ಅಂಕಣ

ಉತ್ತರ ಹುಡುಕುವವರಾರು ಉತ್ತರಕನ್ನಡಕ್ಕೆ?

ಭ್ರಮನಿರಸನ ಉಂಟುಮಾಡುವ ರಾಜಕಾರಣಿಗಳ ಸಂಖ್ಯೆ ನಮ್ಮ ಉತ್ತರಕನ್ನಡದಲ್ಲಂತೂ ಹೆಚ್ಚಾಗುತ್ತಲೇ ಇದೆ. ಒಂದು ಹಂತದವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ ಕಾಲಕ್ರಮೇಣ ಎಲ್ಲವೂ ಬದಲಾಗುತ್ತದೆ. ರಾಮಕೃಷ್ಣ ಹೆಗಡೆಯವರಂತಹ ಮತ್ತೊಬ್ಬ ಮುತ್ಸದ್ದಿ ರಾಜಕಾರಣಿ ನಮ್ಮ ಜಿಲ್ಲೆಗೆ ದೊರಕಲೇ ಇಲ್ಲ. ಈಗ ಇರುವವರಲ್ಲಿ ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತಾರೆ ಕಾರಣ ಅವರ ನೇರ ನುಡಿ. ಅಭಿವೃದ್ಧಿಯ ವಿಷಯದಲ್ಲಿ ಅನಂತಕುಮಾರ್ ಅವರಿಗೆ ಸಂಪೂರ್ಣ ಬೆಂಬಲ ದೊರಕುವುದು ಕಷ್ಟವೇ ಸರಿ ಆದರೆ ಈಗಿನ ಯುವಜನರ ‘ಪಲ್ಸ್’ ಅರ್ಥಮಾಡಿಕೊಂಡು ರಾಜಕೀಯವಾಗಿ ಎಲ್ಲರಿಗಿಂತಲೂ ಸ್ವಲ್ಪ ಭಿನ್ನ ಎಂದು ಗೋಚರಿಸುವವರು ಅನಂತ್. ನಮ್ಮ ರಾಜ್ಯದ ಜನರಿಗೆ ಅನಂತಕುಮಾರ್ ಹೆಗಡೆ ಈಗ ಪರಿಚಯವಾಗುತಿದ್ದಾರೆ ಆದರೆ ಉತ್ತರಕನ್ನಡದ ಜನರಾದ ನಮಗೆ ಅನಂತ್ ಹೇಗೆ ಅನ್ನುವುದು ಮುಂಚಿನಿಂದಲೂ ಗೊತ್ತು. ಅನಂತ್ ಬದಲಾಗಲಿಲ್ಲ ಮುಂಚೆ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಮುಂಚೆ ಹೇಗೆ ಮಾತನಾಡುತ್ತಿದ್ದರೋ ಈಗಲೂ ಹಾಗೆಯೇ ಮಾತನಾಡುತ್ತಾರೆ. ಅವರ ಪರಿಚಯವೇ ಇಲ್ಲದವರಿಗೆ ಅನಂತ್ ಬೇರೆ ತೆರನಾಗಿ ಗೋಚರಿಸುತ್ತಿದ್ದಾರೆ ಅಷ್ಟೇ. ಅನಂತ್ ಕುಮಾರ್ ಅವರಿಗೆ ಈಗ ಜವಾಬ್ದಾರಿ ಹೆಚ್ಚಿದೆ. ಮಾತೊಂದೇ ಅಲ್ಲ ಇನ್ಮುಂದೆ ಕೆಲಸವನ್ನೂ ಅವರು ಮಾಡಬೇಕಿದೆ. ಆ ನಿಟ್ಟಿನಲ್ಲಿ ಅವರ ರಾಜಕೀಯ ನಡೆ ಇದೆ ಎಂಬುದು ಸದ್ಯಕ್ಕೆ ಗೋಚರವಾಗುತ್ತಿದೆ. ಜಿಲ್ಲೆಯಲ್ಲಿ ಅನಂತಕುಮಾರ್ ಎಂದರೆ ಏನೋ ಒಂದು ‘ಸಂಚಲನವಂತೂ’ ಸೃಷ್ಟಿಯಾಗುತ್ತದೆ. ಆದರೆ ಇದು ಮತವಾಗಿ ಬಿಜೆಪಿಗೆ ದಕ್ಕುತ್ತದೆಯೇ? ಇದೊಂದು ದೊಡ್ಡ ಪ್ರಶ್ನೆ.

