ಅಂಕಣ

ಹಾಸಿಗೆ, ಮಡಿ, ಮೈಲಿಗೆ ಮತ್ತು ದೊಣ್ಣೆ ಹಿಡಿದವನ ಕೋಣ

ಬೀದರ್ ಜಿಲ್ಲೆಯ ಮಾಣಿಕ್ ನಗರದ ಸಂಸ್ಥಾನದಲ್ಲಿ ನಾನು ಐದು ವರ್ಷ ಅಧ್ಯಾಪಕ ಆಗಿ ಕೆಲಸ ಮಾಡಿದ್ದೆ. ಅಲ್ಲಿ ಹೆಚ್ಚು ಮಹಾರಾಷ್ಟ್ರದಿಂದ ಬಂದ ವಿದ್ಯಾರ್ಥಿಗಳೇ ಇದ್ದರು. ಮಹಾರಾಷ್ಟ್ರದಲ್ಲಿ ಅಧ್ಯಾಪಕರನ್ನು ಗುರೂಜಿ ಅನ್ನೋದು ಸಾಮಾನ್ಯ. ಸ್ಕೂಲ್ ಮಾಸ್ಟರ್’ಗಳನ್ನೂ ಅಲ್ಲಿ ಹಾಗೆಯೇ ಕರೆಯುತ್ತಾರೆ. ಅಲ್ಲಿ ನನ್ನ ಕೈಯಲ್ಲಿ ಏಟು ತಿಂದು ಪಾಠ ಕಲಿತ ಹುಡುಗರು ಸುಮಾರು ಜನ ಫೇಸ್’ಬುಕ್ಕಲ್ಲಿ ಇದ್ದಾರೆ. ಅವರು ಕೆಲವೊಮ್ಮೆ ನನ್ನ ಪೋಸ್ಟ್ ಗಳಿಗೆ ಕಮೆಂಟ್ ಮಾಡುವಾಗ “ಗುರೂಜಿ” ಅಂತಲೇ ಸಂಬೋಧಿಸುತ್ತಾರೆ. ಅದನ್ನು ನೋಡಿ ನನ್ನ ವಿದ್ಯಾರ್ಥಿಗಳು ಅಲ್ಲದ ಕೆಲ ಕನ್ನಡಿಗರೂ ಗುರೂಜಿ, ಗುರೂಜಿ ಅನ್ನೋಕೆ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ ಟಿವಿ ಚಾನಲ್ ಗಳು ಬಂದಮೇಲೆ ಗುರೂಜಿ ಅನ್ನೊ ಸಂಬೋಧನೆಯ Reputation ಬದಲಾಗಿದೆ. ನಾನು ಕನ್ನಡದ ಗುರೂಜಿ ಅಲ್ಲ ಅಂತ ಅನೇಕರಿಗೆ ಹೇಳಿ ಹೇಳಿ ಸಾಕಾಯ್ತು.

ಇರಲಿ, ಇದೆಲ್ಲ ಯಾಕೆ ಹೇಳಿದೆ ಎಂದರೆ ನನ್ನ ಹಳೆಯ ವಿದ್ಯಾರ್ಥಿಗಳಲ್ಲಿ ಅನೇಕರು ಅನೇಕ ರೀತಿಯ ಉದ್ಯೋಗ ಮಾಡುತ್ತಿದ್ದಾರೆ. ಕೆಲವರು ಮುಂಬೈ ಹೈದರಾಬಾದ್ ಇತ್ಯಾದಿ ಕಡೆ ಪುರೋಹಿತರೂ ಆಗಿದ್ದಾರೆ. ಅವರಲ್ಲಿ ಒಬ್ಬ ಹುಡುಗ ನಿನ್ನೆ ಫೇಸ್ ಬುಕ್ಕಲ್ಲಿ ಫೋಟೋ ಹಾಕಿದ್ದ. ಸ್ನಾನ ಮಾಡಿ, ಮಡಿ ಉಟ್ಕೊಂಡು, ಮೈತುಂಬ ಭಸ್ಮ ಬಳಿದುಕೊಂಡು,  ಹಾಸಿಗೆಯ ಮೇಲೆ ಸ್ಟೈಲ್ ಆಗಿ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದ.

