ಅಂಕಣ

ಕನ್ನಡದ ಕವಿತೆಯ ಹಾಡುವಲ್ಲೆಲ್ಲ ಇರುವ ‘ಅನಂತ’ರು….

ನಮ್ಮ ಕನ್ನಡ ನಾಡಿನದ್ದು  ಶ್ರೀಮಂತ ಸಂಸ್ಕೃತಿ. ಕನ್ನಡದ  ಶ್ರೀಮಂತ ಸಂಸ್ಕೃತಿಯ ಕೀರ್ತಿ ಕಲಶವೇ ‘ಸುಗಮ ಸಂಗೀತ’. ಇಪ್ಪತ್ತನೇ ಶತಮಾನದ ಕಾಣಿಕೆಯಾದ ಸುಗಮಸಂಗೀತ ತನ್ನ ಹೆಸರಿನಲ್ಲಿಯೇ ಹೇಳುವಂತೆ ಸುಗಮವಾಗಿ ಹರಿಯುವಂತಹ ಒಂದು ಗಾಯನ ನಿರೂಪಣಾ ಶೈಲಿ. ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ಕವಿತೆಯ ಅರ್ಥವನ್ನು ತನ್ನ ವಿನೂತನ ನಿರೂಪಣೆಯಿಂದ ವ್ಯಾಖ್ಯಾನಿಸಿ ಅದರ ಅರ್ಥವನ್ನು ವಿಸ್ತರಿಸುವುದೇ ಇದರ ಪರಮಗುರಿ. ಸಂಗೀತದ ಸ್ವರಗಳ ಬಣ್ಣದಲ್ಲಿ ಕಾವ್ಯದ ಚಿತ್ರವನ್ನು ಯಥಾವತ್ತಾಗಿ, ಸುಂದರವಾಗಿ, ಅರ್ಥಪೂರ್ಣವಾಗಿ ಬಿಡಿಸುವುದೇ ಇದರ ಸಂಕಲ್ಪ. ಸಂಗೀತದ ಮೂಲಕ ಸಾಹಿತ್ಯದ ಎದೆಮಿಡಿತವನ್ನು ಹಿಡಿದು ತೋರಿಸುವ ಈ ಗಾಯನ ಪ್ರಕಾರದಲ್ಲಿ ಸಂಗೀತಕ್ಕಾಗಿ ಸಾಹಿತ್ಯವಿಲ್ಲ ಬದಲಾಗಿ ಸಾಹಿತ್ಯಕ್ಕಾಗಿ ಸಂಗೀತವಿದೆ. ಕವಿ ತನ್ನ ಎದೆಯಾಳದಲ್ಲಿ ಭಾವತುಂಬಿ ಹಾಡಿಕೊಂಡ ಸೂಕ್ಷ್ಮ ಸಂವೇದನೆಯೇ ಸ್ವರವಾಗಿ ಹರಿದು ಸುಗಮ ಸಂಗೀತವಾಯಿತಿರಬೇಕು. ಕವಿ ಮತ್ತು ಸ್ವರ ಸಂಯೋಜಕರ ನಡುವೆ ಭಾವನೆಯ ಕೊಂಡಿ ಬೆಸೆದರೆ ಮಾತ್ರ ಚಂದದ ‘ಭಾವಗೀತೆ’ಯೊಂದು ಕೇಳುಗರ ಮನಸ್ಸನ್ನು ಸೇರಬಹುದೇನೋ.   

