ಅಂಕಣ

ಅರಸುವುದಿದ್ದರೆ ಅರಸು, ನಿನ್ನೊಳಗಿಹ ಸಾಕ್ಷಾತ್ಕರಿಸು !

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೧

 

ಮರೆತಿಹನೆ ಬೊಮ್ಮ? ಮರೆತಿಲ್ಲ ; ಮರೆತವೊಲಿಹನು |

ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||

ಅರಸಿಕೊಳುವವೊಲಿಹುದು ; ದೊರೆತವೋಲ್ ತೋರೆ ಸುಖ |

ದೊರೆವವರೆಗಾಯಸವೊ- ಮಂಕುತಿಮ್ಮ || ೦೮೧ ||

 

‘ನಮ್ಮನ್ನೆಲ್ಲ ಸೃಷ್ಟಿ ಮಾಡಿದ್ದು ಪರಬೊಮ್ಮ ಎಂದಾದ ಮೇಲೆ ನಮ್ಮನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯೂ ಅವನದೇ ತಾನೆ? ಹಾಗಿದ್ದ ಮೇಲೆ ಇಲ್ಲೇಕೆ ಇಷ್ಟೊಂದು ಕಷ್ಟ, ಕಾರ್ಪಣ್ಯ, ದುಃಖ, ದುರಿತ, ನೋವು, ಬವಣೆಗಳ ಹಾವಳಿಗಳನು ಕಾಡಲು ಬಿಟ್ಟ? ಸೃಜಿಸಿಯಾದ ಮೇಲೆ ತನ್ನ ಸೃಷ್ಟಿಯನ್ನೆ ಮರೆತುಬಿಟ್ಟನೆ ಹೇಗೆ?’ ಎಂದೆಲ್ಲಾ ಅನುಮಾನ ಬರುವುದು ಸಹಜವೆ. ಮಂಕುತಿಮ್ಮನಿಗೂ ಅದೇ ಅನುಮಾನ ಎದುರಾದಾಗ ಅದಕ್ಕುತ್ತರವೆಂಬಂತೆ ಮೂಡಿದ ಕಗ್ಗದ ಸಾಲುಗಳಿವು.

 

ಮರೆತಿಹನೆ ಬೊಮ್ಮ? ಮರೆತಿಲ್ಲ ; ಮರೆತವೊಲಿಹನು |

ನಿಜಕ್ಕೂ ತನ್ನ ಸೃಷ್ಟಿಯನ್ನು ತಾನೇ ನಿರ್ಲಕ್ಷಿಸಿ ಮರೆತುಬಿಟ್ಟಿರುವನೇ ಬ್ರಹ್ಮ? ಖಂಡಿತಾ ಇಲ್ಲ; ಕೇವಲ ‘ಮರೆತಿಹನು’ ಎಂದೆನಿಸುವ ಹಾಗೆ ಇರುವನಷ್ಟೆ; ನೋಡುವವರ ಕಣ್ಣಿಗೆ ನಿಜಕ್ಕು ಮರೆತಿಹನೇನೊ ಎನ್ನುವ ಸಂಶಯ ಬರುವಂತೆ ನಟಿಸಿದ್ದಾನಷ್ಟೆ. (ಮರೆತವೊಲಿಹನು = ಮರೆತ ರೀತಿಯಲಿಹನು)

 

ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||

‘ಹಾಗಿದ್ದರೆ, ಮರೆತಿಲ್ಲವೆಂದು ಅಷ್ಟು ಖಚಿತವಾಗಿ ಹೇಗೆ ಹೇಳುವುದು? ಹಾಗಿದ್ದ ಮೇಲೆ ಯಾಕೆ ಯಾರಿಗು ಕಾಣಿಸಿಕೊಳ್ಳುತ್ತಿಲ್ಲ?’ ಎನ್ನುವ ಪ್ರಶ್ನೆಗೆ ಉತ್ತರ ಈ ಮೇಲಿನ ಸಾಲಿನಲ್ಲಿದೆ. ಬೊಮ್ಮ ತನ್ನ ನಿಜರೂಪದಲ್ಲಿದ್ದರೆ ತಾನೆ ಎಲ್ಲರ ಕಣ್ಣಿಗೆ ಬೀಳಲು ಸಾಧ್ಯ? ಅವನು ಜಗದ ಪ್ರತಿ ಜೀವದಲ್ಲು (ಜೀವಾಕೃತಿಯ ಜಗದಿ) ತನ್ನನ್ನೆ ಧರಿಸಿಕೊಂಡು (ಅವನ್ನು ತನ್ನದೆ ಪ್ರತಿರೂಪವಾಗಿಸಿ) ಅಸ್ತಿತ್ವದಲ್ಲಿದ್ದಾನೆ. ಪ್ರತಿ ಜೀವಿಯಲ್ಲು ಆ ಪರಮಾತ್ಮನಿದ್ದಾನೆಂಬುದನ್ನೆ ಮತ್ತೊಂದು ರೀತಿಯಲ್ಲಿ ಹೇಳುವ ಸಾಲಿದು.

