Featured ಅಂಕಣ

ಮೌನ: ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!

ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು  ಮೇರೆ ಮೀರಿದ ಅಬ್ಬರ. ಅವಳ ಅಬ್ಬರವಿಳಿದಾಗಲೂ ಅದೇ ಸ್ಥಿತಿಯಲ್ಲಿದ್ದ ಧ್ಯಾನಿ ಕೆಲ ಸಮಯದ ಬಳಿಕ ಅಲ್ಲಿಂದ ಏನೂ ಆಗಲೇ ಇಲ್ಲವೆಂಬಂತೆ ಎದ್ದು ಹೊರಟ. ಕೆಲ ಜನ ಅವನನ್ನು ಮರುಳ ಎಂದರು; ಮರಳು ಮೆತ್ತಿಕೊಂಡಿತ್ತಲ್ಲವೇ! ಅವರು ಸಂಸಾರದಲ್ಲಿ ಮಾತ್ರ ಆಸಕ್ತಿಯುಳ್ಳವರು. ಹಲವರು ತಮಗೆ ಸಂಬಂಧವೇ ಇಲ್ಲದವರಂತೆ ನಡೆದುಕೊಂಡರು. ಅವರು ತಮ್ಮ ಸಂಸಾರದಲ್ಲೇ ಮುಳುಗೇಳುತ್ತಿರುವವರು! ಕೆಲವರಿಗಷ್ಟೇ ಅವ ಕುಳಿತ ಸ್ಥಳದಿಂದ ಕೇಳಿ ಬರುತ್ತಿದ್ದಮಾನಸ ಸಂಚರರೇಮರಳಿ ಮರಳಿ ಅವರ ಕರಣಗಳಲ್ಲಿ ಅನುರಣಿಸುತ್ತಿತ್ತು!

ವೈರಾಗ್ಯವೇ ಒಲವು!

ಸದಾಶಿವ ಬ್ರಹ್ಮೇಂದ್ರ. ಹದಿನೇಳನೇ ಹದಿನೆಂಟನೆಯ ಶತಮಾನದಲ್ಲಿ ಆಗಿ ಹೋದ ಅವಧೂತ. ತೆಲುಗು ನಿಯೋಗಿ ಮೂಲದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ ಹಾಗೂ ಪಾರ್ವತಿ ದಂಪತಿಗಳ ಕುಡಿ. ಸದಾಶಿವ ಬ್ರಹ್ಮೇಂದ್ರರ ಮೊದಲ ಹೆಸರು ಶಿವರಾಮಕೃಷ್ಣನೆಂದು. ವೇದವಿದ್ವಾಂಸ ತಂದೆಯೇ ಮೊದಲ ಗುರು. ಮುಂದಿನ ಓದಿಗೆಂದು ತೆರಳಿದ್ದು ಶಾಹಜಿಪುರವೆನಿಸಿಕೊಂಡಿದ್ದ ತಿರುವಿಶೈನಲ್ಲೂರಿಗೆ. ಅಲ್ಲಿ ಗುರು ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರ ಶಿಕ್ಷಣವೂ ಮುಗಿಯಿತು. ತಿರುವಿಶೈನಲ್ಲೂರಿನಲ್ಲಿ ಅವರಿಗೆ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕ ಒದಗಿ ಬಂತು.

ಶಿಕ್ಷಣ ಮುಗಿಸಿ ಮನೆಗೆ ಬಂದ ಹದಿನೇಳು ವರ್ಷದ ಮಗನ ವೈರಾಗ್ಯದ ಮನಸ್ಥಿತಿಯನ್ನು ಕಂಡು ಹೆತ್ತವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದರು. ಮದುವೆಯ ನಂತರವೂ ಅವರ ವೈರಾಗ್ಯ ತೊಲಗಲಿಲ್ಲ. ಪ್ರಸ್ಥದ ದಿನ ಅವರ ಮಾವನ ಮನೆಯಲ್ಲಿ ವಿಪರೀತ ಜನಜಂಗುಳಿ ಸೇರಿತ್ತು. ಸದಾಶಿವರಿಗೋ ವಿಪರೀತ ಹಸಿವು. ತಮ್ಮ ಅತ್ತೆಯ ಬಳಿ ತಮಗೇನಾದರೂ ತಿನ್ನಲು ಕೊಡುವಂತೆ ಯಾಚಿಸಿದರು. ಆಗ ಅವರ ಅತ್ತೆಇನ್ನೇನು ಕೆಲವೇ ಕ್ಷಣ, ಅಷ್ಟರವರೆಗೆ ತಾಳಿಕೋ. ಒಳಗೆ ಬರಬೇಡ; ಅಲ್ಲೇ ನಿಲ್ಲುಎಂದಾಗ ಬ್ರಹ್ಮೇಂದ್ರರ ಮಸ್ತಿಷ್ಕದಲ್ಲಿ ಮಿಂಚೊಂದು ಸುಳಿದಂತಾಯ್ತು. ಅತ್ತೆಯ ಮಾತುಗಳೇಗೃಹಸ್ಥಾಶ್ರಮದೊಳಗೆ ಬರಬೇಡ; ದೂರವೇ ನಿಲ್ಲುಎಂದಂತಾಗಿ ಸದಾಶಿವರು ಬಿಟ್ಟ ಬಾಣದಂತೆ ಅಲ್ಲಿಂದ ಎದ್ದೋಡಿದರು. ಅವರನ್ನು ಹಿಡಿಯಲು ಸಂಬಂಧಿಕರಿಗೆ ಸಾಧ್ಯವಾಗಲಿಲ್ಲ. ಅನಂತ ಜ್ಞಾನದ ಹುಡುಕಾಟಕ್ಕೆ ಅನಂತ ವೇಗದಲ್ಲಿ ಓಡುವವ ಕೈಗೆ ಸಿಗುವುದಾದರೂ ಹೇಗೆ? ಇದು ಅವರ ಜೀವನದ ಮಹತ್ವದ ತಿರುವು.

