಆವೃತ್ತಿಯ ಪ್ರಶಸ್ತಿ ವಾಪ್ಸಿ ಹಾಗೂ ಅಸಹಿಷ್ಣುತೆಯ ಕೂಗಿಗೆ ಈ ವರ್ಷ ಸಾಕ್ಷಿಯಾಗಬಹುದು ಏಕೆಂದರೆ 2019ರಲ್ಲಿ ಸಂಸತ್ ಚುನಾವಣೆಗಳು ನಡೆಯಲಿರುವುದರಿಂದ ಪೂರ್ವಭಾವಿಯಾಗಿ 2018ರಲ್ಲೇ ಇದೆಲ್ಲಾ ನಡೆದರೆ ಅಚ್ಚರಿಪಡಬೇಕಾಗಿಲ್ಲ. ಆದ್ದರಿಂದ ಜನ ಈ ಬಗ್ಗೆ ಆದ್ಯ ಮುನ್ನೆಚ್ಚರಿಕೆ ಹೊಂದಿರುವುದು ಸೂಕ್ತ.

ಓವರ್‌ಡೋಸ್: ಜನ ಎಷ್ಟೇ ಸಂಭ್ರಮದಿಂದ, ಅದ್ಧೂರಿಯಾಗಿ ಹೊಸವರ್ಷವನ್ನು ಸ್ವಾಗತಿಸಿದರೂ ಆರಂಭದ ಒಂದೆರಡು ತಿಂಗಳು ಏನೋ ಒಂದು ರೀತಿಯ ಭಯ ಇದ್ದೇ ಇರುತ್ತದೆ ಏಕೆಂದರೆ ಅದು ಜನ’ವರಿ’ ಮತ್ತು ಫೆಬ್ರು’ವರಿ’.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!