ಅಂಕಣ

ಬದಲಾವಣೆಯ ವಿರೋಧಿಸುವ ಮೊದಲು ಸ್ವಲ್ಪ ಯೋಚಿಸಿ

ಜಿ.ಎಸ್.ಟಿ. ಒಂದು ಹೊಸ ತೆರಿಗೆ ಸಾಮ್ರಾಜ್ಯ. ಸಾಮ್ರಾಜ್ಯವ ಕಟ್ಟಬೇಕಾದರೆ ಎಲ್ಲವೂ ಹೊಸದರಿಂದಲೇ ಶುರುವಾಗಬೇಕು. ಒಂದು ವೇಳೆ ಮೋದಿ ವ್ಯವಸ್ಥೆಯ ತರದೇ ಇದ್ದರೆ? ಅದು ಚರ್ಚೆಯ ಇನ್ನೊಂದು ವಿಷಯವಾಗುತ್ತದೆ. ಆದರೆ ಸಂಪೂರ್ಣ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ದೊಡ್ಡ ಧೈರ್ಯ ಮಾಡಿದರಲ್ಲ ಅದು ನನಗೆ ಖುಷಿ ಕೊಟ್ಟಿದೆ. ಹೊಸಮನೆಗೆ ಅಥವಾ ಒಂದು ಸಣ್ಣ ರೂಮಿಗೆ ಹೊಂದಿಕೊಳ್ಳಲೂ ಸಾಕಷ್ಟು ಸಮಯ ಬೇಕಿರುವಾಗ ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯವಂತೂ ಖಂಡಿತ ಬೇಕು. ಕಾಂಗ್ರೆಸ್ ಯಾರೋ ಒಮ್ಮೆ ಒಂದು ಮಾತು ಹೇಳಿದ್ದರುಜಿ.ಎಸ್.ಟಿ.ಯಲ್ಲಿ ನಾಲ್ಕು ಟ್ಯಾಕ್ಸ್ ರೇಟ್ಸ್ ಇದೆ ಯಾಕೆ ಒಂದೇ ರೇಟ್ ಮಾಡಬಾರದು? ನಮ್ಮ ಯೋಚನೆ ಅದೇ ಆಗಿತ್ತುಎಂದು. ಇದಕ್ಕೆ ಉತ್ತರ ಸ್ಪಷ್ಟವಾಗಿದೆ. ಕೇವಲ ಒಂದು ಟ್ಯಾಕ್ಸ್ ರೇಟ್ ಮಾಡುವುದರಿಂದ ನಷ್ಟವಾಗುವುದು ಕೆಳವರ್ಗದ ಬಡಜನರಿಗೆ ಹೊರತು ಜಾಸ್ತಿ ಆದಾಯವಿರುವ ಶ್ರೀಮಂತರಿಗಲ್ಲ. ಬಡವರು ಮತ್ತು ಮಧ್ಯಮವರ್ಗದ ಜನರು ಬಳಸುವ ವಸ್ತುಗಳ ಮೇಲಿನ ಟ್ಯಾಕ್ಸ್ ರೇಟ್ ಅನ್ನು ಆದಷ್ಟು ಕಡಿಮೆ ಮಾಡಿ ಶ್ರೀಮಂತರು ಬಳಸುವ ವಸ್ತುವಿನ ಮೇಲಿನ ಟ್ಯಾಕ್ಸ್ ರೇಟ್ ಅನ್ನು ಜಾಸ್ತಿ  ಮಾಡಿರುವುದೇ ನಾಲ್ಕು ವಿಧದ ಟ್ಯಾಕ್ಸ್ ರೇಟ್ ಹಾಕಲು ಕಾರಣ. ಬದಲಾದ ವ್ಯವಸ್ಥೆಗೆ ಎಲ್ಲ ರಾಜಕೀಯ ಪಕ್ಷಗಳು ಸಮ್ಮತಿ ಸೂಚಿಸಿರುವುದರಿಂದಲೇ ಜಾರಿಗೆ ಬಂದಿರುವುದು. ಆದರೆ ಈಗ ಆಗಿರುವ ಸಣ್ಣ ಪುಟ್ಟ ಏರುಪೇರಿಂದಾಗಿ ಜಿ.ಎಸ್.ಟಿ.ಗೆ ನಮ್ಮ ವಿರೋಧವಿತ್ತುಎನ್ನುವ ರಾಹುಲ್ ಗಾಂಧಿಯಷ್ಟು ಎಳಸು ಮನಸ್ಥಿತಿಯ ಮನುಷ್ಯ ಬೇರೆ ಯಾರೂ ಇಲ್ಲ ಅನ್ನಿಸುತ್ತಿದೆ