ಮೌನವೇ ಸಾಧನೆ:

ನೇರವಾಗಿ ತಿರುವಿಶೈನಲ್ಲೂರಿಗೆ ಬಂದ ಶಿವರಾಮಕೃಷ್ಣ ಉಪನಿಷತ್ ಬ್ರಹ್ಮ ಮಠದ ಶ್ರೀ ಪರಮ ಶಿವೇಂದ್ರರೆನ್ನುವ ಪಂಡಿತ ಯತಿಗಳ ಬಳಿ ಸಂನ್ಯಾಸದೀಕ್ಷೆಯನ್ನು ಪಡೆದು ಸದಾಶಿವ ಬ್ರಹ್ಮೇಂದ್ರರಾದರು. ಯೋಗಿಯಾಗಿದ್ದ ಪರಮಶಿವೇಂದ್ರ ಸರಸ್ವತಿಗಳುದಹರವಿದ್ಯಾಪ್ರಕಾಶಿಕೆಎನ್ನುವ ಸಂಸ್ಕೃತ ಪ್ರಬಂಧವನ್ನು ಬರೆದವರು. ಸದಾಶಿವ ಬ್ರಹ್ಮೇಂದ್ರರು ತಮ್ಮ ಹಲವು ಕೃತಿಗಳಲ್ಲಿ ಪರಮಶಿವೇಂದ್ರರು ತಮ್ಮ ಗುರುಗಳೆಂದು ಸ್ಪಷ್ಟಪಡಿಸಿದ್ದಾರೆ. ಗುರುಗಳನ್ನು ಸ್ತುತಿಸಿನವಮಣಿಮಾಲೆ, ಗುರುರತ್ನಮಾಲಿಕೆಗಳೆಂಬ ಕೃತಿಗಳನ್ನು ರಚಿಸಿದ್ದಾರವರು. ಸದಾಶಿವ ಬ್ರಹ್ಮೇಂದ್ರರು ಅತ್ಯುತ್ತಮ ತರ್ಕಪಟುವಾಗಿದ್ದವರು. ವಾದವಿವಾದದಲ್ಲಿ ಎಂದಿಗೂ ವಾಚಾಳಿಯಾಗಿದ್ದ ಅವರಿಗೇ ಗೆಲುವು. ಸೋತವರಿಂದ ಗುರುಗಳ ಬಳಿ ಇವರ ಮೇಲೆ ಸದಾ ದೂರು. ಇದು ನಿರತ ನಡೆಯುತ್ತಿರಲು ಒಂದು ದಿನ ಬೇಸರಗೊಂಡ ಗುರುಗಳುಸದಾಶಿವ, ಸುಮ್ಮನಿರಲು ಎಂದು ಕಲಿತುಕೊಳ್ಳುವೆ?” ಎಂದು ಕೇಳಿದರು. ತಕ್ಷಣಇಂದಿನಿಂದ ಗುರುಗಳೆ!” ಎಂದವರು ಅಂದಿನಿಂದ ಮತ್ತೆ ಮಾತಾಡಲಿಲ್ಲ. ಸಮಯದಲ್ಲೇ ಸಂಸ್ಕೃತದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದರು. ಬ್ರಹ್ಮಸೂತ್ರವೃತ್ತಿ, ಉಪನಿಷತ್ತುಗಳ ಮೇಲೆಕೈವಲ್ಯಾಮೃತಬಿಂದುಎಂಬ ಗ್ರಂಥ, ಸಿದ್ಧಾಂತಕಲ್ಪವಲ್ಲಿ (ಅಪ್ಪಯ್ಯ ದೀಕ್ಷಿತರ ಕೃತಿ ಸಿದ್ಧಾಂತ ಲೇಶ ಸಂಗ್ರಹದ ಮೇಲೆ ಹೇಳಿಕೆಗಳು), ಯೋಗಸುಧಾಕರ(ಪತಂಜಲಿ ಯೋಗ ಸೂತ್ರದ ಮೇಲೆ ವ್ಯಾಖ್ಯೆ), ಮನೋನಿಯಮನ ಮುಂತಾದ ವಿದ್ವತ್ ಗ್ರಂಥಗಳನ್ನು ರಚಿಸಿದರು. ಅವರಆತ್ಮವಿದ್ಯಾವಿಲಾಸವಂತೂ ಪಂಡಿತ, ಸಾಧಕ, ಸಿದ್ಧರಿಗೂ ಪ್ರಿಯವೂ ಮಾರ್ಗದರ್ಶಕವೂ ಆದುದಾಗಿದೆ. ಅರವತ್ತೆರಡು ಶ್ಲೋಕಗಳನ್ನು ಹೊಂದಿರುವ ಸದಾಶಿವ ಬ್ರಹ್ಮೇಂದ್ರರಿಂದ ರಚಿಸಲ್ಪಟ್ಟ ಆತ್ಮವಿದ್ಯಾವಿಲಾಸವು ಆರ್ಯಾವೃತ್ತದಲ್ಲಿದೆ. ಇದರ ಮುಖ್ಯ ವಿಷಯವೇ ವೈರಾಗ್ಯ ಅದಕ್ಕಿಂತಲೂ ಹೆಚ್ಚಾಗಿ ಅವಧೂತ ಚರ್ಯೆ. ಜೀವನ್ಮುಕ್ತರೂ, ಸಿದ್ಧರೂ ಆದ ವಿರಕ್ತ ಸಾಧಕರು ವ್ಯವಹಾರ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೆಲ್ಲಾ ಕಡೆಗಣಿಸಿ ಬ್ರಹ್ಮಾನಂದದಲ್ಲಿ ಸದಾ ಇರುವ ಚರ್ಯೆಯದು. “ಅಕ್ಷರತ್ವಾತ್ ವರೇಣ್ಯತ್ವಾತ್  ಧೂತಪಾಪಾದಿಬಂಧನಾತ್ ತತ್ತ್ವಮಸ್ಯಾದಿಲಕ್ಷ್ಯತ್ತ್ವಾತ್ ಅವಧೂತಃ ಪ್ರಕೀರ್ತಿತಃ“. ನಾಶರಹಿತವಾದ ಸತ್ಸರೂಪದಲ್ಲೇ ನೆಲೆಗೊಂಡು ಧೂತಪಾಪಾದಿ ಬಂಧನಗಳಿಗೆ ಒಳಗಾಗದೆ ಬ್ರಹ್ಮಸ್ವರೂಪವನ್ನು ತಿಳಿ ಹೇಳುವ ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿ ಇರುವುದೇ ಅವಧೂತ ಪ್ರವೃತ್ತಿ. ಅವರ ರಚನೆಗಳು ಇಲ್ಲಿಗೇ ಮುಗಿಯುವುದಿಲ್ಲ. ಅದ್ವೈತ ರಸಮಂಜರಿ, ಬ್ರಹ್ಮ ತತ್ತ್ವ ಪ್ರಕಾಶಿಕಾ, ಜಗದ್ಗುರು ರತ್ನ ಮಲೋತ್ಸವ, ಶಿವ ಮಾನಸ ಪೂಜಾ, ದಕ್ಷಿಣಾಮೂರ್ತಿ ಧ್ಯಾನಮ್, ಶಿವಯೋಗ ಪ್ರದೀಪಿಕಾ, ಸಪರ್ಯ ಪರ್ಯಾಯ ಸ್ತವಃ, ಪರಮಹಂಸ ಚರ್ಯ, ಅದ್ವೈತ ತಾರಾವಳಿ, ಸ್ವಪ್ನೋದಿತಮ್, ಸ್ವಾನುಭೂತಿ ಪ್ರಕಾಶಿಕ, ನವವರ್ಣರತ್ನಮಾಲಾ, ಆತ್ಮಾನುಸಂಧಾನ, ಭಾಗವತ, ಸಂಹಿತೆಗಳ ಸಾರಸಂಗ್ರಹ, ಉಪನಿಷತ್ಗಳ ಮೇಲೆ ವ್ಯಾಖ್ಯೆ….. ಹೀಗೆ ಸಾಗುತ್ತದೆ ಪಟ್ಟಿ.

