“ಫೇಸ್‍ಬುಕ್ ಬಿಡಬೇಕು ಅಂದುಕೊಂಡಿದ್ದೇನೆ. ದಿನಕ್ಕೆ ಮೂರ್ನಾಲ್ಕು ಗಂಟೆ ಅದರಲ್ಲೇ ಕಳೆದುಹೋಗ್ತದೆ ಮಾರಾಯ್ರೆ! ಬೆಳಗ್ಗೆ ಎದ್ದ ಮೇಲೆ ನಾನು ಮಾಡುವ ಮೊದಲ ಕೆಲಸವೇ ಮೊಬೈಲ್ ಉಜ್ಜಿ ಫೇಸ್‍ಬುಕ್‍ನಲ್ಲಿ ಎಷ್ಟು ಲೈಕ್, ಕಾಮೆಂಟ್ ಬಂದಿದೆ ನೊಡೋದು! ನಿಮಿಷಕ್ಕೊಮ್ಮೆಯಾದರೂ ಮೊಬೈಲು ನೋಟಿಫಿಕೇಷನ್‍ಗಳನ್ನು ತೋರಿಸುವುದರಿಂದ ಅವುಗಳನ್ನು ನೋಡದೆ ನಿರ್ವಾಹ ಇಲ್ಲ ಎನ್ನುವಂತಾಗಿದೆ. ಯಾವ ಕೆಲಸದಲ್ಲೂ ಗಟ್ಟಿಯಾಗಿ ತೊಡಗಿಸಿಕೊಳ್ಳಲು ಆಗ್ತಿಲ್ಲ. ಕಳೆದ ಒಂದು ವರ್ಷದಿಂದ ಯಾವುದೇ ಕಾದಂಬರಿಯನ್ನು ಪಟ್ಟುಹಿಡಿದು ಒಂದೇ ದಿನದಲ್ಲಿ ಓದಿ ಮುಗಿಸಿಲ್ಲ. ಯಾವ ಕೆಲಸವನ್ನೂ ಒಂದೇ ಏಟಿಗೆ ಮಾಡಿ ಮುಗಿಸಿಲ್ಲ. ಸೋಷಿಯಲ್ ಮೀಡಿಯ ಬದುಕಿನ ಖಾಸಗಿ ಕ್ಷಣಗಳನ್ನು ಕಿತ್ತುಕೊಂಡುಬಿಟ್ಟಿದೆ. ಹಾಗಾಗಿಯೇ ಅದನ್ನು ಬಿಡಬೇಕು ಅಂತ ನಿರ್ಧಾರ ಮಾಡಿದ್ದೇನೆ” ಎಂದು ಅವರು ಹೇಳುತ್ತಿದ್ದರೆ ನಿರ್ಧಾರ ಬಹಳ ದೃಢವಾಗಿದೆ ಅನ್ನಿಸಿತ್ತು. “ಮಾಡಿ, ಒಳ್ಳೆಯ ಕೆಲಸ” ಎಂದು ಹೇಳಬೇಕೆಂದುಕೊಂಡರೂ ಒಂದು ನಗುವಿನೊಂದಿಗೆ ಅವರ ಮಾತಿಗೆ ಸಮ್ಮತಿ ಸೂಚಿಸಿದ್ದೆ. ಆದರೆ ರಾಯರು ಮರುದಿನ ಎಂದಿನಂತೆ ಫೇಸ್‍ಬುಕ್‍ನಲ್ಲಿ ಕಾಮೆಂಟ್ ಕುಟ್ಟುತ್ತಿದ್ದರು! “ನಿನ್ನೆ ಫೇಸ್‍ಬುಕ್ ಬಿಡ್ತೇನೆ ಅಂದ್ರಿ, ಈಗ ಮತ್ತೆ ಇಲ್ಲಿದ್ದೀರಲ್ಲಾ?” ಎಂದರೆ “ಹೇಗೆ ಬಿಡುವುದು ಹೇಳಿ! ಫೇಸ್‍ಬುಕ್ ಬಂದ ಮೇಲೆ ಪತ್ರಿಕೆ ಓದುವ ಅಭ್ಯಾಸ ತಪ್ಪಿಹೋಗಿದೆ. ಇಲ್ಲಾದರೆ ಕ್ಷಣ ಕ್ಷಣಕ್ಕೆ ಜಗತ್ತಿನಲ್ಲಿ ಏನೇನಾಯಿತು ಎಂಬ ಅಪ್‍ಡೇಟ್ ಸಿಗ್ತಾ ಇರತದೆಯಲ್ಲ! ಮೊನ್ನೆ ನೋಡಿ, ಮೆಕ್ಸಿಕೋದಲ್ಲಿ ಭೂಕಂಪ ಆಯ್ತು. ಅದಾಗಿ ಅರ್ಧ ತಾಸಿನಲ್ಲಿ ನಮಗೆ ಗೊತ್ತಾಯಿತು. ಹಾಗಾಗಿ ಅಂಥ ವಿಷಯಗಳನ್ನು ತಕ್ಷಣ ತಿಳಿದುಕೊಳ್ಳಲು ಅನುಕೂಲವಾಗ್ತದೆ ಅನ್ನುವ ಕಾರಣಕ್ಕೆ ಮುಂದುವರಿಯುವ ನಿರ್ಧಾರ ಮಾಡಿದೆ” ಎಂದರು. “ಸರಿ ಬಿಡಿ!” ಎಂದು ನಿಟ್ಟುಸಿರುಬಿಟ್ಟೆ.
ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಮ್, ಇನ್ನೂ ಏನೇನೋ. ಎಲ್ಲವನ್ನೂ ಒಟ್ಟಾಗಿ ಸೋಷಿಯಲ್ ಮೀಡಿಯಾ ಎಂದು ಕರೆಯುತ್ತೇವೆ. ಹೆಸರೇ ಹೇಳುವಂತೆ ಇದು ಯಾರೋ ಒಂದಷ್ಟು ಜನ ಪಟ್ಟಭದ್ರರಷ್ಟೇ ಕೂತು ನಡೆಸುವ, ತಮ್ಮ ಅಭಿಪ್ರಾಯವನ್ನು ಸಮಾಜದ ಮೇಲೆ ಸುದ್ದಿಯ ಹೆಸರಲ್ಲಿ ಹೇರುವ ಮಾಧ್ಯಮ ಅಲ್ಲ. ಇದು ಜನರ ಮಾಧ್ಯಮ. ಸಮಾಜದ ಮಾಧ್ಯಮ. ಸಾಮೂಹಿಕ ಮಾಧ್ಯಮ. ಇಲ್ಲಿ ಸುಳ್ಳುಪಳ್ಳುಗಳು ನಡೆಯುವುದಿಲ್ಲ. ಹಾಗಂತ ಸುಳ್ಳುಗಾರರು ಇಲ್ಲವೆಂದಲ್ಲ; ಉದ್ದೇಶಪೂರ್ವಕವಾಗಿ ಸುಳ್ಳು ಹರಡಿ ಚಾರಿತ್ರ್ಯಹರಣ ಅಥವಾ ಸಮಾಜದ ಸ್ವಾಸ್ಥ್ಯ ಭಂಗಕ್ಕೆ ಪ್ರಯತ್ನಿಸುವ ಮಂದಿ ಇದ್ದೇ ಇದ್ದಾರೆ. ಆದರೆ ಅಂಥ ಸುಳ್ಳುಗಳನ್ನು ಬಲೂನಿಗೆ ಸೂಜಿ ಚುಚ್ಚಿದಂತೆ ಠಪ್ ಠಪ್ ಎಂದು ಚಚ್ಚಿ ಎಸೆಯಬಲ್ಲ ಯೋಧರು ಕೂಡ ಸೋಷಿಯಲ್ ಮೀಡಿಯಾದಲ್ಲೇ ಇದ್ದಾರೆ. ಈ ಸಾಮಾಜಿಕ ಜಾಲತಾಣಗಳು ಜನರನ್ನು ಬೆಸೆಯುವ ಕೆಲಸ ಮಾಡಿವೆ; ಅವರಿಂದ ಖಾಸಗಿತನವನ್ನೂ ಸಮಯವನ್ನೂ ಕಸಿಯುವ ಕೆಲಸವನ್ನೂ ಮಾಡಿವೆ. ಇಲ್ಲಿ “ಬಿಟ್ಟೇ ಬಿಟ್ಟೇ” ಎಂದವರು ಕೂಡ ಮೂರು ದಿನಗಳಲ್ಲಿ ಮತ್ತೆ ವಾಪಸು ಬಂದಿರುತ್ತಾರೆ. ಬಿಟ್ಟುಹೋಗಲು ಎಷ್ಟು ಕಾರಣಗಳನ್ನು ಕೊಟ್ಟಿರುತ್ತಾರೋ ವಾಪಸು ಕಾಣಿಸಿಕೊಳ್ಳಲು ಕೂಡ ಅಷ್ಟೇ ಸಮರ್ಥನೆ ಕೊಟ್ಟುಕೊಳ್ಳುತ್ತಾರೆ. ಹೀಗೇಕೆ ಆಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾದರೆ ಮನುಷ್ಯನ ಮಿದುಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರವಾಗಿ ನೋಡಬೇಕು.
ಸೋಷಿಯಲ್ ಮೀಡಿಯಾ ಮನುಷ್ಯನನ್ನು ಅಡಿಕ್ಟ್ (ಅಥವಾ ಚಟದಾಸ)ನನ್ನಾಗಿ ಮಾಡಲೆಂದೇ ರೂಪಿಸಲ್ಪಟ್ಟ ಮಾಧ್ಯಮ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಫೇಸ್‍ಬುಕ್ ಅಥವಾ ಯಾವುದೇ ಜಾಲತಾಣದಲ್ಲಿ ಅದರ ಗ್ರಾಹಕ (ಗ್ರಾಹಕರಾದ ನಾವು, ನೀವು. ಜಾಲಿಗರು ಎನ್ನೋಣ) ಹೆಚ್ಚು ಸಮಯವನ್ನು ವ್ಯಯ ಮಾಡಬೇಕೆಂದೇ ಆ ತಾಣಗಳ ಒಡೆಯರು ಬಯಸುತ್ತಾರೆ. ಯಾಕೆಂದರೆ ಜಾಲಿಗ ಅದೆಷ್ಟು ಹೊತ್ತು ಆಯಾ ವೇದಿಕೆಗಳಲ್ಲಿ ಕಳೆಯುತ್ತಾನೋ ಅಷ್ಟು ಹೊತ್ತು ಆತನ ಪರದೆಯ ಮೇಲೆ ಜಾಹೀರಾತುಗಳು ಪ್ರಸಾರವಾಗುತ್ತಾ ಇರುತ್ತವೆ. ಜಾಹೀರಾತುಗಳು ಎಷ್ಟು ಹೊತ್ತು ಪರದೆಯಲ್ಲಿ ಕಾಣಿಸಿಕೊಂಡವು ಎಂಬ ಆಧಾರದಲ್ಲಿ ಜಾಲತಾಣಕ್ಕೆ ಜಾಹೀರಾತು ದುಡ್ಡು ಹರಿದುಬರುತ್ತದೆ. ಹಾಗಾಗಿ, ಜಾಲಿಗರು ಹೆಚ್ಚು ಹೆಚ್ಚು ಸಮಯವನ್ನು ತಮ್ಮ ತಾಣದಲ್ಲಿ ಕಳೆಯುವಂತೆ ಮಾಡುವುದು ಬ್ಯುಸಿನೆಸ್ಸಿನ ದೃಷ್ಟಿಯಿಂದ ಅವರಿಗೆ ಬಹಳ ಮುಖ್ಯ. ಹಾಗಾಗಿಯೇ ಈ ಜಾಲತಾಣಗಳು ಪ್ರತಿಯೊಬ್ಬ ಗ್ರಾಹಕನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. ಆತನ ಆಯ್ಕೆಗಳು ಏನೇನು? ಯಾವ ಪೋಸ್ಟ್ ಅನ್ನು ಆತ ಓದುತ್ತಾನೆ? ಏನನ್ನು ಬರೆಯುತ್ತಾನೆ? ಎಂದು