ಹಿಂದೆ ಭಾರತದಲ್ಲಿದ್ದ ತೆರಿಗೆ ಪದ್ದತಿ ತುಂಬಾ ಸಂಕೀರ್ಣವಾಗಿತ್ತು. ಜಿ.ಎಸ್.ಟಿ. ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಭಾರತದ ಜಿಡಿಪಿ ( ಸಮಗ್ರ ದೇಶೀಯ ಉತ್ಪನ್ನ ) ಮತ್ತು ಆದಾಯ ಹೆಚ್ಚಾಗಲಿದ್ದು, ಗ್ರಾಹಕರಿಗೆ ತೆರಿಗೆಯಿಂದ ಪರೋಕ್ಷ ಲಾಭ ಹೆಚ್ಚಾಗುವುದಂತೂ ಸತ್ಯ. ಭಾರತದ ಆದಾಯ ಹೆಚ್ಚಲು ಕೂಡ ಇದು ಹೆಚ್ಚು ಅನುಕೂಲವಾಗಲಿದೆ. ಜಿಎಸ್ಟಿಯಿಂದ ಭಾರತದ ಒಟ್ಟಾರೆ ಜಿಡಿಪಿ ಮತ್ತು ಒಟ್ಟು ಆದಾಯ ಸಂಗ್ರಹಣೆ ಹೆಚ್ಚಾಗುತ್ತದೆ. ವಿದೇಶಗಳಿಗೆ ಹೆಚ್ಚು ರಫ್ತು ಆಗಲಿದ್ದು, ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಉದ್ಯೋಗ ಉತ್ತೇಜಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಣ್ಣ ಉದ್ಯಮಿಗಳು ಅದರಲ್ಲೂ ವಾರ್ಷಿಕ ಇಪ್ಪತ್ತು ಲಕ್ಷಕ್ಕೂ ಕಮ್ಮಿ ವಹಿವಾಟು ಮಾಡುವವರಿಗೆ ಇದು ಅನುಕೂಲವಾಗುವುದಂತೂ ಹೌದು

ದೇಶದ ಅರ್ಥ ವ್ಯವಸ್ಥೆಯ ಸಮಗ್ರ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಿರುವ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯು, ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾಕ್ರಮವಾಗಿದೆ. ಇಡೀದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಹೊಸ ವ್ಯವಸ್ಥೆ ಪರಿವರ್ತಿಸಿದೆ. ಹಿಂದೆ ಜಾರಿಯಲ್ಲಿದ್ದ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಂಡಿದೆ, ಸರಕು ಮತ್ತು ಸೇವೆಗಳ ಬೆಲೆಗಳು ದೇಶದಾದ್ಯಂತ ಒಂದೇ ರೀತಿಯಲ್ಲಿ ಇರಲಿವೆ. ಇದರಿಂದ ಭಾರತದ ಅಭಿವೃದ್ಧಿಯಂತೂ ಖಂಡಿತ ಸಾಧ್ಯ ಆದರೆ ಅದಕ್ಕೆ ಸ್ವಲ್ಪ ಸಮಯವಂತೂ ಬೇಕು. ಸಮಯ ನೀಡಲು ನಾವು ತಯಾರಿಲ್ಲವೇ? ಅರವತ್ತು ವರ್ಷಗಳ ಕಾಲ ಏನೂ ಮಾಡದವರಿಗೇ ಸಮಯ ನೀಡಿದ್ದೇವೆ ಈಗ ಹೊಸ ಬದಲಾವಣೆಗೆ  ಸಮಯ ನೀಡಲು ನಮಗೆ ಸಾಧ್ಯವಿಲ್ಲವೇಯೋಚಿಸಬೇಕಾದದ್ದೇ ಅಲ್ಲವಾ.?

ಈಗ ಮೋದಿ ಸರಕಾರಕ್ಕೆ ನಿಜವಾದ ಚ್ಯಾಲೆಂಜ್ ಇರುವುದು ಜಿ.ಎಸ್.ಟಿ. ರಿಟರ್ನ್ ಸಲ್ಲಿಕೆಯಲ್ಲಿ. ಇನ್ಫೋಸಿಸ್ ಸಂಸ್ಥೆಗೆ 2015ರಲ್ಲಿ ಜಿ.ಎಸ್.ಟಿ.ಗೆ ಸಂಬಂಧಪಟ್ಟ ಸಾಫ್ಟ್ವೇರ್ ಅಭಿವೃದ್ಧಿಗೊಳಿಸಲು ಸುಮಾರು 1380 ಕೋಟಿಗೆ ಕಾಂಟ್ರ್ಯಾಕ್ಟ್ ಅನ್ನು ಸರಕಾರ ನೀಡಿತು. ಇದು ಸುಮಾರು ಐದು ವರ್ಷಗಳ ಒಪ್ಪಂದ. ಆದರೆ ಈಗ ಸರಕಾರದ ನಿರೀಕ್ಷೆಗಳನ್ನು ಇನ್ಫೋಸಿಸ್ ಹುಸಿಗೊಳಿಸಿದೆ. ಜಿ.ಎಸ್.ಟಿ.ಯಲ್ಲಿನನೆಟ್ವರ್ಕ್ ಗ್ಲಿಚಸ್ತೆರಿಗೆ ದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ದೇಶದ ಇಷ್ಟು ದೊಡ್ಡ ತೆರಿಗೆ ವ್ಯವಸ್ಥೆಯ ಸಾಫ್ಟ್ವೇರ್ ರೂಪಿಸಲು ಸಿಕ್ಕ ಅವಕಾಶವನ್ನು ಇನ್ಫೋಸಿಸ್ ಸರಿಯಾಗಿ ಉಪಯೋಗಿಸಿಕೊಳ್ಳಲೇ ಇಲ್ಲ. ಒಂದು ಮೂಲದ ಪ್ರಕಾರ ವಿಶಾಲ್ ಸಿಕ್ಕ ಕಾಂಟ್ರ್ಯಾಕ್ಟ್ ಅನ್ನು ಸಬ್ಕಾಂಟ್ರ್ಯಾಕ್ಟ್ ಮಾಡಿದ್ದರು ಎಂಬ ಗುಸುಗುಸು ಕೂಡ ಇತ್ತು. ಅದೇನೇ ಇರಲಿ, ಅಥವಾ ಅದು ರೂಮರ್ಸ್ ಕೂಡ ಆಗಿರಬಹುದು. ವಿಶಾಲ್ ಸಿಕ್ಕ ಹೋದಮೇಲೆ ಬಂದ ನಿಲೇಕಣಿ ವ್ಯವಸ್ಥೆಯನ್ನು ಸರಿ ಪಡಿಸುತ್ತಾರೆ ಎಂಬ ನಂಬಿಕೆ ಕೂಡ ಇತ್ತು ಆದರೆ ಅದು ಹುಸಿಯಾಯಿತಾ? ಇನ್ನೂ ಕಾಯೋಣ. ಸರಕಾರ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮುಂದೂಡುತ್ತಲೇ ಇದೆ ಆದರೆ ಸಾಫ್ಟ್ವೇರ್ ಸುಧಾರಣೆ ವೇಗ ಪಡೆಯುತ್ತಲೇ ಇಲ್ಲ.  ಇನ್ಫೋಸಿಸ್ ಪ್ರಕಾರ ತಿಂಗಳಿಗೆ 300 ರಿಂದ 320 ಕೋಟಿ ಇನ್ವೈಸ್ ಅನ್ನು ಅಪ್ಲೋಡ್ ಮಾಡಬಹುದು ಆದರೆ ಸಾಫ್ಟ್ವೇರ್ 37 ಕೋಟಿ ಇನ್ವೈಸ್ ಅನ್ನು ತಡೆದುಕೊಳ್ಳಲೂ ಆಗದ ಸ್ಥಿತಿಯಲ್ಲಿದೆ.  