Featured ಅಂಕಣ

ಆಕೆ ಪ್ರಧಾನಿಯನ್ನೇ ಪ್ರಶ್ನಿಸಿದವಳು. ಪುದುಚೇರಿ ಬಿಡುವುದುಂಟೇ?

“ಆಕೆ ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಅಲ್ಲ, ಮೋದಿ ಸರ್ಕಾರದ ಏಜೆಂಟ್” ಅಂತ ಪುದುಚೇರಿಯ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಹದ್ದುಮೀರಿದ ಗಂಭೀರ ಆರೋಪ ಮಾಡಿದ್ದಾರೆ. ಅವರೊಬ್ಬರಿಗಲ್ಲ, ಆಕೆಯ ಮೇಲೆ ಮೈಗಳ್ಳರಿಗೆ, ರಾಜಕೀಯ ನೇತಾರರಿಗೆ, ಐಷಾರಾಮಿ ಬದುಕು ನಡೆಸುವ ಸೆಲೆಬ್ರಿಟಿಗಳಿಗೆ ಭಯಾನಕವಾದ ಸಿಟ್ಟುಸೆಡವುಗಳಿವೆ. ಆಕೆ ಮಾತ್ರ ಯಾರ ವಿರೋಧವನ್ನೂ ಲೆಕ್ಕಿಸುವವಳಲ್ಲ. ಕರ್ತವ್ಯದ ತತ್ಪರತೆಯಲ್ಲಿ ತನಗೆ ಸೈ ಅನ್ನಿಸಿದಾಗ ಆಕೆ ನಡುರಾತ್ರಿಯಾದರೂ ವೇಷ ಮರೆಸಿ ಜನರ ಮೊರೆ ಆಲಿಸಲು ಹೋಗುವವಳೇ ಹೌದು. ‘ಭಯ ಅಂದರೆ ಏನೆಂದು’ ಮರುಪ್ರಶ್ನೆ ಹಾಕುವ ಮಹಾನ್ ಗಟ್ಟಿಗಿತ್ತಿ ಆಕೆ. ಪುದುಚೇರಿ ರಾಜ್ಯದ ಜನರ ಒಂದೊಂದು ರೂಪಾಯಿ ಅನರ್ಥವಾಗಿ ಅಧಿಕಾರಿಗಳ ಕ್ಲಬ್ ಕ್ಲಾಸಿನ ವಿಮಾನ ವೆಚ್ಚದಲ್ಲಿ ಪೋಲಾಗುತ್ತದೆಂದರೆ  ಆ ಪ್ರಯಾಣಕ್ಕೆ ನಿಷೇಧ ಹೇರಿ ಬಿಟ್ಟವಳವಳು! ಅಧಿಕಾರಿ ವರ್ಗದ ವಿರೋಧ ಹೆಚ್ಚಾದಾಗ ‘ಐಷಾರಾಮಿತನ ನಿಮ್ಮ ಹಕ್ಕಲ್ಲ’ ಹೇಳಿದಷ್ಟು ಮಾಡಿ ಅಂತ ಗುಡುಗಿದವಳವಳು. ರಾಜ್ಯ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆಕೆಯ ನಿರ್ಧಾರಕ್ಕೆ ಜನರಿಂದ ಭರಪೂರ ಬೆಂಬಲ ಹರಿದು ಬಂದಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಮಾತ್ರ ಉಪರಾಜ್ಯಪಾಲೆ ಅನ್ನುವ ಸಾಂವಿಧಾನಿಕ ಹುದ್ದೆಯನ್ನೂ ಗೌರವಿಸದೆ ಆಕೆಯ ಹಿಗ್ಗಾಮುಗ್ಗ ನಿಂದನೆಗೆ ತೊಡಗಿದೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎನ್ನುವಂತೆ ದಕ್ಷತೆಯನ್ನೇ ದಂಡಿಸುವ ಪಿತೂರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಿ. ಚಿದಂಬರಂ ಮತ್ತಿತರ ನಾಯಕ ಮಹಾಶಯರು ಕೂಡ ದನಿಗೂಡಿಸಿದ್ದಾರೆ.