ಗಮನಿಸುವುದು ಮಾತ್ರವಲ್ಲ; ಆತ ಜಾಲತಾಣದ ಹೊರಗೆ ಯಾವ ವೆಬ್‍ಸೈಟ್‍ಗಳಿಗೆ ಭೇಟಿ ಕೊಡುತ್ತಾನೆ? ಯಾವುದರಲ್ಲಿ ಎಷ್ಟು ಸಮಯ ವ್ಯಯಿಸುತ್ತಾನೆ? ಎಂಬ ಮಾಹಿತಿಗಳನ್ನು ಕೂಡ ಕುಕೀ-ಗಳ ಮೂಲಕ ಸಂಗ್ರಹಿಸುತ್ತವೆ. ಅವನ್ನೆಲ್ಲ ಕಲೆ ಹಾಕಿದ ಮೇಲೆ ಅಂಥ ವಿಷಯಗಳಿಗೆ ಸಂಬಂಧಿಸಿದ ಸಂಗತಿಗಳೇ ಆತನ ಜಾಲತಾಣದ ಗೋಡೆಯಲ್ಲಿ ಕಾಣಿಸಿಕೊಳ್ಳುವಂತೆ ಮಾಡುತ್ತವೆ. ಯಾವುದೇ ಸದ್ದುಗದ್ದಲವಿಲ್ಲದೆ ನಡೆಯುವ ಈ ಮೌನಕ್ರಿಯೆಯಲ್ಲಿ ಜಾಲಿಗ ತನಗೇ ಗೊತ್ತಿಲ್ಲದೆ ನಿಧಾನವಾಗಿ ಜಾಲತಾಣದ ಬಲೆಯೊಳಗೆ ಬೀಳುತ್ತಾನೆ. ತನಗೆ ಬೇಕಾದ್ದೇ ಈ ಗೋಡೆಯಲ್ಲಿ ಸಿಗುತ್ತಿದೆ ಎಂಬ ಭ್ರಮೆಗೆ ಒಳಗಾಗುತ್ತಾನೆ. ತನ್ನನ್ನು ಪ್ರಶ್ನಿಸುವವರ, ತನಗಾಗದವರ ಮುಖಗಳನ್ನು ಬ್ಲಾಕ್ ಮಾಡುವ ಸವಲತ್ತೂ ಇರುವುದರಿಂದ ಆತನಿಗೆ ಅಂಥ ಶತ್ರುಗಳನ್ನೆಲ್ಲ ಹೊರಗಟ್ಟಲು ಅವಕಾಶವಿದೆ. ತನ್ನದೇ ಆದ ಒಂದು ಖಾಸಗಿ ವಾತಾವರಣವನ್ನು ಸೃಷ್ಟಿಸಿಕೊಂಡು ಅಲ್ಲಿ ಹಾಯಾಗಿರಲು ಜಾಲಿಗನಿಗೆ ಜಾಲತಾಣ ಅವಕಾಶ ಕಲ್ಪಿಸುತ್ತದೆ. ಯಾಕೆ ಎಂದರೆ, ಮತ್ತೆ ಅದೇ ಉತ್ತರ! ಜಾಲಿಗ ಹೆಚ್ಚು ಹೊತ್ತು ಜಾಲತಾಣದಲ್ಲಿ ಕಳೆಯುವುದೇ ಜಾಲತಾಣಕ್ಕೆ ಬೇಕಾಗಿರುವ ಏಕೈಕ ಅಂಶ. ಅದಕ್ಕಾಗಿ ಇಷ್ಟೆಲ್ಲ ಸರ್ಕಸ್ಸು!