ನಮ್ಮ ರಾಜ್ಯದಲ್ಲಿ ಈ ಸುಗಮ ಸಂಗೀತ ಬೆಳೆದು ಬಂದ ಹಾದಿ ಬಹಳ ಸುಂದರವಾದದ್ದು. ವೀ. ಸೀತಾರಾಮಯ್ಯನವರ ‘ಗೀತೆಗಳು’ ಕವಿತಾಸಂಕಲನದಿಂದ (1931) ಹಳೇಮೈಸೂರು ಪ್ರಾಂತ್ಯದಲ್ಲಿ ಸುಗಮಸಂಗೀತ ಚಿಗುರಲು ಪ್ರಾರಂಭವಾಯಿತು. ಶಾಸ್ತ್ರೀಯ ಸಂಗೀತವನ್ನೇ ಮೂಲವಾಗಿರಿಸಿಕೊಂಡು ಹೊಸಗಾಯನ ಪದ್ಧತಿ ಆವಿಷ್ಕಾರಗೊಂಡಿತು. ಕರ್ನಾಟಕದಲ್ಲಿ `ಶ್ಲೋಕ ಸಂಗೀತ ಪಟು- ಎಂದೇ ಬಿರುದಾಂಕಿತರಾಗಿದ್ದ (ನಂಜನಗೂಡಿನ ಬಳಿ ಇರುವ) ಕಳಲೆ ಸಂಪತ್ಕುಮಾರಾಚಾರ್ಯರು ಆಧುನಿಕ ಕವಿತೆಗಳ ಪ್ರತ್ಯೇಕ ಕಾರ್ಯಕ್ರಮಗಳನ್ನು ಪಕ್ಕವಾದ್ಯದೊಂದಿಗೆ ನಡೆಸಿದ್ದರು. ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪದ್ಧತಿಗಳನ್ನು ಶಾಸ್ತ್ರೀಯವಾಗಿ ಅಭ್ಯಾಸಮಾಡಿದ್ದ ಸಂಪತ್ತುಮಾರಾಚಾರ್ಯರು ತಮ್ಮ ಗಂಡುದನಿಯ ಗಾಯನಕ್ಕೆ ಹೆಸರುವಾಸಿಯಾಗಿದ್ದರು. ಭಾವಪೂರ್ಣ ಗಾಯನಕ್ಕೆ ಹೆಸರಾಗಿದ್ದರು. 1902ರಲ್ಲಿ ಹುಟ್ಟಿ 1945ರವರೆಗೆ ಮಾತ್ರ ಜೀವಿಸಿದ್ದ ಆಚಾರ್ಯರ ಕೀರ್ತಿ ದೊಡ್ಡದು. ಇವರೇ ಭಾವಗೀತೆಯ ಹಾಡುಗಾರಿಕೆಯ ಸಂಪ್ರದಾಯವನ್ನು ಮೊದಲು ಪ್ರಾರಂಭಿಸಿದವರೆನ್ನಬಹುದು. ಅವರು ಹಾಡುತ್ತಿದ್ದ ವೀಸೀ ಅವರ `ಎಮ್ಮೆ ಮನೆಯಂಗಳದಿ…’, ಬಿಎಂಶ್ರೀ ಅವರ `ಕರುಣಾಳು ಬಾ ಬಳಕೆ….’, ಡಿವಿಜಿಯವರ `ವನಸುಮದೊಳೆನ್ನ ಜೀವನವು…’ ಮುಂತಾದ ಗೀತೆಗಳು ಆಚಾರರ್ಯರು ಸುಗಮಸಂಗೀತ ಪ್ರಕಾರಕ್ಕೆ ಹಾಕಿಕೊಟ್ಟ ಆರೋಹಣ ಗೀತೆಗಳೆನ್ನಬಹುದು.`ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಆಚಾರ್ಯರ ನಾಂದಿಗೀತೆಯಾಗಿತ್ತು. ಯಾವುದೇ ಮದುವೆಗೆ ಹೋದಾಗಲೂ ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು…’ ಗೀತೆಯನ್ನು ಹಾಡದೆ ಆಚಾರ್ಯರು ಬರುತ್ತಿರಲಿಲ್ಲ. ಹೆಣ್ಣೊಪ್ಪಿಸುವಾಗ ಈ ಗೀತೆಯನ್ನು ಕೇಳಿ ಬಂಧುಬಾಂಧವರ ಕಣ್ಣಲ್ಲಿ ನೀರು ಸುರಿಯುವುದು ಸಾಮಾನ್ಯವಾಗಿತ್ತು.

