ಅಂಕಣ

ವಿಶ್ವಚೇತನ ಸ್ವಾಮಿ ವಿವೇಕಾನಂದರ ನೆನೆಯುತ್ತಾ…

ಧರ್ಮ! ಪ್ರಪಂಚದಲ್ಲಿ ಅತಿಯಾಗಿ ಚರ್ಚಿಸಲ್ಪಟ್ಟ ವಿಚಾರವೊಂದಿದೆ ಎಂದರೆ ಅದು ಧರ್ಮ. ಸನ್ನಡತೆ, ಸನ್ಮಾರ್ಗದ ಪಯಣ ಜೊತೆಗೆ ದೈವತ್ವದ ಅರಿವು ಕೊನೆಗೆ ಮೋಕ್ಷದ ಸಂಪಾದನೆ. ಇವಿಷ್ಟು ಧರ್ಮದ ಮೂಲ ಆಶಯಗಳು. ಇವುಗಳಿಗಾಗಿಯೇ ಬಹುತೇಕ ಧರ್ಮಗಳು ಮೈದಳೆದಿರುವುದು ಎಂದರೆ ತಪ್ಪಾಗದು. ಆದರೆ ಇಂದು ಧರ್ಮದ ಈ ಮೂಲ ಆಶಯಗಳು ಕಣ್ಮರೆಯಾಗಿ ಬರೇ ‘ತಾನು ಮೇಲು ತಾನು ಮೇಲು’ ಎಂಬ ವಿಚಾರ ಶೂನ್ಯತೆಯನ್ನ ಪ್ರೇರೇಪಿಸುತ್ತಾ ಸಂಘರ್ಷದ ಬದುಕನಷ್ಟೇ ನೀಡುತ್ತಿದೆ! ಅದರಲ್ಲೂ ಪಾಶ್ಚಿಮಾತ್ಯ ಮೂಲದ ಧರ್ಮಾನುಯಾಯಿಗಳು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಯೇ ಸರಿ! ಹೌದು, ಇಂದು ಪ್ರಪಂಚದಲ್ಲಿ ವರ್ಗ ವರ್ಗಗಳ ನಡುವೆ ಸಂಘರ್ಷಗಳು ನಡೆದಿದ್ದರೆ, ಜನಾಂಗ ಜನಾಂಗಗಳು ಹೊಡೆದಾಡಿಕೊಂಡು ಸತ್ತಿದ್ದರೆ, ನಾಗರೀಕತೆಗಳು ಮಣ್ಣುಪಾಲಾಗಿ ಇತಿಹಾಸದ ಪುಟ ಸೇರಿಕೊಂಡಿದ್ದರೆ ಅಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ‘ಧರ್ಮವೇ’ ಕಾರಣವಾಗಿ ನಿಲ್ಲುತ್ತದೆ. ಧರ್ಮದ ಈ ರೀತಿಯ ನಡೆಯನ್ನೇ ಅಂದು ವಿಶ್ವಚೇತನ ಸ್ವಾಮಿ ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದಲ್ಲಿ (1893) ಕಟು ಶಬ್ದಗಳಿಂದ ವಿರೋಧಿಸಿದ್ದು. ಅವರ ಪ್ರಕಾರ ಎಲ್ಲ ಧರ್ಮವೂ ಒಂದಷ್ಟು ಸದಾಶಯಗಳನ್ನು, ಸದ್ವಿಚಾರಗಳನ್ನು ಹೊಂದಿರುತ್ತದೆ. ಆದರೆ ತನ್ನ ಧರ್ಮವೇ ಮೇಲು ತನ್ನ ಧರ್ಮವೊಂದೇ ಅಂತಿಮ ಎನ್ನುವ ವಾದವು ಇವರ ಪ್ರಕಾರ ಧಾರ್ಮಿಕ ಅಜ್ಞಾನದ ಗುರುತು. ‘‘Hindu or Christian or a Buddhist whoever thinks his religion is greater than that of others, is like a frog in a well, unwilling to accept either that there are other wells, or, that there are great seas outside their wells’’ಎಂದು ವಿವೇಕಾನಂದರು ತೋರಿಕೆಯ ಧರ್ಮಾನುಯಾಯಿಗಳನ್ನು ಜಾಡಿಸಿದ ಪರಿ. ಎಲ್ಲಾ ಧರ್ಮವನ್ನು ಗೌರವಿಸಬೇಕು ಎಂಬ ಸದಾಶಯ ಇವರದ್ದಾಗಿತ್ತು ಎಂಬುದನ್ನು ಇವರ ಈ ನುಡಿಗಳಿಂದ ಅರ್ಥೈಸಬಹುದು.

