ಅಂಕಣ

ಸಮಾ’ವೇಶ’ಗಳ ಸಾಧನೆಯೇನು ಗೊತ್ತೇ?!

 

ರಾಜ್ಯದಲ್ಲೀಗ ಸಮಾವೇಶಗಳ ಪರ್ವಕಾಲ. ವಿಧವಿಧವಾದ ಶೀರ್ಷಿಕೆಗಳಲ್ಲಿ ಹಲವಾರು ಸಮಾವೇಶಗಳು ನಡೆಯುತ್ತಿದ್ದರೂ ಅವುಗಳೆಲ್ಲದರ ಅಂತಿಮ ಉದ್ದೇಶ ಮುಂಬರುವ ಚುನಾವಣೆಯಲ್ಲಿ ಗೆಲುವಿನ ಗುರಿ ತಲುಪುವುದಷ್ಟೇ ಎನ್ನುವುದು ಸುಸ್ಪಷ್ಟ. ಸಿಕ್ಕ ಸಿಕ್ಕಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಆವೇಶ, ಆಕ್ರೋಶಗಳ ಗುಟುರು ಹಾಕುವ ಈ ರಾಜಕೀಯ ಮಂದಿಗಳು ಚುನಾವಣೆ ಬಂತೆಂದರೆ ಸಾಕು ಸಮಾವೇಶಗಳನ್ನು ಆಯೋಜಿಸಿ ಅಲ್ಲಿ ತಮ್ಮ ಈ ಚಾಳಿಯನ್ನು ಮುಂದುವರಿಸುತ್ತಾರಷ್ಟೇ. ಆವೇಶಕ್ಕೂ ಸಮಾವೇಶ, ಆಕ್ರೋಶಕ್ಕೂ ಸಮಾವೇಶ, ಸಮಾಧಾನಕ್ಕೂ ಸಮಾವೇಶ ಅಷ್ಟೇ ಅಲ್ಲ ಅಸಮಾಧಾನಕ್ಕೂ ಸಮಾವೇಶ ಎಂಬಂತಾಗಿದೆ. ಸಾಧನೆಗೊಂದು ಸಮಾವೇಶವಿರುವಂತೆ ತಮ್ಮ ವೇದನೆಯನ್ನು ತೋಡಿಕೊಳ್ಳಲೂ ಮತ್ತೆ ಮೊರೆ ಹೋಗುವುದೂ ಇದೇ ಸಮಾವೇಶಗಳಿಗೆ. ವಿಕಾಸ, ಭಾವೈಕ್ಯತೆ, ಸೌಹಾರ್ದತೆ, ಪರಿವರ್ತನೆ ಹೀಗೆ ಹತ್ತು ಹಲವು ವಿನೂತನ ಪರಿಕಲ್ಪನೆಗಳೆಲ್ಲಾ ನಮ್ಮ ರಾಜಕಾರಣಿಗಳಿಗೆ ನೆನಪಾಗುತ್ತಿದೆಯೆಂದರೆ, ಅದರ ಹೆಸರಲ್ಲೆಲ್ಲಾ ಸರಣಿ ಸಮಾವೇಶಗಳು ನಡೆಯುತ್ತವೆಯೆಂದರೆ ಅತ್ಯಂತ ಸುಲಭವಾಗಿ ಊಹಿಸಬಹುದು ಚುನಾವಣೆ ತೀರಾ ಸಮೀಪದಲ್ಲಿದೆ ಎಂದು.

ಮತದ ಹಪಾಹಪಿಗಾಗಿ ಹಮ್ಮಿಕೊಳ್ಳುವ ಈ ಸಮಾವೇಶಗಳಲ್ಲಿ ಏನೂ ಪ್ರಯೋಜನ ತಾನೇ ಇದ್ದೀತು ಎಂದು ಮೂಗು ಮುರಿಯುವವರು ಒಮ್ಮೆ ಈ ಅಂಶಗಳೆಡೆಗೆ ಗಮನಹರಿಸಬೇಕು. ಆದರೆ ಇದಕ್ಕೆ ಮೀರಿದ, ರಾಜಕಾರಣಿಗಳು ಬೊಗಳೆಬಿಡುವ ಬೇರೇನಾದರೂ ಮಹಾನ್ ಸಾಧನೆ ಇದರಿಂದ ಆಗಲಿದೆಯೇ ಎಂದು ಕೇಳಿದರೆ “ಇಲ್ಲ” ಎನ್ನುವುದಷ್ಟೇ ಉತ್ತರ.

ಆರ್ಥಿಕತೆಯ ಸ್ಥಿತಿ ಸುಧಾರಣೆಯಲ್ಲಿ ಈ ಸಮಾವೇಶಗಳ ಪಾತ್ರ ಗಣನೀಯವಾದುದು. ದೇಶದ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುತ್ತಿದೆಯೆಂದರೆ ಅದಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ಸಮಾವೇಶಗಳ ಕೊಡುಗೆ ಮಹತ್ತ್ವದ್ದು ಎಂದೇ ಹೇಳಬಹುದು. ಅಷ್ಟೇ ಅಲ್ಲದೆ ಐದು ವರ್ಷಗಳ ಕಾಲ ಆಡಳಿತ ಪಕ್ಷ/ ವಿರೋಧ ಪಕ್ಷವಾಗಿದ್ದುಕೊಂಡು ತನ್ನ ಪಕ್ಷದ ಚುನಾಯಿತ ಪ್ರತಿನಿಧಿಗಳ ನೆರವಿನಿಂದ ವಾಮ ಮಾರ್ಗಗಳ ಮೂಲಕ ಸಂಗ್ರಹಿಸಿರುವ ದೊಡ್ಡ ಪ್ರಮಾಣದ ಹಣ ಮತ್ತೆ ಚಲಾವಣೆಗೆ ಬರಲು ಇದು ಕಾರಣವಾಗಲಿದೆ. ಮೇಲಾಗಿ ಈ ಸಮಾವೇಶಗಳಿಗೆ ನೀಡಿರುವ ದೇಣಿಗೆಯ ಆಧಾರದಲ್ಲಿಯೇ ರಾಜಕೀಯ ಆಕಾಂಕ್ಷೆಯುಳ್ಳ ವ್ಯಕ್ತಿಗಳ ಭವಿಷ್ಯ ನಿರ್ಧಾರವಾಗುವುದೂ ಇದೆ.

ಈ ಸಮಾವೇಶಗಳು ನಡೆಯುತ್ತಿರುವುದರಿಂದಾಗಿ ಶಾಮಿಯಾನದವರಿಗೆ ಒಳ್ಳೆಯ ವ್ಯವಹಾರವಾಗುತ್ತಿದೆ. ಹಾರ ತುರಾಯಿಗಳನ್ನು ಮಾಡಿ ಮಾರುವವರಿಗೆ ಇದರಿಂದ ಕೆಲಸವೋ ಕೆಲಸ. ಕೇಟರಿಂಗ್‌ನವರಂತೂ ಎಲ್ಲಾ ಆರ್ಡರ್‌ಗಳನ್ನು ಪೂರೈಸಲಾಗದೆ ಕೈಕೈ ಹಿಸುಕಿಕೊಳ್ಳುತ್ತಿದ್ದಾರಂತೆ. ಈ ನಡುವೆ ದೇವಸ್ಥಾನದ ಊಟವನ್ನು ತಂದು, ಸಮಾವೇಶದಲ್ಲಿ ಭಾಗವಹಿಸಿದವರಿಗೆ ಹಂಚಿದ ಸುದ್ಧಿ ಕೇಳಿ ಅವರೆಲ್ಲಾ ಕೋಪಗೊಂಡಿರಲಿಕ್ಕೂ ಸಾಕು. ಇದು ಹೀಗೆ ಮುಂದುವರಿದರೆ ತಮ್ಮ ವ್ಯವಹಾರ ತೋಪೆದ್ದು ಹೋಗಲಿದೆ ಎಂಬ ಆತಂಕ ಅವರದ್ದು. ಇಷ್ಟೇ ಅಲ್ಲದೆ ಬ್ಯಾನರ್ ಬಂಟಿಂಗ್‌ಗಳನ್ನು ಮುದ್ರಿಸುವವರಿಗಂತೂ ಈಗ ಬಿಡುವಿಲ್ಲದ ಕೆಲಸ. ಸೌಂಡ್ ಸಿಸ್ಟಮ್‌ನವರ ಕಲೆಕ್ಷನ್ ಸೌಂಡ್ ಆಗಿಯೇ ಇರುತ್ತದೆ. ಪತ್ರಿಕೆಗಳಿಗೋ ಈ ಸಂಬಂಧ ಭರ್ಜರಿ ಜಾಹೀರಾತುಗಳು ಲಾಭ. ಇನ್ನು ಕೆಲವೆಡೆ ಪತ್ರಕರ್ತರಿಗೇ ಉಡುಗೊರೆಯ ಸಮ್ಮಾನ (ಅವಮಾನ?).