ಮಂಗಳೂರಿನ ಶ್ರೀಮತಿ ಜಯಂತಿದೇವಿ ಹಿರೇಬೆಟ್, ಡಾ|| ಶಮಂತಕಮಣಿ, ಎಸ್.ಕೆ. ವಸುಮತಿ, ಸಿ.ಕೆ. ತಾರಾ, ಶ್ಯಾಮಲ ಜಾಗಿರ್‍ದಾರ್, ಶ್ರೀಮತಿ ಹೆಚ್.ಆರ್. ಲೀಲಾವತಿ ಹೀಗೆ ಅನೇಕ ಗಾಯಕಿಯರು ಸುಗಮ ಸಂಗೀತವನ್ನು ಬೆಳೆಸುವಲ್ಲಿ ಪ್ರಮುಖರಾದರು. ಇವರಲ್ಲದೆ ಪ್ರಮುಖವಾಗಿ ಕಾಳಿಂಗರಾವ್ ಅವರು ನಮ್ಮ ಸುಗಮ ಸಂಗೀತಕ್ಕೆ ಶಿಖರಪ್ರಾಯವಾಗಿದ್ದರು.ನಂತರ ಸುಗಮ ಸಂಗೀತಕ್ಕೆ ಪ್ರಮುಖ ಚಾಲನೆಕೊಟ್ಟವರು ಮೈಸೂರು ಅನಂತಸ್ವಾಮಿಗಳು. ಸುಗಮ ಸಂಗೀತದ ಪ್ರಕಾರಕ್ಕೆ ಅನಂತಸ್ವಾಮಿಗಳು ಕೊಟ್ಟ ಕೊಡುಗೆ ಅಸಾಮಾನ್ಯ. ಕಾಳಿಂಗರಾಯರ ನಂತರ ಅವರ ಉತ್ತರಾಧಿಕಾರಿಗಳಂತೆ  ಬಂದು ಹೊಸ ಅಲೆಯನ್ನು ಸೃಷ್ಟಿಸಿದವರು ಅನಂತಸ್ವಾಮಿ . ಇವರು ತಮ್ಮ ಅದ್ಭುತ ಗಾಯನ ಮತ್ತು ಸಂಯೋಜನೆಗಳಿಂದ ಸುಗಮ ಸಂಗೀತಕ್ಷೇತ್ರದ ದೊರೆಯಾಗಿ ಮೆರೆದವರು. ಅನಂತಸ್ವಾಮಿ ಇಲ್ಲದಿದ್ದರೆ ಅದೆಷ್ಟೋ ಕವಿಗಳು ಜನಸಾಮಾನ್ಯರಿಗೆ ಪರಿಚಿತರಾಗುತ್ತಲೇ ಇರಲಿಲ್ಲ.    

ಮೈಸೂರು ಅರಸರ ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದ ಚಿಕ್ಕರಾಮರಾಯರ ಮೊಮ್ಮಗಂದಿರಾದ ಅನಂತಸ್ವಾಮಿಯವರಿಗೆ ಸಂಗೀತ ಬಂದದ್ದು ರಕ್ತಗತವಾಗಿ. ಇವರ ತಂದೆ ಸುಬ್ಬರಾಯರು,ತಾಯಿ ಕಮಲಮ್ಮ. ಇವರಿಗೆ ಬಾಲ್ಯದಲ್ಲೇ ಸುಗಮ ಸಂಗೀತದ ಬಗ್ಗೆ ಗೀಳುಹಿಡಿಸಿದವರು ಗೆಳೆಯ ರಾಮಚಂದ್ರರಾವ್‌. ಗೆಳೆಯ ಭಾವಪೂರ್ಣವಾಗಿ ಬೇಂದ್ರೆ, ಕುವೆಂಪು ಕವನಗಳನ್ನು ಹಾಡುತ್ತಿದ್ದ, ಅದೇ ಇವರ ಮೇಲೆ ಪ್ರಭಾವ ಬೀರಿತು. ಮುಂದೆ ಉದ್ಯೋಗಕ್ಕಾಗಿ ಅನಂತಸ್ವಾಮಿ ಸೇರಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್‌ ರಾಡಾರ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌. ಆದರೆ ಕನಸು ‘ಸಂಗೀತ’. ಮುಂದೆ ಕನಸನ್ನು ನನಸಾಗಿಸಿ ದುಡಿದದ್ದು ಕನ್ನಡ ಸಾಹಿತ್ಯ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ. ಕಾಳಿಂಗರಾವ್‌ ಕಂಪನಿಗೆ ಸೇರಿ ಕೆಲಕಾಲ ಮ್ಯಾಂಡೋಲಿನ್‌ ನುಡಿಸಿದ ಅನಂತಸ್ವಾಮಿ  ಅಲ್ಲಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದರು. ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ನಂತರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಲು ಶುರು ಮಾಡಿದರು. ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಧ್ವನಿಯಾದರು . ಕವಿಗಳ ಭಾವನೆಗೆ ಕನ್ನಡಿಯಾದರು. ಅದೆಷ್ಟೋ ಕನ್ನಡ ಕವಿಗಳ ಭಾವಗೀತೆಗಳನ್ನು ಜನಪ್ರಿಯಗೊಳಿಸಲು ತಮ್ಮನ್ನು ತಾವೇ ಮುಡಿಪಾಗಿರಿಸಿಕೊಂಡರು. ಕವನಗಳನ್ನು ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನೆ-ಮನಗಳಿಗೂ ತಲುಪಿಸುವ ಸಾಹಸ ಮಾಡಿ ಹೊಸಯುಗಕ್ಕೆ ನಾಂದಿ ಹಾಡಿದರು. ಇವರ ಸಂಯೋಜನೆಯಲ್ಲಿ ಮೂಡಿಬಂದ ಹಾಡುಗಳು ಕವಿತೆಯ ಮಹತ್ವವನ್ನು ಅತ್ಯಂತ ಸುಂದರವಾಗಿ ಬಿಚ್ಚಿಡುವಂತಿರುತ್ತಿದ್ದವು. ಒಂದರ್ಥದಲ್ಲಿ ಕವಿಯ ಭಾವದ ಕೊರಳಾಗಿದ್ದರು ಅನಂತಸ್ವಾಮಿ. ಅನಂತಸ್ವಾಮಿ ಅಂದರೆ ಸುಗಮ ಸಂಗೀತ ಎನ್ನುವಷ್ಟು ಆ ಕ್ಷೇತ್ರದಲ್ಲಿ ಕೆಲಸ ಮಾಡಿದರು.ಇವರ ಪ್ರಪಥಮ ಸಂಯೋಜನೆಯೇ `ಬಾಗಿಲೊಳು ಕೈ ಮುಗಿದು, ಒಳಗೆ ಬಾ ಯಾತ್ರಿಕನೆ…’ ಎಂಬ ಕುವೆಂಪು ಅವರ ಕವಿತೆ. ಅನಂತಸ್ವಾಮಿಯವರು ಸ್ವರಸಂಯೋಜನೆಯ ಮೂಲಕ ಕವಿಯ ಅಂತರಂಗದ ಸೂಕ್ಷ್ಮ ಭಾವಕ್ಕೆ ದನಿಯಾಗುತ್ತಿದ್ದರು. ಅಕ್ಷರದ ಮಹತ್ವವನ್ನು ಕೇಳುಗನಿಗೆ ಚಂದವಾಗಿ ಕೇಳಿಸುತ್ತಿದ್ದರು. ಕಾಳಿಂಗರಾಯರಿಂದ ಪ್ರೇರಣೆಗೊಂಡು, ಕಾಳಿಂಗರಾಯರಲ್ಲಿದ್ದ  ಉತ್ಸಾಹ ಆದರ್ಶಗಳನ್ನು ಮನತುಂಬಿಸಿಕೊಂಡಿದ್ದ ಗಾಯಕರು ಮತ್ತು ಸಂಯೋಜಕರಾಗಿದ್ದ ಮೈಸೂರು ಅನಂತಸ್ವಾಮಿಯವರು ಎದೆ ತುಂಬಿ ಹಾಡುತ್ತಿದ್ದರೆ ಶ್ರೋತೃಗಳು ಮನವಿಟ್ಟು ಕೇಳುವುದಲ್ಲದೆ ಅಕ್ಷರಶಃ ಅವರನ್ನು ಆರಾಧಿಸುತ್ತಿದ್ದರು.ಭಾವವೆಂಬ ಸೂಕ್ಷ್ಮ ರಂಗೋಲಿಗೆ ಸ್ವರವೆಂಬ ಬಣ್ಣ ತುಂಬುತ್ತಿದ್ದ ಅನಂತರಿಗೆ ಕೇವಲ ಅನಂತರೊಬ್ಬರೇ ಸಾಟಿ.