ಸತತ ೧೦ ವರ್ಷ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಇವರು ಜಿಲ್ಲೆಗೆ  ಏನು ಮಾಡಿದರು ಎಂಬುದು ಸಾರ್ವಕಾಲಿಕ ಪ್ರಶ್ನೆಯಾಗಿಯೇ ಉಳಿಯಿತು ಮತ್ತು ಉಳಿಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಕ್ಕೆ ಕಾಂಗ್ರೆಸ್’ನ ಎರಡು ಬಣಗಳ ರಾಜಕಾರಣದ ಮೇಲಾಟದಲ್ಲಿ ಒಂದು ಬಣದ ನಾಯಕರು ಇವರು ಎಂಬುದೇ ದೊಡ್ಡ ಸಾಧನೆಯಾಗುತ್ತದೆಯೋ ಏನೋ. ಈಗ ಎದ್ದಿರುವ ಶಿರಸಿ ಜಿಲ್ಲೆಯಾಗಬೇಕು ಎಂಬ ಕೂಗಿಗಾದರೂ ದೇಶಪಾಂಡೆ ಸ್ಪಂದಿಸಿದರೆ ಸಾಕಿತ್ತು ಅದು ಕೂಡ ಆಗುತ್ತಿಲ್ಲ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಲವಾದ ಹಿಡಿತ ಹೊಂದಿರುವ ದೇಶಪಾಂಡೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾದರೇ ಹೊರತು ಅಭಿವೃದ್ಧಿಯ ವಿಷಯದಲ್ಲಿ ಏನೂ ಸಾಧಿಸಿಲ್ಲ ಎಂಬುದಂತೂ ಸತ್ಯ. ಕೈಗಾರಿಕೆ ನಮ್ಮ ಜಿಲ್ಲೆಯ ಒಳಹೊಕ್ಕದಿದ್ದರೇ ಒಳ್ಳೆಯದು ಆದರೆ ಪ್ರವಾಸೋಧ್ಯಮವೇ ನಮ್ಮ ಬಂಡವಾಳವನ್ನಾಗಿಸಿಕೊಂಡು ಆ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವ ಅವಕಾಶ ದೇಶಪಾಂಡೆ ಅವರಿಗೆ ಇತ್ತು ಆದರೆ ಅದನ್ನೂ ಸರಿಯಾಗಿ ಮಾಡಿಲ್ಲ.ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ‘ಪುಂಡಾಟ’ವಾಗಬಾರದು. ಪರಿಸರಕ್ಕೆ ಪೂರಕವಾದ ‘ಪ್ರವಾಸೋದ್ಯಮದ ಅಭಿವೃದ್ಧಿ’ಯ ನೀಲನಕ್ಷೆ ಸಿದ್ದವಾಗಲೇ ಇಲ್ಲ. ಈಗೊಂದು ಐದಾರು ವರ್ಷದ ಹಿಂದೆ ‘ಡಿಸ್ಕವರ್ ಕರ್ನಾಟಕ’ ಎಂಬ ಚಂದದ ಪ್ರಾಜೆಕ್ಟ್ ಒಂದನ್ನು ರಾಮ ಜಯಶೀಲ ವೈದ್ಯ ಮತ್ತು ತಂಡ ಮಾಡಿತ್ತು. ಆಗ ಈಗಿನಷ್ಟು ಸೋಶಿಯಲ್ ಮೀಡೀಯ ಹವಾ ಇರಲಿಲ್ಲ. ಆದರೆ ನಮ್ಮ ಉತ್ತರಕನ್ನಡದ ಅದ್ಭುತವಾದ ಪ್ರವಾಸೀತಾಣಗಳನ್ನು ವೈದ್ಯ ಮತ್ತವರ ತಂಡ ಸೆರೆ ಹಿಡಿದಿತ್ತು ಮತ್ತು ಪ್ರವಾಸೋದ್ಯಮದ ನೀಲನಕ್ಷೆಯನ್ನು ಆಗಿನ ಪ್ರವಾಸೋದ್ಯಮ ಸಚಿವರಾಗಿದ್ದ ದೇಶಪಾಂಡೆಯವರಿಗೆ ಕೂಡ ನೀಡಲಾಗಿತ್ತು ಆದರೆ ದೇಶಪಾಂಡೆ ಪೂರಕ ಮಾತನ್ನಾಡಲಿಲ್ಲ, ಒಂದೊಳ್ಳೆ ಕನಸು ಕನಸಾಗಿಯೇ ಉಳಿಯಿತು.  ರಾಮಕೃಷ್ಣ ಹೆಗಡೆ ಅವರ ಜೊತೆ ಏಗಿದ ರಾಜಕಾರಣಿ ಇವರೇನಾ ಎಂಬಷ್ಟು ಬದಲಾಗಿಹೋದರು ದೇಶಪಾಂಡೆ. ಕಾರವಾರ, ಭಟ್ಕಳ, ಕುಮಟಾ,ಯಲ್ಲಾಪುರ ಮತ್ತು ಹಳಿಯಾಳದಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ ಆದರೆ ಅಲ್ಲಿಯ ಜನ ಈ ಎಲ್ಲಾ  ಶಾಸಕರ ಕೆಲಸದ ಬಗ್ಗೆ ತೃಪ್ತರಾಗಿದ್ದಾರೆಯೇ? ಬಹುಪಾಲು ಇಲ್ಲ ಎಂಬ ಉತ್ತರವೇ ದೊರಕಬಹುದು. ಆದರೆ ದೇಶಪಾಂಡೆ ಉತ್ತರಕನ್ನಡದ ರಾಜಕಾರಣದಲ್ಲಿ ತಮ್ಮದೇ ಕೋಟೆ ನಿರ್ಮಿಸಿಕೊಂಡು ಮೆರೆದಾಡುತ್ತಿದ್ದಾರೆ ಅಂದರೆ ಅದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಜಿಲ್ಲೆಯಲ್ಲಿ ಅನಂತಕುಮಾರ್’ಗೆ ಕಾರ್ನರ್ ಮಾಡುವ ಇನ್ನೊಬ್ಬ ಬಿಜೆಪಿ ನಾಯಕ ಸದ್ಯಕ್ಕಂತೂ ಯಾರೂ ಇಲ್ಲ. ಅನಂತ್ ಮಂತ್ರಿಯಾಗುವವರೆಗೂ ಕಾಗೇರಿ ಮತ್ತು ಅನಂತ್ ಬಣಗಳೆಂಬ ಎರಡು ಬಣವಿತ್ತು ಎಂಬುದಂತೂ ‘ಓಪನ್ ಸೀಕ್ರೆಟ್’. ಈಗ ಅನಂತ್ ಶಕ್ತಿ ಹೆಚ್ಚಿದೆ, ಕಾಗೇರಿ ಸುಮ್ಮನಿದ್ದಷ್ಟು ಅವರಿಗೇ ಒಳ್ಳೆಯದು.  ಕಾಗೇರಿ ಅವರು ಸಭ್ಯರು, ಭ್ರಷ್ಟರಲ್ಲ ಎಂಬುದಂತೂ ಮೇಲ್ನೋಟಕ್ಕೆ ಗೋಚರಿಸುತ್ತದೆ. ಆದರೆ ಪರ್ಯಾಯ ನಾಯಕತ್ವವನ್ನು ಬೆಳೆಸದೇ ಸ್ವಾರ್ಥ ರಾಜಕಾರಣ ಮಾಡಿದರು ಎಂಬುದು ರಾಜಕೀಯ ಬಲ್ಲವರ ಅಂಬೋಣ. ಇಷ್ಟು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಅವರು ನಿರೀಕ್ಷೆಗೆ ತಕ್ಕನಾಗಿ ಕೆಲಸ ಮಾಡಿಲ್ಲ ಎಂಬುದಂತೂ ಸುಮಾರು ಜನರ ಮನಸ್ಸಿನಲ್ಲಿ ಕೂತಿದೆ. ಬಿಜೆಪಿಯ ಶಕ್ತಿ ಅಂದರೆ ಅದು ತಳಮಟ್ಟದ ಕಾರ್ಯಕರ್ತರು. ಆದರೆ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಬಿಜೆಪಿ ಸರಿಯಾಗಿ ನೋಡುತ್ತಿಲ್ಲ ಎಂಬ ಅಸಮಾಧಾನ ಹಲವು ದಿನಗಳಿಂದ ಹೊಗೆಯಾಡುತ್ತಿದೆ. ಇದು ಸರಿಯಾಗದಿದ್ದರೆ ಬಿಜೆಪಿಯನ್ನು ಸೋಲಿಸಲು ಇದೆ ಕಾರ್ಯಕರ್ತರು ಸಾಕು. ಬಿಜೆಪಿಯನ್ನು ಬೂತ್ ಮಟ್ಟದಲ್ಲಿ ಬೆಳೆಸಿದ ಎಷ್ಟೋ ಕಾರ್ಯಕರ್ತರುಗಳು ಮನೆಯಲ್ಲಿ ಕೂತು ಇವರ ಸಹವಾಸ ಸಾಕು ಎನ್ನುತ್ತಿರುವುದಂತೂ ಬಿಜೆಪಿಯವರು ಯಾವತ್ತೂ ಒಪ್ಪಿಕೊಳ್ಳದ ಸತ್ಯ.

ಅಭಿವೃದ್ಧಿಯ ವಿಷಯದಲ್ಲಿ ಮಾದರಿಯಾಗಿ ನಿಲ್ಲಬಹುದಾಗಿದ್ದ ನಮ್ಮ ಜಿಲ್ಲೆಯನ್ನು ಹಳ್ಳ ಹಿಡಿಸುವಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳ ಕೊಡುಗೆ ಇದೆ. ಅದು ದೇಶಪಾಂಡೆಯಾಗಿರಲಿ ಅಥವಾ ಕಾಗೇರಿಯಾಗಿರಲಿ ಇಲ್ಲವೇ ಅನಂತ್ ಆಗಿರಲಿ ಎಲ್ಲರದ್ದೂ ‘ರಾಜಕಾರಣ’ ಅಷ್ಟೇ. ತುದಿ ಮುಟ್ಟದ ‘ಅಭಿವೃದ್ಧಿಯಾಟ’ ಇದು. ಅಥವಾ ಅದನ್ನು ಜನರಿಗೆ ತಲುಪಿಸುವಲ್ಲಿ ಅವರು ಎಡವಿದರೋ ಏನೋ ಗೊತ್ತಿಲ್ಲ.