ಸಾರ್ವಜನಿಕರ ಕಷ್ಟ ಆಲಿಸುವ ಸಲುವಾಗಿ ಈಕೆ ಮಧ್ಯರಾತ್ರಿಯಲ್ಲಿ ಚಳಿ ಲೆಕ್ಕಿಸದೆ ದುಪ್ಪಟ್ಟಾ ಹೊದೆದು ನಗರ ಸಂಚಾರಕ್ಕಿಳಿದಿದ್ದರು. ಶನಿವಾರ ಭಾನುವಾರ ಎಲ್ಲಿಗೆ ಆಕೆಯ ದಿಢೀರ್ ಬೇಟಿಯಾಗುತ್ತದೆ ಅನ್ನುವುದರ ಬಗೆಗೆ ಯಾರಿಗೂ ಅರಿವಿರುವುದಿಲ್ಲ. ಬಸ್ ಸ್ಟಾಂಡ್, ಮೂಲಸೌಕರ್ಯ, ಮಹಿಳೆಯರ ರಕ್ಷಣೆ, ಸರ್ಕಾರಿ ಅನುದಾನಗಳ ಸಮರ್ಪಕ ಬಳಕೆ ಬಗೆಗೆ ಆಕೆ ಚಂಡಿಯಂತೆ ಕೆಲಸ ಮಾಡುತ್ತಾಳೆ. ತನ್ನೆದುರಿಗೆ ಅದೆಂತಾ ಒತ್ತಡವಿದ್ದರೂ ನಿರ್ದಯವಾಗಿಯೇ ಕ್ರಮ ಜರುಗಿಸುತ್ತಾಳೆ. ಆಕೆಯ ಕ್ಷಮತೆಗಳು ಅನೇಕರ ಕಂಗೆಡಿಸಿವೆ. ಆಕೆಯ ಖದರ್ ಹಿಂದೆ ಖಾಕಿಯಲ್ಲಿ ಹೇಗಿತ್ತೋ ಇಂದಿಗೂ ಅದೇ ಚಾಲ್ತಿಯಲ್ಲಿದೆ. ಕಿರಣ್ ಬೇಡಿ ಅಂದರೆ ಸಾಮಾನ್ಯವೇ, ಅದು ದಕ್ಷತೆಗೆ, ಖಡಕ್‍ತನಕ್ಕೆ ಮತ್ತೊಂದು ಹೆಸರು.

1982 ರಲ್ಲಿ ದೆಹಲಿಯಲ್ಲಿ ರಾಜಕೀಯ ಬೇಳೆ ಬೇಯಿಸಲು ತಿಂಗಳಾನುಗಟ್ಟಲೆ ಮೊಕ್ಕಾಂ ಹೂಡುತ್ತಿದ್ದವರು, ಕಾರಿನಲ್ಲಿ ಸಂಚರಿಸುತ್ತಿದ್ದವರು ಸಾಮಾನ್ಯರಾಗಿರಲಿಲ್ಲ. ಅವರ ದೌಲತ್ತುಗಳು ಯಾರ ಅಂಕೆಗೂ ಸಿಗುತ್ತಿರಲಿಲ್ಲ. ಪೋಲೀಸರು ದಂಡನೆ, ಶಿಕ್ಷೆಯ ಪ್ರಕರಣ ದಾಖಲಿಸುತ್ತಿದ್ದರೆ ಕಣ್ಣೆದುರೇ ಆಸಾಮಿಗಳು ಚಲನುಗಳನ್ನು ಹರಿದೆಸೆಯುತ್ತಿದ್ದರು. ತನಗೆ ಅವರು ಗೊತ್ತು ಅವರಪ್ಪ ಗೊತ್ತೆಂದು ಧಿಮಾಕು ಮೆರೆಯುತ್ತಿದ್ದರು. ರಾಷ್ಟ್ರಪತಿ, ಪ್ರಧಾನಿ ನಿವಾಸಗಳ ಬಳಿಯಲ್ಲಿಯೇ ಕಳ್ಳತನಗಳು ಅವ್ಯಾಹತವಾಗಿಯೇ ನಡೆಯುತ್ತಿದ್ದವು. ಅಧಿಕಾರಿಗಳ ದರ್ಪವೂ ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ಅಂತಹ ಸಂದಿಗ್ದ ಸಮಯದಲ್ಲಿಯೇ ಅಲ್ಲಿಗೆ ಡಿಸಿಪಿಯಾಗಿ ಕಿರಣ್ ಬೇಡಿ ನೇಮಕಗೊಂಡಿದ್ದರು. ಅವರಾದರೂ ಧೃತಿಗೆಡಲಿಲ್ಲ. ಅವರ ಸೂಚನೆ ಮೇರೆಗೆ ಸಂಚಾರಿ ವ್ಯವಸ್ಥೆಯ ನಿಯಮಗಳನ್ನು ಕಟ್ಟುನಿಟ್ಟು ಮಾಡಲಾಯಿತು. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ವೃಥಾ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದವರ ವಾಹನಗಳನ್ನು ಮುಲಾಜಿಲ್ಲದೆ ವಶಪಡಿಸಿ ದಂಡನೆ ನೀಡಲಾಯಿತು. ಖಡಕ್ ಅಧಿಕಾರಿಯಾಗಿದ್ದ ಈ ಮೊದಲ ಮಹಿಳಾ ಐ.ಪಿ.ಎಸ್. ತನ್ನ ಸಹೋದ್ಯೋಗಿಗಳನ್ನು ಯಾವ ಕಾರಣಕ್ಕೂ ಬಿಟ್ಟುಕೊಡುತ್ತಿರಲಿಲ್ಲ. ಇದು ಇಂದಿರಾ ಗಾಂಧಿಯ ಬಳಿ ತಲುಪಲು ಬಹಳ ದಿನವೇನೂ ಬೇಕಾಗಿರಲಿಲ್ಲ. ಈ ದೇಶದಲ್ಲಿ ಚಮಚಾಗಿರಿ ನಡೆಸುವವರಿಗೇನು ಕಡಿಮೆಯಾ? ರಾಜಕಾರಣಿಗಳ ಪಟಾಲಮ್ಮಿಗೆ, ಬೆಂಬಲಿಗರಿಗೆ, ಸಂಬಂಧಿಕರಿಗೆ ಇರುವಂತೆ ಇಂದಿರಾ ಗಾಂಧಿಯ ಕಾರಿನ ಡ್ರೈವರಿಗೂ ಧಿಮಾಕು ಬಹಳವಾಗಿಯೇ ಇತ್ತು. ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ದರ್ಪ ಮೆರೆಯುತ್ತಿದ್ದ ಡ್ರೈವರಿಗೆ ತಿಳಿ ಹೇಳಿದರೆ ‘ಕ್ರೇನಲ್ಲಿ ಎತ್ತಿಸಿ ನೋಡೋಣ’ ಅಂತ ಸವಾಲು ಹಾಕಿ ಆತ ತೋಳೇರಿಸಿಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಪೋಲೀಸರು ಕ್ರೇನಲ್ಲಿ ಇಂದಿರಾ ಕಾರನ್ನೂ ಎತ್ತಿಸಿಬಿಟ್ಟು ದಂಡನೆಗೆ ಗುರಿಪಡಿಪಡಿಸಿದರು. ಇದು ದೇಶಾದ್ಯಂತ ತೀವ್ರ ಸುದ್ದಿಯಾಗಿಬಿಟ್ಟಿತು. ಚರ್ಚೆಗೆ ಗ್ರಾಸವಾಯಿತು. ಅಷ್ಟರಲ್ಲಾಗಲೇ ಕಿರಣ್ ಬೇಡಿ ದೆಹಲಿಯ ‘ಕ್ರೇನ್ ಬೇಡಿ’ಯಾಗಿ ಜನಮಾನಸದಲ್ಲಿ ಹೆಸರು ಬದಲಿಸಿಕೊಂಡಿದ್ದರು. ಇಂದಿರೆಯನ್ನೇ ಎದುರು ಹಾಕಿಕೊಂಡಿದ್ದಕ್ಕೆ ಕಿರಣ್ ಬೇಡಿಗೆ ಉತ್ತರದಿಂದದಿಂದ ದಕ್ಷಿಣ ಎನ್ನುವಂತೆ ಗೋವಾಕ್ಕೆ ಎತ್ತಂಗಡಿ ಮಾಡಲಾಯಿತು.

