Featured ಅಂಕಣ

ಹರ್ಮನ್ ಹೆಸ್ಸೆ ಎಂಬ ಜರ್ಮನ್ ‘ಭಾರತೀಯ’…

‘ಸಿದ್ಧಾರ್ಥ’ ಎಂದು ಪುಸ್ತಕದ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗಿದ್ದು ಗೌತಮ ಬುದ್ಧ. ಬುದ್ಧನಿಗೆ ಸಂಬಂಧಪಟ್ಟ ಪುಸ್ತಕವೆಂದೇ ಭಾವಿಸಿಯೇ ಓದಲು ಶುರುವಿಟ್ಟುಕೊಂಡಿದ್ದು. ಅದರೆ ಅದು ಸಂಪೂರ್ಣವಾಗಿ ಒಂದು ಕಾಲ್ಪನಿಕ ಕಥೆ ಎಂದು ನಂತರ ತಿಳಿದದ್ದು. ತನ್ನನ್ನು ತಾನು ಅರಿಯುವ ಹಂಬಲದಿಂದ ಹೊರಡುವ ಸಿದ್ಧಾರ್ಥನೆಂಬ ಹುಡುಗನ ಕಥೆ. ಭಾರತೀಯ ಧಾರ್ಮಿಕ ಅಲೋಚನೆಗಳನ್ನೊಳಗೊಂಡ ಈ ಪುಸ್ತಕದಲ್ಲಿ ಬುದ್ಧನೂ ಬರುತ್ತಾನೆ. ಹಾಗಂತ ಈ ಪುಸ್ತಕವನ್ನು ಬರೆದಿದ್ದು ಮಾತ್ರ ಭಾರತೀಯನಲ್ಲ. ಹರ್ಮನ್ ಹೆಸ್ಸೆ ಎಂಬ ಜರ್ಮನ್ ಲೇಖಕ. ಆದರೆ ‘ಸಿದ್ಧಾರ್ಥ’ನನ್ನು ಓದುವಾಗ ಎಲ್ಲೂ ಕೂಡ ಈ ಪುಸ್ತಕವನ್ನು ಯಾರೋ ಒಬ್ಬ ವಿದೇಶಿ ಬರೆದಿರುವುದು ಎಂದೆನಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಭಾರತೀಯ ಅಲೋಚನೆಗಳನ್ನುಅಳವಡಿಸಿಕೊಂಡಿದ್ದಾರೆ ಹರ್ಮನ್ ಹೆಸ್ಸೆ!

ಹರ್ಮನ್ ಹೆಸ್ಸೆ ಅವರ ಅಜ್ಜ, ಅಪ್ಪ, ಅಮ್ಮ ಎಲ್ಲರೂ ಸುಮಾರು ವರ್ಷಗಳ ಕಾಲ ಭಾರತದಲ್ಲಿಯೇ ನೆಲೆಸಿದವರಾಗಿದ್ದರು. ಮಿಶನರಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ತಾಯಿ ಭಾರತದ ಕೆಲ ಭಾಷೆಗಳು ಕೂಡ ಬರುತ್ತಿದ್ದವು. ಹೆಸ್ಸೆಯವರ ಅಜ್ಜ ಸಂಸ್ಕೃತ ಅಧ್ಯಯನದಲ್ಲಿ ಆಸಕ್ತಿಯುಳ್ಳವರಾಗಿದ್ದರು ಹಾಗೂ ಅವರ ತಂದೆ ಬೌದ್ಧ ಪ್ರಾರ್ಥನೆಗಳನ್ನು ಕೂಡ ಕಲಿತಿದ್ದರು. ಅವರ ತಾಯಿ ಯಾವಾಗಲೂ ಹೆಸ್ಸೆಯವರಿಗೆ ಭಾರತದ ಕುರಿತು ಸಾಕಷ್ಟು ವಿಷಯಗಳನ್ನು ಹೇಳುತ್ತಿದ್ದರು. ಇದೆಲ್ಲವೂ ಚಿಕ್ಕಂದಿನಿಂದಲೇ ಹೆಸ್ಸೆಯವರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದವು. ಹೆಸ್ಸೆ ಅವರ ತಂದೆ ತಾಯಿಗೆ ಹಿಂದೂ ಹಾಗೂ ಬೌದ್ಧ ಧರ್ಮಗಳ ಕುರಿತು ಸಾಕಷ್ಟು ಗೌರವಿದ್ದರೂ ಕೂಡ ಕೆಲವೊಂದು ವಿಷಯಗಳಲ್ಲಿದ್ದ ಅವರ ಸಂಕುಚಿತ ಮನೋಭಾವ ಹೆಸ್ಸೆ ಅವರಿಗೆ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ.

ಹೆಸ್ಸೆಯವರ ಮೇಲೆ ಇನ್ನಷ್ಟು ಪರಿಣಾಮ ಬೀರಿದ್ದು ಶೂಪೆನ್’ಹವರ್ ಅವರ ತತ್ವಸಿದ್ಧಾಂತಗಳು. ಅವರ ಸಿದ್ಧಾಂತಗಳಿಗೂ ಹಾಗೂ ಭಾರತೀಯ ಅಧ್ಯಾತ್ಮಕ್ಕೂ ಸಾಕಷ್ಟು ಹೋಲಿಕೆಗಳಿದ್ದವು. ಸುಮಾರು ಹತ್ತು ವರ್ಷಗಳ ಕಾಲ ಭಾರತೀಯ ವಿಚಾರಗಳಿಂದ ಸಂಪೂರ್ಣವಾಗಿ ದೂರ ಇದ್ದ ಹೆಸ್ಸೆಯವರನ್ನು ಮತ್ತೆ ಭಾರತದ ಕಡೆ ಮುಖ ಮಾಡುವಂತೆ ಮಾಡಿದ್ದು ಶೂಪೆನ್’ಹವರ್ ಅವರ ಸಿದ್ಧಾಂತಗಳು. ಹೆಸ್ಸೆ ಅವರು ಇದರ ನಂತರ ಭಗವದ್ಗೀತೆಯನ್ನು ಓದಲು ಆರಂಭಿಸಿದ್ದರು.

ಗುಂಟರ್ ಬೌಮನ್ ಎಂಬುವವರು ತಮ್ಮ ‘ಹರ್ಮನ್ ಹೆಸ್ಸೆ ಅಂಡ್ ಇಂಡಿಯಾ’ ಎಂಬ ಲೇಖನದಲ್ಲಿ, ‘ಸಿದ್ಧಾರ್ಥ’ ಒಂದು ರೀತಿಯಲ್ಲಿ ಹೆಸ್ಸೆಯವರ ಬದುಕು ಎಂದೇ ಹೇಳಬಹುದು ಎನ್ನುತ್ತಾರೆ. ಹೆಸ್ಸೆಯವರ ಆಧ್ಯಾತ್ಮದ ಹಪಹಪಿಯೇ ಪುಸ್ತಕದಲ್ಲಿ ಸಿದ್ಧಾರ್ಥನ ಮೂಲಕ ಹೊರಮೂಡಿದ್ದು ಎನ್ನುತ್ತಾರೆ. ಅದೇ ಕಾರಣಕ್ಕೆ ಇರಬೇಕು ಸಿದ್ಧಾರ್ಥ ಎನ್ನುವ ಪುಸ್ತಕ ಓದುವಾಗ ಯಾವುದೋ ಸುಂದರ ಕವಿತೆಯನ್ನೋ ಅಥವಾ ಮಧುರವಾದ ಹಾಡೊಂದನ್ನ ಕೇಳಿದ ಅನುಭವವನ್ನು ನೀಡುತ್ತದೆ. ಅಷ್ಟು ಸೊಗಸಾಗಿ ಸಿದ್ಧಾರ್ಥನೆಂಬ ಹುಡುಗನ ಆಧ್ಯಾತ್ಮ ಬದುಕನ್ನ ನಿರೂಪಿಸಿದ್ದಾರೆ ಹೆಸ್ಸೆಯವರು. ಯಾವಾಗಲೂ ಜಿಜ್ಞಾಸೆಗಳಲ್ಲೇ ಮುಳುಗಿದ್ದ ಬ್ರಾಹ್ಮಣನ ಮಗ ತನ್ನದೆಲ್ಲವನ್ನೂ ಬಿಟ್ಟು ಹೊರಟು, ‘ಸಮನ’ನಾಗಿ ಅಲೆಯುತ್ತಾ, ಹಸಿವು, ನಿದ್ದೆ, ಚಳಿಯನ್ನೆಲ್ಲಾ ಮೀರಿ ಬೆಳೆದರೂ ಆತನಿಗೆ ಸಮಾಧಾನವಾಗದು. ಬುದ್ಧನ ಆಶ್ರಯಕ್ಕೆ ಬಂದರೂ ಆತನ ಪಾಠಗಳಿಲ್ಲದೆ, ತಾನೇ ಸ್ವತಃ ‘ನಾನು’ ಎನ್ನುವುದನ್ನು ಹುಡುಕುವುದಕ್ಕೆ ಹೊರಡುವ ಸಿದ್ಧಾರ್ಥ ಯಾವುದರಿಂದ ದೂರ ಹೊರಟಿದ್ದನೋ ಮತ್ತೆ ಅದೇ ‘ಸಂಸಾರ’ದಲ್ಲಿ ಮುಳುಗುತ್ತಾನೆ. ವರ್ಷಗಳುರುಳಿದ ಮತ್ತೆ ಅದೆಲ್ಲವನ್ನು ತ್ಯಜಿಸಿ, ತನ್ನ ಬದುಕಿನ ಮೇಲೆ ತನಗೇ ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳುಬೇಕೆಂದು ಬಂದು ನಿಂತಾಗ ‘ಓಂ’ಕಾರ ಕೇಳಿಸುತ್ತದೆ. ಅಲ್ಲಿಂದ ಮತ್ತೆ ಹೊಸ ರೂಪ ಪಡೆದುಕೊಳ್ಳುತ್ತದೆ. ಇದಿಷ್ಟೂ ಓದುವಾಗ, ಓದುಗ ಸ್ವತಃ ಒಬ್ಬ ಸಿದ್ಧಾರ್ಥನಾಗಿರುತ್ತಾನೆ, ಆ ಅನುಭೂತಿಯನ್ನು ಪಡೆಯುತ್ತಿರುತ್ತಾನೆ ಅಷ್ಟು ಅದ್ಭುತವಾಗಿ ಹೆಸ್ಸೆಯವರು ಚಿತ್ರಿಸಿದ್ದಾರೆ.

ಬೌಮನ್ ಪ್ರಕಾರ ಹೆಸ್ಸೆಯವರ ಮೇಲೆ ಪ್ರಭಾವ ಬೀರಿದ ಇನ್ನೊಂದು ಮುಖ್ಯ ಅಂಶ ಕಾಡು. ಹೆಸ್ಸೆಯವರು ಸಾಕಷ್ಟು ಸಮಯ ಕಾಡುಗಳಲ್ಲಿ ಕಳೆಯುತ್ತಿದ್ದರು. ನದಿಗಳೊಂದಿಗೆ ಕಾಲ ಕಳೆಯುವುದು, ಚಿಟ್ಟೆಗಳನ್ನ ಅರಸುವುದು, ಗಿಡ ಮರಗಳ ನಡುವೆ ಸಮಯ ವ್ಯಯಿಸುವುದು ಅವರಿಗೆ ಬಲು ಪ್ರಿಯವಾಗಿತ್ತು. ಅದನ್ನು ಅವರು ‘ಬದುಕಿನ ಮೂಲಕ್ಕೆ ಹಿಂದಿರುವುದು’ ಎನ್ನುತ್ತಿದ್ದರು. ನದಿಗಳೊಂದಿಗಿನ ಅವರ ಒಡನಾಟ ‘ಸಿದ್ಧಾರ್ಥ’ದಲ್ಲೂ ಕಾಣಸಿಗುತ್ತದೆ. ಎಲ್ಲವನ್ನೂ ತ್ಯಜಿಸಿ ಬರುವ ಸಿದ್ಧಾರ್ಥ ನದಿಯ ಬಳಿ, ಅಂಬಿಗನೊಂದಿಗೆ ವಾಸ ಮಾಡಲು ಆರಂಭಿಸುತ್ತಾನೆ. ಅಲ್ಲಿಂದ ಆತ ನದಿಯೊಂದಿಗೆ ಎಷ್ಟರಮಟ್ಟಿಗೆ ಬೆಸೆದುಕೊಳ್ಳುತ್ತಾನೆ ಎಂದರೆ, ಆತ ನದಿಯೊಂದಿಗೆ ಮಾತನಾಡಲು ಶುರುಮಾಡುತ್ತಾನೆ, ನದಿಯ ಪ್ರತಿ ಶಬ್ದವನ್ನೂ ಅರ್ಥೈಸಿಕೊಳ್ಳುತ್ತಾನೆ. ಒಂದು ರೀತಿಯಲ್ಲಿ ನದಿಯೇ ಆತನಿಗೆ ಗುರುವಾಗಿ ಆತನ ಜಿಜ್ಞಾಸೆಗಳೆಲ್ಲದಕ್ಕೂ ಉತ್ತರ ನೀಡುತ್ತಾ ಹೋಗುತ್ತದೆ. ಇದನ್ನ ಓದುವಾಗ ಒಮ್ಮೆ ನಮ್ಮನ್ನ ನಾವು ಪ್ರಕೃತಿಯಿಂದ ಎಷ್ಟು ದೂರವಿರಿಸಿಕೊಂಡಿದ್ದೇವೆ ಎಂದು