ಅಂಕಣ

ಜೊನಾಥನ್ ಲಿವಿಂಗ್’ಸ್ಟನ್ ಎಂಬ ಸೀಗಲ್’ನ ಸ್ಫೂರ್ತಿದಾಯಕ ಕಥೆ!

‘ಜೊನಾಥನ್ ಲಿವಿಂಗ್’ಸ್ಟನ್ ಸೀಗಲ್’ ಎಂಬ ಪುಸ್ತಕದಲ್ಲಿ ಮೊದಲು ಕಾಣಸಿಗುವುದು ‘ಕನಸುಗಳನ್ನು ಬೆನ್ನತ್ತುವವರಿಗಾಗಿ ಈ ಕಥೆ’ ಎಂಬ ಸಾಲು. ಸೀಗಲ್, ಸಮುದ್ರತೀರದಲ್ಲಿ ಕಾಣಸಿಗುವ ಪಕ್ಷಿಗೂ, ಕನಸುಗಳಿಗೂ ಎಲ್ಲೆಂದೆಲ್ಲಿಯ ಸಂಬಂಧ ಎಂದು ಅರ್ಥವಾಗಲಿಲ್ಲ. ಪಕ್ಷಿಗಳೂ ಕೂಡ ಮನುಷ್ಯನಂತೆ  ಕನಸುಗಳಿರುತ್ತವಾ? ಎಂಬ ಗೊಂದಲದೊಂದಿಗೆ ಓದಲು ಶುರು ಮಾಡಿದ್ದು. ರಿಚರ್ಡ್ ಬಾಕ್ ಎಂಬ ಅಮೇರಿಕಾದ ಪೈಲಟ್ ಒಬ್ಬ ಬರೆದ ಪುಸ್ತಕವಿದು. ತುಂಬಾ ದೊಡ್ಡ ಪುಸ್ತಕವೇನೂ ಅಲ್ಲ. ಆದರೆ ನಿಜಕ್ಕೂ ಕನಸುಗಳನ್ನು ಬೆನ್ನತ್ತುವವರಿಗೆ ಜೋನಾಥನ್ ಲಿವಿಂಗ್’ಸ್ಟನ್ ಎಂಬ ಸೀಗಲ್’ನ ಚಿಕ್ಕದಾದ ಹಾಗೂ ಸರಳವಾದ ಕಥೆ ಸ್ಫೂರ್ತಿ ತುಂಬುವುದಂತೂ ನಿಜ. ಹಾಗಾಗಿಯೇ ರಿಚರ್ಡ್  ಈ ಪುಸ್ತಕವನ್ನು ‘ನಮ್ಮೆಲ್ಲರೊಳಗಿರುವ ನಿಜವಾದ ಜೊನಾಥನ್’ಗೆ ಅರ್ಪಣೆ ಮಾಡಿದ್ದಾರೆ.

ಜೊನಾಥನ್ ಲಿವಿಂಗ್’ಸ್ಟನ್ ಎನ್ನುವುದು ಒಂದು ಸೀಗಲ್’ನ ಹೆಸರು. ಹಾರುವ ಕನಸು ಹೊಂದಿರುವ ಒಂದು ಸಮುದ್ರ ಪಕ್ಷಿ. ಸೀಗಲ್’ಗಳಿಗೆ ಹಾರುವುದು ಎಂದರೆ ಆಹಾರ ಪಡೆದುಕೊಳ್ಳುವ ಒಂದು ಮಾರ್ಗ ಅಷ್ಟೆ. ಆದರೆ ಈ ಕಥೆಯಲ್ಲಿ ಬರುವ ಜೊನಾಥನ್ ಎಂಬ ಸೀಗಲ್ ‘ಗೆ ಹಾರುವುದು ಕನಸು! ಜೊನಾಥನ್ ಯಾವಾಗಲೂ ಇತರ ಸೀಗಲ್’ಗಳಿಗಿಂತ ಭಿನ್ನವಾಗಿಯೇ ಇದ್ದಿತ್ತು. ಪ್ರತಿದಿನ ತಾನು ಎತ್ತರದಿಂದ ಎತ್ತರಕ್ಕೆ ಹಾರಬೇಕು, ವೇಗವಾಗಿ ಹಾರಬೇಕು ಎಂದು ಪ್ರಯತ್ನಪಡುತ್ತಿತ್ತು. ಪ್ರತಿದಿನ ಅದೇ ನಿಟ್ಟಿನಲ್ಲಿ ಹೊಸತೇನಾದರೂ ಕಲಿಯುವ ಹಂಬಲ ಇಟ್ಟುಕೊಂಡಿತ್ತು. ಪ್ರಯತ್ನ ಪಟ್ಟರೆ ತಾನು ಏನೆಲ್ಲಾ ಮಾಡಬಹುದು ಎಂದು ನೋಡಬಯಸಿತ್ತು. ಆದರೆ ಅದರ ತಂದೆ ತಾಯಿ ‘ನೀನ್ಯಾಕೆ ಇತರರಂತಿಲ್ಲ?’ ಎಂದು ಮೂದಲಿಸುವುದೇ ಆಗಿತ್ತು. ಅವು ಎಂದೂ ಕೂಡ ಜೊನಾಥನ್’ನ ಕನಸುಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವು ಯಾವಾಗಲೂ ಜೊನಾಥನ್’ನ್ನು ಎಲ್ಲರಂತೆಯೇ ಇರಬೇಕೆಂದು ಬಯಸುತ್ತಿದ್ದವು. ಜೋನಾಥನ್ ಕೆಲ ಕಾಲ ತನ್ನ ತಂದೆ ತಾಯಿ ಬಯಸಿದಂತೆ ಆಹಾರ ಹುಡುಕುವ ಕೆಲಸದಲ್ಲಿ ಮಗ್ನವಾಗುತ್ತದೆ. ಇತರ ಸೀಗಲ್’ಗಳಂತೆ ಇರುವುದಕ್ಕೆ ಪ್ರಯತ್ನ ಪಡುತ್ತದೆ. ಆದರೆ ಅಲ್ಲಿ ಯಾವುದೇ ತೆರನಾದ ತೃಪ್ತಿ ಸಿಗುವುದಿಲ್ಲ. ತನ್ನ ಬದುಕು ಇಷ್ಟೇ ಅಲ್ಲ. ಇದಕ್ಕಿಂತ ಹೆಚ್ಚು. ತಾನಿನ್ನೂ ಕಲಿಯಬೇಕು. ತಾನಿನ್ನೂ ಹಾರಾಡಬೇಕು. ಸೀಗಲ್’ಗಳು ಇಷ್ಟೇ ಎಂದು ತಮಗೆ ತಾವೇ ಹಾಕಿಕೊಂಡಿರುವ ಬೇಲಿಯನ್ನು ಮೀರಿ ಬೆಳೆಯಬೇಕು ಎಂಬ ತುಮುಲ ಮಾತ್ರ ಜೊನಾಥನ್’ನ್ನು ಮತ್ತೆ ತನ್ನ ಕನಸನ್ನು ಬೆನ್ನತ್ತುವಂತೆ ಮಾಡುತ್ತದೆ. ಸಪ್ರಯತ್ನದಿಂದ ಎತ್ತರದಿಂದ ಎತ್ತರಕ್ಕೆ ಹಾರಾಡುವುದನ್ನು ಅಭ್ಯಾಸ ಮಾಡುತ್ತದೆ. ಪ್ರತಿದಿನ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಪಡುತ್ತದೆ. ದಿನಗಳೆದಂತೆ ಅದರಲ್ಲಿ ಯಶಸ್ಸನ್ನು ಕೂಡ ಪಡೆದುಕೊಳ್ಳುತ್ತಾ ಹೋಗುತ್ತದೆ. ಕೊನೆಗೊಂದು ದಿನ ತನಗೇ ನಂಬಲಾಗದಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ವರ್ಲ್ಡ್ ರೆಕಾರ್ಡ್ ಎಂದುಕೊಳ್ಳುತ್ತದೆ ಜೊನಾಥನ್! ಆದರೆ ಆ ಖುಷಿ ಹೆಚ್ಚು ಕಾಲ ಉಳಿಯುವುದಿಲ್ಲ. ಆ ವೇಗವನ್ನು ತಡೆಯಲಾರದೇ ಸಮುದ್ರಕ್ಕೆ ಬಿದ್ದುಬಿಡುತ್ತದೆ. ಅಲ್ಲಿಂದ ಹೇಗೋ ತನ್ನನ್ನು ತಾನು ದಡಕ್ಕೆ ಎಳೆದುಕೊಂಡು ಬಂದ ಶಕ್ತಿಗುಂದಿದ ಜೊನಾಥನ್ ‘ಅವರೆಲ್ಲ ಹೇಳಿದ್ದು ನಿಜ. ನಾನಿದನ್ನು ಮಾಡಲಾರೆ. ಸುಮ್ಮನೆ ಹುಚ್ಚು ಕನಸು ಕಂಡೆ. ನಾನೂ ಕೂಡ ಇತರರಂತೆ ಒಂದು ಸೀಗಲ್ ಅಷ್ಟೇ. ನನಗೆ ನನ್ನ ಮಿತಿ ಗೊತ್ತಿರಬೇಕಿತ್ತು. ಇನ್ನಾದರೂ ಇತರರಂತೆ ಇರಬೇಕು’ ಎಂದು ಯೋಚಿಸುತ್ತದೆ!

