ಅಂಕಣ

ನಿತ್ಯ ದ್ವಂದ್ವದೆ ಮಗ್ನ

ಮಂಕುತಿಮ್ಮನ ಕಗ್ಗ  ೦೮೩

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ|
ತಾನದಾರೊಳೊ ವಾದಿಸುವನಂತೆ ಬಾಯಿಂ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು|
ಭಾನವೊಂದರೊಳೆರಡು – ಮಂಕುತಿಮ್ಮ || ೦೮೩ ||

ಭಾನ : ಹೊಳಪು, ತೋರಿಕೆ (ಪ್ರಕಟ ಅಥವಾ ಪ್ರಕಾಶ ರೂಪದಲ್ಲಿರುವುದು)

ನಮ್ಮ ಒಳಗಿನ ನೈಜ ಅನಿಸಿಕೆ ಏನಿರುತ್ತದೆಯೊ ಅದೇ ಯಥಾವತ್ತಾಗಿ ಬಾಹ್ಯದಲ್ಲು ಪ್ರಕಟವಾಗುವುದೆಂದು ಹೇಳಲಾಗದು. ಒಳಗಿನ ಮನಸು ಏನೊ ಹೇಳುತ್ತಿದ್ದರು ಹೊರಗೆ ಮತ್ತೇನೊ ವ್ಯತಿರಿಕ್ತವಾದ ಭಾವ ಪ್ರಕಟವಾಗುವುದು ತೀರಾ ಸಹಜ ಕ್ರಿಯೆ. ಚಿಂತೆಯೊ, ಚಿಂತನೆಯೊ – ಕಾರಣವೇನೇ ಇದ್ದರು ಈ ದ್ವಂದ್ವ ಕಾಡುವುದು ನಿಶ್ಚಿತ; ಅದನ್ನೆ ವಿವರಿಸುತ್ತಿದೆ ಈ ಕಗ್ಗ.

ಇಲ್ಲಿನ ವಿವರಣೆಯಲ್ಲಿ ಒಂದೆರಡು ಆಯಾಮಗಳನ್ನು ಗಮನಿಸಬೇಕು. ಮೊದಲನೆಯದು – ಈ ಸಾಲುಗಳನ್ನು ಸೃಷ್ಟಿಕರ್ತ ಪರಬ್ರಹ್ಮ ತನಗೆ ತಾನೇ ಹೇಳಿಕೊಂಡಂತಹ ಭಾವ. ಮೊದಲ ಸಾಲಿನ ‘…ದೋರ್ವನೆರಡಾಗಿ’ ಎಂಬಲ್ಲಿ (ಓರ್ವನು ಎರಡಾಗಿ, ಇಬ್ಬರಾಗಿ) ಮೊದಲು ಒಬ್ಬನೆ ಇದ್ದವನು , ಇಬ್ಬರಾದ ಹಿನ್ನಲೆ (ಪ್ರಕೃತಿ, ಪುರುಷ) ಕಾಣಿಸಿಕೊಳ್ಳುತ್ತದೆ. ಹಿಂದಿನ ಒಂದು ಕಗ್ಗದಲ್ಲಿ ಒಬ್ಬನೇ ಇರಲು ಬೇಸರವಾಗಿಯೆ ಇಬ್ಬರನಾಗಿಸಿಕೊಂಡ ಎಂದು ಹೇಳಿದ್ದು ನಾವಾಗಲೆ ನೋಡಿದ್ದೇವೆ. ಈ ಆಯಾಮದಲ್ಲಿ ಇಡಿ ಕಗ್ಗವನ್ನು ಆ ಬೊಮ್ಮನ ಮನಸತ್ತ್ವ ಪ್ರಕಟವಾದ ಬಗೆ, ಅವನ ದ್ವಂದ್ವ ಪ್ರಕಟವಾಗುತ್ತಿರುವ ಪರಿ ಎಂದುಕೊಂಡು ಅರ್ಥೈಸಬಹುದು.