ಮೈಸೂರಿನಲ್ಲೇ ಇದ್ದ ಅನಂತಸ್ವಾಮಿಯವರು ತಮ್ಮ ಸುಗಮ ಸಂಗೀತದ ಆವರಣದಲ್ಲಿ ನೂರಾರು ಹೊಸ ಹೊಸ ಸ್ವರಸಂಯೋಜನೆಯ ಹೂವಿನಗಿಡಗಳನ್ನು ನೆಟ್ಟರು. ಕುವೆಂಪು ಅವರ `ಬಾಗಿಲೊಳು ಕೈಮುಗಿದು ಗೀತೆಯಿಂದ ಸುಗಮ ಸಂಗೀತವೆಂಬ ಪ್ರಪಂಚದ ಬಾಗಿಲು ತೆರೆದು ಹಿರಿಯ ಕವಿಗಳಾದ ಬೇಂದ್ರೆ, ಕುವೆಂಪು, ಪು.ತಿ.ನ., ಡಿ.ವಿ.ಜಿ., ಪರಮೇಶ್ವರ ಭಟ್ಟ, ಮಾಸ್ತಿ ಮುಂತಾದ ಹಿರಿಯ ಕವಿಗಳ ಸಾಲುಗಳಿಗೆ ಸ್ವರ ಸಂಯೋಜಿಸಿದ್ದೊಂದೇ ಅಲ್ಲದೆ ಹೊಸ ಕವಿಗಳ ಅಕ್ಷರಕ್ಕೂ ತಮ್ಮ ಸಂಗೀತದ ಮಾಂತ್ರಿಕ ಸ್ಪರ್ಶ ನೀಡಿದವರು ಅನಂತಸ್ವಾಮಿಯವರು.

ಸುಗಮ ಸಂಗೀತಕ್ಕೆ ಇವರು ಹರಿಬಿಟ್ಟ ಸಂಯೋಜನೆಗಳು ಬಿಎಂಶ್ರೀ ಅವರ, `ಕರುಣಾಳು ಬಾ ಬೆಳಕೆ..’, ಅಡಿಗರ, `ಇಂದು ಕೆಂದಾವರೆ…,’ ನಿಸಾರರ ‘ಬೆಣ್ಣೆಕದ್ದ….’,  ಡಿ. ವಿ. ಜಿಯವರ ಅಂತಃಪುರ ಗೀತೆಗಳು,  ರಾಜರತ್ನಂ ಅವರ `ರತ್ನನ್ ಪದಗಳು..’, ಜಿ. ಎಸ್. ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು…’ ಅಡಿಗರ ‘ಯಾವ ಮೋಹನ….’ ಹೀಗೆ ಸುಮಾರು ಸಾವಿರ ಕವಿತೆಗೂ ಮೀರಿ ಸಂಯೋಜನೆ ಮಾಡಿದರು. ಗೀತರೂಪಕಗಳಿಗೆ ಇವರ ಸಂಯೋಜನೆಯೇ ದೃಷ್ಟಿಬೊಟ್ಟಾಗಿಬಿಡುತ್ತಿತ್ತು. ಅನಂತರು `ಯಾವ ಮೋಹನ ಮುರಳಿ ಕರೆಯಿತು…’ ಸೃಷ್ಟಿಸಿದ್ದರಿಂದ ಮಧುರ ಕಂಠದ  ರತ್ನಮಾಲಾ ಪ್ರಕಾಶ್ ನಾಡಿಗೆ ಪರಿಚಿತರಾದರು. ಸುಗಮ ಸಂಗೀತವೆಂದರೆ ರತ್ನಮಾಲಾ, ರತ್ನಮಾಲಾ ಎಂದರೆ ಸುಗಮ ಸಂಗೀತ ಎನಿಸುವಷ್ಟು ಪ್ರಸಿದ್ಧರಾದ ಪ್ರತಿಭಾನ್ವಿತ ರತ್ನಮಾಲಾ ಪ್ರಕಾಶ್ ಕನ್ನಡ ಸಂಗೀತದ ಶ್ರೇಷ್ಟ ಹಾಡುಗಾರರ ಸಾಲಿನಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವಂತವರು. ಸ್ವಾಮಿಯವರ ಸಂಯೋಜನೆ ಮತ್ತು ರತ್ನಮಾಲಾ ಅವರ ಸ್ವರದಲ್ಲಿ ಮೂಡಿಬಂದ  `ಬಾಗಿಲೊಳು ಕೈ ಮುಗಿದು…’, ‘ಎದೆ ತುಂಬಿ ಹಾಡಿದೆನು…`, ‘ಯಾವ ಮೋಹನ ಮುರಳಿ..’  ‘ಉಡುಗಣ ವೇಷ್ಟಿತ…’ ‘ನಿಲ್ಲಿಸದಿರು ವನಮಾಲಿ…’, ‘ಮೊದಲ ದಿನ ಮೌನ…’, ‘ಏನೀ ಮಹಾನಂದವೇ….,’ ಹೀಗೆ ಅನೇಕ ಭಾವಗೀತೆಗಳು ಇಂದಿಗೂ ನಮ್ಮ ಮನದಲ್ಲಿ ಹಸಿರಾಗಿಯೇ ಇದೆ ಅಂದರೆ ಇನ್ಯಾವ ಸಾಕ್ಷಿ ಬೇಕು ಅನಂತರ ಸಾಧನೆಗೆ?

“ಬದುಕು ಜಟಕಾ ಬಂಡಿ”, “ನಿತ್ಯೋತ್ಸವ”, “ಎಲ್ಲಿ ಜಾರಿತೋ ಮನವು”, “ಅತ್ತಿತ್ತ ನೋಡದಿರು”, “ತಿಪ್ಪಾರಳ್ಳಿ ಬಲು ದೂರ”, “ಭಾರತ ಜನನಿಯ ತನುಜಾತೆ”, “ಎಳ್ಕಳ್ಳೋಕ್ಕೊಂದೂರು”, “ನಡೆದಿದೆ ಪೂಜಾರತಿ”, “ತಾರಕ್ಕ ಬಿಂದಿಗೆ”, “ಹೆಂಡತಿಯೊಬ್ಬಳು”, “ಬೆಣ್ಣೆ ಕದ್ದ ನಮ್ಮ ಕೃಷ್ಣ”, “ಕೋಳೀಕೆ ರಂಗಾ”, “ಐನೋರ್ ಹೊಲ್ದಾಗ್ ಚಾಕ್ರಿ ಮಾಡ್ತ”, “ಕುರಿಗಳು ಸಾರ್ ಕುರಿಗಳು”, “ಎದೆ ತುಂಬಿ ಹಾಡಿದೆನು”, “ಭೂಮಿ ತಬ್ಬಿದ್ ಮೋಡಿದ್ದಂಗೇ”, “ಅಂತರಂಗದಾ ಮೃದಂಗ”, “ನನ್ ಪುಟ್ನಂಜಿ ರೂಪ”, “ಓ ನನ್ನ ಚೇತನಾ”, “ನಾಕು ತಂತಿ”, “ಬಾ ಮಳೆಯೇ ಬಾ”, “ಹೊಂಗೆ ಸೊಂಪಾಗಿ”, “ಬಿಟ್ಟಿದ್ದೇ ಹೆಂಡ ಅಲ್ಲಿ”, “ತನುವು ನಿನ್ನದು ಮನವು ನಿನ್ನದು” ಹೀಗೆ ಎಷ್ಟೊಂದು ಹಾಡುಗಳು ನಮ್ಮನ್ನು ಈಗಲೂ ಭಾವದುತ್ತುಂಗಕ್ಕೆ ತಲುಪಿಸುತ್ತವೆ. ಅದಕ್ಕೆ ಅಲ್ಲವೇ ವೆಂಕಟೇಶ ಮೂರ್ತಿಯವರು ಅನಂತರ ಬಗ್ಗೆ “ಕನ್ನಡದ ಕವಿತೆಯ ಹಾಡುವಲೆಲ್ಲ ಇರುವ ‘ಅನಂತ’ರು…” ಎಂದು ಬರೆದಿದ್ದು. ಸಾರ್ವಕಾಲಿಕವಾಗಿ ನಮ್ಮೆಲ್ಲರನ್ನೂ ಮಂತ್ರಮುಗ್ಧವನ್ನಾಗಿಸಬಲ್ಲ ಸಂಗೀತವನ್ನು ಈ ಸ್ವರಸಂಯೋಜಕ ನಮಗೆ ಉಡುಗೊರೆಯಾಗಿ ನೀಡಿದ್ದಾರೆ.