ಅನ್ನಿಸದೇ ಇರದು. ಅವುಗಳ ಮಧ್ಯೆ ಇದ್ದರೂ ಮನುಷ್ಯರಾದ ನಮಗೂ ಅದಕ್ಕೂ ಯಾವುದೇ ಸಂಬಂಧವೇ ಇಲ್ಲವೇನೋ ಎಂಬಂತೆ ಬದುಕುತ್ತಿದ್ದೇವೆ. ನಾವು ಪ್ರಕೃತಿಯೊಂದಿಗೆ ನಿಜವಾಗಿ ಬೆಸೆದುಕೊಂಡಿದ್ದಿದ್ದರೆ, ಇಂದು ಕಾಡನ್ನು ಉಳಿಸಿ, ನದಿಗಳನ್ನು ರಕ್ಷಿಸಿ ಎನ್ನುವಂತಹ ಅಭಿಯಾನಗಳ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ?!!

ಹೆಸ್ಸೆಯವರು ಬುದ್ಧನ ಬಗ್ಗೆ ಸಾಕಷ್ಟು ಓದಿಕೊಂಡಿದ್ದರು. ಆದರೆ, ಬುದ್ಧ ಏನನ್ನು ಹೇಳಿದ ಎನ್ನುವುದಕ್ಕಿಂತ ಬುದ್ಧ ಹೇಗೆ ಬದುಕಿದ ಎನ್ನುವುದನ್ನ ನೋಡಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು.  ಅವರ ಆ ಅನಿಸಿಕೆ ‘ಸಿದ್ಧಾರ್ಥ’ದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಬುದ್ಧನನ್ನು ಭೇಟಿಯಾಗುವ ಸಿದ್ಧಾರ್ಥ, ತಾನು ಬುದ್ಧಿಸ್ಟ್ ಆಗಬಯಸುವುದಿಲ್ಲ, ಬದಲಾಗಿ ಬುದ್ಧನಾಗಬಯಸುತ್ತೇನೆ ಎಂದು ಹೇಳಿ ಹೊರಡುವಾಗ ಹೆಸ್ಸೆ ಅವರ ಅಭಿಪ್ರಾಯ ಸ್ಪಷ್ಟವಾಗಿ ಕಾಣಿಸುತ್ತದೆ. ಧರ್ಮ ಹಾಗೂ ಆಧ್ಯಾತ್ಮದ ಕುರಿತು ಹೇಳುತ್ತಾ “ಪಾಶ್ಚಾತ್ಯರಿಗೆ ತರ್ಕ ಹಾಗೂ ತಂತ್ರಜ್ಞಾನ ಎಷ್ಟು ಮುಖ್ಯವೋ ಪೂರ್ವ ದೇಶಗಳಲ್ಲಿರುವವರಿಗೆ ಧರ್ಮ ಅಷ್ಟೇ ಮುಖ್ಯ. ಭಾರತ ಆಧ್ಯಾತ್ಮವನ್ನೇ ಉಸಿರಾಡುತ್ತದೆ. ಯುರೋಪಿಯನ್ನರಲ್ಲಿ ಕಂಡುಬರುವ ದೊಡ್ಡ ಕೊರತೆ ಇದು” ಎನ್ನುವ ಹೆಸ್ಸೆಯವರ ಮಾತುಗಳನ್ನು ಬೌಮನ್ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ.  ಆದರೆ ಹೆಸ್ಸೆಯವರು ಹೇಳಿದ ಭಾರತ ಈಗ ಉಳಿದಿಲ್ಲವೇನೋ?! ನಾವು ಕೂಡ ಈಗ ಪಾಶ್ಚಾತ್ಯರಂತೆ ತರ್ಕಗಳನ್ನಷ್ಟೇ ಉಸಿರಾಡುತಿದ್ದೇವೆ.