ಹೌದು, ಭಾರತವೆಂದರೆ ಭಿಕ್ಷುಕರ ದೇಶ. ಭಾರತವೆಂದರೆ ಅನಾಗರೀಕತೆಯ ನೆಲ. ಭಾರತವೆಂದರೆ ಬಡತನದ ಕೂಪ ಎಂದೆಲ್ಲಾ ಅರಿತಿದ್ದ ವಿದೇಶಿಯರಿಗೆ ಮೊದಲಬಾರಿಗೆ ಭಾರತವೆಂದರೆ ನಾವು ಕಂಡು ಕೇಳರಿಯದ ಸಾಂಸ್ಕøತಿಕ ಹಿರಿಮೆಯನ್ನು ಹೊಂದಿರುವ ದೇಶ, ಸನಾತನ ಶ್ರೇಷ್ಟತೆಯನ್ನು ಮೈಗೂಡಿಸಿಕೊಂಡು ವಿಶ್ವ ಶಾಂತಿಗೆ ಪ್ರೇರೇಪಣೆದಾಯಿಯಾಗಿರುವ ಅತ್ಯುನ್ನತ ರಾಷ್ಟ್ರವೆಂದು ಅರಿವಾದದ್ದೇ ಸ್ವಾಮೀ ವಿವೇಕಾನಂದರಿಂದ. ಒಂದಷ್ಟು ಕೈಸ್ತ ಮಿಷನರಿಗಳನ್ನು ಮೇಲಿಂದ ಮೇಲೆ ಕಳಹುಹಿಸುತ್ತಾ ಭಾರತದ ನೆಲದಲ್ಲಿ ಮತಾಂತರವನ್ನು ಗೈಯುತ್ತಾ ಭಾರತವನ್ನು ರೋಗಿಷ್ಟ ದೇಶವೆಂದೇ ಜಗತ್ತಿನ ಮುಂದೆ ಬಿಂಬಿಸ ಹೊರಟಿದ್ದ ಪಾಶ್ಚಿಮಾತ್ಯರಿಗೆ ವಿವೇಕಾನಂದರ ತರ್ಕಬದ್ಧ ಜ್ಞಾನ ಅರಗಿಸಿಕೊಳ್ಳದಂತಾಗಿತ್ತು. ಪಾಶ್ಚಿಮಾತ್ಯರು ಅಥವಾ ಬಿಳಿಯರು ಎಂದರೆ ಸ್ವತಃ ದೇವರ ಪ್ರತಿನಿಧಿಗಳು. ಅವರು ನಂಬಿದ ನಂಬಿಕೆಗಳಷ್ಟೇ ಸತ್ಯ. ಭಾರತದಂತಾಹ ಮೂರ್ತಿ ಪೂಜಕ, ಬಹುದೇವತಾರಾಧನೆ ಹೊಂದಿರವ ‘ಅನಾಗರೀಕ’ (ಪಾಶ್ಚಿಮಾತ್ಯರ ಪ್ರಕಾರ ಭಾರತದ್ದು ಅನಾಗರಿಕತೆ ಪಾಶ್ಚಾತ್ಯರದ್ದು ಮಾತ್ರ ನಾಗರಿಕತೆ!) ದೇಶವನ್ನು ಕ್ರಿಸ್ತನ ಭೂಮಿಯನ್ನಾಗಿಸುವ ಜವಬ್ದಾರಿ ಪ್ರತೀ ಬಿಳಿಯನಿಗೂ ಇದೆ ಎಂಬ ವಿಚಿತ್ರವಾದ ‘ವೈಟ್‍ಮ್ಯಾನ್ಸ್ ಬರ್ಡ್‍ನ್’ ಸಿದ್ಧಾಂತವನ್ನು ಹೋದಲೆಲ್ಲಾ ಅರುಹುತ್ತಿದ್ದ ಪಶ್ಚಿಮದ ರಾಷ್ಟ್ರಗಳಿಗೆ ತತ್ವಜ್ಞಾನದ ಮೂಲಕ ಬಲವಾದ ಪೆಟ್ಟು ನೀಡಿದ್ದೇ ಈ ವಿವೇಕಾನಂದರು! ಆದ್ದರಿಂದಲೇ ಅಂದು ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಇವರ ಮಾತುಗಳನ್ನು ಕೇಳಿದ ಅಮೇರಿಕಾದ ‘ದಿ ನ್ಯೂಯಾರ್ಕ್ ಹೆರಾಲ್ಡ್ ಪತ್ರಿಕೆಯು “Undoubtedly the greatest figure in the Parliament of Religions. After hearing him, we feel foolish to send missionaries to this learned nation.” [‘ವಿವೇಕಾನಂದರ ಮಾತುಗಳನ್ನು ಕೇಳಿದ ಮೇಲೆ ಇಂತಹ ಜ್ಞಾನ ಶ್ರೇಷ್ಟ ಭಾರತಕ್ಕೆ ಮಿಷನರಗಿಳನ್ನು ಕಳುಹಿಸುವ ನಾವೇ ಮೂರ್ಖರು’] ಎಂದು ಪ್ರಕಟಿಸುವ ಮೂಲಕ ಭಾರತದ ಮೇಲಿನ ಪಶ್ಚಿಮದ ರಾಷ್ಟ್ರಗಳ ಅಭಿಪ್ರಾಯವನ್ನು, ಮತಾಂತರತೆಯನ್ನು ತಪ್ಪೆಂದು ಒಪ್ಪಿಕೊಂಡಿದ್ದು!
ವಿವೇಕಾನಂದರ ಆಧ್ಯಾತ್ಮ ಜ್ಞಾನ ಅಥವಾ ತತ್ವಜ್ಞಾನದ ಮೇಲಣ ಅವರ ಹಿಡಿತ ಅತಿ ಶ್ರೇಷ್ಠವಾದುದು. ಭಾರತದ ಋಷಿ ಪರಂಪರೆಯು ನೀಡಿದ್ದ ಅಗಾಧವಾದ ಜ್ಞಾನವನ್ನು ಗುರು ಪರಮಹಂಸರ ಮೂಲಕ ಅರಿತಿದ್ದರಲ್ಲದೆ ಸ್ವ ಅನುಭವದ ಮೂಲಕವೂ ಧರ್ಮ ದೇವರುಗಳೆಂಬ ಕ್ಲಿಷ್ಟವಿಚಾರವನ್ನು ಅರಗಿಸಿಕೊಂಡಿದ್ದರು. ಒಂದರ್ಥದಲ್ಲಿ ಅವರದ್ದು ಬರೇ ಪುಸ್ತಕದ ಜ್ಞಾನವಾಗಿರಲಿಲ್ಲ ಬದಲಾಗಿ ಸ್ವ ಅನುಭವದ ವಿಚಾರಗಳಾಗಿತ್ತು. ಆ ಆದ್ದರಿಂದಲೇ ಇವರಿಗೆ ಅದ್ಯಾವ ಧರ್ಮಗಳೂ ಕೀಳಲ್ಲ ಎಂಬ ಪರಿಶುಭ್ರ ಭಾವನೆ ಮೂಡಿದ್ದು. ವಸುದೈವ ಕುಟುಂಬಕಂ ಎಂಬ ವಿಶ್ವ ಭ್ರಾತೃತ್ವದ ಮನಸ್ಸು ಜಾಗೃತವಾದದ್ದು. ಎಲ್ಲಕಿಂತಲೂ ಹೆಚ್ಚಾಗಿ ವಿದೇಶೀಯರ ನೆಲದಲ್ಲೇ ನಿಂತು ಅವರ ಧಾರ್ಮಿಕ ನಡೆಗಳಿಗೆ ಪ್ರಶ್ನೆಗಳನ್ನು ಎಸೆಯುವ, ವಿಶ್ಲೇಷಿಸು ಧೈರ್ಯ ಬಂದದ್ದು. ವಿವೇಕಾನಂದರ ಬಗೆಗೆ ಅದೆಷ್ಟು ತಿಳಿದರೂ ಅದೂ ಕಡಿಮೆಯೇ. ಯೋಗ. ಆಧ್ಯಾತ್ಮ, ಸನಾತನ ಧರ್ಮವೆಂದು ನೆನಪಾದಗಲೆಲ್ಲಾ ಮೊದಲ ಸಾಲಲ್ಲಿ ಕಾಣುವುದು ಇದೇ ವಿವೇಕಾನಂದರ ವಿಚಾರಧಾರೆಗಳು. ಇಂದು ಅಕಾಡೆಮಿಕ್ ಪುಸ್ತಕಗಳು ವಿವೇಕಾನಂದರನ್ನು ಬರೇ ಓರ್ವ ವಾಗ್ಮಿಯಾಗಿಯಷ್ಟೇ ಪರಿಚಯಿಸುತ್ತದೆ ಎಂಬುದು ವಿಷಾದನೀಯ. ಬಹುಷಃ ವಿವೇಕಾನಂದರು ಅಂದು ಚಿಕಾಗೋ ಪ್ರವಾಸ ಗೈಗೊಳ್ಳದೇ ಹೋಗುತ್ತಿದ್ದರೆ ಈ ಅಕಾಡೆಮಿಕ್‍ಗಳು ಅಷ್ಟನ್ನೂ ಮಾಡುತ್ತಿರಲಿಲ್ಲವೇನೋ! ನಿಜಕ್ಕೂ ವಿವೇಕಾನಂದರೂ ವಾಗ್ಮಿಯಷ್ಟೇ ಅಲ್ಲ. ಅವರು ಅಧ್ಯಾತ್ಮದ ಅನುಭವಗಳನ್ನು ಸ್ವತಃ ಅನುಭವಿಸಿದ ಸಂತ ಶ್ರೇಷ್ಟ. ಆದ್ದರಿಂದಲೇ ಅಂತೆಕಂತೆಗಳನ್ನು ಅರುಹುತ್ತಾ ಬೋಧನೆಗಳನ್ನು ನೀಡುತ್ತಿದ್ದ ಎಲ್ಲರನ್ನೂ ಪಕ್ಕಕ್ಕೆ ಸರಿಸಿ ನನಗೂ ದೇವರನ್ನು ತೋರಿಸಬಲ್ಲಿರ ಎಂಬ ಪ್ರಶ್ನೆಗೆ ಹೌದು ಎಂದಿದ್ದ ಪರಮಹಂಸರನ್ನೇ ಗುರುವಾಗಿ ಸ್ವೀಕರಿಸಿದ್ದು. ಎಲ್ಲವನ್ನೂ ಅದ್ಯಾರೋ ಹೇಳಿದರು ಎಂಬದು ನಂಬದಿರಿ. ಪ್ರತೀಯೊಂದನ್ನೂ ತನ್ನ ಸ್ವಂತ ಅನುಭವಕ್ಕೆ ದಕ್ಕಿಸಿಕೊಳ್ಳಿ ಎನ್ನುವುದು ವಿವೇಕಾನಂದರ ಚಿಂತನೆ.

ಯೋಗ ಹಾಗೂ ಧ್ಯಾನದ ವಿಚಾರದಲ್ಲಿ ಇವರು ಬರೆದ ಮೊತ್ತ ಮೊದಲ ಪುಸ್ತಕ ‘ರಾಜಯೋಗ’ವು ಸರ್ವಕಾಲಿಕ ಶ್ರೇಷ್ಟ ಪುಸ್ತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದೂವಾಗಿದ್ದು ಕೇಸರಿ ಧರಿಸಿಕೊಂಡು ಅವರೆಂದೂ ಸನಾತನ ಧರ್ಮವನ್ನು ಪ್ರಚುರಪಡಿಸುವುದರಲ್ಲಷ್ಟೇ ಕಾಲ ಕಳೆದಿಲ್ಲ. ಅನ್ಯ ಧರ್ಮವನ್ನಂತೂ ಅವರೆಂದೂ ಹೀನಾಯವಾಗಿ ಪರಿಗಣಿಸಿಲ್ಲ. ಆದರೆ ಅದೆಲ್ಲೋ ಓರ್ವ ದೇವನಿರುವ ಅವ ನಮ್ಮನ್ನೆಲ್ಲಾ ನೋಡುತ್ತಾ ನಮ್ಮ ಕಷ್ಟ ಸುಖಗಳ ಲೆಕ್ಕ ಬರೆಯುತ್ತಿರುವ ಎಂಬ ಮೌಢ್ಯದಿಂದ ಕೂಡಿದ ಧಾರ್ಮಿಕ ಚಿಂತನೆಗಳನ್ನು ಮಾತ್ರ ಅವರೆಂದು ಒಪ್ಪಿಕೊಳ್ಳಲಿಲ್ಲ. ಪಶ್ಚಿಮದ ವೈಚಾರಿಕ ಆಕ್ರಮಣವನ್ನು ತಡೆದುಕೊಳ್ಳಲಾರದೆ ಮಂಕಾಗಿ ಹೋಗಿದ್ದ ಹಿಂದೂ ಧರ್ಮಕ್ಕೆ ಮತ್ತೆ ಚೈತನ್ಯ ತುಂಬುತ್ತಾ ಪಶ್ಚಿಮದ ಏಕಪ್ರವಾದಿ ಧರ್ಮಗಳಿಗಿಂತ ಸನಾತನ ಧರ್ಮವು ಹೇಗೆ ಭಿನ್ನ ಮತ್ತು ಹೇಗೆ ಅದು ಮೋಕ್ಷಕ್ಕೆ ದಾರಿ ಎಂಬುದನ್ನಂತು ಪಶ್ಚಿಮದ ನೆಲದಲ್ಲೇ ನಿಂತು ನಿರ್ಭಯವಾಗಿ ಬೋಧೀಸಿದವರು ಇವರು. ಆ ಕಾಲದಲ್ಲಿ ತಮಾಷೆಗೆ ಗುರಿಯಾಗಿದ್ದ ಹಿಂದುಗಳ ಮೂರ್ತಿಪೂಜೆ ಹಾಗೂ ಬಹುದೇವತಾರಾಧಣೆಯನ್ನು ಕೂಡ ಇವರು ಅದೇಗೆ ಮಹತ್ವಪೂರ್ಣವಾದುದು, ಅರ್ಥಗರ್ಭಿತವಾದುದು ಎಂಬುದನ್ನು ಜನತೆಗೆ ಮನಮುಟ್ಟುವಂತೆ ತಿಳಿಸಿದರು. ಪರಾತನ ಜ್ಞಾನವಾದ ರಾಜಯೋಗ, ಭಕ್ತಿಯೋಗಗಳ ಮೂಲಕ ನಮ್ಮೊಳಗೆ ನಾವೇ ಶೋಧಿಸಿಕೊಂಡರೆ ಆವಾಗಷ್ಟೇ ಆಧ್ಯಾತ್ಮದ ನೈಜ ಅರ್ಥವು ತಿಳಿಯುವುದು, ಆತ್ಮಜ್ಞಾನವು ವಶವಾಗುವುದು ಎಂಬುದನ್ನು ವಿವೇಕಾನಂದರು ವಿವರಿಸುತ್ತಿದ್ದರು. ವೇದಗಳ ಸಾರ ಕೂಡ ಇದುವೇ ಆಗಿತ್ತು. ಯಾರೋ ಒಬ್ಬ ಸಂತ ಹೇಳಿರುವ ವಿಚಾರಗಳನ್ನೆಲ್ಲಾ ವಿಮರ್ಶಿಸಿದೆ, ವಿಶ್ಲೇಷಿಸದೆ ಅದನ್ನೇ ನಾವುಗಳು ಕೂಡ ಜಾರಿಗೆ ತರುವುದು ಹಾಗೂ ಇನ್ನೊಬ್ಬರ ಮೇಲೆ ಹೇರಲು ಪ್ರಯತ್ನ ಪಡುವುದು ವಿವೇಕಾನಂದರೆ ಪ್ರಕಾರ ದೊಡ್ಡ ಮೂರ್ಖತನ. ಆದ್ದರಿಂದಲೇ ‘ಹೇ ಅಮೃತ ಪುತ್ರರೇ, ಪರಮಾತ್ಮನ ಸಾಕ್ಷಾತ್ಕಾರವೊಂದೇ ಅಜ್ಞಾನದಿಂದ ಪಾರಾಗಲು ಇರುವ ಏಕೈಕ ದಾರಿ. ಆದ್ದರಿಂದ ಪರಮಾತ್ಮನ ಸಾಕ್ಷಾತ್ಕರಕ್ಕಾಗಿ ಅನುದಿನವೂ ಪ್ರಯತ್ನಶೀಲರಾಗೋಣ’ ಎಂದು ಕರೆನೀಡಿದ್ದರು. ಇವರ ಪ್ರಕಾರ ಇರುವ ಎಲ್ಲಾ ಧರ್ಮಗಳು ಅದ್ಯಾವುದೋ ವ್ಯಕ್ತಿಗಳ ಅನುಭವದ ಮೇಲೆ ನಿಂತಿದೆ. ಕ್ರಿಸ್ತ ದೇವರನ್ನು ನೋಡಿದೆನೆಂದು