ಅಂಕಣ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಂಸ್ಕೃತಿಯ ಹರಣ

‘ಅಭಿವ್ಯಕ್ತಿ ಸ್ವಾತಂತ್ರ್ಯ’ ಸದ್ಯಕ್ಕೆ ಭಾರತದಲ್ಲಿ ವಿಪರೀತ ಸದ್ದು ಮಾಡುತ್ತಿರುವ ವಿಷಯ. ಈ ಎಡಪಂಥೀಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸಗಳ ಮೇಲೆ ದಾಳಿಮಾಡಿ ತಲೆಮರೆಸಿಕೊಳ್ಳಲು ಬಳಸಿಕೊಂಡಿರುವುದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು. ಮೋದಿ ಪ್ರಧಾನಿಯಾದಾಗಿನಿಂದ ಇವರ ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಪಾಠ ಜೋರಾಗಿದೆ. ಈ ದೇಶದಲ್ಲಿ ನಡೆಯುವ ಎಷ್ಟೋ ಕೋಮುಪ್ರಚೋದನಾ ದಂಗೆಗಳಿಗೆ ಈ ಸೋಗಲಾಡಿ ಬುದ್ಧಿಜೀವಿಗಳೇ ಕಾರಣವಾಗಿರುತ್ತಾರೆ. ಆದರೆ ಅವರು ಒಂದು ಚಂದದ ಮುಖವಾಡ ಧರಿಸಿರುತ್ತಾರೆ. ಅದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಮುಖವಾಡ. ಇದೊಂದು ವ್ಯವಸ್ಥಿತ ಜಾಲ ಎಂದರೆ ಏನೂ ಅತಿಶಯೋಕ್ತಿ ಇಲ್ಲವೇನೋ ಎಂದೆನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಈ ಬುದ್ಧಿಜೀವಿಗಳು ಸಂವಿಧಾನದ 19(1)/ಎ ಅನುಸೂಚಿಯ ಬಗ್ಗೆ ಮಾತ್ರ ಹೇಳಿ ಜನರನ್ನು ಮೂರ್ಖರಾಗಿಸಲು ಹೊರಟಂತಿದೆ. ನೈಜ ಇತಿಹಾಸ ಮತ್ತು ಸಂಸ್ಕೃತಿಯ ಪರ ಮಾತನಾಡುವವರನ್ನು ದಾಳಿಕೋರರು ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವವರು ಎನ್ನುವಂತೆ ಚಿತ್ರಿಸುವ ಪ್ರಯತ್ನವನ್ನು ಇವರು  ಮಾಡುತ್ತಾರೆ. ಸಂವಿಧಾನವನ್ನು ಮುಂದಿಟ್ಟುಕೊಂಡು,  ‘ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ’ ಎಂದು ಬೊಬ್ಬೆ ಹೊಡೆಯುವ ಈ ಬುದ್ಧಿಜೀವಿಗಳು ಅದೇ ಸಂವಿಧಾನದಲ್ಲಿರುವ 19(2) ಅನುಸೂಚಿಯ ಬಗ್ಗೆ ಏನೂ ಮಾತನಾಡುವುದಿಲ್ಲ. ಏಕೆಂದರೆ ಈ ಅನುಸೂಚಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸುಳ್ಳುಗಳನ್ನು ಅಥವಾ ಯಾವುದೋ ಧರ್ಮವನ್ನು ಹೀಯಾಳಿಸುವಂತೆ ವರ್ತಿಸುವುದು (ಅದು ಬರಹವೇ ಆಗಿರಲಿ ಅಥವಾ ಭಾಷಣವೇ ಆಗಿರಲಿ) ಸಾಧ್ಯವಿಲ್ಲ ಎನ್ನುವುದಂತೂ ಸತ್ಯ.  