ಒಂದು ಸೀಗಲ್’ನ್ನು ಮನುಷ್ಯನಿಗೆ ಹೋಲಿಸಿ ಬರೆದಿದ್ದಾರೆ ರಿಚರ್ಡ್ ಬಾಕ್. ಎಲ್ಲರಲ್ಲೂ ಒಬ್ಬ ಕನಸುಗಾರ ಇದ್ದೇ ಇರುತ್ತಾನೆ. ತಾನೇನೋ ಮಾಡಬೇಕು ಎಂದು ಹೊರಟಿರುತ್ತಾನೆ. ಆದರೆ ಸಮಾಜಕ್ಕೆ ಅದು ಹುಚ್ಚುತನ ಎನಿಸುತ್ತದೆ. ತಂದೆ ತಾಯಿಗೆ ತಮ್ಮ ಮಗ ಏಕೆ ಇತರರಂತಿಲ್ಲ ಎಂದು ಯೋಚನೆಯಾಗುತ್ತದೆ. ಬಹುಶಃ ಇದೇ ಕಾರಣಕ್ಕೆ ಎಷ್ಟೋ ಜನ ತಮ್ಮ ಕನಸನ್ನು ಕೈ ಬಿಟ್ಟು ಇಷ್ಟವಿಲ್ಲದಿದ್ದರೂ ಇತರರನ್ನು ಅನುಕರಿಸುತ್ತಾ ಜೀವನವಿಡೀ ಅದರಲ್ಲೇ ಕಳೆಯುತ್ತಾರೆ.  ಇನ್ನು ಒಂದು ವೇಳೆ ತಮ್ಮ ಕನಸಿನ ಹಾದಿಯಲ್ಲೇ ನಡೆದಿದ್ದರೂ, ಒಮ್ಮೆ ಸೋತಾಗ, ತಾವು ಅಪೇಕ್ಷಿಸಿದ ಫಲಿತಾಂಶ ಬರದೇ ಇದ್ದಾಗ ಹತಾಶರಾಗಿ, ‘ಜನ ಹೇಳಿದ್ದು ನಿಜ. ಇದೊಂದು ಹುಚ್ಚುತನವೇ. ತಾನೂ ಇತರರಂತೆಯೇ ಇರಬೇಕಿತ್ತು’ ಎಂದು ಅರ್ಧ ಹಾದಿಯಲ್ಲೇ ತಮ್ಮ ಕನಸನ್ನು ಕೈ ಬಿಟ್ಟು ಬರುತ್ತಾರೆ. ಆದರೆ ಈ ಕಥೆಯಲ್ಲಿ ಬರುವ ಜೊನಾಥನ್ ಇದಕ್ಕೆ ಹೊರತು. ಸೋತು ಹತಾಶೆಯಿಂದ ಹಿಂದಿರುಗದೇ ಮತ್ತೆ ಪ್ರಯತ್ನಿಸುತ್ತದೆ. ತಾನು ಯಾವ ರೀತಿ ಹಾರಿದರೆ, ತನ್ನ ರೆಕ್ಕೆಗಳನ್ನು ಯಾವ ರೀತಿ ಇಟ್ಟುಕೊಂಡರೆ ವೇಗವಾಗಿ ಹಾರಾಟ ಮಾಡಬಹುದು ಎಂದು ಲೆಕ್ಕಹಾಕಿ ಮತ್ತೆ ಪ್ರಯತ್ನಿಸುತ್ತದೆ. ಆ ಬಾರಿ ತಾನಂದುಕೊಂಡಂತೆ ಆ ವೇಗವನ್ನು ಪಡೆದುಕೊಳ್ಳುತ್ತದೆ. ಸೋಲಿನ ಹತಾಶೆಯಲ್ಲೂ ಮತ್ತೆ ಪ್ರಯತ್ನಿಸುವ ಹಂಬಲ ಎಲ್ಲರಲ್ಲೂ ಇರುವುದಿಲ್ಲ.  