ಯಾಕೋ ಮೂರ್ಖ, ಹಾಸಿಗೆಯ ಮೇಲೆ ಕುಳಿತಿದ್ದಿಯಾ? ಬುದ್ಧಿ ಎಲ್ಲಿಟ್ಟಿದ್ದಿಯೂ? ಅಂತ ಕೇಳಿದ್ದಕ್ಕೆ, ತಕ್ಷಣ ಅಂತ ಫೋನ್ ಮಾಡಿ ತಪ್ಪಾಯ್ತು ಗುರೂಜಿ ಅಂದು ಮಾತಾಡಿದ. ಫೋನ್’ನಲ್ಲಿ ಅವನು ನೀಡಿದ ಸ್ಪಷ್ಟನೆ ಏನಂದ್ರೆ “ನೀವು ಪಾಠಶಾಲೆಯಲ್ಲಿ ಮುಂಜಾನೆ ಎದ್ದ ಕೂಡಲೇ ಹಾಸಿಗೆ ಮಡಚಿ ಇಟ್ಟು, ರಾತ್ರಿ ಊಟ ಮುಗಿಯುವ ವರೆಗೆ ಮತ್ತೆ ಹಾಸಿಗೆ ಮುಟ್ಟಬಾರದು ಅಂತ ಕಲಿಸಿದ್ದು ನಿಜ. ಆದರೆ ಮನೆಯಲ್ಲಿ ಆ ಅಭ್ಯಾಸ ಉಳಿದಿಲ್ಲ. ಹೊರಗೆ ಹೋದಲ್ಲಿಯೂ ಇವೆಲ್ಲ ಪಾಲಿಸಲಿಕ್ಕೆ ಆಗುವುದಿಲ್ಲ. ಹಾಗೆ ಮಾಡಬಾರದು ಅಂತ ಗದರಿಸುವವರು, ಅಥವಾ ಹಾಗೆ ಮಾಡಿದ್ದಕ್ಕೆ ಅಪಮಾನಿಸುವವರೂ  ಇರೋದಿಲ್ಲ”

ಸಾಮಾಜಿಕ ಅಪಮಾನವೇ ಹೆಚ್ಚಿನ ಬಾರಿ ವೈಯಕ್ತಿಕ ಸದಾಚಾರವನ್ನು ಅನಿವಾರ್ಯ ಮಾಡುತ್ತವೆ ಅನ್ನೋದು ಸಾರ್ವಕಾಲಿಕ ಸತ್ಯ.

ಒಬ್ಬರ ವಿಷಯದಲ್ಲಿ ಇನ್ನೊಬ್ಬರು ಮೂಗು ತೂರಿಸಬಾರದು ಅನ್ನುವ ಈ ಕಾಲದಲ್ಲಿ ಆ ಪರಿಸ್ಥಿತಿ ಉಳಿದಿಲ್ಲ. ಇನ್ನು ಸದಾಕಾಲ ನಮಗಿಂತ ಹೆಚ್ಚು ಸದಾಚಾರಿ ಮತ್ತು ವಿವೇಕಿ ಜನರ ಜೊತೆಗೆ (ಅಂದರೆ ಸತ್ಸಂಗದಲ್ಲಿ) ಇದ್ದಾಗ, ಹಿರಿಯರು  ಏನಂದುಕೊಳ್ತಾರೋ ಅನ್ನೋ ಭಯ, ಅಥವಾ ಆರಾಧನಾ ಭಾವದಿಂದ ಮಾಡುವ ಅನುಕರಣೆ- ಇವು ಸದಾಚಾರಕ್ಕೆ ಕಾರಣ ಆಗುತ್ತವೆ.  ಈಗ ಆ ಸಂದರ್ಭಗಳೂ ಉಳಿದಿಲ್ಲ. ಹೆಚ್ಚು ಹೆಚ್ಚು ಪ್ರೈವಸಿ, ಹೆಚ್ಚು ಹೆಚ್ಚು ಭ್ರಷ್ಟತೆಗೆ ಅವಕಾಶ ಮತ್ತು ಪ್ರೇರಣೆ ನೀಡುತ್ತದೆ.

