Featured ಅಂಕಣ

ಕಿರಣ್ ಕನೋಜಿಯ : ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್

ಯೂನಿವರ್ಸಿಟಿ ಟಾಪರ್, ಇನ್’ಫೋಸಿಸ್’ನಂತಹ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ, ಸ್ಪೋರ್ಟ್ಸ್’ನಲ್ಲಿ ಸ್ವಲ್ಪವೂ ಆಸಕ್ತಿಯೇ ಇರದಿದ್ದ ಹುಡುಗಿಯೊಬ್ಬಳು ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್ ಎಂದರೆ ನಂಬಲೇಬೇಕು. ಡಿಸೆಂಬರ್ ೨೦೧೧ರಲ್ಲಿ ಕಿರಣ್ ಕನೋಜಿಯ ಎಂಬ ಹುಡುಗಿಯೊಬ್ಬಳು, ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲೆಂದು ತನ್ನ ತವರೂರಾದ ಫರೀದಾಬಾದ್’ಗೆ ಹೊರಟಿದ್ದಳು. ರೈಲಿನಲ್ಲಿ ತನ್ನ ಪ್ರಯಾಣ ಆರಂಭಿಸಿದ್ದ ಆಕೆ, ಅಂದಿನಿಂದ ತನ್ನ ಬದುಕಿನ ಪಯಣವೇ ಬದಲಾಗಿಬಿಡಬಹುದು ಎಂದೆಣಿಸಿರಲಿಲ್ಲ. ತನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ, ಗ್ರೀಟಿಂಗ್ ಕಾರ್ಡ್’ಗಳನ್ನು ಹಿಡಿಯಬೇಕಿದ್ದ ಸಂದರ್ಭದಲ್ಲಿ ಆಕೆ ಆಸ್ಪತ್ರೆಯಲ್ಲಿ ಆಂಪ್ಯೂಟೇಷನ್’ಗೆ ಒಪ್ಪಿಗೆ ನೀಡಿ ಸಹಿ ಹಾಕುತ್ತಿದ್ದಳು.

ಹೈದರಾಬಾದ್’ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ರೈಲಿನಲ್ಲಿ ತನ್ನೂರಿಗೆ ಪ್ರಯಾಣಿಸುತ್ತಿದ್ದಳು. ರೈಲಿನ ಎಕ್ಸಿಟ್ ಡೋರ್’ನ ಬಳಿಯೇ ಕುಳಿತಿದ್ದ ಕಿರಣ್’ಳ ಬ್ಯಾಗನ್ನು ಕದಿಯಲು ಮುಂದಾಗಿದ್ದ ಕಳ್ಳರು, ಅದನ್ನು ಕಸಿದುಕೊಳ್ಳುವ ಭರದಲ್ಲಿ ಆಕೆಯನ್ನ ರೈಲಿನಿಂದ ಹೊರದೂಡಿದ್ದರು. ರೈಲಿನಲ್ಲಿ ಅಷ್ಟೇನೂ ಜನರಿರಲಿಲ್ಲ ಹಾಗಾಗಿ ಯಾರೂ ಕೂಡ ಆ ಘಟನೆಯನ್ನು ನೋಡಲಿಲ್ಲ ಆದರೆ ಆಕೆ ಕೂಗಿಕೊಂಡಿದ್ದನ್ನ ಕೇಳಿ ಯಾರೋ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಆಕೆಯ ಎಡಗಾಲಿನ ಮೇಲೆ ರೈಲು ಹರಿದಾಗಿತ್ತು. ಆಕೆಯನ್ನು ಅದೇ ರೈಲಿನಲ್ಲಿ ಡೆಲ್ಲಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲಾಯಿತು. ಆಂಪ್ಯೂಟೇಶನ್ ಅಲ್ಲದೇ ಬೇರಾವುದೇ ಆಯ್ಕೆಗಳಿರಲಿಲ್ಲ ಆಕೆಯ ಮುಂದೆ!

