ಅಂಕಣ

ರೇಜಿಗೆ ಹುಟ್ಟಿಸಿದ 2G ರಾಜಿ

ನಮ್ಮ ನ್ಯಾಯದಾನ ವ್ಯವಸ್ಥೆ ಎಷ್ಟೊಂದು ನಿಧಾನವೆಂದರೆ ವಿಚಾರಣೆ ಮುಗಿಯುವಷ್ಟರಲ್ಲಿ ಆರೋಪಿಗಳಿಗೆ ತಾವು ಮಾಡಿದ ಅಪರಾಧ ಏನೆನ್ನುವುದೇ ಮರೆತು ಹೋಗಿರುತ್ತದೆ. ಅಪ್ಪನ ಅಪರಾಧಕ್ಕೆ ಮಗನ ಕಾಲದಲ್ಲಿ ಶಿಕ್ಷೆಯಾಗುವುದೂ ಇದೆ. ಇದೇ ರೀತಿಯಲ್ಲಿ 2G ಗೆ ಸಂಬಂಧಿಸಿದ ಕೇಸೊಂದರ ತೀರ್ಪು 4G ಜಮಾನದಲ್ಲಿ ಹೊರ ಬಿದ್ದಿದೆ. ಅದು ಅಂತಿಂಥ ವಿಚಾರಣೆಯಲ್ಲ ಹತ್ತಿರತ್ತಿರ ಒಂದು ದಶಕದ ಸುದೀರ್ಘ ಪ್ರಕ್ರಿಯೆ. ಆದರೆ ಬಂದ ತೀರ್ಪು ಮಾತ್ರ ಆಘಾತಕಾರಿಯೇ ಸರಿ. ಸಿ.ಬಿ.ಐ ಎಂದರೆ ನಖಶಿಖಾಂತ ದ್ವೇಷಿಸುವವರೆಲ್ಲಾ ಈ ತೀರ್ಪಿನಿಂದ ಖುಷಿಯಾಗಿದ್ದಾರೆ. ಸತ್ಯವನ್ನೇ ಮೇಯ್ದು, ಸಾರ್ವಜನಿಕರ ಹಣವನ್ನು ಮೇವಿನಂತೆ ಕಬಳಿಸಿದವರಿಗೆಲ್ಲಾ ನ್ಯಾಯಾಲಯ ಜಯಕಾರ ಹಾಕುವುದನ್ನು ನೋಡಿದರೆ “ಸತ್ಯ ಮೇವ ಜಯತೇ” ಘೋಷಣೆ ಏನಾದರೂ “ಸತ್ಯವನ್ನು ಮೇಯುವವರಿಗೆ ಜಯತೇ” ಎಂದು ಬದಲಾಗಿದೆಯೇ ಎಂಬ ಸಂಶಯ ಮೂಡುತ್ತದೆ.

ಹಾಗಂತ ನಮ್ಮ ನ್ಯಾಯಾಂಗವೇನು ದುರ್ಬಲವಲ್ಲ. ಬಗೆಬಗೆಯ ಪ್ರಕರಣಗಳಲ್ಲಿ ತುಂಬಾ ಬಿಗುವಾದ ತೀರ್ಪನ್ನೇ ನೀಡಿದೆ. ಆದರೇನು ಮಾಡುವ ಹೇಳಿ ನಮ್ಮ ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿದ್ದರಿಂದಲೋ ಏನೋ ಕೆಲವು ಪ್ರಭಾವಿಗಳು ಮಾತ್ರ ತಪ್ಪಿಸಿಕೊಂಡು ಬಿಡುತ್ತಾರೆ. ಒಳ್ಳೆಯ ಅಡ್ವೋಕೇಟ್’ಗೆ ಒಂದೊಳ್ಳೆಯ ರೇಟ್ ಫಿಕ್ಸ್ ಮಾಡಿದರೆ ಕೇಸು ಗೆಲ್ಲಬಹುದು ಎಂಬ ಧೈರ್ಯ ಕೆಲವರದ್ದು. ಕಾಸಿದ್ದರೆ ಖುಲಾಸೆ ಕಷ್ಟವಲ್ಲ ಎನ್ನುವುದು ಚೆನ್ನಾಗಿ ತಿಳಿದಿದ್ದರಿಂದಲೇ ಕೆಲವರ ಲಾಲಸೆಗೆ ದಿಕ್ಕುದೆಸೆಯೇ ಇಲ್ಲ.