ಕಿರಣ್ ಬೆದರಿಕೆಗೆ ಮಣಿಯುವವರಾಗಿದ್ದರೆ ಅವರಿಗೆ ಖಾಕಿ ಧರಿಸುವ ಅಗತ್ಯವೇ ಇರಲಿಲ್ಲ. ಅಮೃತಸರದ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಅವರು ಸರ್ಕಾರಿ ನೌಕರಿ ಅರಸುವ ಜರೂರತ್ತೇ ಇರಲಿಲ್ಲ. ಎಂಬತ್ತು ಜನರ ಹುಡುಗರ ಟ್ರೂಪಿನಲ್ಲಿ ಒಬ್ಬಳೇ ಹುಡುಗಿಯಾಗಿದ್ದಾಗಲೂ ಆಕೆಯ ಧೈರ್ಯದಲ್ಲಿ  ಯಾರಿಗೂ ಇನಿತು ಕಡಿಮೆ ಅನ್ನಿಸಲಿಲ್ಲ. ಗಣರಾಜ್ಯೋತ್ಸವದ ಪೆರೇಡಿನ ನಾಯಕತ್ವ ವಹಿಸಿ ತಾನು ಯಾರಿಗೂ ಕಡಿಮೆಯಲ್ಲ ಎಂದೇ ನಿರೂಪಿಸಿಬಿಟ್ಟಿದ್ದಳು.   ನಿರಂಕಾರಿ ಮತ್ತು ಅಕಾಲಿ ಸಿಖ್ಖರ ನಡುವೆ 1978ರಲ್ಲಿ ಗಲಭೆ ನಡೆಯುತ್ತಿದ್ದ ವೇಳೆ ತೆರೆದ ಕತ್ತಿಯೊಂದಿಗೆ ಯುವಕನೊಬ್ಬ ಬೇಡಿ ಮೇಲೆ ಏರಿ ಬರುತ್ತಿದ್ದ.  ಸಿನಿಮೀಯ ಮಾದರಿಯಲ್ಲಿ ವೀರಾವೇಷದ ಕದನವೇ ಅಲ್ಲಿ ನಡೆದಿತ್ತು. ಆಗಲೇ ಈ ಅಧಿಕಾರಿ ಯಾವುದಕ್ಕೂ ಸೈ ಎಂದು ಖಾತರಿ ಆಗಿತ್ತು. ಹೆದರುವುದಾದರೆ ‘ಬೀಟ್ ಬಾಕ್ಸ್; ಮಾದಕ ವ್ಯಸನಿಗಳಿಗೆ ಶಿಬಿರ, ತಿಹಾರ್ ಜೈಲಿನಲ್ಲಿ ತಂದ ಅಭೂತಪೂರ್ವ ಬದಲಾವಣೆಗಳನ್ನು ಆಕೆ ಮಾಡುತ್ತಲೇ ಇರಲಿಲ್ಲ. ದೆಹಲಿಯಲ್ಲಿನ ಬದಲಾವಣೆಯ ಸಾಹಸಕ್ಕೆ ಕೈ ಹಾಕುತ್ತಲೂ ಇರಲಿಲ್ಲ.

