ಚಿತ್ರರಂಗದಲ್ಲಿರುವವರು ರಾಜಕಾರಣಕ್ಕೆ ಪದಾರ್ಪಣೆ ಮಾಡುವುದು ಹೊಸತೇನಲ್ಲ. ರಾಜಕಾರಣದಲ್ಲಿರುವವರ ಅಪೂರ್ವ ನಟನೆಯಿಂದ ಪ್ರೇರಣೆ ಪಡೆದು ಸಿನಿಮಾ ನಟನಟಿಯರು ರಾಜಕೀಯ ಸೇರುತ್ತಾರೋ ಅಥವಾ ಚಿತ್ರರಂಗದವರು ರಾಜಕೀಯಕ್ಕೆ ಸೇರಿದ್ದಕ್ಕೇ ಅಲ್ಲಿರುವವರೂ ತಮ್ಮ ನಟನಾ ಚಾತುರ್ಯವನ್ನು ಪ್ರದರ್ಶಿಸುತ್ತಾರೋ ಎನ್ನುವುದು ‘ಲಕ್ಷ’ಪ್ರಶ್ನೆಯೇ ಸರಿ. ಒಟ್ಟಾರೆಯಾಗಿ ಸಿನಿಮಾ ಕ್ಷೇತ್ರದಲ್ಲಿರುವ ಕೆಲವರಿಗೆ “ಚಿತ್ರರಂಗ ಹೋಗು ಅಂತಿದೆ, ರಾಜಕೀಯ ರಂಗ ಬಾ ಅಂತಿದೆ” ಎಂಬ ಮಾತು ಅನ್ವಯವಾಗುತ್ತದೆ. ಹಾಗೆ ‘ಬಾ ಬಾ’ ಎಂದು ಕರೆಯುತ್ತಿರುವುದಕ್ಕೇ ಅಲ್ಲವೇ ರಜನಿಕಾಂತ್ ಇದೀಗ ರಾಜಕೀಯ ಪ್ರವೇಶ ಮಾಡಿರುವುದು. ವ್ಯವಸ್ಥೆಯನ್ನು “ಠೀಕ್” ಮಾಡುತ್ತೇನೆಂಬ ಧ್ಯೇಯದಿಂದ ರಾಜಕೀಯಕ್ಕೆ ಇಳಿದಿರುವ ರಜನಿಯನ್ನು ಟೀಕಿಸದೇ ಅವರ ಈ ಹೊಸ ಜರ್ನಿಯ ಬಗ್ಗೆ ಕೆಲವು ಜೋಕ್ ಗಳನ್ನು ಮಾಡಿ ನಗೋಣ. ಅಂದ ಹಾಗೆ ಈಗಾಗಲೇ ಅಸ್ತಿತ್ವದಲ್ಲಿರುವ ರಜನಿ ಜೋಕ್ ಗಳ ಪಟ್ಟಿಗೆ ಇವು ಹೊಸ ಸೇರ್ಪಡೆ.
- ರಜನಿಕಾಂತ್ರ ಗೆಳೆಯರು ಅವರಲ್ಲಿ ಹೊಸ ವರ್ಷಕ್ಕೆ ಒಳ್ಳೇ ‘ಪಾರ್ಟಿ’ ಮಾಡಬೇಕು ಎಂದು ಹೇಳಿದರಂತೆ ಅದರ ಪರಿಣಾಮವೇ ಈಗವರು ಸ್ಥಾಪಿಸಿರುವ ಪೊಲಿಟಿಕಲ್ ಪಾರ್ಟಿ.
- ರಜನಿಯ ಮೊಮ್ಮಕ್ಕಳ್ಯಾರೋ ಪರೀಕ್ಷೆಯಲ್ಲಿ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳ ಒಟ್ಟು ಸಂಖ್ಯೆಯನ್ನು ಇರುವುದಕ್ಕಿಂತ ಒಂದು ಹೆಚ್ಚು ಬರೆದಿದ್ದರಂತೆ. ಉತ್ತರ ತಪ್ಪೆಂದು ಮನೆಗೆ ಬಂದು ಅಳುತ್ತಿದ್ದ ಮೊಮ್ಮಗನನ್ನು ಸಂತೈಸಲು ಮುಂದಾದ ರಜನಿ ಮಾಡಿದ ಕೆಲಸವೇ ಹೊಸ ಪಕ್ಷದ ಸ್ಥಾಪನೆ.