ಎರಡನೆ ಆಯಾಮದಲ್ಲಿ ನೋಡಿದರೆ ಇದು ಮನಸಿನ ಸ್ವಭಾವ, ಪ್ರವೃತ್ತಿಯ ಚಿತ್ರಣದಂತೆ ಕಾಣಿಸಿಕೊಳ್ಳುತ್ತದೆ. ಅದರ ದ್ವಂದ್ವ – ಒಳಗೆ ಒಂದು ರೀತಿ, ಮತ್ತದನ್ನು ಹೊರಗೆ ಅದನ್ನು ತೋರಿಸುವುದರಲ್ಲಿರುವ ವ್ಯತ್ಯಾಸ ಕಣ್ಣಿಗೆ ಕಟ್ಟುವ ರೀತಿ ವರ್ಣಿತವಾಗಿದೆ. ಜತೆಗೆ ನಿರಂತರವಾಗಿ ಚಿಂತಿಸುತ್ತ, ಚಿಂತನೆಯ ಮಥನದಲ್ಲೆ ತೊಡಗಿಸಿಕೊಂಡ ಮನಸಿನ ವಿಶ್ವರೂಪವೂ ಕಾಣಿಸಿಕೊಳ್ಳುತ್ತದೆ.

ಸಾರದಲ್ಲಿ ಹೇಳುವುದಾದರೆ ಬದುಕಿನಲ್ಲಿ ದ್ವಂದ್ವಗಳಿರುವುದು ವಾಸ್ತವ, ಮತ್ತು ನಿಭಾಯಿಸಲೇಬೇಕಾದ ಅನಿವಾರ್ಯ. ಅದು ಬೊಮ್ಮನಿಗು ಬಿಟ್ಟಿದ್ದಲ್ಲ, ಮನುಜನನ್ನು ಬಿಟ್ಟಿದ್ದಲ್ಲ ಎನ್ನುವ ಸಾರ ಈ ಕಗ್ಗದಲ್ಲಿದೆ.

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ|
(ಮಾನಸವ ಚಿಂತೆ ಹಿಡಿದಂದು ಓರ್ವನು ಎರಡಾಗಿ)

ಮೂಲತಃ ಮನುಷ್ಯ ಸೃಷ್ಟಿಯಾಗಿದ್ದು ಒಂದು (ಒಬ್ಬನೆಂಬ) ವ್ಯಕ್ತಿತ್ವದ ಸ್ವರೂಪವಾಗಿ. ಆದರೆ ಯಾವಾಗ ಮನಸಿನಲ್ಲಿ ಚಿಂತೆ (ಚಿಂತನೆ, ಆಲೋಚನೆ ಇತ್ಯಾದಿ) ಬಂದು ಸೇರಿಕೊಂಡಿತೋ ಆಗಲೆ ಅವನು ಎರಡು ಅಥವಾ ಇಬ್ಬರು ವ್ಯಕ್ತಿತ್ವದ ಸಮಾನವಾದಂತೆ ಆಗಿಬಿಟ್ಟ . ಹೊರಗೆ ಕಾಣುವುದು ಒಂದು ಸ್ವರೂಪವಾದರೆ ಒಳಗಿರುವ ಕಾಣದ ಸ್ವರೂಪ ಮತ್ತೊಂದು.  ಮೊದಲು ಒಬ್ಬಂಟಿಯಿದ್ದ ಬೊಮ್ಮ ಕೂಡ ಎರಡಾದದ್ದು ಅವನ ಮನಸು ಚಿಂತಿಸಲು ಆರಂಭಿಸಿದ ಮೇಲೆಯೆ.