ಸುಗಮ ಸಂಗೀತ ಕ್ಷೇತ್ರ ಈಗ ನಿಂತ ನೀರಾಗಿಹೋಗಿದೆ. ಅನಂತಸ್ವಾಮಿ, ಅಶ್ವತ್, ರಾಜು ಅನಂತಸ್ವಾಮಿಯವರ ನಂತರ ನಮಗೆ ಹೊಸ ಸುಗಮ ಸಂಗೀತ ಸ್ವರಸಂಯೋಜಕರು ಸಿಗಲೇ ಇಲ್ಲ. ಹಿಂದೆ ಕುವೆಂಪು ಅವರು ಕಾಳಿಂಗರಾವ್ ಅವರಿಗೆ ನೀಡಿದ ಪ್ರಶಸ್ತಿ ಪತ್ರವೊಂದರಲ್ಲಿ ಸುಗಮಸಂಗೀತಗಾರರು ಸಾಹಿತ್ಯವನ್ನು ಹೊತ್ತುಕೊಂಡು ರಸಯಾನ ಮಾಡಬೇಕೇ ವಿನಃ ಹತ್ತಿಕೊಂಡು ಅಲ್ಲ – ಎಂದು ತಿಳಿಸಿದ್ದರಂತೆ. ಇದು ಈಗಿನ ಅನೇಕ ಸಂಗೀತಗಾರರಿಗೆ ಅನ್ವಯವಾಗುವಂತೆ ಇದೆ. ಅವರ ಸಂಯೋಜನೆಗಳು ಕವಿಯ ಕಾವ್ಯಭಾವವನ್ನು ಪ್ರೀತಿ ಭಕ್ತಿಯಿಂದ ಹೊತ್ತು ಸಾಗಿಸುವಂತಿತ್ತು.  ಕಾಳಿಂಗರಾವ್, ಅನಂತಸ್ವಾಮಿ, ಅಶ್ವತ್, ರಾಜು ಎಲ್ಲರೂ ಕವಿಯ ಆಶಯಕ್ಕೆ ಧಕ್ಕೆ ಬರುವಂತಹ ಸಂಯೋಜನೆಯನ್ನು ಮಾಡಲೇ ಇಲ್ಲ. ಸುಗಮ ಸಂಗೀತ ಎನ್ನುವ ಸಂಸ್ಕೃತಿಯಲ್ಲಿ ಯಾವಾಗಲೂ ಮಾಧುರ್ಯ ಇರಲೇಬೇಕು. ಆಗಲೇ ಅದು ಭಾವದ ಬೆಳಕನ್ನು ಚೆಲ್ಲಲು ಸಾಧ್ಯ. ಸುಗಮ ಸಂಗೀತ ಕ್ಷೇತ್ರವೀಗ ಅಕ್ಷರಶಃ ಅನಾಥವಾಗಿದೆ.  

ಮತ್ತೆ ಹುಟ್ಟಿಬನ್ನಿ ನೀವೆಲ್ಲರೂ… ಇನ್ಯಾವುದೋ ದೇಹದಲ್ಲಿ ನಿಮ್ಮದೇ ಸ್ವರವಾಗಿಯಾದರೂ….

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!