- ರಾಜಕೀಯದಲ್ಲಿ ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಬೆರಳು ಮಹತ್ವ ಪಡೆದುಕೊಳ್ಳುತ್ತದೆ. ಆದರೆ ‘ರಜನಿ’ಕಾರಣದಲ್ಲಿ ಪಕ್ಷದ ಹೆಸರು ಘೋಷಣೆಯಾಗುತ್ತಿದ್ದಂತೆ ಬೆರಳಿಗೂ ಪ್ರಾಧಾನ್ಯತೆ ಬಂದಿದೆ. ಅದೂ ಎರಡೆರಡು ಬೆರಳಿಗೆ.
- ರಜನಿ ಪ್ರಣಾಳಿಕೆ ‘ಬಿಡುಗಡೆ’ ಮಾಡುತ್ತಿದ್ದಂತೆ ಅದ್ಧೂರಿ ಸಂಭ್ರಮಾಚರಣೆಗಳು ನಡೆಯಬಹುದು. ಪ್ರಣಾಳಿಕೆಗಳ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸಿ ಅದಕ್ಕೇ ಅಭಿಷೇಕ ಮಾಡುವ ಮೂಲಕ ಅವರ ಅಭಿಮಾನಿಗಳು ಕೃತಾರ್ಥರಾಗಬಹುದು.
- ‘ಇ.ವಿ.ಎಂ ಹ್ಯಾಕ್ ಆಗಿದೆ’ ಎಂಬ ಆರೋಪ ಸಕಾಲಿಕ ರಾಜಕಾರಣದಲ್ಲಿ ಸಾಮಾನ್ಯ ಎಂಬಂತಾಗಿದೆ. ಈ ಆರೋಪ ಮಾಡುತ್ತಿರುವವರು ರಜನಿ ರಾಜಕಾರಣದಲ್ಲಿ “ಮತದಾರರ ಮೆದುಳನ್ನೇ ಹ್ಯಾಕ್ ಮಾಡಿದ್ದಾರೆ” ಎನ್ನಬಹುದು.
- ರಾಜಕಾರಣವೆಂದ ಮೇಲೆ ನಾಯಕರು ಪಕ್ಷಾಂತರ ಮಾಡುವುದು ಇದ್ದಿದ್ದೇ. ಆದರೆ ‘ರಜನಿ’ಕಾರಣದಲ್ಲಿ ಪಕ್ಷಗಳೇ ಪಕ್ಷಾಂತರ ಮಾಡಬಹುದು.
- ಎಲ್ಲಿ ಕುರ್ಚಿ ಕೈತಪ್ಪಿ ಹೋಗುತ್ತದೋ ಎಂಬ ಆತಂಕ ಬಹುತೇಕ ರಾಜಕಾರಣಿಗಳನ್ನು ಕಾಡುತ್ತಿರುತ್ತದೆ ಆದರೆ ರಜನಿ ಅಧಿಕಾರಕ್ಕೇರಿದರೆ ಖುದ್ದು ಕುರ್ಚಿಯೇ ಎಲ್ಲಿ ರಜನಿಕಾಂತ್ ತನ್ನಿಂದ ಕೆಳಗಿಳಿದು ಹೋಗುತ್ತಾರೋ ಎಂಬ ಆತಂಕಕ್ಕೆ ಒಳಗಾಗಬಹುದು.
- ರಾಜಕಾರಣಿಗಳು ಪ್ರಮಾಣವಚನ ಸ್ವೀಕರಿಸುವುದು ಮಾಮೂಲು ಆದರೆ ರಜನಿ ಚುನಾವಣೆಯಲ್ಲಿ ಗೆದ್ದರೆ ಪ್ರಮಾಣವಚನವೇ ರಜನಿಕಾಂತ್ ಹೆಸರಲ್ಲಿ ರಜನಿಕಾಂತ್ ನ್ನು ಮುಖ್ಯಮಂತ್ರಿಯಾಗಿ ಸ್ವೀಕರಿಸಬಹುದು.