ಇನ್ನು ಭರವಸೆ ಹುಟ್ಟಿಸಿದ ಅನೇಕ ಯುವ ನಾಯಕರುಗಳು ಅವರ ನಿಲುವುಗಳಿಂದಲೇ ಬೇಸರ ಉಂಟು ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಯೂನಿವರ್ಸಿಟೀಯಿಂದ ಪದವಿ ಪಡೆದು ರಾಜಕೀಯಕ್ಕೆ ಬಂದೆರೆಂದ ಮಾತ್ರಕ್ಕೆ ‘ಹುಯಿಲೆಬ್ಬಿಸಬೇಕು’ ಎಂದೇನೂ ಇಲ್ಲ. ಕೆಲವೊಂದು ವಿಷಯದಲ್ಲಿ ಪ್ರಬುದ್ಧರಾಗಿ ನಡೆದುಕೊಳ್ಳದಿದ್ದರೆ ಯಾವ ಪದವಿಯಿದ್ದು ಏನು ಪ್ರಯೋಜನ? ಅಲ್ಲವಾ?  ಶಿರಸಿ ಸಿದ್ದಾಪುರದ ಎಷ್ಟೋ ಮನೆಗಳಲ್ಲಿ ರಾಮಕೃಷ್ಣ ಹೆಗಡೆಯವರ ಫೋಟೋ ಇಂದಿಗೂ ಇದೆ ಕಾರಣ ಅವರ ಮೇಲಿನ ಪ್ರೀತಿ ಮತ್ತು ಅವರು ನಡೆಸಿದ ಮೌಲ್ಯಾಧಾರಿತ ರಾಜಕಾರಣ. ಆದರೆ ಅವರನ್ನು ಮಾನಸಿಕವಾಗಿ ನೋಯಿಸಿದವರು ಯಾರು ಮತ್ತು ಅವರು ನಿರ್ಮಿಸಿದ ಕೋಟೆಯನ್ನು ಮೋಸದಿಂದ ವಶಪಡಿಸಿಕೊಂಡು ಮೆರೆದಾಡುತ್ತಿರುವ ಕುಟುಂಬ ಯಾವುದು ಎಂಬ ಕನಿಷ್ಟ ಜ್ಞಾನ ನಮ್ಮ ಮತದಾರರಿಗೆ ಇಲ್ಲ ಅಂದುಕೊಂಡರೆ ಅಥವಾ ಆ ಕುಟುಂಬ ಹೆಗಡೆಯವರಿಗೆ ಮೋಸ ಮಾಡಿಲ್ಲ ಎಂಬುದನ್ನು ಪದೇ ಪದೇ ಬೊಗಳುವುದನ್ನೇ ಸ್ಟ್ರ್ಯಾಟಜೀ ಎಂದುಕೊಂಡರೆ ಅದರಷ್ಟು ಮೂರ್ಖತನ ಬೇರೆ ಇನ್ಯಾವುದೂ ಇಲ್ಲ. ಅಂದು ರಾಮಕೃಷ್ಣ ಹೆಗಡೆಯವರನ್ನು ಕೀಳಾಗಿ ನಡೆಸಿಕೊಂಡ ಪಕ್ಷ ಇಂದು ಉತ್ತರಕನ್ನಡದ ರಾಜಕಾರಣದಲ್ಲಿ ಹೆಗಡೆಯವರನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಹೊರಟಿರುವುದು ‘ಹೀನ ರಾಜಕಾರಣ’ ಅಲ್ಲದೇ ಮತ್ತಿನ್ನೇನು? ಈಗ ಆ ಪಕ್ಷದ ಎಲ್ಲ ಪೋಸ್ಟರ್’ನಲ್ಲಿ ಹೆಗಡೆಯವರ ಫೋಟೋ ರಾರಾಜಿಸುತ್ತಿದೆ. ಈಗ ರಾಮಕೃಷ್ಣ ಹೆಗಡೆ ನೆನಪಾದರಾ? ಇತಿಹಾಸ ನೆನಪಿಲ್ಲವೆಂದುಕೊಂಡಿರಾ? ಕೇಂದ್ರ ಸರಕಾರ ಜಾರಿಗೆ ತಂದ ಜಿಎಸ್ಟಿಯನ್ನು ವಿರೋಧಿಸುವ ಭರದಲ್ಲಿ ಕೆಲವರು ಆಡಿದ ಕೆಲವು ಮಾತು ಲೂಸ್ ಟಾಕ್ ಅನ್ನಿಸಿದ್ದಂತೂ ಹೌದು (ಉತ್ತರ ಕನ್ನಡದ ಒಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಈಗ ಕೆಲವು ದಿನದ ಹಿಂದೆ ‘ಕೇಂದ್ರ ಸರಕಾರ ಬಡವರ ತಲೆ ಒಡೆದು ಹಣ ಸಂಗ್ರಹಿಸುತ್ತಿದೆ’ ಎಂದು ರೋಷಾವೇಶದಿಂದ ಅರಚಿಕೊಂಡಿದ್ದರು).