ಜೊನಾಥನ್ ತನ್ನ ಸಾಧನೆಯನ್ನು ಇತರ ಸೀಗಲ್’ಗಳಿಗೂ ಹೇಳಬಯಸಿತ್ತು. ‘ನೀವೂ ಕೂಡ ಇದನ್ನು ಮಾಡಬಲ್ಲಿರಿ’ ಎನ್ನಬಯಸಿತ್ತು. ಆದರೆ ಜೊನಾಥನ್’ನ್ನು ಅರ್ಥಮಾಡಿಕೊಳ್ಳದೇ ಅದನ್ನು ಸಮಾಜದಿಂದ ಹೊರಹಾಕಲಾಗುವುದು. ಅಲ್ಲಿಂದ ದೂರ ಹೊರಟುಹೋಗುವ ಜೊನಾಥನ್’ಗೆ ತನ್ನಂತೆ ಕನಸು ಹೊತ್ತು, ತನ್ನವರಿಂದ ದೂರ ಬಂದು,  ಹಾರಾಟದಲ್ಲಿ ಇನ್ನು ಹೆಚ್ಚು ಕಲಿತ  ಸೀಗಲ್’ಗಳು ದೊರೆಯುತ್ತದೆ. ಅಲ್ಲೇ ಅವರೊಂದಿಗೆ ಇದ್ದುಬಿಡುವ ಜೊನಾಥನ್ ಹಾರುವುದರ ಬಗ್ಗೆ ಇನ್ನಷ್ಟು ಕಲಿಯುತ್ತದೆ. ಯೋಚನೆ ಮಾಡುವ ವೇಗದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದನ್ನು ಕಲಿತುಕೊಳ್ಳುತ್ತದೆ. ಕಾಲ ಹಾಗೂ ಸ್ಥಳ ಎನ್ನುವುದೆಲ್ಲ ಅರ್ಥಹೀನ ಎನ್ನುವುದನ್ನ ಅರಿತುಕೊಳ್ಳುತ್ತದೆ. ಪರಿಪೂರ್ಣತೆಗೆ ಮಿತಿಗಳಿರುವುದಿಲ್ಲ ಎನ್ನುವುದನ್ನ ಕಲಿತುಕೊಳ್ಳುತ್ತದೆ. ಇದೆಲ್ಲದರ ನಂತರವೂ ಜೊನಾಥನ್ ಹಿಂದಿರಬಯಸುತ್ತದೆ. ತನಗಾಗಿ ಅಲ್ಲ, ತನ್ನಂತೆ ಕನಸು ಕಾಣುತ್ತಿರುವ ಸೀಗಲ್’ಗಾಗಿ. ತಾನು ಬಿಟ್ಟುಬಂದಿರುವ ಆ ಸಮಾಜದಲ್ಲಿ ಬಹುಶಃ ತನ್ನಂತೆಯೇ ಯಾವುದೋ ಸೀಗಲ್ ಇನ್ನಷ್ಟು ಹಾರುವ ಕನಸು ಕಾಣುತ್ತಿರಬಹುದು. ಅದಕ್ಕಾಗಿ ಹಿಂದಿರುಗಬೇಕು  ಪ್ರಯತ್ನ ಪಟ್ಟರೆ ಏನೆಲ್ಲ ಸಾಧ್ಯ ಎಂದು ಹೇಳುವುದಕ್ಕಾಗಿ ಹಿಂದಿರುಗುತ್ತದೆ ಜೊನಾಥನ್!