ಕೊನೆಯಲ್ಲಿ ಸಿದ್ಧಾರ್ಥ ಭೂತ ಭವಿಷ್ಯತ್ತುಗಳು ಯಾವುದೂ ಇಲ್ಲ, ಇರುವುದು ವರ್ತಮಾನ ಮಾತ್ರ. ಸಮಯ ಎನ್ನುವುದು ಇಲ್ಲವೇ ಇಲ್ಲ ಎಂದು ನದಿಯಿಂದ ಕಲಿಯುವಾಗ ಹೆಸ್ಸೆಯವರ ಭಾರತೀಯ ಆಲೋಚನೆಗಳು ಅಲ್ಲಿ ಪ್ರತಿಬಿಂಬವಾಗುತ್ತದೆ. ಸಿದ್ಧಾರ್ಥ, ಬುದ್ಧಿಸ್ಟ್ ಆಗಿದ್ದ ತನ್ನ ಹಳೆಯ ಮಿತ್ರ ಗೋವಿಂದನಿಗೆ, ಕಲ್ಲೊಂದನ್ನು ತೋರಿಸಿ,”ಕಲ್ಲು ಮುಂದೊಂದು ದಿನ ಮಣ್ಣಾಗಿ, ಸಸ್ಯವಾಗಿ, ಪ್ರಾಣಿಯಾಗಿ, ಮನುಷ್ಯನಾಗಿ ಮೋಕ್ಷದ ದಾರಿಯಲ್ಲಿ ಸಾಗುವುದೆಂಬ ಕಾರಣಕ್ಕೆ ಹಿಂದೆ ಗೌರವಿಸುತ್ತಿದ್ದೆ, ಆದರೆ ಈಗ ಹಾಗಲ್ಲ. ಮುಂದೇನೋ ಆಗುತ್ತದೆ ಎನ್ನುವುದಕ್ಕಲ್ಲ ಬದಲಾಗಿ, ಆ ಕಲ್ಲು ಯಾವಾಗಿನಿಂದಲೂ ಎಲ್ಲವೂ ಆಗಿದೆ, ಇದರಲ್ಲಿ ಎಲ್ಲವೂ ಇದೆ ಅನ್ನುವ ಕಾರಣಕ್ಕೆ ಪ್ರೀತಿಸುತ್ತೇನೆ, ಎಲ್ಲವೂ ಒಂದೇ ಆಗಿದೆ” ಎಂದು ಏಕತೆಯ ಮಾತನಾಡುವಾಗ ಹೆಸ್ಸೆ ಒಬ್ಬ ಭಾರತೀಯನಲ್ಲ ಎಂದನಿಸುವುದೇ ಇಲ್ಲ. ‘ಸಿದ್ಧಾರ್ಥ’ನನ್ನು ಓದಿದರೆ ಹೆಸ್ಸೆಯವರ ಮನದಲ್ಲಿ ಭಾರತೀಯ ಪರಂಪರೆ, ಭಾರತೀಯ ಆಲೋಚನೆಗಳು ಎಷ್ಟು ಆಳವಾಗಿ ಬೇರೂರಿದ್ದವು ಎನ್ನುವುದರ ಅರಿವಾಗುತ್ತದೆ! ಜೊತೆಗೆ ಸೃಷ್ಟಿಯನ್ನು ಇಷ್ಟು ಅದ್ಭುತವಾಗಿ ನೋಡುವ ಪರಿ ನಮ್ಮ ಪರಂಪರೆಯಲ್ಲಿಯೇ ಇದ್ದರೂ ನಾವು ತಂತ್ರಜ್ಞಾನದ ಸುಳಿಯಲ್ಲಿ ಮುಳುಗಿ ಎಲ್ಲದರಿಂದ ದೂರಾಗಿದ್ದೇವೆ ಎನ್ನುವುದೂ ತಿಳಿಯುತ್ತದೆ. ಅದೇನೆ ಇರಲಿ, ‘ಸಿದ್ಧಾರ್ಥ’ನನ್ನು ಓದಿದಾಗ ಹರ್ಮನ್ ಹೆಸ್ಸೆ ಎಂಬ ಜರ್ಮನ್ ಲೇಖಕ ಒಬ್ಬ ಭಾರತೀಯನಂತೆಯೇ ಕಂಡು ಆಪ್ತನಾಗುವುದು ನಿಜ!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!