ಹಾಗೆ ನೋಡಿದರೆ ಈ 2G ಹಗರಣ ನಮ್ಮ ಆರ್ಥಿಕ ವ್ಯವಸ್ಥೆಗೇ ಗರ ಬಡಿಯುವಷ್ಟು ದೊಡ್ಡ ಪ್ರಮಾಣದ್ದು. ಅದರ ಒಟ್ಟು ಮೊತ್ತವನ್ನು ಅಂಕಿಗಳಲ್ಲಿ ಹಿಡಿದಡುವುದೇ ದೊಡ್ಡ ಸವಾಲಿನ ಕೆಲಸ. ಈ ಮೊತ್ತದ ಲೆಕ್ಕ ಹಾಕುವುದರಲ್ಲೇ ತನಿಖೆ ನಿರತರು ಸೋತು ಹೋಗಿರಬೇಕು. ಹಲವು ಲಕ್ಷ ಕೋಟಿ ಮೊತ್ತದ ಈ ಸ್ಕ್ಯಾಮ್’ನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲೇ ತನಿಖಾಧಿಕಾರಿಗಳು ವಿಫಲಗೊಂಡಿರಬೇಕು. ಈ ಲಕ್ಷಗಳ ಲೆಕ್ಕಾಚಾರದ ಮುಂದೆ ಸೂಕ್ತ ಸಾಕ್ಷಿಗಳನ್ನು ಒದಗಿಸಲು ಲಕ್ಷ್ಯ ನೀಡಲು ಸಾಧ್ಯವಾಗಿಲ್ಲವೆನಿಸುತ್ತದೆ. ಹಾಗಾಗಿ ಆರೋಪಿಗಳೆಲ್ಲಾ ಖುಲಾಸೆ ಹೊಂದಿದ್ದಾರೆ. ಆದರೆ ಉಂಟಾದ ಲಾಸ್’ಗೆ ಮಾತ್ರ ಉತ್ತರವಿಲ್ಲ.  