ಸಮಾಜವನ್ನು ಇನ್ನಿಲ್ಲದಂತೆ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಈ ಸಮಾವೇಶಗಳು ಪರಿಹಾರ ಎನ್ನುವುದು ಕೆಲವು ಜೀವಪರರ ಅಭಿಪ್ರಾಯ. ಈ ಸಮಾವೇಶಗಳ ಸಂದರ್ಭದಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡುವವರಿಗೆಲ್ಲಾ ಕೆಲಸ ಸಿಗಲಿದೆ. ಸಮಾವೇಶಗಳನ್ನು ಆಯೋಜಿಸುವವರ ಆಣತಿಯಂತೆ, ಜನರನ್ನು ಸೇರಿಸುವ ಗುತ್ತಿಗೆ ಪಡೆದವರು ಮನೆಬಾಗಿಲಿಗೇ ಬಂದು ಅಂತಹವರನ್ನು ಕರೆದುಕೊಂಡು ಹೋಗುತ್ತಾರೆ. ಸಮಾವೇಶದಲ್ಲಿ ಭಾಗವಹಿಸಿದ್ದಕ್ಕೆ ಹಣವನ್ನು ನೀಡುವುದಷ್ಟೇ ಅಲ್ಲದೆ, ಊಟ-ತಿಂಡಿಯನ್ನೂ ನೀಡುತ್ತಾರೆ. ಹೋಗಿ ಬರಲು ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಒಟ್ಟಾರೆಯಾಗಿ ನಿರುದ್ಯೋಗಿಗಳಿಗಂತೂ ಈ ಸಂದರ್ಭದಲ್ಲಿ ಎಲ್ಲಿಲ್ಲದ ಡಿಮ್ಯಾಂಡ್! ಅಲ್ಲದೆ ಜನರನ್ನು ಸೇರಿಸುವ ಗುತ್ತಿಗೆ ಪಡೆವವರು ಶೀಘ್ರ ಧನಿಕರಾಗಲೂ ಈ ಸಮಾವೇಶಗಳು ಅನುಕೂಲಕರ. ಒಟ್ಟಾರೆಯಾಗಿ ಈ ಸಮಾವೇಶಗಳು ಚಪ್ಪಾಳೆ ಹೊಡೆಯುವ ಕೈಗಳನ್ನು ಬಲಪಡಿಸುತ್ತಿರುವುದಂತೂ ಸುಳ್ಳಲ್ಲ!

ಓವರ್‌ಡೋಸ್: ಎಂದೋ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನಾ ಭಾಗ್ಯ ಸಿಗದ ಹಾಗೂ ಕಾಮಗಾರಿ ಅಪೂರ್ಣವಾಗಿದ್ದು ಉದ್ಘಾಟನೆಗೆ ಸಿದ್ಧವಾಗದ ಕಟ್ಟಡಗಳಿಗೆ ಉದ್ಘಾಟನಾ ಭಾಗ್ಯ ಸಿಗುವುದು ಸಮಾವೇಶಗಳ ಪರಿಣಾಮಗಳಲ್ಲೊಂದು.

– ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!