ನವೆಂಬರ್ 8, 2016.. ಪ್ರತಿಯೊಬ್ಬ ಭಾರತೀಯನೂ ಮರೆಯಲು ಸಾಧ್ಯವೇ ಇಲ್ಲ! ಜನರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿದ, ಹಲವಾರು ದಿನ ಗೊಂದಲಕ್ಕೀಡು ಮಾಡಿದ, ಗಂಟೆಗಟ್ಟಲೆ ಬ್ಯಾಂಕಿನ ಮುಂದೆ ಕ್ಯೂ ನಿಲ್ಲಿಸಿದ ದಿನ ಅದು. ಜನ ಎದ್ದು ಬಿದ್ದು ಕ್ಯೂನಲ್ಲಿ ನಿಂತದ್ದು, ಕ್ಯೂ ನಿಂತೂ ಕೂಡ ನೋಟು ಸಿಗದೇ ಹಿಡಿಶಾಪ ಹಾಕಿದ್ದು, ಬ್ಯಾಂಕಿನ ಸಿಬ್ಬಂದಿ ಜೊತೆ ಜಗಳವಾಡಿದ್ದು, ಅಲ್ಯಾರೋ ಸಹಜ ಸಾವಿಗೀಡಾದರೂ ಕ್ಯೂನಲ್ಲಿ ನಿತ್ತು ಸತ್ತ ಅಂತ ಒಂದು ವರ್ಗ ಸುದ್ದಿ ಮಾಡಿದ್ದು, ಎಲ್ಲವುಗಳನ್ನೂ ನಿವಾಳಿಸಿಕೊಂಡು ನೋಟು ಬದಲಾಯಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದು ಎಲ್ಲವೂ ಕಣ್ಣಿಗೆ ಕಾಣಿಸುತ್ತಿದೆ.
ಇರಲಿ, ಇಷ್ಟೆಲ್ಲಾ ಮಾಡಿದ ಉದ್ದೇಶ ಈಡೇರಿತಾ? ಭಯೋತ್ಪಾದನೆ ನಿಲ್ಲುತ್ತದೆ ಅಂದ್ರು, ಎಲ್ಲಿ ನಿಂತಿದೆ? ಭೃಷ್ಟಾಚಾರ ಇನ್ನಿರೋದಿಲ್ಲ ಅಂದ್ರು, ಖಂಡಿತವಾಗಿಯೂ ನಿಂತಿಲ್ಲ. ಕಪ್ಪುಹಣ ಇಲ್ಲವಾಗುತ್ತದೆ ಅಂದ್ರು, ಅದಾದ್ರೂ ಈಡೇರಿತಾ? ಇಲ್ಲ, ಇಲ್ಲ, ಇಲ್ಲ.. ಆದ್ರೆ ಅದು ಅಷ್ಟೊಂದು ಸುಲಭದ ಕೆಲಸವಾ? ಭಯೋತ್ಪಾದನೆ ನಿಲ್ಲದೇ ಇರಬಹುದು, ಆದರೆ ನೋಟ್’ಬ್ಯಾನ್ ಖಂಡಿತವಾಗಿಯೂ ಅದರ ಮೇಲೆ ಪರಿಣಾಮ ಬೀರಿದೆ. ಈಗ ಗೊತ್ತಾಗುತಿಲ್ಲ ಅಷ್ಟೇ. ಮತ್ತೆ ಭೃಷ್ಟಾಚಾರ… ನಮ್ಮಲ್ಲಿ ಇದು ಎಷ್ಟೊಂದು ಅಗಾಧವಾಗಿ ಬೆಳೆದಿದೆ ಎಂದರೆ ಇನ್ನೊಮ್ಮೆ ನೋಟ್’ಬ್ಯಾನ್ ಮಾಡಿದರೂ ಅದು ನಿಲ್ಲದು. ಲಂಚ ತೆಗೆದುಕೊಳ್ಳುವವನ ಮತ್ತು ಕೊಡುವವನ ಮನಸ್ಥಿತಿ ಸರಿಯಾಗದಿದ್ದರೆ ಅದೆಂದಿಗೂ ನಿಲ್ಲದು. ಹಳೆನೋಟು ಹೋದರೆ ಹೊಸನೋಟು ಅಷ್ಟೆ!