ಕೆಲ ಸಮಯದ ಬಳಿಕ ಶಾಸ್ತ್ರಪರಿಚರ್ಯೆಯನ್ನೂ ಬಿಟ್ಟ ಅವರು ಸಾಧನೆಗೆ ಇಳಿದರು. ತೀವ್ರ ವಿರಕ್ತಿಯುಂಟಾಗಿ ಬೆತ್ತಲೆಯಾಗಿ, ಮೈಮೆಲೆ ಪರಿವೆಯೇ ಇಲ್ಲದೆ, ಸಂನ್ಯಾಸಧರ್ಮವನ್ನೂ ಪರಿಗಣಿಸದೆ ಉನ್ಮತ್ತರಂತೆ ಅಡ್ಡಾಡತೊಡಗಿದರು. ಕಾಡುಮೇಡುಗಳಲ್ಲಿ ಮನಬಂದಂತೆ ಅಲೆದಾಡತೊಡಗಿದರು. ನದೀ ತೀರದ ಮರಳೇ ಅವರಿಗೆ ಹಾಸಿಗೆಯಾಯಿತು. ಮರದ ನೆರಳೇ ಆಸರೆಯಾಯಿತು. ಮಳೆ, ಚಳಿ, ಗಾಳಿ, ಬಿಸಿಲುಗಳಿಗೆ ಅವರ ಮೈ ಭೇದವೆಣಿಸುತ್ತಲೇ ಇರಲಿಲ್ಲ. ಕರೆದರೆ ಬಾರರು, ಸೂರ ಕೆಳಗೆ ತಂಗರು, ಮನೆಯೊಳಗೆ ಬಾರರು. ಯಾರೊಡನೆಯೂ ಮಾತಿಲ್ಲ, ಕಥೆಯಿಲ್ಲ. ಎಂದೂ, ಎಲ್ಲದಕ್ಕೂ ಸಂತೋಷವೇ! “ಬ್ರಹ್ಮೈವಾಹಂ ಕಿಲ ಸದ್ಗುರುಕೃಪಯಾ!” ಎಂದೆನ್ನುತ್ತಲೇ ಅವಧೂತರಾಗಿಬಿಟ್ಟರು. ಯಾರೋ ಪರಮಶಿವೇಂದ್ರರ ಬಳಿ ಬಂದು ನಿಮ್ಮ ಶಿಷ್ಯನಿಗೆ ಹುಚ್ಚು ಹಿಡಿದಿದೆಯೆನ್ನಲು, “ಅಯ್ಯೋ ನನಗೆ ಹೀಗೆ ಹುಚ್ಚು ಹಿಡಿಯಲಿಲ್ಲವಲ್ಲಎಂದರಂತೆ! ಅದು ಸಾಮಾನ್ಯರ ಎಣಿಕೆಗೆ ಸಿಗದ ದಿವ್ಯೋನ್ಮಾದ.

ಪಿಬರೇ ರಾಮರಸಂ:

ಆಗ ಕಂಚಿ ಕಾಮಕೋಟಿ ಪೀಠದ ಗುರುಗಳಾಗಿದ್ದವರು ಬೋಧೇಂದ್ರ ಸದ್ಗುರುಗಳು. ಅವಧೂತರಾದ ಮೇಲೂ ಸದಾಶಿವ ಬ್ರಹ್ಮೇಂದ್ರರು ತಮಗೆ ಪ್ರೇರಕರಾದ ಹಿರಿಯ ಗುರುಗಳನ್ನು ನೋಡಲು ಬರುತ್ತಿದ್ದರು. ತಮ್ಮ ಸಹಪಾಠಿಯಾಗಿದ್ದ ವೆಂಕಟೇಶ ಅಯ್ಯವಾಳರನ್ನು ನೋಡಲು ತಿರುವಿಶೈನಲ್ಲೂರಿಗೂ ಹೋಗಿ ಬರುತ್ತಿದ್ದರು. ಮಹಾಚೇತನಗಳ ಸತ್ಸಂಗವಾದರೂ ಮೌನವ್ರತಕ್ಕೆ ಭಂಗ ಬರಲಿಲ್ಲ. ಭಜನಾ ಪದ್ದತಿಯ ಹರಿಕಾರರಾದ ಅವರಿಬ್ಬರೂ ಬ್ರಹ್ಮೇಂದ್ರರಿಗೆಭಗವನ್ನಾಮ ಸಂಕೀರ್ತನೆ ಮೌನವ್ರತಕ್ಕೆ ಭಂಗ ತರುವುದಿಲ್ಲವಲ್ಲಎಂದು ಒತ್ತಾಯಿಸಿದ ಮೇಲೆ ಸದಾಶಿವರಿಂದ ಕೀರ್ತನೆಗಳ ಮಹಾಪೂರವೇ ಹರಿದು ಬಂತು. ಅವು ಇಂದಿಗೂ, ಎಂದೆಂದಿಗೂ ಸಂಗೀತ ಕ್ಷೇತ್ರದ ಔನ್ನತ್ಯದ ಪ್ರತೀಕಗಳಾಗಿ ನಿಂತಿವೆ. ಎಂತೆಂತಹಾ ಹಾಡುಗಳುಒಂದಕ್ಕೊಂದು ಮಿಗಿಲು; ಸಂಗೀತ ರಸಿಕರ ಬಾಯಲ್ಲಿ ಇಂದಿಗೂ ನಲಿದಾಡುತ್ತಲೇ ಇರುವ ಕಲಾ ಕುಸುಮಗಳು ಅವು. ರಾಮ, ಕೃಷ್ಣರನ್ನು ಸಗುಣರೂಪಿ ಬ್ರಹ್ಮವೆಂದು ಪರಿಗಣಿಸಿದವರು ಸದಾಶಿವ ಬ್ರಹ್ಮೇಂದ್ರರು. ರಾಮನ ಕುರಿತಾದ ಅಹಿರ ಭೈರವೀರಾಗದಪಿಬರೇ ರಾಮರಸಂ“, ಮೋಹನರಾಗದಭಜರೇ ರಘುವೀರಂ“, “ಚೇತತಃ ಶ್ರೀರಾಮಂ“, “ಖೇಲತಿ ಮಮ ಹೃದಯೇ ರಾಮಃ“, ಥೋಡಿ ರಾಗದಪ್ರತಿವಾರಂ ವಾರಂ ಮಾನಸಮೊದಲಾದ ಅದ್ಭುತ ಕೀರ್ತನೆಗಳು ಅವರಿಂದ ಹೊರ ಹೊಮ್ಮಿದವು. ಚುಮು ಚುಮು ಮುಂಜಾವಿನಲ್ಲಿ ಶುದ್ಧ ಸಾವೇರಿಯಲ್ಲಿ ಹಾಡಿದಾಗ ಗಂಧರ್ವ ಲೋಕವನ್ನೇ ಸೃಷ್ಟಿಗೈವಗಾಯತಿ ವನಮಾಲೀ ಮಧುರಂ“, “ಸ್ಮರ ನಂದಕುಮಾರಂ“, ಹಿಂದೋಳರಾಗದಭಜ ರೇ ಗೋಪಾಲಂ“, “ಭಜ ರೇ ಯದುನಾಥಂ“, ಗೌಳದಬ್ರೂಹಿ ಮುಕುಂದೇತಿ“, ಸಿಂಧು ಭೈರವಿಯಕ್ರೀಡತಿ ವನಮಾಲೀ ಗೋಷ್ಠೇಇವು ಕೃಷ್ಣನನ್ನೇ ಸಗುಣ ಬ್ರಹ್ಮನನ್ನಾಗಿಸಿದ ಭಕ್ತಿರಸ ಉಕ್ಕೇರಿಸುವ ಕೀರ್ತನೆಗಳು. ಮಿಶ್ರ ಶಿವರಂಜಿನಿ ರಾಗದಸರ್ವಂ ಬ್ರಹ್ಮಮಯ ರೇ“, ಸಿಂಧು ಭೈರವಿಯಖೇಲತಿ ಬ್ರಹ್ಮಾಂಡೇ“, ಸಂಗೀತ ಕ್ಷೇತ್ರದ ಬಾಗಿಲು ಬಡಿವವರಿಗೂ ಚಿರಪರಿಚಿತವಾದ ಸಾಮರಾಗದಮಾನಸ ಸಂಚರರೇ“, “ತದ್ವಜ್ಜೀವತ್ವಂ ಬ್ರಹ್ಮಣಿಮುಂತಾದುವು ಪರಮಹಂಸರೊಬ್ಬರಿಂದ ಸಾಹಿತ್ಯ ಸೃಷ್ಟಿಯಾದರೆ, ಅವು ಸಿಹಿಜೇನಿನ ಸ್ವರವಿದ್ದು ಧೇನಿಸುವ ಸಿರಿಕಂಠಗಳಿಗೆ ಸಿಕ್ಕರೆ ಆಗ ಸೃಷ್ಟಿಯಾಗುವ ಸನ್ನಿವೇಶ ಯಾವ ಸ್ವರ್ಗಲೋಕಕ್ಕಿಂತ ಕಡಿಮೆಯಿದ್ದೀತು? ಹೀಗೆ ಸಂಸ್ಕೃತ ಭಾಷೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು(ಸಿಕ್ಕಿರುವುದು) ಕೀರ್ತನೆಗಳನ್ನು ರಚಿಸಿ ಕರ್ನಾಟಕ ಸಂಗೀತವನ್ನು ಅವು ಶಾಶ್ವತವಾಗಿ ಬೆಳಗುತ್ತಿರುವಂತೆ ಜ್ಯೋತಿ ಹಚ್ಚಿದರವರು.

