Featured ಅಂಕಣ

ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!

ತಮಗಿಂತ ಶ್ರೇಷ್ಠರು ಯಾರಿದ್ದಾರೆ ಎಂದು ಅಹಂನಿಂದ ಬೀಗಿದವರಿಗೆ ಅವಳು ಕ್ರಿಸ್ತನಿಂದೀಚೆಗೆ ಕಂಡಳು. ಅವರಲ್ಲೇ ಸ್ವಲ್ಪ ಮುಕ್ತ ಮನಸ್ಥಿತಿಯವರು ಕ್ರಿಸ್ತನಿಗಿಂತಲೂ ಒಂದೂವರೆ ಸಾವಿರ ವರ್ಷಗಳ ಹಿಂದಿನ ಜನ್ಮದಿನಾಂಕವನ್ನು ಅವಳಿಗೆ ಕೊಡುವ ಉದಾರತೆ ತೋರಿದರು. ಆದರೆ ಅವಳ ಕೃಪೆಯಿಂದ ಉತ್ತುಂಗಕ್ಕೇರಿದ್ದ ನಾಗರಿಕತೆಯನ್ನು ಹೊರಗಿನಿಂದ ಬಂದ ಇಂದಿನವರ ಪೂರ್ವಜರೆನಿಸಿಕೊಂಡವರು ನಾಶ ಮಾಡಿದರೆಂಬ ಕಟ್ಟು ಕತೆಯನ್ನು ಹರಿಯಬಿಟ್ಟರು. ಅಪ್ಪಟ ಸಂಶೋಧಕರು ಅವಳ ಹತ್ತಿರ ಬಂದು ಕೆದಕಿದಾಗ ಅವಳು ಮತ್ತೆ ಸಾವಿರ ವರ್ಷ ಹಿಂದೆ ಸರಿದಳು. ಆಗ ಅವಳು ಬೆಳಗಿದ್ದ ಸಂಸ್ಕೃತಿಯನ್ನು ಬೆಕ್ಕಸ ಬೆರಗಾಗಿ ಜಗತ್ತು  ನೋಡುತ್ತಿದ್ದಾಗಲೇ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವವರ, ತಮ್ಮ ಪೂರ್ವಜರ ಬಗೆಗಿನ ಅಭಿಮಾನ ಶೂನ್ಯರ ಕಟ್ಟು ಕಥೆಗಳು ಅವಳ ಇಂದಿನ ಪೀಳಿಗೆಯವರನ್ನು ತಮ್ಮದೇ ನೈಜ ಇತಿಹಾಸವನ್ನು ನಂಬದ ಅಂಧಕಾರದಲ್ಲೇ ಉಳಿಸಿತು. ಆದರೂ ಜಗತ್ತಿಗೆ ಅವಳ ಬಗೆಗಿನ ಕುತೂಹಲ ಕಡಿಮೆಯಾಗಲೇ ಇಲ್ಲ. ಜಗವನ್ನೇ ಬೆಳಗಿದ ನಾಗರಿಕತೆಯ ಪುಣ್ಯಗರ್ಭೆಯೇ ಅವಳಲ್ಲವೇ? ಅಂತಹ ಅಪ್ಪಟ ಕುತೂಹಲಿಗಳು ಸಂಶೋಧಕರೂ ಆಗಿದ್ದು ಅವಳ ಒಡಲಿಗೆ ಇಳಿದಾಗ ಅಲ್ಲಿ ಕಂಡದ್ದು ಇನ್ನೊಂದು ಅಚ್ಚರಿ. ಅವಳು ಅದಕ್ಕಿಂತಲೂ ಮೂರು ಸಾವಿರ ವರ್ಷಗಳ ಹಿಂದೆಯೇ ಉಸಿರು ಬಿಗಿಹಿಡಿದು ಕೂತೇ ಈ ಸಂಸ್ಕೃತಿಯನ್ನು ಉದ್ಧರಿಸಿದ್ದಳು ಎನ್ನುವ ಮಹದಚ್ಚರಿ!

          ಸರಸ್ವತಿ! ಅಂಬೀತಮೇ, ನದೀತಮೇ, ದೇವೀತಮೇ ಎಂದು ಋಗ್ವೇದದ ಎರಡನೆಯ ಮಂಡಲದ ನಲವತ್ತೊಂದನೆಯ ಸೂಕ್ತಿಯಲ್ಲಿ ಋಷಿಪುಂಗವರಿಂದ ಸ್ತುತಿಸಲ್ಪಟ್ಟ ಪರಮ ಸರಸಿರೆ. ಪರ್ವತದಿಂದ ಸಮುದ್ರದವರೆಗೆ ವಿಶಾಲ ಪ್ರವಾಹದೊಂದಿಗೆ ಹರಿಯುತ್ತಾ ಜೀವಕೋಟಿಯನ್ನು ಉದ್ಧರಿಸುವುದೆಂದು ಋಗ್ವೇದದ ಏಳನೆಯ ಮಂಡಲದಲ್ಲಿ ಹೊಗಳಿಸಿಕೊಂಡ ಜೀವನದಿ. ಎಪ್ಪತ್ತೈದಕ್ಕೂ ಹೆಚ್ಚು ಬಾರಿ ಋಗ್ವೇದದಲ್ಲಿ ಸ್ಮರಿಸಲ್ಪಟ್ಟ ದೇವಿ! ಶಿವಾಲಿಕ್ ಶ್ರೇಣಿಯಲ್ಲಿರುವ ಹರ್-ಕಿ-ಧುನ್ ಎನ್ನುವ ಹಿಮನದಿಯಿಂದ ಜನ್ಮ ತಳೆದ ಪಾವನೆ. ಆಧುನಿಕ ವಿಜ್ಞಾನಕ್ಕೆ ದೊರಕಿದ ಸಾಕ್ಷ್ಯಗಳ ಪ್ರಕಾರ 1300 ಕಿ.