ತಾನದಾರೊಳೊ ವಾದಿಸುವನಂತೆಬಾಯಿಂ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
(ತಾನು ಅದಾರೊಳೋ ವಾದಿಸುವನಂತೆ = ತಾನು ಯಾರ ಜೊತೆಗೊ ವಾದಿಸುತ್ತಿರುವಂತೆ)
(
ಬಾಯಿಂದ ಏನನೋ ನುಡಿಯುತ್ತ ಕೈ ಸನ್ನೆ ಗೈಯುವನು)

ಈ ಎರಡರ (ದ್ವಂದ್ವದ) ಆರಂಭವಾದೊಡನೆ ಚಿತ್ತ ಪ್ರವೃತ್ತಿ ಹೇಗಿರುವುದೆಂದರೆ – ಯಾರೂ ಎದುರಿಗಿಲ್ಲದಿದ್ದರು ಮನಸಲ್ಲೆ ಯಾರೊಡನೆಯೊ ವಾದಕ್ಕಿಳಿದಂತೆ ವಾದವಿವಾದ ಆರಂಭವಾಗಿಬಿಡುತ್ತದೆ. ಎರಡು ಪಕ್ಷದ ಮಾತು, ಪ್ರತಿಮಾತುಗಳನ್ನು  ತಾನೆ ಆಡುತ್ತ ಅದಕ್ಕೆ ತಕ್ಕಂತೆ ಬಾಯಾಡಿಸುತ್ತ (ತನ್ನಲ್ಲಿ ತಾನೆ ಗೊಣಗಿಕೊಳ್ಳುತ್ತ, ಚಿಂತನೆ ನಡೆಸುತ್ತ ), ಅಂತರಂಗದಲ್ಲೆ ಕೈ ಸನ್ನೆ ಮಾಡುತ್ತ ಆ ಸನ್ನಿವೇಶಕ್ಕೆ ತನಗೆ ಬೇಕಾದ ಸ್ವರೂಪ ನೀಡಲಾರಂಭಿಸುತ್ತದೆಯಂತೆ. ಇದು ಸಕಾರಾತ್ಮಕವಾದರೆ ಅದ್ಭುತವನ್ನೆ ಸೃಜಿಸಬಹುದು (ಬ್ರಹ್ಮ ಸೃಷ್ಟಿಯ ಹಾಗೆ). ಹಾಗಿರದಿದ್ದರೆ ಕೃತಿಮತೆಯ ಮೇರು ಮಟ್ಟವನ್ನು ತಲುಪಿಸಿಬಿಡಬಹುದು. ಆದರೆ ಇವೆಲ್ಲವು ಅಂತರಂಗದ ಮಥನ ಮಾತ್ರವೆ. ಹೊರಗೆ ಕಾಣಿಸಿಕೊಳ್ಳುವುದು ಬರಿಯ ತೋರಿಕೆಯ ಸ್ವರೂಪ – ಎಷ್ಟು ಮತ್ತು ಹೇಗೆ ಕಾಣಿಸಿಕೊಳ್ಳಬೇಕೆಂದು ಬಯಸುತ್ತೇವೊ ಅಷ್ಟು ಮಾತ್ರ. ಆ ರೀತಿ ಎಷ್ಟನ್ನು ತೋರಿಸಬೇಕೆಂಬ ದ್ವಂದ್ವ ಮಾತ್ರ ನಿರಂತರ ಕಾಡುವ ಅಂಶ .

ಭಾನವೊಂದರೊಳೆರಡುಮಂಕುತಿಮ್ಮ ||
(ಭಾನವೊಂದರಲಿ ಎರಡು = ಕಾಣಿಸಿಕೊಳ್ಳುವುದು ಒಂದಾದರು ಕಾಣದ್ದು ಇನ್ನೊಂದಿರುತ್ತದೆ)