ಜೀವನ ಪವಾಡ:

ಅವರು ಮಾಡಿದ ಪವಾಡಗಳೂ ಅನೇಕ. ಅದು ಮಧುರೈ ದೇವಾಲಯದ ವಾರ್ಷಿಕ ಜಾತ್ರೆಯ ಸಮಯ. ಆಗ ಸದಾಶಿವರು ಕಾವೇರೀ ನದೀ ತೀರದ ಮಹದಾನಪುರದಲ್ಲಿ ಸಂಚರಿಸುತ್ತಿದ್ದರು. ಆಗ ಕೆಲವು ಮಕ್ಕಳು ತಮ್ಮನ್ನು ಮಧುರೈಗೆ ಕರೆದೊಯ್ಯಬೇಕೆಂದು ಪೀಡಿಸಿದರು. ಮಕ್ಕಳಿಗೆ ಕಣ್ಮುಚ್ಚಿಕೊಳ್ಳಲು ಹೇಳಿದ ಸದಾಶಿವ ಬ್ರಹ್ಮೇಂದ್ರರು ಕೆಲ ನಿಮಿಷಗಳ ಬಳಿಕ ಕಣ್ತೆರೆಯಲು ಹೇಳಿದಾಗ ಮಕ್ಕಳೆಲ್ಲಾ ಅದಾಗಲೇ ಮಧುರೈಯಲ್ಲಿ ನಿಂತಿದ್ದರು! ಮಧುರೈ ಅಲ್ಲಿಂದ ನೂರು ಮೈಲಿಗಳಷ್ಟು ದೂರದಲ್ಲಿತ್ತು. ಜಾತ್ರೆಯಲ್ಲೆಲ್ಲಾ ಓಡಾಡಿದ ಬಳಿಕ ಮಕ್ಕಳು ಮತ್ತೆ ಅದೇ ತೀರದಲ್ಲಿ ನಿಂತಿದ್ದರು. ಇದನ್ನು ಪರೀಕ್ಷಿಸಲೆಂದು ಬಂದ ಯುವಕನೊಬ್ಬನನ್ನು ಸದಾಶಿವ ಬ್ರಹ್ಮೇಂದ್ರರು ಅರೆಕ್ಷಣದಲ್ಲಿ ಮಧುರೈಗೇನೋ ಬಿಟ್ಟರು. ಆದರೆ ಹಿಂದಿರುಗುವಾಗ ಮಾತ್ರ ಯುವಕನಿಗೆ ಸದಾಶಿವ ಬ್ರಹ್ಮೇಂದ್ರರು ಕಾಣಿಸಲೇ ಇಲ್ಲ! ಆತ ಪಾದಯಾತ್ರೆ ಮಾಡುತ್ತಾ ಊರು ಸೇರಿಕೊಳ್ಳಬೇಕಾಯ್ತು. ಬೆಳೆದು ನಿಂತು ಪೈರು ತುಂಬಿದ ಹೊಲದಲ್ಲೊಮ್ಮೆ ಸದಾಶಿವ ಬ್ರಹ್ಮೇಂದ್ರರು ಧ್ಯಾನಕ್ಕೆ ಕುಳಿತುಬಿಟ್ಟರು. ಹೊಲದ ಯಜಮಾನ ಅವರನ್ನು ಕಳ್ಳನೆಂದೇ ಭಾವಿಸಿ ಹೊಡೆಯಲೆಂದು ದೊಣ್ಣೆ ಎತ್ತಿದ. ಅಷ್ಟೇ. ಆತನ ಚಲನೆಯೇ ನಿಂತು ಹೋಗಿ ನಿಂತಲ್ಲೇ ವಿಗ್ರಹದಂತಾದ. ಬೆಳ್ಳಂಬೆಳಗ್ಗೆ ಸದಾಶಿವರು ಧ್ಯಾನದಿಂದ ವಿಮುಖರಾಗಿ ಆತನ ಕಡೆಗೆ ನೋಡಿ ಮುಗುಳ್ನಕ್ಕಾಗಲೇ ಆತ ಯಥಾಸ್ಥಿತಿಗೆ ಮರಳಿದ.

1732ರಲ್ಲಿ ಸದಾಶಿವ ಬ್ರಹ್ಮೇಂದ್ರರು ಪುದುಕೊಟ್ಟೈ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ಕೆಲವು ಸೈನಿಕರು ದರ್ಪದಿಂದ ಕಟ್ಟಿಗೆಯ ಹೊರೆಯನ್ನು ಅವರ ತಲೆಯ ಮೇಲೆ ಹೊರೆಸಿ ನಡೆಸಿಕೊಂಡು ಹೋದರು. ಸದಾಶಿವ ಬ್ರಹ್ಮೇಂದ್ರರೇನೋ ಸಂತೋಷದಿಂದಲೇ ಅದನ್ನು ಹೊತ್ತುಕೊಂಡು ಹೋದರು. ಸರ್ವವೂ ಬ್ರಹ್ಮವೇ ಎನ್ನುವ ಆತ್ಮಾನಂದವನ್ನು ಸಾಧಿಸಿಕೊಂಡವರಿಗೆ ಕಟ್ಟಿಗೆಯ ಹೊರೆಯಾದರೇನು, ಚಿನ್ನದ ಮೂಟೆಯಾದರೇನು; ಅಧಿಕಾರವಾದರೇನು, ಊಳಿಗವಾದರೇನು? ಆದರೆ ಯಾವಾಗ ಅವರು ಹೊರೆಯನ್ನು ಕೆಳಗಿಳಿಸಿದರೋ ತಕ್ಷಣ ಅದು ಸುಟ್ಟು ಬೂದಿಯಾಯಿತು. ಜೊತೆಗೆ ಸೈನಿಕರ ಅಹಂಕಾರವೂ! ನಿರಕ್ಷರ ಕುಕ್ಷಿಯೂ ಹುಟ್ಟಾ ಮೂಕನೂ ಆಗಿದ್ದ ವ್ಯಕ್ತಿಯೊಬ್ಬ ಸದಾಶಿವ ಬ್ರಹ್ಮೇಂದ್ರರ ಸೇವೆಗೈಯುತ್ತಿದ್ದ. ಒಂದು ದಿವಸ ಇದಕ್ಕಿದ್ದಂತೆ ಬ್ರಹ್ಮೇಂದ್ರರು ತಮ್ಮ ಕೈಯನ್ನು ಅವನ ತಲೆಯ ಮೇಲಿಟ್ಟು ಬಿಟ್ಟರು. ಅಂದಿನಿಂದ ಕೇವಲ ಮಾತಲ್ಲ, ಪ್ರವಚನವನ್ನೇ ಕೊಡಲಾರಂಭಿಸಿದ ವ್ಯಕ್ತಿ! ಮುಂದೆಆಕಾಶ ಪುರಾಣ ರಾಮಲಿಂಗ ಶಾಸ್ತ್ರಿಎಂದೇ ಪ್ರಸಿದ್ಧನಾದ.

ಬ್ರಹ್ಮಜ್ಞಾನಿಗೆ ಎಲ್ಲವೂ ಬ್ರಹ್ಮಮಯವೇ. ಆತನಿಗೆ ಜಾತಿ-ಮತ-ಪಂಥಗಳ, ಜೀವ-ನಿರ್ಜೀವಗಳ, ಅರಮನೆ-ಸೆರೆಮನೆಗಳ ಭೇದವೇ ಇರುವುದಿಲ್ಲ. ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರನ್ನು ಕೆಲವು ಕಾಲಾನಂತರ ಜನ ಮರೆತು ಬಿಟ್ಟರು ಎಂದುಕೊಳ್ಳುವಾಗಲೇ ಒಂದು ಅಚ್ಚರಿಯ ಘಟನೆ ನಡೆಯಿತು. ಬ್ರಹ್ಮೇಂದ್ರರು ನಗ್ನರಾಗಿ ಮುಸ್ಲಿಂ ನವಾಬನ ಅಂತಃಪುರಕ್ಕೆ ನುಗ್ಗಿ ಬಿಟ್ಟರು. ಅಂತಃಪುರದ ಕಾವಲುಗಾರರು ನೋಡನೋಡುತ್ತಿರುವಂತೆಯೇ ಅವರು ಮೈಮೇಲೆ ಪ್ರಜ್ಞೆಯೇ ಇಲ್ಲದವರಂತೆ ಸಾಗುತ್ತಲೇ ಇದ್ದರು. ಸುದ್ದಿ ತಿಳಿದು ಕೆಂಡಾಮಂಡಲನಾದ ನವಾಬ, ಅವರನ್ನು ತಡೆದು ಶಿಕ್ಷಿಸಲು ತನ್ನ ಸಿಪಾಯಿಗಳಿಗೆ ಆಜ್ಞಾಪಿಸಿದ. ನವಾಬನ  ಕಾವಲುಪಡೆಯವರು ಬ್ರಹ್ಮೇಂದ್ರರನ್ನು ಬೆನ್ನಟ್ಟಿ ಕೈಗಳನ್ನು ಕತ್ತರಿಸಿ ಹಾಕಿದರು. ಕೈಗಳು ಕೆಳಗೆ ಬಿದ್ದರೂ ಇದ್ಯಾವುದರ ಪರಿವೆಯೇ ಇಲ್ಲದಂತೆ ಬ್ರಹ್ಮೇಂದ್ರರು ಏನೂ ಆಗಲೇ ಇಲ್ಲವೆಂಬಂತೆ ಮುಂದುವರೆಯುತ್ತಲೇ ಇದ್ದರು. ಹೆದರಿದ ನವಾಬ ತುಂಡಾಗಿ ಕೆಳಗೆ ಬಿದ್ದಿದ್ದ ಕೈಗಳನ್ನು ಸ್ವತಃ ಎತ್ತಿ ತಂದು ಬ್ರಹ್ಮೇಂದ್ರರ ಮುಂದೆ ಹಿಡಿದು ನಡುಗುತ್ತಾ ನಿಂತ. ಬ್ರಹ್ಮೇಂದ್ರರು ಹಾಗೆ ಅವುಗಳನ್ನು ತಮ್ಮ ಕೈಗೆ ಜೋಡಿಸಿದರು. ಕೈಗಳು ಯಥಾಸ್ಥಿತಿಗೆ ಬಂದವು. ಬ್ರಹ್ಮೇಂದ್ರರು ಯಾವುದೇ ಪ್ರತಿಕ್ರಿಯೆಯಿಲ್ಲದೆ ತಮ್ಮ ಪಾಡಿಗೆ ತಾವು ಸಾಗುತ್ತಲೇ ಇದ್ದರು. ನವಾಬ ಮರಗಟ್ಟಿ ನೋಡುತ್ತಲೇ ಇದ್ದ!