ಮೀ. ಉದ್ದಕ್ಕೆ ಹರಿಯುತ್ತಿದ್ದ ನದಿ. ಕಾಲ ಕಳೆದಂತೆ ಸಂಶೋಧನೆ ಹೆಚ್ಚಿದಂತೆ ಅವಳ ಉದ್ದವೂ ಹೆಚ್ಚೀತು! ಕೆಲವೆಡೆ ಹದಿನಾಲ್ಕು ಕಿ.ಮೀ.ಗೂ ಅಧಿಕ ಅಗಲವಿದ್ದಾಕೆ. ಅವಳನ್ನು ದಾಟುವುದೂ ಹರಸಾಹಸವೇ. ಮಳೆಗಾಲದಲ್ಲಿ ಮಾತ್ರವಲ್ಲ ಅವಳದ್ದು ರೌದ್ರ ರೂಪ. ಹಿಮ ಕರಗಿದಾಗಲೂ ಅವಳು ಭೀಕರಳೇ! ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ 75 ಮಂತ್ರಗಳು ಅವಳ ವೈಭವವನ್ನು ಸಾರುತ್ತವೆ. ಯಜುರ್ವೇದ ಮತ್ತು ಅಥರ್ವ ವೇದಗಳಲ್ಲೂ, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಅವಳು ಸ್ತುತಿಸಲ್ಪಟ್ಟಿದ್ದಾಳೆ. ಅವಳು ವೇದಕಾಲೀನ ಜನರ ಕಣ್ಮಣಿ. ಸಪ್ತ ಸಿಂಧು (ಏಳು ಕವಲು) ಎಂದು ಕರೆಯಲ್ಪಟ್ಟ ಲೋಕ ಪಾವನೆ. ಯಮುನೆಯ ಉತ್ತರದಲ್ಲಿ ಇಂದಿನ ಹರ್ಯಾಣ, ಪಂಜಾಬ್, ರಾಜಸ್ಥಾನಗಳ ಮೂಲಕ ಪ್ರವಹಿಸಿ ಭೃಗುಕುಚ್ಛ(ಬಹುಷಃ ಇಂದಿನ ಕಛ್)ದ ಬಳಿ ರತ್ನಾಕರದೊಂದಿಗೆ ಸಂಗಮಿಸುತ್ತಿದ್ದಳಾಕೆ. ಇದು ಉಪಗ್ರಹಗಳು ತೆಗೆದ ಚಿತ್ರದಿಂದಲೂ, ಪುರಾತತ್ತ್ವ ಸಂಶೋಧನೆಗಳು, ಇನ್ನಿತರ ವೈಜ್ಞಾನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ.

          ಇದು 5119ನೇ ಕಲಿ ವರ್ಷ. ಅಂದರೆ ಕ್ರಿ.ಪೂ 3138ರಲ್ಲಿ ಮಹಾಭಾರತ ಯುದ್ಧ ನಡೆಯಿತು. ಇದೇನೂ ಕಟ್ಟು ಕತೆಯಲ್ಲ. ಮಹಾಭಾರತ ಯುದ್ಧದ ಸಮಯದಲ್ಲಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತ. ಅಶ್ವತ್ಥಾಮ ದರ್ಭೆಯನ್ನು ಮಂತ್ರಿಸಿ ಗರ್ಭವನ್ನು ನಿರ್ಮೂಲಿಸಲು ಪ್ರಯೋಗಿಸಿದ ಪ್ರಕರಣ ನೆನಪಿರಬೇಕಲ್ಲಾ? ಪರೀಕ್ಷಿತ ಜನಿಸಿದಾಗ ಸಪ್ತರ್ಷಿ ಮಂಡಲ ಮಘ ನಕ್ಷತ್ರದಲ್ಲಿತ್ತು. ಖಗೋಳಶಾಸ್ತ್ರ ರೀತ್ಯಾ ಅದು ಮತ್ತೆ ಅದೇ ಸ್ಥಾನಕ್ಕೆ ಬರುವುದು 2700 ವರ್ಷಗಳ ಬಳಿಕ. ಹಾಗೆ ಬಂದದ್ದು ಕ್ರಿ.ಪೂ. 438ರಲ್ಲಿ, ಆಂಧ್ರರಾಜರ ಕಾಲದಲ್ಲಿ. ಇನ್ನೂ ಒಂದು ಆಧಾರ ಏನೆಂದರೆ ಕಲಿ ಪ್ರವೇಶಿಸಿದಾಗ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂಬುದು ನಮ್ಮ ಪೂರ್ವಜರು ದಾಖಲಿಸಿದ್ದ ಅಂಶ. ಅಂದು ಚೈತ್ರ ಶುದ್ಧ ಪಾಡ್ಯವೆಂದೂ ಅವರು ದಾಖಲಿಸಿದ್ದಾರೆ. ಖಗೋಳಶಾಸ್ತ್ರಜ್ಞರು ಇಂತಹಾ ಪ್ರಕರಣ ನಡೆದದ್ದು ಕ್ರಿ.ಪೂ. 