ಹೇಳಿರಬಹುದು. ಬುದ್ಧನಿಗೆ ಜ್ಞಾನದ ಸಾಕ್ಷಾತ್ಕಾರವಾಯಿತು ಎಂದು ಸಾರಿರಬಹುದು. ಆದರೆ ಅವೆಲ್ಲವುಗಳು ಬರೇ ಅವರ ಅನುಭವಗಳಷ್ಟೇ. ವಿವೇಕಾನಂದರ ಪ್ರಕಾರ ಸಮಾನತೆ ಎನ್ನುವುದು ಪ್ರಕೃತಿಯ ಕಠೋರ ನಿಯಮ. ಅಲ್ಲಿ ಯಾವುದು ಒಮ್ಮೆ ನಡೆಯಿತೋ ಅದು ಯಾವಾಗಲೂ ನಡೆಯಬಲ್ಲುದು. ಅಂದರೆ ಬುದ್ಧ ಏಸುಗಳಿಗೆ ದೇವರು ಸಾಕ್ಷಾತ್ಕರವಾಗಿರಬಹುದಾದರೆ ಅದು ಎಲ್ಲರಿಗೂ ಆಗಲು ಸಾಧ್ಯ ಎಂಬುದು ವಿವೇಕಾನಂದರ ತರ್ಕ. ಆದ್ದರಿಂದ ನಾವು ಧರ್ಮಾನುಯಾಯಿಗಳು ಎಂದು ಹೇಳಿಕೊಂಡು ಊರೂರು ಸುತ್ತುವ ಮೊದಲು ದೇವರ ಬಗೆಗೆ, ಆಧ್ಯಾತ್ಮದ ಬಗೆಗೆ ಸ್ವಅನುಭವ ಎಷ್ಟಾಗಿದೆ ಎಂಬುದನ್ನು ಮೊದಲು ಯೋಚಿಸಬೇಕು ಎನ್ನುತ್ತಿದ್ದರು ವಿವೇಕಾನಂದರು. ಧಾರ್ಮಿಕತೆಯಲ್ಲಿ ಢಾಂಬಿಕನಾಗುವುದಕ್ಕಿಂತ ಉತ್ತಮ ನಾಸ್ತಿಕನಾಗಿರುವುದೇ ಮೇಲು ಎನ್ನುವುದು ವಿವೇಕಾನಂದರ ಪ್ರಬಲ ನುಡಿಯಾಗಿತ್ತು.

ವಿವೇಕಾನಂದರ ನಡೆ, ನುಡಿಗಳು ಎಂದೆಂದಿಗೂ ಪ್ರಸ್ತುತವಾಗಿರುವಂತಹುದು. ಇವತ್ತಿನ ಧರ್ಮಾನುಯಾಯಿಗಳ ಪರಸ್ಪರ ಹೊಡೆದಾಟ, ಜಗತ್ತಿನಲ್ಲೆಡೆ ತಮ್ಮ ಧರ್ಮವೇ ಅಧಿಕಾರವ್ಯಾಪಿಗೊಳ್ಳಬೇಕೆಂಬ ಹಂಬಲಗಳನ್ನೆಲ್ಲಾ ನೋಡಿದಾಗ ವಿವೇಕಾನಂದರ ‘ಜಾಗೃತಿ’ಯನ್ನು ವಿಶ್ವಕ್ಕೆ ಪಸರಿಸುವ ಅನಿವಾರ್ಯತೆಯಿದೆ ಎನ್ನಿಸುತ್ತದೆ. ವಿವೇಕಾನಂದರು ನಿಜಕ್ಕೂ ವಿಶ್ವ ಮಾನವ. ಅವರ ಚಿಂತನೆಗಳನ್ನು ವಿಶ್ವಮಾನ್ಯಗೊಳಿಸಿದರೆ ಪ್ರತಿಯೊಬ್ಬರು ಅರ್ಥೈಸಿಕೊಂಡರೆ ವಿಶ್ವಶಾಂತಿಗೆ ಬೇರೆ ಪ್ರಯತ್ನದ ಅಗತ್ಯವೇ ಇಲ್ಲವೆನ್ನಬಹುದು.

ಪ್ರಸಾದ್‍ಕುಮಾರ್, ಮಾರ್ನಬೈಲ್

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!