ದೇಗುಲಗಳ ನಿರ್ಮಾಣ:

ಪುದುಕ್ಕೊಟ್ಟೆಯ ಅರಸ ವಿಜಯ ರಘುನಾಥ ತೊಂಡೈಮಾನ್ ಸದಾಶಿವ ಬ್ರಹ್ಮೇಂದ್ರರ ಖ್ಯಾತಿಯ ಬಗ್ಗೆ ತಿಳಿದು ಅವರನ್ನು ತನ್ನ ಆಸ್ಥಾನಕ್ಕೆ ಕರೆತಂದು ಆಶೀರ್ವಾದ ಬೇಡುವ ಸಲುವಾಗಿ ಧಾವಿಸುತ್ತಾನೆ. ಆಗ ತಿರುವರಂಕುಳಮ್’ನಲ್ಲಿದ್ದ ಬ್ರಹ್ಮೇಂದ್ರರು ಸ್ವತಃ ಅರಸನೇ ಬಂದುದರ ಅರಿವಾದರೂ ಯಾವುದೇ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಅಲ್ಲೇ ಬಿಡಾರ ಹೂಡಿದ ರಾಜ ಅವಧೂತರ ಸೇವೆಗೆ ತೊಡಗುತ್ತಾನೆ. ಬ್ರಹ್ಮೇಂದ್ರರು ಉತ್ತರರೂಪವಾಗಿ ಮರಳಿನಲ್ಲಿ ದಕ್ಷಿಣಾಮೂರ್ತಿ ಮಂತ್ರವನ್ನು ಬರೆಯುತ್ತಾರೆ(1738). ಅಲ್ಲದೆ ಪಾಣಿನಿಯ ಅಷ್ಟಾಧ್ಯಾಯಿಯ ಮೇಲಿನ ವ್ಯಾಖ್ಯೆ “ಸಬ್ಥಿಕ ಚಿಂತಾಮಣಿ”ಯ ಕರ್ತೃ ಬಿಕ್ಷಾಂದರ್ ಕೊಯಿಲ್ ಗೋಪಾಲಕೃಷ್ಣಶಾಸ್ತ್ರಿಯನ್ನು ಮಂತ್ರಿಯನ್ನಾಗಿ ನೇಮಿಸಿಕೊಳ್ಳುವಂತೆ ಸೂಚನೆ ನೀಡುತ್ತಾರೆ. ಅದಕ್ಕೆ ಒಪ್ಪಿದ ಅರಸ ತನ್ನ ಅಂಗವಸ್ತ್ರದಲ್ಲಿ ಮರಳನ್ನು ಕಟ್ಟಿಕೊಂಡು ಅರಮನೆಗೆ ತಂದು ಪ್ರತಿಷ್ಠಾಪನೆ ಮಾಡುತ್ತಾನೆ. ಪವಿತ್ರ ಮರಳು ಇಂದಿಗೂ ಪುದುಕೊಟ್ಟೆಯ ಅರಮನೆಯ ಒಳಗಿರುವ ದಕ್ಷಿಣಾಮೂರ್ತಿ ದೇಗುಲದಲ್ಲಿ ರಾಜನ ಪರಿವಾರದಿಂದ ಪೂಜಿಸಲ್ಪಡುತ್ತಿದೆ. ಘಟನೆ ನಡೆದ ಸ್ಥಳವೇ ಶಿವಜ್ಞಾನಪುರವೆಂದು ಖ್ಯಾತಿ ಪಡೆಯಿತು. ಇವತ್ತಿಗೂ ಪುದುಕೊಟ್ಟೆ ಜಿಲ್ಲೆಯ ಅವುದಾಯರ್ ಕೊಯಿಲ್ ಪಕ್ಕ ಸ್ಥಳ ಇದೆ.

ತಂಜಾವೂರಿನ ದೊರೆ ಶರಭೋಜಿ ಬ್ರಹ್ಮೇಂದ್ರರ ಬಳಿ ಬಂದಾಗ ತಮ್ಮಆತ್ಮವಿದ್ಯಾವಿಲಾಸ ಪ್ರತಿಯೊಂದನ್ನು ನೀಡಿ ಆತನನ್ನು ಅನುಗ್ರಹಿಸಿದರು. ತಂಜಾವೂರಿನ ಸಮೀಪದ ಪುನ್ನೈನಲ್ಲೂರಿನಲ್ಲಿ ಮಾರಿಯಮ್ಮನನ್ನು ಸ್ಥಾಪಿಸಲು ಕಾರಣೀಭೂತರಾದರು. ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ಸದಾಶಿವ ಬ್ರಹ್ಮೇಂದ್ರರ ಸಿದ್ಧಿಸಾಧನೆ, ಪವಾಡಗಳ ಬಗೆಗೆ ಶರಭೋಜಿಯ ಆಸ್ಥಾನ ವಿದ್ವಾನ್ ದೀಪಾಂಬಪುರಿಯ ಮಲ್ಲಾರಿ ಪಂಡಿತ್ ಬರೆದ ದಾಖಲೆಗಳು ಈಗಲೂ ದೊರೆಯುತ್ತವೆ.  ತಮಿಳು ವಿದ್ವಾಂಸ, ಕವಿ, ತತ್ತ್ವಶಾಸ್ತ್ರಜ್ಞ ತಯುಮನಾವರ್ ಬ್ರಹ್ಮೇಂದ್ರರ ಆಶೀರ್ವಾದ ಪಡೆದುಕೊಂಡರು. ಅವರು ಸದಾ ಧ್ಯಾನದಲ್ಲಿರುತ್ತಿದ್ದ ತಿರುಗೋಕರ್ಣದ ಶಿವ ದೇವಾಲಯದಲ್ಲಿನ ಜಾಗ ಈಗಲೂ ಗುರುತಿಸಲ್ಪಡುತ್ತಿದೆ. ದೇವದಾನಪಟ್ಟಿ ಕಾಮಾಕ್ಷಿ ದೇವಾಲಯ ಅವರ ಮಾರ್ಗದರ್ಶನದಲ್ಲೇ ನಿರ್ಮಾಣವಾಯಿತು. ತಂಜಾವೂರಿನ ನಲು ಕಲ್ ಮಂಟಪದಲ್ಲಿ ಹನುಮಾನ್ ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ಅವರೇ. ಕುಂಭಕೋಣಂನ ತಿರುರಂಗೇಶ್ವರ ರಾಹುಸ್ಥಲ ದೇವಾಲಯದಲ್ಲಿ ಗಣೇಶ ವಿಗ್ರಹ ಹಾಗೂ ಶಕ್ತಿಯುತ ಗಣೇಶ ಯಂತ್ರ ಅವರು ಪ್ರತಿಷ್ಠಾಪನೆ ಮಾಡಿದುದರ ದಾಖಲೆಯ ಕೆತ್ತನೆ ದೇವಾಲಯದ ದ್ವಾರದ ಬಳಿಯೇ ಕಾಣ ಸಿಗುತ್ತದೆ. ಕರೂರಿನ ಸಮೀಪದ ತಂತೋಂದ್ರಿಮಲೈ ಶ್ರೀನಿವಾಸ ದೇವಾಲಯದಲ್ಲಿ ಅವರು ಪ್ರತಿಷ್ಠಾಪಿಸಿದ ಜನಾಕರ್ಷಣ ಯಂತ್ರ ಇಂದಿಗೂ ಅನೇಕರನ್ನು ಆಕರ್ಷಿಸುತ್ತಲೇ ಇದೆ. ಪೆರಂಬದೂರಿನ ಸಿರುವಕೋರ್ ಮಧುರಕಾಳಿ ದೇವಾಲಯದಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಿದವರೂ ಅವರೇ.