ಜಿ ಎಸ್ ಟಿ ರಿಟರ್ನ್ ಸಲ್ಲಿಕೆಯಲ್ಲಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಇನ್ಫೋಸಿಸ್ ಎಷ್ಟು ಪ್ರಯತ್ನಿಸುತ್ತಿದೆಯೋ ಏನೋ ಅದು ಅವರಿಗೆ ಮಾತ್ರ ಗೊತ್ತು ಆದರೆ ಎಲ್ಲರ ಚಿತ್ತ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದವರ ಮೇಲೆ ನೆಟ್ಟಿರುವುದಂತೂ ಸತ್ಯ. ಒಬ್ಬ ಸಣ್ಣ ಉದ್ದಿಮೆದಾರ ತುಂಬಾ ಸಮಯವನ್ನು ರಿಟರ್ನ್ ಸಲ್ಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಾದ್ಯವಿಲ್ಲ. ಹಾಗಾಗಿ ತಂತ್ರಾಂಶ ಎಷ್ಟು ಸರಳವಾಗಿರುತ್ತದೋ ಅಷ್ಟು ತೆರಿಗೆ ಸಲ್ಲಿಸುವವರಿಗೂ ಅನುಕೂಲವಾಗುತ್ತದೆ.

ಇಷ್ಟು ದೊಡ್ಡ ದೇಶದಲ್ಲಿ ಮೋದಿ ಒಂದು ಆರ್ಥಿಕ ಬದಲಾವಣೆಯನ್ನು ಬಯಸಿ ಅದನ್ನು ಜಾರಿಗೂ ತಂದರು. ಅದು ರೂಪಾಯಿ ಅಪನಗದೀಕಾರಣವೂ ಆಗಿರಬಹುದು ಅಥವಾ ಜಿ ಎಸ್ ಟಿ ಯೂ ಆಗಿರಬಹುದು. ಜಡ್ಡು ಗಟ್ಟಿದ್ದ ವ್ಯವಸ್ಥೆಯಲ್ಲಿನ ಕಳ್ಳದಾರಿಯನ್ನು, ನುಸುಳುವಿಕೆಯನ್ನು ಚೆನ್ನಾಗಿ ಅರಿತಿದ್ದ ಕೆಲವು ಕಳ್ಳರಿಗೆ ಜಿ ಎಸ್ ಟಿ ಯನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಕನಿಷ್ಟ ಒಂದುವರ್ಷ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸಲು ಬೇಕಾಗುತ್ತದೆ ಅದಾದ ಮೇಲೆ ಇದು ಫಲ ನೀಡದೇ ಇರುವುದಿಲ್ಲ.ಭಾರತದ ಅರ್ಥವ್ಯವಸ್ಥೆಗೆ ಜಿ ಎಸ್ ಟಿ ವರದಾನವಾಗುವ ಕಾಲ ಬರುತ್ತದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳಿದ್ದನ್ನು ಸ್ವಲ್ಪ ಗಮನಿಸಿ. ಇನ್ನು ಜಿ ಎಸ್ ಟಿ ಸರಿಯಾಗಿ ಅಳವಡಿಸಿಲ್ಲ ಎಂಬ ಕಾಂಗ್ರೆಸ್ ಕ್ರಪಾಪೋಷಿತ ಅರ್ಥಶಾಸ್ತ್ರಜ್ಞರ ವಾದಕ್ಕೆ ಪ್ರತಿಕ್ರಿಯಿಸುವುದಾದರೆ ಜಿ ಎಸ್ ಟಿ ಸುಮಾರು 15 ವರ್ಷದ ಕನಸು. ಇದಕ್ಕೆ ಇನ್ನೂ ಹೇಗೆ ತಯಾರಾಗಬೇಕೋ ತಿಳಿಯದು. ಯಾವಾಗ ಹೊಸತನಕ್ಕೆ ತಳ್ಳಲ್ಪಡುತ್ತೇವೆಯೋ ಆಗ ತಾನೆ ಅದರ ಆಳ ಅಗಲ ಗೊತ್ತಾಗಲು ಸಾಧ್ಯ. ಹಾಗಾಗಿ ಸರಕಾರಕ್ಕೆ ಇದನ್ನು ಎದುರಿಸುವ ಛಲ ಇರಬೇಕು ಅಷ್ಟೇ. ಅದು ಮೋದಿ ಸರಕಾರಕ್ಕೆ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.     