3102ರ ಫೆಬ್ರವರಿ 20ರಂದು ಎಂದು ದಾಖಲಿಸಿದ್ದಾರೆ. ಮಹಾಭಾರತ ಯುದ್ಧಕಾಲಕ್ಕೆ ಬಲರಾಮನನ್ನು ಯುದ್ಧದಿಂದ ವಿಮುಖನನ್ನಾಗಿ ಮಾಡಲು ಗೋಪ್ರಕರಣವನ್ನು ಹೂಡಿ ಶ್ರೀಕೃಷ್ಣ ಆತನನ್ನು ಪಾಪ ಪ್ರಾಯಶ್ಚಿತ್ತಾರ್ಥ ತೀರ್ಥಯಾತ್ರೆಗೆ ಕಳುಹಿಸುತ್ತಾನಷ್ಟೇ. ಆಗ ರಾಜಸ್ಥಾನದ ವಿನಾಶನ(ಉಪಮಜ್ಜನಾ)ದಲ್ಲಿ ಸರಸ್ವತಿ ಕಣ್ಮರೆಯಾಗಿದ್ದುದನ್ನು ಮಹಾಭಾರತ ದಾಖಲಿಸಿದೆ. ಮಹಾಭಾರತ ಆಕೆಯನ್ನು ವೇದಸ್ಮೃತಿ, ವೇದವತಿ ಎ೦ದು ವರ್ಣಿಸಿದೆ. ಅಂದರೆ ಆಗ ಆಕೆಯದ್ದು ನಿರಂತರ ಹರಿವಾಗಿರದೆ ಅಲ್ಲಲ್ಲಿ ವೇದಸ್ಮೃತಿಯಂತೆ ಇದ್ದಳು ಎನ್ನುವುದೇ ಇದರ ತಾತ್ಪರ್ಯ. ಮಹಾಭಾರತದ ಕಾಲಕ್ಕೆ ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿದ್ದಳು ಆಕೆ. ಸರಸ್ವತಿಯನ್ನು ಸರೋವರಗಳ ಮಾಲೆಯೆಂದು ಕರೆದಿದೆ ಮಹಾಭಾರತ. ಸರಸ್ವತಿ ನದಿಯು ಹೀಗೆ ಲುಪ್ತವಾಗುತ್ತ ಆದ ಸಣ್ಣಸಣ್ಣ ನೀರಿನ ಮೂಲಗಳು ಮುಂದೆ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಬದಲಾದವು. ಇದನ್ನು ಭಾಗವತ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳು ವರ್ಣಿಸಿವೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ಕಣ್ಮರೆಯಾಗುವುದನ್ನು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ “ಸಭ್ಯತೆ, ನಾಗರಿಕತೆಗೆ ಜನ್ಮ ನೀಡಿದ ನದಿ”ಯೆಂದು, “ಅನ್ನವತಿ”, “ಉದಕವತಿ”ಯೆಂದು, ಭಾಷೆ, ಜ್ಞಾನ, ವಿಜ್ಞಾನ, ಕಲೆಗಳ ದೇವಿಯೆ೦ದೂ ಕೊಂಡಾಡಿದ್ದ ವೇದಗಳು ಸರಸ್ವತಿಯ ಕಣ್ಮರೆಯನ್ನು ಉಲ್ಲೇಖಿಸಿಲ್ಲ. ಅಂದರೆ ವೇದಕಾಲದಲ್ಲಿ ಸರಸ್ವತಿ ತುಂಬಿ ನಿರಂತರವಾಗಿ ಹರಿಯುತ್ತಿದ್ದ ಪ್ರಭಾವಿ ನದಿಯಾಗಿದ್ದಳು ಎಂದಾಯಿತು. ಈಗ ವೇದಗಳ ರಚನೆ ಕ್ರಿ.ಪೂ 3138ಕ್ಕಿಂತ ಎಷ್ಟೋ ಹಿಂದಕ್ಕೆ ಹೋಯಿತು.

        ವಿಪರ್ಯಾಸವೆಂದರೆ ಇಂದಿನ ಜನಾಂಗ ಆಧುನಿಕ ವಿಜ್ಞಾನ ಹೇಳಿದ್ದೇ ಸತ್ಯವೆಂದು ನಂಬುವಂತಹ ಶಿಕ್ಷಣ ಪಡೆದಿದ್ದು ರಾಮಾಯಣ, ಮಹಾಭಾರತ, ಪುರಾಣಾದಿಗಳು ಮಾತ್ರವಲ್ಲ ವೇದಗಳನ್ನೂ ಇತಿಹಾಸವೆಂದು ನಂಬದ ಪೀಳಿಗೆ. ಇತಿಹಾಸವನ್ನು ನಮ್ಮ ಪೂರ್ವಜರು ಕಾವ್ಯಗಳ ರೂಪದಲ್ಲಿ ಪೋಣಿಸಿದರು. ವಿಶೇಷವೆಂದರೆ ವೇದಗಳು, ಪುರಾಣಗಳಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಇತಿಹಾಸದ ಎಳೆಯೂ, ಶಕ್ತಿ ಸ್ವರೂಪವಾದ ಮಂತ್ರವೂ, ಮಂತ್ರದ ಮಹಿಮೆಯೂ, ಕಾವ್ಯ ಪ್ರತಿಭೆಯೂ ಕಂಡುಬರುವುದು. ಇದು ಇತ್ತೀಚೆಗೆ ಕೆಲವು ಸಾವಿರ ವರ್ಷಗಳ ಹಿಂದೆ ಬರೆದ ಪುರಾಣಗಳಲ್ಲೂ ಕಂಡು ಬರುವ ಸತ್ಯ. ಮಹಾಭಾರತದ ವಿರಾಟಪರ್ವದಲ್ಲಿ ವರುಣ ಮಂತ್ರ ಅಡಕವಾಗಿದೆ ಎಂದು ಶೃಂಗೇರಿಯನ್ನು ಬೆಳಗಿದ ಅವಧೂತ ಚಂದ್ರಶೇಖರ ಭಾರತೀ ಸ್ವಾಮಿಗಳು ಒಂದು ಕಡೆ ಹೇಳಿದ್ದನ್ನೂ, ಪ್ರಾಯೋಗಿಕವಾಗಿ ಅದನ್ನು ಮಾಡಿ ಬರದಿಂದ ನಲುಗಿದ್ದ ಹಳ್ಲಿಯಲ್ಲಿ ಮಳೆ ಬರಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು. ಹಾಗೆಯೇ ಪಾರಾಯಣಕ್ಕೆ ಯೋಗ್ಯ ಎಂದು ಸರ್ವತ್ರ ಗೌರವ ಪಡೆದುಕೊಂಡ ಎರಡೇ ಎರಡು ಪೌರಾಣಿಕ ಗ್ರಂಥಗಳಲ್ಲೊಂದಾದ ಸಪ್ತಶತೀಯಲ್ಲಿ ಇತಿಹಾಸವೂ, ಕಾವ್ಯವೂ, ಮಂತ್ರವೂ ಅಡಕವಾಗಿರುವುದು ಅದರ ಅಭ್ಯಾಸಿಗಳಿಗೆ ದೃಗ್ಗೋಚರವಾಗುವ ಸತ್ಯ. ವೇದಗಳಲ್ಲೂ ಹೀಗೆಯೇ. ಅಂದರೆ ನಮ್ಮ ಪೂರ್ವಜರ “ಎನ್ ಕೋಡಿಂಗ್” ಬಗೆಗೆ ನಾವು ಹೆಮ್ಮೆ ಪಡಬೇಕಿತ್ತು. ಆದರೇನು ಮಾಡೋಣ? ಮೆಕಾಲೆ ಶಿಕ್ಷಣಕ್ಕೆ ಪತರಗುಟ್ಟಿರುವ ಇಂದಿನ ಪೀಳಿಗೆಗೆ ಅಧ್ಯಯನದ ಆಸೆಯೂ ಇಲ್ಲ, ಇತಿಹಾಸದ ಬಗೆಗೆ ಆಸ್ಥೆಯೂ ಇಲ್ಲ. ಅವರು ನಂಬಬೇಕಾದರೆ ಆ ನಾಗರಿಕತೆಗೆ ಸಂಬಂಧಪಟ್ಟ ಕುರುಹುಗಳು ಸಿಕ್ಕಾಗಲೇ! ಹಾಗಂತ ಪುರಾತತ್ತ್ವ ಸಂಶೋಧನೆಗೆ ಹರಪ್ಪಾ, ಮೊಹೆಂಜೋದಾರೋಗಳಿಗಿಂತ ಪ್ರಾಚೀನ ನಗರಗಳು ಸಿಕ್ಕಿಲ್ಲವೆಂದಲ್ಲ. ಪಾಕಿಸ್ತಾನದ ಮೆಹರ್ ಗಢ್ ಪ್ರಾಂತ್ಯದಲ್ಲಿ ಕ್ರಿ.ಪೂ. 6500ಕ್ಕೆ ಸಂಬಂಧಿಸಿದ ಸಾಮಗ್ರಿಗಳು ಹೊರಬಿದ್ದಿತ್ತು. ಅಲ್ಲಿನ ಜನ ಕೃಷಿ ಮಾಡಿ ಜೀವಿಸುತ್ತಿದ್ದರು ಎನ್ನುವುದು ಇತಿಹಾಸ ತಿರುಚಿದವರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಸಂಗತಿ. ಲುಂಕಾರಂಸಾರ್ನಲ್ಲಿ ದೊರೆತ ಕುರುಹುಗಳು ಕ್ರಿ.ಪೂ. 9,400ರಕ್ಕೆ ಕೊಂಡೊಯ್ದವು.

          ಹರಪ್ಪಾ, ಮೊಹೆಂಜೋದಾರೋಗಳಿಗೆ ಸಿಂಧೂವಿದ್ದಳು. ಆದರೆ ಉಳಿದ ಕಡೆ ಸಿಕ್ಕ ನಗರಗಳು ನದಿಗಳಿಲ್ಲದೆ, ಅದೂ ಥಾರ್ ಮರುಭೂಮಿಯಲ್ಲಿ ಉಳಿದು ಬೆಳೆದಿದ್ದು ಹೇಗೆ? ಆಗ ಕಂಡವಳೇ ಸರಸ್ವತಿ. ಲ್ಯಾಂಡ್ ಸ್ಯಾಟ್, ಸ್ಪಾಟ್ ಉಪಗ್ರಹಗಳಿಗೆ ಸಿಕ್ಕಿದ ಸರಸ್ವತಿಯ ನದಿ ಪಾತ್ರ ಸಂಶೋಧಕರ ಕುತೂಹಲವನ್ನು ಹೆಚ್ಚಿಸಿತು. ಕೆಲವರು ನದಿಯ ಇಕ್ಕೆಲಗಳಲ್ಲಿ ಈ ನಾಗರಿಕತೆಗಳು ಬೆಳೆದಿದ್ದವು ಎಂದು ಊಹಿಸಿದರು. ಆದರೆ ಮಹಾಭಾರತದ ಪ್ರಕಾರ ಸರಸ್ವತಿ ಆಗ ಕಣ್ಮರೆಯಾಗಿದ್ದಳು. ಬಲರಾಮನ ತೀರ್ಥಯಾತ್ರೆಯ ಕಾಲಕ್ಕೆ ಸರಸ್ವತಿ ವಿನಾಶನದಲ್ಲಿ ಅದೃಶ್ಯಳಾಗುತ್ತಿದ್ದಳಲ್ಲಾ. ಅಲ್ಲಿಂದ ಮುಂದೆ ಒಣಗಿದ ಸರಸ್ವತಿಯ ನದೀಪಾತ್ರದಲ್ಲಿ ಸಂಶೋಧಕರು ಸಾಗಿದಾಗ ಅನೇಕ ಅಚ್ಚರಿಗಳು ಕಂಡು ಬಂದವು. ಹೀಗೆ ನಡೆದ ಉತ್ಖನನಗಳಲ್ಲಿ ಸರಸ್ವತಿ ಈ ನಾಗರಿಕತೆಗಳಿಗಿಂತ ಕನಿಷ್ಟ 3000 ವರ್ಷಗಳ ಮೊದಲೇ ಕಣ್ಮರೆಯಾಗಿದ್ದದ್ದು ಕಂಡು ಬಂತು. ಆದರೆ ಈ ನಾಗರಿಕತೆಗಳು ನೀರಿಲ್ಲದೆ ಉಳಿದದ್ದಾದರೂ ಹೇಗೆಂಬ ಸಂಶಯ ಕಾಡುವುದಿಲ್ಲವೇ? ಆ ರಹಸ್ಯವೂ ಸಂಶೋಧನೆಯಿಂದ ಹೊರ ಬಿತ್ತು. ಸರಸ್ವತಿ ಹಿಂದೆ ಹರಿದಿದ್ದ ಜಾಗಗಳಲ್ಲಿನ ಜೌಗು ನೆಲ, ಹಾಗೂ ಪ್ರಬಲವಾದ ಮುಂಗಾರಿನಿಂದಾಗಿ ತುಂಬಿ ಹರಿಯುತ್ತಿದ್ದ ಸರಸ್ವತಿ ನದೀಪಾತ್ರದ ಮೇಲೆ ಅವಲಂಬಿತವಾಗಿ ಆ ನಾಗರಿಕತೆಗಳು ಬದುಕಿದ್ದವು. ಈ ನದೀಪಾತ್ರದಲ್ಲಿ ಬೇರೆ ಬೇರೆ ಕಡೆಗಳಲ್ಲಿನ ಸುಮಾರು ನಲವತ್ತು ಮೀಟರ್ ಕೆಳಗಿನ ಮಣ್ಣಿನ ತುಣುಕುಗಳನ್ನು ಪರಿಶೀಲಿಸಿದಾಗ ಅದು ಹಿಮಾಲಯ ಶ್ರೇಣಿಯಿಂದ ಹರಿದು ಬರುವ ನದಿ ತರುವ ಮಣ್ಣನ್ನು ಪ್ರತಿಬಿಂಬಿಸಿತು. ಆ ಮಣ್ಣಿನ ಕಣಗಳಲ್ಲಿನ ಮೈಕಾ(ಕಾಗೆ ಬಂಗಾರ) ಹಾಗೂ ಝಿರ್ಕಾನ್’ಗಳನ್ನು ಡೇಟಿಂಗ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಅದು ಹೊಂದಾಣಿಕೆಯಾದದ್ದು ಒಂದೇ ನದಿಗೆ; ಅದು ಸಟ್ಲೇಜ್! ಅಲ್ಲಿಗೆ ಅದು ಸರಸ್ವತಿಯೇ ಎನ್ನುವುದು ಖಾತ್ರಿಯಾಯಿತು. ಸಿಂಧೂ, ಸಟ್ಲೇಜ್, ಚೀನಾಬ್, ಝೀಲಮ್, ರಾವಿ,ಜೋಅಬ್ ಹಾಗೂ ಬಿಯಾಸ್’ಗಳೆಂಬ ಸಪ್ತಸಿಂಧೂಗಳು ಉದ್ಭವವಾದದ್ದು ಸರಸ್ವತಿಯಿಂದಲೇ ತಾನೇ. ಅಲ್ಲಿಗೇ ನಿಲ್ಲಲಿಲ್ಲ ಈ ಸಂಶೋಧನೆ. ನಲವತ್ತು ಮೀಟರ್ ಕೆಳಗಿನ ಈ ಮಣ್ಣಿನಲ್ಲಿದ್ದ ಕ್ವಾರ್ಟ್ಜ್ ಹಾಗೂ ಇನ್ನಿತರ ಕಣಗಳ ಮೂಲಕ ವಿಕಿರಣವನ್ನು ಹಾಯಿಸಿದಾಗ ಅದರ ಎಲೆಕ್ಟ್ರಾನ್ಸ್’ಗಳು ಚದುರಿ ಒಟ್ಟಾಗಿ ಒಂದು ಸ್ಥಿರಸಮಯಗಣಕದಂತೆ ಕೆಲಸ ಮಾಡಿ ಅದು ಹಿಂದೆ ಕೊನೆಯ ಬಾರಿಗೆ ಸೂರ್ಯನ ಬೆಳಕಿಗೆ ತೆರೆದಿಟ್ಟ ಸಮಯವನ್ನು ಅಳೆಯುತ್ತದೆ. ಹೀಗೆ ದೊರೆತ ಆ ಮಣ್ಣುಗಳ ಕಣದ ಕಾಲವನ್ನು 4,800 ರಿಂದ 3,900 ವರ್ಷಗಳ ಹಿಂದಕ್ಕೊಯ್ದವು. ಇದರರ್ಥ ಆಗ ಸರಸ್ವತಿ ಹರಿಯುತ್ತಿತ್ತೆಂದಲ್ಲ; ಅದು ಹರಿದು ಹಿಮಾಲಯದಿಂದ ತಂದಿದ್ದ ಮಣ್ಣು ಕೊನೆಯ ಬಾರಿಗೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿದ್ದು ಆಗ ಎಂದು. ಅಂದರೆ ಅದಕ್ಕಿಂತ ಮೂರು ಸಾವಿರ ವರ್ಷಗಳ ಮುಂಚೆಯೇ ಸರಸ್ವತಿ ಒಣಗಿತ್ತು ಎನ್ನುವುದನ್ನು ಈ ಸಂಶೋಧನೆಯಿಂದ ಹೊರಬಿತ್ತು. ಇದು ಸರಸ್ವತಿಯ ಹರಿಯುವಿಕೆಯ ತಾಟಸ್ಥ್ಯವನ್ನು ಕ್ರಿ.