ಆದರೆ ನೂರಕ್ಕೆ ನೂರರಷ್ಟಲ್ಲದಿದ್ದರೂ ನೋಟ್’ಬ್ಯಾನ್ ದೇಶದಲ್ಲಿ ಆಮೂಲಾಗ್ರ ಬದಲಾವಣೆ ತಂದಿರೋದು ಸುಳ್ಳಲ್ಲ. ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬಂದಿರೋದು ಸೂರ್ಯಸತ್ಯ. ಕಾಳಧನಿಕರು ತಮ್ಮಲ್ಲಿರುವ ಹಣವನ್ನು ಬಿಚ್ಚಲು, ಹೂಡಿಕೆ ಮಾಡಲು ಹಿಂಜರಿದು ಅವರ ವ್ಯವಹಾರವೆಲ್ಲವೂ ಎಕ್ಕುಟ್ಟಿ ಹೋಗಿರೋದು ಸತ್ಯ. ಸಾಮಾನ್ಯ ಜನ ನೋಟ್’ಬ್ಯಾನ್’ನಿಂದಾಗಿ ಕಷ್ಟ ಪಟ್ಟಿದ್ದು ಕೆಲವೇ ತಿಂಗಳು ಮಾತ್ರ, ಆದರೆ ಕಾಳಧನಿಕರು ಇವತ್ತಿಗೂ ಅದರ ಕಷ್ಟವನ್ನು ಅನುಭವಿಸುತ್ತಲೇ ಇದ್ದಾರೆ.
ಮತ್ತೊಂದು ಆಂಗಲ್’ನಲ್ಲಿ ನೋಡಿದರೆ ಏಳನೇ ಕ್ಲಾಸ್ ಪಾಸ್ ಮಾಡದ ಮೇಸ್ತ್ರಿಯೂ ಕೂಡ ಇವತ್ತು ಭಿಮ್ ಆಪಿನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದಾನೆಂದರೆ ಅದಕ್ಕೆ ಕಾರಣ ಡಿಮಾನಿಟೈಸೇಶನ್. ಅಷ್ಟರ ಮಟ್ಟಿಗೆ ಇಡೀ ದೇಶ ಅಪ್’ಡೇಟ್ ಆಗಿದೆ/ಆಗುವತ್ತ ಹೆಜ್ಜೆ ಇಟ್ಟಿದೆ. ಹೆಚ್ಚಿನ ಜನರಲ್ಲಿ ನಾವು ಸರಿಯಾಗಿ ತೆರಿಗೆ ಕಟ್ಟಬೇಕು, ಇಲ್ಲದಿದ್ದರೆ ಅಪಾಯ ಗ್ಯಾರಂಟಿ ಎನ್ನುವ ಜಾಗೃತಿ ಮೂಡಿದೆ. ಈ ಕಾರಣದಿಂದಾಗಿ ಇವತ್ತಲ್ಲದಿದ್ದರೆ ನಾಳೆ ದೇಶದ ಆರ್ಥಿಕತೆ ಸುಧಾರಿಸುವುದು ಮಾತ್ರವಲ್ಲದೇ ಖಂಡಿತವಾಗಿಯೂ ಉತ್ತುಂಗ ಸ್ಥಿತಿಯನ್ನು ಏರಲಿದೆ.
ಮೊದಲೆಲ್ಲಾ ನಮ್ಮ ದೇಶದ ಸ್ಥಿತಿಯನ್ನು ನೋಡಿ ನಾವೆಲ್ಲಾ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಬೈಯ್ಯುತ್ತಿದ್ದೆವು. ಈಗ ನೋಟ್’ಬ್ಯಾನ್ ಮತ್ತು ಜಿ.ಎಸ್.ಟಿಯ ನಂತರ ದೇಶದ ಅರ್ಥಿಕತೆ ಮತ್ತು ಪ್ರಗತಿಯಲ್ಲಿ ನಾವೂ ಸಹ ಸಕ್ರಿಯವಾಗಿ ತೊಡಗಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಾವು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದರೆ ಮಾತ್ರ ದೇಶ ಉದ್ದಾರವಾದೀತು ಎನ್ನುವ ಜಾಗೃತ ಭಾವ ನಮ್ಮೆಲ್ಲರೊಳಗೂ ಮಾಡಿದೆ. ಹಾಗಾಗಿ ಈಗ ದೇಶದ ಅಭಿವೃದ್ಧಿಯ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳದಿದ್ದಲ್ಲಿ, ಬರೀ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಬೈಯ್ಯುತ್ತಾ ಕೂರಲು ಸಾಧ್ಯವಿಲ್ಲ, ಬೈಯ್ಯುವುದಾದರೆ ಮೊದಲು ನಮ್ಮನ್ನು ನಾವೇ ಬೈದುಕೊಳ್ಳಬೇಕು.