ಅಪಘಾತದ ನಂತರ ಕಿರಣ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಆ ನೋವಿನ ಸಮಯಗಳಲ್ಲಿ ಕಿರಣ್’ಗೆ ಪ್ರೇರಣೆಯಾಗಿದ್ದು ೨೦೧೨ರ ಪ್ಯಾರಾ ಒಲಂಪಿಕ್’ನಲ್ಲಿ ಭಾಗವಹಿಸಿದ್ದ ಆಸ್ಕರ್ ಪಿಸ್ಟೋರಿಯಸ್. ಅಲ್ಲಿಂದ ಆಕೆ ತಾನು ಓಡಬೇಕೆಂದು ನಿರ್ಧರಿಸಿದ್ದಳು. ಅದಕ್ಕೂ ಮೊದಲು ಆಕೆಗೆ ಸ್ಪೋರ್ಟ್ಸ್’ನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ಆಕೆಗೆ ಡಾಕ್ಟರ್ ಹೇಳಿದ ಮಾತುಗಳು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿತ್ತು. “ನೀವಿನ್ನು ಎಂದೂ ಕೂಡ ಓಡಲಾರಿರಿ” ಎಂದಿದ್ದು. “ಕೆಲವೊಮ್ಮೆ ಜನ ಏನು ಹೇಳಿರುತ್ತಾರೆ ಎಂದು ಮರೆತುಬಿಡಬಹುದು.. ಆದರೆ ಅವರು ನಮಗೆ ಹೇಗೆ ಫೀಲ್ ಮಾಡಿಸಿರುತ್ತಾರೆ ಎನ್ನುವುದನ್ನ ಮರೆಲಾಗುವುದಿಲ್ಲ” ಎನ್ನುತ್ತಾಳೆ ಕಿರಣ್. ಆ ದಿನ ಡಾಕ್ಟರ್ ಹೇಳಿದ ಮಾತುಗಳನ್ನ ಆಕೆ ಮರೆತಿರಲಿಲ್ಲ.

ಕಿರಣ್’ಳ ತಂದೆ ತಾಯಿ ಅಷ್ಟೇನೂ ಓದಿದವರಾಗಿರಲಿಲ್ಲ. ಆದರೆ ತಮ್ಮ ಮಕ್ಕಳನ್ನು ಓದಿಸಲು ಬಹಳ ಕಷ್ಟ ಪಟ್ಟಿದ್ದರು. ಇಸ್ತ್ರೀ ಮಾಡಿ ಜೀವನ ಸಾಗಿಸುತ್ತಿದ್ದ ತಂದೆ ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಂಡಿದ್ದರು. ಕಿರಣ್ ಯೂನಿವರ್ಸಿಟಿಗೆ ಮೊದಲ ಸ್ಥಾನ ಪಡೆದು ನಂತರ ಇನ್’ಫೋಸಿಸ್’ನಲ್ಲಿ ಕೆಲಸ ಪಡೆದ ನಂತರ ತಾವು ಪಟ್ಟ ಶ್ರಮ ಸಾರ್ಥಕವಾಯಿತು ಎಂದುಕೊಂಡಿದ್ದರು. ಆದರೆ ಕಿರಣ್’ಳ ಅಪಘಾತ ಅವರ ಪಾಲಿಗೆ ದೊಡ್ಡ ಆಘಾತವಾಗಿತ್ತು. ಅಷ್ಟಾದರೂ ಅವರು ಕಿರಣ್’ಳ ಜೊತೆ ನಿಂತು, “ನೀನು ಕಾಲು ಕಳೆದುಕೊಂಡಿರಬಹುದು ಆದರೆ ನಿನ್ನ ಮನಸ್ಸಿನ್ನೂ ಸ್ವತಂತ್ರವಾಗಿವೆ” ಎಂದು ಹುರಿದುಂಬಿಸಿದ್ದರು. ಬೇರೆಯವರಿಗೆ ನಂಬಿಕೆ ಇತ್ತೋ ಇಲ್ಲವೋ ಆದರೆ ಆಕೆಯ ತಂದೆಗೆ ತನ್ನ ಮಗಳು ಓಡಬಲ್ಲಳು ಎಂಬ ನಂಬಿಕೆ ಇತ್ತು. ತಂದೆಯ ಆ ನಂಬಿಕೆ ಆಕೆಗೆ ಇನ್ನಷ್ಟು ಸ್ಪೂರ್ತಿಯನ್ನು ನೀಡಿತ್ತು.