ನಮ್ಮ ಸಮಸ್ಯೆಯೇನು ಗೊತ್ತಾ? ನಮಗೆ ವ್ಯವಸ್ಥೆ ಸರಿಯಾಗಬೇಕು ಎಂಬ ದೊಡ್ಡ ಕನಸಿರುತ್ತದೆ. ಕನಸು ನನಸಾಗಬೇಕಾದರೆ ಒಂದಿಷ್ಟು ಮಾರ್ಗಗಳಿರುತ್ತವೆ ಅದನ್ನು ಅನುಸರಿಸಲೇಬೇಕು. ಆದರೆ ನಮಗೆ ಚೂರು ತೊಂದರೆಯಾಗದೆ ಅರಸೊತ್ತಿಗೆ ದೊರಕಬೇಕೆಂಬ ನಮ್ಮ ಆಶಾಸಾಮ್ರಾಜ್ಯದ ಕನಸಿನಲ್ಲಿ ದಾರಿಗಳೇ ಇರುವುದಿಲ್ಲ ಆದರೆ ಅರಸೊತ್ತಿಗೆ ಮಾತ್ರ ಇರುತ್ತದೆ. ತೆರಿಗೆ ಮೇಲೆ ತೆರಿಗೆ ಕಟ್ಟುವ ವ್ಯವಸ್ಥೆಯ ಕೊನೆಯಾಗಿದ್ದು ಜಿ ಎಸ್ ಟಿ ಬಂದಮೇಲೆ. ವ್ಯಾಟ್, ಎಕ್ಸೈಸ್, ಸರ್ವಿಸ್ ಟ್ಯಾಕ್ಸ್ ಎಂಬ ಕಠಿಣ ಟ್ಯಾಕ್ಸ್ ವೈವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಪರದಾಡುವ ದಿನ ದೂರವಾಗಿದ್ದು ಜಿ ಎಸ್ ಟಿ ಬಂದಮೇಲೆ. ಸಣ್ಣ ಉದ್ಯಮದಾರರಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು ಜಿ ಎಸ್ ಟಿ ಬಂದಮೇಲೆ. ಅನ್ಆರ್ಗನೈಸ್ಡ್ ಸೆಕ್ಟರ್ ಗಳನ್ನು ಒಂದು ವ್ಯವಸ್ಥೆಯಡಿಯಲ್ಲಿ ತಂದು ಅದರಲ್ಲಿ  ಪಾರದರ್ಶಕತೆ ಇರುವಂತೆ ಆಗಿದ್ದು ಜಿ ಎಸ್ ಟಿ ಬಂದಮೇಲೆ. ಹಾಗಾಗಿ ಜಿ ಎಸ್ ಟಿಯನ್ನು ಒಂದು ಪಾರದರ್ಶಕ ತೆರಿಗೆ ವ್ಯವಸ್ಥೆ ಎನ್ನಬಹುದು.      

ಎಲ್ಲರೂ ಸೇರಿ ವ್ಯವಸ್ಥೆಯನ್ನು ಸರಿ ಪಡಿಸಲು ಪಣ ತೊಡಬೇಕು ಅದನ್ನು ಬಿಟ್ಟು ಕಳ್ಳ ದಾರಿಯಿಲ್ಲವೆಂಬ ಕಾರಣಕ್ಕೆ ಹೊಸ ವ್ಯವಸ್ಥೆಯನ್ನು ವಿರೋಧಿಸುವುದು ಅದೆಷ್ಟು ಸರಿಯೋ ಗೊತ್ತಿಲ್ಲಜಿ ಎಸ್ ಟಿ ಎಂಬ ಕೂಸನ್ನು ಸರಿಯಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ ಎನ್ನುವುದನ್ನು ಮರೆಯುವುದು ಬೇಡ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!