ಅಂಕಣ

ಕಣ್ಣೀರೊರೆಸೋ ಬಂಧು ‘ಕರವಸ್ತ್ರ’

ಹೊಟ್ಟೆ ಹಾಗೂ ಬಟ್ಟೆ ಮನುಷ್ಯ ಜೀವನದ ಬಹುಮುಖ್ಯವಾದ ಎರಡು ಅಂಶಗಳಾಗಿವೆ. ಆತ ತನ್ನ ರಟ್ಟೆಯನ್ನು ಸವೆಸುವುದು ಹೊಟ್ಟೆ ಮತ್ತು ಬಟ್ಟೆಗಾಗಿಯೇ! ಅವುಗಳನ್ನು ಆತನ ಮೂಲಭೂತ ಅಗತ್ಯಗಳು ಎನ್ನಬಹುದಾಗಿದೆ. ಎಲೆ, ಸೊಪ್ಪುಗಳನ್ನು ಕಟ್ಟಿಕೊಂಡು ತನ್ನ ಮಾನ ಮುಚ್ಚಿಕೊಳ್ಳುತ್ತಿದ್ದ ಮನುಷ್ಯ ಕ್ರಮೇಣ ಅವುಗಳ ಬದಲಾಗಿ ಬಗೆಬಗೆಯ ವಸ್ತ್ರಗಳನ್ನು ಧರಿಸಲಾರಂಭಿಸಿದ ಪ್ರಕ್ರಿಯೆ ನಾಗರಿಕತೆಯ ಬೆಳವಣಿಗೆಯ ಜೊತೆಜೊತೆಗೆ ಉಂಟಾದ ಬದಲಾವಣೆಯೇ ಆಗಿದೆ. ಕಾಲಚಕ್ರ ಉರುಳಿದಂತೆ ದಿರಿಸುಗಳೂ ಕೂಡಾ ದೌಲತ್ತಿನ  ದ್ಯೋತಕವಾಗಿ ಮಾರ್ಪಟ್ಟಂತೆ ಅದರ ಗಾತ್ರವೂ ಕುಗ್ಗಲಾರಂಭಿಸಿತೆನ್ನಿ. ವಿವಿಧ ವಿನ್ಯಾಸದ ವಸ್ತ್ರಗಳು ಬಳಕೆಯಲ್ಲಿದ್ದರೂ ಅವುಗಳ ಪೈಕಿ ಅತ್ಯಂತ ಚಿಕ್ಕದು ಕರವಸ್ತ್ರ. ತೀರಾ ಇತ್ತೀಚಿನವರೆಗೂ ಕರವಸ್ತ್ರಗಳು ಈ ಅಭಿದಾನಕ್ಕೆ ಪಾತ್ರವಾಗಿದ್ದವು. ಆದರೆ ಈಗೀಗ ಅದಕ್ಕೂ ಪೈಪೋಟಿ ಒಡ್ಡುವಂತಹ ಕನಿಷ್ಠ ಗಾತ್ರದ ಬಟ್ಟೆಗಳನ್ನು ತೊಡುವವರಿದ್ದಾರೆ. ಇರಲಿ, ಎಲ್ಲವೂ ಕಾಲನ ಮಹಿಮೆ. ಸದ್ಯಕ್ಕೆ ಕರವಸ್ತ್ರವೆಂಬ ಚಿಕ್ಕ ಬಟ್ಟೆಯ ಬಗ್ಗೆ ಒಂದು ಚೊಕ್ಕ ಹರಟೆ ಹೊಡೆಯೋಣ ಬನ್ನಿ.