ಇದೇ ರಾಜಕಾರಣಿ ‘ರೂಪಾಯಿ ಅಪನಗದೀಕರಣದಿಂದ ಇಪ್ಪತ್ತು ಸಾವಿರ ಕೋಟಿ ನಷ್ಟವಾಯಿತು’ ಎಂದು ಎಲ್ಲಾ ಕಡೆ ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಹೀಗೆ ಇಲ್ಲ ಸಲ್ಲದ ಆರೋಪ ಮಾಡಿ ಸುಮ್ಮನಾಗುವುದಲ್ಲ, ಅದನ್ನು ದಾಖಲೆ ಸಮೇತ ಬಿಚ್ಚಿಟ್ಟರೆ ಮಾತ್ರವಲ್ಲವೆ ನಿಮ್ಮ ಸಾಚಾತನವನ್ನು ನಾವು ನಂಬಬಹುದು? ಜಾತ್ಯಾತೀತರಾಗಿ ಬೇಡ ಅನ್ನೋಲ್ಲ ಆದರೆ ಅದರಡಿಯಲ್ಲಿನ ತುಷ್ಟೀಕರಣವ ಸಹಿಸಲಾರೆವು. ಸಾಮರಸ್ಯದ ಹೆಸರಿನಲ್ಲಿನ ತುಷ್ಟೀಕರಣವನ್ನು ನಾವೇನು ಅರಿಯಲಾರೆವು ಅಂದುಕೊಂಡಿರಾ ‘ಮಿಸ್ಟರ್ ಸೆಕ್ಯುಲರ್ ಯಂಗ್ ಲೀಡರ್’ ?

ನಾವು ಮೋದಿಯನ್ನು ನಂಬುತ್ತೇವೆ ಎಂದರೆ ಸುಖಾಸುಮ್ಮನೆ ಕಣ್ಮುಚ್ಚಿ ಒಪ್ಪುತ್ತೇವೆ ಎಂದಲ್ಲ. ನಾವು ಕೂಡ ಸರಕಾರದ ನಡೆಯನ್ನು, ನಿರ್ಧಾರವನ್ನು ಅವಲೋಕಿಸಿಯೇ ಮೋದಿಯನ್ನು ಬೆಂಬಲಿಸುವುದು. ಕೆಲವರು ಅಭಿವೃದ್ಧಿಯೊಂದೇ ನಮ್ಮ ಅಜೆಂಡಾ ಎಂದು ಒಳಗಿನಿಂದ ನಡೆಸುವ ಹೇಯ ರಾಜಕಾರಣವನ್ನೂ ನಾವು ಅರಿಯಬಲ್ಲೆವು. ಉತ್ತರ ಕನ್ನಡದ ಜನ ಜನ ಎಲ್ಲವನ್ನೂ ಅವಲೋಕಿಸಿಯೇ ಮತ ಹಾಕುತ್ತಾರೆ. ಸತ್ಯವನ್ನು ಮರೆಮಾಚಿ ನಾವು ಗೆಲ್ಲುತ್ತೇವೆ ಎಂಬ ಹಾರಾಟ ಈ ಕ್ಷೇತ್ರದಲ್ಲಿ ಜಾಸ್ತಿ ದಿನ ನಡೆಯಲಂತೂ ಸಾಧ್ಯವಿಲ್ಲ (ಅದು ಯಾವುದೇ ಪಕ್ಷವಾಗಿರಲಿ ).ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವೆಂದರೆ ವಿರೋಧ ಪಕ್ಷವೇ ಇರುವುದಿಲ್ಲ ಎಂದಂತೂ ಅಲ್ಲವಲ್ಲ. ಕ್ಷೇತ್ರವನ್ನು ಬದಲಾಯಿಸುತ್ತೇನೆ(ಅಭಿವೃದ್ಧಿ ಪಡಿಸುತ್ತೇನೆ) ಎಂದು ಹೊರಟವ ಕೊನೆಗೆ ತಾನೇ ಬದಲಾಗಿ ಹೋದ ಎಂದು ಜನ ಆಡಿಕೊಳ್ಳುವಂತೆ ಆಗುತ್ತದೆಯೇನೋ ಎಂಬುದಕ್ಕೆ ಎಷ್ಟೋ ನಿದರ್ಶನಗಳು ಸಿಗುತ್ತಿದೆ. ಇಂತಹ ರಾಜಕೀಯ ಬೆಳವಣಿಗೆ ಚುನಾವಣೆಗೂ ಮುನ್ನ ನಡೆದಷ್ಟೂ ಒಳ್ಳೆಯದು.