ಈಗ ಸದ್ಯ ಸದ್ದುಮಾಡುತ್ತಿರುವುದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಲನಚಿತ್ರ. ಇದು ಕೂಡ ಈಗ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ವಿಷಯದ ಕಡೆಗೆ ಮುಖ ಮಾಡಿದೆ. ದೇಶದ ಎಲ್ಲ ಬುದ್ಧಿಜೀವಿಗಳು ಮತ್ತು ಸ್ವಯಂಘೋಷಿತ ಸಂವಿಧಾನ ತಜ್ಞರು ಈಗ ಇದೇ ಅಭಿವ್ಯಕ್ತಿಸ್ವಾತಂತ್ರ್ಯವೆಂಬ ಛತ್ರಿಯ ಕೆಳಗೆ ಸಂಜಯ್ ಲೀಲಾ ಬನ್ಸಾಲಿಯನ್ನು ನಿಲ್ಲಿಸಿ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯಗಳ ಮುಸುಕಿನಡಿ ರಾಷ್ಟ್ರವಿರೋಧಿ ಮತ್ತು ರಾಷ್ಟ್ರವಿಭಜನಕಾರಿ ನಿಲುವುಗಳು ಎಗ್ಗಿಲ್ಲದೆ ಪ್ರಕಟಗೊಳ್ಳುತ್ತಿದೆ.  ಪ್ರಾಯಃ ಇಂತಹ ‘ಸ್ವಾತಂತ್ರ್ಯ’ ಇರುವ ದೇಶ ಭಾರತವೊಂದೇ ಇರಬೇಕು ಅಲ್ಲವಾ? ನಮಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯ ಬಗ್ಗೆ ಅರಿವೇ ಇಲ್ಲವಾಗಿದೆ ಅಥವಾ ಇದರ ಪರಿಧಿ ಅರಿತವರು ಅದನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನಬಹುದೇನೋ. ಪದ್ಮಾವತಿ ಚಲನಚಿತ್ರದ ವಿಚಾರದಲ್ಲಿ ಕೆಲವು ಸಂಘಟನೆಗಳ ಹುಚ್ಚು ವರ್ತನೆಯನ್ನು ಬೆಂಬಲಿಸುವ ಇರಾದೆ ನನ್ನದಲ್ಲ ಬದಲಾಗಿ ಜನರನ್ನು ಮತ್ತು ಅವರ ಭಾವನೆಗಳನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಮುಖವಾಡ ತೊಟ್ಟು ಘಾಸಿಗೊಳಿಸಿರುವ ಸಂಜಯ್ ಲೀಲಾ ಬನ್ಸಾಲಿ ಮತ್ತು ಘಾಸಿಗೊಳಿಸುತ್ತಿರುವ ಇದೇ ಮನೋಭಾವದ ಅನೇಕ ಸಿನಿಮಾ ನಿರ್ದೇಶಕರುಗಳನ್ನು ಪ್ರಶ್ನಿಸುವುದು ನನ್ನ ಉದ್ದೇಶ.

‘ಮಾನಹಾನಿಗೊಳಗಾದ ವ್ಯಕ್ತಿಯ ಮರಣದ ನಂತರವೂ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಿ ನ್ಯಾಯ ಕೊಡಿಸಲು ಸಾಧ್ಯವೇ?’ ಹೌದು ಸಾಧ್ಯವಿದೆ!! ನಮ್ಮ ಕಾನೂನಿನ ಪ್ರಕಾರ ಇದು ಸಾಧ್ಯವಿದೆ.  ಈಗ ಥಟ್ಟನೆ ಇನ್ನೊಂದು ಪ್ರಶ್ನೆ ಮೂಡುತ್ತದೆ ‘ಮಾನಹಾನಿಗೊಳಗಾದ ವ್ಯಕ್ತಿ ಮರಣ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಮಾನಹಾನಿಗೈದ ವ್ಯಕ್ತಿ ಕಾನೂನಿನ ಸರಪಳಿಯಿಂದ ತಪ್ಪಿಸಿಕೊಳ್ಳಬಹುದೇ?’ ನಮ್ಮ ಕಾನೂನಿನ ಪ್ರಕಾರ ಇದು ಸಾಧ್ಯವೇ ಇಲ್ಲ. ಹಾಗಾದರೆ ಇದೇ ಕಾನೂನನ್ನು ಈಗ ಹುಯಿಲೆಬ್ಬಿರುವ ಪದ್ಮಾವತಿ ಚಿತ್ರದ ಪ್ರಕರಣದಲ್ಲೂ ಅಳವಡಿಸಬಹುದು ಅಲ್ಲವಾ? ರಾಜಸ್ತಾನದ ಮೇವಾರ ರಾಜವಂಶಸ್ಥ ದೊರೆ ರಾಣಾ ರತನ್ ಸಿಂಗ್​ನ ಪಟ್ಟದ ರಾಣಿ ‘ಪದ್ಮಿನಿ’ಯ ನೈಜ ಕಥೆಯೇ ರೋಚಕ. ಈಗೆದ್ದಿರುವ ಪ್ರಶ್ನೆ ಆಕೆಯನ್ನು ಕೆಟ್ಟದಾಗಿ ಪದ್ಮಾವತಿ ಚಲನಚಿತ್ರದಲ್ಲಿ ಬನ್ಸಾಲಿಯವರು ತೋರಿಸಿದ್ದಾರೆ ಎಂಬುದು. ಚಲನಚಿತ್ರದಲ್ಲಿ ‘ಅಲ್ಲಾವುದ್ದೀನ್ ಖಿಲ್ಜಿ ಜತೆಗೆ ಕನಸಿನ ದೃಶ್ಯದಲ್ಲಿ ಪದ್ಮಾವತಿ ಸರಸ ಸಲ್ಲಾಪದಲ್ಲಿರುವ ಸನ್ನಿವೇಶ ಇದೆ’ ಎಂಬುದೇ ರಾಜಸ್ತಾನದ ಜನರ ಸಿಟ್ಟಿಗೆ ಕಾರಣ. ಹೀಗೆ ತೋರಿಸಿಲ್ಲ ಎಂಬುದನ್ನು ಬನ್ಸಾಲಿಯವರು ನೇರವಾಗಿ ಒಂದು ಪತ್ರಿಕಾಗೋಷ್ಟಿ ಕರೆದು ಹೇಳಬಹುದಲ್ಲವ? ಯಾಕೆ ಅವರು ಈ ಕೆಲಸ ಮಾಡುತ್ತಿಲ್ಲ? ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಂದು ಸಮುದಾಯ ಅಥವಾ ಧರ್ಮವನ್ನು ಹೀಯಾಳಿಸುವ ಕೆಲಸವನ್ನು ಒಬ್ಬ ಸಿನಿಮಾ ನಿರ್ದೇಶಕ ಮಾಡಬಹುದಾ? ಇಲ್ಲ, ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರೇಳಿಕೊಂಡು ‘ನಿರ್ದೇಶಕ’ನ ಬೆಂಬಲಿಸುವ ಮೊದಲು ಪ್ರಕರಣದ ಇನ್ನೊಂದು ಮಗ್ಗುಲಿನ ಬಗ್ಗೆಯೂ ವಿಚಾರ ಮಾಡಲೇಬೇಕಲ್ಲವೇ? ಮೇವಾರ ಸಂಸ್ಥಾನವನ್ನು ಹೀಯಾಳಿಸಿ ಹಣ ಹೆಸರು ಮಾಡಿಕೊಂಡು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪಾಠ ಮಾಡುವವ ನಮ್ಮ ಸಂವಿಧಾನಕ್ಕೆ ಅವಮಾನ ಮಾಡಿದಂತೇ ಆಯಿತು ಅಲ್ಲವಾ? ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗಾಗುತ್ತದೋ ಗೊತ್ತಿಲ್ಲ.

ಮಾಧ್ಯಮಗಳು ಕೂಡ ಬಲಪಂಥೀಯರು ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು’ ಹತ್ತಿಕ್ಕುತ್ತಿದ್ದಾರೆ ಎನ್ನುವಂತೆ ಈ ಪ್ರಕರಣ ತೋರಿಸಿದರೆ ಹೊರತು ಈ ಪ್ರಕರಣ ಇನ್ನೊಂದು ಮುಖದ ಪರಿಚಯವನ್ನು ಮಾಡುವ ಪ್ರಯತ್ನವನ್ನೇ ಮಾಡಲಿಲ್ಲ. ಚರ್ಚಿಸಬೇಕಾದ ವಿಷಯ ಮತ್ತೆ ಹುದುಗಿಹೋಯಿತು ಮೋದಿ ಮತ್ತು ಬಲಪಂಥೀಯರು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಹತ್ತಿಕ್ಕುವವರಾದರು. ಎಡಚರು ಬಯಸಿದ್ದೂ ಇದೆ ಅಲ್ಲವಾ? ರಾಷ್ಟ್ರೀಯತೆಯ ವಿಚಾರ ಬಂದಾಗಲಾದರೂ ಈ ಎಡಚರು ತಮ್ಮ ನಿಲುವು ‘ರಾಷ್ಟ್ರದ ಪರ’ ಎಂದು ತೋರಿಸುತ್ತಾರೆ ಎಂದುಕೊಂಡರೆ ಹಾಗಾಗಲೇ ಇಲ್ಲ. ಒಂದಿಷ್ಟು ಜನ ತಲೆಕೆಟ್ಟವರು ದೇಶ ವಿರೋಧಿ ಘೋಷಣೆ ಕೂಗಿದರೆ ಅದು ‘ವಾಕ್ ಸ್ವಾತಂತ್ರ್ಯ’ ಎಂದು ಘೋಷಣೆ ಕೂಗಿದವರ ಪರವಾಗಿ ನಿಂತುಬಿಟ್ಟರು ಈ ಎಡಚರು. ಅಲ್ಲಿಗೆ ಇವರ ಬಂಡವಾಳ ಬಯಲಾಯಿತು. ಅಲ್ಲಿಗೆ ಬದಲಾಗದ ಮನಸ್ಥಿತಿ ಇವರದ್ದು ಎಂದಾಯಿತು.