ನೀರ್ದೋಸೆ ತಿಂದಷ್ಟೇ ಸಲೀಸಾಗಿ ನ್ಯಾಯಾಲಯವು ಆರೋಪಿಗಳನ್ನೆಲ್ಲಾ ನಿರ್ದೋಷಿಗಳು ಎಂದು ಹೇಳಿದ್ದೇ ತಡ, ಅದರೊಂದಿಗೆ ಆ ಸಂಪೂರ್ಣ ಪ್ರಕರಣವೇ ಒಂದು ವ್ಯವಸ್ಥಿತ ಸಂಚು, ಹಿಂದಿನ ಭ್ರಷ್ಟಾಚಾರ ವಿರೋಧಿ ಕೇಂದ್ರ ಸರ್ಕಾರದ ಜನಪ್ರಿಯತೆಗೆ ಮಸಿ ಬಳಿಯಲು ಮಾಡಿದ ಹುನ್ನಾರ ಎಂಬಂಥ ಹಸಿ ಹಸಿ ಸುಳ್ಳುಗಳು ಹೊರಬರಲಾರಂಭಿಸಿವೆ. ಇನ್ನು ಈ ಖುಲಾಸೆಯಿಂದ ಆರೋಪಿಗಳಿಗಿಂತಲೂ ಹೆಚ್ಚು ಒಂದು ರಾಷ್ಟ್ರೀಯ ಪಕ್ಷ ಖುಷಿಯಾಗಿದೆ. ಭ್ರಷ್ಟ ಸರ್ಕಾರ ನೀಡಿದ ಪಕ್ಷ ಎಂದು ಎಲ್ಲೆಡೆಯಿಂದಲೂ ಟೀಕೆಗೊಳಗಾಗಿ ಬೆಂದು ಬಸವಳಿದ ಆ ಪಕ್ಷಕ್ಕೆ ಈ ತೀರ್ಪು ದೊಡ್ಡ ಬಳುವಳಿಯಂತಾಗಿದೆ. ಇನ್ನು ಇದನ್ನೊಂದು ಅಸ್ತ್ರದಂತೆ ಪ್ರಯೋಗಿಸುತ್ತಿದ್ದ ಇತರೆ ಪಕ್ಷಗಳಿಗೆ ಈ ತೀರ್ಪನ್ನು ನೋಡಿ ಬವಳಿ ಬಂದಂತಾಗಿದೆ. ಇನ್ನು ಕೆಲವರಂತೂ ಯುವರಾಜನಿಗೆ ಪಟ್ಟಾಭಿಷೇಕ ಮಾಡಿದ್ದರಿಂದಲೇ ಇದೆಲ್ಲಾ ಸಾಧ್ಯವಾಯಿತು ಎಂದು ಹಿರಿ ಹಿರಿ ಹಿಗ್ಗುತ್ತಿದ್ದಾರೆ. ಇತ್ತೀಚಿಗೆ ಮಾತನಾಡಲಾರಂಭಿಸಿರುವ ಓರ್ವ ಮಾಜಿ ಪ್ರಧಾನಿಗಳಂತೂ ಈ ತೀರ್ಪಿನಿಂದ ಹೆಚ್ಚೇ ವಿಶ್ವಾಸದಿಂದ ಹೇಳಿಕೆ ನೀಡಿದ್ದಾರೆ. ತಾನೆಷ್ಟು ಪರಿಶುದ್ಧ ನೋಡಿ ಎಂದು ಅಲವತ್ತುಕೊಂಡಿದ್ದಾರೆ. ಅಷ್ಟಕ್ಕೂ ಇದು 2G ಗೆ ಸಂಬಂಧಿಸಿದ ಕೇಸ್. ಹೇಳಿ ಕೇಳಿ ಇದು 4-5G ಕಾಲಮಾನ. ಈ ಮುಂದುವರಿದ ಕಾಲದಲ್ಲಿ ಹಳೆಯ 2Gಯ ಬಗ್ಗೆ ಯಾಕೆ ವಿಚಾರಣೆ ಮಾಡಿ ಶಿಕ್ಷೆ ವಿಧಿಸುವುದು, ನಾವೂ ಸ್ವಲ್ಪ ಅಪ್ಡೇಟ್ ಆಗೋಣ ಎಂಬ ಕಾರಣಕ್ಕೆ ಆರೋಪಿಗಳನ್ನು ಖುಲಾಸೆಗೊಳಿಸುವ ನಿರ್ಧಾರ ಕೈಗೊಂಡಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಓವರ್‌ಡೋಸ್: 2G ನೆಟ್‌ವರ್ಕ್‌ನಂತೆ ಇದರ ವಿಚಾರಣೆಯೂ ಕೂಡಾ ಲೇಟ್ ಆಗಿ ಆರೋಪಿಗಳನ್ನು ಖುಲಾಸೆಗೊಳಿಸುವುದು ಇಷ್ಟು ವಿಳಂಬವಾಯಿತು‌. ಅದೇ 3G ಅಥವಾ 4Gಯ ಕೇಸ್ ಆಗಿದ್ರೆ ಭಾರೀ ಬೇಗನೆ ಖುಲಾಸೆ ಹೊಂದುತ್ತಿದ್ದರೇನೋ?!

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!