- ಮತ ಹಾಕಿದವರ ಒಂದು ಬೆರಳಿಗೆ ಶಾಯಿ ಗುರುತು ಹಾಕಲಾಗುತ್ತದೆ. ರಜನಿ ಅವಧಿಯಲ್ಲಿ ಮತ ಹಾಕಿದವರ ತೋರುಬೆರಳು ಮತ್ತು ಕಿರುಳುಬೆರಳು ಹೀಗೆ ಎರಡಕ್ಕೂ ಶಾಯಿ ಗುರುತು ಹಾಕಲಾಗುತ್ತದೆ.
- ರಜನಿ ಮುಖ್ಯಮಂತ್ರಿಯಾದರೆ ವಿಧಾನಸಭೆ, ಮುಖ್ಯಮಂತ್ರಿಗಳ ಕಚೇರಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಏಕಕಾಲದಲ್ಲಿ ಹಾಜರಿರುತ್ತಾರಂತೆ.
- ಮುಂದಿನ ಅವಧಿಯ ಚುನಾವಣೆಯ ಪ್ರಣಾಳಿಕೆಯನ್ನು ಹಿಂದಿನ ಚುನಾವಣೆಯಲ್ಲಿಯೇ ಬಿಡುಗಡೆ ಮಾಡಬಹುದು
- ರಜನಿ ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡರೆ ಪೂರ್ಣ ಬಜೆಟ್ನ್ನು ಕಂಠಪಾಠ ಮಾಡಿಟ್ಟುಕೊಂಡು ಮಂಡನೆ ಮಾಡಬಹುದು.
- ವಿರೋಧ ಪಕ್ಷಗಳು ನಾಳೆ ಕೇಳುವ ಪ್ರಶ್ನೆಗಳಿಗೆ ರಜನಿ ನಿನ್ನೆಯೇ ಉತ್ತರ ನೀಡಿರುತ್ತಾರೆ.
- ಒಂದೊಮ್ಮೆ ರಜನಿ ರಾಜೀನಾಮೆ ನೀಡಬೇಕಾದ ಪ್ರಮೇಯ ಸೃಷ್ಟಿಯಾದರೆ ರಾಜೀನಾಮೆ ಪತ್ರವೇ ಅವರ ಹೆಸರನ್ನು ತಿರಸ್ಕರಿಸಬಹುದು.
- ರಜನಿ ಮರಗಿಡಗಳಿಂದಲೂ ಮತ ಕೇಳುತ್ತಾರಂತೆ ಏಕೆಂದರೆ ಅವುಗಳೂ ಓಟು (O2) ಬಿಡುಗಡೆ ಮಾಡುತ್ತವೆ.
- ಸರ್ಕಾರ ರಚಿಸಿದ ಮೇಲೆ ಬಹುಮತ ಸಾಬೀತುಪಡಿಸುವ ಸಂದರ್ಭ ಒದಗಿ ಬಂದರೆ ರಜನಿ ಶಾಸಕರನ್ನಷ್ಟೇ ಅಲ್ಲದೆ ತನಗೆ ಮತ ಹಾಕಿದ ಜನರನ್ನೆಲ್ಲಾ ಒಟ್ಟುಗೂಡಿಸುವ ಮೂಲಕ ಬಹುಮತವನ್ನು ಪ್ರದರ್ಶಿಸಬಹುದು.
ಓವರ್ಡೋಸ್: ರಜನಿಕಾಂತ್ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ಬದಲಾವಣೆ ಖಂಡಿತವಂತೆ. ಅವರು ಪಕ್ಷ ಘೋಷಣೆ ಮಾಡಿದ್ದಕ್ಕೆ ವರ್ಷವೇ ಬದಲಾಗಿದೆ. ಇನ್ನು ಅಧಿಕಾರ ಹಿಡಿದರೆ ರಾಜ್ಯ ಬದಲಾಗದೇ ಎನ್ನುವುದು ಅವರ ಅಭಿಮಾನಗಳ ವಾದ.