 

“ಆಪತ್ತಿಗಾದವನೇ ನೆಂಟ” ಎಂಬ ಮಾತು ಜನಜನಿತ. ಆದರೆ ಎಲ್ಲಾ ಹೊತ್ತಲ್ಲೂ ಅಂಥ ನೆಂಟರು ಸಿಗಲಿಕ್ಕಿಲ್ಲ ಎನ್ನುವುದನ್ನು ಒಪ್ಪಲೇಬೇಕು. ಎಂಥಾ ಅಪ ಹೊತ್ತಿನಲ್ಲಾದರೂ, ಯಾವುದೇ ಆಪತ್ತು ಎದುರಾದರೂ ಸದಾ ನೆರವಿಗೆ ಸಿದ್ಧರಾಗಿರುವ ಕೆಲವೇ ಕೆಲವು ಆಪ್ತರ ಪೈಕಿ ‘ಕರವಸ್ತ್ರ’ವೂ ಒಂದು. ಬಹುತೇಕ ಸಂದರ್ಭಗಳಲ್ಲಿ ಕರದಲ್ಲಿ ಹಿಡಿಯಲ್ಪಟ್ಟು ಕಂಗಳಿಂದ ಜಾರುವ ಕಣ್ಣೀರನ್ನು ಒರೆಸಿ, ಸಮಾಧಾನವನ್ನು ಉಂಟುಮಾಡುವ ಮತ್ತು ಬೆವರು, ಧೂಳನ್ನು ಒರೆಸಿ ಹಾಕುವ ಮೂಲಕ ನಿರಂತರವಾಗಿ ಸೇವೆಯನ್ನು ಒದಗಿಸುವ ಕರವಸ್ತ್ರವೂ ಒಂದರ್ಥದಲ್ಲಿ ‘ಕರಸೇವಕ’ನೇ ಸರಿ.

 

ನೀವು ಏನೇ ಹೇಳಿ ಇಂದಿಗಿಂತಲೂ ಹಿಂದಿನವರೇ ಉದಾರಿಗಳು. ಇದು ಕರವಸ್ತ್ರದ ವಿಚಾರದಲ್ಲೂ ನಿಜವೇ ಆಗಿದೆ. ಏಕೆಂದರೆ ಹಿಂದೆಲ್ಲಾ ಹೆಗಲ ಮೇಲೇರುತ್ತಿದ್ದ ದೊಡ್ಡ ದೊಡ್ಡ ಟವೆಲ್ಲುಗಳೇ ಬಹುಪಯೋಗಿಯಾಗಿ ಕರವಸ್ತ್ರದ ಕೆಲಸವನ್ನೂ ಮಾಡುತ್ತಿದ್ದವು. ಅದು ಹೆಗಲ ಮೇಲಿತ್ತೆಂದರೆ ಒಂದು ಪ್ರತಿಷ್ಠೆಯ ಸಂಕೇತ. ಈ ಪ್ರತಿಷ್ಠೆಯ ಗುರುತು ಇದೀಗ ಕರಗಿ, ಕೊರಗಿ, ಸೊರಗಿ ತನ್ನ ಗಾತ್ರವನ್ನೆಲ್ಲಾ ಕಳೆದುಕೊಂಡು ಇಷ್ಟು ಸಣ್ಣದಾಗಿಬಿಟ್ಟಿದೆ. ಅಷ್ಟೇ ಅಲ್ಲದೆ ಹೆಗಲಿನಿಂದ ಉದುರಿ ಹೋಗಿ ಕಿಸೆಯೊಳಗೆ ಮಡಚಿ ಕುಳಿತುಕೊಂಡಿದೆ.

 

ಖರ್ಚಿಗೆ ಕಾಸಿಲ್ಲದಿದ್ದಾಗಲೂ, ವೆಚ್ಚ ಹೆಚ್ಚಾಗಿ ಕೈಯ್ಯಲ್ಲಿರುವ ಕಾಸೆಲ್ಲಾ ಲಾಸ್ ಆದಾಗಲೂ ಉಂಟಾಗುವ ದುಃಖ ಕಣ್ಣೀರನ್ನು ದೂರ ಮಾಡಲು ಸದಾ ಜೊತೆಗಿರುವ ಜೊತೆಗಾರ ಈ ಕರ್ಚೀಫ್ ಹೇಗೆ ನೋಡಿದರೂ ಉಪಕಾರಿಯೇ ಸರಿ. ಗಾತ್ರದಲ್ಲಿ ಸಣ್ಣದಾದರೂ ವ್ಯಕ್ತಿಯ ಬದುಕಿನಲ್ಲಿ ಇದರ ಮಹತ್ವ ಹಾಗೂ ಸ್ಥಾನ ದೊಡ್ಡದೇ! ಇದೊಂಥರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದರ ಇನ್ನೊಂದು ರೂಪವೇ ಆಗಿದೆಯಲ್ಲವೇ? ಇಂತಿಪ್ಪ ಕರ್ಚೀಫ್ ನ್ನು ಚೀಪ್ ಎಂದು ಪರಿಗಣಿಸಲಾಗದು.