ಕೇಂದ್ರ ಸರಕಾರದ ಬಗೆಗೆ ಸದಾ ಟೀಕೆ ಮಾಡುವ ಕೇಜ್ರಿವಾಲ್‍ನಂತಹವರು ಇದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿ ಲೆಫ್ಟಿನೆಂಟ್ ಜನರಲ್‍ಗಳು ಮಾಡುವ ಕೆಲಸಗಳು ಜನತಂತ್ರದ ಆಶಯಕ್ಕೆ ವಿರುದ್ಧವಾದುದೆಂದು ಅಲವತ್ತುಕೊಳ್ಳುತ್ತಿದ್ದಾರೆ. ಕಿರಣ್ ಬೇಡಿಯಂತಹ ದಕ್ಷ ಅಧಿಕಾರಿಗಳು ದೆಹಲಿಯ ಚುನಾವಣೆಗೆ ನಿಂತಾಗ ಒಳಸಂಚು ನಡೆಸಿ ಸೋಲಿಸಿದವರೆಲ್ಲ ಪ್ರಜಾತಂತ್ರ ಮಹಾನ್ ರಕ್ಷಕರೋ?  ತಿಹಾರ್ ಜೈಲಿನ ಕೈದಿಗಳ ಕಣ್ಣುಗಳಲ್ಲಿ ಬದುಕಿನ ಭರವಸೆ ಬಿತ್ತಿದ ಬೇಡಿಯನ್ನು ಯಾಕೆ ಏಕಾಏಕಿ ಕಾರಣವಿಲ್ಲದೆ ವರ್ಗಾವಣೆ ಮಾಡಲಾಯಿತು? ದೆಹಲಿಯ ಕಾನೂನು ವ್ಯವಸ್ಥೆ ಸುಧಾರಿಸುತ್ತಿದ್ದ ಅಧಿಕಾರಿಗೆ ಗೋವಾಕ್ಕೆ ಒಗೆದಾಗ ಇದ್ದ ಆಶಯ ಜನತಂತ್ರದ್ದೇ ಏನು? ಮಿಜೋರಾಂ ಚಂಢೀಘಢ, ಹೀಗೆ ಈಶಾನ್ಯದ ರಾಜ್ಯಗಳಿಗೆಲ್ಲ ರಾಜಕೀಯ ಕಾರಣಗಳಿಗಾಗಿ ಎತ್ತಂಗಡಿಯಾಗಿ ಸುತ್ತುತ್ತಿದ್ದ ಕಿರಣ್ ಬೇಡಿ ಕುಟುಂಬದ ಸ್ಥಿತಿಯನ್ನು ಯಾರಾದರೂ ಕೇಳುವ ವಿಮರ್ಶಿಸುವ ವ್ಯವಧಾನ ತೋರಿಸಿದ್ದಾರಾ? ದೇಶಕ್ಕಾಗಿ ಅವರು ಸರ್ವಸ್ವವನ್ನೂ ಕಳೆದುಕೊಂಡು ಅರವತ್ತೆಂಟು ವರುಷ ಸವೆಸಿದ್ದಾರೆ ಎಂದರೆ ಅದೂ ಒಂದು ಇತಿಹಾಸವೇ ಅಲ್ಲವೇ? ಆಕೆಯ ದಕ್ಷತೆಗೆ ವೃತ್ತಿಯಲ್ಲಿ ಗೌರವ ಕೊಡಲಿಲ್ಲ, ನಿವೃತ್ತಿಯ ನಂತರ ಜನತೆಯ ಧ್ವನಿ ಆಗಿರುವುದನ್ನೂ ನಾರಾಯಣಸ್ವಾಮಿ ಸಹಿಸುತ್ತಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ ದೇಶ ಆಕೆಯನ್ನು ನಡೆಸಿಕೊಂಡ ಬಗೆಗೆ ಮರುಕ ಹುಟ್ಟುತ್ತದೆ. ಕೆಲಸದ ಬಗೆಗೆ ಯಾವತ್ತೂ ಹೆಮ್ಮೆ ಮೂಡುತ್ತದೆ.