ಭಾರತವನ್ನು ಹೀಯಾಳಿಸಿ ಘೋಷಣೆ ಕೂಗುವುದು, ರಾಮ ಸುಳ್ಳು ರಾಮಾಯಣ ಸುಳ್ಳು ಎನ್ನುವುದು, ಭಗವದ್ಗೀತೆ ಸುಡಬೇಕು ಎನ್ನುವುದು, ಮೂರ್ತಿ ಪೂಜೆ ವಿರೋಧಿಸುವ ಭರದಲ್ಲಿ ವಿಗ್ರಹಗಳನ್ನು ಒಡೆದು ಹಾಕುವುದು, ಗೋವನ್ನು ಪೂಜಿಸುವವರೆದುರು ಗೋಮಾಂಸ ತಿನ್ನುವುದು ಇದೆಲ್ಲ ನಮ್ಮ ಬುದ್ಧಿಜೀವಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನಿಸುತ್ತದೆ. ಪದ್ಮಾವತಿ ಪ್ರಕರಣವೊಂದೇ ಅಲ್ಲ ಅನೇಕ ಪ್ರಕರಣಗಳು ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಚಿತ್ರಿತಗೊಂಡಿದೆ. ಎಂ. ಎಫ್. ಹುಸೇನ್ ಎಂಬಾತ ಹಿಂದೂ ದೇವರುಗಳನ್ನು ನಗ್ನವಾಗಿ ಚಿತ್ರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನಿಸಿಕೊಳ್ಳುತ್ತದೆ. ಆದರೆ ತಸ್ಲೀಮಾ ನಸ್ರೀನ್ ಎಂಬ ಹೆಣ್ಣುಮಗಳು ಮುಸ್ಲಿಂ ಸಮುದಾಯದ ಹುಳುಕುಗಳ ಬಗ್ಗೆ ಬರೆದರೆ ಧರ್ಮ ನಿಂದನೆ ಆಗುತ್ತದೆ. ಮತ್ತು ಅದನ್ನು ಪ್ರಶ್ನಿಸಬೇಕಾದ ಇದೇ ಬುದ್ಧಿಜೀವಿಗಳು ಜಢ ಮೌನವನ್ನು ತಾಳುತ್ತಾರೆ. ಹಾಗಾದರೆ, ಇದ್ಯಾವ ಹೋರಾಟ ಸ್ವಾಮಿ? ಈ ಬುದ್ಧಿಜೀವಿಗಳಿಗೆ ಹಿಂದೂ ಧರ್ಮದಲ್ಲಿನ ಹುಳುಕು ತೋರಿಸುವಾಗ ಇರುವ ಆಸಕ್ತಿ ಬೇರೆ ಧರ್ಮಗಳಲ್ಲಿನ ಮೂಢನಂಬಿಕೆಗಳನ್ನು ಹೊರಹಾಕುವಾಗ ಇರುವುದಿಲ್ಲ ಏಕೆ? ಯಾವುದೇ ಧರ್ಮವಾಗಿರಲಿ ಆ ಧರ್ಮವನ್ನು ಹೀಯಾಳಿಸುವ ಕೆಲಸ ನಡೆಯಬಾರದು. ಅದು ನಂಬಿಕೆಯ ವಿಷಯ, ಭಾವನೆಯ ವಿಷಯ. ರಾಮ, ಕೃಷ್ಣ, ಜೀಸಸ್, ಮೇರಿ, ಮಹಮದ್ ಮುಂತಾದವರ ಬಗ್ಗೆ ನಮಗೆ ಗೌರವ, ವಿಶ್ವಾಸ ಇಲ್ಲದಿದ್ದರೆ ನಷ್ಟವೇನೂ ಇಲ್ಲ. ಆದರೆ ಅವರನ್ನು ಮಹಾತ್ಮರು, ದೇವರು ಎಂದು ನಂಬಿ ಆರಾಧಿಸುವ ಕೋಟ್ಯಾಂತರ ಜನ ಈ ಭೂಮಿಯಲ್ಲಿದ್ದಾರೆ ಎಂಬ ಸತ್ಯವನ್ನು ನಾವು ಮರೆಯಬಾರದು. ಅವರ ನಂಬಿಕೆಗಳನ್ನು ಘಾಸಿಗೊಳಿಸುವ ಕೃತ್ಯವನ್ನು ನಾವು ಎಸಗಬಾರದು. ಅವರ ಭಾವನೆಗಳನ್ನು ಕೆರಳಿಸುವಂತಹದ್ದನ್ನು ನಾವು ಬರೆಯಬಾರದು, ಚಿತ್ರಿಸಬಾರದು. ಕಲೆ ಅಥವಾ ಸಾಹಿತ್ಯ ಅಂತಹ ಅಧಿಕಾರವನ್ನು ನಮಗೆ ಕೊಡುವುದಿಲ್ಲ ಎಂಬ ಪ್ರಜ್ಞೆ ನಮಗಿರಬೇಕು. ಇನ್ನೊಬ್ಬರ ಭಾವನೆಗಳನ್ನು ನೋಯಿಸದೇ ಮಹಾನ್ ಸಾಹಿತಿ, ಚಿತ್ರಕಾರರಾಗುವ ಹೇರಳ ಅವಕಾಶಗಳು ನಮಗಿವೆ. ಹೀಗೆ ಬದುಕಬಾರದೇಕೆ? ಇತಿಹಾಸವನ್ನು ತಿರುಚಿ ತಮ್ಮ ಕಲ್ಪನೆಗೆ ಬಂದಂತೆ ಚಲನಚಿತ್ರವನ್ನು ನಿರ್ಮಿಸಿ ಕೊನೆಗೆ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತು ಎನ್ನುವ ಬದಲು ನೈಜ ಇತಿಹಾಸವ ಓದಿಕೊಂಡು ಅದನ್ನೇ ನಮ್ಮ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಮಾಡಿದರೆ ಒಳ್ಳೆಯದು ಅಲ್ಲವಾ?

ದೀಪಿಕಾ ಪಡುಕೋಣೆ, ಬನ್ಸಾಲಿಯವರ ತಲೆ ಕಡಿದು ತಂದವರಿಗೆ ಬಹುಮಾನ ಕೊಡುತ್ತೇವೆ ಎನ್ನುವುದು ಎಷ್ಟು ತಪ್ಪೋ , ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವಂತೆ ವರ್ತಿಸುವುದು ಕೂಡ ಅಷ್ಟೇ ದೊಡ್ಡ ತಪ್ಪಾಗುತ್ತದೆ. ಭಂಜಕರ ದಾಳಿಗೆ ನಲುಗದೆ ಗಟ್ಟಿಯಾಗಿ ನೆಲೆನಿಂತು ತನ್ನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಮೂಲಕ ವಿಶ್ವಕ್ಕೆ ಗುರುವಾಗಿರುವ ರಾಷ್ಟ್ರ ಭಾರತ. ನಮ್ಮ ದೇಶದ ಒಳಗಿದ್ದುಕೊಂಡು ದೇಶವನ್ನು ಹೀಯಾಳಿಸುವವರ ಸಂಖ್ಯೆಯ ನೂರೂಪಟ್ಟು ದೇಶವನ್ನು ಪ್ರೀತಿಸುವವರ ಸಂಖ್ಯೆಯಿದೆ ಎನ್ನುವುದೊಂದೇ ಸಮಾಧಾನ. ರಾಷ್ಟ್ರೀಯತೆ ನಮ್ಮ ನರನಾಡಿಯಲ್ಲಿ ಅವ್ಯಾಹತವಾಗಲಿ, ಭಾರತ ಬೆಳಗಲಿ. ಇಲ್ಲಿ ಒಡೆದು ಆಳುವವರಿಗೆ ಅವಕಾಶವಿಲ್ಲದಿರಲಿ ಎಂಬುದೇ ಆಶಯ ಕೂಡ .

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!