ಪೂ 6000ಕ್ಕೆ ಒಯ್ಯಿತು. ಈ ಸಂಶೋಧನೆಯಲ್ಲಿ ದೊರೆತ ಇನ್ನೊಂದು ಅಂಶವೆಂದರೆ ಸರಸ್ವತಿಯ ನದಿ ಪಾತ್ರಗಳಲ್ಲಿ ಸಂಶೋಧನೆಗೆ ಉಪಯೋಗಿಸಿದ ಮಣ್ಣು ಸಣ್ಣ ಸಣ್ಣ ಸರೋವರಗಳದ್ದು ಎಂದು. ಅಲ್ಲಿಗೆ ಸರಸ್ವತಿ ಸರೋವರಗಳ ಮಾಲೆಯೆಂದು ಮಹಾಭಾರತ ಕರೆದದ್ದು ಸತ್ಯವೆಂದು ನಿರೂಪಿತವಾಯಿತು. ಹಾಗೆಯೇ ಮಹಾಭಾರತವನ್ನು ಇತಿಹಾಸವೆಂದು ಪರಿಗಣಿಸಲಾಗದು ಎನ್ನುವವರು ಬಾಯಿ ಮುಚ್ಚುವ ಕಾಲ ಬಂದಿತೆಂದು ಹೇಳಬಹುದು. ಸರಸ್ವತಿ ಈ ಹಿಂದೆ ಸುಮಾರು 15000-8000 ವರ್ಷಗಳ ನಡುವೆ ಗುಪ್ತಗಾಮಿನಿಯಾದಳು; ಆಕೆಯ ಪವಿತ್ರ ಕಣಕಣಗಳು ಇಂದಿಗೂ ಅಂತರ್ಜಲ ರೂಪದಲ್ಲಿ ಅವಳು ಹರಿದ ಭಾಗಗಳಲ್ಲಿ ನೆಲೆಯಾಗಿದ್ದು ಜೀವರಾಶಿಗೆ ಜೀವಸೆಲೆಯೇ ಆಗಿ ಉಳಿದಿದ್ದಾಳೆ ಎಂಬ ಅಂಶವೂ ಈ ಸಂಶೋಧನೆಯಲ್ಲಿ ತೋರಿಬಂತು.

         ಸಿಂಧೂವಿನಿಂದ ಸರಸ್ವತಿಯ ಕಡೆಗೆ ಪ್ರಾಚ್ಯ ಸಂಶೋಧಕರು ಸಾಗುತ್ತಿದ್ದಂತೆ ಹರಪ್ಪಾ, ಮೊಹೆಂಜೋದಾರೋಗಳಿಗಿಂತ ಪ್ರಾಚೀನ ನಗರಿಗಳು ಒಂದರ ಹಿಂದೆ ಒಂದು ಸಿಗುತ್ತಲೇ ಇವೆ. ಸರಸ್ವತಿಯಿಂದ ಪಾಲಿತವಾದ ದೈತ್ಯ ನಗರಿ ರಾಖಿಗಡಿ ಅಥವಾ ರಾಖಿಗರ್ಹಿ. 25 ಲಕ್ಷ ಚದರ ಕಿಮೀಗಳ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದ್ದ ಹರಪ್ಪಾ ನಾಗರಿಕತೆಯ ಮೊದಲ ಹಂತವೆಂದು ಸದ್ಯಕ್ಕೆ ಇತಿಹಾಸಕಾರರಿಂದ ಗುರುತಿಸಲ್ಪಟ್ಟ, 1200 ಎಕರೆಯಲ್ಲಿ ಹಬ್ಬಿರುವ ಅದ್ಭುತ ಪ್ರಾಚೀನ ನಗರಿ. ಅದರ ಅನುಭೂತಿಯನ್ನು ಪಡೆದುಕೊಳ್ಳಲು ನೀವು ಕನಿಷ್ಟ 10000 ವರ್ಷಗಳಿಗಿಂತಲೂ ಹಿಂದಕ್ಕೆ ಸಾಗಬೇಕು. ದೃಶದ್ವತೀಯ ದಡದಲ್ಲಿ ತೊನೆದಾಡುವ ತೆನೆಗಳು, ಜಗತ್ತಿನ ಪ್ರಥಮ ಒಳಚರಂಡಿಯ ವ್ಯವಸ್ಥೆಯುಳ್ಳ ಅಚ್ಚುಕಟ್ಟಾದ ಇಟ್ಟಿಗೆಯ ಹಾಸಿನ ರಸ್ತೆಯಲ್ಲಿ ಸಾಗುವ ಕುದುರೆಗಳ ಖರಪುಟದ ಸದ್ದು, ಪಕ್ಕದಲ್ಲೇ ಕಾಣುವ ಸುಟ್ಟ ಇಟ್ಟಿಗೆಯ, ರಸ್ತೆಯಿಂದ ನಿಗದಿಗೊಳಿಸಿದ ದೂರದಲ್ಲೇ ಕಟ್ಟಿರುವ ಎರಡು – ಮೂರಂತಸ್ತಿನ ಮನೆಗಳು, ಯಜ್ಞಶಾಲೆಯಿಂದ ಹೊರಬರುತ್ತಿರುವ ಸುಗಂಧಭರಿತ ಧೂಮ, ಕೇಳುತ್ತಲೇ ಇರಬೇಕೆನಿಸುವ ವೇದಘೋಷ, ಅದ್ಭುತ ನೀರು ಸರಬರಾಜು ವ್ಯವಸ್ಥೆ, ನೀರಾವರಿ ಕಾಲುವೆಗಳು, ಸುಸಜ್ಜಿತ ಸಾರ್ವಜನಿಕ ಉಗ್ರಾಣ, ಸುಂದರ ವಾಸ್ತುಶಿಲ್ಪವುಳ್ಳ ಕಲ್ಯಾಣಿ, ಬಗೆ ಬಗೆಯ ರತ್ನಹಾರ, ಮಣಿಹಾರಗಳನ್ನು ಧರಿಸಿದ ಲಲನೆಯರ ಕಿಲ ಕಿಲ ನಗು, ಜ್ಯಾಮಿತಿಯ ವಿವಿಧ ಆಕಾರಗಳನ್ನು ಕರಾರುವಕ್ಕಾಗಿ ಬಳಸಿ ಟೆರ್ರಾಕೋಟಾದಿಂದ ತಯಾರಿಸಿದ ನುಣುಪಾದ ಸಿಂಹ, ಚಿರತೆ, ನಾಯಿ, ಕುದುರೆ ಸಹಿತ ವಿವಿಧ ಬೊಂಬೆಗಳು, ಕುಶಲವಸ್ತುಗಳ ತಯಾರಿಕಾ ಘಟಕಗಳು, ರಸ್ತೆಯ ಪಕ್ಕದಲ್ಲೇ ಕಂಡುಬರುವ ಬಗೆಬಗೆಯ ಅಂಗಡಿಗಳು…ಅಬ್ಬಾ ಏನುಂಟು, ಏನಿಲ್ಲ; ಎಂತಹಾ ಶಿಸ್ತು! ಆದಿ ಹರಪ್ಪಾ, ಪ್ರೌಢ ಹರಪ್ಪಾ ನಾಗರಿಕತೆಯ ಒಟ್ಟು ಆರು ಹಂತದ ನಾಗರಿಕತೆಗಳನ್ನು ಈಗಲೂ ದೃಗ್ಗೋಚರಗೊಳಿಸುವ ವಿಸ್ಮಯ ನಗರಿ ರಾಖಿಗರ್ಹಿ. ಇಲ್ಲಿ ದೊರಕಿದ ಅಕ್ಕಿಕಾಳುಗಳಿಗೆ ಸರಸ್ವತಿಯ ನೀರಹನಿಗಳ ಋಣವಿದೆ. ಚೀನಾದಿಂದ ಭಾರತಕ್ಕೆ ಅಕ್ಕಿ ಬಂತು ಎನ್ನುವ ಬೊಗಳೆ ಪಂಡಿತರು ಗಮನಿಸಬೇಕಾದ ಅಂಶ ಇದು. ಬಿರ್ಹಾನದಲ್ಲಿ ದೊರಕಿದ ವಸ್ತುಗಳಂತೂ ಕಾರ್ಬನ್ ಡೇಟಿಂಗ್ ಮಾಡಿದಾಗ ಕ್ರಿ.ಪೂ 7400 ಕಾಲಕ್ಕೆ ಹೋಗಿ ಮುಟ್ಟಿದವು. ಘಗ್ಗರ್ – ಹಕ್ರಾ ನದಿಯೇ ಸರಸ್ವತೀ ಎನ್ನುವುದಕ್ಕೆ ನೈಜ ಸಂಶೋಧಕರಾರಿಗೂ ಅನುಮಾನ ಉಳಿದಿಲ್ಲ; ಭಾರತ ವಿರೋಧಿಗಳನ್ನು ಬಿಟ್ಟು! ಸರಸ್ವತಿ ನಾಗರಿಕತೆಯ ಕುರುಹುಗಳು ಕರ್ನಾಲ್, ಜಿಂದ್, ಸೋಮ್ಜತ್, ರೋಹ್ಟಕ್, ಭಿವಾನಿ, ಗುಡ್ಗಾಂವ್, ಹಿಸ್ಸಾರ್, ಕಪೂರ್ತಲ, ರೋಪಾರ್, ಮಹೇಂದ್ರಗಢ ಮುಂತಾದ ಜಿಲ್ಲೆಗಳಲ್ಲಿ ಕಂಡುಬಂದಿವೆ. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ.

           ವಾಜಪೇಯಿ ಸರಕಾರ ಆರಂಭಿಸಿದ್ದ ಸರಸ್ವತಿಯ ಶೋಧ ಕಾರ್ಯವನ್ನು ಯುಪಿಎ ಸರಕಾರ ನಿಲ್ಲಿಸಿತ್ತು. ಆ ಸರ್ಕಾರದ ಸಚಿವ ಜೈಪಾಲ್ ರೆಡ್ಡಿ “ಸರಸ್ವತಿ ನದಿಯ ಅಸ್ತಿತ್ವವೇ ಇಲ್ಲ’ ಎ೦ದು ಸ೦ಸತ್ತಿನಲ್ಲಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಹರ್ಯಾಣದಲ್ಲಿ ಹಾಗೂ ಕೇಂದ್ರದಲ್ಲಿ ಮೋದಿ ನೇತೃತ್ವದ ಭಾಜಪಾ ಸರಕಾರ ಬಂದ ಮೇಲೆ ಸರಸ್ವತಿಯ ಶೋಧಕ್ಕೆ ಮರುಜೀವ ಸಿಕ್ಕಿದೆ. ಸರಸ್ವತಿ ಹಳೆಯ ಹರಿವಿನ ಪಥದಲ್ಲಿ ಭವ್ಯ ಸರಸ್ವತಿ ಮಂದಿರವನ್ನು ಹೊಂದಿರುವ ಹರ್ಯಾಣದ ಯಮುನಾನಗರ ಜಿಲ್ಲೆಯ ಮುಸ್ತಫಾಬಾದನ್ನು ಸರಸ್ವತಿ ನಗರವೆ೦ದು ಬದಲಿಸಿಲಾಗಿದೆ. ಈಗ ಪ್ರಾಚ್ಯ ಸಂಶೋಧನ ಘಟಕಗಳಿಗೆ ಸುಗ್ಗಿಯ ಕಾಲ. ಕೇಂದ್ರ ಸರಕಾರದಿಂದ ಉನ್ನತ ಮಟ್ಟದ ಸಮಿತಿ, ಹರಿಯಾಣ ಸರಕಾರದಿಂದ “ಹರಿಯಾಣ ಸರಸ್ವತಿ ಪಾರ೦ಪರಿಕ ಅಭೀವೃದ್ಧಿ ಮ೦ಡಳಿ”, ಸರಸ್ವತಿ ನದಿ ಪುನರುತ್ಥಾನ ಉದ್ದೇಶದಿ೦ದ ರಾಜಸ್ಥಾನ ಸರ್ಕಾರದಿಂದ “ರಾಜಸ್ಥಾನ ರಿವರ್ ಬೇಸಿನ್ ಅ೦ಡ್ ವಾಟರ್ ರಿಸೋರ್ಸಸ್ ಪ್ಲ್ಯಾನಿ೦ಗ್ ಅಥಾರಿಟಿ’ಗಳ ಸ್ಥಾಪನೆಯಾಗಿದೆ. ಹರಿಯಾಣ, ರಾಜಸ್ಥಾನಗಳಲ್ಲಿ ಉತ್ಖನನ ಭರದಿಂದ ನಡೆಯುತ್ತಿದೆ. ಹತ್ತುಸಾವಿರ ವರ್ಷಗಳ ಹಿಂದಿನ ರಾಖಿಗಢಿಯಂತೂ ಈಗ ಸಂಶೋಧನೆಯ ಕೇಂದ್ರ ಬಿಂದು. ಯಮುನಾ ನಗರ ಜಿಲ್ಲೆಯಲ್ಲಿ ಸರಸ್ವತಿ ಹಿಂದೆ ಹರಿದ ಜಾಗದಲ್ಲಿ ಇತ್ತೀಚೆಗೆ ಮತ್ತೆ ನೀರ ಹರಿವು ಕಾಣಿಸಿಕೊಂಡಿತ್ತು. ಹಾಗಾಗಿ ಸರಸ್ವತಿ ಮತ್ತೆ ಹುಟ್ಟುವ ನಿರೀಕ್ಷೆಗಳು ಗರಿಗೆದರಿದವು. ವಿಶ್ವದ ಮೊದಲ, ಅತ್ಯುತ್ತಮ, ಸುಸಂಸ್ಕೃತ, ಸುಸಜ್ಜಿತ ನಾಗರಿಕತೆಯ ತಾಯಿ ಮತ್ತೊಮ್ಮೆ ಇತಿಹಾಸ ಸೃಷ್ಟಿಗೆ ಮುಂದಾಗಿದ್ದಾಳೆಯೇ? ಅದಕ್ಕೆ ಸ್ವಾರ್ಥಿಗಳಾದ ಇಂದಿನ ಮಾನವರು ಅವಕಾಶ ಕೊಡುವರೇ ಎನ್ನುವುದನ್ನು ಕಾಲವೇ ಹೇಳಬೇಕು.

               ನಮ್ಮ ಪೂರ್ವಜರ ಕಾಲಗಣನೆಯ ಪ್ರಕಾರ ದ್ವಾಪರಯುಗದ ಅವಧಿ 8,64,000 ವರ್ಷಗಳು. ತ್ರೇತೆಯದ್ದು 12,96,000. ಕೃತಯುಗದ್ದು 17,28,000 ವರ್ಷಗಳು. ಇದೇನು ಬಾಯಿಗೆ ಬಂದಂತೆ ತುರುಕಿದ ಸಂಖ್ಯೆಗಳಲ್ಲ. ಈ ರೀತಿಯಾಗಿ ಮಹಾಯುಗಗಳನ್ನು ಒಡಗೂಡಿ ನಮ್ಮ ಪೂರ್ವಜರು ಲೆಕ್ಕ ಹಾಕಿರುವ ಬ್ರಹ್ಮಾಂಡದ ಆಯುಷ್ಯ, ಆಧುನಿಕ ವಿಜ್ಞಾನದ ಬ್ರಹ್ಮಾಂಡದ ಆಯುಷ್ಯದ ಲೆಕ್ಕಾಚಾರಕ್ಕೆ ಅತ್ಯಂತ ಸಮೀಪವಾಗಿದೆ. ಆ ನಿಟ್ಟಿನಲ್ಲಿ ನೋಡಿದಾಗ ವೇದಕಾಲೀನ ನಾಗರಿಕತೆ ಎಷ್ಟು ಹಳೆಯದ್ದು. ಹಾಗಾಗಿ ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಬಗೆದಷ್ಟು ವೇದ ಕಾಲೀನ ನಾಗರಿಕತೆಯ ಕಾಲ ಹಿಂದೆ ಹೋಗುತ್ತಲೇ ಇರುತ್ತದೆ. ಹಾಗೆ ನೋಡಿದರೆ ಆಧುನಿಕ ವಿಜ್ಞಾನ ಶೋಧಿಸಿದ್ದು ಎಷ್ಟು ಅತ್ಯಲ್ಪ! ಸರಸ್ವತಿಯ ಹರಿವಿನ ಮೊದಲ ಬಿಂದುಗಳನ್ನು ಶೋಧಿಸಲು ಇನ್ನೆಷ್ಟು ಸಂಶೋಧನೆಗಳು ನಡೆಯಬೇಕೋ? ಸರಸ್ವತಿಯ ಅನುಗ್ರಹವಿಲ್ಲದೆ ಅದು ಸಾಧ್ಯವಿದೆಯೇ? ಅದಕ್ಕಿಂತಲೂ ಮುಖ್ಯವಾಗಿ ಐತಿಹಾಸಿಕ ಸಂಶೋಧನೆಗಳು ಮತೀಯ ಹಾಗೂ ರಾಜಕೀಯ ಮರ್ಜಿಗೆ ಒಳಗಾಗದೆ ಇದ್ದರೆ ಮಾತ್ರ ಅದು ಸಾಧ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!