ಜಾಲತಾಣದಲ್ಲಿ ಜಾಲಿಗನ ಕಾಲಹರಣ ಹೆಚ್ಚಾದಂತೆ ಆತನ ಹುಚ್ಚಾಟಗಳೂ ಹೆಚ್ಚುತ್ತವೆ. ಸಿಕ್ಕ ಪೋಸ್ಟುಗಳಿಗೆಲ್ಲ ಕಾಮೆಂಟ್ ಹಾಕೋಣ ಅನ್ನಿಸುತ್ತದೆ. ಮನಸ್ಸಿಗೆ ತೋಚಿದ್ದನ್ನೆಲ್ಲ ಬರೆಯುತ್ತಾ ಹೋಗೋಣ ಅನ್ನಿಸುತ್ತದೆ. ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ತನ್ನದೊಂದು ಅಭಿಪ್ರಾಯವನ್ನು ದಾಖಲಿಸಬೇಕು ಎಂಬ ತುರ್ತು ಒಳಗಿಂದ ಹುಟ್ಟುತ್ತದೆ. ಹೋಟೆಲ್, ರೆಸ್ಟಾರೆಂಟ್, ಸಿನೆಮಾ ಮಂದಿರ, ದೇವಸ್ಥಾನ, ಪಿಕ್‍ನಿಕ್ ಸ್ಪಾಟ್, ಆಟದಂಗಳ.. ಎಲ್ಲೇ ಹೋಗಲಿ, ಅಲ್ಲಿ ತಾನಿರುವುದನ್ನು ಜಗತ್ತಿಗೆ ಸಾರಬೇಕು ಎಂಬ ಧಾವಂತ ಕುಣಿಯುತ್ತದೆ. ಕೆಲಸ ಏನೂ ಇಲ್ಲವಾದರೆ ಒಂದಷ್ಟು ಮಂದಿಯ ಕಾಲೆಳೆಯೋಣ ಅನ್ನಿಸಬಹುದು, ಸೆಲ್ಫಿ ಫೋಟೋ ಹೊಡೆದು ಅದನ್ನು ಗೋಡೆಯ ಮೇಲೆ ಮೆತ್ತಿ ಲೈಕ್ ಗಿಟ್ಟಿಸೋಣ ಅನ್ನಿಸಬಹುದು. ಎಷ್ಟೆಂದರೂ ಮನಸ್ಸು ಮರ್ಕಟ ತಾನೇ? ಸಮಯ ಕಳೆಯಲು ಏನೇನು ಮಾಡಬೇಕೆಂಬುದನ್ನು ಅದಕ್ಕೆ ಹೇಳಿಕೊಡಬೇಕೆ!
ಇವೆಲ್ಲ ಜಾಲತಾಣದ ವ್ಯಸನದ ಒಂದು ಮುಖವಾದರೆ ಇನ್ನೊಂದು ಆತನ ಏಕಾಗ್ರತೆಗೆ ಸಂಬಂಧಿಸಿದ್ದು. ಜಾಲಿಗನಾಗಿ ದಿನಕ್ಕೆ ಕನಿಷ್ಠ ಒಂದು ತಾಸು ವ್ಯಯಿಸುವವನ ಏಕಾಗ್ರತೆ ಅರ್ಧಕ್ಕರ್ಧ ಕುಸಿಯುತ್ತದೆ. ಏಕಾಗ್ರತೆಗೂ ಪ್ರೊಡಕ್ಟಿವಿಟಿಗೂ ನೇರ ಸಂಬಂಧ ತಾನೆ? ಹಾಗಾಗಿ ಕೆಲಸದ ಗುಣಮಟ್ಟ ಕೂಡ ಇಳಿಯುತ್ತದೆ. ಓದು, ಬರಹ ಸಾಧ್ಯವಾಗುತ್ತಿಲ್ಲ; ಹತ್ತು ಪುಟಗಳನ್ನು ಕೂಡ ಯಾವ ಅಡಚಣೆ ಇಲ್ಲದೆ ಓದಲಾಗುತ್ತಿಲ್ಲ ಎಂದು ಗೊತ್ತಾದಾಗ ಆತ ಜಾಗೃತನಾಗಬೇಕು. ಒಂದು ಬೆಳ್ಳಂಬೆಳಗ್ಗೆ ಧಿಗ್ಗನೆದ್ದು ಕೂತು ಅರ್ಧ ಗಂಟೆ ಧ್ಯಾನ ಮಾಡಿ ಜಾಲತಾಣದ ಡೀ-ಆಕ್ಟಿವೇಟ್ ಗುಂಡಿಯನ್ನು ದೃಢಮನಸ್ಸಿನಿಂದ ಅದುಮಿಬಿಡಬೇಕು. ಜಾಲತಾಣ, ಆಫ್ಟರಾಲ್ ಒಂದು ಮಿಥ್ಯಾಜಗತ್ತು. ಅದರಿಂದ ಹೊರಬಂದ ನಾಲ್ಕೈದು ದಿನ, ಚಟಗಳಿಂದ ಹೊರಬಂದವರ ಚಡಪಡಿಕೆಗಳೆಲ್ಲವೂ ಜಾಲಿಗರಲ್ಲೂ ಕಾಣಿಸಿಕೊಳ್ಳಬಹುದು. ಹೆರಾಯಿನ್ ಅನ್ನು ಬಲವಂತವಾಗಿ ಬಿಡಿಸಿದರೆ ಮನೆಯ ಹೆಂಚು ತೆಗೆದು ಕಂಪೌಂಡ್ ಹಾರಿಕೊಂಡು ಅದಕ್ಕಾಗಿ ಓಡುವ ಧೀರರು ಇಲ್ಲವೇ? ಅಂಥ ವಿಚಿತ್ರ ತಳಮಳ ಜಾಲತಾಣದಿಂದ ಹೊರಬಂದ ಜಾಲಿಗನಲ್ಲೂ ಇದ್ದೀತು. ಆದರೆ ಕನಿಷ್ಠ ಆರು ತಿಂಗಳು ಇಲ್ಲವೇ ಒಂದು ವರ್ಷ ಅತ್ತ ತಲೆಯನ್ನೇ ಹಾಕುವುದಿಲ್ಲ ಎಂಬ ಗಟ್ಟಿ ಮನಸ್ಸು ಮಾಡಿಯೇಬಿಟ್ಟರೆ ವಾರದೊಳಗೆ ಬದುಕಿನಲ್ಲಿ ಬದಲಾವಣೆಗಳು ಗೋಚರವಾಗುತ್ತವೆ. ಏಕಾಗ್ರತೆ ಹೆಚ್ಚುತ್ತದೆ; ಮನಸ್ಸು ಉದ್ವಿಗ್ನತೆ ಕಳೆದುಕೊಂಡು ಶಾಂತವಾಗುತ್ತದೆ; ಜಗತ್ತು ಬಿಸಿ ಎಣ್ಣೆಗೆ ಬಿದ್ದ ಕಪ್ಪೆಯಂತೆ ಅಸ್ವಸ್ಥವಾಗಿಲ್ಲ ಎಂಬ ಜ್ಞಾನೋದಯವಾಗುತ್ತದೆ. ಜಾಲತಾಣದಿಂದ ಹೊರಬಂದ ಯಾರನ್ನೂ ಜಾಲತಾಣ ಮಿಸ್ ಮಾಡಿಕೊಳ್ಳುವುದಿಲ್ಲ. ಹಾಗಿರುವಾಗ ಜಾಲಿಗನೇಕೆ ಅದನ್ನು ಮಿಸ್ ಮಾಡಿಕೊಂಡು ಕೊರಗಬೇಕು?
ಕಂಪ್ಯೂಟರ್ ಯಾವ ಪುಟವನ್ನೂ ತೆರೆಯದೆ, ಮುಚ್ಚದೆ, ಯಾವ ಆಜ್ಞೆಗೂ ಸ್ಪಂದಿಸದೆ ಹೋದಾಗ ನಾವು ಅದನ್ನು ರೀಸ್ಟಾರ್ಟ್ ಮಾಡುವುದಿಲ್ಲವೇ? ಹಾಗೆಯೇ ಬದುಕು ಜಾಲತಾಣದ ಸುತ್ತವೇ ಸುತ್ತುತ್ತಿದೆ; ಅದರ ಹೊರತಾಗಿ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನೂ ಜರುಗುತ್ತಿಲ್ಲ ಎಂಬುದು ಮನವರಿಕೆಯಾದಾಗ ಬದುಕನ್ನು ರೀಸ್ಟಾರ್ಟ್ ಮಾಡಿಕೊಳ್ಳುವುದು ಜಾಣತನ.