ಆರಾಧನೆ:

ಹೀಗೆ ಯಾರ ಹಂಗಿಗೂ ಸಿಗದೆ, ಯಾವ ಮಾತುಕಥೆಗಳಿಲ್ಲದೆ ಸ್ವೇಚ್ಛೆಯಿಂದ ಅಲೆದಾಡುತ್ತ ಅವಧೂತ ಸ್ಥಿತಿಯನ್ನು ಸಾಧಿಸಿಕೊಂಡ ಸದಾಶಿವ ಬ್ರಹ್ಮೇಂದ್ರರು ತಮ್ಮ ಕೊನೆಗಾಲದಲ್ಲಿ ತಿರುವಿಶೈನಲ್ಲೂರನ್ನು ಬಿಟ್ಟು ಕಾವೇರಿ ತೀರದ ನೆರೂರಿಗೆ ಬಂದರು. ನೆರೂರಿನ ಮೂಲ ಹೆಸರು ನೆರುಪ್ಪೂರು ಅಂದರೆ ಅಗ್ನಿ ನಗರವೆಂದೇ ಅರ್ಥ. ಅಲ್ಲಿ ಅಗ್ನಿನೀಶ್ವರ ಎಂಬ ಶಿವ ದೇಗುಲವೂ ಇದೆ. ಅಲ್ಲಿ ಕಾವೇರಿ ದಕ್ಷಿಣಕ್ಕೆ ಹರಿಯುತ್ತದೆ. ಹಾಗಾಗಿ ನೆರೂರನ್ನು ಇನ್ನೊಂದು ಕಾಶಿ ಎಂದೆನ್ನಲಾಗುತ್ತದೆ. ಅವತಾರ ಸಮಾಪ್ತಿಯ ಕಾಲದಲ್ಲಿ ಜೇಷ್ಠ ಶುದ್ಧ ದಶಮಿಯ ದಿನ ಸಮಾಧಿಯ ಗುಂಡಿಯಲ್ಲಿ ಯೋಗಮುದ್ರೆಯಲ್ಲಿ ಕುಳಿತ ಬ್ರಹ್ಮೇಂದ್ರರು ಮುಂದೇನು ಮಾಡಬೇಕಂದು ನಿರ್ದೇಶಿಸಿದರು. ಅಲ್ಲದೇ ಒಂಬತ್ತನೇ ದಿನ ಬಿಲ್ವ ಗಿಡವೊಂದು ಸಮಾಧಿಯಿಂದ ಮೇಲೆದ್ದು ಬರುವುದಾಗಿಯೂ, ಹನ್ನೆರಡನೆಯ ದಿವಸ ಕಾಶಿಯಿಂದ ಬಾಣಲಿಂಗವೊಂದನ್ನು ಭಕ್ತರೊಬ್ಬರು ತರುತ್ತಾರೆಂದೂ ಹೇಳಿದರು. ಅದೇ ರೀತಿ ನಡೆಯಿತೆಂದು ಬೇರೆ ಹೇಳಬೇಕಾಗಿಲ್ಲ. ಪುದುಕೊಟ್ಟೈಯ ದೊರೆ ರಘುನಾಥ ತೊಂಡೈಮಾನನೇ ಬಾಣಲಿಂಗದ ಪ್ರತಿಷ್ಠಾಪನೆಯನ್ನೂ ನೆರವೇರಿಸಿದ. 1912ರಲ್ಲಿ ಲಕ್ಷಾರ್ಚನೈ ಸ್ವಾಮಿ ಎನ್ನುವವರಿಂದ ನೆರೂರಿನಲ್ಲಿ ಆರಂಭವಾದ ಆರಾಧನೆ ಇಂದಿಗೂ ನಡೆಯುತ್ತಿದೆ. ತೀರಾ ಈಚೆಗೆ ಮತ್ತೊಂದು ಅಚ್ಚರಿಯೂ ಸಂಭವಿಸಿತು. ಮಧುರೈಯಿಂದ ಅರವತ್ತು ಕಿ.ಮಿ. ದೂರದಲ್ಲಿರುವ ಮನಮಧುರೈ ಸೋಮನಾಥ ದೇವಾಲಯ ಸಮುಚ್ಚಯದಲ್ಲಿ ಅವರ ಸಮಾಧಿ ಇರುವುದನ್ನು ಕಂಚಿ ಪರಮಾಚಾರ್ಯರು ಪತ್ತೆ ಹಚ್ಚಿದರು. ಹೀಗೆ ಏಕಕಾಲದಲ್ಲಿ ಎರಡೂ ಕಡೆ ಸಜೀವ ಸಮಾಧಿಯಿರುವ ಮಹಾಪುರುಷ ಸದಾಶಿವ ಬ್ರಹ್ಮೇಂದ್ರರು. ಎರಡೂ ಕಡೆ ಅವರ ಆರಾಧನೆ ನಡೆಯುತ್ತಾ ಬರುತ್ತಿದೆ.