ಇದೆಲ್ಲ ಹೋಗ್ಲಿ ಅತ್ಲಾಗೆ. ಈ ಹಾಸಿಗೆ ಮೇಲೆ ಕುತ್ಕೊಂಡ್ರೆ ಏನು ಪ್ರಪಂಚ ಮುಳುಗಿ ಹೋಗುತ್ತಾ?

ಪ್ರಪಂಚ ಮುಳುಗಿ ಹೋಗೋದಿಲ್ಲ. ಆದರೆ ಸ್ನಾನದಿಂದ ಯಾವ ಪ್ರಯೋಜನ ಆಗಿರುತ್ತೋ, ಅದು ವ್ಯರ್ಥ ಆಗುತ್ತದೆ. ಸ್ನಾನ ಮಾಡೋದು ಶುಭ್ರತೆಗಾಗಿ. ಬೆಡ್ ಕೂಡ ಶುಭ್ರವಾಗಿಯೇ ಇರುತ್ತೆ ನಮ್ಮ ಮನೆಯಲ್ಲಿ.

ಇರಬಹುದು. ಆದರೆ ಸ್ನಾನವು ಬರೀ ಶುಭ್ರತೆಗಾಗಿ ಅಲ್ಲವಲ್ಲ?

ಬರೀ ಶುಭ್ರತೆಗಾಗಿ ಆಗಿದ್ದರೆ, ಅದನ್ನು “ಪ್ರಕ್ಷಾಳನೆ” ಅಂತ ಕರೀತಿದ್ರು.

ಪ್ರಕ್ಷಾಳನ ಅಂದ್ರೆ ತೊಳೆಯೋದು ತಾನೇ?

ಬರೀ ತೊಳೆದು ಶುಭ್ರ ಮಾಡೋದು ಆಗಿದ್ರೆ ಅದಕ್ಕೆ ಸ್ನಾನ ಅಂತ ಯಾಕೆ ಕರೀತಿದ್ರು?

“ಸ್ನಾನ”ಕ್ಕೆ ಬೇರೆಯೇ ಅರ್ಥ. “ಪ್ರಕ್ಷಾಳನೆ”ಗೆ ಬೇರೆಯೇ ಅರ್ಥ ಅಲ್ವಾ?

“ಭಸ್ಮಚ್ಛನ್ನ:, ಭಸ್ಮಶಯ್ಯಾನಃ” ಅಂತ ಒಂದು ಮಾತಿದೆ.  ಮಲಗುವಾಗ ಮೈ ಮೇಲೆ ಇರುವ ಭಸ್ಮ, ಕುಂಕುಮ ಇವೆಲ್ಲ ಒರೆಸಿಕೊಂಡು ಶುಭ್ರವಾಗಿ ಮಲಗಬೇಕು ಅಂತ ನಿಯಮ.

ಏಕೆಂದರೆ ಸ್ನಾನ ಮಾಡುವುದು ಮತ್ತು ಭಸ್ಮ ಹಚ್ಚಿಕೊಳ್ಳುವುದು ಶರೀರದ ಪ್ರಾಣಮಯ ಕೋಶ ಉದ್ದೀಪನೆಗೊಳ್ಳಲಿ ಅನ್ನುವ ಉದ್ದೇಶದಿಂದ. ಕುಂಕುಮ ಆಜ್ಞಾ ಚಕ್ರದ ಉದ್ದೀಪನೆಗೆ. ಅವೆಲ್ಲ ಬರೀ symbolic ಅಲ್ಲ.

ನಿದ್ದೆ ಮಾಡುವಾಗ ಶರೀರದ ಪ್ರಾಣಮಯ ಕೋಶ recharge mode ನಲ್ಲಿ ಇರುತ್ತೆ. ಹಾಗಾಗಿಯೇ ನಿದ್ದೆ ಮುಗಿದ ಕೂಡಲೇ ಹೆಚ್ಚು ಎನರ್ಜಿ ಅನುಭವಕ್ಕೆ ಬರೋದು. ನಿದ್ದೆ ಮಾಡುವ ಜಾಗ ಮತ್ತು ಬಟ್ಟೆ ಇವೆಲ್ಲ ಆ ಸಮಯದಲ್ಲಿ ಶರೀರದ ಸಂಪರ್ಕದಲ್ಲಿ ಇರೋದ್ರಿಂದ ತಮಸ್ಸು ಅವುಗಳಲ್ಲಿ ತುಂಬಿರುತ್ತೆ. ತಮಸ್ಸು ಅಂದ್ರೆ lethargy ಅಂತ ಸಧ್ಯಕ್ಕೆ ಅಂದುಕೊಳ್ಳೋಣ.