ಹೀಗೆ ಹಿಂದಿರುಗಿ ಬರುವ ಜೊನಾಥನ್ ತನ್ನಂತೆ ಕನಸು ಕಾಣುತ್ತಿದ್ದ, ಸಮಾಜದಿಂದ ಹೊರಹಾಕಲ್ಪಟ್ಟ ಸೀಗಲ್’ಗಳಿಗೆ ತಾನು ಕಲಿತದ್ದೆಲ್ಲವನ್ನು ಧಾರೆಎರೆಯುತ್ತದೆ. ತನ್ನವರಿಂದಲೇ ಹೊರಹಾಕಲ್ಪಟ್ಟರೂ ಮತ್ತೆ ತನ್ನವರಿಗಾಗಿ ಹಿಂತಿರುಗಿ ಬಂದ ಜೊನಾಥನ್’ನ್ನು ಸೀಗಲ್ ಒಂದು ಈ ಕುರಿತು ಪ್ರಶ್ನಿಸಿದಾಗ, ಜೊನಾಥನ್ ನೀಡುವ ಉತ್ತರ ನಾವೂ ಅಳವಡಿಸಿಕೊಳ್ಳುವಂಥದ್ದು. “ದ್ವೇಷವನ್ನು ಪ್ರೀತಿಸಬಾರದು. ನಿಜವಾದ ಪ್ರೀತಿ ಎಂದರೆ ಎಲ್ಲರಲ್ಲೂ ಒಳ್ಳೆಯದನ್ನು ನೋಡುವುದು ಹಾಗೂ ಅವರೂ ತಮ್ಮಲ್ಲಿಯ ಆ ಒಳ್ಳೆಯತನವನ್ನು ನೋಡಿಕೊಳ್ಳುವಂತೆ ಮಾಡುವುದು” ಎನ್ನುತ್ತದೆ ಜೊನಾಥನ್!

ಜೊನಾಥನ್ ಲಿವಿಂಗ್’ಸ್ಟನ್ ಎನ್ನುವ ಸೀಗಲ್’ನ ಕಥೆ ಕಾಲ್ಪನಿಕವೇನೋ ಹೌದು. ರಿಚರ್ಡ್ ಒಂದು ಹಕ್ಕಿಯ ಕಥೆಯನ್ನು ಎಷ್ಟು ಸುಂದರವಾಗಿ ಹೆಣೆದಿದ್ದಾರೆ ಎಂದರೆ ಜೊನಾಥನ್ ಒಬ್ಬ ವ್ಯಕ್ತಿಯೇನೋ, ಇಲ್ಲೆ ಎಲ್ಲೋ ನಮ್ಮಗಳ ಮಧ್ಯೆ ಇರಬಹುದೇನೋ ಎನಿಸಿಬಿಡುತ್ತದೆ. ಅದಷ್ಟೇ ಅಲ್ಲದೇ, ಕನಸು ಕಾಣಲು ಪ್ರೇರೇಪಿಸುತ್ತದೆ ಆ ಪುಟ್ಟ ಕಥೆ. ಯಾರು ಏನೇ ಹೇಳಿದರೂ ಕನಸು ಕಾಣುವುದು ಬಿಡದೇ ಇರಿ, ಒಂದೆರಡು ಬಾರಿ ಸೋತರೂ ಪ್ರಯತ್ನ ಬಿಡದಿರಿ, ಗೆದ್ದ ಮೇಲೆ ನಿಮ್ಮಂತೆಯೇ ಇತರರಿಗೆ ಬೆನ್ನೆಲುಬಾಗಿ ನಿಲ್ಲಿ ಎನ್ನುವ ಸಂದೇಶವನ್ನು ಕೊಡುತ್ತದೆ.

ಈ ಪುಸ್ತಕವನ್ನು ಓದಿದಾಗ ಶಾನ್ ಹೇಳಿದ ಈ ಮಾತುಗಳು ನೆನಪಾದವು. “ಯಾರಿಗಾದರೂ ಸ್ಫೂರ್ತಿ ತುಂಬಲು ತುಂಬಾ ದೊಡ್ಡ ದೊಡ್ಡ ಪದಗಳ ಅವಶ್ಯಕತೆ ಇಲ್ಲ. ‘ಯೆಸ್, ಯು ಕ್ಯಾನ್’ ಎಂಬ ಸರಳವಾದ ಒಂದು ಸಾಲು ಸಾಕು” ಎಂದು.  ನಿಜ.. ಸ್ಫೂರ್ತಿ ತುಂಬಲು ದೊಡ್ಡ ಪುಸ್ತಕಗಳೇ ಆಗಬೇಕೆಂದೇನಿಲ್ಲ. ಚಿಕ್ಕದಾದ ಜೊನಾಥನ್ ಕಥೆ ಸಾಕು!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!