ಅಷ್ಟಕ್ಕೂ ಇಡೀ ದೇಶವನ್ನೇ ಅಡಿಮೇಲು ಮಾಡಿ ಹಾಕಿದ ಮೋದಿಯ ಉದ್ದೇಶದಲ್ಲೇನಾದರೂ ದೋಷವಿತ್ತಾ? ಮೋದಿಗೆ ವೈಯಕ್ತಿಕವಾಗೇನಾದರೂ ಇದರಿಂದ ಲಾಭವಿತ್ತಾ? ಖಂಡಿತಾ ಇಲ್ಲ. ಕೆಲ ಜನರು ಹೇಳುವ ಪ್ರಕಾರ ನೋಟ್’ಬ್ಯಾನಿನಿಂದ ಅತಿಹೆಚ್ಚು ತೊಂದರೆಗೀಡಾಗಿದ್ದು ಬಿಜೆಪಿಯವರೇ. ಮೋದಿಗೆ ಯಾಕೆ ಬೇಕಿತ್ತು, ದೇಶದ ಜನರನ್ನು ಮಾತ್ರವಲ್ಲದೆ ತನ್ನದೇ ಪಕ್ಷದ ಸ್ನೇಹಿತರನ್ನು ಎದುರು ಹಾಕಿಕೊಳ್ಳುವ ಕೆಲಸ? ಅದರರ್ಥವೇನು, ತನ್ನವರು ತೊಂದರೆಗೀಡಾದರೂ ಪರವಾಗಿಲ್ಲ, ವ್ಯವಸ್ಥೆ ಸರಿ ಹೋಗಲೇ ಬೇಕೆನ್ನುವ ಉದ್ದೇಶ ಸ್ಪಷ್ಟತೆ ಮೋದಿಗಿತ್ತು ಅಂತ ತಾನೆ? ಇಲ್ಲಾ ಎನ್ನುವುದಿಲ್ಲ, ಇಷ್ಟೊಂದು ದೊಡ್ಡ ಬದಲಾವಣೆಯನ್ನು ಜಾರಿ ಮಾಡುವಲ್ಲಿ ಸರಕಾರ ಸ್ವಲ್ಪ ಎಡವಿದ್ದು ನಿಜ. ಹಾಗಂತ ಸರಕಾರ ಸಂಪೂರ್ಣ ಸೋತಿದೆ ಎನ್ನುವುದರಲ್ಲೂ ಅರ್ಥವಿಲ್ಲ. ದೇಶದ ಹಿತಾಸಕ್ತಿಯನ್ನೇ ಬಲಿಕೊಟ್ಟು ರಾಜಕೀಯ ಮಾಡುವ, ಸಕಾರಾತ್ಮಕ ವಿಷಯಗಳಿದ್ದರೂ ಸಹ ವಿರೋಧಪಕ್ಷವೆನ್ನುವ ಕಾರಣಕ್ಕೆ ಪ್ರತಿಯೊಂದನ್ನೂ ವಿರೋಧಿಸುವ, ಸ್ವಚ್ಛ ಭಾರತದಂತಹ ಯೋಜನೆಯನ್ನೂ ಟೀಕಿಸುವ,ಆಂತರಿಕ ಭದ್ರತೆಯನ್ನೇ ಗಾಳಿಗೆ ತೂರಿ ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ರಾಜಕಾರಣಿಗಳಿರುವಲ್ಲಿಯವರೆಗೆ ಭಾರತವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲು ಸಾಧ್ಯವಿಲ್ಲ ಬಿಡಿ.
ಸರಿ, ಇಷ್ಟು ಮಾಡುವುದಕ್ಕಾಗಿ ಅಷ್ಟೊಂದು ದೊಡ್ಡ ನಿರ್ಧಾರ ಜಾರಿ ಮಾಡಬೇಕಾಗಿತ್ತಾ ಅಂತ ಕೇಳಿ. ವಿರೋಧ ಪಕ್ಷಗಳ ಥರ ‘ಬೆಟ್ಟ ಅಗೆದು ಇಲಿ ಹಿಡಿದರು’ ಅಂತಾನೇ ಹೇಳಿ ಬೇಕಾದರೆ. ಆದರೆ ಮೊದಲು ಈ ಇಲಿಗಳು ಬೆಟ್ಟವನ್ನು ಅಗೆದೂ ಅಗೆದೂ ಅದರೊಳಗಿದ್ದ ಸಂಪತ್ತನ್ನು ಲೂಟಿ ಮಾಡುತ್ತಲೇ ಇದ್ದವು. ಹಿಡಿದಿದ್ದು ಇಲಿಯನ್ನೇ ಆದರೂ ಅಂತಹಾ ಒಂದು ದೊಡ್ಡ ಪ್ರಯತ್ನವನ್ನು ಧೈರ್ಯದಿಂದ ಮಾಡಿದ ಪ್ರಧಾನಿಯನ್ನು ನಾವು ಪ್ರಶಂಸಿಸಲೇಬೇಕು. ಹ್ಹಾ…. ಇವತ್ತಲ್ಲದಿದ್ದರೆ ನಾಳೆ… ಬಾಕಿ ಉಳಿದಿರುವ ಇಲಿಗಳ ಜೊತೆಗೆ ಹೆಗ್ಗಣಗಳನ್ನೂ ಹಿಡಿಯುತ್ತಾರೆ ಎನ್ನುವ ನಂಬಿಕೆ ಈಗಲೂ ಇದೆ!
#Demonetisation #AntiBlackMoneyDay