ಸ್ನಾನ, ಶುಭ್ರ ಅಥವಾ ಮಡಿ ವಸ್ತ್ರ, ಭಸ್ಮ ಧಾರಣೆ ಇವೆಲ್ಲ ಆ ತಮಸ್ಸನ್ನು ಪೂರ್ತಿಯಾಗಿ ಕಳೆದು ಪ್ರಾಣಮಯ ಕೋಶವನ್ನು fully active mode ಗೆ ತಂದುಕೊಳ್ಳುವ ಪ್ರಯತ್ನಗಳು.

ಹಾಗೆ ಮಾಡಿದಮೇಲೆ ಮತ್ತೆ ಹೋಗಿ ಆ ತಮಸ್ಸು ತುಂಬಿದ ಹಾಸಿಗೆಯ ಮೇಲೆ ಕುಳಿತರೆ, ಅಲ್ಲಿಯವರೆಗೆ ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗಾಗಲಿಲ್ಲವೇ?

ಅದಕ್ಕೇ ಹಾಸಿಗೆಯನ್ನು ರಾತ್ರಿ ಆಗುವವರೆಗೆ ಮುಟ್ಟಬಾರದು ಅನ್ನೋದು. ರಾತ್ರಿಯ ವರೆಗೆ ಯಾಕೆ ಅಂದ್ರೆ ಮೂರೂ ಸಂಧ್ಯಾ ಕಾಲದಲ್ಲಿ ಮನುಷ್ಯ alert ಆಗಿರಬೇಕು. ಸತ್ವದಿಂದ ಕೂಡಿ ಪ್ರಾಣಮಯ ಕೋಶ vibrant ಆಗಿ ಇರಬೇಕು. ಏಕೆಂದರೆ ಎಚ್ಚರವೇ ಜೀವನ. ನಿದ್ದೆಯೇ ಮರಣ. ಎಷ್ಟು ಹೆಚ್ಚು ತೀವ್ರ ಎಚ್ಚರವೋ ಅಷ್ಟು ತೀವ್ರ ಜೀವನ.

ಅನ್ನಮಯ ಕೋಶ, ಪ್ರಾಣಮಯ ಕೋಶ ಇವೆರಡರ ನಂತರ ಇರುವುದು ಮನೋಮಯ  ಕೋಶ. ಪ್ರಾಣಕೋಶ ಎಷ್ಟು ಎಚ್ಚರ ಇದೆಯೋ ಅದಕ್ಕೆ ತಕ್ಕಂತೆ ಮನೋಮಯ ಕೋಶದ functioning ಪ್ರಭಾವಿತಗೊಳ್ತದೆ.

ಬೇರೆಯವರು ಹಾಕಿಕೊಂಡ ಬಟ್ಟೆಯನ್ನು, ಚಪ್ಪಲಿಗಳನ್ನು ನಾವು ಹಾಕಿಕೊಂಡರೆ ದರಿದ್ರ ಬಡಿಯುತ್ತೆ ಅಂತ ಮನೆಗಳಲ್ಲಿ ಹೇಳುವುದು ಎಲ್ಲರಿಗೂ ಗೊತ್ತೇ ಇರುತ್ತೆ. ಇನ್ನು ಯೋಗ ಮ್ಯಾಟ್ ಬಳಸುವವರು ತಮ್ಮ ಮ್ಯಾಟ್ ಅನ್ನು ಇನ್ನೊಬ್ಬರಿಗೆ ಬಳಸಲಿಕ್ಕೆ ಕೊಡುವುದಿಲ್ಲ. ಬೆರೆಯವರದ್ದನ್ನು ತಾವು ಬಳಸುವುದಿಲ್ಲ.  ಯಾಕೆ? ಬೇರೆಯವರ ದರಿದ್ರ ನಮಗೆ ಬಡಿದುಕೊಳ್ಳುತ್ತೆ ಅಂತ.

ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಒಟ್ಟಿನಲ್ಲಿ ಈ ದರಿದ್ರ ಅಥವಾ ತಮಸ್ಸು ಅಂದ್ರೆ ಏನು?