 

ಅರಸಿಕೊಳುವವೊಲಿಹುದು ; ದೊರೆತವೋಲ್ ತೋರೆ ಸುಖ |

ಆಯಿತು, ಪ್ರತಿ ಜೀವಿಯಲ್ಲು ತನ್ನ ರೂಪಧಾರಣೆಯ ಕುರುಹಿಟ್ಟಿದ್ದಾನೆಂದೆ ಒಪ್ಪಿಕೊಂಡರು, ತದನಂತರ ಕಾಡುವ ಪ್ರಶ್ನೆ : ಅದನ್ನು ಸಂಶಾಯಾತೀತವಾಗಿ ಸಾಧಿಸಿ ತೋರುವ ಬಗೆ ಹೇಗೆ? ಅವನ ಅಸ್ತಿತ್ವವನ್ನು ಕಾಣುವ ದಾರಿಯಿದೆಯೆ? ಎನ್ನುವ ಪ್ರಶ್ನೆಗೆ ಉತ್ತರ ಮುಂದಿನ ಸಾಲು. ಅರಸಿಕೊಳುವವೊಲಿಹುದು – ಆ ಕಾಣುವ ಬಗೆ ನಾವು ಆರಿಸಿಕೊಳುವ ಬಗೆಯಲಿಹುದಂತೆ. ಭಕ್ತಿ ಮಾರ್ಗವೊ, ಆಧ್ಯಾತ್ಮಿಕವೊ, ತಪಜಪ ಸಾಧನೆಯೊ, ಅಂತರಾತ್ಮ ಶೋಧನೆಯೊ – ಒಟ್ಟಾರೆ ನಾವು ಆರಿಸಿಕೊಂಡ ಮಾರ್ಗದ ಮೇಲೆ ನಾವೆಷ್ಟು ಕಾಣಬಹುದು (ಗಳಿಸಬಹುದು) ಎನ್ನುವುದು ನಿರ್ಧರಿಸಲ್ಪಡುತ್ತದೆ.  ಶ್ರಮಕ್ಕೆ ತಕ್ಕಂತೆ ಪ್ರತಿಫಲ ಎನ್ನುವ ಹಾಗೆ ಸಾಧನೆಯ ಕಾಠಿಣ್ಯತೆಯನುಸಾರ ಫಲ ಸಿದ್ದಿಸುತ್ತದೆ. ಆದರೆ ಆ ದಾರಿ ಸುಲಭದ ದಾರಿಯಲ್ಲ; ಅಷ್ಟು ಸುಲಭದಲ್ಲಿ  ಅವನನ್ನು ಕಾಣಲು ಸಾಧ್ಯವಾಗದು. ಆದರೆ ಪಡಬೇಕಾದ ಪರಿಶ್ರಮ ಪಟ್ಟರೆ ತದನಂತರ ಕಾಣಿಸಿಕೊಳ್ಳುತ್ತಾನೆ (ದೊರಕುತ್ತಾನೆ). ಆ ನಂತರವಷ್ಟೆ ಆ ದೊರಕಿದ ‘ಅದ್ಭುತ ಸುಖದ’ (ಸಾರ್ಥಕತೆಯ ಭಾವದ) ಅರಿವಾಗುತ್ತದೆ. (ದೊರೆತವೋಲ್ ತೋರೆ ಸುಖ = ದೊರೆತಾದ ನಂತರ ಕಾಣಬಹುದಾದ ಸುಖ, ಪರಮಾನಂದ).