ರಾಜಕೀಯ ಆಟಗಳೇ ಜೋರಾಗುತ್ತಿರುವ ಈ ಕಾಲದಲ್ಲಿ ಅಭಿವೃದ್ಧಿಯ ನೀಲನಕ್ಷೆ ಹಿಡಿದುಕೊಂಡು ಬಂದವರಿಗೆ ನಮ್ಮ ಮತವನ್ನು ಮೀಸಲಿಡೋಣ. ಉತ್ತರಕನ್ನಡದ ಅಪ್ಪೆಮಿಡಿ, ಜಾಯಿಕಾಯಿ, ಸೂಜಿಮೆಣಸು ಹೀಗೆ ಅನೇಕ ‘ಟಿಪಿಕಲ್’ ಪದಾರ್ಥಗಳನ್ನು ಮಾರ್ಕೆಟಿಂಗ್ ಮಾಡಿ ಬೆಳೆಸುವಂತಹ ‘ಆಗ್ರೋ ಇಂಡಸ್ಟ್ರೀ’ಗಳು ಜನರ ಆದಾಯವನ್ನು ಹೆಚ್ಚಿಸಬಹುದು.ಆ ನಿಟ್ಟಿನಲ್ಲಿ ಯೋಚನೆಗಳೇ ಆಗಿಲ್ಲವ? ಸೀಸನಲ್ ಇಕೋ ಟೂರಿಸಂ ನಡೆಸಲು ಗ್ರಾಮ ಪಂಚಾಯತ ಮಟ್ಟದಲ್ಲಿ ಯೋಚನೆ ನಡೆಸಿದರೆ ಒಂದಿಷ್ಟು ಉದ್ಯೋಗವೂ ದೊರಕುತ್ತಿತ್ತು ಮತ್ತು ಪಂಚಾಯತಕ್ಕೆ ಆದಾಯವೂ ಬರುತ್ತಿತ್ತು. ಸಹಕಾರಿ ಸಂಘಗಳು ಕೃಷಿಗೆ ಪೂರಕವಾಗಿರುವ ಅನೇಕ ಯಂತ್ರೋಪಕರಣಗಳನ್ನು ಬಾಡಿಗೆ ನೀಡಿ ಆದಾಯದ ಜೊತೆಗೆ ಅನೇಕ ಯುವಕರಿಗೆ ಕೆಲಸವನ್ನೂ ನೀಡಬಹುದು. ಹೀಗೆ ಇನ್ನೂ ಅನೇಕ ಯೋಜನೆಗಳ ಪಟ್ಟಿಯನ್ನು ನಾವೇ ತಯಾರಿಸೋಣ.ಇಷ್ಟಕ್ಕೇ ಇದು ಮುಗಿಯಬಾರದು, ಅದನ್ನು ಸಾಕಾರ ಮಾಡುವಂತಹ ರಾಜಕಾರಣಿಯನ್ನು ಆರಿಸಬೇಕಾದದ್ದು ನಮ್ಮದೇ ಜವಾಬ್ದಾರಿ ನೆನಪಿರಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!