ಅದು ನಮ್ಮ ಎಚ್ಚರದ ವಿರೋಧಿ. ನಾವು ಕಷ್ಟ ಪಟ್ಟು ಕಟ್ಟಿಕೊಂಡ, ಬೆಳೆಸಿಕೊಂಡ ಎಚ್ಚರವನ್ನು ಅದು ಹಾಳುಗೆಡವುತ್ತದೆ.

ಕಷ್ಟ ಪಟ್ಟು ಬೆಳೆಸಿಕೊಂಡವರಿಗೆ ಅದು ಹಾಳಾಗುವ ನೋವು ಗೊತ್ತಾಗ್ತಾದೆ. ಇನ್ನು ಎಚ್ಚರ ಯಾಕೆ ಬೇಕು ಅಂದ್ರೆ, ಈ ಮೊದಲೇ ಹೇಳಿದಂತೆ ಪರೀಕ್ಷೆಗೆ ಓದಿಕೊಳ್ಳುವವನಿಗೆ ಹೇಗೆ ಎಚ್ಚರ ಬೇಕಾಗುತ್ತದೆಯೋ, ಹಾಗೆಯೇ conciousnes ಅನ್ನು ಎಚ್ಚರದ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಧ್ಯಾತ್ಮ ಸಾಧಕರಿಗೆ ಅತ್ಯಗತ್ಯ.

ಹೀಗಾಗಿ ಎಲ್ಲ ಮಡಿ, ಮೈಲಿಗೆ ಇತ್ಯಾದಿ ಎಲ್ಲ ಆಚರಣೆಗಳ ಹಿಂದೆ ಕೇವಲ hygiene ಕಾರಣ ಇದೆ ಅಂತ ಸೋ ಕಾಲ್ಡ್ ಹಿಂದೂ ಚಿಂತಕರುಗಳು ಬರೆದಾಗ ನನ್ನಂಥವರಿಗೆ ಸಿಟ್ಟು ಬರುತ್ತದೆ

ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಅನ್ನುವ ಮೂರು ಅಂಶಗಳು ಎಲ್ಲ ಆಚರಣೆಗಳ ಹಿಂದೆಯೂ ಇರುತ್ತವೆ. ಆದರೆ ಬಹುತೇಕರು ಕೇವಲ ಭೌತಿಕ ಅಂಶವನ್ನು ಮಾತ್ರ (ಉದಾಹರಣೆಗೆ hygiene) ಪರಿಗಣಿಸಿ, ಅದು ಮಾತ್ರ ಆ ಆಚರಣೆಯ ಅಂತಿಮ ಪ್ರಯೋಜನ ಅನ್ನುವ ತೀರ್ಪು ಕೊಟ್ಟುಬಿಡುತ್ತಾರೆ. ಹಾಗೆ ತೀರ್ಪು ಕೊಡುವವರೇ, ಪ್ರಸಿದ್ಧ ಬರಹಗಾರರು, ಪಠ್ಯ ಪುಸ್ತಕ ರಚನೆಕಾರರು ಆಗಿದ್ದಾರೆ. ದೊಣ್ಣೆ ಯಾರ ಕೈಯಲ್ಲಿ ಇರುತ್ತೋ, ಅವರದ್ದೇ ಎಮ್ಮೆ ಅನ್ನುವ ಹಾಗೆ, ಅವರ ಮಾತುಗಳು ಸರ್ವಮಾನ್ಯತೆ ಪಡೆಯತೊಡಗಿವೆ.

ಅದೇ ಈಗಿನ ದೌರ್ಭಾಗ್ಯ.

ಬಹುಶಃ ಇದೇ ಕಾರಣಕ್ಕೆ ಡೇವಿಡ್ ಫ್ರಾಲಿ ಹೇಳೋದು ಏನಂದ್ರೆ, ಯಾರು ಸಾಧಕರಲ್ಲವೋ, ಅಂಥವರು ನಮ್ಮ ಆಚರಣೆಗಳನ್ನು ವಿಶ್ಲೇಷಿಲಿಕ್ಕೆ ಬಿಡಬಾರದು, ಅವಕಾಶ ಅವರಿಗೆ ಕೊಡಬಾರದು ಅಂತ

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!