 

ದೊರೆವವರೆಗಾಯಸವೊ- ಮಂಕುತಿಮ್ಮ ||

ಆದರೆ ಆ ದೊರಕುವಿಕೆಯ ಮಾರ್ಗ ಸುಲಭದ್ದಲ್ಲವೆಂದು ಈ ಮೊದಲೆ ಹೇಳಿಯಾಯ್ತಲ್ಲ? ಆ ದುರ್ಗಮ ಹಾದಿಯಲ್ಲಿ ದಣಿದು ದೇಕುತ್ತ, ಬಳಲುತ್ತ ನಡೆದಿದ್ದರು, ಪಟ್ಟು ಬಿಡದೆ ಸಾಗುವ ಛಲವಿದ್ದರೆ ಆ ಆಯಾಸವೆಲ್ಲ ಕೇವಲ ಗಮ್ಯ ತಲುಪುವ ತನಕ ಮಾತ್ರ. ದೊರಕಿದ ನಂತರದ ಪರಮಾನಂದದಲ್ಲಿ ಆ ಆಯಾಸವೆಲ್ಲ ಒಂದೇ ಏಟಿಗೆ ಪರಿಹಾರವಾಗಿಬಿಡುತ್ತದೆ. ಆ ದಿವ್ಯಾನುಭೂತಿಯಲ್ಲಿ ಲೌಕಿಕ ಜಗದಿಂದ ಅಲೌಕಿಕ ಜಗಕ್ಕೆ ಪಯಣಿಸಲು ಸಾಧ್ಯವಾಗುತ್ತದೆ – ಬೊಮ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ.

 

ಈ ಕಗ್ಗದ ಹಿನ್ನಲೆಯಲ್ಲಿ ಎಲ್ಲ ಜೀವಿಗಳಲ್ಲು ಭಗವಂತನಿಹನೆಂಬ ಅಂಶದ ಸೂಕ್ಷ್ಮ ಗ್ರಹಿಕೆ, ಅನುಮೋದನೆಯಿದೆ. ಅದನ್ನು ಕಾಣಲು ಹಿಡಿಯಬೇಕಾದ ಮಾರ್ಗದ ಇಂಗಿತವಿದೆ. ಜೊತೆಗೆ ಅದು ಸುಲಭ ಸಾಧ್ಯವಿಲ್ಲವೆಂಬ ಎಚ್ಚರಿಕೆಯೂ ಇದೆ. ಸಾಧ್ಯವಾಗಿಸಿಕೊಂಡರೆ ಸಿದ್ಧಿಸುವ ಅದ್ಭುತ ಪರಮಾನಂದದ ಆಮಿಷವೂ ಇದೆ.

 

ಇದೆಲ್ಲದರ ಜೊತೆಗೆ ಅನೇಕ ಕಗ್ಗಗಳಲ್ಲಿ ಪದೆ ಪದೆ ಕಾಣಿಸಿಕೊಳ್ಳುವ, ಪರಬ್ರಹ್ಮದ ಅಸ್ತಿತ್ವಕ್ಕಾಗಿ ನಡೆಸುವ ಹುಡುಕಾಟದ ಕುರುಹುಗಳು ಇಣುಕುತ್ತವೆ. ಮತ್ತು ಸೂಚ್ಯವಾಗಿ ಆ ಬೊಮ್ಮ ಬೇರೆಲ್ಲೂ ಇಲ್ಲ, ಪ್ರತಿ ಜೀವಿಯ ಒಳಗೆ (ನಮ್ಮಲ್ಲೆ) ಅಂತರ್ಗತವಾಗಿರುವ ಕಾರಣ ಅಗೋಚರನಾಗಿದ್ದಾನೆಂಬ ಸುಳಿವು ನೀಡುತ್ತದೆ; ಹುಡುಕುವುದಿದ್ದರೆ ನಿನ್ನೊಳಗೆ ಹುಡುಕು ಎನ್ನುವ ಸಂದೇಶವನ್ನು ನೀಡುತ್ತದೆ.  ಹೀಗಾಗಿ, ಈ ಕಗ್ಗದಲ್ಲಿಯೂ ಇಳಿದಷ್ಟೂ ಆಳ, ಮೊಗೆದಷ್ಟೂ ಮಾಹಿತಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!