ರಾಜಕೀಯವಾಗಿ ದೇಶದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಭ್ರಷ್ಟರ ಬಗೆಗೆ ಅಸಹನೆಗಳು ದಾಖಲಾಗುತ್ತಲಿದೆ. ಆದರೆ ಅಧಿಕಾರಶಾಹಿ ಕಪಿಮುಷ್ಟಿಯಿಂದ ದೇಶವನ್ನು ಬದಲಾವಣೆಯೆಡೆಗೆ ಒಯ್ಯುವುದು ಅಷ್ಟು ಸರಳವಲ್ಲ. ಅನೇಕ ಅಧಿಕಾರಿಗಳಿಗೆ ರಾಜಕೀಯ ನೇತಾರರ ಕೃಪಾಕಟಾಕ್ಷವೂ ಇರುತ್ತದೆ. ನಮ್ಮ ವ್ಯವಸ್ಥೆ ರಗಡೆದ್ದು ಹೋಗುವ ನಿಟ್ಟಿನಲ್ಲಿ ಅಧಿಕಾರಿಗಳೇನಕರ ಕಾರ್ಯವೈಖರಿಗಳಿವೆ. ಕೆಲ ತಾಲೂಕು ಜಿಲ್ಲಾ ಕಛೇರಿಗಳಲ್ಲಿ ಅವ್ಯವವಸ್ಥೆ ತಾಂಡವವಾಡುತ್ತಿರುತ್ತದೆ. ಸರ್ಕಾರಿ ದುಡ್ಡಿನ ವೃಥಾ ಪೋಲು ಮಾಡುವುದೆಂದರೆ ಅನೇಕ ಅಧಿಕಾರಿಗಳಿಗೆ ಎಲ್ಲಿಲ್ಲದ ಸಂಭ್ರಮ. ಬಂದ ಸಂಬಳವನ್ನೇ ದಶಕಗಳ ಕಾಲ ತೆಗೆದುಕೊಳ್ಳದೆ ರಾಜಾರೋಷದಿಂದ ಸರ್ಕಾರಿ ಹಣದಲ್ಲಿ ಬದುಕುವವರ ನಿದರ್ಶನಗಳನ್ನು ನಾವು ಕೇಳಿಯೇ ಇರುತ್ತೇವೆ. ದೇಶ ಸಂಕಷ್ಟದಲ್ಲಿದ್ದಾಗ ಒಂದು ಹೊತ್ತಿನ ಊಟವನ್ನೇ ತ್ಯಜಿಸಿ ದೇಶಕ್ಕೂ ಅಂತೆಯೇ ಬದುಕಲು ಹೇಳಿದ ಲಾಲ್ ಬಹಾದ್ದೂರ್ ಶಾಸ್ತ್ರಿ  ನಮಗೆ ಮಾದರಿಯಾಗಬೇಕಿತ್ತು. ಆದರೆ ರಾಜಕೀಯದ ಕಲಸುಮೋಲೋಗರದಲ್ಲಿ ಆ ಪರಂಪರೆಯೇ ಕೊಚ್ಚಿ ಹೋಗಿದೆಯಾ ಎನ್ನುವ ಕಳವಳ ಮೂಡುತ್ತದೆ. ಕಿರಣ್ ಬೇಡಿಯಂತಹವರ ದಕ್ಷ ರಾಜ್ಯಪಾಲರುಗಳು ಇನ್ನೂ ಹೆಚ್ಚಾಗಲೆನ್ನುವ ಆಶಯ ಅನೇಕರದ್ದು. ಅಷ್ಟಕ್ಕೂ ಅಣ್ಣಾ ಹಜಾರೆ ಸುಮ್ಮನೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಆಗಬಾರದಾಗಿತ್ತೆಂದು  ಹೇಳಿಲ್ಲ. ತನ್ನದೇ ಹೋರಾಟದ ಲಾಭ ಪಡೆದು ಹೋದವ ಭ್ರಮನಿರಸನ ಉಂಟು ಮಾಡುತ್ತಿದ್ದರೆ ಅಣ್ಣಹಜಾರೆಗೆ ಈ ಭಾವನೆ ಬರದೇ ಇರುತ್ತದೆಯೇ? ದೆಹಲಿಯ ಚುನಾವಣೆ ಸೋತಿದ್ದರೂ ಈ ಧೈರ್ಯವಂತೆ ಆಶಾವಾದ ಕಳೆದುಕೊಂಡಿಲ್ಲ. ಕಳೆದುಕೊಳ್ಳಲು ಆಕೆ ಎಲ್ಲ ಬಿಟ್ಟು ಇಳಿದಿರುವುದು ದೇಶದ ಸೇವೆಗಲ್ಲವೇ?

                               

-ಶಿವಪ್ರಸಾದ್ ಸುರ್ಯ, ಉಜಿರೆ

                  

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Surya

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸುರ್ಯದವರಾದ ಶಿವಪ್ರಸಾದ್ 1990ರಲ್ಲಿ ಜನಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ನಂತರ ಇದೀಗ ಉದ್ಯೋಗ ನಿಮಿತ್ತ ಬೆಳಗಾವಿಯ ಅಥಣಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ವಿಧ್ಯಮಾನಗಳ ವಿಶ್ಲೇಷಣೆಯ ಜೊತೆಗೆ ಸೃಜನಶೀಲ ಸಾಹಿತ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕತೆ, ಕವನ, ಹಾಸ್ಯಪ್ರಬಂಧ ಲೇಖಕರ ಆಸಕ್ತಿಯ ಕ್ಷೇತ್ರಗಳು. ಚಾರಣ ಮೆಚ್ಚಿನ ಹವ್ಯಾಸಗಳಲ್ಲಿ ಒಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!