ಅಪಘಾತದ ನಂತರ ‘ದಕ್ಷಿಣ್ ರಿಹ್ಯಾಬಿಲಿಟೇಷನ್ ಸೆಂಟರ್’ಗೆ ಸೇರಿದ ಕಿರಣ್ ರನ್ನಿಂಗ್’ನಲ್ಲಿ ಪರಿಣಿತಿ ಪಡೆಯಲು ಆರಂಭಿಸಿದಳು. ಸಣ್ಣ ಮಕ್ಕಳಿಗೆ ನಡೆಯುವುದನ್ನ ಹೇಳಿಕೊಡುತ್ತಾರಲ್ಲ ಅಷ್ಟೇ ಕಾಳಜಿಯಿಂದ ಕಿರಣ್’ಗೆ ಹೇಳಿಕೊಡಲಾಗುತ್ತಿತ್ತು.  ಮೊದಲು ಆಕೆ ಓಡಿದಾಗ ಅತೀವ ನೋವಾಗಿತ್ತಂತೆ. ಆನಂತರ ಆಕೆಗೆ ಬ್ಲೇಡ್’ನ್ನು ಬಳಸಲು ಹೇಳಲಾಯಿತು. ಮೊದಲ ಬಾರಿ ಬ್ಲೇಡ್’ನ್ನು ಬಳಸಿದಾಗ ಅದು ತನಗೆ ಸಪೋರ್ಟ್ ಮಾಡುತ್ತದೋ ಇಲ್ಲವೋ ಎಂದು ಯೋಚಿಸುತ್ತಿದ್ದಳು ಕಿರಣ್. ಆದರೆ ಅದು ಎಷ್ಟು ಹಗುರವಾಗಿತ್ತೆಂದೆರೆ ಅದನ್ನು ಬಳಸಲು ಆರಂಭಿಸಿದ ದಿನದಿಂದಲೇ ಆಕೆ ಓಡಲು ಆರಂಭಿಸಿದ್ದಳು. ಅದರ ನಂತರದಿಂದ ಎಂದೂ ಹಿಂತಿರುಗಿ ನೋಡಲಿಲ್ಲ.  ಮೊದಲು ೪೦೦ ಮೀಟರ್’ನಿಂದ ಆರಂಭಿಸಿದ್ದ ಕಿರಣ್, ನಂತರ ಐದು ಕಿ.ಮೀ., ನಂತರ ಹತ್ತು ಹೀಗೆ ಮುಂದುವರೆದು  ೨೦೧೪ರಲ್ಲಿ ಮೊದಲ ಬಾರಿಗೆ ಹೈದರಾಬಾದ್’ನಲ್ಲಿ ನಡೆದ ಏರ್’ಟೆಲ್  ಹಾಫ್ ಮ್ಯಾರಾಥಾನ್’ನಲ್ಲಿ ಭಾಗವಹಿಸಿ ಮೊದಲ ಪದಕ ಪಡೆದಳು.

“ಯೂ ಡೋಂಟ್ ನೀಡ್ ಲಿಂಬ್ಸ್ ಟು ಫ್ಲೈ” ಎನ್ನುವ ಕಿರಣ್ ಯಾವುದೇ ಪವಾಡಗಳು ನಡೆಯುತ್ತದೆ ಎಂದು ಕಾಯಲಿಲ್ಲ. ಬದಲಾಗಿ ಸತ್ಯವನ್ನು ಅಪ್ಪಿಕೊಂಡು, ಇತರರಿಗೆ ಸ್ಪೂರ್ತಿಯಾಗಿ ಬದುಕುವುದನ್ನ ಕಲಿತಿದ್ದಾಳೆ.  ಸದ್ಯ ಇನ್’ಫೋಸಿಸ್’ನಲ್ಲಿಯೇ ತನ್ನ ಕೆಲಸ ಮುಂದುವರೆಸಿರುವ ಕಿರಣ್ ತನ್ನ ರನ್ನಿಂಗ್ ಅಭ್ಯಾಸವನ್ನು ಕೂಡ ಮುಂದುವರೆಸಿದ್ದಾಳೆ. ಮುಂಬೈ ಹಾಗೂ ದೆಹಲಿಗಳಲ್ಲಿ ಆಗಾಗ ನಡೆಯುವ ಮ್ಯಾರಥಾನ್’ಗಳಿಗೆ ಭಾಗವಹಿಸಲು, ಕೆಲವೊಮ್ಮೆ ಉದ್ಘಾಟಿಸಲು ಕೂಡ ಆಕೆಯನ್ನು ಕರೆಯಲಾಗುತ್ತಿದೆ. ಇತ್ತೀಚೆಗೆ ಆಕೆ ಎನ್.ಐ.ಟಿ.ಐ ಆಯೋಗದಿಂದ ಕೊಡಮಾಡುವ ‘ವುಮನ್ ಟ್ರಾನ್ಸ್’ಫಾರ್ಮಿಂಗ್ ಇಂಡಿಯಾ’ ಪ್ರಶಸ್ತಿಯನ್ನು ಕೂಡ ಪಡೆದಿದ್ದಾಳೆ. ೨೮ರ ಹರೆಯದ ಕಿರಣ್’ಳ ಮುಂದಿನ ಗುರಿ ಪ್ಯಾರಾ ಒಲಂಪಿಕ್’ನಲ್ಲಿ ಭಾಗವಹಿಸುವುದಾಗಿದೆ.

ಹೈದರಬಾದ್’ನಲ್ಲಿ ನಡೆದ ಟೆಡ್ ಟಾಕ್’ನಲ್ಲಿ ಕಿರಣ್ ಆಡಿದ ಮಾತುಗಳು ಇಲ್ಲಿವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!