ಭಾನವೆಂದರೆ ಹೊಳಪು, ತೋರಿಕೆ. ಅಂದರೆ ಪ್ರಕಟ ರೂಪವಾಗಿ ಕಾಣಿಸಿಕೊಳ್ಳುವಂತದ್ದು. ಅದು ಯಾವಾಗಲು ‘ಯಮಳ’ ಯುಗ್ಮದಂತೆ ಜೋಡಿಯಾಗಿರುತ್ತದೆ. ಬೆಳಕು ಪ್ರಕಟವಾದಾಗ ಅದರೊಡನೆ ಇರುವ ಕತ್ತಲು ಕಾಣುವುದಿಲ್ಲ. ಆದರೆ ಅದರ ಕುರುಹು ನೆರಳಾಗಿ ಅಸ್ಪಷ್ಟ ಸುಳಿವು ನೀಡಬಹುದು. ಹಾಗೆಯೆ ತೋರಿಕೆಯಲ್ಲಿ ಕಾಣುವ ಮಾತು, ನಡುವಳಿಕೆಯ ಹಿನ್ನಲೆಯಲ್ಲು ಕಾಣದ ಅಸ್ಪಷ್ಟ ಅಂಶವಿರುತ್ತದೆ. ಹೀಗಾಗಿ ಒಬ್ಬರು ಹೇಳುವುದನ್ನು ಕೇಳಿದಾಗ, ನೋಡಿದಾಗ ಹೊರಗಿನ ಪ್ರಕಟ ಭಾವವಷ್ಟೆ ನಿಲುಕಿಗೆ ಸಿಗುವುದೆ ಹೊರತು ಒಳಗಿನ ನೈಜ ಅನಿಸಿಕೆಯಲ್ಲ. ಅಬ್ಬಬ್ಬಾ ಎಂದರೆ ಮಸುಕು ಮಸುಕಾಗಿಯಷ್ಟೆ ಇಂಗಿತ ಗೋಚರವಾಗಬಹುದು.

ಬ್ರಹ್ಮನ ಸೃಷ್ಟಿಯಲ್ಲು ಇದೇ ದ್ವಂದ್ವವಿದೆ. ಕಣ್ಣಿಗೆ ಕಾಣುವುದರ ಆಧಾರದಲ್ಲಿ ತರ್ಕದ ಮೇಲೆ ತೀರ್ಮಾನಿಸಹೊರಟರೆ ಅನಾವರಣವಾಗುವುದು ಕೇವಲ ಅರ್ಧ ಸತ್ಯ. ಮಿಕ್ಕರ್ಧ ಅವನ ಕಾಣದ ಅಂತರಂಗಿಕ ರಹಸ್ಯ. ಅಲ್ಲು ಅಷ್ಟಿಷ್ಟು ಅಸ್ಪಷ್ಟ ಸುಳಿವು ಸಿಕ್ಕರು ಅದು ಗೊಂದಲವನ್ನು ಹೆಚ್ಚಿಸುವುದೇ ಹೊರತು ಪೂರ್ತಿ ನಿವಾರಿಸುವುದಿಲ್ಲ.

ಒಟ್ಟಾರೆ ಈ ಗೊಂದಲ, ದ್ವಂದ್ವಗಳನ್ನು ಬೇಕೆಂತಲೆ ಸೃಜಿಸಿದಂತಿದೆ – ಇನ್ನೂ ನಾವರಿಯಲಾಗದ ಕಾರಣಗಳಿಂದಾಗಿ. ಹಾಗಾಗಿ ಅವುಗಳ ಅನಿವಾರ್ಯ ಅಸ್ತಿತ್ವವನ್ನು ಸಹಜವೆಂದು ಸ್ವೀಕರಿಸಿ ಮುನ್ನಡೆಯುವುದು ವಿಹಿತ ಎನ್ನುವ ಭಾವ ಇಲ್ಲಿ ಸೂಚಿತವಾಗಿದೆಯೆಂದು ನನ್ನ ಒಟ್ಟಾರೆ ಗ್ರಹಿಕೆ.

– ನಾಗೇಶ ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!