ಸದಾಶಿವ ಬ್ರಹ್ಮೇಂದ್ರರ ಹಿರಿಮೆಯನ್ನು ಅರಿತಿದ್ದ ಶೃಂಗೇರಿಯ ಜಗದ್ಗುರುಗಳಾಗಿದ್ದ ಉಗ್ರನರಸಿಂಹ ಭಾರತಿಗಳು ನೆರೂರಿನಲ್ಲಿನ ಅವರ ಸಮಾಧಿಯ ದರ್ಶನ ಮಾಡಿದ್ದರು.ಶೃಂಗೇರಿ ಶ್ರೀಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮ್ಮ ತಮಿಳುನಾಡಿನ ಪ್ರವಾಸ ಕಾಲದಲ್ಲಿ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತು. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳು ತುಸು ಸಮಯದ ಬಳಿಕ ಪಲ್ಲಕ್ಕಿಯಿಂದ ಇಳಿದು ನಡೆಯಲಾರಂಭಿಸಿದರು. ಹಾಗೆ ನಡೆದು ಬಂದವರು ನಿಂತಿದ್ದು ನೆರೂರಿನಲ್ಲಿದ್ದ ಸದಾಶಿವ ಬ್ರಹ್ಮೇಂದ್ರರ ಸಮಾಧಿಯ ಮುಂದೆಯೇ! ಸಮಾಧಿಯ ದರ್ಶನ ಪಡೆದ ಬಳಿಕ ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಮೂರನೇ ದಿನದ ಕೊನೆಗೆ ಯಾರೋ ಅವರೊಂದಿಗೋ ಮಾತಾಡುತ್ತಿರುವ ದನಿ ಕೇಳಿಸಿತು. ಆದರೆ ಯಾರೂ ಕಾಣಿಸುತ್ತಿರಲಿಲ್ಲ. ಹೀಗೆ ಬ್ರಹ್ಮೇಂದ್ರರ ದರ್ಶನ ಪಡೆದ ಶಿವಾಭಿನವ ನೃಸಿಂಹ ಭಾರತಿಗಳು ಬಳಿಕ ಅಲ್ಲೇ ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬೆರಡು ಶ್ಲೋಕಗಳನ್ನು ರಚಿಸಿದರು. ಮುಂದೆ ಶೃಂಗೇರಿಯ ಅವಧೂತರೆಂದೇ ಖ್ಯಾತಿವೆತ್ತ ಚಂದ್ರಶೇಖರ ಭಾರತೀ ಸ್ವಾಮಿಗಳು ಕೂಡಾ ಸದಾಶಿವ ಬ್ರಹ್ಮೇಂದ್ರರ ನೆರೂರು ಸಮಾಧಿಯನ್ನು ದರ್ಶಿಸಿ ಆತ್ಮವಿದ್ಯಾವಿಲಾಸದ ಅನುಸಂಧಾನದಲ್ಲಿ ತೊಡಗಿ ಆತ್ಮವಿದ್ಯಾವಿಲಾಸಿಯೇ ಆಗಿ ಹೋದರು. ಶೃಂಗೇರಿ ಜಗದ್ಗುರುಗಳಾದವರು ಸದಾಶಿವ ಬ್ರಹ್ಮೇಂದ್ರರ ಸಮಾಧಿಯನ್ನು ದರ್ಶಿಸಿ ಪೂಜಿಸುವ ಪರಿಪಾಠ ಇಂದಿನವರೆಗೂ ನಡೆದು ಬಂದಿದೆ. ಬಾಲಸುಬ್ರಹ್ಮಣ್ಯ ಯತೀಂದ್ರ ಎನ್ನುವ ಸಂನ್ಯಾಸಿಯೋರ್ವರು ಬ್ರಹ್ಮೇಂದ್ರರ ಕುರಿತಂತೆ ಸದಾಶಿವ ಸ್ತೋತ್ರವನ್ನು ರಚಿಸಿದ್ದಾರೆ.

ಬ್ರಹ್ಮವಿದ್ ಬ್ರಹ್ಮೈವ ಭವತಿಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ. ದೇಶದಲ್ಲಿ ಸಾಧು, ಸಂತ, ಸಂನ್ಯಾಸಿಗಳಿಗೇನೂ ಬರವಿಲ್ಲ. ಆದರೆ ಬ್ರಹ್ಮ ಸಾಕ್ಷಾತ್ಕಾರಗೊಂಡವರು ಅಥವಾ ಅವಧೂತರು ಕಣ್ಣಿಗೆ ಬೀಳುವುದೇ ಅಪರೂಪ. ಒಂದು ವೇಳೆ ಸಿಕ್ಕಿದರೂ ಅವರ ಅನುಗ್ರಹಕ್ಕೆ ಪಾತ್ರರಾಗುವುದು ಅಷ್ಟು ಸುಲಭವೂ ಅಲ್ಲ. ಕೆಲವರ ಬಗ್ಗೆ ಹೆಚ್ಚಿನವರಿಗೆ ತಿಳಿಯುವುದೂ ಇಲ್ಲ. ಅವಧೂತರನ್ನು ಹುಚ್ಚರೆಂದು ಕಣೆಗಣಿಸುವವರ ಸಂಖ್ಯೆಯೇ ಹೆಚ್ಚು. ಆದರೆ ಅವಧೂತರಿಂದಾಗಿಯೇ ಇಲ್ಲೊಂದಷ್ಟು ಪುಣ್ಯ ಸಂಚಯನವಾಗಿದೆ. ಭರತ ಭೂಮಿ ಉಳಿದುಕೊಂಡಿದೆ. ಇಂದಿಗೂ ಸಾಧನಾ ಕ್ಷೇತ್ರವಾಗಿಯೇ ಉಳಿದಿದೆ. ಕಾಲಕಾಲಕ್ಕೆ ಬೇರೆಬೇರೆ ಜಾಗಗಳಲ್ಲಿ ಅವಧೂತರು ಕಂಡು ಬರುತ್ತಲೇ ಇದ್ದಾರೆ. ದಕ್ಷಿಣಾಮೂರ್ತಿಯಿಂದ ಮೊದಲ್ಗೊಂಡು ಇತ್ತೀಚಿನ ವೆಂಕಾಟಚಲ ಅವಧೂತರವರೆಗೆ. ನಮ್ಮ ಕಣ್ಣಿಗೆ ಬೀಳದ ಅವಧೂತರು ಇನ್ನೆಷ್ಟೋ? ದಕ್ಷಿಣಾಮೂರ್ತಿಸದಾಶಿವ ಬ್ರಹ್ಮೇಂದ್ರರಮಣ ಮಹರ್ಷಿ ಅವಧೂತ ಪರಂಪರೆಯಲ್ಲೊಂದು ವಿಶೇಷವಿದೆ. ಕೊಂಡಿ ಮೌನವಾಗಿಯೇ ಹಲವರಲ್ಲಿ ಜ್ಞಾನವನ್ನು, ಭಾಗ್ಯವನ್ನು ಕರುಣಿಸಿದೆ. ಅದು ಎಲ್ಲೊಲ್ಲೋ ಇದ್ದವರನ್ನೂ, ಅವಧೂತ ಬಿಡಿ, ಹಿಂದೂ ಧರ್ಮದ ಬಗ್ಗೆ ಏನೇನೂ ಅರಿಯದವರನ್ನೂ ತಮ್ಮ ಬಳಿಗೆ ಕರೆತಂದಿದೆ. ಜ್ಞಾನಕ್ಕಾಗಿ ಹಲವರನ್ನು ಹಪಹಪಿಸುವಂತೆ ಮಾಡಿದೆ. ಮೌನವಾಗಿಯೇ ಜಗವ ಬೆಳಗಿದೆ. ಮೌನದ ಶಕ್ತಿ ಅದು!

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!