 

ರಾಜಕೀಯದವರೂ ಕೂಡಾ ಈ ಕರವಸ್ತ್ರವನ್ನು ಬಹುವಾಗಿಯೇ ಅವಲಂಭಿಸಿರುತ್ತಾರೆ. ಅವರ ರಾಜಕೀಯ ಬದುಕಿನ ವಿವಿಧ ಹಂತಗಳಲ್ಲಿ ಇದರ ಬಳಕೆ ವಿಪುಲವಾಗಿದೆ. ಚುನಾವಣೆ ಬಂದರೆ, ಹೊಸ ರಾಜಕೀಯ ಪಕ್ಷಗಳನ್ನು ಯಾರಾದರೂ ಸ್ಥಾಪಿಸಲು ಮುಂದಾದ ಸಂದರ್ಭಗಳಲ್ಲಿ ಜನರ ಅನುಕಂಪ ಗಿಟ್ಟಿಸಲೋಸುಗ ಹರಿಸುವ ಕಣ್ಣೀರಿನ ಧಾರೆಯನ್ನು ಸಹಿಸಿಕೊಳ್ಳುವುದೂ ಇದೇ ಬಡಪಾಯಿ ಕರವಸ್ತ್ರಗಳು.

 

ಬಹುಪಯೋಗಿಯಾಗಿರುವ ಕರವಸ್ತ್ರಗಳು ನಿರಂತರವಾಗಿ ಮನುಷ್ಯರ ಸಹಾಯಕ್ಕೆ ನಿಲ್ಲುತ್ತವೆ. ಬೇಸಿಗೆಯ ಬೇಗೆಯಲ್ಲಿಳಿಯುವ ಬೆವರನ್ನು ಒರೆಸಿಕೊಳ್ಳಲು ನೆರವಾದರೆ, ಮಳೆಗಾಲದ ಥಂಡಿಯಲ್ಲಿ ಮೂಗಿನ ಬಂಧು. ಚಳಿಗಾಲದಲ್ಲಿ ತಣ್ಣನೆಯ ಗಾಳಿಯು ಕಿವಿಯನ್ನು ನುಗ್ಗದಂತೆ ತಡೆಯುವ ಸ್ಕಾರ್ಪ್ ಕೂಡಾ ಆಗಲಿದೆ.

 

ಮೂಗಿನಲ್ಲಿ ಕರಕರೆಯಾದಾಗ, ನಿಲ್ಲದ ಕೆರೆತ ಉಂಟಾದಾಗಲೆಲ್ಲಾ ನಮ್ಮ ಕರವನ್ನು ಹಿಡಿಯುವ ಕರವಸ್ತ್ರ ಅದೆಷ್ಟು ಕರುಣಾಮಯಿಯಲ್ಲವೇ? ‘ನಮ್ಮ ತಲೆಯ ಕೆಳಗೆ ನಮ್ಮ ಕೈ’ ಎಂಬ ಸ್ವಾವಲಂಬನೆಯ ಮಂತ್ರ ಇಲ್ಲಿ “ನಮ್ಮ ಕೈಯಲ್ಲಿ ನಮ್ಮ ಕರವಸ್ತ್ರ” ಎಂದಾಗಿದೆಯಷ್ಟೇ!

 

ಓವರ್ ಡೋಸ್: ನೆಗಡಿಯಾದಾಗ ಕರವಸ್ತ್ರವೊಂದನ್ನು ಕೈಯಲ್ಲಿ ಹಿಡಿಯದೇ ಹೋದರೆ ಅನ್ಯರು ನಮ್ಮತ್ತ ನೋಡಿ ನಗಾಡಲು ನಾವೇ ಅವಕಾಶ ಮಾಡಿಕೊಟ್ಟಂತೆ.

– ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!